ನೀರೆಯರುಡುವ ಸೀರೆ
ಡಿಸೆಂಬರ್ 21 ರಂದು “ವಿಶ್ವ ಸೀರೆಯ ದಿನ”ವಂತೆ. ಅದು ಯಾವಾಗ ವಿಶ್ವವೆಲ್ಲಾ ಸೀರೆಯನ್ನು ತಮ್ಮದೆಂದುಕೊಂಡರು? ಅದು ನಮ್ಮ, ಭಾರತೀಯರ ಜನ್ಮ ಸಿದ್ಧ ಅಧಿಕಾರವಲ್ಲವೇ? ಇರಲಿ, ಒಳ್ಳೆಯದು, ಚೆನ್ನಾಗಿರುವುದನ್ನು ತಾವೂ ಅಳವಡಿಸಿಕೊಳ್ಳುವುದು ಸಜ್ಜನ ಮನುಷ್ಯನ ಸಹಜ ಧರ್ಮ. ಹಾಗಾಗಿ ನಮ್ಮ ಸೀರೆ ವಿಶ್ವ ಮಾನ್ಯತೆ ಪಡೆದರೆ ನಾವ್ಯಾಕೆ ಸಂಕುಚಿತ ಮನೋಭಾವದಿಂದ ನಮ್ಮದೆಂದು ಮಾತ್ರ ಭಾವಿಸಬೇಕು? ಎಲ್ಲ ನೀರೆಯರ ಮನಮೆಚ್ಚಿದ ಉಡುಪು ಸೀರೆ ಎಂಬ ಭಾವವೇ ಖುಷಿ ನೀಡುತ್ತದೆ ಅಲ್ಲವೆ? ಬರೀ ನೀರೆಯರೇಕೆ, ಪುರುಷರಿಗೂ ಸೀರೆಯುಟ್ಟು ನಲಿದಾಡುವ ನೀರೆಯರೆಂದರೆ ಬಲು ಇಷ್ಟ ಎಂಬುದು ಸರ್ವವೇದ್ಯ.
ನಮಗೇನೋ ಭಾರತೀಯರಿಗೆ 6, 7, 8, 9 ಗಜದ ಉದ್ದನೆಯ ರಂಗು ರಂಗಿನ, ತರತರಹದ ವಿನ್ಯಾಸದಿಂದ ನೇಯ್ದ ಬಟ್ಟೆಯನ್ನು, ಸೀರೆಯನ್ನಾಗಿಸಿ ಆಕರ್ಷಕವಾಗಿ, ಶೃಂಗಾರಮಯವಾಗಿ ಉಡುವ ನೃಪುಣ್ಯತೆ ಪರಂಪರಾನುಗತವಾಗಿ ಕೈಗೂಡಿದೆ, ಹಾಗಾಗಿ ಅದೇನು ಕಷ್ಟವೆಂದೆನಿಸುವುದೇ ಇಲ್ಲ, ಬಲು ಇಷ್ಟವೇ ಹೌದು. ಆದರೆ ನೀವೇ ಊಹಿಸಿಕೊಳ್ಳಿ, ದೇಹದ ಅಳತೆಯನ್ನು ತೆಗೆದುಕೊಂಡು, ಅದರಂತೆ ಉಡುಪುಗಳನ್ನು ಹೊಲಿದು ಕೊಟ್ಟರೂ ʼಅಲ್ಲಿ ಸರಿ ಇಲ್ಲ, ಇಲ್ಲಿ ಸರಿ ಇಲ್ಲ,ʼ ಎಂದು ಗೊಣಗಾಡುವ ಜನರಿಗೆ ಉದ್ದನೆಯ ಬಟ್ಟೆಯನ್ನು ಕಲಾತ್ಮಕವಾಗಿ ಉಡುವುದು ಎಂತಹ ಕೌತುಕಮಯ ವಿಷಯವಲ್ಲವೇ?
ನಾವೇನೋ ಎರಡು ಮೂರು ಪಿನ್ನುಗಳನ್ನು ಬಳಸಿ ಸೀರೆಯುಡುತ್ತೇವಾದರೂ, ನಮ್ಮ ಹಿಂದಿನ ಜನರು, ಅಂದರೆ ಅಮ್ಮ, ಅತ್ತೆ, ಅಜ್ಜಿ ಮುಂತಾದವರು ಯಾವುದೇ ಪಿನ್ನುಗಳು, ಒಳಲಂಗ, ಫಾಲ್ಸುಗಳ ಹಂಗಿಲ್ಲದೆ ಎಷ್ಟು ಚೆಂದದಿಂದ ಭದ್ರವಾಗಿ ಸೀರೆ ಉಡುತ್ತಿದ್ದರು ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ನನ್ನ ಅಮ್ಮ ಅಂತೂ ಏಳು ಗಜದ ಸೀರೆಯನ್ನು ಎರಡು ಸುತ್ತು ಹಾಕಿ ನೆರಿಗೆಗಳನ್ನು ಹಿಡಿದು ಸೀರೆಯಲ್ಲೇ ಬಾಳೇಕಾಯಿಯ ಆಕಾರದ ಗಂಟನ್ನು ಹಾಕಿ ಒಳಗಚ್ಚೆಯ ಸೀರೆಯನ್ನು ಉಡುತ್ತಿದ್ದರು ಎಂದರೆ, ಅವರು ಉಡುವಾಗ ನೋಡುವುದೇ ಒಂದು ಕೌತುಕವಾದರೂ ಕಲಿಯಲಾಗಲೇ ಇಲ್ಲ. ಆ ಬಾಳೇಕಾಯಿಯ ಗಂಟಿನಲ್ಲಿ ಪುಡಿಗಾಸು, ಮನೆಯಿಂದ ಆಚೆ ಹೋಗಬೇಕಾದರೆ ಮನೆಯ ಬೀಗದ ಕೈ, ಹೀಗೆ ಸಣ್ಣ ಪುಟ್ಟ ವಸ್ತುಗಳನ್ನು ಇಟ್ಟುಕೊಳ್ಳುತ್ತಿದ್ದರು. ನಾವೆಲ್ಲಾ ಪಿನ್ನುಗಳನ್ನು ಹಾಕಿ ಸೀರೆಯುಡುವಾಗ ಮುಸಿ ಮುಸಿ ನಗುತ್ತಾ – ಸೀರೆಯುಡಲು ಬರದಿರುವವರೇ ಹೀಗೆ ಪಿನ್ನು ಹಾಕಿ ಉಡುವುದು – ಎನ್ನುತ್ತಾ ರೇಗಿಸುತ್ತಿದ್ದರು. ಈಗಿನ ಜನಾಂಗವಂತೂ ಸೀರೆಯುಡುವ ಮುಂಚೆ ಒಂದು ಪಿನ್ನಿನ ಡಬ್ಬವನ್ನೇ ಇಟ್ಟುಕೊಂಡು ಪ್ರಾರಂಭ ಮಾಡುತ್ತಾರೆ. ಏನೇ ಆದರೂ ಅಂದಿಗೂ, ಇಂದಿಗೂ, ಮುಂದೆಯೂ ʼಸೀರೆʼ ವಿಶ್ವಕ್ಕೆ ಭಾರತೀಯರು ನೀಡಿದ ಕಲಾತ್ಮಕ ಕೊಡುಗೆ ಎಂಬದರಲ್ಲಿ ಎರಡನೆಯ ಮಾತೇ ಇಲ್ಲ. ಇವಿಷ್ಟನ್ನು ಪೀಠಿಕೆ ಎಂದುಕೊಳ್ಳೋಣವೇ?
ಸೀರೆಗಳು ಹೆಂಗಳೆಯರ ಪೆಟ್ಟಿಗೆ ಬೀರುಗಳ ತುಂಬ ತುಂಬಿದಾಗ ಮಾತ್ರ ಆ ಮನೆ ಸಂತೃಪ್ತ ಗೃಹಿಣಿಯನ್ನು ಹೊಂದಿದೆ ಎನ್ನುವಂತಹ ವಾತಾವರಣವೂ ಹಲವಾರು ಮನೆಗಳಲ್ಲಿ ಇರುತ್ತದೆ.
ನಾನಿಲ್ಲಿ ಸೀರೆಯ ಜನನ, ಬೆಳವಣಿಗೆಗಳನ್ನು ಕುರಿತು ಬರೆಯಲು ಹೋಗುವುದಿಲ್ಲ. ಏಕೆಂದರೆ ಆ ಮಾಹಿತಿಗಳನ್ನು ಗೂಗಲಮ್ಮ ನೀಡಬಹುದು. ಒಬ್ಬ ನೀರೆಗೆ ಸೀರೆಯ ಕುರಿತಾದ ಮೋಹ, ಭಾವಗಳು ಹೇಗಿರಬಹುದೆಂಬುದರ ಬಗ್ಗೆ ಮಾತ್ರ ಯೋಚಿಸಲು ಬಯಸುತ್ತೇನೆ.
ಹಿಂದಿನ ಕಾಲದಲ್ಲಿ, ಹಿಂದಿನ ಕಾಲವೇನು, ಇಂದಿಗೂ ನಾರಿಯರಿಗೆ ಸೀರೆಯ ಉಡುಗೊರೆ ನೀಡಿದರೆ ಅದು ಬಹು ಆತ್ಮೀಯವಾದ ಉಡುಗೊರೆ ಎಂಬ ಅಭಿಪ್ರಾಯವಿದೆ. ಕೋಪಿಸಿಕೊಂಡ ಹೆಂಡತಿಯನ್ನು ಮಣಿಸಲು ಸೀರೆಯ ಉಡುಗೊರೆ ಸರಳೋಪಾಯವೇ ಹೌದು, ಗಂಡ ಸೀರೆ ತಂದಾಗ, ಅದರ ಬಣ್ಣ, ಗುಣಮಟ್ಟ, ವೈವಿಧ್ಯತೆ ಸರಿಯಿಲ್ಲವೆಂದು ಆಕ್ಷೇಪಿಸಿದರೂ ಒಳಗೊಳಗೇ ಸಂತಸಗೊಂಡು ಹರಳುಗಟ್ಟಿದ ಮುನಿಸು ಕರಗಿ ಪ್ರೀತಿಯ ಹೊಳೆ ಹರಿಯುವುದಂತೂ ಖಂಡಿತಾ. ದುರಾದೃಷ್ಟವಶಾತ್ ನನ್ನವರಿಗೆ ಈ ವಿಷಯದ ಮಾಹಿತಿಯೇ ಇಲ್ಲ. ಇನ್ನು ಹೆಣ್ಣು ಮಕ್ಕಳು ತವರುಮನೆಗೆ ಹೋದಾಗ ಅಲ್ಲಿ ತಂದೆ, ಅಣ್ಣ ತಮ್ಮಂದಿರಿಂದ ದೊರೆತ ಸೀರೆಯ ಉಡುಗೊರೆಯಂತೂ ಅವರುಗಳಿಗೆ ಅತೀ ಅಪ್ಯಾಯಮಾನವಾಗಿರುತ್ತದೆ.
ಚಿನ್ನದ ಎಳೆಗಳಿಂದ ನೇಯ್ದ ಸೀರೆಗಳು, ಬೆಳ್ಳಿಯ ಎಳೆಗಳ ಅಂಚು ಸೆರಗುಗಳನ್ನು ಹೊಂದಿದ ಸೀರೆಗಳು, ರೇಷ್ಮೆ, ಹತ್ತಿಯ ದಾರಗಳಿಂದ ನೇಯ್ದ ಸೀರೆಗಳು ಹಿಂದಿನ ದಿನಗಳಲ್ಲಿ ದೊರೆಯುತ್ತಿದ್ದವು. ಈಗೀಗಲಂತೂ ಮಿಕ್ಸ್ ಮ್ಯಾಚ್ ಅನ್ನುತ್ತಾರಲ್ಲಾ ಹಾಗೆ, ಎಲ್ಲವನ್ನೂ ಬೆರೆಸಿ, ಒಂದು ಆ ಎಳೆ, ಇನ್ನೊಂದು ಈ ಎಳೆ ಎಂದು ವಿವಿಧ ರೀತಿಯ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಸಾಮಾನ್ಯವಾಗಿ ಹೆಂಗಳೆಯರಿಗೆ ತಮ್ಮ ಸಂಗ್ರಹದಲ್ಲಿ ಎಲ್ಲ ರೀತಿಯ ಸೀರೆಗಳನ್ನು ಇಟ್ಟುಕೊಳ್ಳುವ ಬಯಕೆ ಇರುತ್ತದೆ. ಹೆಸರು ಹೇಳ ಹೊರಟರೆ ಪಟ್ಟಿ ಉದ್ದವಾಗುತ್ತದೆ. ಆದರೂ ಕೆಲವು ಪ್ರಮುಖ ಎಂದರೆ ಕಾಂಚಿವರಂ, ಧರ್ಮಾವರಂ, ಬನಾರಸ್, ನಮ್ಮ ಹೆಮ್ಮೆಯ ಮೈಸೂರು ಸಿಲ್ಕ್, ಪೋಚಂಪಲ್ಲಿ, ಗದ್ವಾಲ್, ವೆಂಕಟಗಿರಿ, ಇಕ್ಕತ್, ಬೆಂಗಾಲ್ ಕಾಟನ್, ಮೊಳಕಾಲ್ಮೂರು, ಪೈಥಾನಿ, ಚೈನಾ ಸಿಲ್ಕ್, ಕಾಶ್ಮೀರಿ ಸಿಲ್ಕ್, ಚಂದೇರಿ, ಕೋಟಾ ಚೆಕ್ಸ್,. . . . . . ಇನ್ನೂ ಇನ್ನೂ ಮುಂತಾದವುಗಳು.
ಇನ್ನು ಇವುಗಳಿಗೆ ಹೊಂದಿಕೆಯಾಗುವಂತಹ ರವಿಕೆಗಳದ್ದೇ ಒಂದು ರಾಮಾಯಣ. ಈಗೀಗ ಸೀರೆ ನೇಯುವವರು ಜಾಣರಾಗಿ ಸೀರೆಯೊಂದಿಗೇ ಅಟ್ಯಾಚ್ ಬ್ಲೌಸ್ ಎಂಬ ಕಾನ್ಸೆಪ್ಟ್ ಅನ್ನು ಉಪಯೋಗಿಸಿ ಕೊಟ್ಟುಬಿಡುತ್ತಿದ್ದಾರೇನೋ ಹೌದಾದರೂ ಅದರಿಂದ ಹೆಂಗಳೆಯರ ಪಾಕೆಟ್ಟಿಗೇ ಸಂಚಕಾರ ಬಂದಿರುವುದಂತೂ ಹೌದು. ಎಲ್ಲಾ ರವಿಕೆಗಳಿಗೂ ಲೈನಿಂಗ್ ನೀಡಲೇ ಬೇಕೆಂದು ಟೈಲರ್‌ಗಳು ಹೇಳಿ ದುಬಾರಿ ಮಜೂರಿಯನ್ನು ಪಡೆಯುತ್ತಿದ್ದಾರೆ. ಎಷ್ಟೋ ಬಾರಿ ರವಿಕೆ ಹೊಲೆಯುವ ಮಜೂರಿ ಸೀರೆಯ ಬೆಲೆಯ ಹತ್ತಿ ಹತ್ತಿರವೇ ಬಂದು ಬಿಟ್ಟಿರುತ್ತವೆ. ಈಗೀಗಂತೂ ಡಿಸೈನರ್ ರವಿಕೆಗಳ ಹಾವಳಿ ಎಷ್ಟಾಗಿದೆಯೆಂದರೆ ಅವುಗಳ ಬಗ್ಗೆ ಬರೆಯ ಹೊರಟರೆ ಪಾಪ, ನಮ್ಮ ಸೀರೆ ಎಲ್ಲೋ ಮೂಲೆಗುಂಪಾಗಿಬಿಡಬಹುದೇನೋ. ಒಮ್ಮೆಯಂತೂ ನಮ್ಮ ಹತ್ತಿರದ ನೆಂಟರೊಬ್ಬರು, ಎಲ್ಲೇ ಹೋಗಬೇಕಾದರೂ ಸದಾ ಮ್ಯಾಚಿಂಗ್ ಬ್ಲೌಸ್ ಇಲ್ಲಾ ಎಂದು ಗೊಣಗಾಡಿ ಗಲಾಟೆ ಮಾಡುವುದನ್ನು ತಡೆಯಲಾಗದೆ ಅವರ ಗಂಡ, ಪಿ. ಎಫ್. ಲೋನಿಗೆ ಅಪ್ಲೈ ಮಾಡಿ ದುಡ್ಡು ತಂದು ಕೊಟ್ಟು, – ಎಲ್ಲಾ ಸೀರೆಗಳಿಗೆ ಮ್ಯಾಚಿಂಗ ಬ್ಲೌಸ್ ಹೊಲಿಸಿಕೊಂಡು ಬಿಡು, ಇನ್ನೆಂದೂ ಅಳಬೇಡ – ಎಂದರಂತೆ. ರವಿಕೆಗಳಿಗೇ ಒಂದು ಅಂತರರಾಷ್ಟ್ರೀಯ ದಿನ ಇಟ್ಟರೆ ರೋಚಕ ಕಥೆಗಳನ್ನು ಬರೆಯುತ್ತಾ, ಮಾತನಾಡುವುದು ಸೂಕ್ತ ಎನ್ನುವುದು ನನ್ನ ಭಾವನೆ.
ಈ ಹಿಂದೆಯೇ ಹೇಳಿದ ಹಾಗೆ ವೈವಿಧ್ಯಮಯವಾಗಿ ಸೀರೆ ಉಡುವುದೂ ಸ್ಥಳ, ಜನಾಂಗ, ಪರಂಪರೆ, ಪದ್ಧತಿಗಳನ್ನು ಸೂಚಿಸುತ್ತದೆ. ಗುಜರಾತಿ, ಬೆಂಗಾಲಿ, ಒಳಗಚ್ಚೆ, ಮೇಲ್ಗಚ್ಚೆ, ಐಯ್ಯಂಗಾರ್, ಐಯ್ಯರ್, ಕೂರ್ಗಿ . . . . ಹೀಗೆ ವಿವಿಧ ರೀತಿಯಲ್ಲಿ ಸೀರೆ ಎಂಬ ಅದೇ ಉದ್ದನೆಯ ಬಟ್ಟೆಯನ್ನು ಉಡುವುದೇ ಒಂದು ಸೊಗಸು, ನೋಡುವುದು ಇನ್ನೂ ಸೊಗಸು.
ಹದಿಹರೆಯದ ಹುಡುಗಿಯರು ಮೊದಲು ಮೊದಲು ಸೀರೆ ಉಡುವಾಗ, ಉಟ್ಟಾಗ, ಎಲ್ಲರ ಚಿತ್ತಾಕರ್ಷಣೆಯಿಂದ ಉಂಟಾಗುವ ಭಾವಾನಂದವನ್ನು ಸವಿಯುವ ಸವಿಯ ಏನೆಂದು ವರ್ಣಿಸಲಿ. ಅಮ್ಮ, ಅಕ್ಕ, ಅತ್ತಿಗೆಯರ ಸೀರೆಯುಟ್ಟು ಕನ್ನಡಿಯ ಮುಂದೆ ಹಿಂದೆ ಮುಂದೆ ನೋಡಿಕೊಂಡು ನಲಿಯುವ ಪರಿಯೇ ಬೇರೆ. ನನ್ನ ಅಮ್ಮ ಏಳು ಗಜದ ಸೀರೆ ಉಡುತ್ತಿದುದರಿಂದ ನನಗೆ ಅದು ತುಂಬಾ ಉದ್ದ ಎನಿಸಿ, ಅಪ್ಪ ಅಮ್ಮ, ಸಂಜೆ 6.30 ರಿಂದ 8 ಗಂಟೆಯ ವರೆಗೆ ಹರಿಕಥೆ ಕೇಳಲು ಹೋಗುತ್ತಿದ್ದ ಸಮಯದಲ್ಲಿ ಅಪ್ಪನ ಬಿಳಿಯ ಉದ್ದನೆಯ ಪಂಚೆಯನ್ನೇ ಉಟ್ಟುಕೊಂಡು ಕನ್ನಡಿಯ ಮುಂದೆ ನಲಿದಾಡಿ ಅವರು ಬರುವ ವೇಳೆಗೆ ಬಿಚ್ಚಿ ಹೇಗಿತ್ತೋ ಹಾಗೆಯೇ ಇಟ್ಟು ಏನೂ ಅರಿಯದ ಅಮಾಯಕಳಂತೆ ಸುಮ್ಮನೆ ಪುಸ್ತಕ ಹಿಡಿದು ಓದುವ ನಾಟಕ ಮಾಡುತ್ತಾ ಕುಳಿತು ಕನ್ನಡಿ ತೋರಿದ ನನ್ನ ಪ್ರತಿಬಿಂಬವನ್ನು ನೆನೆ ನೆನೆದು ಸಂತಸಪಟ್ಟ ನೆನಪು ಇನ್ನೂ ನಿನ್ನೆ ಮೊನ್ನೆಯದೇನೋ ಅನ್ನುವಂತೆ ಹಸಿರಾಗಿದೆ.
ಹೀಗೆಯೇ ಸೀರೆಯ ಬಗ್ಗೆ ಬರೆಯುತ್ತಾ, ಯೋಚಿಸುತ್ತಾ ಹೋದರೆ ಮನಸ್ಸಂತೂ ಮುದಗೊಳ್ಳುವುದು ಖಂಡಿತಾ. ಹೆಂಗಳೆಯರು ಸೀರೆಯ ಕುರಿತಾಗಿ ಮಾತನಾಡುತ್ತಾ ಕುಳಿತರೆ ಸಮಯ ಹೋಗುವುದೇ ತಿಳಿಯುವುದಿಲ್ಲ. ಅವುಗಳನ್ನು ಕುರಿತು ಕೇಳುವ ಹೆಂಗಳೆಯರೂ ಸಂತಸ ಪಡುವುದು, ತಾವೂ ಸಂಭಾಷಣೆಯಲ್ಲಿ ಭಾಗಿಯಾಗುವುದು ಶತಸಿದ್ಧ.
-ಪದ್ಮಾ ಆನಂದ್, ಮೈಸೂರು
ಸರಳ ಸುಂದರ ಲೇಖನ ಮನಕ್ಕೆ ಮುದಕೊಟ್ಟಿತು ಗೆಳತಿ ಪದ್ಮಾ ಮೇಡಂ
ಲೇಖನ ನಿಮಗೆ ಮುದನೀಡಿದ್ದು ನನಗೆ ವಚನ ಸಂತಸವಾಯಿತು. ಧನ್ಯವಾದಗಳು.
ಸೊಗಸಾಗಿದೆ ಮೇಡಂ, ತಕ್ಷಣ ಓದಿಬಿಟ್ಟೆ…..
ತಕ್ಷಣ ಓದಿ ಪ್ರತಿಕ್ರಿಯೆಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್.
ಚಂದದ ಚಿತ್ರದೊಂದಿಗೆ ಪ್ರಕಟಿಸಿದ “ಸುರಹೊನ್ನೆ” ಗೆ ಧನ್ಯವಾದಗಳು.
ಧನ್ಯವಾದಗಳು.
Nice. ಎಷ್ಟೇ ಬಗೆ ಬಗೆಯ ಉಡುಪುಗಳಿದ್ದರೂ ಸೀರೆಗಿರುವ ಅಂದ ಚಂದ ಘನತೆಯೇ ಬೇರೆ.
ಓದಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು
ಚಿಕ್ಕಂದಿನಲ್ಲಿ ಉಟ್ಟು ನಲಿದ ಸಿಹಿನೆನಪಿನೊಂದಿಗೆ ಮೂಡಿಬಂದ ಸೀರೆಯ ಕುರಿತ ಲೇಖನ ಸೂಪರ್ ಆಗಿದೆ, ಪದ್ಮಾ ಮೇಡಂ
ಓದಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.
ಬರಹ ಬಹಳ ಸೊಗಸಾಗಿ ಮೂಡಿ ಬಂತು. “ಬೇಬಿ ಪದ್ಮಾ”ಳ ಜಾಣ್ಮೆಗೂ, ಅಮಾಯಕಳಂತೆ ನಟಿಸಿರುವುದಕ್ಕೂ ಮೆಚ್ಚುಗೆ!