ಬೆಲ್ಲದ ಗುಂಟ ಒಂದು ಸುತ್ತು ನೆನಪು
“ಗೊಪೂ ಹರ್ಮಕ್ಕಿಯಲ್ಲಿ ಆಲೆ ಮನೆ ಬಂದಿದೆಯಂತೆ, ಶನಿವಾರ ಹೋಗ್ವನಾ?” ಅಂತ ಪಿಸುಗುಟ್ಟಿದ ನನ್ನ ಕಿವಿಯಲ್ಲಿ, ಸೀನ ಸಂಜೆ ನಾನು ಶಾಲೆಯಿಂದ ಬರುವುದನ್ನೇ ಕಾಯುತ್ತಿದ್ದು , ಅವನ ಈ ಮಾತು ಕೇಳುತ್ತಲೇ ನನ್ನ ಕಿವಿಗಳು ಚುಳ್ಳರಿಸಿದ್ದವು.
ಹಳ್ಳಿಯ ಜೀವನದಲ್ಲಿ ಈ ಕಾಲದ ಮನರಂಜನೆಯಂತಹಾ ಸಾಧನ ಕಡಿಮೆ, ಆದರೆ ಜೀವನದಲ್ಲಿ ಜೀವಿಸುವದರಲ್ಲೇ ತೃಪ್ತಿ ಪಡುವವರೆಲ್ಲ, ಹೌದು ಅವರು ಅಲ್ಪ ತೃಪ್ತರು. ಹಬ್ಬ ಜಾತ್ರೆ, ತೇರು, ಕಂಬಳ, ಕೋಳೀ ಪಡೆ ಯಂತೆ ಈ ಆಲೆಮನೆಯೂ ಅತ್ಯಂತ ಸಂಭ್ರಮಿಸುವ ವಿಷಯ ಅಬಾಲವ್ರದ್ಧರಿಗೂ. ನಮ್ಮಂತಹ ಸಸ್ಯಾಹಾರಿಗಳಿಗೆ ತಿನ್ನಲು ವಿಶೇಷವೆಂದರೆ ಸಿಹಿ ಅದರಲ್ಲೂ ಸುಲಭ ಸರಳವಾಗಿ ಸಿಗೋದು ಬೆಲ್ಲವೇ, ಬೆಲ್ಲದ ಗೋಂಟ ಅಂತ ನನಗೆ ವಿಶೇಷ ಬಿರುದೂ ಇತ್ತು.ಮನೆಯಲ್ಲಿ ಶುಕ್ರವಾರಕ್ಕೆ ವಿಶೇಷ ಸ್ಥಾನ ನನ್ನ ದೃಷ್ಟಿಯಲ್ಲಿದ್ದದ್ದು ಅಂದಿನ ವಿಶೇಷ ಬಜನೆಯಿಂದಲ್ಲ ಮಂಗಳಾರತಿಯ ನಂತರ ಸಿಗೋ ಸಿಹಿ ತೀರ್ಥ ಹಾಗೂ ಪ್ರಸಾದಕ್ಕಾಗಿ, ಬಾಳೆಹಣ್ಣು ಹಾಲು ಬೆಲ್ಲ ತುಪ್ಪ ಕಲ್ಲುಸಕ್ಕರೆ ಹಾಕಿದ ಸಿಹಿತೀರ್ಥ ಜತೆಯಲ್ಲಿನ “ಶಿರಾ” – ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ರವೆಗೆ ಸಕ್ಕರೆ ಸೇರಿಸಿ ಕದಡಿ ಮಂದವಾಗಿ ಬೇಯಿಸಿದ ಸಿಹಿತಿಂಡಿಗಾಗಿಯಷ್ಟೇ.
ಅದು ಈಗ ಪೇಟೆಯಲ್ಲೆಲ್ಲ ಸಿಗುವ ಗಾತ್ರದ ಬೆಲ್ಲವಲ್ಲ, ಕಪ್ಪಗಿದ್ದು ಹರಳುಹರಳಾಗಿ ಅತ್ತ ಗಟ್ಟಿಯೂ ಅಲ್ಲದ ಇತ್ತ ದ್ರವವೂ ಅಲ್ಲದ ಅಪ್ಪಟ ದೇಶೀ ಬೆಲ್ಲವದು, ತಿನ್ನುತ್ತಿದ್ದರೆ ತಿಂತಾನೇ ಇರಬೇಕೆನ್ನಿಸುತ್ತೆ. ವರ್ಷಕ್ಕೆ ಬೇಕಾಗುವಷ್ಟೂ ಬೆಲ್ಲವನ್ನು ಒಮ್ಮೆಲೇ ಖರೀಧಿಸಿ ಇಟ್ಟುಕೊಳ್ಳುವ ಸಂಪ್ರದಾಯ ಹಳ್ಳಿಗಳಲ್ಲಿ, ಅದೂ ತಗಡಿನ ಡಬ್ಬದಲ್ಲಿ. ಈ ಆಲೆಮನೆಯಲ್ಲಿ ಬೆಲ್ಲ ತಯಾರಾಗುತ್ತಿರುವಾಗಲೇ ಅವರವರ ಬೇಡಿಕೆಗಳಿಗನುಸಾರವಾಗಿ ಯಾವ ರೀತಿಯ ಬೆಲ್ಲ ಬೇಕೋ ಹಾಗೆ. ನಮ್ಮಲ್ಲಿ ಜೋನಿ ಬೆಲ್ಲ ಅಂತಾನೂ ಒಂದು ಪ್ರಕಾರವಿದೆ, ಕಬ್ಬಿನ ಹಾಲು ಬೆಂದು ಬೆಲ್ಲದ ನೊರೆ ನೊರೆ ಶುರುವಾಗುತ್ತಲೇ ತೆಗೆದಿರಿಸುವರು, ಅದು ದೋಸೆ ಇಡ್ಲಿ ಮುಂತಾದ ಯಾವುದೇ ತಿಂಡಿಯ ಜತೆಗೂ ಫಿಟ್. ಅದರೆದುರಿಗೆ ಈಗಿನ ಜಾಮ್ ಸಾಸ್ ಗಳನ್ನೆಲ್ಲಾ ನಿವಾಳಿಸಿ ಎಸಿಯಬೇಕು. ಈಗಲೂ ನಮ್ಮ ಮನೆಯಲ್ಲಿ ಈ ನೀರು ಬೆಲ್ಲ( ಜೋನಿ) ಗ್ಯಾರಂಟಿಯೇ.ನಮ್ಮ ಮನೆಯಲ್ಲಿ ಡಬ್ಬದಿಂದ ಬೆಲ್ಲ ತೆಗೆಯಲು ನನಗೇ ಹೇಳುತ್ತಿದ್ದರು, ನನ್ನ ಬೆಲ್ಲದ ಮೇಲಿನ ಅತೀ ಪ್ರೀತಿಯಿಂದಾಗಿಯೋ , ನನ್ನಲ್ಲಿ ಅದಕ್ಕೇ ಒಂದು ಪದ್ದತಿಯಿದೆ. ನಿತ್ಯ ಉಪಯೋಗಿಸುವ ಪಾತ್ರಕ್ಕೆ ತೆಗೆದಾದ ಮೇಲೆ ಕೈ ತೊಳೆಯಲು ಹೋಗುವ ಮೊದಲು (ನೀವೇನೆಂದುಕೊಳ್ಳುವಿರೋ ತಿಳಿಯದು..) ಇಡಿ ಕೈಯ್ಯನ್ನು ನಾನು ನೆಕ್ಕಿಯೇ ಕ್ಲೀನ್ ಮಾಡಿಕೊಳ್ಳುವುದು. ಅದಕ್ಕೇ ನನಗೆ ಗೋಂಟ ಎಂಬ ಅನ್ವರ್ಥಕ ನಾಮ.
ಸಾಮಾನ್ಯವಾಗಿ ಗದ್ದೆಗಳಲ್ಲೆಲ್ಲಾ ಸ್ವಲ್ಪ ದೊಡ್ಡದೇ ಅನ್ನಿಸುವ ಹಾಗೂ ತೋಟದ , ಮರಗಳ ತೋಪಿನ , ನೆರಳು ಇರುವೆಡೆಗಳಲ್ಲೇ ಆಲೆ ಮನೆಗೆ ಸಿದ್ಧತೆ ನಡೆಯುತ್ತಿತ್ತು. ಸ್ಥಳದ ಕೊರತೆಯಿಲ್ಲದೆಡೆ ಇವೆಲ್ಲಾ ಹಾಗೆಯೇ ಉಳಿಸಿಕೊಳ್ಳುತ್ತಾರೆ ಮುಂದಿನ ಬೆಳೆಯ ಬೆಲ್ಲಕ್ಕೆ. ಮೊದಲು ಹೊಂಡ ತೆಗೆಯುತ್ತಾರೆ. ಒಂದು ವ್ರತ್ತಾಕಾರದ ದೊಡ್ಡ ಹೊಂಡ.( ಒಲೆ- ಇದಕ್ಕೆಲ್ಲಾ ಸುಮಾರು ದಿನ ಮೊದಲೇ ತಯಾರಿ ಮಾಡಿರುತ್ತಾರೆ.ಸುಮಾರು ದೊಡ್ಡ ಕೊಪ್ಪರಿಗೆಯಳತೆಯ ನಾಲ್ಕೈದು ಅಡಿ ಆಳದ ಹೊಂಡ ನೆಲದ ಮೇಲೆಸ್ವಲ್ಪ ದಂಡೆ ಕಟ್ಟಿ, ಒಂದು ಕಡೆ ಕಟ್ಟದೇ ಬಿಟ್ಟಿರುತ್ತಾರೆ. ಅದರಲ್ಲೇ ದೊಡ್ಡ ದೊಡ್ಡ ಮೋಫು-ಸೌದೆ ಹಾಕಲು. ಇನ್ನೊಂದು ಸುಮಾರಿನ ಹೊಂಡ ಕಬ್ಬಿನ ಹಾಲು ಸಂಗ್ರಹಿಸುವ ಪಾತ್ರೆಯಿಡಲು. ದೊಡ್ಡ ಹಂಡೆ. ಕಬ್ಬಿನ ಗಾಣದಿಂದ ಈ ಹಂಡೆಗೆ ನೇರವಾಗಿ ಕಬ್ಬಿನ ರಸ ಹರಿಯುವ ವ್ಯವಸ್ಥೆ ಇರುತ್ತದೆ. ಅದು ತುಂಬುತ್ತಲೇ ಅದನ್ನ ತೆಗೆದು ಕೊಪ್ಪರಿಗೆಗೆ ಹಾಕುತ್ತಾರೆ ಸಾಮಾನ್ಯವಾಗಿ ಎರಡು ಎರಡೂವರೆ ಹಂಡೆಯ ಕಬ್ಬಿನ ರಸ ಒಂದು ಬಾರಿಯ ಬೆಲ್ಲದ ಕೊಪ್ಪರಿಗೆಗೆ ಒಲೆಯ ಮೇಲಿರಿಸಿ ಹದವರಿತು ಬೇಯಿಸಿದರೆ ಬೆಲ್ಲ ರೆಡಿ.
ನಾನೂ ಸೀನನೂ ಆಲೆಮನೆಗೆ ತಲುಪುವಾಗ ತೆಂಗಿನ ಮರದ ತೋಪಿನಲ್ಲೇ ಮಲಗಿ ಹಾಯಾಗಿ ಬಾಯಾಡಿಸುತ್ತಿರುವ ಒಂದು ಜತೆ ಹೋರಿಗಳು ನಮ್ಮ ಸ್ವಾಗತಿಸುವಂತೆ ಕಂಡಿತು ತಮ್ಮ ಉದ್ದನೆಯ ಕಪ್ಪು ಕುಚ್ಚಿನ ಬಾಲವೆತ್ತಿ ಟಪಾರನೆ ಹೊಡೆಯುತ್ತಾ. ಗಾಣಕ್ಕೆ ಸುತ್ತು ಬರುತ್ತಿದ್ದವು ಇನ್ನೊಂದು ಜತೆ ಹೋರಿಗಳು. ಅವುಗಳ ಸುತ್ತುತ್ತಿರುವ ದಾರಿಯಾಗಲೇ ಭೂರಮೆಗೆ ಹಾಕಿದ ರಂಗೋಲಿಯಂತೆ ವ್ರತ್ತಾಕಾರವಾಗಿ ಅಲ್ಲಿನ ಪರಿಸರಕ್ಕೆ ಒಂದು ವಿಶಿಷ್ಟವಾದ ರುಜು ಹಾಕಿದಂತಿತ್ತು. ಗಾಣದ ಪಳಪಳನೆ ಹೊಳೆಯುವ ಉಕ್ಕಿನ ಅಚ್ಚು ಗಾಲಿಗಳೆಡೆಯಲ್ಲಿ ಅಪ್ಪಚ್ಚಿಯಾದ ಕಬ್ಬಿನ ಹಾಲು ನೊರೆನೊರೆಯಾಗಿ ಕೆಳಗಿನ ಹೊಂಡದಲ್ಲಿರಿಸಿದ ಹಂಡೆಯಲ್ಲಿ ತುಂಬಿಕೊಳ್ಳುತ್ತಿತ್ತು. ಪಕ್ಕದ ದಗದಗನೆ ಉರಿಯುತ್ತಿರುವ ಒಲೆಯ ಮೇಲಿರಿರಿಸಿದ ಕೊಪ್ಪರಿಗೆಯಲ್ಲಿ ಕಬ್ಬಿನ ರಸ ನಿಧಾನವಾಗಿ ಹಳದಿ ಬಣ್ಣದ ನೊರೆನೊರೆಯಾಗಿ ತನ್ನ ವಿಶಿಷ್ಟ ಸುಗಂಧ ಸೂಸುತ್ತಾ ರೂಪಾಂತರಗೊಳ್ಳುತ್ತಿತ್ತು. ಸೀನ ಕಣ್ಸನ್ನೆಯಲ್ಲೇ ನನಗೆ ತಾವು ಸರಿಯಾದ ಸಮಯಕ್ಕೇ ಬಂದೆವೆಂದು ಸೂಚಿಸಿದ. ಅಂತಹಾ ಗಡಿಬಿಡಿಯಲ್ಲೂ ಆತ ತನ್ನ ಜತೆ ಹತ್ತಾರು ದೊಡ್ಡ ದೊಡ್ಡ ಗೇರು ಮತ್ತು ಕವಲು ಮರದ ಎಲೆಗಳನ್ನು ಹೊತ್ತು ತರಲು ಮರೆತಿರಲಿಲ್ಲ.ಕಾರಣ ಅಲ್ಲಿನ ಬಿಸಿ ಬಿಸೀ ಹಳದಿ ನೊರೆನೊರೆಯ ಬೆಲ್ಲ ತಿನ್ನಲು ಮುಂದೆ ಅವುಗಳ ಅವಶ್ಯಕಥೆಯಿದ್ದೇ ಇದೆ. ಅಗೋ ಕೊಪ್ಪರಿಗೆಯನ್ನು ಒಲೆಯ ಮೇಲಿಂದ ಇಳಿಸಲು ಎರಡು ಉದ್ದದ ಗಳು ( ಬಿದಿರ ದೊಣ್ಣೆ) ಕೊಪ್ಪರಿಗೆಯ ಬಳೆಯಲ್ಲಿ ತೂರಿಸಿ ನಾಲ್ಕಾರು ಜನ ಎತ್ತಿ ಕೆಳಕ್ಕಿಳಿಸಿದರು. ನಾವೆಯನ್ನು ಓಡಿಸಲು ಉಪಯೋಗಿಸುವ ಹುಟ್ಟಿನ ರೀತಿಯಲ್ಲಿರುವ ವಿಶಿಷ್ಟ ಮರದ ಸೌಟನ್ನು ರಸವನ್ನು ಕದಡಲು( ತಿರುವಿಹಾಕಲು) ಉಪಯೋಗಿಸುತ್ತಾರೆ. ಸೀನ ತನ್ನ ಕೈಯಲ್ಲಿ ಹಸಿರೆಲೆಯನ್ನು ಹಿಡಿದು ರೆಡಿಯಾಗಿದ್ದ ಅದರಲ್ಲಿ ಹಾಕಿಕೊಂಡ ಬಿಸಿ ಬೆಲ್ಲವನ್ನು ಸವಿಯಲು ಅಲ್ಲಿದ್ದ ಮಕ್ಕಳು ದೊಡ್ಡವರೆಲ್ಲರೂ ಸಂಭ್ರಮದಿಂದ ತಯಾರಾದರು.
ಇಡೀ ಪರಿಸರವೇ ಸಿಹಿ ಸಂಭ್ರಮದ್ದು. ಎತ್ತ ನೋಡಿದರತ್ತ ಕಬ್ಬಿನ ಜಲ್ಲೆಯ ರಾಶಿ, ಇನ್ನೊಂದೆಡೆ ಅದರ ಸಿಪ್ಪೆಯ ರಾಶಿ, ಮಗದೊಂಡೆಡೆ ಒಲೆಗಾಗಿ ತನ್ನನ್ನು ತಾನೇ ಸುಟ್ಟು ಕೊಳ್ಳಲು ಕಾಯುತ್ತಿರುವ ಮರದ ದಿಮ್ಮಿಗಳು. ಆ ಕಬ್ಬಿನ ರಸ, ಕಬ್ಬು, ಬೆಲ್ಲ ಹೀಗೆ ಆ ಪರಿಸರವೇ ಅತ್ಯಂತ ಸಹನೀಯ ಸುಗಂಧ ದಿಂದಾವ್ರತವಾಗಿದ್ದು, ಅದೊಂದು ಬಣ್ಣಿಸಲಸದಳವಾದ ಹೆಮ್ಮೆಯ ಚಿತ್ರ ಕವನ.
ಇನ್ನು ಇಡೀರಾತ್ರೆ ನಮಗೆಲ್ಲಾ ಸಂಭ್ರಮವೇ ಸಂಭ್ರಮ. ಅಲ್ಲಿಯೇ ನಾವು ಆಟವಾಡುತ್ತಾ ಕಾಲ ಕಳೆದೆವು. ಈ ಸಾರಿಯ ಆಲೆಮನೆಯ ಕಾಂಟ್ರಾಕ್ಟ್ ಸೀನನ ಅಣ್ಣ ಪಿಣಿಯನದ್ದೇ. ನಮ್ಮ ಮನೆಯ ಡಿಮಾಂಡ್ ಕೂಡಾ ಯಾವ ಸರ್ತಿಯ ಕೊಪ್ಪರಿಗೆಯದ್ದು ಅಂತ ಸಹಾ ನಮಗೆ ತಿಳೀದದ್ದೇ. ಅದನ್ನೇ ಎತ್ತಿನ ಗಾಡಿಯಲ್ಲಿ ಹೇರಿಕೊಂಡು ಮತ್ತೆ ನಾನೂ ಸೀನನೂ ಮನೆ ಕಡೆ ಹೊರಡ ಬೇಕು.
ಬೆಲ್ಲದಲ್ಲಿಯೂ ನಾನಾ ವಿಧವಿದೆ. ಅಂಟು ಬೆಲ್ಲ ( ಕೆಲವರು ಬೆಲ್ಲ ಮಾಡುವಾಗ ಹುರಿದ ಬೇಳೆಯ ಹುಡಿಯನ್ನೂ ಸೇರಿಸುತ್ತಾರೆ), ಗಟ್ಟಿ ಬೆಲ್ಲ, ಘಟ್ಟದ ಮೇಲಿನ ಬೆಲ್ಲ, ವಾಲಿ ಬೆಲ್ಲ ( ತಾಳೆ ಹಣ್ಣಿನದ್ದು) ಬಣ್ಣವೂ ಕಪ್ಪು, ಅರಷಿನ ಇತ್ಯಾದಿ ಇತ್ಯಾದಿ. ಇನ್ನು ಬಿಹಾರ, ಒರಿಸ್ಸಾ ಕಡೆ ಬೆಲ್ಲಕ್ಕೆ ಶುಂಠಿ ಸಹಾ ಸೇರಿಸುತ್ತಾರೆ. ಕೆಲವೆಡೆ ಬೆಲ್ಲ ಸರಿಯಾದ ಬಣ್ಣ ಬರಲು ಸುಣ್ಣ ಇತ್ಯಾದಿಗಳನ್ನೂ ಸೇರಿಸುತ್ತಾರಂತೆ, ನಿರಮಾ ಕೂಡಾ ಸೇರಿಸುತ್ತಾರೆ ಅಂತ ಕೇಳಿದ್ದೆ.
ಇತ್ತೀಚೆಗೆ ಕಾಲ ಬದಲಾದ ಹಾಗೆ ಎಲ್ಲವೂ ಬದಲಾಗುತ್ತಾ ಆಗುತ್ತಾಮೊದಲಿನ ಸಿಹಿ ಸಂಭ್ರಮ ಕಡಿಮೆಯಾಗುತ್ತಿದೆ. ಹಳ್ಳಿಗಳಲ್ಲೂ ಈಗ ಮೊದಲಿನಂತೆ ಸಹ ಜೀವನ ಸಹಬಾಳ್ವೆಯ ಕಲೆ. ನಶಿಸುತ್ತಿದೆ, ಕಬ್ಬಿನ ಬದಲು, ರೇಶ್ಮೆ, ರಬ್ಬರಗಳು ಪ್ರಾಧಾನ್ಯತೆ ಪಡೆದಿದ್ದು ಆ ಮೊದಲಿನ ಸಂಸ್ಕಾರವು ಪಳೆಯುಳಿಕೆಗಳಂತಾಗುತ್ತಿವೆ. ಪ್ರಾಯಶಃ ಇನ್ನೂ ಸ್ವಲ್ಪ ಕಾಲದ ಬಳಿಕ ನಮ್ಮ ಕನಸೆನ್ನುವಂತೆ ಮರೆಯಾಗಿಯೇ ಹೋಗುವವೇನೋ, ಇದಕ್ಕೆ ಉತ್ತರ ಕಾಲವೇ ಹೇಳಬೇಕು.
– ಬೆಳ್ಳಾಲ ಗೋಪಿನಾಥ ರಾವ್
ಲೇಖನವು ಬೆಲ್ಲದ೦ತೆ ಸಿಹಿಯಾಗಿತ್ತು
ನಮ್ಮಲ್ಲಿ ವರ್ಷ ಪೂರ್ತಿ ಜೋನಿ ಬೆಲ್ಲ ಇರುತ್ತದೆ . ಬಲು ರುಚಿ . ಅದು ಇದ್ದರೆ ನೀರುದೋಸೆಗೆ ಉತ್ತಮ ಕಾಂಬಿನೇಶನ್ . ಬರಹ ಉತ್ತಮ .
ಆಲೆಮನೆಯ ಸುತ್ತಲು ಒಂದು ಅವಲೋಕನವಾದಂತಾಯಿತು..ಉತ್ತಮ ಅನುಭವದ ಬರಹ.
ಬೆಲ್ಲದಂತೆ ಸವಿಯಾದ ಬರಹ. ನಾನು ವಾಲಿ ಬೆಲ್ಲದ ಫ್ಯಾನ್