ನಮ್ಮ ನೆಲ…ಹೀಗಿತ್ತು ಗೊತ್ತಾ?
ಅವರು ದಿನಕರ ಶೆಟ್ಟಿ ಅಂತ. ನನ್ನ ಮಿತ್ರರು.ಅವರ ಮನೆಗೆ ಹೋಗಿದ್ದೆ, ಅಪರೂಪಕ್ಕೊಮ್ಮೆ ಹೋಗುತ್ತ ಇರುತ್ತೇನೆ ಕೂಡಾ. ಅ ದಿನ ಅಲ್ಲಿಗೆ ಹೋದಾಗ ಮನೆಯ ಅಂಗಳದಲ್ಲಿಯೇ ರಾಸಾಯನಿಕ ವಸ್ತುವಿನ ಕಟು ವಾಸನೆ. ಅದರ ತೀವ್ರತೆ ಎಷ್ಟಿತ್ತೆಂದರೆ ತಲೆ ಸುತ್ತು ಬರಿಸುವಂತಿತ್ತು, ಮತ್ತೆ ತಲೆ ನೋವಿಗೂ ಆಸ್ಪದವಾಗುವಂತಿತ್ತು. ಮನೆ ಮಂದಿಯೆಲ್ಲ ಒಳಗೆನೆ ಇದ್ದರು.ನಾನು ಒಳಗೆ ಹೋದವನೆ,’ ಇದೆಂಥದ್ದು ಘಾಟು ಮಹರಾಯ್ರೆ,ಮನುಷ್ಯ ಉಸಿರಾಡಲಿಕ್ಕೆ ಸಾಧ್ಯವಿಲ್ಲ’ ಎಂದಾಗ ಮನೆಯಾಕೆ ಅಂಬಕ್ಕ , ‘ಅದೂ.. ನಾವೂ.. ಇಲ್ಲಿ ಅಂಗಳದಲ್ಲಿ ಫ್ಯೂರಡಾನ್ ಮತ್ತು ಮರಳು ಕಲಸಿದ್ದೂ..ಅಡಿಕೆ ಮರದ ಬುಡಕ್ಕೆ ಹಾಕಲಿಕ್ಕೆ..ಹತ್ತು ಬಕೆಟ್ ನೀರು ಹಾಕಿ ಗುಡಿಸಿಯಾಯಿತಾದರೂ ಘಾಟು ಹೋಗುತ್ತಿಲ್ಲ.ತಲೆ ಬಿಸಿಯಾಗಿದೆ.ಹೀಗಂತ ಗೊತ್ತಿದ್ದರೆ ಆಚೆ ದೂರದಲ್ಲಿ ಮಿಶ್ರ ಮಾಡಬಹುದಿತ್ತು ‘ ಎಂದು ರಾಗ ಎಳೆದರು.
ಅದಕ್ಕೆ ನೀರು ಹಾಕಿದರೆ ಆಗೋದಿಲ್ಲ.ಒಂದೇ ಒಂದು ಪರಿಹಾರವೆಂದರೆ ದನದ ಹಟ್ಟಿಯಿಂದ ಮುದ್ದೆ ಸೆಗಣಿ ತಂದು ನೀರಿನಲ್ಲಿ ಕಲಸಿ ಚೆನ್ನಾಗಿ ಸಾರಿಸಿರಿ. ಮತ್ತೆ ಹೇಳಿ ರಾಸಾಯನಿಕ ವಾಸನೆ ಇದೆಯೋ ಇಲ್ಲವೋ ಎಂದೆ. ತಡಮಾಡದೆನೆ ಆ ಕೆಲಸ ಮಾಡಿದರು.ಮುಂದಿನ ಫಲಿತಾಂಶವೇನಾಯಿತೆಂಬುದನ್ನು ಅಂಗಳದಲ್ಲಿ ಅಂಥದ್ದಾದಾಗ ಯಾರೂ ಕೂಡಾ ಸೆಗಣಿ ಸಾರಿಸಿದರೆ ಗೊತ್ತಾಗುತ್ತದೆ.
.
ಸೆಗಣಿ ಸಾರಿಸುವುದರಿಂದ ಅನೇಕ ಬಗೆಯಲ್ಲಿ ಪ್ರಯೋಜನಗಳು ಇವೆ ಎಂಬ ಸತ್ಯ ನಮಗೆ ಗೊತ್ತಿದ್ದರೂ ಕೂಡಾ ಅದನ್ನು ನಿರ್ಲಕ್ಷಿಸುವುದೇ ಒಂದು ಹೆಗ್ಗಳಿಕೆಯಾಗಿಬಿಟ್ಟಿದೆ.ಕ್ರಿಮಿನಾಶಕವಾಗಿ ಅದು ಕೆಲಸಮಾಡುತ್ತದೆ ಎಂಬ ಸ್ಪಷ್ಟ ಕಾರಣಕ್ಕಾಗಿಯೇ ಅದರ ಬಳಕೆಯನ್ನು ಮಾಡುತ್ತ ಬಂದಿರುತ್ತಾರೆ.
ಕಾಂಕ್ರೀಟು ಅಂಗಳಕ್ಕೆ ಸೆಗಣಿ ನೀರು ಸಾರಿಸುವುದೇ ಬೇಕಿಲ್ಲ ಎಂದು ನಾವು ಖುಷಿ ಪಡುತ್ತೇವೆ ಏನೋ ನಿಜ.ಆದರೆ ಅಂಗಳದಲ್ಲಿ ಹರಡಿಕೊಂಡಿದ್ದ ಧೂಳನ್ನು ತೆಗೆಯುವುದಕ್ಕೆ ಸೆಗಣಿ ಸಹಕಾರಿ.ಎಷ್ಟೇ ನೀರು ಸುರಿದು ಅಂಗಳ ಸ್ವಚ್ಚ ಮಾಡಿದರೂ ಸಹ ನೀರು ಒಣಗಿದ ನಂತರ ಧೂಳು ಅಲ್ಲಿರುತ್ತದೆ.ಅಪರೂಪಕ್ಕೊಮ್ಮೆ ಕಾಂಕ್ರೀಟು ಅಂಗಳಕ್ಕೂ ಸೆಗಣಿ ನೀರನ್ನು ಬಹಳ ತೆಳ್ಳಗೆ ಮಾಡಿ ಗುಡಿಸಿದರೆ ಬಹಳ ಒಳ್ಳೆಯದು. ಸರಾಗವಾಗಿ ಸಾರಿಸಿದರೆ ಸಿಮೆಂಟು ಕಿತ್ತು ಹೋಗುತ್ತದೆಯೆನ್ನುತ್ತಾರೆ.
.
ಹಿಂದೆ ಮನೆಗಳಲ್ಲಿ ನೆಲಕ್ಕೆ ಸೆಗಣಿಯನ್ನೆ ಸಾರಿಸುವುದು.ಇದೇನು ಅಂತೆ ಕಂತೆಯಲ್ಲ ಅಥವಾ ನಾನೇ ಹೊಸತಾಗಿ ಹೇಳುವುದು ಕೂಡಾ ಅಲ್ಲ.ಸೆಗಣಿಗೆ ಕಪ್ಪು ಕರಿ ಮಿಶ್ರ ಮಾಡುವುದುಂಟು.ಆ ಕರಿ ವಸ್ತು ಯಾವುದೆಂದರೆ ಚಿಮಿಣಿ ಕರಿ,ಎಳ್ಳಿನ ಕರಿ.ಇದ್ಯಾವುದೂ ಇಲ್ಲದಿದ್ದರೆ ತೆಂಗಿನ ಕಾಯಿ ಸಿಪ್ಪೆಯನ್ನು ಸುಟ್ಟು ಕರಿ ಮಾಡುತ್ತಾರೆ,ಇನ್ನು ಕೆಲವರೆಲ್ಲ ರೇಡಿಯೋ ಮತ್ತ ಟಾರ್ಚ್ ಲೈಟ್‌ಗೆ ಬಳಸುತ್ತಿದ್ದ ಹಳತಾದ ಬ್ಯಾಟರಿಯೊಳಗಿನ ಕಪ್ಪು ಪುಡಿಯನ್ನು ಉಪಯೋಗಿಸತ್ತಿದ್ದುದೂ ಉಂಟು. ಕೇಳಲು ಬರುವವರಿಗಾಗಿಯೇ ನಮ್ಮಲ್ಲಿ ಹಳೆಯ ಬ್ಯಾಟರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದೆವು.
ಚಿಮಿಣಿ ಕರಿ ಹೇಗೆಂದರೆ ,ಆಗೆಲ್ಲ ವಿದ್ಯುದ್ದೀಪ ಎಲ್ಲಿ? ದೊಡ್ಡವರ ಮನೆಗೆ ಮಾತ್ರ ತಾನೆ? ಮನೆಯಲ್ಲಿ ಗೋಡೆಗೆ ಒಂದು ಮೊಳೆ ಬಡಿದು ಅದಕ್ಕೆ ಚಿಮಿಣಿ ( ದೀಪದ ಬುರುಡೆ) ಯನ್ನು ಸಿಕ್ಕಿಸಿಡುವುದು.ಹೀಗೆ ಇಡುವುದರಿಂದ ಬೆಳಕು ಎಲ್ಲ ಕಡೆ ಪಸರುತ್ತದೆ. ಮೊಳೆಗಿಂತ ತುಸು ಮೇಲೆ ಒಂದು ನೋಟ್ ಪುಸ್ತಕದ ಹಾಳೆಯಾಕಾರದಷ್ಟಗಲದ ತಗಡನ್ನು ಗೋಡೆಗೆ ಬಡಿದು ಎದುರು ಬಗ್ಗಿಸಿ ಚಿಮಿಣಿಯ ದೀಪದ ಕಪ್ಪು ಹೊಗೆಯನ್ನು ಆ ತಗಡಿನಲ್ಲಿಯೇ ಸುತ್ತಾಡುವಂತೆ ಮಾಡುವುದು.ಆಗ ಅಲ್ಲಿ ಕರಿ ಸಂಗ್ರಹವಾಗುತ್ತದೆ. ಮೂರು ನಾಲ್ಕು ದಿನಗಳಾದಾಗ ಋಷಿ ಗಡ್ಡದ ಹಾಗೆ ಕೆಳಗೆ ಬೆಳೆಯುತ್ತದೆ ಕಪ್ಪು ಕರಿ.ಮತ್ತೆ ಅಲ್ಲಿ ಬಿಟ್ಟರೆ ಅದು ಆದಾರ ಕಳೆದುಕೊಂಡು ಕೆಳಗೆ ಬೀಳುವುದರಿಂದ ಆ ದಿನ ತೆಗೆಯಲೇ ಬೇಕು. ಅದನ್ನು ತೆಗೆಯುವುದೇ ಒಂದು ನೈಪುಣ್ಯತೆ ಅನ್ನಬಹುದು.ಒಂದು ಚೂರು ವ್ಯತ್ಯಾಸವಾದರೂ ಕರಿ ಗಡ್ಡ ನೆಲಕೆನೆ! ಒಂದೇ ರೀಇಯಾಗಿ ಕತ್ತರಿಸಲ್ಲಪಟ್ಟ ತೆಂಗಿನ ಗೆರಟೆಯನ್ನು ಹಿಡಿದು ಆ ಕರಿಗಡ್ಡವನ್ನು ಗೆರಟೆಯೊಳಗೆ ತುಂಬಿಸಿ ಒಂದು ಕಡೆಗೆ ಎಳೆಯುತ್ತ ಹೊರತರಬೇಕು.ತಗಡಿನಲ್ಲಿದ್ದ ಎಲ್ಲ ಕರಿ ಗೆರಟೆಯೊಳಗೆ.ನಮ್ಮಲ್ಲಿ ಅಮ್ಮ ಮಾಡುವು ಕೆಲಸ, ನಾವು ಕೂಡಾ ಹಾಗೆ ತೆಗೆಯುವುದು. ಅನೇಕ ಸಲ ಕರಿ ತೆಗೆಯದೆ ಕೆಳಗೆ ಬಿದ್ದು ಅಮ್ಮನ ಮಾತು ತುಂಬಾ ಹೊತ್ತು ಮುಂದುವರಿಯುತ್ತಲೇ ಇರುತಿತ್ತು. ಕೆಲವು ಸಲ ಗಾಳಿಗೆ ಉದುರಿ ಬೀಳುವುದೂ ಉಂಟು. ಮನೆಯಲ್ಲಿ ಕೊಟ್ಟಿಗೆ ನೆಲಕ್ಕೆ, ಅಂಗಳದ ನೆಲಕ್ಕೆ ಕರಿ ಬೇಕಾಗುತ್ತಿತ್ತು.
.
ಎಳ್ಳಿನ ಕರಿ ಎಂದರೆ ಇನ್ನೊಂದು ಬಗೆಯಲ್ಲಿ ತಯಾರು ಮಾಡುವುದು.ಸರ್ವೇ ಸಾಮಾನ್ಯ ಎಲ್ಲರೂ ಮಾಡಿಡುವ ಕರಿ.ಎಳ್ಳು ಬೆಳೆಯುತ್ತಾರೆ.ಎಳ್ಳಿನ ಗಿಡ ಕತ್ತರಿಸಿ ಮನೆಗೆ ತಂದು ಎಳ್ಳನ್ನು ಬೇರ್ಪಡಿಸಿದ ನಂತರ ಒಣಗಿದ ಗಿಡವನ್ನು ಸುಟ್ಟು ಕರಿ ಮಾಡಲಾಗುತ್ತದೆ.ಹಾಗೆ ಮಾಡಿದ ಕರಿಯನ್ನು ದೊಡ್ಡ ಉಂಡೆಯಾಕೃತಿಯಲ್ಲಿ ಮಾಡಿ ಸಂಗ್ರಹ ಮಾಡುತ್ತಾರೆ.ಉಂಡೆ ಕಟ್ಟುವುದಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ಸೆಗಣಿಯನ್ನು ಮಿಶ್ರಣ ಮಾಡುತ್ತಾರೆ.ಮನೆಯೊಳಗಿಂದ ಅಂಗಳದ ವರೆಗೆ ಸಾರಿಸಲಿಕ್ಕೆ ಎಳ್ಳನ ಕರಿಯ ಪ್ರಮಾಣವೇ ಬೇಕು.
.
ಮನೆಯೊಳಗೆ ಸಾರಿಸುವಾಗ ಅದನ್ನು ಪೊರಕೆಯಿಂದ ಸಾರಿಸುವುದಲ್ಲ. ಅಡಿಕೆ ಹಾಳೆಯಿಂದ ಸೆಗಣಿ ಸಾರಿಸುವುದು.ಆರು ಇಂಚು ಉದ್ದ,ನಾಲ್ಕು ಇಂಚು ಅಗಲಕ್ಕೆ ಕತ್ತರಿಸಿಕೊಂಡ ಹಾಳೆಯಿಂದ ಸಾರಿಸುವುದು. (ವಾಹನಕ್ಕೆ ಲ್ಯಾಂಪಿ ಹಚ್ಚುವುದಕ್ಕೆ ತಗಡಿನ ಹಾಳೆ ಬಳಸುವಂತೆ.ಈಗೀಗ ಕಟ್ಟಡ ಗೋಡೆಗಳಿಗೆ ಸುಣ್ಣ ಹಚ್ಚಲಿಕ್ಕೂ ಅದು ಬಂದಿದೆ) ಹೆಚ್ಚು ದಪ್ಪವೂ ಆಗಿರದೆ ತೆಳು ಕೂಡಾ ಆಗಿರದೆ ಹದಮಾಡಿದ ಸೆಗಣಿಕರಿಯನ್ನು ನೆಲಕ್ಕೆ ಹಾಕಿ ಈ ಹಾಳೆ ಕಡ್ಡಿಯಿಂದ ಅಡ್ಡಡ್ಡ ಎಳೆಯುತ್ತ ಬರಬೇಕು. ನಿಂತಲ್ಲಿಂದಲೇ ಬಗ್ಗಿ ಮಾಡುತ್ತ ಹಿಂದಕ್ಕೆ ಚಲಿಸಬೇಕು.ಒಮ್ಮೆ ಸಾರಿಸಿದಲ್ಲಿ ಹೆಜ್ಜೆ ಇಡುವಂತಿಲ್ಲ.ಹಿಂದಕ್ಕೆ ಅಡ್ಡಕ್ಕೆ ಎಳೇಯುತ್ತ ಬರುವಾಗ ಯಾವುದೇ ಕಾರಣಕ್ಕೂ ಗೆರೆ ಮೂಡುವಂತಿಲ್ಲ.ಅಷ್ಟು ನಾಜೂಕಾಗಿ ಸಾರಿಸಬೇಕು.ಆ ಕಾರಣ ಹಾಳೆ ಕಡ್ಡಿಯಲ್ಲಿ ಸೆಗಣಿ ಸಾರಿಸಲಿಕ್ಕೆ ಎಲ್ಲರಿಗೂ ಗೊತ್ತಿಲ್ಲ, ಅಭ್ಯಾಸ ಮಾಡಬೇಕು.
.
ನನ್ನ ತಂದೆ ಮನೆ ಬಹಳ ದೊಡ್ಡ ಮನೆ.ಒಳಾಂಗಣವಿರುವ ಸುತ್ತು ಮನೆ.ಭೀಮ ಗಾತ್ರದ ಬೋಧಿಗೆ ಕಂಬಗಳುಳ್ಳ ಗುತ್ತಿನ ಮನೆ ಅದು. ಅಲ್ಲಿ ಸಿಮೆಂಟು ನೆಲವೇ ಇಲ್ಲ.ಮನೆಗೆ ಸೆಗಣಿ ಸಾರಿಸುವುದೆಂದರೆ ಆ ದಿನಕ್ಕೆ ಮೂರು ನಾಲ್ಕು ಹೆಂಗಸರದ್ದೇ ಓಡಾಟ.ಮನೆ ಮಾತ್ರವಲ್ಲ ಭತ್ತ ಕುಟ್ಟುವ ಕೊಟ್ಟಿಗೆಯೇ ನೂರು ಮೀಟರುಗಳಿಗೂ ಉದ್ದವುಂಟು.ಸೆಗಣಿ,ಕರಿ ಎಷ್ಟು ಬೇಕಾಗುತಿತ್ತೋ ಕೆಲಸ ಮಾಡಿದವರಿಗೂ ಅಂದಾಜಿರಲಿಕ್ಕಿಲ್ಲ. ಅದು ತಂದೆ ಮನೆಯಾದರೂ ನಮ್ಮ ಮನೆ ಮಾತ್ರ ಮುಖ್ಯ ರಸ್ತೆ ಬದಿಯಲ್ಲಿ. ತಂದೆ ಪಟೇಲರಾಗಿದ್ದರು, ಜಾಗ ತಕ್ಕೊಂಡು ಪುಟ್ಟದಾದ ಮನೆ ಕಟ್ಟಿದ್ದರು. ಈ ದೊಡ್ಡ ಮನೆಗೆ ನಾವು ಹೋದರೆ ಒಳಗೆ ಮೂರು ನಾಲ್ಕು ಬಾರಿ ಅಡ್ಡಾಡಿದರೆ ಸಾಕು ಅಂಗಾಲು ಮಾತ್ರ ಕಪ್ಪು ಕರಿಯ ಬಣ್ಣಕ್ಕೆ ತಿರುಗುವುದು.ನೆಲದಲ್ಲಿ ಕುಳಿತ ತಪ್ಪಿಗಾಗಿ ಚಡ್ಡಿಯಲ್ಲೂ ಕಪ್ಪು ಕಪ್ಪು ಮಚ್ಚೆಗಳು. ಕರಿ ಸಾರಿಸಿದ ಒಂದು ವಾರದವರೆಗೆ ಹಾಗೆನೆ.ಅದಕ್ಕೆ ಅಂಟು ಪದಾರ್ಥವೇನೂ ಬಳಸುತ್ತಿಲ್ಲವಾದ್ದರಿಂದ ಕರಿ ಬಣ್ಣ ಸಹಜವಾಗಿ ಮೈ,ಕೈ,ಕಾಲಿಗೆ ಅಂಟುವುದು.
.
ಈಗಿನಂತೆ ಆಗೆಲ್ಲ ಮನೆಯೊಳಗೆ ಕಾಲು ಜಾರಿ ಬಿದ್ದ ಪ್ರಸಂಗವೇ ಇಲ್ಲ. ಕಾರಣ ಮಣ್ಣಿನ ನೆಲ, ಸೆಗಣಿಯ ಸಾರಿಕೆ. ನುಣುಪಾಗಿದ್ದರೂ ಸಹ ನೆಲಕ್ಕೆ ನಮ್ಮ ಪಾದ ಹಿಡಿದುಕೊಳ್ಳುತಿತ್ತು. ಅದೇನೋ ‘ಗ್ರಿಪ್’ ಅಂತಾರಲ್ಲ, ಹಾಗೆ. ಅಂಗಳದಿಂದಲೇ ಸೆಗಣಿ ಸಾರಿಸಿದ ನೆಲವಾಗಿರುವುದರಿಂದ ಪಾದದಡಿಯ ಧೂಳು ಏನಿದ್ದರೂ ಅಲ್ಲಿಂದಲೇ ಕೀಳುತ್ತದೆ.ಕಾಲು ತೊಳೆದು ಬರುವುದರಿಂದ ಎಲ್ಲವೂ ಸ್ವಚ್ಚ ಸ್ವಚ್ಚ.ಊಟದ ವೇಳೆ ನೆಲಕ್ಕೆ ಬಿದ್ದ ಅನ್ನದ ಕಾಳನ್ನು ಮತ್ತೆ ಹೆಕ್ಕಿ ಧೂಳು ,ಕ್ರಿಮಿ ಇಲ್ಲ ಎಂದು ತಟ್ಟೆಗೆ ಹಾಕಿಕೊಂಡು ದೈರ್ಯ,ವಿಶ್ವಾಸದಿಂದ ಊಟಮಾಡುತ್ತಿದ್ದರು.
ಈಗ ನಮ್ಮ ನೆಲಕ್ಕೆ ಏನೇನೆಲ್ಲ ಹಾಸು-ಹೊದಿಕೆಗಳು ಬಂದಿವೆ.ಟೈಲ್ಸು ಅನ್ನುತ್ತಾರೆ,ಮೊಸಾಯಿಕ್ಕು,ಮಾರ್ಬಲ್ ಇನ್ನೇನೋ ಅಂತಾರೆ.ಒಟ್ಟಿನಲ್ಲಿ ನೆಲವನ್ನೇ ಮುಚ್ಚುತ್ತಾರೆ.ಮನೆಯೊಳಗೆ ಕಾಲಿಡುವಾಗ ಮನಸಿಗೆ ಅದೆಂಥ ಹಿತವಾಗುತ್ತದೆ,ಮುದನೀಡುತ್ತದೆ. ಹೆಜ್ಜೆ ಹಾಕುತ್ತ ಮುಂದೆ ನಡೆಯುತ್ತಿದ್ದಂತೆ ಪಾದಕ್ಕೆ ಗಟ್ಟಿ/ಕೃತಕ ನೆಲದ ಸ್ಪರ್ಶಾನುಭವವಾಗುತ್ತದೆ.ಮಣ್ಣಿನ ನೆಲದ ಮೃದುವಾದ ಸ್ಪರ್ಶ ಗೊತ್ತಾಗುವದೇ ಇಲ್ಲ. ಅದರ ಗೊತ್ತು ಕೂಡಾ ಇಲ್ಲ.ನಾವೀಗ ಭೂಮಿಗೆ ಕಾಲಿಡುವುದೇ ಇಲ್ಲ.ಎಂಥದ್ದೇ ಹಾಸಿರಲಿ ಕಾಲಿಗೆ ಚಪ್ಪಲಿ ಹಾಕೊಂಡೇ ಒಳಗೂ ಅಡ್ಡಾಡಬೇಕು.ಪಾದದಾಣೆಗೂ ನಮ್ಮ ಪಾದಕ್ಕೆ ಯಾವುದೂ ಸ್ಪರ್ಶವಾಗಕೂಡದು;ಜಾರಿ ಬಿದ್ದು ಸೊಂಟ ಮುರಿಯದೆ ಸಾಯಲೂ ಕೂಡದು..!
.
– ವಿ.ಕೆ.ವಾಲ್ಪಾಡಿ
.
‘ನಮ್ಮ ನೆಲ ಹೀಗಿತ್ತು ಗೊತ್ತಾ…’ ಹಿಂದೆಲ್ಲ ಈ ರೀತಿಯಲ್ಲಿ ಸೆಗಣಿ ಸಾರಿಸಿದ ಮನೆಗಳಲ್ಲಿ ವೃದ್ಧರು ಬಿದ್ದು ಕೈಕಾಲು ಮುರಿದುಕೊಂಡ ಕತೆ ಕೇಳಿದ್ದಿರೇನು? ಸೊಗಸಾದ ಲೇಖನ.
I have seen this in my school days and as it is clarified it is hygenic too
ಸರ್ಕಾರದವರು ಮನೆ ಮುಂದಿನ ರಸ್ತೆಗೆಲ್ಲಾ ಕಾಂಕ್ರಿಟ ಹಾಕ್ಯಾರ ಆದರೂ ನಮ್ಮವ್ವ ಮುಂಜೆನೆದ್ದ ಕಾಂಕ್ರಿಟಿನ ಮ್ಯಾಲ ತೆಳ್ಳಗ ಒಟ ಸಗಣಿ ಬಳದ ಬಿಡತಾರ.ಏನ ಆದರೂ ಮುಂಜೆನೆದ್ದ ಬಾಗಲ ಮುಂದ ಸಗಣಿ ಸಾರಿಸಿ ರಂಗೋಲಿ ಹಾಕಿ ಅದರಾಗ ನಾಕ ಹೂವ ಇಟ್ಟಿರತಾರ.ಒಳಗಿಂದ ತಮ್ಮ ತಮ್ಮ ಕೆಲಸಕ್ಕ ಹೋಗು ಮಂದಿ ಮನಸಿಗೆ ಆನಂದ ,ಉಲ್ಲಾಸ ಕೊಡತದ. ನಮ್ಮದ ಓದಿದ ತೆಲಿ ನೀಮ್ಮ ಲೇಖನ ಓದಿದ ಮ್ಯಾಲ ಅದರ ವೈಜ್ಣಾನಿಕತೆ ತಿಳಿತ.ಅವರೆಲ್ಲ ಓದದೇ ಇದ್ದರೂ ಮಾಡುವ ಹಲವಾರು ಕೆಲಸಗಳಲ್ಲಿ ವೈಜ್ಣನಿಕಥೆ ತುಂಬಿದೆ ಅಂತ ತಿಳಿದುಕೊಳ್ಳಬೇಕು ನಾವು.