ದಮಯಂತಿ ಪುನರ್‌ಸ್ವಯಂವರ
ಕಥಾ ಸಾರಾಂಶ: ನಳನು ತನ್ನ ತಮ್ಮ ಪುಷ್ಕರನೊಡನೆ ದ್ಯೂತದಲ್ಲಿ ಸೋತು ತನ್ನ ರಾಜ್ಯವನ್ನು ಕಳೆದುಕೊಂಡು ತನ್ನ ಹೆಂಡತಿ ಮಕ್ಕಳೊಡನೆ ಕಾಡಿಗೆ ಹೋಗುವನು. ತನ್ನ ಮಕ್ಕಳನ್ನು ಪುರೋಹಿತರೊಡನೆ ತನ್ನ ಮಾವನ ಮನೆಗೆ ಕಳುಹಿಸುವನು. ಕೊನೆಗೆ ತನ್ನ ಹೆಂಡತಿಯನ್ನೂ ತೊರೆಯುವನು. ನಳನ ಮೇಲೆ ಶನಿಯ ಪ್ರಭಾವದಿಂದ ಹಾಗೂ ಕಾರ್ಕೋಟಕ ಸರ್ಪದಿಂದಾಗಿ ಕುರೂಪಿಯಾಗುವನು. ನಂತರ ತಾನು ನಳ ಮಹರಾಜರಲ್ಲಿ ಕುದುರೆ ಕಾಯುತ್ತಿದ್ದವನಾಗಿಯೂ, ನಳ ಮಹರಾಜರು ದ್ಯೂತದಲ್ಲಿ ಸೋತ ವಿಷಯವನ್ನೂ, ತನ್ನ ಹೆಸರು ಬಾಹುಕನೆಂದೂ, ತನಗೆ ಯಾವುದಾದರೂ ಕೆಲಸ ಕೊಡಬೇಕೆಂದು ಋತುಪರ್ಣ ಮಹರಾಜನಲ್ಲಿ ಕೇಳುವನು. ಅಂತೆಯೇ ಅಲ್ಲಿಯ ಕುದುರೆ ಕಾಯುವ ಕೆಲಸಕ್ಕೆ ಸೇರುವನು. ಒಮ್ಮೆ ಬಾಹುಕನು ಋತುಪರ್ಣನೊಂದಿಗೆ ಬೇಟೆಗೆ ಹೋಗುವನು. ಆಗ ಅವನು ಹಸಿವಿನಿಂದಾಗಿ ಸಾಯುವ ಸ್ಥಿತಿಗೆ ತೆರಳುತ್ತಿದ್ದ ರಾಜನಿಗೆ ತಾನು ಕುದುರೆಗಳಿಗೆಂದು ಮಾಡಿದ್ದ ಹಳಸಿದ ಅನ್ನವನ್ನು ಕೊಡುವನು. ಅದರ ರುಚಿಯನ್ನು ಅನುಭವಿಸಿ ಮೆಚ್ಚಿದ ರಾಜನು ಅವನನ್ನು ತನ್ನ ಅಡಿಗೆ ಭಟ್ಟನನ್ನಾಗಿ ನೇಮಿಸುವನು.
ಇತ್ತ ದಮಯಂತಿಯು ತನ್ನ ಪತಿಯನ್ನು ಹುಡುಕುತ್ತಾ ಕೊನೆಗೆ ತನ್ನ ಚಿಕ್ಕಮ್ಮನ ಅರಮನೆಯನ್ನು ಸೇರಿ ಅಲ್ಲಿ ಯಾರಿಗೂ ತಿಳಿಯದಂತೆ ಕೆಲಸಕ್ಕೆ ಸೇರುವಳು. ದಮಯಂತಿಯ ತಂದೆ ರಾಜ ಭೀಮಕ ತನ್ನ ಮಗಳನ್ನು ಹುಡುಕಿ ತರಬೇಕೆಂದು ತನ್ನ ಮಂತ್ರಿಗೆ ಹೇಳುವನು. ಅವನು ಹುಡುಕುತ್ತಾ ದಮಯಂತಿಯು ಇದ್ದ ಸ್ಥಳಕ್ಕೆ ಬಂದು ದಮಯಂತಿಯ ಚಿಕ್ಕಮ್ಮನಿಗೆ ನಡೆದ ವಿಷಯವನ್ನು ತಿಳಿಸಿ, ದಮಯಂತಿಯನ್ನು ಕರೆದೊಯ್ಯುವನು. ದಮಯಂತಿಯು ತನ್ನ ಪತಿ ದೊರಕುವವರೆಗೆ ತಾನು ಊಟ, ಸ್ನಾನಾದಿಗಳನ್ನು ಮಾಡುವುದಿಲ್ಲವೆಂದು ಹೇಳುತ್ತಾಳೆ. ಅವಳ ತಂದೆಯ ಅಪ್ಪಣೆಯಂತೆ ಮಂತ್ರಿ ನಳನನ್ನು ಹುಡುಕುತ್ತಾ ಕೊನೆಗೆ ಋತುಪರ್ಣನ ಅರಮನೆಗೆ ಬರುವನು. ಅಲ್ಲಿ ಅವನು ರಾಜನೊಂದಿಗೆ ಊಟ ಮಾಡುವನು. ನಂತರ ಅವನು ಹೊರಟ ಮೇಲೆ ಅಲ್ಲಿ ಕಂಡ ಬಾಹುಕನ ಮೇಲೂ, ಅವನ ಅಡಿಗೆಯ ಮೇಲೂ ಅನುಮಾನ ಬಂದು ನಡೆದ ವಿಷಯವನ್ನು ದಮಯಂತಿಯ ತಂದೆಗೆ ತಿಳಿಸುವನು. ನಂತರ ದಮಯಂತಿಯು ತನ್ನ ತಂದೆಗೆ ತನಗೊಂದು ಪುನರ್‌ಸ್ವಯಂವರವನ್ನು ಏರ್ಪಡಿಸಬೇಕೆಂದು, ಎಲ್ಲ ರಾಜರನ್ನು ಆಹ್ವಾನಿಸಬೇಕೆಂದು, ಋತುಪರ್ಣನಿಗೆ ಒಂದು ದಿನದ ಮೊದಲು ಆಹ್ವಾನ ತಲುಪಬೇಕೆಂದು ಹೇಳುವಳು. ಆಹ್ವಾನವನ್ನು ನೋಡಿದ ಋತುಪರ್ಣನು ಅಲ್ಲಿಗೆ ಹೋಗಿ ಸ್ವಯಂವರವನ್ನು ನಿಲ್ಲಿಸಬೇಕೆಂದು ಯೋಚಿಸಿದನು. ಆದರೆ ಅಲ್ಲಿಗೆ ಹೋಗಲು ೧೫ ದಿನಗಳು ಬೇಕಿತ್ತು ಎಂದು ಚಿಂತೆಯಲ್ಲಿದ್ದಾಗ ಬಾಹುಕನು ತಾನು ಒಂದು ದಿನದ ಒಳಗೆ(ಮುಹೂರ್ತದ ಮೊದಲು) ಸ್ವಯಂವರಕ್ಕೆ ಕರೆದೊಯ್ಯುತ್ತೇನೆ ಎಂದು ಹೇಳುತ್ತಾನೆ. ಅಂತೆಯೇ ಹೊರಟ ಋತುಪರ್ಣನು ಬಾಹುಕನ ಪೂರ್ವಸಂಗತಿಗಳನ್ನು ಯೋಚಿಸಿ, ದಾರಿಯಲ್ಲಿ ನಡೆದ ಘಟನೆಗಳನ್ನು ಚಿಂತಿಸಿ ಅನುಮಾನದಿಂದ ದಾರಿಯಲ್ಲಿ ರಥವನ್ನು ನಿಲ್ಲಿಸುವಂತೆ ಬಾಹುಕನಲ್ಲಿ ಹೇಳಿ ಅವನನ್ನು ನಿಜ ಹೇಳಬೇಕೆಂದು ಒತ್ತಾಯಿಸಿದಾಗ ಅವನು ನಳ ಎಂದು ತಿಳಿಯುವನು. ನಂತರ ಅವನು ನಳನಿಗೆ ಶನಿಮಂತ್ರವನ್ನು ಹೇಳಿಕೊಡುವನು. ನಂತರ ಅವರು ಮುಂದೆ ಸಾಗುತ್ತಾ ಪರಸ್ಪರ ಅನೇಕ ವಿದ್ಯೆಗಳ ಬಗ್ಗೆ ಮಾತಾಡುತ್ತಾ ಗೊತ್ತಿಲ್ಲದ ವಿದ್ಯೆಯನ್ನು ಕಲಿತುಕೊಂಡರು. ನಳನು ಶನಿಯ ಪ್ರಭಾವದಿಂದ ವಿಮುಕ್ತಿ ಹೊಂದಿದ್ದರೂ ಸ್ವಯಂವರಕ್ಕೆ ನಳನು ಬಾಹುಕನಾಗಿಯೇ ಹೋದನು. ಆದರೂ ದಮಯಂತಿಯು ಬಾಹುಕನ ನಡವಳಿಕೆಗಳನ್ನು ಅವನು ಮಾಡಿದ ಕಾರ್ಯಗಳನ್ನು ಗಮನಿಸಿ ಹಾಗೂ ಒಂದೇ ರಾತ್ರಿಯಲ್ಲಿ ಅಯೋಧ್ಯೆಯಿಂದ ಬಂದದ್ದನ್ನು ಕಂಡು ದಮಯಂತಿ ನಳನನ್ನು ಗುರುತಿಸಿ ನಂತರ ಅವರಿಬ್ಬರೂ ಒಂದಾದರು. ನಳನು ಋತುಪರ್ಣನಿಂದ ದ್ಯೂತದ ವಿದ್ಯೆಯನ್ನು ಕಲಿತನು. ನಂತರ ಅವನು ತನ್ನ ರಾಜ್ಯಕ್ಕೆ ಹಿಂತಿರುಗಿ ತನ್ನ ತಮ್ಮನನ್ನು ಸೋಲಿಸಿ ನಂತರ ಅವರು ಎಲ್ಲರೂ ಒಂದಾಗಿ ಸುಖದಿಂದ ಬಾಳಿದರು.
೨೫-೮-೨೦೧೪ರಂದು ನಿಡ್ಲೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ಈ ಆಟವನ್ನು ಮೈಸೂರಿನ ಶಂಕರಮಠದಲ್ಲಿ ಪ್ರಸುತಪಡಿಸಿದ್ದರು.
ಋತುಪರ್ಣ ೧ – ಅಮ್ಮುಂಜೆ ಮೋಹನ್ ಕುಮಾರ್ ಅವರು ಚೆನ್ನಾಗಿ ಅಭಿನಯಿಸಿದರು. ಬಾಹುಕನಾಗಿ ಮವ್ವಾರು ಬಾಲಕೃಷ್ಣ ಮಣಿಯಾಣಿ ಅವರ ಮನೋಜ್ಞ ಅಭಿನಯ, ಹಾಗೂ ಅವರ ವೇಷ ಸಭಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ದಮಯಂತಿಯಾಗಿ ಕುಂಬ್ಳೆ ಶ್ರೀಧರ ರಾವ್. ಅವರ ಪಾತ್ರಕ್ಕೊಂದು ತೂಕವಿತ್ತು. ಅವರು ಎಷ್ಟೊ ವರ್ಷಗಳ ತರುವಾಯ ದಮಯಂತಿಯ ಪಾತ್ರ ನಿರ್ವಹಿಸಿದ್ದರು. ನಳನ ಕುಲ ಪುರೋಹಿತನಾಗಿ ರಮೇಶಗೌಡ ಬೆಳಾಲು, ಭೀಮಕನಾಗಿ ಪದ್ಮನಾಭ ಶೆಟ್ಟಿ, ಮಂತ್ರಿ – ವಸಂತಗೌಡ, ದಮಯಂತಿಯ ಚಿಕ್ಕಮ್ಮ – ಪುತ್ತೂರು ಗಂಗಾಧರ, ಋತುಪರ್ಣ ೨ -ನಿಡ್ಲೆ ಗೋವಿಂದ ಭಟ್, ನಳ – ಅರಳ ಗಣೇಶ ಶೆಟ್ಟಿ, ನಳನ ಮಕ್ಕಳು – ಕಾರ್ತೀಕ, ಗೌತಮ, ಪುಷ್ಕರ – ನವೀನ ಶೆಟ್ಟಿ, ಪುಷ್ಕರನ ಮಂತ್ರಿಗಳು – ಕುಸೋಮೋದರ, ಶರತ್‌ಶೆಟ್ಟಿ ತೀರ್ಥಳ್ಳಿ , ಶನಿ – ಶಿವಪ್ರಸಾದ ಭಟ್ ಇವರೆಲ್ಲರ ಅಭಿನಯದಿಂದ ಆಟ ಯಶಸ್ವಿಯಾಗಿ ನಡೆಯಿತು. ಭಾಗವತ – ರವಿಚಂದ್ರ ಕನ್ನಡಿಕಟ್ಟೆ ಸುಶ್ರ್ಯಾವ್ಯವಾಗಿ ಹಾಡಿ ಆಟದ ಸೊಬಗನ್ನು ಹೆಚ್ಚಿಸಿದರು. ಚೆಂಡೆ – ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮದ್ದಳೆ – ಪಿ.ಟಿ.ಜಯರಾಮಭಟ್ ಪದ್ಯಾಣ. ಸಹಕರಿಸಿದರು.
— ಅಕ್ಷಯಕೃಷ್ಣ
(Originally Published on : 16th Sep)