ಸ್ವಯಂಕೃತ
ಹಾಸಿಗೆಯ ಮೇಲೆ ಮಲಗಿದ್ದ ನಂದಿನಿಗೆ ಮಗುವಿನ ಅಳು ಕೇಳಿಸಿತು. ಏಳಲಾರದೆ ಎದ್ದು ಜೋಲಿಯಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಳ್ಳಲು ಹೋದಳು. ಕೈ ಮುಂದೆ ಮಾಡಲಾಗದೆ ಅಸಹಾಯಕತೆಯಿಂದ ಹಾಗೇ ಕುಳಿತಳು. ಮಗುವಿನ ಅಳು ತಾರಕಕ್ಕೆ ಏರಿತು. ಒಳಗೆ ಆಗ ತಾನೇ ಸ್ನಾನ ಮುಗಿಸಿ ಪೂಜೆ ಮಾಡುತಿದ್ದ ಭಾಸ್ಕರ ಪರಿಸ್ಥಿತಿಯನ್ನು ಅರಿತು ಓಡಿ ಬಂದು ಮಗುವನ್ನು ಎತ್ತಿ ನಂದಿನಿಯ ತೊಡೆಯ ಮೇಲೆ ಮಲಗಿಸಿದ.
ಅಮ್ಮನ ಸ್ಪರ್ಶದಿಂದ ಸ್ವರ ಅಡಗಿಸಿದ ಮಗು ಊಟಕ್ಕಾಗಿ ತಡಕಾಡಿತು. ಮಗುವನ್ನು ಹಗುರಾಗಿ ತನ್ನೆದೆಗೆ ಆನಿಸಿಕೊಂಡ ನಂದಿನಿ ಹಾಲು ಕುಡಿಸತೊಡಗಿದಳು. ಹಾಗೇ ಅವಳ ಚಿತ್ತ ಇದುವರೆವಿಗೂ ನಡೆದ ವಿದ್ಯಮಾನಗಳತ್ತ ಹೊರಳಿತು.
ಮೈಸೂರು ಸಮೀಪದ ತೀರ್ಥಕ್ಷೇತ್ರ ನಂಜನಗೂಡು ನಂದಿನಿಯ ಹುಟ್ಟೂರು. ಅಲ್ಲಿನ ವ್ಯಾಪಾರಿ ಕುಟುಂಬದ ರಂಗನಾಥ ಮತ್ತು ವನಜಾಕ್ಷಿ ದಂಪತಿಗಳ ಮಗಳು. ಅವಳಿಗಿಂತ ಹಿರಿಯವನಾದ ನಟೇಶನಿಗೆ ಓದುವುದರಲ್ಲಿ ಆಸಕ್ತಿ ಕಡಿಮೆ. ಆದರೆ ನಂದಿನಿಗೆ ಚಿಕ್ಕಂದಿನಿಂದಲೂ ಅದೇ ಪಂಚಪ್ರಾಣ. ತನ್ನೂರಿನಲ್ಲೇ ಪಿ.ಯು.ಸಿ. ವರೆಗೆ ಓದಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದಳು. ಹೆಚ್ಚಿನ ಶಿಕ್ಷಣಕ್ಕಾಗಿ ಎನ್.ಐ.ಇ., ಕಾಲೇಜಿನಲ್ಲಿ ದಾಖಲಾಗಿ ಇಂಜಿನಿಯರಿಂಗ್ ಪದವಿ ಪಡೆದಳು. ಕ್ಯಾಂಪಸ್ ಆಯ್ಕೆಯಲ್ಲಿಯೇ ಬೆಂಗಳೂರಿನ ಹೆಸರಾಂತ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ರಾಯಚೂರಿನಿಂದ ವಿದ್ಯಾಭ್ಯಾಸದ ಸಲುವಾಗಿ ಮೈಸೂರಿನ ಎನ್.ಐ.ಇ. ಕಾಲೇಜಿನಲ್ಲಿಯೆ ವಿದ್ಯಾರ್ಥಿಯಾಗಿ ನಂದಿನಿಯ ಜೊತೆಯಲ್ಲಿಯೇ ಇಂಜಿನಿಯರಿಂಗ್ ವ್ಯಾಸಂಗಮಾಡಿದ್ದ ಭಾಸ್ಕರ. ಓದುವಾಗಲೇ ಪರಸ್ಪರ ಪರಿಚಿತರಾಗಿದ್ದ ಇಬ್ಬರೂ ಬೆಂಗಳುರಿನಲ್ಲಿಯೇ ನೌಕರಿ ಮಾಡುತ್ತಿರುವಾಗಲೂ ತಮ್ಮ ಸ್ನೇಹವನ್ನು ಮುಂದುವರೆಸಿದ್ದರು. ಹಲವು ಕಾಲದ ಪರಿಚಯ ಪ್ರೇಮಕ್ಕೂ ದಾರಿಮಾಡಿಕೊಟ್ಟಿತು. ವಿಷಯ ಎರಡೂ ಕುಟುಂಬದ ಹಿರಿಯರಿಗೆ ತಿಳಿದು ಅವರಿಂದ ಸಮ್ಮತಿ ದೊರಕಿತು. ಹೀಗಾಗಿ ವಿವಾಹಾನಂತರ ಬೆಂಗಳೂರಿನಲ್ಲಿ ವಾಸವಾಗಿದ್ದರು.
ಐದಾರು ವರ್ಷಗಳ ದಾಂಪತ್ಯದ ನಂತರ ನಂದಿನಿ ತಾಯಿಯಾಗುವ ಸೂಚನೆಗಳು ಕಂಡುಬಂದವು. ಈ ನಡುವಿನ ವೇಳೆಯಲ್ಲಿ ನಂದಿನಿಯ ಅಣ್ಣನಿಗೂ ಮದುವೆಯಾಗಿ ಮಕ್ಕಳೂ ಆಗಿದ್ದರು. ತಂದೆಯ ವ್ಯಾಪಾರವನ್ನೇ ಮುಂದುವರೆಸಿಕೊಂಡಿದ್ದನು. ನಂದಿನಿಯ ತಾಯಿಗೆ ಮನೆಯ ಜವಾಬ್ದಾರಿ ಹೆಚ್ಚಿಲ್ಲದ್ದರಿಂದ ಮಗಳ ಪಾಲನೆ ಪೋಷಣೆ ಕಡೆಗೆ ಗಮನ ಹರಿಸಲೋಸುಗ ಆಗಿಂದಾಗ್ಗೆ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಬಾಣಂತನವನ್ನು ನಂಜನಗೂಡಿನಲ್ಲಿಯೇ ಮಾಡಬೇಕೆಂದು ತೀರ್ಮಾನಿಸಿದ್ದರು. ಅದಕ್ಕೆ ಭಾಸ್ಕರನ ಸಮ್ಮತಿಯೂ ದೊರಕಿತ್ತು.
‘ತಾನೊಂದು ಬಗೆದರೆ ದೈವ ಬೇರೊಂದೇ ಬಗೆಯಿತು’ ಎಂಬಂತೆ ನಂದಿನಿಯ ಹೆರಿಗೆಯಾಗಿ ಹೆಣ್ಣುಮಗು ಜನಿಸಿತು. ಆದರೆ ನಂದಿನಿಯ ದೇಹ ಪ್ರಕೃತಿಯನ್ನು ಪರಿಶೀಲಿಸಿದ ವೈದ್ಯರ ಸಲಹೆಯಂತೆ ಒಂದು ತಿಂಗಳು ವೈದ್ಯರ ಕಣ್ಗಾವಲಿನಲ್ಲಿಯೇ ಇರಬೇಕಾಯಿತು. ನಂತರವೇ ಆಕೆ ತವರೂರಿಗೆ ಹೋಗಬಹುದೆಂದು ಹೇಳಿದ್ದರು. ಅದರಂತೆ ಮನೆಯಲ್ಲಿ ಔಷಧೋಪಚಾರ, ಆರೈಕೆ ನಡೆಯುತ್ತಿದ್ದವು. ನಂದಿನಿಯ ತಾಯಿ ವನಜಾ ಯುಗಾದಿಹಬ್ಬದ ಸಮಯದಲ್ಲಿ ಅವರ ಮನೆಯಲ್ಲಿ ಮೊದಲಿನಿಂದಲೂ ಆಚರಿಸಿಕೊಂಡಿದ್ದ ಸಂಪ್ರದಾಯ ‘ಹಿರಿಯರ ಪೂಜೆ’ ಮಾಡಬೇಕಾಗಿತ್ತು. ಹಾಗಾಗಿ “ಒಂದೆರಡು ದಿನ ಹೇಗೋ ಮ್ಯಾನೇಜ್ ಮಾಡಿ. ತಕ್ಷಣವೇ ಹಿಂದಿರುಗುತ್ತೇನೆ” ಎಂದು ಹೇಳಿ ಮಾರ್ಚಿ ಇಪ್ಪತ್ತನೇ ದಿನಾಂಕದಂದೇ ನಂಜನಗೂಡಿಗೆ ಹೋದರು. ಹಾಗೂ ಹೀಗೂ ಭಾಸ್ಕರ, ನಂದಿನಿಯರೇ ತಮಗೆ ತಿಳಿದ ರೀತಿಯಲ್ಲಿ ಮನೆಯ ಕೆಲಸಕಾರ್ಯಗಳನ್ನು ನಿಭಾಯಿಸುತ್ತಿದ್ದರು. ಅವರ ದುರಾದೃಷ್ಟವೋ ಎನ್ನುವಂತೆ ‘ಕೊರೋನಾ’ ಎಂಬ ಮಹಾಮಾರಿ ಪ್ರಪಂಚದೆಲ್ಲೆಡೆ ತನ್ನ ಕರಾಳ ಹಸ್ತವನ್ನು ಚಾಚಿಬಿಟ್ಟಿತು. ಅದರಲ್ಲೂ ನಂಜನಗೂಡಿನಲ್ಲಿ ಅದರ ಹಾವಳಿ ಪ್ರಬಲವಾಗಿ ಮುನ್ನೆಚ್ಚರಿಕೆಯಾಗಿ ಇಡೀ ಊರನ್ನು ಲಾಕ್‌ಡೌನ್ ಗೆ ಒಳಪಡಿಸಿಬಿಟ್ಟರು. ಬೆಂಗಳೂರಿನಲ್ಲಿಯೂ ಕಟ್ಟುಪಾಡುಗಳನ್ನು ಪಾಲಿಸುವಂತಾಯಿತು. ಭಾಸ್ಕರ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶವಾಯಿತು. ಹೀಗಾಗಿ ಹೊರಗೆಲ್ಲೂ ಓಡಾಡುವಂತಿಲ್ಲ. ಇದೇ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ನಂದಿನಿ ಮನೆಯಲ್ಲಿ ಜಾರಿಬಿದ್ದು ಬಲಗೈ ಭುಜಕ್ಕೆ ಪೆಟ್ಟುಬಿತ್ತು. ಅದರಿಂದಾಗಿ ವೈದ್ಯರು ಪಟ್ಟಿಕಟ್ಟಿ ಹೆಚ್ಚು ಅಲುಗಾಡದೆ ಬಲಗೈಯಿಗೆ ವಿಶ್ರಾಂತಿ ಕೊಡಬೇಕೆಂದು ಕಟ್ಟಪ್ಪಣೆ ಮಾಡಿಬಿಟ್ಟರು. ಮನೆಕೆಲಸದವರೂ ಬರುವಂತಿಲ್ಲವಾಗಿ ಭಾಸ್ಕರನ ಗೊಳು ಹೇಳತೀರದು. ವರ್ಕ್ ಫ್ರಮ್ ಹೋಂ ಜೊತೆಗೆ ಮನೆಗೆಲಸ ಮತ್ತು ನಂದಿನಿಯ ಆರೈಕೆ ಸೇರಿ ಹೈರಾಣವಾಗಿಬಿಟ್ಟ.
ಬಯಸೀ ಬಯಸೀ ತಾಯಿಯಾದ ಸಂಭ್ರಮವೇ ಇಲ್ಲದೆ ತೊಂದರೆ, ಆತಂಕದಲ್ಲಿಯೇ ದಿನಗಳೆಯುತ್ತಾ ನಂದಿನಿ ದೇವರಲ್ಲಿ ಮೊರೆಯಿಡುತ್ತಿದ್ದಳು. ಮಗುವಿಗೆ ಹಾಲೂಡಿಸಲು ಭಾಸ್ಕರ ಎಚ್ಚರಿಸುವಷ್ಟು ಅನ್ಯಮನಸ್ಕಳಾಗಿದ್ದಳು ನಂದಿನಿ. ಆಗ ತನ್ನ ಆಲೋಚನೆಯಿಂದ ಹೊರಬಂದಳು. ಮಗುವನ್ನು ಎತ್ತಿಕೊಳ್ಳಲು ಅವನೇ ಸಹಾಯಮಾಡಿದ. ತಡೆಯಲಾಗದೇ “ಕುಳಿತ ಕಡೆಯೇ ಮಾಡುವಂತಹ ಕೆಲಸವೇನಾದರೂ ಇದ್ದರೆ ಹೇಳಿ, ಪ್ರಯತ್ನಿಸುತ್ತೇನೆ” ಎಂದಳು. “ಹಾಗಿದ್ದರೆ ಈ ಸೊಪ್ಪನ್ನು ಬಿಡಿಸಿಕೊಡು” ಎಂದು ಒಳಗಿನಿಂದ ಸೊಪ್ಪಿನ ಬುಟ್ಟಿಯನ್ನು ತಂದು ಅವಳ ಮುಂದಕ್ಕಿಟ್ಟ. ಆಕೆ ಅದಕ್ಕೆ ಕೈಹಾಕಿದಳು.
ಹಾಗೇ ನಂದಿನಿ “ನೀವೇನೂ ತಿಳಿದುಕೊಳ್ಳದಿದ್ದರೆ ಒಂದು ಮಾತು ಹೇಳಲೇ?” ಎಂದಳು. “ಅದೇನು ಹೇಳು” ಎಂದ ಭಾಸ್ಕರ. ಮುಂದಿನ ಬೀದಿಯಲ್ಲಿದ್ದಾರಲ್ಲಾ ನಿಮ್ಮ ಊರಿನವರು, ದೂರದ ಬಂಧುಗಳು ಎಂದು ಅವರ ಮನೆಗೆ ಯಾವುದೋ ಸಮಾರಂಭಕ್ಕೆ ಬಂದಿದ್ದರಲ್ಲಾ ನಿಮ್ಮ ಕಾಕಿ, ಅದೇರೀ ನಿಮ್ಮ ತಂದೆಯ ದಾಯಾದಿ ತಮ್ಮನ ಹೆಂಡತಿ ರಾಯಚೂರಿಗೆ ಹೋಗಿಬಿಟ್ಟರೇ?” ಎಂದು ಕೇಳಿದಳು.
“ಇಲ್ಲವಲ್ಲಾ ಈಗ ಹೇಗೆ ಹೋಗುವುದಕ್ಕಾಗುತ್ತದೆ?” ಎಂದುತ್ತರಿಸಿದ ಭಾಸ್ಕರ.
“ಹಾಗಿದ್ದರೆ ಅವರು ಇಲ್ಲಿಯೇ ಇದ್ದಾರಲ್ಲಾ, ಅವರನ್ನು ನನ್ನ ಕೈ ಸರಿಯಾಗುವವರೆಗಾದರೂ ನಮ್ಮನೆಗೆ ಬಂದಿರಲು ಕೇಳೋಣವೇ? ಅವರಿಂದ ಸ್ವಲ್ಪವಾದರೂ ನಿಮಗೆ ಸಹಾಯವಾದೀತು. ಅಲ್ಲದೆ ಊರಿನಿಂದ ಅಣ್ಣನ ಫೋನ್ ಬಂದಾಗ ಸದ್ಯಕ್ಕಂತೂ ಲಾಕ್‌ಡೌನ್ ಸಡಲಿಸುವವರೆಗೆ ನನ್ನನ್ನು ನಂಜನಗೂಡಿಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲವೆಂದು ಹೇಳಿದ. ಅಲ್ಲದೇ ಅಮ್ಮನು ಇಲ್ಲಿಗೆ ಬರಲಿಕ್ಕಾಗದು. ಸದ್ಯದ ಪರಿಸ್ಥಿತಿಯಲ್ಲಿ ಅವರನ್ನು ನಮ್ಮ ಮನೆಗೆ ಬರಲಿಕ್ಕೆ ಸಾಧ್ಯವಾಗುತ್ತದೆಯೇ? ಎಂದು ಕೇಳಿ ಬರುತ್ತೀರಾ?” ಎಂದಳು.
ಏನೋ ಹೊಳೆದಂತೆ ಭಾಸ್ಕರ “ ಈ ಬಗ್ಗೆ ನಾನು ಯೋಚಿಸಲೇ ಇಲ್ಲ. ಮಗುವನ್ನು ಒಂದು ತಿಂಗಳವರೆಗೆ ಜೋಪಾನವಾಗಿ ನೋಡಿಕೋಳ್ಳಬೇಕೆಂದು ಡಾಕ್ಟರ್ ಕೂಡ ಹೇಳಿದ್ದಾರೆ. ಹೋದವಾರ ನಮ್ಮಮ್ಮ ಫೋನ್ ಮಾಡಿದ್ದಾಗಲೂ ನನಗೆ ಈ ವಿಷಯ ನೆನಪಿಗೆ ಬರಲೇ ಇಲ್ಲ. ಈಗಲೇ ಅವರ ಮನೆಗೆ ಫೋನ್ ಮಾಡುತ್ತೇನೆ. ಅವರೊಪ್ಪಿದರೆ ಕರೆದುಕೊಂಡು ಬರುತ್ತೇನೆ. ಅವರಿರುವ ಮನೆಯೂ ನಡೆದು ಹೋಗುವಷ್ಟೇ ದೂರದಲ್ಲಿದೆ. ದೂರದವರ ಮನೆಯಲ್ಲಿರುವುದಕ್ಕಿಂತ ಬಂಧುಗಳಾದ ನಮ್ಮ ಮನೆಯಲ್ಲಿರುವುದು ಅವರಿಗೂ ಒಳ್ಳೆಯದೇ. ಅಕಸ್ಮಾತ್ ಪೊಲೀಸಿನವರು ಏನಾದರೂ ಪ್ರಶ್ನಿಸಿದರೆ ನಮ್ಮ ಬಡಾವಣೆಯ ಪೋಲಿಸ್ ಸ್ಟೇಷನ್ನಿನಿಂದ ಒಂದು ಪರ್ಮಿಷನ್ ಲೆಟರ್ ಬೇಕಾದರೂ ಬರೆಸಿಕೊಂಡು ಹೋಗುತ್ತೇನೆ. ಅಲ್ಲಿರುವ ಇನಸ್ಪೆಕ್ಟರ್ ನನಗೆ ಚೆನ್ನಾಗಿ ಪರಿಚಯದವರೇ.” ಎಂದು ನಂದಿನಿಯ ಸಲಹೆಯನ್ನು ಕೂಡಲೇ ಕಾರ್ಯರೂಪಕ್ಕೆ ತಂದೇಬಿಟ್ಟ.
ಅವನೊಡನೆ ಮನೆಗೆ ಬಂದ ಅವನ ಚಿಕ್ಕಮ್ಮ ಬಂದಕೂಡಲೇ ತಮ್ಮ ಬ್ಯಾಗನ್ನು ಕೋಣೆಯಲ್ಲಿರಿಸಿ ಕೈತೊಳೆದುಕೊಂಡು ಮಗುವಿನ ಬಳಿಗೆ ಬಂದರು. ಹಾಗೂ ಐವತ್ತರ ನೋಟೊಂದನ್ನು ಮಗುವಿನ ಸುತ್ತ ನೀವಾಳಿಸಿ ಇಳೆ ತೆಗೆದರು. ಹಾಗೆಯೇ “ಇದು ನಮ್ಮ ಕಡೆಯ ರಿವಾಜು, ನಂದಿನಿ ನಿನ್ನನ್ನು ನಾನು ನೋಡಿದ್ದು ನಿನ್ನಮದುವೆ ಸಮಯದಲ್ಲಿ ಮಾತ್ರ. ಈಗ ಬಹಳ ತೆಗೆದುಹೋಗಿದ್ದೀ. ನಾನೀಗ ಬಂದಾಯ್ತಲ್ಲಾ ಸುಮ್ಮನೆ ಕೂಡೋ ಪೈಕಿ ನಾನಲ್ಲ. ಚಿಂತೆ ಮಾಡಬೇಡ. ನನಗೇನು ಇದು ಬೇರೆಯ ಮನೆಯಾ? ನಿನ್ನ ಗಂಡ ನನ್ನ ಸ್ವಂತ ಮಗನಲ್ಲದಿದ್ದರೂ ಮಗನ ಸಮಾನನೇ. ನಾನೆಲ್ಲಾ ಸಂಭಾಳಿಸುತ್ತೇನೆ” ಎನ್ನುತ್ತಾ ಮನೆಯನ್ನೆಲ್ಲಾ ಆಮೂಲಾಗ್ರವಾಗಿ ಪರಿಶೀಲಿಸಿದರು. ಅವರ ಮಾತುಗಳನ್ನು ಕೇಳಿದ ನಂದಿನಿಗೆ ತಮ್ಮ ಸಮಸ್ಯೆಗಳೆಲ್ಲಾ ಬಗೆದಹರಿದವು ಎನ್ನುವಂತೆ ದೀರ್ಘ ನಿಟ್ಟುಸಿರು ಬಿಟ್ಟಳು.
ವಿಪರೀತ ಒಡವೆಗಳನ್ನು ಮೈಮೇಲೆ ಇಲ್ಲದಿದ್ದರೂ ಹಿತಮಿತವಾದ ಒಡವೆಯಲ್ಲೇ ಸುಂದರವಾಗಿ ಕಾಣುತ್ತಿದ್ದರು. ಲಕ್ಷಣವಾದ ಮುಖ, ಗಟ್ಟುಮುಟ್ಟಾದ ದೇಹ, ಅದರಲ್ಲಿ ಉತ್ಸಾಹ ಎದ್ದು ಕಾಣುತಿತ್ತು. ತನ್ನ ಗಂಡ ಹೇಳಿದ್ದ ಐವತ್ತರ ಆಸುಪಾಸಿನ ವಯಸ್ಸಿಗಿಂತ ಚಿಕ್ಕವರಾಗಿ ಕಾಣುತಿದ್ದರು.
“ಏ ಪೋರಿ ನಂದಿನಿ, ಅದ್ಯಾಕ ಹಂಗೆ ನೋಡಕ ಹತ್ತಿದ್ದೀ? …ಗಡಾನೆ ಹೇಳು. ಜ್ಞಪ್ತಿ ಬರಲಿಲ್ಲವೇನು? ನಾನು ಸರಸು ಭಾಸ್ಕರನ ‘ಸರಸು ಕಾಕಿ’ ಬೆಂಗಳೂರು ಮಂದಿ ಬಾಯಲ್ಲಿ ಚಿಕ್ಕಮ್ಮ” ಎಂದರು.
“ಹಾ..ನನಗೆ ಗೊತ್ತಾಯಿತು ಹಾಗೇ ನೋಡುತಿದ್ದೆ, ನೆನಪಿದೆ ಚೆನ್ನಾಗಿದ್ದೀರಾ?” ಎಂದಳು ನಂದಿನಿ. “ಓ…ನನಗೇನು, ಹೆಚ್ಚು ಜಡ್ಡು ಜಾಪತ್ರಯದಲ್ಲಿ ಇದ್ದವಳಲ್ಲ. ಬಾ..ಬಾ..ಜರಾ ಅಡಿಗೆ ಖೋಲಿ ತೋರಿಸು ಎಂದು ನಂದಿನಿಯ ಕೈಹಿಡಿದವರೇ,… ತೋಬಾ..ತೋಬಾ ನಿನ್ನ ಕೈಗೆ ಪೆಟ್ಟಾಗಿದೆ ಅಂದಿದ್ದ ಭಾಸ್ಕರ ಎಳಿದುಬಿಟ್ಟೆ ತಪ್ಪಾತು ಅಲ್ಲ ಬ್ಯಾಂಡೇಜೇ ಇಲ್ಲ” ಎಂದರು.
ಅದಕ್ಕೆ ಭಾಸ್ಕರ “ಅದು ಹಾಗಲ್ಲ ಕಾಕಿ ಉಳುಕಿದೇಂತ ಭುಜದ ಬಳಿ ಪಟ್ಟುಹಾಕಿದ್ದಾರೆ ಹೊರಗೆ ಕಾಣಿಸೊಲ್ಲ” ಎಂದನು.
“ಹೌದೇನು ನೀನೇ ಬಾ..ಭಾಸ್ಕರ” ಎನ್ನುತ್ತಾ ಕುಳಿತಲ್ಲಿಂದ ಎದ್ದರು. ಅವರಿಬ್ಬರನ್ನೂ ನಂದಿನಿಯೂ ಹಿಂಬಾಲಿಸಿದಳು. ಅಲ್ಲಿ ಒಂದೊಂದೇ ಡಬ್ಬ ತೆಗೆಯುತ್ತಾ ಅತ್ತಿತ್ತ ನೋಡುತ್ತಾ ಎಲ್ಲಾ ತಿಳಿಯಿತೆನ್ನುವಂತೆ “ಇನ್ನು ನೀವಿಬ್ಬರೂ ನಿಮ್ಮ ಕೆಲಸಗಳ ಕಡೆ ಗಮನ ಕೊಡಿ ಒಂದು ತಾಸಿನಲ್ಲಿ ಅಡಿಗೆ ರೆಡಿ” ಎಂದು ಸೊಂಟಕ್ಕೆ ಸೆರಗುಕಟ್ಟಿ ಸಿದ್ದರಾದರು.
ಅಂದು ಪ್ರಾರಂಭಿಸಿದ ಅವರ ಕೆಲಸಕಾರ್ಯಗಳನ್ನು ಕೆಲವು ದಿನ ಬಹಳ ಅಚ್ಚುಕಟ್ಟಾಗಿ ನಡೆಸತೊಡಗಿದರು. ಆ ಅವಧಿಯಲ್ಲಿ ನಂದಿನಿಯ ಉಳುಕಿದ್ದ ಕೈ ಸರಿಹೋಗಿ ಚಿಕ್ಕಪುಟ್ಟ ಸಹಾಯ ಮಾಡುತ್ತಾ ಮಗುವಿನೊಡನೆ ಖುಷಿಯಾಗಿದ್ದಳು. ಭಾಸ್ಕರನೂ ನಿರಾಳವಾಗಿ ತನ್ನ ಕೆಲಸದಲ್ಲಿ ಮಗ್ನನಾಗಿದ್ದನು.
ಅವರಿಬ್ಬರ ಆ ನೆಮ್ಮದಿ ಬಹಳ ದಿನ ಉಳಿಯಲಿಲ್ಲ. ಏಕೆಂದರೆ, ಒಂದು ಇಪ್ಪತ್ತು ದಿನಗಳು ಯಾವ ತಕರಾರೂ ಇಲ್ಲದಂತೆ ನಡೆದುಕೊಂಡು ಹೋಗುತಿದ್ದ ಕೆಲಸಗಳು ನಂತರದ ದಿನಗಳಲ್ಲಿ ಒಂದೊಂದಾಗಿ ಕ್ರಮ ತಪ್ಪತೊಡಗಿದವು.
ಬೆಳಗ್ಗೆ ಆರಕ್ಕೇಳುತ್ತಿದ್ದವರು ಎಂಟು ಒಂಬತ್ತಾದರೂ ಏಳುತ್ತಿರಲಿಲ್ಲ. ಇದನ್ನು ಕಂಡ ಭಾಸ್ಕರ ರಾತ್ರಿಯೇ ಬಾಗಿಲು ಗುಡಿಸಿ ನೀರು ಹಾಕಿ ಸ್ವಚ್ಛಮಾಡುತ್ತಿದ್ದ. ನಂದಿನಿ ರಂಗೋಲಿ ಹಾಕುತ್ತಿದ್ದಳು. ಬೆಳಗಿನ ಕಾಫಿ ಕೆಲಸವೂ ನಂದಿನಿಯ ಪಾಲಿಗೇ ಬಂತು. ಹತ್ತಾದರೂ ಬೆಳಗಿನ ಉಪಹಾರದ ಸೂಚನೆ ಕಂಡುಬರುತ್ತಿರಲಿಲ್ಲ. ಮಗುವಿಗೆ ಹಾಲೂಡಿಸುತ್ತಿದ್ದ ನಂದಿನಿಗೆ ಸಂಕಟ ಪಡುವಂತಾಗುತಿತ್ತು.
ನಂದಿನಿ ಭಾಸ್ಕರ ಇಬ್ಬರೂ ಇದೇಕೆಂದು ತಿಳಿಯದೇ ಚಿಂತಿತರಾದರು. ಒಂದುದಿನ ಸಮಯ ನೋಡಿ ನಂದಿನಿ ಭಾಸ್ಕರನ ಚಿಕ್ಕಮ್ಮ ಸ್ನಾನಕ್ಕೆ ಹೋಗಿರುವ ಸಮಯದಲ್ಲಿ ತನ್ನ ಅತ್ತೆಗೆ ಫೋನ್ ಮಾಡಿ ಈ ಬಗ್ಗೆ ತನ್ನ ತಾಪತ್ರಯಗಳನ್ನೆಲ್ಲಾ ಹೇಳಿಕೊಂಡಳು. ಅದನ್ನು ಕೇಳಿದ ಅವರು “ಓ ಹೀಗಾಯ್ತಾ ! ನೀನು ಮದುವೆಯಾಗಿ ಬಂದಾಗಿನಿಂದ ನಾನು ನಮ್ಮ ಕುಟುಂಬದ ನಿಕಟವರ್ತಿಗಳ ಬಗ್ಗೆ ನಿನಗೆ ಅಷ್ಟಾಗಿ ತಿಳಿಸಿರಲಿಲ್ಲ. ಈಗ ಹೇಳಲೇಬೇಕಾದ ಸಮಯ ಬಂದಿದೆ ಕೇಳು. ನಮ್ಮದು ಕೂಡುಕುಟುಂಬದ ಮನೆ. ನಿಮ್ಮ ಮಾವನವರೇ ಮನೆಗೆ ದೊಡ್ಡ ಮಗನಾದ್ದರಿಂದ ಅವರೇ ಹಿರಿಯರು. ಜೊತೆಗೆ ಸರ್ಕಾರಿ ನೌಕರಿಯಲ್ಲಿದ್ದವರು. ಮಿಕ್ಕ ಅವರ ಮೂರು ಜನ ತಮ್ಮಂದಿರು ಹೊಲದ ಕೆಲಸ ಮಾಡಿಕೊಂಡಿದ್ದರು. ಸ್ವಲ್ಪ ವ್ಯಾಪಾರ ವಹಿವಾಟೂ ಇತ್ತು. ನಾನೂ ಸರ್ಕಾರಿ ನೌಕರಿ ಮಾಡುತ್ತಿದ್ದೆ. ಅವರೆಲ್ಲರಿಗೆ ಇಬ್ಬರೂ ದುಡಿದು ಸಂಪಾದಿಸುತ್ತಿದ್ದಾರೆ. ಆದ್ದರಿಂದ ನಮ್ಮ ಬೇಕುಬೇಡಗಳನ್ನು ಇವರೇ ಒದಗಿಸಬೇಕು ಅನ್ನುವ ಅಭಿಪ್ರಾಯದಲ್ಲಿದ್ದರು. ಯಾವ ಸಂಕೋಚವೂ ಇಲ್ಲದೆ ತಮ್ಮ ಬೇಡಿಕೆಗಳನ್ನು ನಮ್ಮ ಮುಂದಿಡುತ್ತಿದ್ದರು. ತಮ್ಮಂದಿರ ಲಗ್ನಮಾಡುವುದಿರಲಿ, ಅವರ ಮಕ್ಕಳ ಲಗ್ನಗಳನ್ನೂ ನಾವೇ ಮಾಡಿದ್ದೇವೆ. ಹೀಗಾಗಿ ಒಂದು ರೀತಿಯಲ್ಲಿ ಚಕ್ರವ್ಯೂಹದಲ್ಲಿ ಸಿಕ್ಕಿಕೊಂಡು ನಾವು ಒದ್ದಾಡುವುದೇ ಆಗಿತ್ತು. ನಾನು ಮೈಸೂರಿನಿಂದ ಬಂದವಳಾದ್ದರಿಂದ ಭಾಸ್ಕರನನ್ನು ವಿದ್ಯಾಭ್ಯಾಸದ ನೆಪದಲ್ಲಿ ನನ್ನ ತವರಿನಲ್ಲಿಯೇ ಬಿಟ್ಟಿದ್ದೆ. ಹೊರಗೇ ಕಾಲಕಳೆದದ್ದರಿಂದ ಅವನಿಗೆ ನಮ್ಮ ದಾಯಾದಿಗಳ ಗುಣಸ್ವಭಾವಗಳ ಪರಿಚಯ ಹೆಚ್ಚಾಗಿಲ್ಲ. ಅಲ್ಲದೆ ಅವರ ಬಗ್ಗೆ ಚೆನ್ನಾಗಿ ತಿಳಿದಿದ್ದ ನಾನು ಅವರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವಂತೆಯೇ ಬೆಳೆಸಿದ್ದೆ. ಆದರೆ ಈಗ ನೀನು ಹೇಳುತ್ತಿರುವುದನ್ನು ಕೇಳಿದಾಗ ನನ್ನ ಮೂಗಿಗೆ ಬೇರೇನೋ ವಾಸನೆ ಬಡಿಯುತ್ತಿದೆ. ಬಂದಿರುವ ಕಾಕಿ ಭಾಸ್ಕರನ ಹತ್ತಿರ ಅದು, ಇದು ಬೇಕೆಂದಾಗಲೀ, ಏನಾದರೂ ಮಾಡಿಕೊಡು ಎಂದಾಗಲೀ ಕೇಳಿದರೇ?” ಎಂದು ಪ್ರಶ್ನಿಸಿದರು.
“ಅತ್ತೆ, ನೀವೇ ಕೇಳಿದ ಮೇಲೆ ನೆನಪಿಗೆ ಬರುತ್ತಿದೆ. ಪ್ರತಿದಿನ ಒಂದಲ್ಲ ಒಂದು ಬೇಡಿಕೆ ಮುಂದಿಡುತ್ತಲೇ ಇದ್ದಾರೆ. ಆದರೆ ಭಾಸ್ಕರ್ ನನ್ನ ಬಳಿ ಏನನ್ನೂ ಹೇಳುವುದಿಲ್ಲ” ಎಂದಳು.
“ಹೌದೇ ಅದೆಂತಹುದು ಹೇಳು ನಂದಿನಿ?”
“ಅದೇ ಅತ್ತೆ, ಲೋ ಭಾಸ್ಕರ ನಿಮ್ಕ ಅಮ್ಮ ನನ್ನ ಮಗಳ ಮದುವೆ ಮಾಡಿದರು. ನನಗಿರುವ ಒಬ್ಬನೇ ಮಗ ಛಲೋ ಓದಲಿಲ್ಲ. ಅವನಿಗೆ ಇಲ್ಲೇ ಯಾವುದಾದರೂ ನೌಕರಿಗೆ ಹಚ್ಚಿ ಅವನ ಲಗ್ನ ಮಾಡಿಸಪ್ಪಾ. ಹೇಗೂ ಇಬ್ಬರೂ ಛಲೋತ್ನಾಗ ಕೆಲಸ ಮಾಡುತ್ತಾ ಕೈತುಂಬ ಗಳಿಸ್ತಿದ್ದೀರಿ. ನಮಗೇನದಪ್ಪಾ. ನಾವು ಊರಿನಲ್ಲಿರುವ ಮನೆ ಕೂಡ ತುಂಬ ಹಳತಾಗಿದೆ. ಅದನ್ನೊಂದು ತುಸ ಬಂದೋಬಸ್ತು ಮಾಡಿಸಿಕೊಡೋ. ಆಗಲಿಲ್ಲಾಂದ್ರೆ ಅದನ್ನು ಮಾರಿಸಿಬಿಟ್ಟು ಒಂದು ಬೇರೆ ಮನೆ ತೊಗೊಂಡು ನಮ್ಮನ್ನಿರಿಸೋ. ಇಲ್ಲಾಂದ್ರೆ ಇನ್ನೂ ಒಂದು ಕೆಲಸ ಮಾಡು. ಇತ್ತೀಚೆಗೆ ನಿಮ್ಮ ಅಪ್ಪಗೂ ಅಷ್ಟಾಗಿ ಆರಾಮಿರೋದಿಲ್ಲ. ಊರಿನಲ್ಲಿ ನಿಮ್ಮ ಅಮ್ಮ ಒಬ್ಬಳೇ ಒದ್ದಾಡುತ್ತಾಳೆ. ಅವರಿಬ್ಬರನ್ನೂ ಇಲ್ಲಿಗೇ ಕರೆಸಿಕೊಂಡು ಬಿಡ್ರೀ. ಹೇಗೂ ಮನೆ ಆರಾಮೈತೆಲ್ಲಾ. ಅವರಿರುವ ಮನೇಲಿ ನಾವು ಇರುತ್ತೇವೆ. ಹೀಗೇ.”ಎಂದಳು.
ಬಿಡು ಬಿಡು ನನಗೆಲ್ಲ ಅರ್ಥವಾಯಿತು. ಇದೆಲ್ಲಾ ನಾನು ಅನುಭವಿಸಿರುವ ಹಳೇ ವಿಧಾನಗಳು. ನನ್ನ ಮಗನ ಹತ್ತಿರವೂ ಹೀಗೇ ಮುಂದುವರಿಸುತ್ತಾರೆಂದು ನಾನು ಭಾವಿಸಿರಲಿಲ್ಲ. ಒಂದು ಕೆಲಸ ಮಾಡು. ಮುಂದಿನ ವಾರ ಸರ್ಕಾರದಿಂದ ಲಾಕ್‌ಡೌನನ್ನು ಸ್ವಲ್ಪ ಮಟ್ಟಿಗೆ ಸಡಲಿಸುವರಂತೆ. ಆಗ ಕರ್ನಾಟಕದೊಳಗೆ ಊರಿಂದೂರಿಗೆ ಹೋಗಲು ಅವಕಾಶವಾಗುತ್ತದೆ. ಯಾರನ್ನಾದರೂ ಹಿಡಿದು ಹಣ ಸ್ವಲ್ಪ ಹೆಚ್ಚಿಗೆ ಖರ್ಚಾದರೂ ಸರಿ ಟ್ಯಾಕ್ಸಿ ಮಾಡಿ ಅವಳನ್ನು ಊರಿಗೆ ಸಾಗಹಾಕಿಬಿಡಿ. ಭಾಸ್ಕರನಿಗೆ ನನಗೆ ಫೋನ್ ಮಾಡಲು ಹೇಳು. ನಾನೆಲ್ಲ ವಿವರವಾಗಿ ತಿಳಿಸುತ್ತೇನೆ” ಎಂದರು.
“ಅಲ್ಲಾ ಅತ್ತೆ, ಅವರನ್ನು ನಾವೇ ಕರೆತಂದಿದ್ದು ಈಗ ಹೇಗೆ ಹೋಗಿರೆಂದು ಹೇಳುವುದು?”
“ಹೀಗೆ ಮಾಡು, ನಿಮ್ಮೂರಿನಲ್ಲಿರುವ ದೊಡ್ಡಪ್ಪನ ಮನೆಗೆ ನಿನ್ನನ್ನು ಕರೆದಿದ್ದಾರೆ. ಕೆಲವು ದಿನ ಅಲ್ಲಿದ್ದು ಬರುತ್ತೇನೆ. ಎಂದು ಕಾರಣ ಹೇಳಿ ಹೇಗಾದರೂ ಕೈ ತೊಳೆದುಕೊಳ್ಳಿ. ನಾನು ಈ ವಿಷಯ ನಿನಗೆ ಹೇಳಿದೆನೆಂಬ ವಿಷಯ ಗುಟ್ಟಾಗಿರಲಿ.” ಎಂದು ಫೋನ್ ಇಟ್ಟರು.
ಹಾಗೂ ಹೀಗೂ ಲಾಕ್‌ಡೌನ್ ಐವತ್ತನೇ ದಿನಕ್ಕೆ ಕಾಲಿಟ್ಟಿತ್ತು ಸರ್ಕಾರದಿಂದ ಸ್ವಲ್ಪ ರಿಯಾಯಿತಿಗಳೂ ಪ್ರಯಾಣಮಾಡಲು ದೊರೆತಿದ್ದವು. ಅಷ್ಟರಲ್ಲೇ ಭಾಸ್ಕರ್‌ರವರ ಗೆಳೆಯರೊಬ್ಬರು ರಾಯಚೂರಿಗೇ ಹೊರಟಿದ್ದರು. ಆಗ ನಂದಿನಿ ಅವರ ಅತ್ತೆಯ ಮಾತುಗಳನ್ನು ನೆನಪಿಸಿ ಕಾಕಿಯನ್ನು ಹೊರಡಿಸಲು ಗಂಡನಿಗೆ ಜ್ಞಾಪಿಸಿದಳು. ಅವನಿಗೂ ಸಾಕಷ್ಟು ರೋಸಿಹೋಗಿತ್ತು. ತಮ್ಮ ಗೆಳೆಯನ ಬಳಿ ಸಾದ್ಯಂತ ವಿವರಿಸಿ ಹೇಗಾದರೂ ತಮ್ಮ ಕಾಕಿಯನ್ನು ಊರಿಗೆ ಕರೆದುಕೊಂಡು ಹೋಗಲು ಕೇಳಿಕೊಂಡರು. ಚಿಕ್ಕಮ್ಮನನ್ನು ಹಾಗೂ ಹೀಗೂ ಮಾಡಿ ಮನವೊಲಿಸಿ ದುಬಾರಿ ಚಾರ್ಜು ಕೊಟ್ಟು ಟ್ಯಾಕ್ಸಿಯೊಂದನ್ನು ಮಾಡಿ ತಮ್ಮ ಗೆಳೆಯನೊಡನೆ ರಾಯಚೂರಿಗೆ ಸಾಗಹಾಕಿದರು. ಅಷ್ಟರಲ್ಲಿ ತಾವು ಕಲಿತ್ತಿದ್ದನ್ನೆಲ್ಲಾ ಖರ್ಚುಮಾಡಿದ್ದರು. ಅವರಿಗೆ ಮತ್ತೊಮ್ಮೆ ಅಮ್ಮನ ಹೊಟ್ಟೆಯಲ್ಲಿ ಹುಟ್ಟಿಬಂದಷ್ಟೇ ಸಂತಸವಾಯಿತು.
ತನ್ನ ಗಂಡನ ಚಿಕ್ಕಮ್ಮ ಊರಿಗೆ ತೆರಳಿದ ಮೇಲೆ ನಂದಿನಿ ಮಗು ಮಲಗಿದ್ದಾಗ ಅಸ್ತವ್ಯಸ್ತವಾಗಿದ್ದ ಮನೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನ ನಡೆಸಿದಳು. ಮೊದಲು ವಾರ್ಡ್ರೋಬಿನಲ್ಲಿದ್ದ ಬಟ್ಟೆಗಳನ್ನು ಜೋಡಿಸುತ್ತಿರುವಾಗ ತನ್ನ ತಾಯಿ ಊರಿನಿಂದ ತಂದುಕೊಟ್ಟಿದ್ದ ಒಂದೆರಡು ಹೊಸ ರೇಷ್ಮೆ ಸೀರೆಗಳು ಕಾಣಿಸಲಿಲ್ಲ. ಬೇರೆಕಡೆಯಲ್ಲಿ ಇಟ್ಟಿರಬಹುದೆಂದು ತಡಕಾಡಿದಾಗ ಅವುಗಳು ಮಾಯವಾಗಿರುವುದು ಖಚಿತವಾಯಿತು. ಜೊತೆಗೆ ತಾನು ಆಫೀಸಿಗೆ ಹೋಗುವಾಗ ಧರಿಸುತ್ತಿದ್ದ ಆರ್ಟಿಫಿಷಿಯಲ್ ಜ್ಯೂಯೆಲ್ಲರಿ ಬಾಕ್ಸ್ ಕೂಡ ಕಾಣೆಯಾಗಿರುವುದು ಬೆಳಕಿಗೆ ಬಂತು. ಅಷ್ಟರಲ್ಲಿ ಭಾಸ್ಕರ ಬಂದು “ನಂದಿನಿ ಏನು ಮಾಡುತ್ತಿದ್ದೀ? ನಾಳೆಯಿಂದ ಹಿಂದಿನ ಮನೆಯ ಅಜ್ಜಿ ಮನೆಗೆಲಸಕ್ಕೆ ಬರುತ್ತಾರಂತೆ. ಅವರ ಹತ್ತಿರ ಮಾತನಾಡಿದ್ದೇನೆ. ನಿಧಾನವಾಗಿ ಒಂದೊಂದನ್ನೇ ಸರಿಪಡಿಸೊಣ” ಎಂದ.
ಬಟ್ಟೆಗಳನ್ನೆಲ್ಲ ಗುಡ್ಡೆಹಾಕಿಕೊಂಡು ಕುಳಿತಿದ್ದ ನಂದಿನಿಯನ್ನು “ಏನಾಯ್ತು ನಂದಿನಿ?” ಎಂದು ಕೇಳಿದ.
“ನನ್ನನ್ನು ಕ್ಷಮಿಸಿಬಿಡಿ ನಾನು ತಾನೇ ನಿಮ್ಮ ಕಾಕಿಯನ್ನು ಕರೆದುಕೊಂಡು ಬನ್ನಿ ಎಂದು ಸಲಹೆ ಕೊಟ್ಟವಳು” ಎಂದು ಬೇಡಿದಳು.
“ಬಿಡು ನಂದಿನಿ ಅಮ್ಮ ನನಗೆ ಎಲ್ಲ ಹೇಳುವವರೆಗೂ ನನಗೆ ಅವರ ಗುಣಸ್ವಭಾವಗಳ ಪರಿಚಯವೇ ಇರಲಿಲ್ಲ. ಆಕೆ ತುಂಬ ಸ್ವಾರ್ಥಿ, ದುರಾಸೆಯ ಹೆಂಗಸು. ನಿಸ್ಸಂಕೋಚವಾಗಿ ಕೊನೆಮೊದಲಿಲ್ಲದೆ ಬೇಡುತ್ತಲೇ ಇರುತ್ತಾರೆ. ನನ್ನದೂ ಒಂದೆರಡು ಹೊಸ ಟೀಶರ್ಟ್ಗಳು, ಬರ್ಮುಡಾಗಳು ಕಂಡುಬರುತ್ತಿಲ್ಲ” ಎಂದ.
“ನನ್ನವೂ ಹೊಸದಾದ ಕೆಲವು ಸೀರೆಗಳು ಮಾಯವಾಗಿವೆ, ಮಾತು ನಮ್ಮಲ್ಲಿಯೇ ಇರಲಿ. ಹೇಗೂ ಕೈಸುಟ್ಟುಕೊಂಡು ಪಾಠ ಕಲಿತಿದ್ದೇವೆ. ಇನ್ನು ಮುಂದೆ ಹುಷಾರಾಗಿರೋಣ” ಎಂದು ಮಾತು ಮುಗಿಸಿದಳು ನಂದಿನಿ.
“ಕೊರೋನಾ ಪೀಡೆಗೆ ಇಂದಲ್ಲಾ ನಾಳೆ ಮದ್ದು ಕಂಡುಹಿಡಿಯಬಹುದು. ಆದರೆ ಇಂತಹ ಪೀಡೆಗಳಿಗೆ ಯಾವ ಮದ್ದು?”
ಅಷ್ಟರಲ್ಲಿ ಮಗು ಎದ್ದು ಅತ್ತ ಸದ್ದಾಯಿತು. “ಅವರ ವಿಚಾರ ಸಾಕುಮಾಡು. ನಮ್ಮಿಬ್ಬರ ‘ಮುದ್ದು’ವಿನ ಸಮಾಚಾರ ವಿಚಾರಿಸೋಣ ಬಾ” ಎಂದು ಅವಳನ್ನು ಕರೆದುಕೊಂಡು ಮಗುವಿದ್ದ ಕೊಠಡಿಗೆ ಬಂದರು.
-ಬಿ.ಆರ್ .ನಾಗರತ್ನ, ಮೈಸೂರು
ಜೀವನದಲ್ಲಿ ಯಾರನ್ನು ನಂಬುವಯದೋ, ಯಾರನ್ನು ಬಿಡುವುದೋ ತಿಳಿಯಲಾಗದು. ಕರೋನಾ ಸಮಯದಲ್ಲಿ ಅನುಭವಿದಿದ ಗೊಂದಲಗಳ ಮನ ಮುಟ್ಟುವ ಕಥೆ ಸೊಗಸಾಗಿದೆ.
ಧನ್ಯವಾದಗಳು ಪದ್ಮಾ ಮೇಡಂ
ಪ್ರಕಟಣೆಗಾಗಿ ಗೆಳತಿ ಹೇಮಾಳಿಗೆ ಧನ್ಯವಾದಗಳು
ಚಂದದ ಕಥೆ.
ಧನ್ಯವಾದಗಳು ನಯನ ಮೇಡಂ
ಹೀಗೇ…ಎರಡು ಮುಖದ ವ್ಯಕ್ತಿಗಳನ್ನು ನಂಬಿದರೆ ಗೋವಿಂದ! ಕೆಲವೊಮ್ಮೆ ನಮ್ಮ ಅವಶ್ಯಕತೆಗಳಿಗೆ ಎಂತಹವರೊಡನೆಯೂ ಏಗಬೇಕಾಗುತ್ತದೆ. ಚಂದದ ಕಥೆ, ನಾಗರತ್ನ ಮೇಡಂ.
ಚೆಂದದ ಕಥೆ. ಇಂಥಹ ಸಮಯಸಾಧಕರೂ ಇರುತ್ತಾರಾ ಅನಿಸಿತು.