ಶ್ರೀ ಮುತ್ತುಸ್ವಾಮಿ ದೀಕ್ಷಿತರು ಕಂಡ ಕೈಲಾಸನಾಥ ಪರಮೇಶ್ವರ: ಭಾಗ-2
2. ಪಂಚಲಿಂಗ ಸ್ಥಳ ಕೃತಿಗಳು :
ಶಿವನನ್ನು ಭೂತಗಳ ಅಧಿಪತಿ ಎನ್ನುವುದುಂಟು. ಹಾಗೆಯೇ ಪಂಚಭೂತಗಳು ಅವನ ಅಧೀನಕ್ಕೊಳಪಟ್ಟವು. ಹಾಗಾಗಿಯೇ ತಿಳಿದವರು ಹೇಳುವುದುಂಟು ಈ ಜಗವು ಶಿವಮಯವು ಎಂದು. ಈ ಒಂದು ತತ್ವವನ್ನು ಪ್ರತಿಪಾದಿಸುವ ಐದುಲಿಂಗಗಳೇ ಕಾಂಚೀಪುರದಲ್ಲಿರುವ ಪೃಥ್ವೀಲಿಂಗ , ತಿರುವನೈ ಕಾವಲ್‌ನಲ್ಲಿರುವ ಅಪ್ಪು(ಜಲ)ಲಿಂಗ , ತಿರುವಣ್ಣಾಮಲೈಯಲ್ಲಿರುವ ತೇಜೋ(ಅಗ್ನಿ)ಲಿಂಗ , ಕಾಳಹಸ್ತಿಲ್ಲಿರುವ ವಾಯುಲಿಂಗ, ಚಿದಂಬರಂನಲ್ಲಿರುವ ಆಕಾಶ ಲಿಂಗ ಹೀಗೆ ಈ ಐದು ಲಿಂಗಗಳನ್ನು ಸ್ತುತಿಸಿ ದೀಕ್ಷಿತರು ರಚಸಿದ ಕೃತಿಗಳೇ ಪಂಚಲಿಂಗಸ್ಥಳ ಕೃತಿಗಳು. ಈ ಕೃತಿಗಳಲ್ಲಿ ವಿಶೇಷವಾಗಿ ಲಿಂಗಮುದ್ರೆ, ಕ್ಷೇತ್ರಮುದ್ರೆ, ರಾಗಮುದ್ರೆ ಹಾಗೂ ವಾಗ್ಗೇಯಕಾರ ಮುದ್ರೆಗಳನ್ನು ಜಾಣ್ಮೆಯಿಂದ ಕೃತಿಯಲ್ಲಿ ಪೋಣಿಸಿದ್ದು ದೀಕ್ಷಿತರ ಸಾಹಿತ್ಯ ಪ್ರೌಢಿಮೆಗೆ ಮತ್ತು ಪೂರ್ವಯೋಜನಾ ಕೌಶಲ್ಯಕ್ಕೆ ಸಾಕ್ಷಿ.
ಪಂಚಲಿಂಗಸ್ಥಳ ಕೃತಿಗಳು ಇಂತಿವೆ:
ಕೃತಿ ರಾಗ ತಾಳ ಕ್ಷೇತ್ರ ಮುದ್ರೆ ಲಿಂಗ ಮುದ್ರೆ
ಜಂಬೂಪತೇ ಮಾಂ ಪಾಹಿ ಯಮನ್ ಕಲ್ಯಾಣಿ ರೂಪಕ ತಿರುವನೈಕಾವಲ್ ಜಂಬುಕೇಶ್ವರ ಅಪ್ಪು ಲಿಂಗಂ
ಅರುಣಾಚಲನಾಥಂ ಸ್ಮರಾಮಿ ಸಾರಂಗ ರೂಪಕ ತಿರುವಣ್ಣಾಮಲೈ ಅರುಣಾಚಲನಾಥ ತೇಜೊ ಲಿಂಗಂ
ಶ್ರೀ ಕಾಳಹಸ್ತೀಶ ಶ್ರಿತಜನಾವನ ಹುಸೇನಿ ಝಂಪೆ ಕಾಳಹಸ್ತಿ ಶ್ರೀಕಾಳಹಸ್ತೀಶ್ವರ ವಾಯು ಲಿಂಗ
ಆನಂದ ನಟನ ಪ್ರಕಾಶಂ ಕೇದಾರ ಛಾಪು ಚಿದಂಬರಂ ನಟರಾಜ ಆಕಾಶ ಲಿಂಗಂ
ಚಿಂತಯ ಮಾಕಂದ ಮೂಲಕಂದ ಭೈರವಿ ರೂಪಕ ಕಾಂಚಿಪುರಂ ಏಕಾಮ್ರನಾಥ ಪ್ರಥ್ವೀ ಲಿಂಗ
೩ ತಿರುವಾರೂರು ಪಂಚಲಿಂಗ ಕೃತಿಗಳು :
ದೀಕ್ಷಿತರ ತಿರುವಾರೂರಿನ ಶ್ರೀತ್ಯಾಗರಾಜ ಸ್ವಾಮಿಯ ಕೃತಿಗಳ ಬಗ್ಗೆ ಈ ಮೇಲೆ ನೋಡಿದ್ದೇವೆ. ಈಗ ಅದೇ ದೇವಾಸ್ಥಾನದ ಪ್ರಾಕಾರದೊಳಗಿರುವ ಐದು ಗುಡಿಯಲ್ಲಿರುವ ಶಿವಲಿಂಗದ ಬಗ್ಗೆ ದೀಕ್ಷಿತರು ರಚಿಸಿರುವ ಕೃತಿಗಳನ್ನು ನೋಡೋಣ.
ಕೃತಿ ರಾಗ ತಾಳ ಕ್ಷೇತ್ರ ಮುದ್ರೆ
ಸದಾಚಲೇಶ್ವರಂ ಭಾವಯೇಹಂ ಭೂಪಾಳ ಆದಿತಾಳ ಅಚಲೇಶ್ವರಂ
ಹಾಟಕೇಶ್ವರ ಸಂರಕ್ಷಮಾಂ ಬಿಲಹರಿ ರೂಪಕ ಹಾಟಕೇಶ್ವರಂ
ಶ್ರೀ ವಲ್ಮೀಕಲಿಂಗಂ ಚಿಂತಯೇ ಕಾಂಬೋಜಿ ಅಟತಾಳ ವಲ್ಮೀಕೇಶ್ವರಂ
ಆನಂದೇಶ್ವರೇಣ ಸಂರಕ್ಷಿತೋಹಂ ಆನಂದ ಭೈರವಿ ಛಾಪು ತಾಳ ಆನಂದೇಶ್ವರಂ
ಸಿದ್ಧೇಶ್ವರಯಾ ನಮಸ್ತೇ ನೀಲಾಂಬರಿ ಛಾಪುತಾಳ ಸಿದ್ಧೇಶ್ವರಂ
ದೀಕ್ಷಿತರ ಇತರ ಕ್ಷೇತ್ರ ಕೃತಿಗಳು ಹಾಗೂ ಶಿವಪರ ಕೃತಿಗಳು ಇಂತಿವೆ :
ತಂಜಾವೂರಿನ ಬೃಹದೀಶ್ವರ ಕುರಿತು ೯ಕೃತಿಗಳು, ಕಾಶಿ ವಿಶ್ವೇಶ್ವರನ ಕುರಿತು ೫ಕೃತಿಗಳು, ಮಧುರೈ ಸುಂದರೇಶ್ವರನ ಕುರಿತು ೬ ಕೃತಿಗಳು, ಕಾಂಚೀಪುರದ ಏಕಾಮ್ರನಾಥನ ಕುರಿತು ೫ಕೃತಿಗಳು, ಶ್ರೀನಗರದ ನಾಗಲಿಂಗನ ಕುರಿತು ೨ಕೃತಿಗಳು, ಮಧ್ಯಾರ್ಜುನದ ಮಹಾಲಿಂಗನ ಕುರಿತು ೨ಕೃತಿಗಳು, ನೇಪಾಳದ ಪಶುಪತಿನಾಥನ ಕುರಿತು ೧ಕೃತಿ, ಇದಲ್ಲದೆ ಶ್ರೀ ದಕ್ಷಿಣಾಮೂರ್ತಿ, ಶ್ರೀವಟುಕನಾಥ, ನೀಲಕಂಠ, ನೀಲಾಚಲ ನಾಥ, ವೇದಾರಣ್ಯೇಶ್ವರ, ಮರಕತಲಿಂಗ, ಗೋಕರ್ಣೇಶ್ವರ, ಅಗಸ್ತೀಶ್ವರ, ಶಾಲಿವಾಟೀಶ್ವರ, ಮಾರ್ಗಸಹಾಯೇಶ್ವರ , ಅರ್ಧನಾರೀಶ್ವರ, ಶೈಲೇಶ್ವರ, ಶ್ರೀವೈದ್ಯನಾಥ ಮುಂತಾದ ಶಿವಲಿಂಗದ ಕುರಿತು ಕೃತಿರಚಿಸಿದ್ದಾರೆ. ಇದಲ್ಲದೆ ಕಾಶಿಯ ಕ್ಷೇತ್ರಪಾಲ ಕಾಲಭೈರವನ ಕುರಿತು ಭೈರವರಾಗದಲ್ಲಿ ಕೃತಿ ರಚಿಸಿದ್ದಾರೆ. ಹೀಗೆ ದೀಕ್ಷಿತರು ರಚಿಸಿದ ಶಿವಪರ ಕೃತಿಗಳ ಸಂಖ್ಯೆ ಸುಮಾರು ೧೩೦.
ದೀಕ್ಷಿತರ ಶಿವಪರ ಕೃತಿಗಳು ಮತ್ತು ರಾಗಗಳು:
ಇನ್ನು ದೀಕ್ಷಿತರ ಶಿವಪರ ಕೃತಿಗಳ ರಾಗಗಳನ್ನು ನೋಡಿದರೆ ಅತೀ ಹೆಚ್ಚಾಗಿ ಬಳಕೆಯಾದ ರಾಗ ಶಂಕರಾಭರಣ. ಈ ರಾಗದಲ್ಲಿ ದೀಕ್ಷಿತರು ಸುಮಾರು ೧೩ಶಿವನ ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ಜನ್ಯರಾಗಗಳಲ್ಲಿ ಅತಿ ಹೆಚ್ಚಿನ ರಾಗಗಳು ಶಂಕರಾಭರಣ ರಾಗದಿಂದ ಜನಿತಗೊಂಡವು, ಅಂದರೆ ಸುಮಾರು ಸರಿ ಸುಮಾರು ೧೫ರಾಗಗಳು ಶಂಕರಾಭರಣ ರಾಗದ ಜನ್ಯರಾಗಗಳು. ಈ ನಿಟ್ಟಿನಲ್ಲಿ ನೋಡಿದರೆ ದೀಕ್ಷಿತರು ಶಿವಕೃತಿಗಳಿಗೆ ಅತೀ ಹೆಚ್ಚು ಬಳಸಿದ್ದು ಶಂಕರಾಭರಣ ರಾಗ. ಇನ್ನು ಉಳಿದಂತೆ ಶಿವನಿಗೆ ಹತ್ತಿರವಾದ ರಾಗಗಳೆಂದರೆ ಕೇದಾರ ಮತ್ತು ರುದ್ರಪ್ರಿಯ ರಾಗಗಳಲ್ಲಿ ತಲಾ ಎರಡೆರಡು ಕೃತಿಗಳನ್ನು ರಚಿಸಿದ್ದಾರೆ. ಇನ್ನು ಆನಂದ ಭೈರವಿ, ಕಾಂಭೋಜಿ, ದೇವಗಾಂಧಾರ,ತೋಡಿ, ಸುರಟಿ,ಭೈರವಿ,ಶ್ರೀರಾಗ,ದರ್ಬಾರ್, ವಸಂತ, ಧನ್ಯಾಸಿ,ಬೇಗಡೆ ಮುಂತಾದ ಜನಪ್ರಿಯ ರಾಗಗಳಲ್ಲದೆ ನಾಗಾಭರಣ,ಭೈರವ, ಶಿವಪಂತುವರಾಳಿ,ಭೂಪಾಳ, ಸಾರಂಗ, ನಾಗಧ್ವನಿ,ನಾರಾಯಣ ದೇಶಾಕ್ಷಿ,ನಿಷಧ,ಜೀವಂತಿಕಾ,ಸಿಂಧುರಾಮಕ್ರಿಯಾ ಹೀಗೆ ಹಲವು ಅಪರೂಪದ ರಾಗಗಳನ್ನು ಬಳಸಿ ಶಿವಪರ ಕೃತಿಗಳನ್ನು ರಚಿಸಿದ್ದಾರೆ.
ಹಾಗೆಯೇ ದೀಕ್ಷಿತರು ಶಿವಪರ ಕೃತಿಗಳಿಗೆ ಬಳಸಿಕೊಂಡ ಜನಕರಾಗಗಳು ಸುಮಾರು ಇಪ್ಪತ್ತು. ಇವುಗಳಲ್ಲಿ ತೋಡಿ ಮತ್ತು ಶಂಕರಾಭರಣ ಸಂಪೂರ್ಣ ಮೇಳ ಪದ್ಧತಿಯಾದರೆ ಮಿಕ್ಕಿ ಉಳಿದ ಹದಿನೆಂಟು ರಾಗಗಳು ಅಸಂಪೂರ್ಣ ಮೇಳ ಪದ್ಧತಿ ಮತ್ತು ವಿವಾದಿ ಮೇಳಗಳಾಗಿವೆ.
ಕ್ಷೇತ್ರಮುದ್ರೆ:
ದೀಕ್ಷಿತರ ಶಿವಕೃತಿಗಳಲ್ಲಿ ಅತೀ ಹೆಚ್ಚಿನವು ಕ್ಷೇತ್ರಕೃತಿಗಳು. ಅಂದರೆ ದೀಕ್ಷಿತರು ತಮ್ಮ ಕ್ಷೇತ್ರ ಪರ್ಯಟನಾ ಸಂಧರ್ಭಗಳಲ್ಲಿ ಹಲವಾರು ಶಿವ ದೇವಾಲಯಗಳನ್ನು ಸಂದರ್ಶಿಸಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿಯ ಪ್ರಮುಖ ದೇವತೆಯಾದ ಶಿವನನ್ನು ಕುರಿತು ಕೃತಿ ರಚಿಸುತ್ತಿದ್ದರು. ಕೃತಿ ರಚಿಸುವ ಸಂದರ್ಭದಲ್ಲಿ ಕ್ಷೇತ್ರದ ಹೆಸರನ್ನು ಕೃತಿಯಲ್ಲಿ ಚಾಕಚಕ್ಯತೆಯಿಂದ ಸೇರಿಸುವುದು ದೀಕ್ಷಿತರ ಜಾಣ್ಮೆ. ಇಲ್ಲಿ ಕೆಲವೊಂದು ಕ್ಷೇತ್ರಮುದ್ರೆಗಳಿಗೆ ನಿದರ್ಶನ:
೧ ಪಾಲಯ ಮಾಂ ಬೃಹದೀಶ್ವರ – ನಾಯಕಿರಾಗದ ಕೃತಿಯಲ್ಲಿ , ಚರಣದ ಸಾಲಿನ- ವಿಲಸಿತ ತಂಜಪುರೀಶ್ವರ ಬೃಹನ್ನಾಯಕೀ ಮನೋಹರ ಎಂಬ ಸಾಲಿನಲ್ಲಿ ಕ್ಷೇತ್ರ ಮುದ್ರೆ ಕಾಣಬಹುದು.
೨ ಹಾಟಕೇಶ್ವರ ಸಂರಕ್ಷಮಾಂ – ಬಿಲಹರಿ ರಾಗದ ಕೃತಿಯಲ್ಲಿ- ಅನುಪಲ್ಲವಿಯಲ್ಲಿ- ಹಾಟಕಕ್ಷೇತ್ರ ನಿವಾಸ ಹಂಸರೂಪ ಚಿದ್ವಿಲಾಸ ಎಂಬ ಸಾಲಿನಲ್ಲಿ ಕ್ಷೇತ್ರ ಮುದ್ರೆ ಕಾಣಬಹುದು.
೩ ಸುಂದರೇಶ್ವರಾಯ ನಮಸ್ತೇ – ಶಂಕರಾಭರಣ ರಾಗದ ಕೃತಿಯಲ್ಲಿ – ಅನುಪಲ್ಲವಿಯಲ್ಲಿ – ಮಂದಸ್ಮಿತಾನನಾಯ ಮಧುರಾಪುರೀನಿಲಯಾಯ – ಎಂಬ ಸಾಲಿನಲ್ಲಿ ಕ್ಷೇತ್ರಮುದ್ರೆ ಕಾಣಬಹುದು.
೪ ಏಕಾಮ್ರನಾಥೇಶ್ವರೇಣ ಸಂರಕ್ಷಿತೋಹಂ ಶ್ರೀ – ಚತುರಂಗಿಣಿ ರಾಗದ ಚರಣದಲ್ಲಿ – ಕಾಂಚೀಪುರ ವಿಲಸಿತ ಪ್ರಭಾವೇನ ಎಂಬ ಸಾಲಿನಲ್ಲಿ ಕ್ಷೇತ್ರಮುದ್ರೆ ಕಾಣಬಹುದು.
೫ ಚಿದಂಬರ ನಟರಾಜ ಮೂರ್ತಿಂ ಚಿಂತಯಾಮ್ಯತನುಕೀರ್ತಿಂ – ತನುಕೀರ್ತಿ ರಾಗದ ಕೃತಿಯ ಪಲ್ಲವಿಯು ಪ್ರಾರಂಭವಾಗು ವುದು ಚಿದಂಬರ ಎಂಬ ಕ್ಷೇತ್ರಮುದ್ರೆಯಿಂದಲೇ.
೬ ಕಾಶಿ ವಿಶ್ವೇಶ್ವರ ಏಹಿ ಮಾಂ ಪಾಹಿ – ಎಂಬ ಕಾಂಭೋಜಿ ರಾಗದ ಕೃತಿಯೂ ಪಲ್ಲವಿಯಲ್ಲಿಯೇ ಕಾಶಿ ಎಂಬ ಕ್ಷೇತ್ರಮುದ್ರೆಯನ್ನು ಒಳಗೊಂಡಿದೆ.
೭ ಚಿಂತಯೇ ಮಹಾಲಿಂಗಮೂರ್ತಿಂ – ಎಂಬ ಫರಜ್ ರಾಗದ ಕೃತಿಯ – ಅನುಪಲ್ಲವಿಯಲ್ಲಿ – ಸತತಂ ಮಧ್ಯಾರ್ಜುನಪುರವಾಸಂ ಎಂಬಲ್ಲಿ ಕ್ಷೇತ್ರ ಮುದ್ರೆ ಕಾಣಸಿಗುತ್ತದೆ.
೮ ಪಶುಪತೀಶ್ವರಂ ಪ್ರಣೌಮಿ ಸತತಂ – ಎಂಬ ಶಿವಪಂತುವರಾಳಿ ರಾಗದ ಕೃತಿಯಲ್ಲಿ – ಅನುಪಲ್ಲವಿಯ ಪಶ್ಚಿಮ ಕಾಶ್ಮೀರ (ನೇಪಾಳ) ರಾಜವಿನುತಂ ಎಂಬ ಸಾಲಿನಲ್ಲಿ ಈ ಕೃತಿಯ ಕ್ಷೇತ್ರಮುದ್ರೆಯನ್ನು ಕಾಣಬಹುದು.
೯ ಕಾಯಾ ರೋಹಣೇಶಂ ಭಜರೇರೇ ಮಾನಸ – ಕರ್ನಾಟಕ ದೇವಗಾಂಧಾರ ರಾಗದ ಕೃತಿಯಲ್ಲಿ – ಕಲಿಕಲ್ಮಷಾಪಹಂ ಶಿವರಾಜಧಾನಿ ಕ್ಷೇತ್ರಸ್ಥಿತಂ ಎಂದು ಪಲ್ಲವಿಯಲ್ಲಿಯೇ ಕ್ಷೇತ್ರಮುದ್ರೆಯಿದೆ.
೧೦ ಶ್ರೀವೈದ್ಯನಾಥಂ ಭಜಾಮಿ – ಅಠಾಣ ರಾಗದ ಕೃತಿಯಲ್ಲಿ – ಧವಳಿತ ವೈದ್ಯನಾಥಕ್ಷೇತ್ರಂ ಎಂದು ಅನುಪಲ್ಲವಿಯಲ್ಲಿ ಕ್ಷೇತ್ರಮುದ್ರೆಯಿದೆ. ಇದಲ್ಲದೆ ಇನ್ನೂ ಹಲವಾರು ಶಿವಪರಕೃತಿಗಳಲ್ಲಿ ಕ್ಷೇತ್ರಮುದ್ರೆಯನ್ನು ಕಾಣಬಹುದು.
ಮುಕ್ಕೋಟಿ ದೇವತೆಗಳು ನಿತ್ಯವೂ ಭಜಿಸುವ ಮುಕ್ಕಣ್ಣನಾದ ಪರಮೇಶ್ವರನನ್ನು ಕುರಿತು ತ್ಯಾಗರಾಜರಾದಿಯಾಗಿ ಮುತ್ತಯ್ಯ ಭಾಗವತರು, ಜಯಚಾಮರಾಜೇಂದ್ರ ಒಡೆಯರ್, ಮೈಸೂರು ವಾಸುದೇವಾಚಾರ್ಯ, ಪಾಪನಾಶಂ ಶಿವನ್ ಮುಂತಾದ ವಾಗ್ಗೇಯಕಾರರುಗಳೆಲ್ಲಾ ತಮ್ಮ ಶಕ್ತ್ಯಾನುಸಾರವಾಗಿ ತಾವು ರಚಿಸಿದ ಕೃತಿಗಳ ಮೂಲಕ ಹಾಡಿಹೊಗಳಿದರೂ, ದೀಕ್ಷಿತರ ಕೃತಿಗಳು ಈ ಎಲ್ಲಾ ಕೃತಿಕಾರರ ಕೃತಿಗಳಿಗಿಂತ ವಿಭಿನ್ನವಾಗಿಯೂ ವಿಶಿಷ್ಟವಾಗಿಯೂ ನಿಲ್ಲುವ ಸಾಧ್ಯತೆಯನ್ನು ಹೊಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಬಹಳ ವಿಪರ್‍ಯಾಸದ ಸಂಗತಿಯೆಂದರೆ ಇಂದು ನಾವು ಕಚೇರಿಗಳಲ್ಲಿ ದೀಕ್ಷಿತರ ಶಿವಪರ ಕೃತಿಗಳನ್ನು ಕೇಳುವುದು ವಿರಳವಾಗಿದೆ. ಕೃತಿಗಳು ಕ್ಲಿಷ್ಟವೆಂದೋ ಅಥವಾ ಇನ್ಯಾವುದೋ ಕಾರಣಕ್ಕಾಗಿ ದೀಕ್ಷಿತರ ಶಿವನ ಕುರಿತ ಕೃತಿಗಳು ತೆರೆಮರೆಗೆ ಸೇರುತ್ತಿವೆ. ಈ ಬಗ್ಗೆ ಇನ್ನಾದರೂ ಯುವಕಲಾವಿದರು ಇಂಥಹ ಅಪರೂಪದ ಕೃತಿಗಳ ಕಡೆಗೆ ಗಮನಹರಿಸಿ, ಕಚೇರಿಗಳಲ್ಲಿ ಪ್ರಸ್ತುತ ಪಡಿಸಿದರೆ ದೀಕ್ಷಿತರ ಶ್ರಮ ಸಾರ್ಥಕವೆಂದೆನಿಸುತ್ತದೆ.
|| ಶಿವಾರ್ಪಣಮಸ್ತು||
ಆಧಾರ ಗ್ರಂಥಗಳು : ಮುತ್ತುಸ್ವಾಮಿ ದೀಕ್ಷಿತರ ಸಾಹಿತ್ಯಮಂಜರಿ – ವಿದ್ವಾನ್ ಮತ್ತೂರು ಶಿವಶಂಕರ ಮೂರ್ತಿ – ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು
ಕರ್ನಾಟಕ ಸಂಗೀತ ಪಾರಿಭಾಷಿಕ ಶಬ್ದಕೋಶ ಭಾಗ ೧,೨ – ಡಾ ವಿ ಎಸ್ ಸಂಪತ್ಕುಮಾರಾಚಾರ್ಯ – ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ
ಕರ್ನಾಟಕ ಸಂಗೀತಕ್ಕೆ ಶ್ರೀಜಯಚಾಮರಾಜೇಂದ್ರ ಒಡೆಯರ ಕೊಡುಗೆ – ಡಾ ಸುಕನ್ಯಾ ಪ್ರಭಾಕರ್ – ಡಿ ವಿ ಕೆ ಮೂರ್ತಿ ಪ್ರಕಾಶನ
(ಮುಗಿಯಿತು)
ಶ್ರೀ ಮುತ್ತುಸ್ವಾಮಿ ದೀಕ್ಷಿತರು ಕಂಡ ಕೈಲಾಸನಾಥ ಪರಮೇಶ್ವರ: ಭಾಗ-1
– ವಿಶ್ವನಾಥ, ಪಂಜಿನಮೊಗರು.
ದೀಕ್ಷಿತರ ಕ್ರತಿಗಳ ಬಗ್ಗೆ ,ರಾಗ, ತಾಳ,ಗಳ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದೀರಿ .ಟಿ.ಯಮ್.ಕೃಷ್ಣ ಅವರ ,ಗಾಯನ ಅಮೋಘ ವಾಗಿತ್ತು.