ರಾಮಬಾಣಕ್ಕೊಂದು ಓಲೆ…
ಪುರಾಣ ಪಾತ್ರಕ್ಕೊಂದು ಪತ್ರ (ರಾಮನವಮಿಗಾಗಿ ವಿಶೇಷ ಲೇಖನ)
ರಾಮಬಾಣಕ್ಕೊಂದು ಓಲೆ…
ಆ ಮರವೋ, ಈ ಮರವೋ, ಯಾವ ಮರವೋ, ಅರಿಯದಾದೆ. ಮರದ ಮರೆಯಿಂದ ತೂರಿ ಬಂದ ಬಾಣ ವಾಲಿಯ ಎದೆಗೆ ನಾಟಿದೆ. ನನಗಿದು ಹೊಸ ಅನುಭವ, ನಮ್ಮ ವಾನರರ ಹೊಡೆದಾಟ ಏನಿದ್ದರೂ ಗಿಡ ಮರಗಳನ್ನು ಕಿತ್ತು, ಕಲ್ಲು ಬಂಡೆಗಳನ್ನೆತ್ತಿ ಅಥವಾ ಮುಖಾಮುಖಿಯಾಗಿ ಮುಷ್ಠಿ ಯುದ್ಧವೋ, ಮಲ್ಲ ಯುದ್ಧವೋ ಹೀಗೆಲ್ಲ. ವಾಲಿ ಸುಗ್ರೀವರ ಜಗಳ, ಇದು ಅಣ್ಣ ತಮ್ಮಂದಿರ ಜಗಳ, ಮನೆ ಮನೆಯ ಕಥೆ, ಮುಗಿಯದ ಕಥೆ. ಮಧ್ಯೆ ಎಲ್ಲಿಂದ ತೂರಿ ಬಂತು ಈ ಬಾಣ. ಈ ಬಾಣ ಪ್ರಯೋಗದ ಹಿಂದೆ ಅದಾವ ಸ್ವಾರ್ಥ ಸಾಧನೆಯಿರಬಹುದು? ಬಾಣ ಪ್ರಯೋಗ ಅಷ್ಟು ನಿಖರ. ಒಂದರೆ ಕ್ಷಣ ಖತಿಗೊಂಡಿದ್ದೇನೆ. ಸುತ್ತೆಲ್ಲ ಕತ್ತಲೆ. ಯಾರು? ಏನು? ಯಾಕೆ? ಹೊರಗಣ್ಣ ತೆರೆಯಲಾರದೆ ಒಂದು ಅರಿಯದಾದೆ. ಏನಚ್ಚರಿ, ಈ ನೋವಿನಲ್ಲೂ ನನ್ನ ಒಳಗಣ್ಣು ತೆರೆಯುತ್ತಿದೆ. ಈಗ ಅರಿವಾಯಿತು ಇದು ಒಳಗಣ್ಣ ತೆರೆಸುವ ಬಾಣ. ಇದು ಭವದ ಬಂಧನವ ಕಳೆಯಲೆಂದೇ ತೂರಿ ಬಂದ ರಾಮಬಾಣ, ಇದು ‘ಮೋಕ್ಷಚಾಪ’!
ಆದರೂ ಒಂದು ಜಿಜ್ಞಾಸೆಯಿದೆ. ಮರದ ಮರೆಯಲ್ಲಿ ನಿಂತು ಈ ಬಾಣವನ್ನು ಹೂಡಿದ ಮಾನವೋತ್ತಮನಲ್ಲಿ, ಮರ್ಯಾದಾ ಪುರುಷೋತ್ತಮನಲ್ಲಿ ಕೆಳಲೇ ಬೇಕಾದ ಒಂದೆರಡು ಪ್ರಶ್ನೆಗಳಿವೆ. ಕಾರ್ಯ-ಕಾರಣಗಳನ್ನು ವಿಮರ್ಶಿಸದೆ, ತರ್ಕ-ವಿತರ್ಕಗಳನ್ನು ಬದಿಗಿರಿಸಿ ಹೀಗೊಂದು ಸಾಧ್ಯತೆಯನ್ನು ಅಂಗೀಕರಿಸಿ ಉತ್ತರವೊಂದು ದೊರಕೀತು ಎಂದಾದರೆ, ರಾಮಚಂದ್ರಾ, ಈ ಲೋಕಕ್ಕೆ, ನಿನ್ನಿಂದ ಬಿಡಲ್ಪಟ್ಟ ಈ ಬಾಣಕ್ಕೆ ನಾನು ಪ್ರಶ್ನೆಯಾಗಿ ಉಳಿಯುವುದಿಲ್ಲ. ನನ್ನ ಬದುಕನ್ನೇ ಉತ್ತರವಾಗಿಸಿ ನಿನ್ನ ಪಾದದಡಿಯಲ್ಲಿ ಸಮರ್ಪಿಸುತ್ತೇನೆ.
ರಾಘವಾ,
ಮಧ್ಯರಾತ್ರಿಯ ಕಾಲ ಸುಗ್ರೀವ ಯುದ್ಧಕ್ಕೆ ಕೂಗಿ ಕರೆದಾಗ ತಾರೆಯ ತೋಳ ಅಪ್ಪುಗೆಯಲ್ಲಿ ವಿರಮಿಸುತ್ತಿದ್ದವನು ಮೈಕೊಡವಿ ಮೇಲೆದ್ದೆ. ನನ್ನ ಬದುಕಿನ ಭಾಗ್ಯತಾರೆ ನನಗೆಲ್ಲವನ್ನು ಅರುಹಿದ್ದಳು, ನನ್ನನ್ನು ಯುದ್ಧಕ್ಕೆ ಹೋಗದಂತೆ ಪರಿಪರಿಯಾಗಿ ಬಿನ್ನವಿಸಿದ್ದಳು. ಆದರೆ ನನ್ನ ಬದುಕಿನ ಭಾಗ್ಯವನ್ನು ಬರೆದ ವಿಧಿಗೆ ಅದು ಸಮ್ಮತವಾಗಿರಲಿಲ್ಲ! ಮಧ್ಯರಾತ್ರಿಯ ಕಾಲ ಪಲ್ಲಂಗದಿಂದ ತನ್ನನ್ನು ತೊರೆದು ಹೋಗುವ ಗಂಡನನ್ನು ಉಳಿಸಿಕೊಳ್ಳುವ ತಾರೆಯ ಬಡಬಡಿಕೆಯಿದು ಅಂದುಕೊಂಡೆ. ನನ್ನನ್ನುಳಿಸಿಕೊಳ್ಳುವ ತಾರೆಯ ಪ್ರಾಮಾಣಿಕ ಪ್ರಯತ್ನವದು ಎಂದು ನಾನು ಅರಿಯದಾದೆ.
ಶ್ರೀರಾಮಾ,
ನನಗೆ ಗೊತ್ತು, ಸುಗ್ರೀವನ ಕುರಿತಾದಂತಹ ನನಗಿರುವ ತಪ್ಪು ತಿಳುವಳಿಕೆ ಯಾವುದೋ ವಿಷ ಗಳಿಗೆಯಲ್ಲಿ ನಾನು ತೆಗೆದುಕೊಂಡ ತಪ್ಪು ನಿರ್ಧಾರ. ಪ್ರತಿಯೊಂದು ಸಲ ಆತ ಮುಖಾಮುಖಿಯಾದಾಗಲೂ ಅವನನ್ನು ಸೆರೆ ಹಿಡಿದು, ನನ್ನ ಪ್ರೀತಿಯಪ್ಪುಗೆಯಲ್ಲಿ ಬಂಧಿಸಿ ಎಲ್ಲವನ್ನು ಅವನಿಗರುಹಬೇಕು. ನನ್ನ ಕುರಿತಂತೆ ಅವನಿಗಿರುವ ಭೀತಿ, ಅನುಮಾನಗಳನ್ನು ಹೋಗಲಾಡಿಸಿ ಈ ಕಿಷ್ಕಿಂಧೆಯನ್ನೇ ಅವನಿಗೆ ಉಡುಗೊರೆಯಾಗಿ ನೀಡಬೇಕೆಂದು ಕೊಂಡಿದ್ದೆ! ಆದರೆ ನನ್ನ ಮತ್ತು ಸುಗ್ರೀವನ ನಡುವಿನ ಹೋರಾಟಗಳು ಇದಕ್ಕೆ ಅವಕಾಶವನ್ನು ನೀಡಲೇ ಇಲ್ಲ. ಪ್ರತಿಯೊಂದು ಸಲವೂ ಆತ ಭೀತನಾಗಿ ಪಲಾಯನಗೈಯ್ಯುತ್ತಿದ್ದ. ಸುಗ್ರೀವ ನನ್ನೊಳಗಿನ ಅವನ ಕುರಿತಾದ ಪ್ರೀತಿಯನ್ನು ಅರ್ಥೈಸಿಕೊಳ್ಳಲೇ ಇಲ್ಲ.
ರುಮೆಯ ಕುರಿತಾದಂತಹ ಅವನ ಸಂದೇಹದ ಕುರಿತಂತೆಯೂ ನಾನಿಲ್ಲಿ ನಿನಗೆ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ. ಶ್ರೀರಾಮಾ, ಪ್ರಾಣಿವರ್ಗದ ಬದುಕಿಗೆ ಅದರದೇ ಆದ ಒಂದು ಸಂವಿಧಾನವಿದೆ. ಇಲ್ಲಿ ಹೆಣ್ಣು ಮತ್ತು ಅಧಿಕಾರ ತೋಳ್ಬಲವಿದ್ದವನಿಗೆ ಮಾತ್ರ. ಆದರೂ ಜೀವ ವಿಕಾಸವಾದದಲ್ಲಿನ ಬೆಳವಣಿಗೆಯಲ್ಲಿ ವಾನರ ಶಾರೀರಿಕವಾಗಿ ಮಾತ್ರ ನರನಾಗುವುದಲ್ಲ, ಬೌದ್ಧಿಕವಾಗಿಯೂ ಆತ ನರನಾಗಬೇಕು, ನಾಗರೀಕನಾಗಬೇಕು, ಸಭ್ಯ ಮಾನವ ಸಮುದಾಯದ ಸುಸಂಸ್ಕೃತ ಜೀವನ ಶೈಲಿಯನ್ನು ಅನುಸರಿಸಬೇಕೆಂಬ ಪ್ರಯತ್ನ ಕಿಷ್ಕಿಂಧೆಯಿಂದಲೇ ಪ್ರಾರಂಭವಾಗಬೇಕು ಎಂಬ ನಿಟ್ಟಿನಲ್ಲಿ ನಮ್ಮ ಕುಲವಧುವಾದ, ನನ್ನ ತಮ್ಮ ಸುಗ್ರೀವನ ಹೆಂಡತಿಯಾದ ರುಮೆ ನನ್ನ ಅಂತಃಪುರದಲ್ಲಿದ್ದರೂ ನಾನವಳನ್ನು ಕಾಮಿಸಲಿಲ್ಲ. ಆ ಕಾರಣಕ್ಕಾಗಿಯೇ ಈ ಬಾಣ ಪ್ರಯೋಗವೆಂದಾದರೆ ಬಹುಶಃ ಈ ಬಾಣ ಪ್ರಯೋಗದ ನೋವಿಗಿಂತಲೂ ತೀಕ್ಷ್ಣವಾದ ನೋವು ಈ ಮಿಥ್ಯಾರೋಪದಿಂದ ನನಗಾಗಿದೆ.
ರಾಘವಾ,
ಅಣ್ಣ ತಮ್ಮಂದಿರ ಈ ದ್ವೇಷ, ಈ ಹಿಂದೆ ನಮ್ಮಿಬ್ಬರ ನಡುವೆ ನಡೆದ ಹೋರಾಟಗಳಿಗೆ, ತನ್ನ ಪತ್ನಿ ರುಮೆಯನ್ನು ದಾಳವಾಗಿಸಿ ನಿನ್ನ ಅನುಕಂಪವನ್ನು ಗಿಟ್ಟಿಸಿಕೊಳ್ಳುವ ನೀಚ ಪ್ರಯತ್ನವನ್ನು ಸುಗ್ರೀವ ಗೈಯ್ಯಬಹುದು ಎಂಬ ಪರಿಕಲ್ಪನೆಯೇ ನನಗೆ ಬಾರದೆ ಹೋಯಿತು. ಈ ಸಂದರ್ಭದಲ್ಲಿ ನ್ಯಾಯವಾದಿಯಾದ ನೀನು ತನ್ನ ವಿಚಾರವನ್ನು ಮಂಡಿಸುವುದಕ್ಕೆ, ಸಮರ್ಥಿಕೊಳ್ಳುವುದಕ್ಕೆ ವಾಲಿಗೊಂದು ಅವಕಾಶವನ್ನು ನೀಡಬಹುದಾಗಿತ್ತು. ಅದನ್ನು ಬಿಟ್ಟು ಮರದ ಮರೆಯಲ್ಲಿ ನಿಂತು ನೀಗೈದ ಈ ಶರಸಂಧಾನದ ಕುರಿತಾದ ಪ್ರಸ್ತುತತೆಯನ್ನು ಶಾಸ್ತ್ರ, ತರ್ಕ, ನ್ಯಾಯ ನೀತಿಗಳನ್ನು ಆಧಾರವಾಗಿಸಿಕೊಂಡು ನನ್ನ ಹಲವು ಪ್ರಶ್ನೆಗಳ ಸಂಬದ್ಧತೆಯನ್ನು ಪ್ರಶ್ನಿಸುತ್ತಿರುವ ನೀನು ನನ್ನ ಪಾಲಿಗೆ ಅರ್ಥವಾಗದ ಒಂದು ಪ್ರಶ್ನೆಯಾಗಿಯೇ ಉಳಿದುಕೊಂಡೆ.
ಶ್ರೀರಾಮಾ.
ದ್ವೇಷ ಮತ್ತು ಪ್ರೀತಿಯಲ್ಲಿ ಬಹಳಷ್ಟು ಮುಂದೆ ಹೋದ ಮೇಲೆ ಹಿಂತಿರುಗುವ ಮಾತೆಲ್ಲಿ ಹೇಳು? ನನ್ನ, ನಿನ್ನ ಮತ್ತು ಸುಗ್ರೀವನ ಈ ಸಂಬಂಧಗಳನ್ನು ನಾನೊಂದು ತ್ರಿಕೋನಕ್ಕೆ ಹೋಲಿಸುತ್ತಿದ್ದೇನೆ. ಸುಗ್ರೀವನ ಎದುರಿನಲ್ಲಿ ವಾಲಿ ಅಥವಾ ಶ್ರೀರಾಮನೆಂಬ ಎರಡು ಆಯ್ಕೆಗಳಿದ್ದವು. ಜಾಣನಾತ! ನಿನ್ನ ಮತ್ತು ಅವನ ಪರಿಸ್ಥಿತಿಯನ್ನು ತಾಳೆ ಹಾಕಿ, ನನ್ನನ್ನು ಕಳೆದುಕೊಳ್ಳುವುದಕ್ಕೆ ಆತ ನಿನ್ನನ್ನು ಆಯ್ಕೆ ಮಾಡಿದ. ನಾನಾದರೋ ಪ್ರೀತಿ, ನಂಬಿಕೆ ಮತ್ತು ಸಹಮತಗಳೆಂಬ ಮೂರು ಬಿಂದುಗಳನ್ನು ಉಪಯೋಗಿಸಿ ವಾಲಿ-ಸುಗ್ರೀವ-ಶ್ರೀರಾಮರೆಂಬ ಮೂರು ರೇಖೆಗಳನ್ನು ಉಪಯೋಗಿಸಿ ನೀನು ಸುಂದರವಾದ ಒಂದು ತ್ರಿಕೋನವನ್ನು ರಚಿಸಿ ನೀನೊಬ್ಬ ‘ಚತುರ ಗಣಿತಜ್ಞ’ ನಾಗಬಹುದೆಂದುಕೊಂಡಿದ್ದೆ. ನಿನ್ನ ಗಣಿತ ಬೇರೆಯೇ ಇತ್ತೋ ಏನೋ? ಆದರೆ ನನ್ನೆಣಿಕೆ ಬೇರೆಯೇ ಆಯಿತು. ನಿನ್ನ ಈ ಗಣಿತದಲ್ಲಿ ವಾಲಿಯೆಂಬ ರೇಖೆ ಕಳಚಿ ನೀನು ಮತ್ತು ಸುಗ್ರೀವ ನನ್ನ ಪಾಲಿಗೆ ಯಾವೊಂದು ಆಕೃತಿಯನ್ನು ಗೈಯ್ಯದ ಸಮಾನಾಂತರ ರೇಖೆಗಳಾಗಿಯೇ ಉಳಿದು ಹೋದಿರಿ. ಬಹುಶಃ ನನ್ನ ಗಣಿತವೇ ತಪ್ಪಾಗಿ ಬೇರೊಂದು ಸಮೀಕರಣ ಅಥಾವಾ ಆ(ಸು)ಕೃತಿಯ ಕಲ್ಪನೆ ನಿನ್ನಲ್ಲಿದೆಯೋ ಏನೋ?
ಶ್ರೀರಾಮಾ,
ಏನಂದೆ, ನನ್ನ ಖುಷಿಗಾಗಿ ಮುರಿದ ಹೋದ ಈ ತ್ರಿಕೋನ ಬಂಧವನ್ನು ಮತ್ತೆ ರಚಿಸುತ್ತಿಯಾ? ಅಂದರೆ ನನಗೆ ಜೀವ ದಾನವೇ? ಮತ್ತೆ ಈ ಇಹದ ವ್ಯಾಪಾರಕ್ಕೆ ನನ್ನನ್ನೆಳಸುತ್ತಿಯಾ ಪ್ರಭು, ಯಾರಿಗಿದೆ ಹೇಳು ಈ ಸೌಭಾಗ್ಯ? ಭವದ ಬಂಧನವನ್ನು ಕಳೆಯುವ, ಪರಮ ಆತ್ಮನಾದ ನಿನ್ನಲ್ಲಿ ವಾನರ ಯೋನಿಯಲ್ಲಿ ಜನಿಸಿ ವಾಲಿಯೆಂದು ಗುರುತಿಸಲ್ಪಟ್ಟ ಈ ಜೀವಾತ್ಮ ರಾಮಬಾಣದ ಮೂಲಕ ಒಂದಾಗುವುದಾದರೆ ಯಾವ ಆಕ್ಷೇಪವನ್ನು ಗೈಯ್ಯದೆ ಅಂತಹ ಸಾವಿರ ಸಾವಿರ ಬಾಣಗಳಿಗೆ ಎದೆಯೊಡ್ಡುತ್ತಿದ್ದೇನೆ. ಪ್ರಭುವೇ ನೆಟ್ಟ ಬಾಣವನ್ನು ಮಾತ್ರ ಹಿಂತೆಗೆಯಬೇಡ. ಇದೊಂದೆ ನನ್ನ ನಮ್ರ ವಿನಂತಿ.
‘
– ದಿವಾಕರ ಡೋಂಗ್ರೆ ಎಂ. (ಮಾಳವ)
.
ರಾಮನವಮಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದ ಲೇಖನವಿದು . ಚೆನ್ನಾಗಿದೆ
ಶ್ರೀ ದಿವಾಕರ ಡೊಂಗ್ರೆ ಯವರೇ ನಿಮ್ಮಲ್ಲಿ ಈ ತೆರನ ಶಬ್ದ ಭಂಡಾರ ವಿರುವುದು ನನಗೆ ಗೊತ್ತಿರಲೇ ಇಲ್ಲ. ಭಲೇ ! ಬಹಳ ಸೊಗಸಾಗಿ
ಸಾಗಿದೆ ವಾಲೀ ಸುಗ್ರೀವ ರಾಘವರ ಸ್ವರೋಚಿತ ಸಂವಾದ .
ಲೇಖನ ಸುಂದರವಾಗಿ ಮೂಡಿ ಬಂದಿದೆ. ವಾಲಿಯ ಪ್ರಶ್ನೆಗಳು ಅರ್ಥವಿಲ್ಲದಲ್ಲ.
ಬಹು ಅರ್ಥವತ್ತಾಗಿ ಮೂಡಿಬಂದಿದೆ .
ಸು೦ದರ ಚಿತ್ರಣ, ಲೇಖನ ಚೆನ್ನಾಗಿಯೇ ಇದೆ ಎ೦ದಿನ೦ತೆ….