ನೆರೆ (ಹೊರೆ?)ಕರೆ

Share Button

ಮನೆ ಎಂದ ಮೇಲೆ ನೆರೆಹೊರೆಯವರೂ ಇರಬೇಕು ತಾನೆ? ನೆರೆಯವರಿಗೆ ಹೊರೆಯಾಗದಂತೆ, ತೊಂದರೆಯಾಗದಂತೆ ಹೊಂದಿಕೊಂಡು ಹೋಗುವುದು ಅನಿವಾರ್ಯ ಎಂದು ಎಲ್ಲರಿಗೂ ಗೊತ್ತು. ಅಕ್ಕಪಕ್ಕದ ಮನೆಯವರು ಪರಸ್ಪರ ಸ್ನೇಹ, ಪ್ರೀತಿಯಿಂದ ಇದ್ದರೆ ಅದು ಮಹಾಭಾಗ್ಯವೆಂದೇ ಭಾವಿಸಬೇಕು. .ಆದರೆ ಹಾಗಾಗುವುದು ಸುಲಭವೇನಲ್ಲ ಬಿಡಿ. ನಾವೇನೋ ಎಲ್ಲವನ್ನೂ ಸಹಿಸಿಕೊಂಡು ಹೊಂದಿಕೊಳ್ಳೋಣವೆಂದರೆ, ಅವರು ಸರ್ವಥಾ ಹೊಂದಿಕೊಳ್ಳೆವು ಎಂದು ಪಣತೊಟ್ಟಂತೆ ಇದ್ದರೆ ನಾವೇನು ಮಾಡಬಲ್ಲೆವು ಅಲ್ವಾ? ಕೆಲವೊಮ್ಮೆ ಮೋಜಿನ ಸಂಗತಿಗಳು ನಡೆದರೆ, ಕೆಲವೊಮ್ಮೆ ಮುಸುಕಿನೊಳಗಿನ ಗುದ್ದು ಅಂತಾರಲ್ಲ… ಆ ತರಹದ ವ್ಯವಹಾರ ನಡೆಯುವುದೂ ಉಂಟು. ಒಳ್ಳೆಯ ನೆರೆ ಸಿಗಲೂ ಪುಣ್ಯ ಮಾಡಿರಬೇಕು ಕಣ್ರೀ. ಪಕ್ಕದ ಮನೆಯವರ ತೆಂಗಿನಮರ ತಮ್ಮ ಮನೆಯತ್ತ  ಬಾಗಿ ಅದರ ಕಸದಿಂದ ಅಂಗಳ ಪೂರ್ತಿ ರಂಪವಾಗುವುದೆಂದು ಮಾಡಿದ ಗಲಾಟೆಗೆ ಮರವನ್ನೇ ಕಡಿದು ತೆಗೆಯಬೇಕಾದ ಪ್ರಸಂಗಗಳು ಸಾಕಷ್ಟು ನಡೆಯುತ್ತವೆ. ಅದಕ್ಕೆ ವಿರುದ್ಧವಾಗಿ; ತಾವು ನೆಟ್ಟ ಕುಂಬಳ ಬಳ್ಳಿಯು ನೆರೆಮನೆಯವರ ಮರಕ್ಕೇರಿ ಕಾಯಿ ಬಿಟ್ಟರೆ ಅದನ್ನು ಅವರೇ ಉಪಯೋಗಿಸಿಕೊಳ್ಳುವಂತೆ ಹೇಳುವ ಉದಾರಿಗಳೂ ಇದ್ದಾರೆನ್ನಿ.

ಅಮೆರಿಕದಲ್ಲಿರುವ ಮಗಳ ಮನೆಯ ಪಕ್ಕದವರ ದ್ರಾಕ್ಷಿ ಬಳ್ಳಿಯ ಸ್ವಲ್ಪ ಭಾಗ ಇವಳ ಹಿತ್ತಿಲಿನ ಕಾಂಪೌಂಡ್ ಗೋಡೆ ಏರಿ ಒಳಕ್ಕೆ ಬಂದು, ಬುಟ್ಟಿ ತುಂಬಾ ನೀಡಿರುವ ಸ್ವಾದಿಷ್ಟ ಹಣ್ಣನ್ನು ನಾನೂ ಆಸ್ವಾದಿಸಿರುವೆ. ಅಲ್ಲಿರುವ ಪೋರ್ಚುಗೀಸ್ ದಂಪತಿ ಒಳ್ಳೆಯ ಸ್ನೇಹಿತರೂ ಹೌದು… ಹಣ್ಣನ್ನು ಉಪಯೋಗಿಸಲು ಪ್ರೀತಿಯಿಂದಲೇ ಸ್ವಾತಂತ್ರ್ಯ ನೀಡಿರುವರು!

ಇಲ್ಲೊಂದು ವಿಚಿತ್ರ ಸಂಗತಿ ನೋಡಿ…

ನಮ್ಮ ಪರಿಚಯದ ಮನೆಯವರ ನೆರೆಯಲ್ಲಿರುವ ಮಹಿಳೆಯೊಬ್ಬಳಿಗೆ ಧ್ವನಿವರ್ಧಕ ಇರಿಸಿಕೊಂಡು ದಿನವಿಡೀ ಹಾಡು ಅಭ್ಯಾಸ ಮಾಡುವ ಖಯಾಲಿ. ಇಂಪಾಗಿದ್ದರೆ ಹೇಗೋ ಸಹಿಸಿಕೊಳ್ಳಬಹುದಿತ್ತೋನೋ . ಆದರೆ, ಕೇಳಲಾಗದ ಅಪಸ್ವರ…! ಅವರ ಅಕ್ಕಪಕ್ಕದ ಮನೆಗಳಿಗೆ ಬಹಳ ಕಿರಿಕಿರಿ ಎನಿಸಿದರೂ ಹೇಳಲಾರದೆ, ಅನುಭವಿಸಲೂ ಆಗದೆ ಆಗುತ್ತಿರುವ ಒದ್ದಾಟ ಬೇರೆ ನೋಡಿ… ಅವಸ್ಥೆ! ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು??

ಇದೊಂದು ಘಟನೆ ನೋಡಿ…

ಶುಭಳ ಮನೆಯಲ್ಲಿ ಸತ್ಯನಾರಾಯಣ ಪೂಜೆಯ ತಯಾರಿ ನಡೆಯುತ್ತಿತ್ತು. (ಹೆಸರು ಬದಲಾಯಿಸಲಾಗಿದೆ) ಇವರ ಪಕ್ಕದ ಮನೆಯಲ್ಲಿ ಗೌರಿ ದಂಪತಿ ವಾಸವಾಗಿದ್ದರು. ಎರಡೂ ಮನೆಯವರು ತೀರಾ ಆತ್ಮೀಯವಾಗಿ ಇಲ್ಲದಿದ್ದರೂ ಜಗಳವಂತೂ ಆಗಿರಲಿಲ್ಲ. ಶುಭಳು ತಮ್ಮ ಮನೆಯ ಪೂಜೆಗೆ ದಂಪತಿ ಇಬ್ಬರೂ ಬರಬೇಕೆಂದು ಗೌರಿಯ ಪತಿ ಸಿಕ್ಕಿದಾಗ ಆಮಂತ್ರಣವನ್ನು ಇತ್ತಿದ್ದರು. ಆದರೆ, ಪೂಜೆಗೆ ಪತಿರಾಯರು ಮಾತ್ರ ಬಂದು ಹೋದರು. ಆ ಬಳಿಕ, ಗೌರಿ ಸಿಕ್ಕಿದಾಗ ಅವಳು ಯಾಕೆ ಬರಲಿಲ್ಲವೆಂದು ಸಹಜವಾಗಿಯೇ ಮನೆಯವರು ವಿಚಾರಿಸಿದಾಗ ಅವಳು “ನೀವು ನನ್ನನ್ನು ಕರೆದೇ ಇಲ್ವಲ್ಲಾ..ನಮ್ಮವರನ್ನುಮಾತ್ರ ಕರೆದ್ರಿ ” ಎಂದು ನೀಡಿದ ಉತ್ತರ ವಿಚಿತ್ರವೆನಿಸಿದ್ದು ಸುಳ್ಳಲ್ಲ. ಸಾಧಾರಣವಾಗಿ, ಮನೆಯ ಯಜಮಾನರಿಗೆ ಆಮಂತ್ರಣ ನೀಡುವುದು ಪದ್ಧತಿ ತಾನೆ? ಅದು ಮನೆಯರಿಗೆಲ್ಲ ಆಮಂತ್ರಿಸಿದಂತೆ  ಎಂಬುದು ವಾಡಿಕೆ ಕೂಡಾ ಹೌದು. ಗೌರಿಯ ಈ ಉತ್ತರಕ್ಕೆ ಶುಭಾ ಮನೆಯವರು ಮಾತು ಮುಂದುವರಿಸುವ ಸಾಹಸ ಮಾಡಲಿಲ್ಲವೆನ್ನಿ.

ಇಲ್ಲಿ ನೋಡಿ…ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ವ್ಯಕ್ತಿಯೊಬ್ಬರ ಬಾಂಧವ್ಯದಲ್ಲಿನ ಉದಾರತೆಯನ್ನು ಅನಾವರಣಗೊಳಿಸುತ್ತದೆ.

ಆ ದೇವಸ್ಥಾನದ ಪಕ್ಕದಲ್ಲಿದ್ದ ಸಭಾಂಗಣದಲ್ಲಿ ಮದುವೆ ನಡೆಯುತ್ತಿತ್ತು. ದೇವರ ದರ್ಶನ ಮಾಡಲು ಬಂದ ನಾಗೇಶರಾಯರು(ಹೆಸರು ಬದಲಾಯಿಸಲಾಗಿದೆ) ಮದುವೆ ಮನೆಯವರ ಬಂಧುಗಳಾಗಿದ್ದರು. ಆದರೆ ಅವರನ್ನು ಮದುವೆಗೆ ಆಮಂತ್ರಿಸಿರಲಿಲ್ಲ. ಆದರೂ ಅವರು; ‘ಮದುವೆ ಗಡಿಬಿಡಿಯಲ್ಲಿ ಆಮಂತ್ರಿಸಲು ಮರೆತಿರಬಹುದು’ ಎಂದುಕೊಂಡು, ಅಲ್ಲೇ ಪಕ್ಕದಲ್ಲಿ ನಡೆಯುವ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ನವದಂಪತಿಯನ್ನು ಆಶೀರ್ವದಿಸಿದರು. ಮನೆಯವರೂ ಪ್ರೀತಿಯಿಂದಲೇ ಅವರನ್ನು ಆದರಿಸಿದರು ಬಿಡಿ. ಅಪರೂಪಕ್ಕಾದರೂ ಇಂತಹ ವಿಶಾಲ ಮನೋಭಾವದ ವ್ಯಕ್ತಿಗಳೂ ಇದ್ದಾರೆ ಎಂಬುದೇ ಒಂದು ಸಂತಸದ ಸಂಗತಿಯಲ್ಲವೆ?

ಇಲ್ಲಿ ಇನ್ನೊಂದು ನಮೂನೆ ನೋಡಿ…

ನಮ್ಮ ಮನೆಯಿಂದ ತುಸು ದೂರದಲ್ಲಿರುವ ಮನೆಯಿಂದ ಮುಂಜಾನೆಯಿಂದ ರಾತ್ರಿ ತನಕ ದಿನನಿತ್ಯ ಪೂಜೆಗೆ ಬಡಿಯುವ ಗಂಟೆ ಸದ್ದು  ಗಟ್ಟಿಯಾಗಿ ಕೇಳಿಸುತ್ತಿತ್ತು. ಅವರು ಮನೆಯಲ್ಲಿ ಆಗಾಗ ಪೂಜೆ ನಡೆಸುತ್ತಾರೆ ಎಂಬುದು ನನ್ನೆಣಿಕೆಯಾಗಿತ್ತು. ನನಗೆ ದೈವಭಕ್ತಿ ಕಂಡು ಅವರ ಬಗ್ಗೆ ಬಹಳ ಗೌರವ ಮೂಡಿತು. ಹಲವಾರು ದಿನಗಳು ಕಳೆದಂತೆ ಒಂದು ದಿನ ನಮ್ಮ ಮನೆ ಮುಂದಿನ ರಸ್ತೆಯಲ್ಲಿ ಪೋಲೀಸ್ ಜೀಪು ಅವರ ಮನೆ ಕಡೆಗೆ ಹೋಗುವುದು ಕಂಡಿತು. ಆ ಮೇಲೆ ವಿಚಾರಿಸಿದಾಗ ತಿಳಿದ ಸಂಗತಿಯು ನಮ್ಮನ್ನು ಬೆಚ್ಚಿ ಬೀಳಿಸಿತು…!!! ಆ ಮನೆಯ ಮಹಿಳೆಯೊಬ್ಬಳು, ಯಾವುದೋ ಕಾರಣಕ್ಕೆ ಅವಳ ಪಕ್ಕದ ಮನೆಯರ ಮೇಲಿನ ಕೋಪದಿಂದ; ಅವರಿಗೆ ತೊಂದರೆ ಕೊಡುವುದಕ್ಕಾಗಿಯೇ ಪೂರ್ತಿ ದಿನ ಗಂಟೆ ಬಾರಿಸುತ್ತಿದ್ದಳಂತೆ! ತೊಂದರೆಗೆ ಒಳಗಾದ ಮಹಿಳೆ ಪೋಲೀಸರಿಗೆ ದೂರನ್ನಿತ್ತಿದ್ದಳು. ಬಂದ ಪೋಲಿಸರು ಆ ಮಹಿಳೆಗೆ ಎಚ್ಚರಿಕೆಯನ್ನಿತ್ತು ಹೋಗಿದ್ದರು. ಇಂತಹ ನೆರೆಯರು ನಿಜಕ್ಕೂ ಹೊರೆಯೇ ಅಲ್ಲವೇ?

PC : Internet

ಪರಸ್ಪರ ಸಹಕಾರ, ಔದಾರ್ಯ, ಹೊಂದಾಣಿಕೆ, ಕ್ಷಮೆ, ಕರುಣೆ, ಪ್ರೀತಿ, ವಿಶ್ವಾಸಗಳನ್ನು ಅಕ್ಕಪಕ್ಕದ ಮನೆಯವರು ಇರಿಸಿಕೊಂಡರೆ, ಸಮಾಜ ಜೀವನವು ಸಹಜವಾಗಿ ಸಾಗುತ್ತದೆ. ಕಡ್ಡಿಯನ್ನು ಗುಡ್ಡ ಮಾಡಿ ಮಾತಿನಲ್ಲೇ ಹೊಡೆದಾಡಿದರೆ ಮನಸ್ಸು ಕಲಕಿ ರಾಡಿಯಾಗಿ ನೆಮ್ಮದಿಯನ್ನು ಕೆಡಿಸಿಬಿಡುತ್ತದೆ. ಎಲ್ಲಾ ರೀತಿಯ ಸಂಬಂಧಗಳ ಕೊಂಡಿಗಳನ್ನು ಸಡಿಲವಾಗಲು ಬಿಡದೆ; ಅವುಗಳನ್ನು ಇನ್ನಷ್ಟು ಬಿಗಿಯಾಗಿಸಬೇಕಾಗಿದೆ …ಅಲ್ಲವೇ?

-ಶಂಕರಿ ಶರ್ಮ, ಪುತ್ತೂರು.

12 Responses

  1. ಪದ್ಮಾ ಆನಂದ್ says:

    ಆಸಕ್ತಿದಾಯಕ ಉದಾಹರಣೆಗಳನ್ನೊಂಡ ಚಂದದ ಲೇಖನ. ಪ್ರತಿದಿನ ಮುಖ ನೋಡಬೇಕಾದ ಜನರೊಡನೆ ಬಾಂಧವ್ಯ ಚೆನ್ನಾಗಿದ್ದರೆ ಜೀವನ ಸೊಗಸಾಗಿರುತ್ತದೆ ಎಂಬುದನ್ನು ಪ್ರತಿಪಾದಿಸುವಲ್ಲಿ ಯಶಸ್ವಿಯಾಗಿದೆ.

    • ಶಂಕರಿ ಶರ್ಮ says:

      ಪ್ರೀತಿಯ ಪ್ರತಿಕ್ರಿಯೆಗೆ ವಂದನೆಗಳು, ಪದ್ಮಾ ಮೇಡಂ

  2. ಅರಮನೆ ಇಲ್ಲದಿದ್ದರೂ ಪರವಾಗಿಲ್ಲ ನೆರಮನೆ ಇರಬೇಕೆಂಬ ಮಾತಿದೆ ಆ ವಿಷಯದ ಬಗ್ಗೆ ನೆಡೆದ ಕೇಳಿ ದ ನೋಡಿರಬಹುದಾದ ಪ್ರಕರಣಗಳ ಅನಾವರಣ ಚೆನ್ನಾಗಿದೆ ಶಂಕರಿ ಮೇಡಂ.

    • ಶಂಕರಿ ಶರ್ಮ says:

      ಪ್ರೀತಿಯ ಸ್ಪಂದನೆಗೆ ಧನ್ಯವಾದಗಳು, ನಾಗರತ್ನ ಮೇಡಂ

  3. ಮುಕ್ತ c. N says:

    ನೆರೆ ಹೊರೆಯಾಗದಂತೆ ನಾವು ಹೊಂದಿಕೊಂಡು ಹೋದರೂ ಎದುರಾಗುವ ಪ್ಸಸಂಗಗಳು ಸ್ವಾರಸ್ಯಕರವಾಗಿವೆ.. ನಿಮ್ಮ ಅನುಭವಗಳನ್ನು ಧಾರಾವಾಹಿ ಮಾಡಬಹುದು..

  4. ಶಂಕರಿ ಶರ್ಮ says:

    ಪ್ರೀತಿಯ ಪ್ರೋತ್ಸಾಹಕ ನುಡಿಗಳಿಗೆ ವಂದಿಸಿದೆ, ಮುಕ್ತಾ ಮೇಡಂ

  5. ನಯನ ಬಜಕೂಡ್ಲು says:

    ಚೆನ್ನಾಗಿದೆ

  6. Hema Mala says:

    ಸೊಗಸಾದ ಬರಹ. ಕ್ರಿಯಾಶೀಲ ಮನಸ್ಸಿಗೆ ಸಣ್ಣ ಪುಟ್ಟ ಕಿರಿಕಿರಿಗಳನ್ನೂ ಬಳಸಿಕೊಂಡು ಲೇಖನ ಸೃಷ್ಟಿಸುವ ಸಾಮರ್ಥ್ಯ ಇದೆ ಅಂತ ನಿರೂಪಿಸಿದಿರಿ!

    • ಶಂಕರಿ ಶರ್ಮ says:

      ಪ್ರೀತಿಯಿಂದ ಪ್ರಕಟಿಸಿ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದ ನಿಮಗೆ ಧನ್ಯ ನಮನಗಳು

  7. Dr. Harshitha says:

    ಸೊಗಸಾದ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: