ಹಲಸಿನ ಕಾಯಿಯ ಪಲ್ಯ ವೈವಿಧ್ಯ…
ಮಾರ್ಚ್ ತಿಂಗಳು ಬಂದರೆ ಆಯಿತು,ಸಭೆ ಸಮಾರಂಭಗಳು,ಊಟದ ಹೊಟೇಲುಗಳಲ್ಲಿ ಎಳತ್ತು ಹಸಲಿನ ಕಾಯಿದ್ದೇ ಪಲ್ಯ,ಸಾಂಬಾರು.ಹಳ್ಳಿ ಜನರು ಸಣ್ಣ ಕಾಯಿಯನ್ನು ಮರದಿಂದ ಕಿತ್ತು ಪೇಟೆಗೆ ತಂದು ಮಾರಾಟ ಮಾಡಿ ಲಾಭ ಪಡೆಯುತ್ತಾರೆ. ಬೇರೆಯವರ ಜಾಗದಲ್ಲಿರುವ ಅಥವಾ ಸರಕಾರಿ ಜಾಗದಲ್ಲಿ,ರಸ್ತೆ ಬದಿಯಲ್ಲಿ ಬೆಳೆದು ನಿಂತ ಹಲಸಿನ ಮರದಿಂದ ಎಳೆ ಕಾಯಿಗಳನ್ನು ಕಿತ್ತು ಮಾರಾಟಕ್ಕೆ ತರುತ್ತಾರೆ.ತನ್ನ ಜಾಗದ ಮರದಲ್ಲಿದ್ದರೂ ಅದನ್ನು ಮನೆಯಲ್ಲಿ ಹಪ್ಪಳಕ್ಕೋ, ಹಣ್ಣಾಗುವುದಕ್ಕೋ ಉಳಿಸಿ ಬೇರೆಯವರ ಮರದಿಂದಲೇ ಕಿತ್ತು ಮಾರಾಟ ಮಾಡುವವರು ಜಾಸ್ತಿ ಜನ.ಇನ್ನು ಕೆಲವರು ಹಪ್ಪಳ,ಇತ್ಯಾದಿಗೆಂದು ಮಾಡಿಕೊಳ್ಳದೆ ಬೆಳೆದ ನಂತರ ಹಪ್ಪಳ ಮುಂತಾದ ಕರಿದ ಪದಾರ್ಥಗಳನ್ನು ತಯಾರು ಮಾಡುವವರಿಗೆ ಮಾರಾಟ ಮಾಡಲಿಕ್ಕೆ ಇಡುತ್ತಾರೆ.ಅದೇನೆ ಇರಲಿ ಒಟ್ಟಿನಲ್ಲಿ ಹಲಸಿನ ಕಾಯಿಯ ಪಲ್ಯ, ಗೊಜ್ಜಿಗೆ ಈ ಒಂದೆರಡು ತಿಂಗಳು ಬಾರೀ ಬೇಡಿಕೆ ಮಾತ್ರವಲ್ಲ, ಬಾಯಿಗೂ ರುಚಿ.ಮೇ ಜೂನ್ನಲ್ಲಿ ಯಾವ ಸಭೆ, ಹೋಟೆಲ್ಗೂ ಬೇಡ.
ಹಲಸು ಎಳೆಯದಾಗಿರುವಾಗಲೇ ಪಲ್ಯ ಸಾಂಬಾರಿಗೆ ತುಂಬಾ ರುಚಿಯಾಗುವುದು. ಅದನ್ನು ತುಂಬಾ ಶೃದ್ದೆಯಿಂದ ಮಾಡಿದರೆನೆ ಅದರದ್ದೇ ಆದ ರುಚಿ ಬರುತ್ತದೆ ವಿನಹಃ ಒಟ್ಟಾರೆಯಾಗಿ ಬೇಯಿಸಿ, ಸಾಂಬಾರು ಬೆರೆಸಿ ಕೆಂಪು ಮಾಡಿದರೆ ಅದು ಬಾಯಿಗೆ ಇಟ್ಟು ರುಚಿ ನೋಡಲಿಕ್ಕೂ ಬೇಡ. ಸಣ್ಣಗೆ ಹೋಳು ಮಾಡಿ ಬೇಯಿಸಿ ಅದನ್ನು ಇಡಿ ಕಡಲೆಯೊಂದಿಗೆ ಮಿಶ್ರಣ ಮಾಡಿ ಪಲ್ಯ ಮಾಡುತ್ತಾರೆ.ಸಭೆಗಳಲ್ಲಿ ಇದೇ ಜಾಸ್ತಿ, ಇನ್ನೊಂದು ಬಗೆಯದು ತೊಂಡೆಕಾಯಿ ಮತ್ತು ಕಡಲೆ.ಮನೆಯಲ್ಲಿ ಮಾಡುವಾಗ ಬಗೆ ಬಗೆಯಲ್ಲಿ ಮಾಡಿ ರುಚಿ ಸವಿಯಬಹುದು.
.
ಸಣ್ಣಗೆ ಹೋಳು ಮಾಡಿ ಚೆನ್ನಾಗಿ ಬೇಯಿಸಬೇಕು,ಬೆಂದು ತುಂಬಾ ಮೆತ್ತಗಾಗಬೇಕು.ನೀರಲ್ಲಿಯೂ ಬೇಯಿಸಬಹುದು,ಉಗಿಯಲ್ಲೂ ಬೇಯಿಸಬಹುದು.ಹೀಗೆ ಬೆಂದ ಹೋಳನ್ನು ಕಡೆಯುವ ಕಲ್ಲಿನ ಒರಳಲ್ಲಿ ಸುರಿದು ಉಪ್ಪು ಮತ್ತು ಮನೆಯಲ್ಲಿ ತಯಾರಿಸಿದ ಖಾರ ಸಾಂಬಾರು ಪುಡಿಯನ್ನು ಹಾಕಿ ಚೆನ್ನಾಗಿ ಕುಟ್ಟಬೇಕು.ಅದು ಪೂರ್ತಿ ನುಜ್ಜು ಗುಜಾಗುತ್ತದೆ.ಹೀಗಾದ ನಂತರ ಒಂದು ಅಗಲ ಪಾತ್ರೆಯಲ್ಲಿ ಒಗ್ಗರಣೆ ತಯಾರು ಮಾಡಬೇಕು. ಬೆಳ್ಳುಳ್ಳಿ (ಕೆಲವರಿಗೆ ಆಗದು),ಬೇವಿನೆಲೆ ಚೂರುಗಳು, ಒಣಮೆಣಸು ಎಲ್ಲ ಎಣ್ಣೆಗೆ ಹಾಕಿ ಕಾದ ನಂತರ ಸಾಸಿವೆ ಹಾಕಿ ಅದು ಸಿಡಿದಕೂಡಲೆ ಈ ಹದಮಾಡಿಟ್ಟದ್ದನ್ನು ಸುರಿದು ಚೆನ್ನಾಗಿ ಮಗುಚಿ ಮೂರು ನಿಮಿಷಗಳಲ್ಲಿಯೆ ಒಲೆಯಿಂದ ಕೆಳಗಿಳಿಸಿದರೆ ಗುಜ್ಜೆ( ಹಲಸು)ಯ ಪಲ್ಯ ರೆಡಿ.ಅನ್ನಕ್ಕೆ ಸಾರು ಇರಲಿ ಬಿಡಲಿ, ಮಜ್ಜಿಗೆ ಇದ್ದರೆನೆ ಸಾಕು ಈ ಪಲ್ಯದಲ್ಲಿ ಎಂದಿನದಕ್ಕಿಂತ ಎರಡು ತುತ್ತು ಜಾಸ್ತಿನೆ ಊಟಮಾಡಬಹುದು ಹೊರತು ಅನ್ನ ಇಷ್ಟೇ ಸಾಕು ಅನ್ನುವ ಹಾಗೆನೆ ಇಲ್ಲ.ಎಂಥ ದೊಡ್ಡ ಮರ್ಯಾದೆ,ನಾಚಿಗೆ ಸ್ವಭಾವದವಳೂ/ನೂ ಕೂಡಾ ಮತ್ತೊಮ್ಮೆ ಅನ್ನ ಕೇಳುವಂತೆ ಮಾಡುತ್ತದೆ ಈ ಪಲ್ಯ! ಒಮ್ಮೆ ತಯಾರುಮಾಡಿ ಅದರಲ್ಲಿ ಊಟ ಮಾಡಿರಿ.
.
ಹಲಸಿನ ಕಾಯಿ ಸಾಂಬಾರು ಕೂಡಾ ಮಾಡುವ ರೀತಿ ಮಾಡಿದರೆ ಬಹಳ ರುಚಿ.ತೆಂಗಿನಕಾಯಿ ಕಡಿಮೆ ಬಳಸಿದರೆ ಸಾಂಬಾರು ಚೆನ್ನಾಗಿ ಆಗುವುದಿಲ್ಲ.ಬಣ್ಣ ಕಾಣುವಷ್ಟಾದರೂ ಅರಿಶಿಣವನ್ನು ಹಾಕಲೇಬೇಕು.ಹೋಳುಗಳನ್ನು ಬೇಯಿಸಿದ ನಂತರ ಕಡೆದು/ಅರೆದು ತಯಾರು ಮಾಡಿದ ಸಾಂಬಾರು ಗಸಿಯನ್ನು ಅದಕ್ಕೆ ಹಾಕಬೇಕು,ಆ ಪಾತ್ರೆಯನ್ನು ಸ್ವಲ್ಪ ನೀರಿನಲ್ಲಿ ತೊಳೆದು ಆ ನೀರನ್ನು ಕೂಡಾ ಹಾಕಬೇಕು.ಹೆಚ್ಚು ತೆಳ್ಳಗಾಗಬಾರದು, ಹದ ದಪ್ಪಕ್ಕೆ ಇರಬೇಕು.ಇದಕ್ಕೆ ಒಗ್ಗರಣೆ ಹಾಕಿದರೆ ಅದರ ರುಚಿಯನ್ನು ಊಟದಲ್ಲಿ ಬಳಸಿಯೇ ತಿಳಿಯಬೇಕು.ಸೂಪರ್ ಆಗಿರುತ್ತದೆ.
.
ಇನ್ನು ಬಸಳೆ ಸೊಪ್ಪಿನೊಂದಿಗೆ ಇದನ್ನು ಬೆರೆಸಿ ಮಾಡಿದರೆ ಅಬ್ಬಾ ಅದರ ರುಚಿಯೆ !! ಬಸಳೆ ಸೊಪ್ಪು ಮತ್ತದರ ದಂಟು ಒಟ್ಟಿಗೆನೆ ಬೆರೆಸಬೇಕು.ಚೆನ್ನಾಗಿ ಬೆಳೆದು ದಪ್ಪವಾಗಿರುವ ಬಸಳೆ ಮಾತ್ರ ತುಂಬಾ ರುಚಿ ಮತ್ತು ಹೊಂದಾಣಿಕೆಯಾಗುವುದು ಕೂಡಾ.ಇಲ್ಲಿ ಬಸಳೆಯ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಗುಜ್ಜೆ(ಹಲಸಿನ ಕಾಯಿ) ಹೋಳನ್ನು ಬಳಸಬೇಕು.ಮೊದಲು ಗುಜ್ಜೆಯ ಹೋಳನ್ನು ಬೇಯುವುದಕ್ಕಿಟ್ಟು ಅದು ಅರೆ ಬೆಂದಾಗುತ್ತಿರುವಾಗ ದಂಟು ತುಂಡು ಮಾಡಿ, ಸೊಪ್ಪನ್ನು ಹೆರೆದು ರೆಡಿ ಮಾಡಿಟ್ಟ ಬಸಳೆಯನ್ನು ಅದಕ್ಕೆ ಹಾಕಿ ಬೇಯಿಸಬೇಕು.ಬಸಳೆ ದಂಟನ್ನು ಕತ್ತರಿಸುವಾಗ ಅದು ಬರೇ ಚಿಕ್ಕದಾಗಿರದೆ ತೋರುಬೆರಳಿನಷ್ಟುದ್ದವಾದರೂ ಬೇಕು.ಬೆಂದ ಮೇಲೆ ಅರೆದುದನ್ನು ಹಾಕಿ ಹದಮಾಡಿ ಎರಡು ಮೂರಿ ಕುದಿ ಬರುವ ತನಕ ಒಲೆಯ ಮೇಲಿಟ್ಟು ಕೆಳಗಿಳಿಸಿದರೆ ಅದ್ಭುತವಾದ ಸಾಂಬಾರು .
.
ಬೆಳೆದ ಹಲಸಿನ ಕಾಯಿಯ ಪಲ್ಯ/ಸಾಂಬಾರು ಕೂಡಾ ಅಷ್ಟೇ ರುಚಿಯಾಗಿರುತ್ತದೆ.ಗುಜ್ಜೆಯನ್ನು ಎರಡು ಭಾಗ ಮಾಡಿ ಅದನ್ನು ಪುನಃ ಉದ್ದಕ್ಕೆ ಕತ್ತರಿಸಿ ಆ ನಂತರ ಕಲ್ಲಂಗಡಿ ಹಣ್ಣನ್ನು ಕತ್ತರಿಸುವ ಹಾಗೆ ತುಂಡು ಮಾಡಬೇಕು. ಹಾಗೆ ಮಾಡಿದ ತುಂಡಿನ ಮೇಲ್ಮುಖದ ಗಟ್ಟಿ ಭಾಗವನ್ನು ಉದ್ದಕ್ಕೆ ಕೊಯ್ದು ಮತ್ತೆ ಹೆರೆಯುತ್ತ ತುಂಡರಿಸಬೇಕು.ಬೀಜವನ್ನು ಉದುರಿಸಿ ಮಿಕ್ಕಿದ್ದನ್ನು ಹೆರೆಯಬೇಕು.ಮುಳ್ಳಿನ ಪದರ/ಹಸಿರು ಭಾಗ ಬರುವವರೆಗು ಹೆರೆಯಬೇಕು.ಹೆರೆದಂತೆಲ್ಲ ಪಾತ್ರೆಯಲ್ಲಿಟ್ಟಿದ್ದ ತಣ್ಣೀರಿಗೆ ಹಾಕಬೇಕು. ಅದಾದ ನಂತರ ಯಥಾವತ್ತಾಗಿ ಸಾಂಬಾರು ಮಾಡುವುದು.ಇಲ್ಲಿ ಚೆನ್ನಾಗಿ ಬೇಯುವುದು ಅತೀ ಮುಖ್ಯ, ಹೀಗೆ ಅಲ್ಲದೆ ಹಲಸಿನ ಕಾಯಿ ತೊಳೆಯನ್ನು ಬಿಡಿಸಿ ಅದನ್ನೆ ಬೇಯಿಸಿಯೂ ಪಲ್ಯ ಸಾಂಬಾರು ಮಾಡಲಾಗುತ್ತದೆ.
.
ಹಲಸಿನ ಕಾಯಿ ಮುಗಿದ ನಂತರವೂ ಇದನ್ನು ಪಲ್ಯ ಮಾಡಿ ತಿನ್ನಬೇಕೆಂದುಕೊಂಡೇ ಅದರ ತೊಳೆಯನ್ನು ಉಪ್ಪಿನಲ್ಲಿ ಹಾಕಿ ಸಂಗ್ರಿಹಿಸಿಡುತ್ತಾರೆ.ಅದಕ್ಕೆ ‘ಉಪ್ಪಿನ ಸೋಳೆ’ ಎಂತಲೇ ಹೇಳುವುದು.ಸಾಮಾನ್ಯವಾಗಿ ಹಲಸಿನಲ್ಲಿ ಎರಡು ಬಗೆಯದ್ದಿವೆ.ಒಮದು ಗಟ್ಟಿ ತೊಳೆ ಇನ್ನೊಂದು ಮೆದು. ಬರ್ಕೆ, ತುಳುವೆ ಅಂತೆಲ್ಲ ತುಳುನಾಡಿನಲ್ಲಿ ಹೇಳುತ್ತಾರೆ. ಬರ್ಕೆ(ಗಟ್ಟಿ ಸೋಳೆ) ಯನ್ನೆ ಉಪ್ಪಿನ ಸೋಳೆಗೆ ಬಳಸುವುದು.ಮೆದು ಸೋಳೆಯನ್ನು ಉಪ್ಪಿನಲ್ಲಿ ಬೆರೆಸಿಟ್ಟರೆ ಅದು ಕರಗುತ್ತದೆ.ಅದಕ್ಕಾಗಿ ಆ ಜಾತಿಯ ಹಲಸನ್ನು ಉಪಯೋಗಿಸುತ್ತಿಲ್ಲ.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಇದರ ತಯಾರಿ ಜಾಸ್ತಿಯಾಗಿದ್ದು ಪರವೂರು,ಪರದೇಶಗಳಿಗೆ ಇಲ್ಲಿಂದ ಸಾಗಾಟವಾಗುತ್ತಿದೆ. ಮುಂಬೈನಲ್ಲಿರುವ ಮಂಗಳೂರು ಮೂಲದವರ ಅಂಗಡಿಯವರಲ್ಲಿ ಇದು ಸದಾ ಲಭ್ಯವಿರುತ್ತಿತ್ತು, ಆದರೆ ಈಗ ಬೆಂಗಳೂರು ಸಹಿತ ದೇಶದ ಅನೇಕ ರಾಜ್ಯಗಳಲ್ಲಿನ ಮಂಗಳೂರು ಮೂಲದವರ ಅಂಗಡಿಗಳಲ್ಲಿ ಲಭ್ಯವಾಗುತ್ತಿದೆ.
.
ಉಪ್ಪಿನ ಸೋಳೆಯ ಪಲ್ಯವೂ ಕೂಡಾ ತುಂಬಾ ರುಚಿಯಾದುದು.ಸಾಂಬಾರು, ಗಸಿ ಹಾಗೆನೆ ಉಪ್ಪುಖಾರ ಹಾಕಿ ಮಾಡುವ ಪಲ್ಯ ಮಾಡುತ್ತಾರೆ.ಇತ್ತೀಚಿನ ವರ್ಷಗಳಲ್ಲಿ ಉಪ್ಪಿನ ಸೋಳೆಯನ್ನು ಹಪ್ಪಳ-ಸಂಡಿಗೆ ಮಾಡುವುದಕ್ಕೆ ಬಳಸುತ್ತಿದ್ದಾರೆ. ಉಪ್ಪಿನ ಸೋಳೆಯ ಹಪ್ಪಳವೂ ಮನೆಗಳಲ್ಲಿ ಇದೆ.ಈ ಹಪ್ಪಳವನ್ನು ಕಾಯಿಸಿ ಊಟಮಾಡುವುದಕ್ಕೆ ತುಂಬಾ ರುಚಿಕರವಾಗುತ್ತದೆ.ಇನ್ನು ಸಂಡಿಗೆ ಕೂಡಾ ತುಂಬಾ ರುಚಿ.
.
ನಮ್ಮನೆಯಲ್ಲಿಯೂ ಈಗ ಹಲಸಿನ ಕಾಯಿ ಪಲ್ಯ,ಸಾಂಬಾರು ತುಂಬಾ ಅಪರೂಪ. ತಯಾರು ಮಾಡುವುದಕ್ಕೆ ಉದಾಸೀನ.ಅದನ್ನು ತುಂಡುಮಾಡಿ ರಿಪೇರಿ ಮಾಡುವುದಕ್ಕೇ ಎಲ್ಲರಿಗೂ ಬೇಡವೆಂದಾಗುವುದು. ಮೊನ್ನೆ ನಾನು ಬಜಗೋಳಿಯಿಂದ ಸಣ್ಣ ಹಲಸಿನ ಕಾಯಿ ತಂದಿದ್ದೆ, ಬಸಳೆಯೂ ಇತ್ತು. ಮನೆಯವರು ಮಾತ್ರ ಹಲಸಿನ ಕಾಯಿ ಮುಟ್ಟಲೇ ಇಲ್ಲ.ಮತ್ತೆ ಅದನ್ನು ಸ್ಥಳೀಯ ಶಾಲೆಗೆ ಕೊಟ್ಟದ್ದು, ಅವರು ಪಲ್ಯ ಮಾಡಿದರು.ಹಿಂದೆ ಮನೆಯಲ್ಲಿ ಕೃಷಿ,ಸಾಗುವಳಿ ಇರುವಾಗೆಲ್ಲ ಮಾರ್ಚ ತಿಂಗಳಿನಿಂದ ಜುಲೈವರೆವಿಗೂ ಹಲಸಿನ ಕಾಯಿದ್ದೇ ಪಲ್ಯ/ಸಾಂಬಾರು.ನನಗಂತೂ ತುಂಬಾ ಇಷ್ಟ. ದಪ್ಪ ಸಾರು ಮಾಡಿರುವ ಹಲಸಿನ ಪಲ್ಯವನ್ನು ಊಟಕ್ಕೆ ಅರ್ದ ಗಂಟೆ ಮುಂಚೆಯೇ ತಟ್ಟೆಯಲ್ಲಿ ಹಾಕ್ಕೊಂಡು ತಿನ್ನುವುದು ನನಗೆ ಇಷ್ಟ. ಗುಜ್ಜೆ ಪದಾರ್ಥ ಮಾಡಿದಂದು ಅನ್ನ ಊಟ ತುಂಬಾ ಕಡಿಮೆ, ಪದಾರ್ಥವನ್ನೆ ಅನ್ನದ ಮೇಲೆ ಒಂದಷ್ಟು ಹಾಕ್ಕೊಳ್ಳುವುದು.ಅದರಲ್ಲಿರುವ ಬೀಜವನ್ನು ತಿನ್ನಲಿಕ್ಕೇ ಹೆಚ್ಚು ಸಮಯ ಹಿಡಿಸುವುದರಿಂದ ಉಂಡು ಏಳುವಾಗ ಅರ್ದ ಗಂಟೆಯಾಗುವುದು. ಹೊಟ್ಟೆ ಹೇಗಾಗಿರುತ್ತದೆ ಎಂದರೆ ಉಳಿದವರು ಹೇಳುವುದುಂಟು “..ಹಾ, ಹೊಟ್ಟೆ ಎದಗೆ ಬಂದಿದೆ..” ಎಂದು.ಅಂದರೆ ಅಷ್ಟು ಉಬ್ಬಿಕೊಂಡಿರುತ್ತದೆ.
ಬಾಲ್ಯದಲ್ಲಿ ನಮ್ಮ ಹೊಟ್ಟೆ ಯಾವತ್ತೂ ಗುಡಾಣವೇ ಆಗಿರುತ್ತದೆ! ಎಲ್ಲ ಮಕ್ಕಳದ್ದೂ ಅದೇ ರೀತಿ.ಈಗೀಗ ಮಾತ್ರ ಯಾವ ಮಕ್ಕಳು ಕೂಡಾ ಬೇಕಾದಂತೆ ತಿನ್ನುವುದಿಲ್ಲ ಬಿಡಿ.ಹಳ್ಳಿಯಲ್ಲಿರುವವರು ಕೂಡಾ ಸ್ಪ್ರೈಟ್ ಮುಂತಾದ ಪಾನೀಯವನ್ನು ಮನೆಯಲ್ಲಿಟ್ಟುಕೊಂಡೇ ತಮ್ಮ ಮಕ್ಕಳನ್ನು ಪೋಷಿಸುತ್ತಾರೆ. ನಾವೆಲ್ಲ ಕುದಿಸಿ ಆರಿಸಿದ ನೀರು ಕುಡಿಯಲಿಕ್ಕೆ ರೂಢಿ ಮಾಡಿದ್ದೇ ಸುಮಾರು ಇತ್ತೀಚೆಗೆ. ತುಂಬಾ ರುಚಿಯಾದ ಹಾಗೂ ನನಗೆ ಬಹಳ ಇಷ್ಟವಾದ ಪದಾರ್ಥಗಳಲ್ಲಿ ಹಲಸು ಕೂಡಾ ಒಂದಾಗಿರುವುದರಿಂದ ಇದನ್ನು ಬರೆಯತೊಡಗಿದೆ.ಸುಮಾರು ಮೂವತ್ತು ವರ್ಷಗಳ ಹಿಂದೆ ಹಲಸಿನ ಹಣ್ಣು, ಹಲಸಿನ ಪದಾರ್ಥವನ್ನೆ ಹೊಟ್ಟೆ ತುಂಬಾ ತಿಂದು ಬದುಕಿದವರು ಜಾಸ್ತಿ.ಅದರ ಕತೆಯನ್ನು ಬೇರೆಯೇ ಬರೆಯಬೇಕಷ್ಟೆ.
.
– ವಿ.ಕೆ.ವಾಲ್ಪಾಡಿ
ರುಚಿಕರ ಹಲಸು ವೈವಿಧ್ಯದ ಕಾಲ! ಚೆನ್ನಾಗಿದೆ.
ಒರಳಲ್ಲಿ ಕುಟ್ಟಿ ಮಾಡುವ ಗುಜ್ಜೆ ಪಲ್ಯ ನನ್ನ ಫೇವರಿಟ್! ಲೇಖನ ಓದಿ ಬಾಯಲ್ಲಿ ನೀರೂರಿತು 😉 ಇಳಿ ಸಂಜೆಯ ಬಿರುಮಳೆಗೆ ಕೆಂಡದಲ್ಲಿ ಸುಟ್ಟು, ಎಣ್ಣೆ ಸವರಿದ ಹಲಸಿನ ಹಪ್ಪಳವೂ ಅಗಾಧ ರುಚಿ !
channagi agutte madam
I like Jack fruit papad. It is very tasty.