ಪ್ರಾರ್ಥನೆ
ಪ್ರಾರ್ಥನೆ, ಪ್ರಾರ್ಥಿಸು ಈ ಶಬ್ದಗಳು ಜಾತಿ, ಮತ, ಪಂಥ, ದೇಶ, ಕಾಲಗಳನ್ನು ಮೀರಿ ಅಸ್ಥಿತ್ವದಲ್ಲಿವೆ. ಭಗವಂತನ ಭಾಷೆ ಜಗತ್ತಿನ ಎಲ್ಲ ಭಾಷೆಗಳಲ್ಲೂ ಅಡಕವಾಗಿರುವ ಮೌನ! ಅದೇ ಪ್ರಾರ್ಥನೆಯ ಭಾಷೆ. ಶಬ್ದಾಡಂಬರಗಳಿಲ್ಲದೆ ಅವನ ಆಕಾರವನ್ನು ಮನದಲ್ಲಿ ಸ್ಮರಿಸಿ ಮಾಡುವಂತಹ ಪ್ರಾರ್ಥನೆಯ ಭಾಷೆ. ಪ್ರಾರ್ಥನೆ ಈ ಭವ ಬಂಧನಗಳಲ್ಲಿ ಬಳಲಿದವರಿಗೆ ಒಂದು ಟಾನಿಕ್ ಇದ್ದ ಹಾಗೆ! ರೋಗಿಯನ್ನುಳಿಸುವ ತಮ್ಮ ಎಲ್ಲ ಪ್ರಯತ್ನಗಳನ್ನು ಮಾಡಿದ ವೈದ್ಯ ನಿರಾಶನಾಗಿ ಹೇಳುವುದು ಪ್ರಾರ್ಥನೆಯೊಂದೇ ಇವನನ್ನು ಉಳಿಸಬಲ್ಲುದು. ಮನದ ಅಹಂಕಾರವನ್ನು ಕಳೆದು ಭಗವಂತನಿಗೆ ಶರಣಾದಾಗ ಮಾತ್ರ ಪ್ರಾರ್ಥನೆ ಫಲಿತವಾಗಬಲ್ಲದು. ಪ್ರಾರ್ಥನೆಯೆಂಬುದು ಹೃದಯದ ಭಾಷೆ. ಅದು ಎದೆಯಾಳದಿಂದ ಬರಬೇಕು.
ಶಿಕ್ಷಣದ ಕೇಸರೀಕರಣವಾಗುತ್ತಿದೆ ಎಂಬ ವೃಥಾಲಾಪದ ನಡುವೆಯು ಈಗಲೂ ಶಾಲೆಗಳಲ್ಲಿ ಶಾಲಾ ಪ್ರಾರಂಭದಲ್ಲಿ ಪ್ರಾರ್ಥನೆ ಅಥವಾ ಪ್ರೇಯರ್‌ಗಳನ್ನು ನಡೆಸಲಾಗುತ್ತಿದೆ. ಶಾಲೆಯೊಂದರಲ್ಲಿ ಒಮ್ಮೆ ಹೀಗಾಯಿತು, ಶಾಲಾ ಪ್ರಾರ್ಥನೆಯನ್ನು ಮಕ್ಕಳು ರಾತ್ರಿ ಮಲಗುವ ಮುಂಚೆ ಮನೆಯಲ್ಲೂ ಕಡ್ಡಾಯವಾಗಿ ಹೇಳಬೇಕೆಂಬ ಶಿಸ್ತನ್ನು ಹೇರಲಾಯಿತು. ಈ ಶಿಸ್ತು ಪಾಲನೆಯ ಕುರಿತಂತೆ ಪ್ರತಿದಿನ ಮಕ್ಕಳ ವಿಚಾರಣೆಯೂ ನಡೆಯುತ್ತಿತ್ತು.
ಒಂದು ದಿನ ತರಗತಿಯ ಶಿಕ್ಷಕಿ ಹುಡುಗನೊಬ್ಬನನ್ನು ಕೇಳಿದಳು ನಿನ್ನೆ ರಾತ್ರಿ ಮಲಗುವ ಮುನ್ನ ಪರಮಪಿತನ ಪ್ರಾರ್ಥನೆಯನ್ನು ಮಾಡಿದ್ದಿಯೇನು?
ಹುಡುಗನೆಂದ ಇಲ್ಲ, ಮಾಡಿಲ್ಲ.
ಅಧ್ಯಾಪಕಿಯ ಕೈ ಹುಡುಗನ ಕೆನ್ನೆಯ ಮೇಲೆ ಅಪ್ಪಳಿಸಿತು.ಘಟನೆಯನ್ನು ಮರೆಯೋಣ, ಒಂದಷ್ಟು ಯೋಚಿಸೋಣ…
ಒಂದು ವೇಳೆ ಹುಡುಗ ನಾನು ಪ್ರಾರ್ಥನೆಯನ್ನು ಮಾಡಿದ್ದೇನೆ ಎಂದು ಸುಳ್ಳು ಹೇಳಿದ್ದರೆ. ಹುಡುಗನಿಗೆ ಕೆನ್ನೆಯ ಮೇಲೆ ಏಟು ಬೀಳುತ್ತಿರಲಿಲ್ಲ! ಪ್ರಾರ್ಥನೆಯನ್ನು ಬಡಬಡಿಸಬೇಕು, ಉಚ್ಚರಿಸಬೇಕು ಎನ್ನುವ ತಪ್ಪು ಕಲ್ಪನೆ ಶಿಕ್ಷಕಿಯದು! ಪರಿಣಾಮ, ಎಳೆಯ ಮನಸ್ಸು ನಿರ್ಧರಿಸಿತು ಪ್ರಾರ್ಥನೆ ಮಾಡಿಲ್ಲವೆಂದು ಸತ್ಯ ನುಡಿದಾಗ ಸಿಕ್ಕಿದ್ದು ಏಟು. ಹಾಗಾದರೆ ಪ್ರಾರ್ಥನೆಯನ್ನು ಮಾಡದೇ ಮಾಡಿದ್ದೇನೆಂದು ಹೇಳಿದರೆ, ಏಟೂ ಇಲ್ಲ, ಪ್ರಾರ್ಥನೆಯನ್ನು ಮಾಡುವ ಹಾಗೂ ಇಲ್ಲ! ಬದುಕಿನಲ್ಲಿ ಮಕ್ಕಳಿಗೆ ಪ್ರಾರ್ಥನೆಯ ಮಹತ್ವನ್ನು ತಿಳಿಸುವ ತಪ್ಪು ಪದ್ಧತಿಯೊಂದು ಹೀಗೆ ಪ್ರಾರಂಭವಾಯಿತು!
ಈ ಜಗತ್ತಿನಲ್ಲಿ ನಾವಾಡುವ ಎಲ್ಲ ಭಾಷೆಗಳೂ ದೇವಬಾಷೆಗಳೇ. ಆದರೇ ಈ ಎಲ್ಲ ವಾಚಿಕ ಭಾಷೆಗಳನ್ನು ಮೀರಿದ ಶಕ್ತಿಯುಳ್ಳ ಭಾಷೆ ಮೌನ. ಅಲ್ಲಿ ಶಬ್ದಾಡಂಬರವಿಲ್ಲ, ಕವಿತ್ವವಿಲ್ಲ, ಸಾಹಿತ್ಯವಿಲ್ಲ, ಸಂಗೀತವಿಲ್ಲ. ಅಲ್ಲಿರುವುದು ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ಎನ್ನುವ ವಿಶ್ವಾಸ, ನಂಬಿಕೆ. ಈ ನಂಬಿಕೆಯೇ ಪ್ರಾರ್ಥನೆಗೆ ಫಲವನ್ನು ನೀಡಬಲ್ಲುದು ಎಂಬುದನ್ನು ನಾವು ಮಕ್ಕಳಿಗೆ ತಿಳಿಸಬೇಕು. ಮಕ್ಕಳಲ್ಲಿ ದೈವತ್ವದ ಕುರಿತಾದ ಚಿಂತನ, ಆತ್ಮವಿಕಾಸ ಮತ್ತು ಮನೋವಿಕಾಸಗಳಿಗೆ ಪ್ರಾರ್ಥನೆಯೆಂಬುದು ಶುಭಾರಂಭ.
ಬೆಳಗೆದ್ದು ನಮ್ಮ ಮಕ್ಕಳು ಸೇರಿದಂತೆ ನಾವೆಲ್ಲರೂ ಮಾಡಬೇಕಾದ ಪ್ರಾರ್ಥನೆ ಹೀಗಿರಲಿ;
“ಹೇ ಭಗವಂತ, ನೀನು ನನಗೆ ಮತ್ತೊಂದು ಹೊಸ ದಿವಸವನ್ನು ಕರುಣಿಸಿದ್ದೀಯೆ. ನಿನ್ನ ಗುಣಗಾನ ಮಾಡುವ ಮತ್ತೊಂದು ಅವಕಾಶವನ್ನು ನೀಡಿದ್ದೀಯೆ.
ಪ್ರಭುವೇ, ನಿನಗಾಗಿ ನನ್ನ ದೇಹವೆಂಬ ಮಂದಿರದ ಬಾಗಿಲನ್ನು ತೆರೆದಿದ್ದೇನೆ.
ದಿನವಿಡಿ ಈ ಮಂದಿರ ಸ್ವಚ್ಛ ಮತ್ತು ಪವಿತ್ರವಾಗಿರಲಿ.
ಈ ಮಂದಿರದಲ್ಲಿ ಸಚ್ಚಾರಿತ್ರ್ಯ, ವಿನಯ, ವಿವೇಕಗಳೆಂಬ ಗಂಟೆ ಸದಾ ಮೊಳಗುತ್ತಿರಲಿ. ನನ್ನೀ ಪ್ರಾರ್ಥನೆಯನ್ನು ಸ್ವೀಕರಿಸು.
ಹೇ ಪ್ರಭುವೇ, ನನಗೆ ಅರಿವನ್ನು ನೀಡು.
ಯಾವುದಾದರೊಂದು ಸಂಗತಿಯು ನನ್ನ ಧ್ಯೇಯವನ್ನು ಬದಲಿಸದಿರಲಿ.
ಧ್ಯೇಯದೆಡೆಗಿನ ನನ್ನ ನಡೆಯನ್ನು ಬದಲಿಸದಂತಹ ಆತ್ಮಶಕ್ತಿಯನ್ನು ನನಗೆ ನೀಡು.
ಯಾವುದನ್ನು (ದೈವನಿರ್ಣಯ) ನನ್ನಿಂದ ಬದಲಿಸಲಾಗದೋ, ಅದು ಒಳ್ಳೆಯದು ಅಥವಾ ಕೆಟ್ಟದಿರಬಹುದು ಅದನ್ನು ಸಹಿಸುವ ಶಕ್ತಿಯನ್ನು ನನಗೆ ನೀಡು.
ಹೇ ಪ್ರಭುವೇ, ನೀನು ನನಗೆ ನಿನ್ನ ಪ್ರೇಮ ಮತ್ತು ಕೃಪೆಯೆಂಬ ಎರಡು ವಿಷಯಗಳನ್ನು ಕರುಣಿಸು. ಇವೆರಡು ನಿನ್ನಿಂದ ನನಗೆ ದೊರಕಿದರೆ ಉಳಿದೆಲ್ಲವು ತನ್ನಿಂದ ತಾನಾಗಿಯೇ ನನಗೆ ದೊರಕುತ್ತದೆ.”
ಪ್ರಾರ್ಥನೆ ಕೇವಲ ಬೆಳಗು ಸಂಜೆಗಳಲ್ಲಿ ಮಾತ್ರವಲ್ಲ. ನಾವುಣ್ಣುವ ಸಮಯದಲ್ಲೂ ಕಣ್ಮುಚ್ಚಿ ಪ್ರಾರ್ಥಿಸುವುದು ನಾವು ತಿನ್ನುವ ಅನ್ನಕ್ಕೆ ಗೌರವ ನೀಡಿದಂತೆ.
ಆ ಪ್ರಾರ್ಥನೆ ಹೀಗಿರಲಿ :
“ಯಾವನು ಹೊಲಗದ್ದೆಗಳನ್ನು ಉತ್ತಿ, ಬಿತ್ತಿ ಈ ಅನ್ನವನ್ನು ಉತ್ಪಾದಿಸಿದನೋ ಅವನಿಗೆ ನನ್ನ ನಮನಗಳು.
ಯಾವನು ರೈತನು ಉತ್ತಿ, ಬಿತ್ತಿದ ಕಾಳನ್ನು ಪೈರಾಗಿಸುವಲ್ಲಿ ಕಾಲಕಾಲಕ್ಕೆ ಮಳೆ, ಬಿಸಿಲನ್ನು ನೀಡಿದನೋ ಅಂತಹ ಭಗವಂತನಿಗೆ ನನ್ನ ನಮನಗಳು.
ಯಾರು ಈ ಅನ್ನವನ್ನು ಸ್ವಾದಿಷ್ಟವಾಗಿ ಬೇಯಿಸಿ, ಉಣಬಡಿಸಿದಳೊ(ನೊ) ಅವನಿ(ಳಿ)ಗೆ ನನ್ನ ನಮನ.
ಯಾರು ಈ ಸ್ವಾದಿಷ್ಟ ಭೋಜನವನ್ನು ಉಣ್ಣಲು ನನ್ನಲ್ಲಿ ಹಸಿವನ್ನು ಸೃಷ್ಟಿಸಿದನೊ ಅಂತಹ ಭಗವಂತನಿಗೆ ನನ್ನ ನಮನಗಳು”
ನಾವುಣ್ಣುವ ಅನ್ನದ ಹಿಂದಿರುವ ಕೈಗಳ ಪರಿಶ್ರಮವನ್ನು ಗೌರವಿಸಿ ನಮಿಸುವ ಈ ಪ್ರಾರ್ಥನೆಯನ್ನು ನಾವು ನಮ್ಮ ಮಕ್ಕಳಿಗೆ ಕಲಿಸಬೇಕು.
ದಿನದ ಕೊನೆಯಲ್ಲಿ ನಿದ್ರಿಸುವ ಮೊದಲು ಮೌನವಾಗಿ ಸರ್ವಶಕ್ತನಲ್ಲಿ ಹೀಗೆ ಪ್ರಾರ್ಥಿಸೋಣ. “ಹೇ ದಯಾಮಯ, ನನ್ನ ಈ ದಿನವು ನಿನ್ನ ಕೊಡುಗೆಯಾಗಿತ್ತು. ನಾನೀ ದಿನವನ್ನು ನಿನ್ನ ಕೃಪೆಯಿಂದ ಸಂತೋಷದಲ್ಲಿ ಕಳೆದಿದ್ದೇನೆ. ಅದಕ್ಕಾಗಿ ನಿನಗೆ ನನ್ನ ನಮನಗಳು.“
ಈ ರೀತಿಯ ಸರಳ, ಸುಲಭವಾದ ಪ್ರಾರ್ಥನೆಯನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಭಗವಂತನ ಕೃಪೆಗೆ ಪಾತ್ರರಾಗಬಹುದಲ್ಲವೆ?
– ದಿವಾಕರ ಡೋಂಗ್ರೆ ಎಂ.