ಕಮ್ಮಕ್ಕಿ ಮನೆಯಲ್ಲೊಂದು “ಇಲಿಯಜ್ಞ”
ಮತ್ತೆ ನನ್ನ ಬಾಲ್ಯದ ನೆನಪುಗಳು ಜಾತ್ರೆ ತೇರಿನಂತೆ ಮೆರವಣಿಗೆ ಹೊರಡುತ್ತಾ ಇದ್ದಾವೆ. ನನಗೆ ಆಗ 7 – 8 ವರ್ಷ ಇದ್ದಿರಬೇಕು. ಮನೆಯಲ್ಲಿ ಒಂದು ಮುಂಗುಸಿ ಸಾಕಿದ್ದೆವು. ಗುಡ್ಡದಲ್ಲಿ ಎಮ್ಮೆ ಮೇಯಿಸುವುದಕ್ಕೆ ಹೋದಾಗ, ಗಾಯಗೊಂಡಿದ್ದ ಮುಂಗುಸಿ ಮರಿಯೊಂದು ಪೊದೆಯಲ್ಲಿ ನರಳುತ್ತಾ ಮಲಗಿತ್ತು. ಕರುಣೆ ಉಕ್ಕಿ- ಅದನ್ನು ಮನೆಗೆ ತಂದು- ಶ್ರುಶ್ರೂಶೆ ಮಾಡಿ- ಸಾಕಿ, “ಕಿಟ್ಟಿ” ಹೇಳಿ ಹೆಸರಿಟ್ಟಾಗ ಅದು ನಮ್ಮ ಮನೆಯ ಸದಸ್ಯನೇ ಆಗಿಹೋಯಿತು. ಭುಜ ಹತ್ತಿ ಕೂರುತ್ತಿತ್ತು… ಕೂಳಿತುಕೊಂಡಿದ್ದಾಗ ಬಂದು ಮಡಿಲಲ್ಲಿ ಮಲಗುತ್ತಿತ್ತು….. ಅಮ್ಮನಿಂದ ಪಾಠ ಕಲಿಯದ ಕಾರಣವಿರಬೇಕು- ಅದಕ್ಕೆ ಬೇಟೆಯಾಡಲು ಬರುತ್ತಿರಲಿಲ್ಲ. ನಾವೇ ಜಿರಳೆ, ಇಲಿ, ಕಪ್ಪೆ ಇತ್ಯಾದಿ ಆಹಾರ ಒದಗಿಸಬೇಕಾಗಿತ್ತು ! ಬಿಂದಿಗೆ ತೆಗೆದುಕೊಂಡು ನೀರಿಗೆಂದು ತೋಟದಲ್ಲಿದ್ದ ಬಾವಿ ಕಡೆಗೆ ನಾವು ಹೊರಟರೆ, ಕಪ್ಪೆ ಮೇಲಿನ ಆಸೆಗಾಗಿಯೇ ಇರಬೇಕು- ಕಿಟ್ಟಿ ನಮ್ಮನ್ನು ಹಿಂಬಾಲಿಸುತ್ತಿತ್ತು. ನಾವೇ ದಕ್ಕಿಸಿ ಕೊಟ್ಟ ಬೇಟೆಯನ್ನು ಅದು ತಿನ್ನುವಾಗ ನಾವು ನೋಡುತ್ತಿದ್ದರೆ ಅದಕ್ಕೆ ಭಯಂಕರ ಕೋಪ ! ಬಂದು ನಮ್ಮನ್ನು ಪರಚದೆ ಬಿಡುತ್ತಿರಲಿಲ್ಲ….. ! ಅರೆ ಸತ್ತ ಬೇಟೆ ಹೇಗಿದ್ದರೂ ಓಡುವುದಿಲ್ಲ ಎಂಬ ಭರವಸೆ ಕಿಟ್ಟಿಗೆ ! ನಾವು ಮಕ್ಕಳು ಕುತೂಹಲಕ್ಕೆ ನೋಡುವುದಕ್ಕೆ ಅಂತ ಹೋಗಿ- ಕಿಟ್ಟಿಯಿಂದ ಪರಚಿಸಿಕೊಂಡ ನೆನಪಿದೆ. ಉಳಿದ ಸಮಯದಲ್ಲಿ ಪಾಪದ ಪ್ರಾಣಿಯಂತೆ ಇರುತ್ತಿದ್ದ ಕಿಟ್ಟಿ, ಅದರ ಭೋಜನದ ಸಮಯದಲ್ಲಿ ಮಾತ್ರ ಅದ್ಯಾಕೆ ಹಾಗೆ ಆಡಿಗೊಂಡಿತ್ತೋ ?
ಕಿಟ್ಟಿಗಾಗಿ ಇಲಿ ಬೇಟೆ ನಮಗೆ ಅನಿವಾರ್ಯವಾಗಿತ್ತಲ್ಲವೇ ? ಅಲ್ಲದ್ದೆ ಮನೆ ಅಟ್ಟದಲ್ಲಿ ಇಲಿಗಳ ದೊಡ್ಡ ಸಂಸಾರವೇ ಬೀಡಾರ ಹೂಡಿದ್ದವು. ರಾತ್ರಿಯಾಗುತ್ತಿದ್ದಂತೆ ಅಟ್ಟದಲ್ಲಿ ಇಲಿಗಳ ಕೊಕ್ಕೊ-ಕಬ್ಬಡ್ಡಿ ಆಟ ಶುರುವಾಗಿಬಿಡುತ್ತಿತ್ತು. ಸದ್ಯ …… ಅಟ್ಟಕ್ಕೆ ಭದ್ರವಾಗಿ ಮತ್ತು ಶಿಸ್ತಾಗಿ ಮರದ ಹಲಗೆಗಳನ್ನು ಹಾಸಿದ್ದ ಪರಿಣಾಮ- ಮಲಗಿದ್ದ ನಮ್ಮ ಮತ್ತು ಆಟೋಟದಲ್ಲಿ ನಿರತವಾಗಿದ್ದ ಇಲಿಗಳ ಮುಖತಃ ಬೇಟಿ ಇರುತ್ತಿರಲಿಲ್ಲ ! “ಬೇಟೆಯಾಡುವುದಕ್ಕೆ ಕಲಿಯಲಿ” ಎಂದು ಅಟ್ಟದಲ್ಲಿ ಕಿಟ್ಟಿಯನ್ನು ಬಿಡವುದಕ್ಕೆ ನಮಗೇ ಧೈರ್ಯ ಇರಲಿಲ್ಲ !! ಇಲಿಗಳೇ ಕಿಟ್ಟಿನ ಬೇಟೆಯಾಡಿದರೇ ? – ಎನ್ನುವ ಭಯ ! ಇಲಿಗತ್ತರಿಯ ಹೂಡಿಟ್ಟರೆ, ಇಲಿಗಳು ಸುಮ್ಮನೆ ಅದರಲ್ಲಿ ಬೀಳುತ್ತವಾ ?
ಪಕ್ಕದ ಬಸವಾನಿ ಪೇಟೆಯ ಹೋಟೆಲಿನಿಂದ ಅಪ್ಪ ನಾಲ್ಕೇ ನಾಲ್ಕು ಗೋಳಿಬಜೆಯ ಕಟ್ಟಿಸಿಗೊಂಡು ಬರುತ್ತಿದ್ದರು. ಅದನ್ನು ತಂದು ಹಲಗಣೆಯ ಮೂಲೆಯಲ್ಲಿ ಪೇಪರ್ ನಲ್ಲಿ ಸುತ್ತಿ ಇಟ್ಟರೆ- ಮನೆಯಿಡೀ ಗೋಳಿಬಜೆಯ ಘಮಘಮ ಪರಿಮಳ !!! ನಮ್ಮ ಬಾಯಲ್ಲಿ ನೀರು !!! ನನಗೆ- ನನ್ನ ಚಿಕ್ಕ ಅಕ್ಕನಿಗೆ ಮನಸ್ಸೆಲ್ಲ ಗೋಳಿಬಜೆಯ ಮೇಲೆ ! ಆದ್ರೆ ದೊಡ್ಡವರು ಕೊಡಲೊಲ್ಲರು ! ಆ ಗೋಳಿಬಜೆಗೆ ಅಪ್ಪನ ಹದ್ದಿನ ಕಣ್ಣಿನ ರಕ್ಷಣೆ ಬೇರೆ ! “ಕೆಳ ಜಾತಿಯವನ ಹೋಟೆಲ್ನಲ್ಲಿ ಮಾಡಿದ್ದು ಕಣ್ರೋ. ನಿಮಗೆ ಕೊಡೋಹಾಗಿಲ್ಲ. ಅದು ಇಲಿಗೆ ತಿನ್ನೊದಕ್ಕೆ ತಂದದ್ದು ” ಎಂಬದು ಅಮ್ಮನ ಸಮಜಾಯಿಸಿ. ಅದು ನಮ್ಮ ಎಳೆ ಮನಸ್ಸಿಗೆ ಒಪ್ಪುತ್ತದಾ ? ದೊಡ್ಡವರ ಮಾತನ್ನು ಕೇಳಿ, ಇಲಿಗಳ ಅದೃಷ್ಟದ ಬಗ್ಗೆ… ಅದೃಷ್ಟವಲ್ಲದೆ ಇನ್ನೇನು ? ಸಾಯುವ ಮೊದಲು ರುಚಿಯಾದ ಗೋಳಿಬಜೆ ತಿಂದು ಸಂತೋಷಿಸುತ್ತ ಸಾಯುವ ಭಾಗ್ಯ ಆ ಇಲಿಗಳಿಗಲ್ಲದೆ ಮತ್ತ್ಯಾರಿಗೆ ಸಿಕ್ಕೀತು ?… ನಮ್ಮನಮ್ಮಲ್ಲೇ ಚರ್ಚೆ ಆಗುತ್ತಿತ್ತು. ಮಾರನೆ ದಿನ ನಮ್ಮ ಕಿಟ್ಟಿಗೆ ಮೃಷ್ಟಾನ್ನ(ಇಲಿ) ಭೋಜನ ಗ್ಯಾರೆಂಟಿ !
ಇಲಿಗಳು ಮಾಡಿಕೊಂಡಿದ್ದ ಉಪದ್ರ ಒಂದಾ ? ಎರಡಾ ? ಅದೇ ವರ್ಷ ಹೊಲಿಸಿದ್ದ – ಅಥಿತಿಗಳಿಗೆ ತೆಗೆದಿರಿಸಿದ್ದ- ಹೊಸ ಹತ್ತಿ ಹಾಸಿಗೆಯನ್ನು ಒಳಗೊಳಗೇ ತಿಂದು -ಹರಿದುಹಾಕಿ, ನೆಂಟರೆದುರು ಅವಮಾನ ಆದಾಗ, ಅಮ್ಮನಿಂದ ಇಲಿಗಳಿಗೆ ಸಹಸ್ರ ನಾಮಾರ್ಚನೆ !, ಅಕ್ಕಿ-ಅವಲಕ್ಕಿ ಮಾಡಿಸುವುದಕ್ಕೆಂದು ಮಿಲ್ಲಿ0ಗೆ ತೆಗೆದುಕೊಂಡು ಹೋಗಲು – ಪಣಥದಿಂದ ಗೋಣಿ ಚೀಲಕ್ಕೆ ತುಂಬಿಸಿ ಇಟ್ಟಿದ್ದ ಭತ್ತದ ಚೀಲ ತೂತು ಮಾಡಿದಾಗ ಅಪ್ಪನ ಕೈಯಿ೦ದ (ಕೈಯಿಂದ ? ಅಲ್ಲ ಬಾಯಿಯಿಂದ) ಇಲಿಗೆ ಸಿಕ್ಕ ಬೈಗುಳು ! ಅಕ್ಕನ ಹೊಸ ಯುನಿಫಾರ್ಮ್ ಜಗಿದ ಕರ್ಮಕ್ಕೆ ಅತ್ತು- ಶಾಪ ಹಾಕಿ, ರಂಪ ಮಾಡಿದ ಅಕ್ಕ ! ತನ್ನ ಸ್ವಯಂವೈದ್ಯ ಆಯುರ್ವೇದ ಪುಸ್ತಕವನ್ನು ಮೆಂದ ತಪ್ಪಿಗೆ “ಇಲಿಯಜ್ಞ” (ಜನಮೇಜಯ ರಾಯನ ಸರ್ಪಯಜ್ಞದ ಹಾಗೆ) ಕೈಗೊಂಡು, ವಿವಿಧ ಉಪಾಯದಿ0ದ- ನಿರಂತರ ಒಂದು ತಿಂಗಳು- ಇಲಿಗತ್ತರಿಯಲ್ಲಿ ಇಲಿ ಸಾಯಿಸಿ, ನಮ್ಮ ಕಿಟ್ಟಿಗೆ ಸುಗ್ರಾಸ ಭೋಜನ ಒದಗಿಸಿದ ಅಣ್ಣ !
ಈಗ ಅನ್ನಿಸುತ್ತೆ – ಅಷ್ಟೆಲ್ಲ ಇಲಿಗಳು ಎಲ್ಲಿದ್ದವು ? ಊರಿನ ಎಲ್ಲ ಇಲಿಗಳುದೆ ಯಜ್ಞ ನೋಡುವುದಕ್ಕೆಂದು ನಮ್ಮ ಮನೆಗೆ ಬಂದುಕೊಂಡಿದ್ದಿರಬಹುದಾ ? ಅಣ್ಣನ ಇಲಿಯಜ್ಞ ನಮ್ಮ ಊರಲ್ಲಿ ಎಷ್ಟು ” ವಲ್ಡ್ ಫೇಮಸ್ !!! ” ಆಗಿಬಿಟ್ಟಿತ್ತು ಗೊತ್ತಿದ್ಯಾ ? ಕುವೆಂಪುರವರ “ಬೊಮ್ಮನಹಳ್ಳಿಯ ಕಿಂದರಿ ಜೋಗಿ”ಗೆ ಸೈಡ್ ಹೋಡಿಯೋ ಹಾಗಿತ್ತು – ಕಮ್ಮಕ್ಕಿ ಮನೆಯ “ಇಲಿಯಜ್ಞ” ದ ಕಥೆ !! ಅಹಾ……… ಬರೆದರೆ ಅದೇ ಒಂದು ಲಲಿತಪ್ರಬಂಧಕ್ಕಾಗುವಷ್ಟು ವಿಷಯ ಇದೆ !
ಇಂತಹ ನಮ್ಮ ಮನೆಯ ಕಿಟ್ಟಿ – ಒಂದಿನ ದನದ ಕೊಟ್ಟಿಗೆಯೆಡೆಗೆ ಹೊರಟಿದ್ದ ಅಕ್ಕನ ಹಿಂದೆಯೇ ಹೋಗುತ್ತಿತ್ತು. ಅದೆಲ್ಲಿತ್ತೋ ಪಕ್ಕದ ಮನೆಯ ನಾಯಿ – ಓಡಿ ಬಂದು, ಕಿಟ್ಟಿಯ ಕುತ್ತಿಗೆಗೆ ಬಾಯಿ ಹಾಕಿ ಬಿಟ್ಟಿತು….. ಕ್ಷಣ ಮಾತ್ರಲಿ ಕಿಟ್ಟಿಗೆ ಭೂಮಿಯ ಋಣ ತೀರಿತ್ತು ….. ಮನೆಯಲ್ಲಿ ಅಂದು ಸ್ಮಶಾನ ಮೌನ !!! ಮೂರು ವರ್ಷದಿಂದ ಜೊತೆಗಿದ್ದ ಜೀವವೊಂದು -ಅರೆ ಕ್ಷಣದಲ್ಲಿ ಕಣ್ಣೆದುರೆ ದುರ್ಮರಣಕ್ಕೀಡಾದ್ದು ನನ್ನ ಬಾಲ್ಯ ಒಂದು ಕಹಿ ಘಟನೆ…..
ಕಿಟ್ಟಿ ಸತ್ತ ಮತ್ತೆ, ಅಣ್ಣ “ಇಲಿಯಜ್ಞ”ವನ್ನು ನಿಲ್ಲಿಸಿ ಬಿಟ್ಟ !! “ಯಾರಿಗಾಗಿ, ಯಾವ ಉದ್ದೇಶಕ್ಕಾಗಿ, ಯಾರ ಆಹಾರಕ್ಕಾಗಿ ಇಲಿಗಳ ಬೇಟೆಯಾಡುತ್ತಿದ್ದೆನೋ- ಆ ಕಿಟ್ಟಿಯೇ ಇಲ್ಲವೆಂದ ಮೇಲೆ…. ಮತ್ತೆ ನಾನು ಯಾರಿಗಾಗಿ ಈ ಇಲಿಯಜ್ಞವನ್ನು ಮುಂದುವರೆಸಲಿ ? ನನ್ನ ಇಲಿಯಜ್ಞಕ್ಕೆ ಧಿಕ್ಕಾರವಿರಲಿ….. “ ಎಂದು ಶಪಥ ತೊಟ್ಟ ನನ್ನಣ್ಣ !!!!
ತನ್ನ ಕಾರ್ಯದಿಂದ ವಿಮುಖನಾದ ಅಣ್ಣನ ಕ್ರಮವನ್ನು ಇಲಿಗಳು (ಚಪ್ಪಾಳೆ ತಟ್ಟಿ- ಅಲ್ಲ ಅಟ್ಟದ್ದ ಹಲಗೆಗಳ ಮೇಲೆ ಕುಣಿದಾಡಿ) ಸ್ವಾಗತಿಸಿದವು. ಅವಕ್ಕೂ ಅದೇ ಬೇಕಾಗಿತ್ತು. ಅವು ತಮ್ಮದ್ದೇ ಸ್ವತಂತ್ರ ರಾಜ್ಯಭಾರ ಶುರುಮಾಡಿದವು. ಪೂರ್ಣ ಅಟ್ಟ ಅವುಗಳದ್ದೇ ಸಾಮ್ರಾಜ್ಯವಾಗಿ ಹೋಯಿತು. “ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಹರಿದು ಹಂಚಿ ಹೋದ ಹಿಂದೂ ಸಾಮಂತ ರಾಜರುಗಳಂತೆ ….” ಓಹ್ ವಿಷಯ ಎಲ್ಲೆಲ್ಲಿಯೋ ಹೋಯಿತು…..
ಅಣ್ಣನ ವಿರೋಧವಿಲ್ಲದ ಮೇಲೆ ಆ ಇಲಿಗಳಿಗೆ ಹೇಳೋರು- ಕೇಳೋರು ಇಲ್ಲದಂತಾಗಿ, ರಾಜಾರೋಷವಾಗಿ ತಿರುಗುವ ಅವುಗಳ ಪರಿ ನೀವು ನೋಡಬೇಕಿತ್ತು !…. ಇಲಿಗಳ ಉಪದ್ರ ತಡೆಯಲಾರದೆ, ಅವುಗಳಿಗೊಂದು ಗತಿ ಕಾಣಿಸಲೇ ಬೇಕಾದ ಅನಿವಾರ್ಯತೆ ! ಬೇರೆ ದಾರಿ ಕಾಣದೆ ಅಜ್ಜನ ಮನೆಯಿಂದ ಬೆಕ್ಕಿನ ಮರಿ ತರುವುದೆಂದು ಮನೆಯ ಸರ್ವ ಸದಸ್ಯರ ಸಮ್ಮುಖದಲ್ಲಿ ನಿರ್ಧರಿಸಲಾಯ್ತು !
ಪುಟ್ಟ ಬೆಕ್ಕಿನ ಮರಿಯನ್ನು ಚೀಲದಲ್ಲಿ ಇಟ್ಟುಕೊಂಡು, ಬಸ್ಸಿಲಿ ತಂದು, ದಷ್ಟಪುಷ್ಟವಾಗಿ ಬೆಳೆಸಿದ್ದೇ ಬಂತು ! ಬೆಕ್ಕು ಇಲಿಗಳನ್ನ ಹಿಡಿಯಲಿಲ್ಲ, ಒಲೆದಂಡೆಯಲ್ಲಿ ಬೆಚ್ಚಗೆ ಮಲಗಿ, ಆ ಬೆಕ್ಕು ಹಾಯಾಗಿ ನಿದ್ದೆ ಮಾಡಿಕೊಂಡಿತ್ತು ! ಹಸಿವಾದಾಗ ಕದ್ದು ಹಾಲು ಕುಡಿಯುತ್ತಿತ್ತು ! ಜರಳೆಯನ್ನು ನೋಡಿದರೂ- ಹೆದರಿ ದೂರ ಸರಿದು ನಿಲ್ಲುತ್ತಿತ್ತು ! ನಾವೇ ಜರಳೆ ಬಡಿದು ಎದುರು ಹಾಕಿದರೆ, ಕಚ್ಚಿಕೊಂಡು ಓಡಿಹೋಗುತ್ತಿತ್ತು ! ಹಾಲು- ಅನ್ನ ತಿಂದು ಹಾಯಾಗಿದ್ದದ್ದು ಸಾಲದೆ, ಆಗಾಗ ಹರಣೆ-ಓತಿಕ್ಯಾತವನ್ನು ಎಲ್ಲಿಂದಲೋ ತಂದು – ಅರ್ಧ ತಿಂದು – ಉಳಿದರ್ಧವನ್ನು ಅಟ್ಟದಲ್ಲಿ – ಹೆಂಚಿನ ಮರೆಯಲ್ಲಿ ಅಥವಾ ಇನ್ನೆಲ್ಲೋ ಇಟ್ಟು ಬಿಡುತ್ತಿತ್ತು ! ಮರುದಿನ ಮನೆಯಿಡೀ ಅದರ ವಾಸನೆ ! ಆ ಅರೆ ಕೊಳೆತ ಶವ ಹುಡುಕಿ ಎಸೆವ ಕೆಲಸ ಬೇರೆ ಅಪ್ಪನ ಹೆಗಲೇರಿತು ! ಬೆಕ್ಕಿನಿಂದ ಆದ ಉಪಕಾರಕ್ಕಿಂತ ಅಪಕಾರವೇ ಜಾಸ್ತಿಯಾದಾಗ- ಅಪ್ಪ ಬೆಕ್ಕನ್ನು ಒತ್ತಾಯ ಪೂರ್ವಕವಾಗಿ, ಅಜ್ಜನ ಮನೆಗೆ ವಾಪಾಸ್ ಬಿಟ್ಟು ಬಂದದ್ದು ಇನ್ನೊಂದು ಕತೆ !
ಪಾಪ ನೀವು…… ಸಿಕ್ಕಿದ್ದೀರಿ ಹೇಳಿ ಪೂರ್ತಿ ತಲೆ ಒಮ್ಮೇಲೆ ತಿನ್ನಬಾರದಲ್ವಾ ? (ಸ್ವಲ್ಪ ಸ್ವಲ್ಪವಾಗಿ ತಿನ್ನಬಹುದಾ ಕೇಳ್ಬೇಡಿ) ಅದಕ್ಕೆ ಇಲ್ಲಿಗೆ ನಿಲ್ಲಿಸ್ತೀನಿ ಅಯ್ತಾ…..
– ಸುರೇಖಾ ಭೀಮಗುಳಿ
wow…nice story of rats..