ಒಬ್ಬ ಗುರುವಿನ ಆಶ್ರಮದಲ್ಲಿ ಗುರುಶಿಷ್ಯರ ಸಂಭಾಷಣೆ ನಡೆದಿರುತ್ತದೆ. ಶಿಷ್ಯನು “ಗುರುಗಳೇ, ದೇಹ ನಶ್ವರವಾದರೂ ಶಾಶ್ವತವಾದ ಆತ್ಮನು ಹೇಗೆ ಅದರಲ್ಲಿ ಹೇಗೆ ಇರಲು ಸಾಧ್ಯ?”
ಗುರುಗಳು ಬಟ್ಟಲಲ್ಲಿ ಹಾಲನ್ನಿಟ್ಟು “ಇದು ಏನು?” ಎಂದರು.
“ಗುರುಗಳೇ ಇದು ಹಸುವಿನ ಹಾಲು”
“ಇದನ್ನು ಹಾಗೇ ಇಟ್ಟರೆ ನಾಳೆಗೆ ಏನಾಗುತ್ತದೆ?”
“ಇದು ಹಾಳಾಗುತ್ತದೆ”
“ಇದನ್ನು ಚೆನ್ನಾಗಿ ಕಾಯಿಸಿ ಆರಿಸಿ ಕೆಲವು ತೊಟ್ಟು ಹುಳಿ ಹಿಂಡಿದರೆ ಏನಾಗುತ್ತದೆ”
“ನಾಳೆಗೆ ಹೆಪ್ಪುಕಟ್ಟಿ ಮೊಸರಾಗುತ್ತದೆ”
“ಅದನ್ನು ಹಾಗೇ ಇಟ್ಟರೆ ಏನಾಗುತ್ತದೆ?”
“ಅದೂ ಹುಳಿ ಹಿಡಿದು ಹಾಳಾಗುತ್ತದೆ”
“ಹಾಗೆ ಮಾಡದೇ ಕಡೆಗೋಲಿನಿಂದ ಕಡೆದರೆ ಏನು ಬರುತ್ತದೆ?”
“ಬೆನ್ನೆ ಕರಣೆಗಟ್ಟುತ್ತದೆ”
“ ಬೆಣ್ಣೆಯನ್ನು ಹಾಗೇ ಇಟ್ಟರೆ ಏನಾಗುತ್ತದೆ?”
“ಅದೂ ಎರಡು ಮೂರು ದಿನಗಳಲ್ಲಿ ಹಾಳಾಗುತ್ತದೆ. ವಾಸನೆ ಬರುತ್ತದೆ”
“ಹಾಗೆ ಬಿಡದೆ ಅದನ್ನು ಹದವಾಗಿ ಕಾಯಿಸಿದರೆ ಏನು ಬರುತ್ತದೆ?”
“ಸುವಾಸನಾಭರಿತವಾದ ತುಪ್ಪ ಬರುತ್ತದೆ”
“ ಅದನ್ನು ಹಲವಾದು ದಿನ ಇಟ್ಟರೂ ಏನೂ ಆಗುವುದಿಲ್ಲ. ಆತ್ಮವೂ ಹಾಗೇ ನಶ್ವರವಾಗಿರುವ ದೇಹದಲ್ಲಿ ಶಾಶ್ವತವಾಗಿರಬೇಕೆಂದರೆ ಅದಕ್ಕೆ ಇಷ್ಟೆಲ್ಲ ಕ್ರಮವನ್ನು ಆಚರಿಸಬೇಕು. ಶರೀರ ಹಾಲು, ಭಗವನ್ನಾಮ ಸಂಕೀರ್ತನೆಯಿಂದ ಅದು ಮೊಸರಾಗುತ್ತದೆ. ಗುರುವೆಂಬ ಕಡೆಗೋಲಿನ ಸಹಾಯದಿಂದ ಮಥಿಸಿದರೆ ಭಗವತ್ಸೇವೆಯಿಂದ ಅದು ಬೆಣ್ಣೆಯಾಗುತ್ತದೆ. ಅಧ್ಯಾತ್ಮ ಸಾಧನೆಯಿಂದ ಅದು ತುಪ್ಪವಾಗಿ ಪರಿವರ್ತನೆ ಹೊಂದುತ್ತದೆ. ಸತ್ಸಂಗ, ಸಚ್ಚಾರಿತ್ರ್ಯ, ಸುಖಸಂಸಾರದ ಶಾಖದಿಂದ ತುಪ್ಪವನ್ನು ಕಾಯಿಸುತ್ತಾ ಸದುಪಯೋಗ ಪಡಿಸಿಕೊಳ್ಳುವವರೇ ಜೀವನ್ಮುಕ್ತರಾಗುವರು. ಅವರೇ ಶ್ರೇ಼ಷ್ಠರು” ಎಂದು ಹೇಳಿದರು.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು


ಉತ್ತಮವಾದ ನೀತಿಯುಳ್ಳ ಕಥೆ
ವಂದನೆಗಳು ಮೇಡಂ
ಚೆನ್ನಾಗಿದೆ ಕಥೆ.
ಧನ್ಯವಾದಗಳು ಗಾಯತ್ರಿ ಮೇಡಂ..
ಪ್ರಕಟಣೆಗಾಗಿ ಸುರಹೊನ್ನೆ ಪತ್ರಿಕೆ ಯ ಸಂಪಾದಕರಿಗೆ ಹೃತ್ಪೂರ್ವಕವಾದ ಧನ್ಯವಾದಗಳು..
ಉತ್ತಮ ಸಂದೇಶ ಹೊತ್ತ ಚಿಕ್ಕ ಚೊಕ್ಕ ಸುಂದರ ಕಥೆಯು ಸೂಕ್ತ ಚಿತ್ರದೊಂದಿಗೆ ರಂಜಿಸಿದೆ ನಾಗರತ್ನ ಮೇಡಂ.