ನೆನಪಿನ ಬುತ್ತಿಯೊಳಗೆ……..
ನನ್ನೂರಿನಲ್ಲಿ ರಸ್ತೆಯ ಡಾಂಬರಿಕರಣ ನಡೆಯುತ್ತಿದ್ದ ಸಮಯವದು, ವೈದ್ಯರ ಅಜಾಗರೂಕತೆಯೋ ಅಥವಾ ಆ ಕಾಲದಲ್ಲಿ ಇವತ್ತಿನ ದಿನಗಳಂತೆ ಅಧಿಕವಾಗಿ ಲಭ್ಯವಿಲ್ಲದಿರುವ ಯಂತ್ರೋಪಕರಣಗಳ ಹಿನ್ನಡೆಯೋ ಗೊತ್ತಿಲ್ಲ ಒಟ್ಟಿನಲ್ಲಿ ನನ್ನ ಜನನ ವೈದ್ಯರಿಗು ಸವಾಲಾಗಿ, ವಾರದ ನಂತರ ಹೆರಿಗೆ ಆಗುವುದೆಂದು ತಿಳಿದಿದ್ದ ನನ್ನಮ್ಮ ಅದೇ ದಿನವೇ ನಮ್ಮ ಮನೆಯಲ್ಲೇ ನನ್ನ ಜನ್ಮಕ್ಕೆ ಕಾರಣಳಾದಳು. ಅದು ಹಗಲು ರಾತ್ರಿ ಸಮ ಇರುವ ದಿನವೇಂಬುದು ಒಂದು ವಿಶೇಷ. ಚಕ್ರ ಮತ್ತು ಬೆಂಕಿಯ ಶೋಧ ಹೇಗೆ ವೈಜ್ಞಾನಿಕ ಮುನ್ನಡೆಯಲ್ಲಿ ಸಕ್ರೀಯ ಪಾಲುದಾರಿಕೆಯನ್ನು ವಹಿಸಿಕೊಂಡಿತೋ ಅದರಂತೆ ರಸ್ತೆ ಸಾರಿಗೆಯ ಮಹತ್ವದ ಬೆಳವಣಿಗೆಯೊಂದಿಗೆ ನನ್ನೂರು ಬೆಳೆಯಿತು. ಅದೇ ವರ್ಷ ಸಿಬರ್ಡ ನೌಕಾನೆಲೆ ಶಂಕುಸ್ಥಾಪನೆಯಾದುದರ ಫಲ ಭಾವಿಕೇರಿ, ಬೇಲೆಕೇರಿ,ಅವರ್ಸಾ,ಅಮದಳ್ಳಿ ಕಾರವಾರ ಪ್ರದೇಶಗಳಲ್ಲಿ ನಾಗಾಲೋಟದ ಬದಲಾವಣೆ ಆಗುವುದೆಂದು ನಿರೀಕ್ಷಿಸಿದ್ದ ಜನ, ಮೂರು ದಶಕ ಕಳೆದರು ಆಸೆಯ ಕಂಗಳಿಂದ ಭರವಸೆಯ ದೋಣಿಯನ್ನು ಏರುತ್ತಲೆ ಇದ್ದಾರೆ. ಊರು ಬೆಳೆದಂತೆ ಮನುಷ್ಯ-ಮನುಷ್ಯರ ನಡುವಿನ ಪ್ರೀತಿ ಕರುಣೆ, ಮನುಷತ್ವಗಳು ಮರೆಯಾಗಿ, ಸ್ವಾರ್ಥ ಪ್ರಜ್ಞೆ ಎಲ್ಲವನ್ನು ಮೆಟ್ಟಿ ನಿಂತಿತು. ಮನುಷ್ಯ ಆರ್ಥಿಕವಾಗಿ ಬೆಳೆಯುತ್ತಾ ಹೋದಂತೆ ನಿಜವಾದ ಸಂಬಂಧಗಳು ಕಾಲನ ಉರುಳಿಗೆ ಸಿಲುಕಿ ಮಾಯವಾಗಿ ಹಣವಂತರ ಹೊಸ ಸಂಬಂಧ ಸೃಷ್ಟಿ ಆಗುತ್ತಾ ಸಾಗಿತು. ವ್ಯಕ್ತಿ ತನ್ನ ಬಂದುಭಾಂದವರಲ್ಲಿ ತೋರುವ ಈ ಗುಣವನ್ನು ಪ್ರಕೃತಿಯ ಮೇಲು ಚಲಾಯಿಸುತ್ತಿದ್ದಾನೆ. ಅದರ ಫಲವಾಗಿಯೇ ಇರಬೇಕು ನಮ್ಮ ಬಾಲ್ಯದ ನೆನಪುಗಳ ಮೆಲುಕು ಹಾಕಿದರೆ ಅವ್ಯಾವಗಳು ನಮಗೆ ಕಾಣಿಸುವುದೇ ಇಲ್ಲ, ಹಾಗಿದ್ದರೇ ಎಲ್ಲಿ ಮರೆಯಾದವು….?
ಬಾಲ್ಯದಲ್ಲಿ ಮನೆಯ ಹತ್ತಿರವಿದ್ದ ದೊಡ್ಡದಾದ ಬಿಳಿದಾಸವಾಳ ಗಿಡದ ಕೊಂಬೆಗಳಿಗೆ ಕಟ್ಟಿದ ಗುಬ್ಬಿಗೂಡಿನಲ್ಲಿರುವ ಮೊಟ್ಟೆಗಳನ್ನು ಏಣಿಸಿಯೇ ನಾವು ಅಂಕಿಗಳನ್ನು ಲೆಕ್ಕ ಮಾಡುವುದನ್ನು ಕಲಿತದದ್ದು ಎಂದೆನಿಸುವಷ್ಟು ಸಾರಿ ಮೊಟ್ಟೆಗಳನ್ನು ಲೆಕ್ಕಮಾಡುತ್ತಿದ್ದೆವು, ಅದಕ್ಕೆ ಕಾವಲು ಕಾಯುವರು ಒಬ್ಬರು, ಅಮ್ಮ ಗುಬ್ಬಿ ಚಿಂವ್ ಚಿಂವ್ ಎಂದು ಹೊರಗೆ ಹೋಯಿತೆಂದು ಸುದ್ದಿ ಮುಟ್ಟಿಸುವಷ್ಟರಲ್ಲಿ ಮಕ್ಕಳ ಸಂಘದ ಸರ್ವ ಸದಸ್ಯರು ಹಾಜರ್!. ನಮ್ಮ ಸಹಪಾಠಿಯಂತೆ ಅಜ್ಜನ ತಿಥಿಯಲ್ಲಿ ವಿಶೇಷ ಅತಿಥಿಯಾದ ಕಾಗೆಯು ನಮ್ಮ ಹಿಂದೆ ದಾವಿಸಿ ಬರುವುದು., ಅದರ ದಿಕ್ಕು ತಪ್ಪಿಸಲು ಪುನಃ ಮಣ್ಣಿನಾಟ ಆಡಲು ಕುಳಿತರೆಂದರೆ, ಅಮ್ಮನ ಅಡುಗೆ ಮನೆಯಲ್ಲಿ ತಯಾರಾಗುವ ಪ್ರಮುಖ ಖಾದ್ಯಗಳ ಜೊತೆಗೆ ಬಂಡಿಹಬ್ಬದಲ್ಲಿ ತಯಾರಿಸಲಾಗುವ ಅಕ್ಕಿರೊಟ್ಟಿ, ಕೋಳಿ ಸಾರು, ವಡೆ ಎಲ್ಲ ರೆಡಿ. ಅಂಗಡಿಯಾಟ, ಜಾತ್ರೆ ಯಾಟ, ಅಪ್ಪಾಲೆ ತಿಪ್ಪಾಲೆ,ಮನೆಯಾಟ,ಹಕ್ಕಿಗೂಡಿನಾಟ, ಕಣ್ಣಮುಚ್ಚೆ ಗಾಡೆಗುಡೆ….,
ಮೊನ್ನೆ ಮನೆಗೆ ಹೋದಾಗ ಪಾಪುಗೆ ಗುಬ್ಬಚ್ಚಿ ತೊರಿಸಬೇಕೆಂದು ಎಷ್ಟೇ ಹೂಡುಕಾಡಿದರು ಸಿಗಲಿಲ್ಲ,ಊರಲ್ಲಿ ಗದ್ದೆ ,ಪೈರುಗಳೇ ಇಲ್ಲದ ಮೇಲೆ ಗುಬ್ಬಚ್ಚಿ ಕಾಣಿಸುವುದಾದರು ಹೇಗೆ ನೀವೆ ಹೇಳಿ..?, ಹಾಗೇ ಮುಂದುವರೆದು ಕೆರೆದಂಡೆಯಲ್ಲಿರುವ ಕಮಲದ ಹೂವು, ಬೆಣದ ಬಳಿಯಿರುವ ಕಾಡಿನ ಹಣ್ಣುಗಳನ್ನು ಹುಡುಕಿಕೊಂಡು ಮಕ್ಕಳ ಸಮೇತ ಚಾರಣ ಹೊರಟರೆ ನಿರಾಸೆಯೆ ಕಾದಿತ್ತು, ಬಾಲ್ಯದಲ್ಲಿ ನಮಗೆ ಮುದ ನೀಡುತಿದ್ದ ವಸ್ತುಗಳ್ಯಾವುದು ನಮಗೆ ದೊರೆಯಲೇ ಇಲ್ಲ. ದೊರೆತರು ಅಲ್ಪ ಸ್ವಲ್ಪವಷ್ಟೇ. ಮೊದಲೆಲ್ಲ ಚಳಿಗಾಲ ಬಂತೆಂದರೆ ಮನೆಬಾಗಿಲಿಗೆ ತರಕಾರಿ ಬರು ಸಲುವಾಗಿ, ಅನ್ನಕ್ಕೊಂದು ಸಾರ ಇಲ್ಲಾಂತ ಹೇಳುದ ತಪ್ಪತಿತ್ತ, ಬೆಳಗಾಗತಿದ್ದಂಗೆ ಬಡಗೇರಿ, ಒಕ್ಕಲಕೇರಿ ಹೆಂಗಸರ ಪಂಗಡನೇ ಬಸಲಿ,ಹರಗಿ, ಬದನಿಕಾಯಿ, ಮೂಲಂಗಿ…… ಎಲ್ಲ ತಕಬರತಿದ್ರ ಈಗ ಅವರಿಗೇಲ್ಲ ಏನ ರೋಗ ಬಂದಿದ್ದ ಅಂತ. ಬೈಯಕೊಳ್ಳೊರೆ ಜಾಸ್ತಿ ಅದರಲ್ಲಿ ನಮ್ಮಮ್ಮ, ದೊಡ್ಡಮ್ಮ ನು ಹೊರತಾಗಿಲ್ಲ.
ಮೊದಲೆಲ್ಲ ಮನೆ ಮನೆಯ ಹೆಂಗಸರು, ಮಕ್ಕಳಾದಿಯಾಗಿ ಕಡಲತೀರಕ್ಕೆ ಕೊಡ, ಚೀಲಗಳನ್ನು ಹಿಡಿದು ಸಮುದ್ರದ ಭರತ,ಇಳಿತವನ್ನು ನೋಡಿ ಹೊರಡುತ್ತಿದ್ದರು. ಭೋರ್ಗರೆಯುತ್ತ ಬರುತ್ತಿದ್ದ ತೆರೆಗಳು ಚಿಪ್ಪೆಕಲ್ಲು (ಮೃದ್ವಂಗಿ) ರಾಶಿ ರಾಶಿಯಾಗಿ ತಂದು ತೀರಕ್ಕೆ ಎಸೆಯುತ್ತಿದ್ದಂತೆ ಮಕ್ಕಳೆಲ್ಲ ಅದನ್ನು ಆಯ್ದುಕೊಳ್ಳವುದರಲ್ಲಿ ಮಗ್ನರಾಗಿ ಬಿಡುತ್ತಿದ್ದರು, ತೀರದ ಮರಣದಂಡೆಯಲ್ಲಿ ಮರಳೊಳಗೆ ಹುಗಿದಿದ್ದು ಪಿಟ್….ಪಿಟ್…. ಎನ್ನುತ್ತಾ ತಾನಿರುವ ನೆಲೆಯನ್ನು ತಿಳಿಸುವ ಚಿಪ್ಪೆಕಲ್ಲನ್ನು ಆಯ್ದುಕೊಳ್ಳುವುದು ಹೆಂಗಳೆಯರ ಕಾರ್ಯ. ಚಿಪ್ಪೆಕಲ್ಲನ್ನು ರಾಶಿ ರಾಶಿ ತುಂಬಿಕೊಂಡು ಮನೆಗೆ ಬಂದ ಮೇಲೆ, ಅದನ್ನು ಬಿಸಿನೀರಿಗೆ ಹಾಕಿ, ಆದಿನಕ್ಕೆ ಎಷ್ಟು ಬೇಕೋ ಅದನ್ನು ಬಳಸಿ ಉಳಿದದನ್ನು ಮಳೆಗಾಲಕ್ಕೆಂದು ಒಣಗಿಸಿಡುವರು. ಚಿಪ್ಪೆಕಲ್ಲನ್ನು ತರುವುದು ಹೆಂಗಳೆಯರ ಕಾರ್ಯವಾದರೆ, ಸಮುದ್ರ ಮದ್ಯದ ಬಂಡೆಯಲ್ಲಿ ವಾಸ್ತವ್ಯ ಹೂಡಿಕೊಂಡಿರುವ ನಿಲೇಕಲ್ಲನ್ನು ತರುವುದು ಮನೆಯ ಯಜಮಾನನ ಕೆಲಸ. ಅಂದಿನ ದಿನಗಳ ವಿಶೇಷತೆಯನ್ನು ಹೇಳುತ್ತ ಹೋದರೆ ಅದರ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ನೆನಪಿನ ಬುತ್ತಿಯೊಳಗಿನ ಕೆಲವು ತುಣುಕಗಳು, ಈಗ ನೆನಪು ಮಾತ್ರ, ಯಾಕೆ ಈ ರಿತೀಯ ಬದಲಾವಣೆ.? ನಮ್ಮೊಳಗೆ ನಮ್ಮಂತೆ ಇದ್ದ ಅವುಗಳೆಲ್ಲವು ಎಲ್ಲಿ ಮರೆಯಾದವು, ನೀವೇ ಹೇಳಿ!
– ರೇಷ್ಮಾ ಉಮೇಶ ಭಟ್ಕಳ
ಕಟ್ು ಸತ್ಯವಾದರು, ಸೊಗಸಾದ ನಿರೂಪಣೆ 🙂
Excellent.
ನೆನಪಿನ ಬುತ್ತಿ ..
ಉತ್ತಮವಾಗಿ ಮುಡಿ ಬಂದಿದೆ .ಬರೆಯುತಿರಿ
ತುಂಬಾ ಸತ್ಯ.. ಚೆನ್ನಾಗಿ ನಿರೂಪಿಸಿದ್ದೀರಿ ರೇಷ್ಮಾ ಅವರೇ! 🙂
ನಿಜ…
ನೆನಪಿನ ಬುತ್ತಿ ಸವಿಯಾಗಿದೆ.
ನೆನಪಿನ ಬುತ್ತಿ ಚೆನ್ನಾಗಿದೆ.ಈ ಹಿಂದೆ ನಾವೆಲ್ಲ ಚಿಕ್ಕವರಿರುವಾಗ ನಮ್ಮ ಮನೆಯ ಮಾಡಿನಲ್ಲಿ ಮತ್ತು ಹಿತ್ತಲಿನಲ್ಲಿರುವ ತೆಂಗಿನಮರಕ್ಕೆ ಗುಬ್ಬಚ್ಚಿಗಳು ಗೂಡುಗಳನ್ನು ಕಟ್ಟುತ್ತಿದ್ದವು.ಆದರೆ ಅವೆಲ್ಲ ಈಗ ಕೇವಲ ನೆನಪು ಮಾತ್ರ…