ಹೊಸ ಸಂಕಲ್ಪಗಳೊಂದಿಗೆ ಸ್ವಾಗತ…

Share Button

2024ನೇ ವರ್ಷ ಮುಗಿದು 2025 ನೇ ಇಸ್ವಿಗೆ ಕಾಲಿಡುತ್ತಿದ್ದೇವೆ. ಈ ಸಂದರ್ಭ ಒಂದು ರೀತಿಯಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಏಕೆಂದರೆ 2024ರ ಇಸವಿಯು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಮುದ ನೀಡಿದೆ. ಕೆಲವು ಕಹಿ ಘಟನೆಗಳು ನಡೆದಿರುತ್ತವೆ. ಈ ಕಾಲ ನಿಲ್ಲುವುದಿಲ್ಲ ಅದು ನಿರಂತರ ಪ್ರಕ್ರಿಯೆ. ಅದು ಯಾರಿಗಾಗಿಯೂ ಕಾಯುವುದಿಲ್ಲ. ತನ್ನ ಜೊತೆ ಜೊತೆಯಲಿ ಎಲ್ಲಾ ಘಟನೆಗಳನ್ನು ಅಂತರಂಗದಲ್ಲಿ ಅಡಗಿಸಿಟ್ಟುಕೊಂಡು ನಡೆಯುತ್ತಲೇ ಇರುತ್ತದೆ!. ಕಾಲದ ಹಕ್ಕಿಯ ಕೆಲಸವೇ ನಿರಂತರವಾಗಿ ಹಾರುವುದು!. ಕಾಲಚಕ್ರ ತಿರುಗುತ್ತಲೇ ಇರುತ್ತದೆ!. ಹೊಸ ವರ್ಷ ಬಂತೆಂದರೆ ಸಾಕು ಎಲ್ಲರೂ ಕೂಡ ನಾನು ಈ ವರ್ಷದಿಂದಾದರೂ ಬದಲಾಗಬೇಕು ಎನ್ನುವ ಒಂದು ಮಹತ್ತರವಾದ ಸಂಕಲ್ಪಗಳನ್ನ ಅಳವಡಿಸಿಕೊಳ್ಳಲು ಒಂದು ಪರ್ವಕಾಲ!. ಜೊತೆಗೆ ಒಂದು ವೇದಿಕೆಯು ಎನ್ನುವಂತೆ ನಿರ್ಮಾಣವಾಗಿ ಒಂದು ರೀತಿಯಲ್ಲಿ ಮುನ್ನುಡಿಯಾಗುತ್ತದೆ.

ಹೊಸ ವರ್ಷಕ್ಕೆ ಹತ್ತಾರು ಸಂಕಲ್ಪಗಳನ್ನು ನಾವು ಪಟ್ಟಿ ಮಾಡಿಕೊಳ್ಳುತ್ತಲೇ ಬರುತ್ತಿದ್ದೇವೆ. ನನ್ನನ್ನು ಕೂಡ ಸೇರಿಸಿಕೊಂಡು! 2023 ಮುಗಿದು 2024 ಕಾಲಿಟ್ಟಾಗಲು ಕೂಡ ನಾನು ಇದೇ ರೀತಿಯ ವಿವಿಧ ಸಂಕಲ್ಪಗಳನ್ನ ಹಾಕಿಕೊಂಡಿದ್ದೋ ಹಾಕಿಕೊಂಡಿದ್ದು! ಅವು ನೆರವೇರಲಿ ಬಿಡಲಿ ಸಂಕಲ್ಪಗಳನ್ನ ಮೊದಲು ನಾವು ಹಾಕಿಕೊಳ್ಳಬೇಕು. ಏಕೆಂದರೆ ಅದು ಈ ವರ್ಷ ನೆರವೇರದಿದ್ದರೂ ಕೂಡ ಮುಂದಿನ ವರ್ಷ ಖಂಡಿತ ನಮ್ಮ ಹಳೆಯ ಸಂಕಲ್ಪಗಳು ಮುನ್ನೆಲೆಯಾಗಿ ಬರುತ್ತವೆ. ಆದುದರಿಂದಾಗಿ ನಾವು ಅಯ್ಯೋ ಕಳೆದ ಬಾರಿ ಸಂಕಲ್ಪಗಳನ್ನ ಹಾಕಿಕೊಂಡಿದ್ದೆ, ಅವು ಇನ್ನೂ ನೆರವೇರಿಲ್ಲ ಮತ್ತೆ ಹೊಸ ವರ್ಷ ಬಂದೇ ಬಿಟ್ಟಿತು ಮತ್ತೆ ನಾವು ಸಂಕಲ್ಪಗಳನ್ನ ಹಾಕಿಕೊಂಡರೆ ಒಂದು ರೀತಿಯಲ್ಲಿ ಹೊಸ ವರ್ಷಕ್ಕೆ ನಾವು ಮೋಸ ಮಾಡಿದಂತೆ ಎನ್ನುವ ಮಂದಿಯೂ ಕೂಡ ಇದ್ದಾರೆ!

ಇಲ್ಲಿ ಅದ್ಯಾವ ಪ್ರಶ್ನೆಯೂ ಕೂಡ ಬರುವುದಿಲ್ಲ. ಏಕೆಂದರೆ ಸಂಕಲ್ಪಗಳನ್ನೂ ನಾವು ಹಾಕಿಕೊಂಡಾಗ ಎಲ್ಲವನ್ನೂ ಕೂಡ ನೆರವೇರಿಸಿಕೊಳ್ಳಲೇಬೇಕು ಎನ್ನುವ ಛಲವಿರಬೇಕು ಅಷ್ಟೇ. ಆದರೆ ಬಿತ್ತಿದ ಎಲ್ಲ ಬೀಜಗಳು ಹೇಗೆ ಮೊಳಕೆ ಹೊಡೆಯುವುದಿಲ್ಲವೋ ಅದೇ ರೀತಿ ಕೆಲವು ಸಂಕಲ್ಪಗಳು ನೀರುಪಾಲಾಗುತ್ತದೆ! ಆದರೆ ಹಲವು ಸಂಕಲ್ಪಗಳು ನೆರವೇರಿವೆ. ಅಂತವುಗಳನ್ನು ನಾನು ಅನುಭವಿಸಿದ್ದೇನೆ, ಹಾಕಿಕೊಂಡಿದ್ದೇನೆ ಯಶಸ್ಸು ಪಡೆದಿದ್ದೇನೆ. ಆದರೂ ಕೂಡ ನನ್ನ ಹಲವು ವರ್ಷಗಳ ಹಳೆಯ ಸಂಕಲ್ಪಗಳು ಇನ್ನೂ ನೆರವೇರಿಲ್ಲ ಎನ್ನುವ ಒಂದು ಕೊರಗು ಮನದ ಮೂಲೆಯಲ್ಲಿ ಇದ್ದೇ ಇರುತ್ತದೆ. ಅವನ್ನೆಲ್ಲಾ ಸಾಕಾರ ಗೊಳಿಸಲು ಒಂದು ಉತ್ತಮ ಪ್ರಯತ್ನ ನನ್ನ ಬಳಿ ಇದ್ದೇ ಇರುತ್ತದೆ. ಹೊಸ ಹುರುಪಿನಲ್ಲಿನಲ್ಲಿ ಕೈಗೊಳ್ಳುವ ಎಷ್ಟೋ ಸಂಕಲ್ಪಗಳನ್ನು ಪೂರ್ಣಗೊಳಿಸಲು ಚಿಕ್ಕ ಪ್ರಯತ್ನಗಳನ್ನು ಕೂಡ ಮಾಡದೆ ಇರುವ ಮಂದಿಯೇ ಇಂದು ನಮ್ಮೆದುರು ಹೆಚ್ಚಾಗಿ ಇದ್ದಾರೆ.

ಅದರಿಂದಾಗಿ ಹಾಕಿಕೊಂಡ ಸಂಕಲ್ಪಗಳು ಅಲ್ಲೇ ಕಮರಿ ಹೋಗುತ್ತಿವೆ. ಇಲ್ಲ ಸುಮ್ಮನೆ ಉಳಿದುಬಿಟ್ಟಿರುತ್ತವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಾವು ಯಾವುದೇ ಸಂಕಲ್ಪಗಳನ್ನ ನೆರವೇರಿಸಲು ಮುಖ್ಯವಾಗಿ ಬೇಕಾಗಿರುವುದು ನಮಗೆ ಪರಿಶ್ರಮ, ಜೊತೆಗೆ ತಾಳ್ಮೆ!. ಪ್ರಯತ್ನ ಅತ್ಯಗತ್ಯವಾಗಿ ಬೇಕೇ ಬೇಕು. ಮೊದಲೇ ಗಾದೆ ಇಲ್ಲವೇ “ಮನಸ್ಸಿದ್ದರೆ ಮಾರ್ಗ”- ನಾವು ನಮ್ಮ ಮನಸ್ಸನ್ನು ಆಚೆ-ಈಚೆ ಬಿಡದೆ ಅದನ್ನ ಸ್ಥಿಮಿತದಲ್ಲಿ ಹಿಡಿದಿಟ್ಟುಕೊಂಡು ಸ್ಥಿರ ಮನಸ್ಸಿನಲ್ಲಿ ಕೆಲವು ನಿರ್ಧಾರಗಳನ್ನ, ಯೋಜನೆಗಳನ್ನ, ಸಂಕಲ್ಪಗಳನ್ನ ಮಾಡಿದ್ದೆ ಆದಲ್ಲಿ ನಾವು ಏನು ಬೇಕಾದರೂ ಸಾಧಿಸಬಹುದು. ನಾನು ಮೊದಲೇ ಹೇಳಿದನಲ್ಲ ಕಳೆದ ವರ್ಷದ ಸಂಕಲ್ಪಗಳೇ ಖಾಲಿ ಉಳಿದಿವೆ. ಹೊಸ ಸಂಕಲ್ಪಗಳು ನಮಗೆ ಬೇಡ ಎನ್ನುವ ನಿರ್ಧಾರದಿಂದ ಮೊದಲು ಹೊರ ಬರಬೇಕು! ಬನ್ನಿ 2025 ಇಸವಿಗೆ ಕಾಲಿಡುತ್ತಿದ್ದೇವೆ. ದೃಢ ಸಂಕಲ್ಪ ದೊಂದಿಗೆ ನಾವು ಮೊದಲು ಒಂದು ವೇದಿಕೆಯನ್ನು ನಿರ್ಮಾಣ ಮಾಡಿಕೊಳ್ಳೋಣ.

ಒಂದು ಪೀಠಿಕೆಯಾಗಿ ಹೇಳಬೇಕೆಂದರೆ……. ನಮ್ಮ ಯಾವುದೇ ಗುರಿಗಳು ಅದು ಸಾಕಾರಕ್ಕೆ ಬರಲು ನಿರಂತರವಾಗಿ ಪರಿಶ್ರಮ ಪಡಲೇಬೇಕು. ಜೊತೆಗೆ ಮೊದಲು ನಾವು ಚಿಕ್ಕ ಚಿಕ್ಕ ಗುರಿಗಳನ್ನ ಸಾಧಿಸುವ ಮೂಲಕ ದೊಡ್ಡ ದೊಡ್ಡ ಸಂಕಲ್ಪಕ್ಕೆ ಕೈ ಹಾಕಿ ಶ್ರಮ, ಕ್ರಮ ವಹಿಸಬೇಕು. ಮನುಷ್ಯ ಎಂದ ಮೇಲೆ ನಾವು ತಪ್ಪುಗಳನ್ನು ಮಾಡುತ್ತೇವೆ. ಆದರೆ ಇಂದಿನ ತಪ್ಪುಗಳು ಮತ್ತೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ನಾನು ಹಾಕಿಕೊಂಡ ಸಂಕಲ್ಪ ಏಕೆ ನೆರವೇರಿಲ್ಲ ಎಂದು ಹುಡುಕಿ ಅದನ್ನ ತಿದ್ದುಕೊಳ್ಳಬೇಕು. ಮುಖ್ಯವಾಗಿ ನಮಗೆ ಬೇಕಾಗಿರುವುದು ಧೈರ್ಯ. ಒಂದಿಷ್ಟು ಆತ್ಮವಿಶ್ವಾಸ ಗಟ್ಟಿಯಾದ ನಿಲುವು ತೆಗೆದುಕೊಳ್ಳುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಲೇಬೇಕು. ನಮ್ಮ ಸಂಕಲ್ಪಗಳು ವ್ಯಕ್ತಿಗತ ಆಗಿರಬಹುದು ಸಮಾಜಮುಖಿ ಆಗಿರಬಹುದು ಎಲ್ಲವನ್ನು ಕೂಡ ತಾಳ್ಮೆಯಿಂದ ಅಳೆದು ತೂಗಬೇಕು ಯಾವುದು ಬೇಕು, ಯಾವುದು ಬೇಡ ಎನ್ನುವುದರ ತಿಳುವಳಿಕೆಯು ಕೂಡ ಇರಲೇಬೇಕು. ಅಲ್ಲದೆ ಮೊದಲು ನಮ್ಮ ಮೇಲೆ ನಮಗೆ ನಿಯಂತ್ರಣವಿರಬೇಕು. ಹುಚ್ಚು ಹುಚ್ಚು ಸಂಕಲ್ಪಗಳನ್ನು ಹಾಕಿಕೊಂಡು ಅವು ನೆರವೇರದೆ ನಾವೇ ಅದನ್ನ ಅನುಭವಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳಬಾರದು. ನಾವು ಈಗ ಮುಖ್ಯವಾದ ಸಂಕಲ್ಪಗಳ ಬಗ್ಗೆ ಈ 2025ನೇ ಇಸ್ವಿಯಲ್ಲಿ ಮಾಡಲೇಬೇಕು. ಇದು ಅನಿವಾರ್ಯವೂ ಕೂಡ ಆಗಿದೆ.

ಮೊದಲು ನಾವು ಆರೋಗ್ಯದ ಕಡೆಗೆ ಗಮನ ಹರಿಸಲೇಬೇಕು. ಇದು ಮುಖ್ಯವಾದದ್ದು ಏಕೆಂದರೆ ನಾವು ಆರೋಗ್ಯದಿಂದ ಇದ್ದರೆ ತಾನೆ, ಮುಂದೆ ಬಾಳಿ ಬದುಕಬಹುದು. ಜೊತೆಗೆ ಹಲವು ಯೋಜನೆಗಳನ್ನು ಕೂಡ ಹಾಕಿಕೊಳ್ಳಬಹುದು. ಇಂದಿನ ಒಂದು ಯಾಂತ್ರಿಕ ಯುಗದಲ್ಲಿ, ಸ್ಪರ್ಧಾತ್ಮಕ ಯುಗದಲ್ಲಿ ದಿನದಿಂದ ದಿನಕ್ಕೆ ನಮ್ಮ ಅನಾರೋಗ್ಯ ಸಮಸ್ಯೆಯು ನಿರಂತರವಾಗಿ ಕಾಡುತ್ತಿದೆ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವಲೇಬೇಕು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುವಂತ ಗಮನ ಹರಿಸಲೇಬೇಕು ರುಚಿ ಶುಚಿಯಾದ ಆಹಾರವನ್ನ ಸೇವಿಸಬೇಕು. ಕಡ್ಡಾಯವಾಗಿ ಪಾಸ್ಟ್ ಫುಡ್ ಗಳನ್ನ, ಜಂಕ್ ಫುಡ್ ಗಳನ್ನು ತಿರಸ್ಕಾರ ಮಾಡಲೇಬೇಕು. ಅನಿವಾರ್ಯವಾಗಿ ತಿಂಗಳಿಗೆ ಮೂರು ತಿಂಗಳಿಗೋ ಸ್ನೇಹಿತರೊಟ್ಟಿಗೆ ತಿನ್ನಲು ಅಭ್ಯಂತರವಿಲ್ಲ. ಆದರೆ ಅದೇ ನಿರಂತರವಾಗಬಾರದು ಅಷ್ಟೇ! ಮನೆಯಲ್ಲೇ ಮಾಡಿಸಿದ ಆರೋಗ್ಯ ಪೂರ್ಣ ಸತ್ವಯುತ ಆಹಾರ ಪದಾರ್ಥಗಳನ್ನು ತಿಂದರೆ ಆರೋಗ್ಯದ ದೃಷ್ಟಿಯಿಂದಲೂ ಕೂಡ ಒಳ್ಳೆಯದು. ಆದುದರಿಂದಾಗಿ ಇದು ಮೊದಲ ಸಂಕಲ್ಪ ವಾಗಬೇಕು.

ನಮ್ಮ ದಿನಚರಿಗಳು ಬದಲಾಗಬೇಕು ನಮ್ಮ ಜೀವನದಲ್ಲಿ ಯಾವ ರೀತಿಯ ಯೋಜನೆಗಳನ್ನ ಯೋಚನೆಯನ್ನು ಮಾಡುತ್ತೇವೋ ಅದರ ಮೇಲೆ ನಮ್ಮ ಆ ಒಂದು ಯಶಸ್ಸು ಅಡಗಿರುತ್ತದೆ. ಅದರಿಂದಾಗಿ ನಾವು ದೈನಂದಿನ ಕೆಲಸದ ನಡುವೆ ಒಂದಲ್ಲ ಒಂದು ರೀತಿಯಲ್ಲಿ ನಿಗದಿತ ದಿನಚರಿಗಳನ್ನ ಹಾಕಿಕೊಳ್ಳಬೇಕು. ಬೆಳಗ್ಗೆ ಬೇಗ ಹೇಳುವುದು….. ಎದ್ದು ನೀರು ಕುಡಿದು, ಶೌಚಾಲಯಕ್ಕೆ ಹೋಗಿದ ನಂತರ ಯೋಗ, ವ್ಯಾಯಾಮ, ನಡಿಗೆ ಎಲ್ಲವನ್ನೂ ಕೂಡ ಅಳವಡಿಸಿಕೊಳ್ಳಲೇಬೇಕು. ಜೊತೆಗೆ ಬೆಳಿಗ್ಗೆ ಬರುವ ದಿನಪತ್ರಿಕೆಗಳ ಬಗ್ಗೆ ಕಣ್ಣಾಡಿಸಬೇಕು. ನಂತರ ಬೇಗನೆ ಸ್ನಾನ, ತಿಂಡಿ ಎಲ್ಲವನ್ನು ಮುಗಿಸಿ ಕಚೇರಿಗೂ ಅಥವಾ ಶಾಲಾ ಕಾಲೇಜುಗೂ ಅಥವಾ ಖಾಸಗಿ ಕೆಲಸಕ್ಕೆ ಹೋಗಬೇಕು ನಾವು ದಿನಾಲು ಒಂದು ದಿನಚರಿ ಹಾಕಿಕೊಂಡು ನಿಗದಿತ ಸಮಯಕ್ಕೆ ಎದ್ದು ಎಲ್ಲವನ್ನು ಕೂಡ ತಯಾರು ಮಾಡಿಕೊಂಡರೆ ನಮಗೆ ಕೆಲಸ ಕಾರ್ಯಗಳಿಗೆ ಹೋಗಲು ಒತ್ತಡ ಬರುವುದಿಲ್ಲ. ಜೊತೆಗೆ ಆತುರಾತುರವಾಗಿ ನಾವು ಮನೆಯನ್ನು ಬಿಟ್ಟು ಹಲವು ಬಾರಿ ಅಪಘಾತಗಳಿಗೂ ಕೂಡ ಒಳಗಾಗಿದ್ದೇವೆ.

ನಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಸದಾ ಒಂದಲ್ಲ ಒಂದು ಕೆಲಸದ, ಒತ್ತಡದ ನಡುವೆ ನಮ್ಮ ಆಸೆ ಆಕಾಂಕ್ಷೆಗಳನ್ನು ಬಿಟ್ಟು ಇಷ್ಟವಿಲ್ಲದ ಜೀವನ ಶೈಲಿಗೆ ಬೇರೆ ದಾರಿಯೇ ಇಲ್ಲದೆ ಒಗ್ಗಿ ಕೊಂಡಿರುವುದನ್ನ ಬದಲಿಸಿಕೊಳ್ಳಬೇಕು. ನಮಗೆ ಇಷ್ಟವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಸಮಯವನ್ನು ಮೀಸಲಿಡಬೇಕು. ಹೆಚ್ಚು ಕ್ರಿಯಾಶೀಲರಾಗಿ ಬದುಕುವುದನ್ನು ಕಲಿತುಕೊಳ್ಳಬೇಕು, ಏಕೆಂದರೆ ನಾವು ಸದಾ ಲವಲವಿಕೆಯಿಂದ ಇದ್ದರೆ ನಾವು ಮನೆಯಲ್ಲಿ ಕೆಲಸದ ನಡುವೆ ಒಂದು ರೀತಿಯಲ್ಲಿ ಸಕಾರಾತ್ಮಕ ಚಿಂತನೆಗಳಿಂದ ಮುನ್ನಡೆಯಬಹುದು. ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಆದ್ಯತೆ ಕೊಡಲೇಬೇಕು ಯಾವುದೇ ಒಬ್ಬ ವ್ಯಕ್ತಿಯು ಶಕ್ತಿ ಇದ್ದಂತೆ. ಅವನು ಏನೆಲ್ಲಾ ಯೋಜನೆಗಳನ್ನ ಹಾಕಿಕೊಂಡಿದ್ದಾನೋ ಅದರ ಮೇಲೆ ಅವನ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

ಇನ್ನೇನು ಫೆಬ್ರವರಿ ಮಾರ್ಚಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳು, ನಂತರ ಪದವಿ ಪರೀಕ್ಷೆ ನಡೆಯುತ್ತವೆ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಪಡೆದ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನವನ್ನೇ ಅಂತ್ಯ ಮಾಡಿಕೊಳ್ಳುತ್ತಿದ್ದಾರೆ. ಮತ್ತಷ್ಟು ಅವಕಾಶಗಳು ಇದ್ದೇ ಇರುತ್ತದೆ ಅದರಿಂದ ನಮ್ಮ ಯುವ ಜನತೆ ಕೂಡ ಯಾವುದೇ ಒತ್ತಡ ಇಲ್ಲದೆ ಉತ್ತಮ ಅಂಕ ಗಳನ್ನು ಪಡೆಯುತ್ತೇವೆ ಎನ್ನುವ ಒಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು.

ಮುಖ್ಯವಾಗಿ ಈ ಸುಂದರ ಪರಿಸರ ನಮಗೆ ಏನೆಲ್ಲಾ ನೀಡಿದೆ ನಿಮಗೆ ಗೊತ್ತು. ಆ ಪರಿಸರ ಪ್ರತಿ ನಿರೀಕ್ಷೆ ಇಟ್ಟುಕೊಳ್ಳದೆ ಮಾನವನಿಗೆ ಎಲ್ಲವನ್ನು ನೀಡಿದೆ. ಆದರೆ ಪ್ರತಿಯಾಗಿ ನಾವು ಪರಿಸರವನ್ನು ದಿನದಿಂದ ದಿನಕ್ಕೆ ದೌರ್ಜನ್ಯ ಮಾಡುತ್ತಾ ಬರುತ್ತಿದ್ದೇವೆ. ಇದರಿಂದಾಗಿ ಪ್ರಕೃತಿ ಮುನಿದಿದೆ. ಜೊತೆಗೆ ಅನೇಕ ದುರಂತಗಳನ್ನು ಕೂಡ ನನಗೆ ನೀಡಿದೆ. ಆದುದರಿಂದ ನಾವು ಪರಿಸರದೊಂದಿಗೆ ಸಾಮರಸ್ಯ ಜೀವನ ನಡೆಸುತ್ತಾ ಪರಿಸರಕ್ಕೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಪರಿಸರವನ್ನ ಕಾಪಾಡಬೇಕು. ಅಲ್ಲದೆ ಮೊದಲು ನಮ್ಮ ಮನೆ, ನಂತರ ಸುತ್ತಮುತ್ತ ಇರುವ ವಾತಾವರಣವನ್ನು ಸ್ವಚ್ಛವಾಗಿ ಇಡೋಣ.

ದುಂದು ವೆಚ್ಚಗಳಿಗೆ ಕಡಿವಾಣ ಹಾಕೋಣ. ಅಲ್ಲದೆ ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿಗೆ ಗೌರವ ಕೊಡೋಣ. ಅನೇಕ ಹಿರಿಯ ಕವಿಗಳು, ಲೇಖಕರು ಎಲ್ಲವನ್ನು ಮಾಡಿಟ್ಟು ಹೋಗಿದ್ದಾರೆ. ಉತ್ಕೃಷ್ಟ ಸಾಹಿತ್ಯ ಸೃಷ್ಟಿಯಾಗಿದೆ. ನಾವು ಅವೆಲ್ಲವನ್ನ ಓದಬೇಕು. ಮುಂದಿನ ಪೀಳಿಗೆಗೂ ಉಳಿಯುವಂತೆ ಮಾಡಬೇಕು. ಬಡವರಿಗೆ, ನೊಂದವರಿಗೆ ಒಂದು ಪ್ರೀತಿಯುತ ಮಾತು, ನಮ್ಮ ಕೈಲಾದಷ್ಟು ಸಹಾಯ ಮಾಡುವ ನಿರ್ಧಾರವನ್ನು ಮಾಡಬೇಕು.

ಜೀವನದಲ್ಲಿ ಬರುವ ಕಷ್ಟಗಳನ್ನು ನಾವು ಸಮಾನವಾಗಿ ಸ್ವೀಕರಿಸಬೇಕು. ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಅಲ್ಲಿ ನಾವು ಎಲ್ಲಿ ತಪ್ಪು ಮಾಡಿದೆವು ಎನ್ನುವುದನ್ನು ಗುರುತು ಮಾಡಿಕೊಳ್ಳಲೇಬೇಕು. ಇವತ್ತಿನ ಪ್ರಸ್ತುತ ಪರಿಸ್ಥಿತಿ ಹೇಗಾಗಿದೆ ಎಂದರೆ ನಾವು ಯಾರನ್ನೋ ನೋಡಿ, ಯಾರೋ ಮನೆ ಕಟ್ಟಿರುವುದನ್ನು ನೋಡಿ, ಯಾರೋ ಕಾರು ತೆಗೆದುಕೊಂಡಿರುವುದನ್ನ ನೋಡಿ, ಯಾರೋ ಆರ್ಥಿಕವಾಗಿ ಮುಂದೆ ಇರುವವರನ್ನು ನೋಡಿ ನಾವು ಅವರ ರೀತಿಯಲ್ಲಿ ಆಗಿಲ್ಲವಲ್ಲ ಎಂಬುದನ್ನ ಯೋಚನೆ ಮಾಡಿ ಕೊರಗುತ್ತಲೇ ಇರುತ್ತೇವೆ! ಇದು ಸಲ್ಲದು. “ಪಾಲಿಗೆ ಬಂದದ್ದು ಪಂಚಾಮೃತ”!- ಎನ್ನುವಂತೆ ನಾವು ಯಾವುದನ್ನ ಜೀವನದಲ್ಲಿ ಮಿಸ್ ಮಾಡಿಕೊಂಡಿದ್ದೇವೆ ಅದನ್ನ ಪಡೆದುಕೊಳ್ಳಲು ಶ್ರಮ ವಹಿಸಲೇಬೇಕು. ತಾಳ್ಮೆ ಮುಖ್ಯ “ತಾಳಿದವನು ಬಾಳಿಯಾನು”- ಎನ್ನುವ ಮಾತೇ ಇದೆ. ಅದರಿಂದಾಗಿ ನಾವು ಒಂದೇ ಬಾರಿಗೆ ಶ್ರೀಮಂತರಾಗಲು ಸಾಧ್ಯವಿಲ್ಲ. ಅಲ್ಲಿ ಬರುವ ಕಷ್ಟ ಸುಖಗಳನ್ನ ದಾಟಲೇಬೇಕು. ನೋವು ನಲಿವುಗಳನ್ನು ಅನುಭವಿಸಲೇಬೇಕು. ಒಬ್ಬರದು ಒಂದೊಂದು ರೀತಿಯ ಸಂಕಲ್ಪಗಳಿರುತ್ತವೆ. ಆ ಸಂಕಲ್ಪಗಳನ್ನು ಕೂಡ ನಾವು ಹೋಲಿಸಿಕೊಳ್ಳಬಾರದು.

ಮೊದಲು ನಾವು ಮನೆಯಲ್ಲಿ ಮನೆಯವರ ಜೊತೆಯಲ್ಲಿ ಕಾಲ ಕಳೆಯುವುದನ್ನು ರೂಢಿಸಿಕೊಳ್ಳಬೇಕು. ಅವರ ಬೇಕು ಬೇಡಗಳ ಬಗ್ಗೆ ಸ್ಪಂದಿಸಬೇಕು. ಮಕ್ಕಳಿಗೆ ಹೆಚ್ಚು ಸಮಯವನ್ನು ಮೀಸಲಿಡಬೇಕು. ಮಕ್ಕಳ ಓದಿನ ಬಗ್ಗೆ ಆಸಕ್ತಿ ವಹಿಸಬೇಕು. ಅವರ ಚಲನವಲನದ ಬಗ್ಗೆಯೂ ಕೂಡ ಗಮನ ಹರಿಸಲೇಬೇಕು. ಆಗ ಮಾತ್ರ ನಮ್ಮ ಕುಟುಂಬ ಚೆನ್ನಾಗಿದ್ದರೆ ಮುಂದಿನದು ನೂರರಷ್ಟು ಚೆನ್ನಾಗಿರುತ್ತದೆ! ಜೊತೆಗೆ ಕಚೇರಿಯ ಅಥವಾ ಇತರ ಕೆಲಸ ಕಾರ್ಯಗಳ ಬಗ್ಗೆಯೂ ಕೂಡ ಗಮನ ಹರಿಸಿ, ಅಲ್ಲಿಯೂ ಕೂಡ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಳ್ಳಲೇಬೇಕು.

ಕಚೇರಿಯಲ್ಲಿ ನಮ್ಮ ಕಿರಿಯ ಹಿರಿಯ ಸಿಬ್ಬಂದಿ, ಅಧಿಕಾರಿ ವರ್ಗದವರ ಜೊತೆಯಲ್ಲಿ ಉತ್ತಮ ಬಾಂಧವ ಇಟ್ಟುಕೊಳ್ಳೋಣ. ಜೊತೆಗೆ ನಾವು ವಾಹನಗಳನ್ನು ಓಡಿಸುವಾಗ ಎಚ್ಚರಿಕೆಯನ್ನು ವಹಿಸೋಣ. ಒಮ್ಮೊಮ್ಮೆ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ನಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಅವರ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ವಹಿಸೋಣ. ಸ್ವಲ್ಪ ಸಮಯ ಮಾಡಿಕೊಂಡು ಕುಟುಂಬದವರ ಜೊತೆಯಲ್ಲಿ ಸ್ನೇಹಿತರ ಜೊತೆಯಲ್ಲಿ ಪ್ರವಾಸ ಮಾಡೋಣ. ನಮ್ಮ ಮನೆಯ ಅಥವಾ ಬಡಾವಣೆಯ ಅಕ್ಕಪಕ್ಕ ಗ್ರಂಥಾಲಯಗಳು ಇದ್ದೇ ಇರುತ್ತವೆ. ಬಿಡುವಿನ ಸಮಯವನ್ನ ಸದುಪಯೋಗಪಡಿಸಿಕೊಳ್ಳಲು ಗ್ರಂಥಾಲಯಗಳಿಗೆ ಭೇಟಿ ನೀಡಿ ಪುಸ್ತಕಗಳನ್ನ ಓದೋಣ, ದಿನಪತ್ರಿಕೆಗಳನ್ನು ಓದೋಣ. ಇದರಿಂದಾಗಿ ನಮ್ಮ ಜ್ಞಾನದ ಮಟ್ಟ ಹೆಚ್ಚುತ್ತದೆ. ನಿಮಗೇನಾದರೂ ಸಮಸ್ಯೆಗಳು ಬಂದರೆ ಆತ್ಮೀಯರ ಜೊತೆ, ಸ್ನೇಹಿತರ ಜೊತೆ ಹಂಚಿಕೊಳ್ಳೋಣ. ಅದರಿಂದಾಗಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಜೊತೆಗೆ ಅವರು ತಮ್ಮ ಅನುಭವಗಳನ್ನ, ಅನಿಸಿಕೆಗಳನ್ನ ಹೇಳುತ್ತಾರೆ. ಆಗ ನಮ್ಮ ಮನಸ್ಸು ಆ ಒಂದು ಕಷ್ಟದಿಂದ ಹೊರಬರುತ್ತದೆ.

ಆದುದರಿಂದ ನಾವು ಎಷ್ಟು ಸಂಕಲ್ಪಗಳನ್ನ ಹಾಕಿಕೊಂಡೆವು ಎನ್ನುವುದಕ್ಕಿಂತ ಹಾಕಿಕೊಂಡ ಸಂಕಲ್ಪಗಳು ಎಷ್ಟನ್ನು ನಾವು ನೆರವೇರಿಸಲು ಶಕ್ತರಾಗಿದ್ದೇವೆ ಎನ್ನುವುದನ್ನು ನಾವು ಕೂಡ ಮನನ ಮಾಡಬೇಕು. ಆಗ ಮಾತ್ರ ನಮ್ಮ ಸಂಕಲ್ಪಗಳು ನೆರವೇರುತ್ತವೆ. 2025ನೆಯ ಹೊಸ ವರ್ಷ ಎಲ್ಲರಿಗೂ ಕೂಡ ಹೊಸತನ ನೀಡಲಿ. 2025 ಈ ಆಕರ್ಷಕ ಸಂಖ್ಯೆಯು ಕೂಡ ಎಲ್ಲರಿಗೂ ಆಶಾದಾಯಕವಾಗಿರುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ! ಆದರೆ ಇಲ್ಲಿ ನಮ್ಮ ನಿರಂತರ ಪ್ರಯತ್ನ, ತಾಳ್ಮೆ ಇರಲೇಬೇಕು. ಮತ್ತೊಮ್ಮೆ ಎಲ್ಲರಿಗೂ 2025ನೆಯ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಎಲ್ಲರಿಗೂ ಒಳಿತಾಗಲಿ, ಸರ್ವೇ ಜನ ಸುಖಿನೋ ಭವಂತು!.

ಕಾಳಿಹುಂಡಿ ಶಿವಕುಮಾರ್.

11 Responses

  1. MANJURAJ H N says:

    ಸಂಕಲ್ಪಗಳು ಎಂಬ ಅ ರಾ ಮಿತ್ರ ಅವರ ಪ್ರಬಂಧ ನೆನಪಾಯಿತು.
    ಹಾಗಾಗಿ ಅದನ್ನೂ ಮತ್ತೊಮ್ಮೆ ಓದುವಂತಾಯಿತು.

    ಧನ್ಯವಾದಗಳು ಸರ್‌, ಚೆನ್ನಾಗಿದೆ.

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಮೊದಲು ನಿಮಗೆ ತುಂಬಾ ತುಂಬಾ ಧನ್ಯವಾದಗಳು. ಪ್ರತಿಯೊಬ್ಬ ಕವಿಗಳ, ಲೇಖಕರ ಸಾಹಿತ್ಯವನ್ನು ನಾವು ಓದಲೇಬೇಕು. ಆಗ ವಿಶಿಷ್ಟ ಸಾಹಿತ್ಯ ನಮಗೆ ಸಿಗುತ್ತದೆ. ಆ ರಾ ಮಿತ್ರರವರ ಪ್ರಬಂಧವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು. ನಾನು ಕೂಡ ಓದುಲು ಆಸಕ್ತಿ ಮೂಡಿದೆ.

  2. ಪದ್ಮಾ ಆನಂದ್ says:

    ಹೊಸ ವರ್ಷದ ಸಂಕಲ್ಪಗಳ ಕುರಿತಾದ ಆಸಕ್ತಿದಾಯಕ ಲೇಖನ. ಮನಸ್ಸನ್ನು ಮತ್ತೆ ಮತ್ತೆ ಮುದಗೊಳಿಸಿಕೊಂಡು ಜೀವನಪ್ರೀತಿಯನ್ನು ಹಸಿರಾಗಿರಿಸಿಕೊಂಡು ಮುಂದುವರೆಯಲು ಹಲವಾರು ಮಾರ್ಗಗಳನ್ನು ಲೇಖನದ ಮುಖಾಂತರ ತಿಳಿಸಿದ್ದಕ್ಕಾಗಿ ಅಭಿನಂದನೆಗಳು.

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಧನ್ಯವಾದಗಳು ಮೇಡಂ. ನಿಜ ಮೇಡಂ ನಾವು ಏನೆಲ್ಲಾ ಸಾಧನೆ ಮಾಡಿದ್ದರೂ ಸಹ ಜೀವನ ಪ್ರೀತಿ ಇಲ್ಲದಿದ್ದರೆ ಅದು ವ್ಯರ್ಥ. ಇಂತಹ ಲೇಖನ ಬರೆಯಲು ನಿಮ್ಮ, (ಜೊತೆಗೆ ನಮ್ಮದು ಕೂಡಾ) ಮೈಸೂರು ಸಾಹಿತ್ಯ ದಾಸೋಹ ದಂತಹ ಕ್ರಿಯಾತ್ಮಕ ಚಟುವಟಿಕೆಯೇ, ಒಡನಾಟ, ಕಾರಣ .

  3. ಶಂಕರಿ ಶರ್ಮ says:

    ಯಾವುದೇ ಒಳ್ಳೆಯ ಕಾರ್ಯವನ್ನು ಮಾಡುವ ನಮ್ಮ ಸಂಕಲ್ಪವನ್ನು ನೆರೆವೇರಿಸುವ ಹೊಣೆ ಕೂಡಾ ನಮ್ಮ ಮೇಲೆಯೆ ಇದೆ. ಅದನ್ನು ಯಾವ ರೀತಿಯಲ್ಲಿ ಹಂತ ಹಂತವಾಗಿ ಕಾರ್ಯರೂಪಕ್ಕೆ ತರಬಹುದೆಂಬುದನ್ನು ವಿವರಿಸಿದ ಸಕಾಲಿಕ ಲೇಖನ ಚೆನ್ನಾಗಿದೆ.

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಚಿಕ್ಕದಾಗಿ ಚೊಕ್ಕದಾಗಿ ಹೇಳಿದ್ದೀರಿ ಮೇಡಂ. ನಿಜ ಸಂಕಲ್ಪದ ಜೊತೆಗೆ, ನಮ್ಮ ಹೊಣೆಗಾರಿಕೆಯೂ ಕೂಡ ಇರಲೇಬೇಕು. ಆಗ ಮಾತ್ರ ನಾವು ಹಾಕಿಕೊಂಡ ಸಂಕಲ್ಪಗಳು ಯಶಸ್ವಿಯಾಗಿ ನೆರವೇರುತ್ತವೆ. ನಿಮಗೆ ಧನ್ಯವಾದಗಳು.

  4. ನಯನ ಬಜಕೂಡ್ಲು says:

    ಚಂದದ ಲೇಖನ. ಪರಿಸರ ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ, ನಾವು ಎಚ್ಛೆತ್ತು ಯಾವ ರೀತಿಯ ಪರಿಸರ ಸ್ನೇಹಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಅನ್ನುವ ಸತ್ಯವನ್ನು ಸೊಗಸಾಗಿ ಹೇಳಿದ್ದೀರಿ.

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ಮೊದಲು ನಿಮಗೆ ಅಭಿನಂದನೆಗಳು ಮೇಡಂ. ಒಂದು ಪಟ್ಟಿ ಹಾಕಿ, ಅರ್ಧ ಗಂಟೆಯಲ್ಲಿ ಈ ಲೇಖನವನ್ನು ಬರೆದೆ ಮೇಡಂ. ಹಲವು ವಿಷಯಗಳನ್ನು ಕವರ್ ಮಾಡಿದ್ದೇನೆ ಸಾಧ್ಯವಾದಷ್ಟು ಸ್ವಲ್ಪ ಲೇಖನ ಉದ್ದವಾಯಿತು. ನಾನು ಪರಿಸರ ದ ಬಗ್ಗೆ ಮರೆತುಬಿಟ್ಟಿದ್ದೆ. ಕೊನೆಯಲ್ಲಿ ವಿಷಯವನ್ನು ಸೇರಿಸಿದೆ.

  5. ಚಂದದ ಸ್ಪುರ್ತಿದಾಯಕ ಲೇಖನ ಸಾರ್..

    • ಕಾಳಿಹುಂಡಿ ಶಿವಕುಮಾರ್, ಮೈಸೂರು. says:

      ತುಂಬಾ ಧನ್ಯವಾದಗಳು ಮೇಡಂ. ನಿಮ್ಮಂತಹ ಹಿರಿಯರು ನನ್ನ ಲೇಖನವನ್ನು ಮೆಚ್ಚಿ ಬರೆಯುವುದೇ ಒಂದು ಸಂತಸ ತರುತ್ತದೆ. ನಿಮ್ಮೆಲ್ಲರ ಸಹಕಾರದಿಂದ ಇಂತಹ ಒಂದು ಚಿಕ್ಕ ಪ್ರಯತ್ನ ಸಾಗುತ್ತಿದೆ. ನಿಮ್ಮಗಳೆಲ್ಲರ ಪ್ರೋತ್ಸಾಹ ಇದೇ ರೀತಿ ನಿರಂತರವಾಗಿರಲಿ ಮೇಡಂ.

  6. Hema Mala says:

    ಸೊಗಸಾದ ಸಾಂದರ್ಭಿಕ ಬರಹ. ಹೊಸ ವರ್ಷದಲ್ಲಿ ತಮ್ಮ ಸಂಕಲ್ಪಗಳು ನೆರವೇರಲಿ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: