ದೀಕ್ಷಿತರ ಕೃತಿಗಳಲ್ಲಿ ಮಹಾಲಕ್ಷ್ಮಿ
ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಲ್ಲಿ ಶ್ರೀ ಮಹಾಲಕ್ಷ್ಮಿಯ ವರ್ಣನೆ.
ಕರ್ನಾಟಕ ಸಂಗೀತ ಕೃತಿಗಳಲ್ಲಿ ಸಾಮಾನ್ಯವಾಗಿ ವಸ್ತು ದೇವ – ದೇವಿಯರ ವರ್ಣನೆ ಹಾಗೂ ಪ್ರಾರ್ಥನಾ ರೂಪದಲ್ಲಿ ಇರುತ್ತದೆ. ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆನಿಸಿದ್ದ ಶ್ರೀ ಶ್ಯಾಮಾಶಾಸ್ತ್ರಿಗಳು , ಶ್ರೀ ತ್ಯಾಗರಾಜರು ಮತ್ತು ಶ್ರೀ ಮುತ್ತುಸ್ವಾಮಿ ದೀಕ್ಷಿತರು ಹಾಗೂ ಇತರ ವಾಗ್ಗೇಯಕಾರರ ಕೃತಿಗಳಲ್ಲಿ ಈ ರೀತಿಯ ಭಕ್ತಿಯ ನಿವೇದನೆ ಇದೆ. ಶ್ಯಾಮಾ ಶಾಸ್ತ್ರಿಗಳು ತಮ್ಮ ಆರಾಧ್ಯ ದೇವತೆ ಬಂಗಾರು ಕಾಮಾಕ್ಷಿ ಮೇಲೆ ಕೃತಿ ರಚನೆ ಮಾಡಿದರೆ, ತ್ಯಾಗರಾಜರು ತಮ್ಮ ಅಂತರಂಗ ಮೂರುತಿ ಶ್ರೀರಾಮನ ಕುರಿತ ಕೃತಿಗಳನ್ನೇ ಹೆಚ್ಚಾಗಿ ರಚಿಸಿದರು. ಇನ್ನುಳದವರಲ್ಲಿ ಕಿರಿಯವ ರಾದ ದೀಕ್ಷಿತರು ಅದ್ವೈತಿಗಳು . ಇವರು ಕೃತಿ ರಚಿಸದ ದೇವಾನುದೇವತೆಗಳೇ ಇಲ್ಲ. ಶಿವ , ವಿಷ್ಣು, ಗಣಪತಿ, ದೇವಿ , ಸುಬ್ರಹ್ಮಣ್ಯ , ಲಕ್ಷ್ಮಿ ಹೀಗೆ ಒಬ್ಬೊಬ್ಬ ದೇವತೆಗಳ ಮೇಲೂ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಇವರ ಲಕ್ಷ್ಮಿಪರ ಕೃತಿಗಳು ಸುಮಾರು ಒಂಭತ್ತು ಇದೆ. ಕರ್ನಾಟಕ ಸಂಗೀತದ ಇತರ ವಾಗ್ಗೇಯಕಾರರಾದ ಶ್ರೀ ಮುತ್ತಯ್ಯ ಭಾಗವತರು, ಶ್ರೀ ಮೈಸೂರು ವಾಸುದೇವಾಚಾರ್ಯರು, ಶ್ರೀ ಜಯಚಾಮ ರಾಜೇಂದ್ರ ಒಡೆಯರು ಮುಂತಾದವರು ಲಕ್ಷ್ಮೀಪರ ಕೃತಿಗಳನ್ನು ರಚಿಸಿದ್ದರೂ, ಸಂಖ್ಯೆಯ ದೃಷ್ಟಿಯಿಂದಲೂ, ಸಂಗೀತದ ದೃಷ್ಟಿಯಿಂದಲೂ ಹಾಗೂ ಸಾಹಿತ್ಯದ ಪ್ರಗಲ್ಭ ಪಾಂಡಿತ್ಯದ ದೃಷ್ಟಿಯಿಂದಲೂ ನೋಡಿದರೆ ದೀಕ್ಷಿತರ ಕೃತಿಗೆ ದೀಕ್ಷಿತರ ಕೃತಿಗಳೇ ಸಾಟಿ. ದೀಕ್ಷಿತರು ಸಂಸಾರಿಯಾಗಿದ್ದುಕೊಂಡು ಸಂನ್ಯಾಸಿಯಾಗಿದ್ದವರು. ಹಾಗಾಗಿ ಇವರ ಕೃತಿಗಳು ಭಕ್ತಿ-ವೈರಾಗ್ಯಗಳಿಂದ ಸಮ್ಮಿಲಿತವಾಗಿದೆ.
ಅದಕ್ಕೆ ಉದಾಹರಣೆಯೆಂಬಂತೆ ‘ ಒಮ್ಮೆ ದೀಕ್ಷಿತರ ಮಡದಿಗೆ ಧನ – ಕನಕದ ಮೇಲೆ ಮೋಹ ಉಂಟಾಯಿತಂತೆ . ಅವರು ದೀಕ್ಷಿತರನ್ನು ಕುರಿತು. ನೀವು ತಂಜಾವೂರು ಮಹಾರಾಜನನ್ನು ಕುರಿತು ಕೃತಿ ರಚಿಸಿ ಆಸ್ಥಾನದಲ್ಲಿ ಹಾಡಿದರೆ ನಮಗೆ ದುಡ್ಡು ಒಡವೆಗಳನ್ನು ಕೊಡಬಹುದು ‘ ಎಂದು ಸೂಚಿಸಿದರಂತೆ . ಆದರೆ ದೀಕ್ಷಿತರು ಮಹಾ ವಿರಕ್ತರು ಎಂದೂ ನರಸ್ತುತಿ ಮಾಡಿದವರಲ್ಲ. ನಾನು ಆ ರೀತಿ ಎಂದು ಮಾಡುವುದಿಲ್ಲ ನಿನಗೆ ಐಶ್ವರ್ಯ ಬೇಕಾದರೆ ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಮಹಾಲಕ್ಷ್ಮಿಯ ಮೇಲೆ ಲಲಿತಾ ರಾಗದಲ್ಲಿ’ ಹಿರಣ್ಮಯಿಂ ಲಕ್ಷ್ಮೀಂ ಸದಾ ಭಜಾಮಿ ಹೀನ ಮಾನವಾಶ್ರಂii ಂ ತ್ಯಜಾಮಿ ‘ ಎಂಬ ಕೃತಿ ರಚಿಸಿ ಹಾಡಿದರಂತೆ . ಅದೇ ದಿನ ರಾತ್ರಿ ದೀಕ್ಷಿತರ ಮಡದಿ ಕನಸಿನಲ್ಲಿ ಮಹಾಲಕ್ಷ್ಮಿ ಕಾಣಿಸಿಕೊಂಡು ‘ಒಡವೆಗಳು ಸಾಕೇ ಎಂದು ಕೇಳಿದಂತಾಯಿತಂತೆ ‘.ಮರುದಿನ ಬೆಳಿಗ್ಗೆ ‘ನನ್ನನ್ನು ಕ್ಷಮಿಸಿ ನಶ್ವರ ಐಶ್ವರ್ಯವನ್ನು ಅಪೇಕ್ಷಿಸಿದ್ದು ತಪ್ಪು’ ಎಂದು ದೀಕ್ಷಿತರ ಮಡದಿ ಪಶ್ಚಾತ್ತಾಪ ಪಟ್ಟರಂತೆ . ಇದರಿಂದ ಸಂತುಷ್ಟಗೊಂಡ ದೀಕ್ಷಿತರು ಮತ್ತೆ ಮಹಾಲಕ್ಷ್ಮಿಯ ಮೇಲೆ’ ಮಂಗಳ ದೇವತಾಯ ತ್ವಯಾ ಬಹುಮಾನಿ ತೋಹಂ ‘ಎಂದು ಧನ್ಯಾಸಿ ರಾಗದಲ್ಲಿ ಕೃತಿ ರಚಿಸಿ ಹಾಡಿದರೆಂದು ಪ್ರತೀತಿಯಿದೆ.
ಸ್ಥೂಲವಾಗಿ ಎರಡೂ ಕೃತಿಗಳನ್ನೂ ನೋಡಿದರೆ ಸಾಹಿತ್ಯ ಹಾಗೂ ಸಂಗೀತದ ದೃಷ್ಟಿಯಿಂದ ಉತ್ಕೃಷ್ಟವಾದುದೇ ಸರಿ. ದೀಕ್ಷಿತರ ಕೃತಿಗಳ ವಿಶೇಷವೆಂದರೆ ಅವರು ಯಾವ ದೇವ – ದೇವಿಯರ ಮೇಲೆ ಕೃತಿ ರಚಿಸುತ್ತಾರೋ ಆ ಕೃತಿಯಲ್ಲಿ ಆಯಾ ದೇವತೆಗಳಿಗೆ ಸಂಬಂಧಪಟ್ಟ ಎಲ್ಲಾ
ಅಂಶಗಳು ಅಡಕವಾಗಿರುತ್ತದೆ.
ಲಲಿತ ರಾಗದ (ಹಿರಣ್ಮಯಿಂ ಲಕ್ಷ್ಮೀಂ) ಕೃತಿಯಲ್ಲಿ ಸ್ವರ್ಣಮಯಳಾದ ಲಕ್ಷ್ಮಿದೇವಿಯನ್ನು ಸದಾ ಭಜಿಸುತ್ತೇಯೇ ಹೊರತು ಹುಲು ಮಾನವರನ್ನು ಆಶ್ರಯಿಸುವುದಿಲ್ಲ. ನಾಶರಹಿತವಾದ ಸಂಪತ್ತನ್ನು ಅನುಗ್ರಹಿಸುವ , ಕ್ಷೀರಸಾಗರನ ಮಗಳಾದ , ಹರಿವಕ್ಷಸ್ಥಳದಲ್ಲಿ ವಾಸವಾಗಿರುವ, ಭೂತ- ಭವಿಷ್ಯಗಳನ್ನು ತನ್ನ ಲೀಲಾಮಾತ್ರದಿಂದ ನಡೆಸುವ, ಬ್ರಾಹ್ಮಣರಿಂದ ಪೂಜೆಗೊಳ್ಳುವ, ಶೀತಕಿರಣವನ್ನು ಸೂಸುವ ಚಂದ್ರನ ಮುಖಾರವಿಂದವುಳ್ಳ , ಸುಬ್ರಹ್ಮಣ್ಯನ ಮಾವನ ಮಡದಿಯಾದ ಮಹಾಲಕ್ಷ್ಮಿಯನ್ನು ಧ್ಯಾನಿಸುತ್ತೇನೆ ಎಂದರೆ. ಧನ್ಯಾಸಿರಾಗದ ( ಮಂಗಳ ದೇವತಾ ಯಾ ) ಕೃತಿಯಲ್ಲಿ ಮಂಗಳ ದೇವತೆಯು ನನಗೆ ಬಹುಮಾನಿಸಿದಳು . ಭೋಗ – ಭಾಗ್ಯವನ್ನು ಅನುಗ್ರಹಿಸುವ , ಜಂಗಮ ಸ್ಥಾವರ ಲೋಕದ ಸೃಷ್ಟಿ – ಸ್ಥಿತಿ – ಲಯಗಳನ್ನು ನಿಯಂತ್ರಿಸುವ , ಹರಿದ್ರಾ ಕುಂಕುಮ ಸುಶೋಭಿತೆ, ದರಿದ್ರಾದಿ ದು:ಖ ನಿವಾರಿತೆ, ವರದರಾಜ ಗೋಪಾಲ ಹೃದಯ ನಿವಾಸಿತೆ ಮಹಾಲಕ್ಷ್ಮಿಯನ್ನು ನಮಿಸುತ್ತೇನೆ.
ದೀಕ್ಷಿತರು ನಾಗ್ಗೇಯ ಮುದ್ರೆ ( ಅಂಕಿತನಾಮ – ಗುರುಗುಹ) ಮತ್ತು ರಾಗಮುದ್ರೆಯನ್ನು (ರಾಗದ ಹೆಸರು) ಕೃತಿಯಲ್ಲಿ ಚಮತ್ಕಾರವಾಗಿ ಜೋಡಿಸುವುದರಲ್ಲಿ ಸಿದ್ಧಹಸ್ತರು . ಲಲಿತಾರಾಗದ ‘ ಹಿರಣ್ಮಯಿಂ ಲಕ್ಷ್ಮೀಂ ‘ ಎಂಬಕೃತಿಯಲ್ಲಿ ರಾಗಮುದ್ರೆಯು ಕೃತಿಯ ಕೊನೆಗೆ ಗುರುಗುಹ ಮಾತುಲ ಕಾಂತಾಂ ಲಲಿತಾಂ ಎಂದರೆ. ಧನ್ಯಾಸಿ ರಾಗದ ‘ ಮಂಗಳ ದೇವತಾಯಾ ‘ ಕೃತಿಯಲ್ಲಿ ರಾಗಮುದ್ರೆಯು ಸಾಹಿತ್ಯಕ್ಕೆ ನೇರವಾಗಿ ಹೊಂದುವುದು ಅಸಾಧ್ಯವಾದಾಗ ಚಮತ್ಕಾರವಾಗಿ ಮೂರ್ಧನ್ಯಾಶಿವನಿಗ್ರಹಯಾ ಎಂದು ಜಾಣ್ಮೆ ಮೆರೆದಿದ್ದಾರೆ.
ದೀಕ್ಷಿತರ ಸಂಗೀತದಷ್ಟೇ ಸಾಹಿತ್ಯಕ್ಕೂ ಪ್ರಾಮುಖ್ಯತೆ ಕೊಡುತ್ತಾರೆ. ಹಾಗಾಗಿ ದೀಕ್ಷಿತರ ಕೃತಿಗಳಲ್ಲಿ ಆದಿಪ್ರಾಸ , ಅಂತ್ಯಪ್ರಾಸ, ಅಲಂಕಾರಗಳು ಮುಂತಾದ ಪ್ರಯೋಗಗಳನ್ನು ಮಾಡುತ್ತಾರೆ. ಈ ಪ್ರಯೋಗವನ್ನು ಮಹಾಲಕ್ಷ್ಮಿಯನ್ನು ಕುರಿತ ಅವರ ಇನ್ನೊಂದು ಕೃತಿ ಮಾಧವ ಮನೋಹರಿ ರಾಗದ ‘ ಮಹಾಲಕ್ಷ್ಮಿ ಕರುಣಾ ರಸಲಹರಿ ಮಾಮವ ಮಾಧವ ಮನೋಹರಿ ‘ ಕೃತಿಯಲ್ಲಿ ಕಾಣಬಹುದು. ಈ ಕೃತಿಯು ಆದಿ ಪ್ರಾಸಗಳಿಂದಲೂ , ಅಂತ್ಯಪ್ರಾಸಗಳಿಂದಲೂ ಕೂಡಿ ಸಾಹಿತ್ಯ ಮತ್ತು ಸಂಗೀತದ ಉಡುಗೆಯನ್ನು ಉಟ್ಟು ಸರ್ವಾಲಂಕಾರ ಭೂಷಿತವಾಗಿದೆ. ಹೆಚ್ಚು ಪ್ರಚಲಿತದಲ್ಲಿಲ್ಲದ ಈ ಕೃತಿಯಲ್ಲಿ ಮಹಾಲಕ್ಷ್ಮಿಯನ್ನು ದೀಕ್ಷಿತರು ಕರುಣಾರಸ ಲಹರಿ ಎಂದು ಸಂಭೋದಿಸಿದ್ದಾರೆ. ಮಹಾವಿಷ್ಣು ವಕ್ಷಸ್ಠಳ ವಾಸಿನಿ, ಮಹಾದೇವ ಗುರುಗುಹ ಮಿಶ್ವಾಸಿನಿ, ಮಹಾಪಾಪಶಮನಿ ಮಾರಜನನಿ ,ಮಂಗಳ ಪ್ರದಾಯಿನಿ ಎಂದು ಪಲ್ಲವಿ ಮತ್ತು ಅನುಪಲ್ಲವಿ ‘ ಮಹಾ ‘ಎಂಬ ಅಕ್ಷರಗಳಿಂದ ಕೂಡಿ ಆದಿಪ್ರಾಸ ಬರುವಂತೆ ರಚಿಸಿದ್ದಾರೆ. ಚರಣದಲ್ಲಿ ಸುತೇ, ನುತೇ , ಮಹಿತೇ, ಸಹಿತೇ, ಪೂಜಿತೇ, ವಿರಾಜಿತೇ, ನಮಸ್ತೇ ಎಂಬ ಅಕ್ಷರಗಳಿಂದ ಕೂಡಿ ಅಂತ್ಯಪ್ರಾಸದಲ್ಲಿದೆ. ಹಾಗಾಗಿ ಈ ಕೃತಿಯ ಸೊಬಗಿನ ಸಾಹಿತ್ಯವನ್ನು ಲಾವಣ್ಯದ ರಾಗದ ನಡೆಯನ್ನು ಕೇಳಿಯೇ ಆಸ್ವಾದಿಸಬೇಕು.
ಇನ್ನು ಮಂಗಳ ಕೈಶಿಕಾ ಎಂಬ ಬಲು ಅಪರೂಪದ ಪ್ರಾಚೀನ ರಾಗದಲ್ಲಿ ಲಕ್ಷ್ಮೀ ಕೃತಿಯನ್ನು ದೀಕ್ಷಿತರು ರಚಿಸಿದ್ದಾರೆ. ಇದು ಅವರ ಕ್ಷೇತ್ರ ಪರ್ಯಟನಾ ಸಂದರ್ಭದಲ್ಲಿ ಶ್ರೀರಂಗಂ ದೇವಾಲಯದಲ್ಲಿರುವ ಶ್ರೀರಂಗನಾಯಕ ಸ್ವಾಮಿಯ ಪತ್ನಿ ಶ್ರೀರಂಗಧಾಮೇಶ್ವರಿಯ ಕುರಿತ ಸ್ತುತಿಗೀತೆ. ಇಲ್ಲಿ ಪಲ್ಲವಿಯಲ್ಲಿ ‘ ಶ್ರೀ ಭಾರ್ಗವಿ ಭದ್ರಂ ಮೇ ದಿಶತು ಶ್ರೀ ರಂಗಧಾಮೇಶ್ವರಿ ‘ ಎಂದರೆ ಅನುಪಲ್ಲವಿಯಲ್ಲಿ ‘ ಸೌಭಗ್ಯ ಲಕ್ಷ್ಮೀಂ ಸತತಂ ಮಾಮವ ಸಕಲ ಲೋಕ ಜನನಿ ವಿಷ್ಣು ಮೋಹಿನಿ ಎಂದು ನುತಿಸಿದ್ದಾರೆ. ಚರಣದಲ್ಲಿ ಮದನಗುರು ಮಾನಿನಿ , ಮಂಗಳಾ ಕೈಶಿಕಾ ನಿವಾಸಿನಿ, ಪದ್ಮಗಳಂಥಹ ಕಣ್ಣುಗಳುಳ್ಳ ನಳಿನಿ, ಹರಿ ಪ್ರಣಯಿನಿ, ರಂಗನಾಥನ ರಮಣಿ ಎಂದು ಭಜಿಸಿದ್ದಾರೆ. ದೀಕ್ಷಿತರ ಕೃತಿಗಳೆಲ್ಲವೂ ದೇವ – ದೇವಿಯರ ಸ್ತೋತ್ರ ರೂಪಗಳು ಮತು ನಾಮಾವಳಿಗಳಾಗಿವೆ. ಸ್ತೋತ್ರಗಳೆಲ್ಲವೂ ಸಂಸ್ಕೃತ ದಲ್ಲಿರುವುದರಿಂದ ಇವರ ಕೃತಿಗಳೆಲ್ಲವೂ ಸಂಸ್ಕೃದಲ್ಲಿವೆ. ದೀಕ್ಷಿತರಿಗೆ ಸ್ತೋತ್ರಗಳೆಲ್ಲವೂ ಕಂಠಪಾಠಸ್ಥವೆಂದು ಕಾಣುತ್ತದೆ. ಇವರು ತಮ್ಮ ಕೃತಿಗಳಲ್ಲಿ ಲಲಿತಾಸಹಸ್ರನಾಮ, ಲಲಿತಾ ತ್ರಿಶತಿ, ಸೌಂದರ್ಯಲಹರಿ, ಆನಂದ ಲಹರಿ ಮುಂತಾದ ಸ್ತೋತ್ರಗಳನ್ನು ಚಮತ್ಕಾರವಾಗಿ ಜೋಡಿಸಿದ್ದಾರೆ. ಅದರಂತೆ ಅವರಿಗೆ ವೃತದ ಕಥೆಗಳೆಲ್ಲವೂ ಕರಗತವೆಂದೆನಿಸುತ್ತದೆ. ಇದಕ್ಕೆ ಉದಾಹರಣೆಯಾಗಿ ಸತ್ಯನಾರಾಯಣ ಪೂಜಾ ವೃತಕ್ಕೆ ( ಶ್ರೀ ಸತ್ಯನಾರಾಯಣಂ ಉಪಾಸ್ಮಹೇ ಹಂ – ಶಿವಪಂತುವರಾಳಿ ರಾಗ, ಸಂತಾನ ಗೋಪಾಲ ಕೃಷ್ಣ ವೃತಕ್ಕೆ ( ಸಂತಾನ ಗೋಪಾಲಕೃಷ್ಣಂ ಉಪಾಸ್ಮಹೇ – ಕಮಾಸ್ ರಾಗ ) ಸಿದ್ದಿ ವಿನಾಯಕ ವೃತಕ್ಕೆ (ಸಿದ್ಧಿವಿನಾಯಕಂ ಅನಿಶಂ – ಷಣ್ಮಖಪ್ರಿಯ ರಾಗ ) ಹಾಗೂ ವಿಶೇಷವಾಗಿ ವರಲಕ್ಷ್ಮೀ ಪೂಜಾ ವೃತಕ್ಕೂ ಒಂದು ಕೃತಿಯನ್ನು ರಚಿಸಿದ್ದಾರೆ.
ಮಂಗಳರಾಗ ವೆಂದೇ ಪ್ರಸಿದ್ಧವಾದ ಶ್ರೀ ರಾಗದಲ್ಲಿ ಶ್ರೀ ವರ ಮಹಾಲಕ್ಷ್ಮೀ ವೃತಕ್ಕೋಸ್ಕರ ‘ ಶ್ರೀ ವರಲಕ್ಷ್ಮೀ ನಮಸ್ತುಭ್ಯಂ ‘ ಎಂಬ ಕೃತಿಯನ್ನು ರಚಿಸಿದ್ದಾರೆ. ಶ್ರಾವಣ ಪೌರ್ಣಿಮೆಯ ಮೊದಲ ಶುಕ್ರವಾರ ಈ ವೃತವನ್ನು ಆಚರಿಸಬೇಕು. ಚಾರುಮತಿ ಎಂಬ ಸಾದಿsಯೊಬ್ಬಳು ಈ ವೃತವನ್ನು ಮಾಡಿ ಮಹಾಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಒಳಗಾದಳು ಎಂದು ವೃತದ ಕಥೆ ಹಾಗೂ ನಿಯಮಗಳನ್ನು ಕೃತಿಯಲ್ಲಿ ಸ್ಥೂಲವಾಗಿ ತಿಳಿಸಿರುವುದು ದೀಕ್ಷಿತರ ಜಾಣ್ಮೆ. ದೀಕ್ಷಿತರ ಕೃತಿಗಳಲ್ಲಿ ಏನಾದರೊಂದು ವಿಶೇಷವಿದ್ದೇ ಇರುತ್ತದೆ. ಈ ಕೃತಿಯಲ್ಲಿ ಗೋಪುಚ್ಚ ಯತಿಯನ್ನು ಬಳಸಿ ಸಾಹಿತ್ಯ ರಚಿಸಿದ್ದಾರೆ. ಗೋಪುಚ್ಚ ಯತಿಯಲ್ಲಿ ಅಕ್ಷರಗಳು ಕ್ರಮವಾಗಿ ಏಕಪ್ರಕಾರವಾಗಿ ಕಡಿಮೆಯಾಗುತ್ತಾ ಬಂದು ಸಾಹಿತ್ಯದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆ ಸಾಹಿತ್ಯ ಭಾಗ ಇಂತಿವೆ ಸಾರಸಪದೇ, ರಸಪದೇ, ಸಪದೇ, ಪದೇ ಎಂದು ಸೊಗಸಾಗಿ ರಚಿಸಿದ್ದಾರೆ.
ಇವಿಷ್ಟಲ್ಲದೆ ಸೌರಾಷ್ಟ್ರರಾಗದಲ್ಲಿ’ ವರಲಕ್ಷ್ಮೀಂ ಭಜರೇ ರೇ ‘ ಹೇಮಾವತಿ ರಾಗದಲ್ಲಿ ‘ ಹರಿಯುವತೀಂ ಹೈಮವತೀಂ ‘ ಹಾಗೂ ಮಾರ್ಗದೇಶೀರಾಗದಲ್ಲಿ ‘ಮಂಗಳ ದೇವತೇ ಪರದೇವತೇ ‘ ಎಂಬ ಮಹಾಲಕ್ಷ್ಮೀ ಪರ ಕೃತಿಯನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಭಕ್ತಿ ಯ ಗಾಢ ಪರವಶತೆಯಿದ್ದು ಇದರಿಂದ ಕೇಳುಗರ ಹೃದಯದಲ್ಲಿ ಅವ್ಯಕ್ತ ಆನಂದವನ್ನುಂಟು ಮಾಡುವ ಶಕ್ತಿಯಿದೆ. ಇಂದು ಭೌತಿಕವಾಗಿ ದೀಕ್ಷಿತರು ನಮ್ಮೊಂದಿಗಿಲ್ಲದಿದ್ದರೂ ಅವರ ಕೃತಿಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ. ಅವರ ಕೃತಿಗಳು ಎಂದಿನ ತನಕ ಈ ಭೂಮಿಯಲ್ಲಿ ಇರುತ್ತದೋ ಅಂದಿನ ತನಕ ದೀಕ್ಷಿತರು ನಮ್ಮೊಂದಿಗೆ ಶಾಶ್ವತವಾಗಿರುತ್ತಾರೆ ಎಂದುಕೊಳ್ಳುತ್ತಾ ಸರ್ವಮಂಗಳ ಕಾರಿಣಿಯಾದ ಮಹಾಲಕ್ಷ್ಮಿಯು ಸಕಲಷ್ಟೈಶ್ವರ್ಯ ವನ್ನು , ಆರೋಗ್ಯವನ್ನು ದಯಪಾಲಿಸಲೆಂದು ಭಕ್ತಿಯಿಂದ ಬೇಡಿಕೊಳ್ಳೋಣ.
ದೀಕ್ಷಿತರು ರಚಿಸಿದ ವರಮಹಾ ಲಕ್ಷ್ಮೀ ವೃತದ ಕೃತಿ ( ಇದನ್ನು ಆಲಿಸಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ):
ರಾಗ : ಶ್ರೀ ; ತಾಳ : ರೂಪಕ ತಾಳ
ಶ್ರೀ ವರಲಕ್ಷ್ಮೀಂ ನಮಸ್ತುಭ್ಯಂ | ವಸುಪ್ರದೇ |
ಶ್ರೀ ಸಾರಸಪದೇ ರಸಪದೇ ಸಪದೇ ಪದೇ ಪದೇ |
ಭಾವಜಜನಕ ಪ್ರಾಣವಲ್ಲಭೆ| ಸುವರ್ಣಭೇ|
ಭಾನುಕೋಟಿ ಸಮಾನಪ್ರಭೆ | ಭಕ್ತ ಸುಲಭೇ |
ಸೇವಕ ಜನ ಪಾಲಿನ್ಯೈ | ಶ್ರಿತಪಂಕಜ ಮಾಲಿನ್ಯೈ|
ಕೇವಲ ಗುಣ ಶಾಲಿನ್ಯೈ | ಕೇಶವ ಹೃತ್ಕೇಲಿನ್ಯೈ|
ಶ್ರಾವಣ ಪೌರ್ಣಮಿ ಪೂರ್ವಾಸ್ತ ಶುಕ್ರವಾರೇ |
ಚಾರುಮತಿ ಪ್ರಭೃತಿಬಿs ಪೂಜಿತಾಕಾರೇ|
ದೇವಾದಿ ಗುರುಗುಹ ಸಮರ್ಪಿತ ಮಣಿಮಯ ಹಾರೇ|
ದೀನಜನ ಸಂರಕ್ಷಣ ನಿಪುಣ ಕನಕಧಾರೇ|
ಭಾವನ ಭೇದ ಚತುರೇ | ಭಾರತಿ ಸನ್ನುತ ವರೇ|
ಕೈವಲ್ಯ ವಿತರಣ ವರೆ | ಕಾಂಕ್ಷಿ ತ ಫಲಪ್ರದಕರೇ |
– ವಿಶ್ವನಾಥ್.ಪಿ.
ದೀಕ್ಷಿತರ ಕೃತಿಗಳನ್ನು ಬಹಳ ವಿಭಿನ್ನ ಹಾಗೂ ಆಳವಾಗಿ ವಿಶ್ಲೇಷಿಸಿದ್ದೀರಿ! ತುಂಬಾ ಅಪರೂಪದ ಮಾಹಿತಿ ಹಾಗೂ ಚೆನ್ನಾದ ಕೃತಿಗಳ ಉಲ್ಲೇಖ! ಇನ್ನೂ ಬರೆಯುತ್ತಿರಿ!
ಧನ್ಯವಾದಗಳು ಶ್ರುತಿಯವರೇ , ನನ್ನ ಬರವಣಿಗೆಯನ್ನು ಓದಿ ಪ್ರೋತ್ಸಾಹಿಸಿದಕ್ಕೆ .
ತುಂಬಾ ಚೆನ್ನಾಗಿದೆ ವಿಶ್ವನಾಥ್. ಭಕ್ತಿಯೂ ಭಾವವೂ ಮಿಳಿತವಾದ ಲೇಖನ.
ಧನ್ಯವಾದಗಳು ಮೇಡಂ