ಭಾಷೆ ಮತ್ತು ಸಂವಹನ

Share Button
Jayashreeb

ಜಯಶ್ರೀ.ಬಿ.ಕದ್ರಿ

ಹೈಸ್ಕೂಲಿನ ಎಳೆ ಹುಡುಗಿಯೊಬ್ಬಳು ಹೇಳುತ್ತಿದ್ದಳು. ಅವಳ ಸ್ಕೂಲಿನ ಆಟದ ಬಯಲಿನಲ್ಲಿ ತುಳುವನ್ನೋ ಕನ್ನಡವನ್ನೋ ಮಾತನಾಡಿದ್ದಕ್ಕೆ ಸರಿಯಾದ ಪನಿಷ್‌ಮೆಂಟ್, ಫೈನ್ ಇದೆ ಎಂದು. ಇಂಗ್ಲಿಷನ್ನು ಪಟಪಟನೆ ಅದೂ ಭಾರತೀಯ ಉಚ್ಛಾರಗಳನ್ನು ತಪ್ಪುತಪ್ಪಾಗಿ ಹೇಳಿದಲ್ಲಿ ಕೇಳುಗರ ಸಂತೋಷಕ್ಕೆ ಎಣೆಯಿಲ್ಲ. ತಮಗೆ ಸರಿಯಾಗಿ ಗೊತ್ತಿದ್ದರೂ ಕಾಗುಣಿತಗಳನ್ನೋ, ಸ್ವರಭಾರವನ್ನೋ ತಪ್ಪುತಪ್ಪಾಗಿ ಹೇಳುವುದೇ ಆಧುನಿಕತೆಯ, ಹೈ ಸೊಸೈಟಿಯ ಲಕ್ಷಣ ಇರಬೇಕು.

ಬಹುಭಾಷೆಯ, ಬಹು ಸಂಸ್ಕೃತಿಯ ಈ ದೇಶದಲ್ಲಿ ನಮ್ಮದೇ ಭಾಷೆಗಳನ್ನು ಮಾತನಾಡಲು ಹಿಂಜರಿಯುವುದಿದೆಯಲ್ಲ ಅದರಷ್ಟು ನೋವಿನ ವಿಷಯ ಇನ್ನೊಂದಲ್ಲ. ಹಾಗೆ ನೋಡಿದರೆ ಭಾಷೆ ಎಂದರೆ ಏನು? ಅದು ಶಬ್ದಗಳ ನಿರ್ದಿಷ್ಟ ವಿಧಾನದ ಜೊಡಣೆ. ಒಂದಿಡೀ ಸಮುದಾಯದ ಆಚಾರ ವಿಚಾರ, ಅನನ್ಯತೆ ಅದರಲ್ಲಿ ಅಡಗಿದೆ. ಭಾ‌ಷೆ ಗೊತ್ತಿರುವವರಿಗೆ ಅದು ಸಂವಹನ ಮಾಧ್ಯಮ, ಅರಿಯದವರಿಗೆ ಅದು ಶಬ್ಧ ಜಲ.

language

ನಿಜವಾಗಿಯಾದರೆ ಅನೇಕ ಭಾಷೆಗಳು ಗೊತ್ತಿರುವ ವಿಚಾರಕ್ಕೆ ನಾವು ಹೆಮ್ಮೆ ಪಡಬೇಕು. ತಮಾಷೆ ಎಂದರೆ ಇಂಗ್ಲೀಷ್ ಕಲಿಕೆಯಲ್ಲಿ ದ್ವಿಭಾಷೆಯಿಂದಾಗಿ ಆಗುವ ತೊಂದರೆಗಳ ಬಗ್ಗೆಯೇ ಶಿಕ್ಷಕ ತರಬೇತಿಯಲ್ಲಿ ಅಧ್ಯಾಯಗಳಿರುತ್ತವೆ. ಒಂದು ಭಾಷೆಯ ಎದುರು ಇಡೀ ಜಗತ್ತಿನ ಬಹುತೇಕ ರಾಷ್ಟ್ರಗಳು ಮಂಡಿಯೂರಿ ಕುಳಿತಿರುವುದು ಒಂದು ರೀತಿಯ ಅಂತರಾಷ್ಟ್ರೀಯ ಸಮಸ್ಯೆಯೇ.

ಭಾಷೆಗಿರುವ ಪರಿಮಿತಿ ಮತ್ತು ಸಾಧ್ಯತೆಗಳು ಕುತೂಹಲದ ವಿಷಯ.ಹಾಗೆ ನೋಡುವುದಿದ್ದರೆ ಒಂದೇ ವಾಕ್ಯ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಭಾವಗಳನ್ನು ಸ್ಫುರಿಸುತ್ತದೆ. ಉದಾಹರಣೆಗೆ ‘ಚೆನ್ನಾಗಿದ್ದೀರಾ’ ಎನ್ನುವ ಶಬ್ದ.

ಮೂಲಭೂತವಾಗಿ ಭಾಷೆ ಇರುವುದು ಸಂವಹನಕ್ಕೆ. ಭಾಷೆಯ ಶುದ್ಧತೆ ಉಳಿಯಬೇಕು, ಬೇರೆ ಭಾಷೆಗಳ ಪ್ರಭಾವಕ್ಕೆ ಒಳಗಾಗಬಾರದು ಎಂದೆಲ್ಲ ಕಟ್ಟುನಿಟ್ಟಾದ ನಿಯಮಗಳನ್ನು ಹಾಕಿಕೊಂಡರೆ ಆ ಭಾಷೆ ಅಳಿಯುವ ಸಾಧ್ಯತರ ಕೂಡ ಇದೆ. ಮನುಷ್ಯ ನಾಗರಿಕತೆಯಂತೆ ಭಾಷೆ ಕೂಡ ವಿಕಾಸವಾಗುತ್ತ ಹೋಗಬೇಕು. ಹಾಗೆ ನೋಡಿದರೆ ಆಂಗ್ಲ ಭಾಷೆ ಈ ರೀತಿ ಪ್ರಭಾವ ಶಾಲಿಯಾಗಿರುವುದು ಅದು ಜಗತ್ತಿನ ಎಲ್ಲ ಭಾಷೆಗಳ ಸತ್ವವನ್ನು ಹೀರಿಕೊಂಡು ಬೆಳೆಯುವುದರಿಂದ, ಕಾಲಕ್ಕನುಗುಣವಾಗಿ ಸಾಹಿತ್ಯವನ್ನು ಬೆಳೆಸಿಕೊಂಡಿರುವುದರಿಂದ ಸಲ್ಮಾನ್ ರಶ್ದಿ Chutnification of English ಎಂದಿರುವುದು ಇದನ್ನೇ.

Communcationಭಾಷೆಯಲ್ಲಿ ಅಭೂತಪೂರ್ವವಾದ ಬದಲಾವಣೆಗೆ ಕಾರಣವಾಗಿರುವುದು ಮೊಬೈಲ್, ಇಂಟರ್ನೆಟ್ ಬಳಕೆ. ಇದೀಗ ಇಮೈಲ್ , ಮೊಬೈಲ್ ಟೆಕ್ಸ್ಟಿಂಗ್‌ನ ಜಮಾನಾ. ಉದ್ದುದ್ದ ವಾಕ್ಯಗಳನ್ನು ಟೈಪಿಸುವ ಅಥವಾ ಓದುವ ತಾಳ್ಮೆ ಈಗ ಹೆಚ್ಚಿನವರಿಗೆ ಇಲ್ಲದ ಕಾರಣ ಸಂವಹನವೇ ಇಲ್ಲಿ ಮುಖ್ಯ. ಆಶ್ಚರ್ಯಕರವಾಗಿ ಈ ರೀತಿಯ ಚಿಕ್ಕ ವಾಕ್ಯಗಳಲ್ಲೂ ಸೊಗಸಾದ ಭಾಷಾ ವೈವಿಧ್ಯ, ಅರ್ಥಸ್ಫುರಣೆ ಸಾಧ್ಯವಿದೆ. ಅಕ್ಷರಗಳ ಕ್ಲಿಪ್ಪಿಂಗ್, ಡಿಸೈನ್, ಸ್ಟೈಲಿಗಳು, ಶಬ್ಧಗಳ ನಡುವೆ ವಿಶಿಷ್ಟ ಅರ್ಥಕೊಡುವ ಡಾಟ್‌ಗಳು ಹೀಗೆ.

ಭಾಷೆಯ ಬಳಕೆಯ ಸಾಧ್ಯತೆಗಳು ಅಪಾರ. ಅರ್ಥ , ಅನರ್ಥ, ಅಪಾರ್ಥಗಳನ್ನೆಲ್ಲ ಹುಟ್ಟುಹಾಕುವ, ಈ ರೀತಿ ವಟವಟನೆ ಮಾತನಾಡುವುದಕ್ಕಿಂತ ತೆಪ್ಪಗಿದ್ದರೇನೇ ಚೆನ್ನಾಗಿತ್ತೇನೋ ಅಂದುಕೊಳ್ಳುತ್ತಲೇ ಮತ್ತೆ ಮಾತನಾಡುವ, ತಮ್ಮ ವಾಚಾಳಿತನದಿಂದಲೇ ಪ್ರಿಯರಾದವರನ್ನು ಕಳೆದುಕೊಳ್ಳುವ, ಸುಂದರ ಮಾತುಗಾರಿಕೆಯಿಂದ ಸಂದರ್ಭಗಳನ್ನು ತಿಳಿಗೊಳಿಸುವ, ಪ್ರೋತ್ಸಾಹದಾಯಕ ಮಾತುಗಳಿಂದ ಜೀವಚೈತನ್ಯ ತುಂಬುವ, ಒಂದಿಡೀ ಜನಸ್ತೋಮವನ್ನು ಪ್ರಭಾವಿಸುವ ಹೀಗೆ ಮಾತು ಮೌನ , ಸಂವಹನ ಎಲ್ಲವೂ ಭಾಷೆಯ, ನುಡಿಯ ಶಕ್ತಿಯನ್ನವಲಂಬಿಸಿದೆ.

 

– ಜಯಶ್ರೀ.ಬಿ.ಕದ್ರಿ

 

10 Responses

  1. Shruthi Sharma says:

    ತುಂಬಾ ಚೆನ್ನಾಗಿ ಬರೆದಿದ್ದೀರಿ.. 🙂

  2. Padmini Jain S Karkala · says:

    ಇಂಗ್ಲಿಷನ್ನು ಪಟಪಟನೆ ಅದೂ ಭಾರತೀಯ ಉಚ್ಚಾರಗಳನ್ನು ತಪ್ಪು ತಪ್ಪಾಗಿ ಹೇಳಿದರೆ…….. ಎಣೆಯಿಲ್ಲ…ಈ ಗೆರೆ ಅರ್ಥ ಆಗ್ಲಿಲ್ಲ ಹಲವು ಬಾರಿ ಓದಿದರೂ.

  3. Jayashree B Kadri says:

    Dear Padmini, some people, even though they perfectly know the native tongue, pronounce it in a stylised, accented manner and behave as though they have come from another planet by deliberately pronouncing local words wrong. For example , stressing the first letter of the word”kannada’, saying ‘Aluva’ rather than Alva, mispronouncing the names of places etc. Some people think it to be a proof of stylish English. May be I was slightly cynical while applying it to all the people, which is not the case.

  4. Hema says:

    ನಿಜ. ನನಗೆ ಕೆಲವರು ‘ಕೆನಾಡಾ(ಕನ್ನಡ)’ ಬರೆಯಲು ಗೊತ್ತೇ ಎಂದು ಕೇಳಿದವರಿದ್ದಾರೆ. ಉತ್ತಮ ಬರಹ.

  5. Srividya says:

    ತಮ್ಮ ಬರಹಗಳಲ್ಲೇ ಸಾಕಷ್ಟು ಆಂಗ್ಲ ಭಾಷೆಯನ್ನು ಧಾರಾಳವಾಗಿ ಉಪಯೋಗಿಸಿದ್ದೀರಾ ಜಯಶ್ರೀ ಅವರೇ.ಉದಾಹರಣೆಗೆ ಎರಡನೇ ವಾಕ್ಯವನ್ನು ನೋಡಿ.
    ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ,ಆ ಭಾಷೆಯಲ್ಲೇ ಸಂಭಾಷಣೆ ನಡೆಯಲಿ, ಆ ಮೂಲಕ ವಿಧ್ಯಾರ್ಥಿಗಳು ತಮ್ಮ ಆಂಗ್ಲ ಭಾಷಾ ಪ್ರೌಡಿಮೆ ಹೆಚ್ಚಿಸಲಿ ಎಂದು ಕೆಲವು ನಿಯಗಳನ್ನು ರೂಪಿಸಿದ್ದನ್ನು ತಪ್ಪು ಎಂದು ಪರಿಗಣಿಸೋದು ಅಷ್ಟು ಸರಿಯಲ್ಲ.
    ತುಳುವಿನಲ್ಲೇ ಮಾತಾಡಿ ಹಲವರ ಕನ್ನಡ ಉಚ್ಚಾರ ಅಪಭ್ರಂಶ ಆದದ್ದೂ ಇದೆ.ಹಾಗಂತ ಹೇಳಿ ಭಾಷೆಯನ್ನು ನಿರ್ಭನ್ದಿಸಬೇಕೆನ್ದೇನೂ ಅಲ್ಲ.

  6. jayashree b kadri says:

    ಡಿಯರ್ ಶ್ರೀವಿದ್ಯ ಮೇಡಂ, ಇದೊಂದು ಭಾಷೆಯ ಬಗ್ಗೆ ನನ್ನ ಅನಿಸಿಕೆಗಳು ಮಾತ್ರ. ಆಂಗ್ಲ ಬಾಷೆಯ ಅತಿಯಾದ ಅಭಿಮಾನ ನಮ್ಮ ಮಾತೃ ಭಾಷೆಯನ್ನೂ ಕಡೆಗಣಿಸುವ ಮಟ್ಟಿಗೆ ಇರಬಾರದೆಂದು ಕಳಕಳಿ. ಇಂಗ್ಲಿಷ್ ಭಾಷೆಗಿರುವ ಅತಿಯಾದ ಪ್ರಾಧಾನ್ಯತೆಯಿಂದ ದೇಶೀಯ ಭಾಷೆಗಳು ಅಳಿಯುತ್ತಿರುವ ಈ ಸಂದರ್ಭದಲ್ಲಿ ತಮ್ಮ ಭಾಷೆಯ ಸೊಗಡನ್ನು ಮರೆಯಬಾರದೆಂದು ಆಸೆ. ಇನ್ನೊಂದು ವಿಷಯ ಸ್ವತಹ ನಾನು ಆಂಗ್ಲ ಭಾಷೆಯ ಉಪನ್ಯಾಸಕಿ.

  7. Niharika says:

    ಉತ್ತಮ ಬರಹ, ಒಪ್ಪುವಂತಹ ಮಾತು.

  8. Sneha Prasanna says:

    Mam…utthamavsda baraha…

  9. sunkanna.t says:

    ತುಂಬಾ ಚನ್ನಾಗಿದೆ

  10. ಓಬಳೇಶ್ says:

    ಉತ್ತಮ ಬರಹ ಮೇಡಂ …..
    ನಿಜ ನನಗೆ ‘ಮೇಡಂ ಮತ್ತು ಸರ್ ‘ ಎಂಬ ಸಾಮನ್ಯ ಅಥ೯ದಲ್ಲಿ ಬಳಸುವ ಪದಗಳಿಗೆ ಸಂವಾದಿಯಾಗಿ ಯಾವ ಕನ್ನಡ ಪದಗಳನ್ನು ಬಳಸ ಬೇಕೊ ತಿಳಿಯುತ್ತಿಲ್ಲ , ಭಾಷೆ ವಿಕಸನಗೊಳ್ಳಬೇಕಾದರೆ ವಿಶಾಲವಾದ ವ್ಯಾಪ್ತಿಯೊಂದಿಗೆ ನಿರಂತರವಾಗಿ ಬಳಸುತ್ತಿರಬೇಕು,, ಆದರೆ ಬೆಂಗಳೂರಿನ ಕನ್ನಡ ಬಳಕೆಯನ್ನು ನೋಡಿದರೆ ಅಂಗ್ಲ ಮಿಶ್ರಿತವಾದ ಕನ್ನಡ ಹುಲುಸಾಗಿ ಬೆಳೆಯುತ್ತಿದೆ. ಉದಾ: ಮಾನಿ೯ಂಗ್ ಬೇಗ ಎದ್ದು ರೆಡಿಯಾಗಿ ಟಿಫನ್ ಮಾಡಿ ಲಂಚ್ ಗೆ ಬಾಕ್ಸ ತಗೊಂಡು ಹೊಗಬೇಕು..
    ಭಾಷಾದಬ್ಬಾಳಿಕೆಯನ್ನು ಕಠೊವಾಗಿಯೇ ವಿರೊದಿಸಬೇಕು ಎಂಬುದು ನನ್ನ ಅಭಿಪ್ಸೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: