(ಪ್ರತಿ)ಕ್ರಿಯೆಗೊಂದು ಕಾರಣವಿದೆ!

Share Button

ನಾನು ಉದ್ಯೋಗ ನಿರ್ವಹಿಸುವ ಕಾಲೇಜಿನಲ್ಲಿ ಆಯಾ ದಿನದ ತರಗತಿಗಳು ಆರಂಭವಾಗುವ ಮೊದಲು ಪ್ರಾರ್ಥನೆ ಕಡ್ಡಾಯ. ಪ್ರಾರ್ಥನೆಯ ವೇಳೆ ನಿಗದಿತ ವೇಳಾಪಟ್ಟಿಯಂತೆ ಬೇರೆ ಬೇರೆ ತರಗತಿಯವರು  ವಂದೇ ಮಾತರಂ, ಬಳಿಕ ನಾಡಗೀತೆ, ಅದಾದ ನಂತರ ಎರಡು ಮೂರು ಸಾಲುಗಳ ಚಿಂತನ ನಡೆಸಿಕೊಡುತ್ತಾರೆ. ಆ ಬಳಿಕ ಪ್ರಮುಖ ಸೂಚನೆಗಳಿದ್ದರೆ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ನೀಡುವರು. ಜನ ಗಣ ಮನದೊಂದಿಗೆ ಪ್ರಾರ್ಥನೆ ಸಂಪನ್ನವಾಗುವುದು. ಅದೊಂದು ದಿನ ಜನಗಣ ಮನ ಗೀತೆಯನ್ನು ವಿದ್ಯಾರ್ಥಿಗಳು ಹಾಡುತ್ತಿದ್ದರು. ಒಂದು ತರಗತಿಯ ವಿದ್ಯಾರ್ಥಿಯೊಬ್ಬ ನೆಟ್ಟಗೆ ನಿಲ್ಲುವುದು ಬಿಡಿ, ಯಾವ ನಿಯಮಗಳು ತನಗಲ್ಲವೇ ಅಲ್ಲ ಅಂತ, ತನ್ನ ಬಳಿಯಿರುವವನ ಬಳಿ ಮಾತನಾಡಲು ಯತ್ನಿಸುತ್ತಿದ್ದ. “ಜನ ಗಣ ಮನ  ಹಾಡುವಾಗ ಹೇಗೆ ನಿಲ್ಲಬೇಕು ಎಂದು ನಿನಗೆ ಇಲ್ಲಿಯ ತನಕ ಯಾರೂ ಕಲಿಸಿಲ್ಲವೇ?” ಎಂದು ಪ್ರಶ್ನಿಸಿದೆ. ಅದಕ್ಕೆ ಉಡಾಫೆಯಾಗಿ “ಕಲಿಸಿದ್ದಾರೆ. ನಾನು ಹೇಗೆ ನಿಂತರೆ ನಿಮಗೇನು?” ಅಂದ. “ಹೌದಾ? ಬಾ. ಅದನ್ನು ಪ್ರಾಂಶುಪಾಲರೆದುರು ನನ್ನಲ್ಲಿ ಹೇಳು. ಬಾ ಈಗಲೇ ಹೋಗುವಾ” ಎಂದೆ.  ಕುಡಿದು ಮತ್ತೇರಿದವನ ನಶೆ ಇಳಿದಂತೆ ಒಮ್ಮೆಲೇ “ಮ್ಯಾಮ್, ತಪ್ಪಾಯಿತು. ಕ್ಷಮಿಸಿಬಿಡಿ. ಯಾವುದೋ ಮೂಡಿನಲ್ಲಿದ್ದೆ” ಅಂದ. “ನೀನು ಎಂತಹ ಮೂಡಿನಲ್ಲಿದ್ದರೂ, ಶಿಕ್ಷಕರ ಬಳಿ ಒರಟಾಗಿ ನಡೆದುಕೊಳ್ಳಬಾರದಲ್ವಾ?” ಅಂದೆ. “ಹೌದು ಮೇಡಂ, ಬೆಳಿಗ್ಗೆ ಕಾಲೇಜಿಗೆಂದು ಮನೆಯಿಂದ  ಹೊರಡುವಾಗ ಅಪ್ಪ ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಿದ್ದರು. ಎಲ್ಲಾ ಮೂಡ್ ಆಫ್ ಆಯಿತು. ದಯವಿಟ್ಟು ಕ್ಷಮಿಸಿ” ಅಂತ ಅಂಗಲಾಚಿದ. “ಇನ್ನೊಮ್ಮೆ ಈ ತರಹ ಉಡಾಫೆಯಾಗಿ ಮಾತನಾಡಬೇಡ” ಎಂದು ಹೇಳಿ ಅವನನ್ನು ಕ್ಷಮಿಸಿದೆ.

ಕೆಲವು ವರ್ಷಗಳ ಹಿಂದೆ ನಡೆದ ಘಟನೆಯಾದರೂ ಆಗಾಗ ಮನಸ್ಸನ್ನು ಕಾಡುತ್ತಿರುತ್ತದೆ.  ನಮ್ಮ ಎದುರಿರುವ ವ್ಯಕ್ತಿ ಯಾರೇ ಇರಬಹುದು- ಅವರು ನೀಡುವ ಪ್ರತಿಕ್ರಿಯೆ ನಮಗೇ ನೀಡಿರಬಹುದೆಂದು ನಾವು ತಿಳಿದುಕೊಂಡರೆ ಅದು ತಪ್ಪಾಗಿರಬಹುದು. ಕೆಲವೊಮ್ಮೆ ಕಾಡುವ ಹತಾಶೆ, ಅವಮಾನ ಅಥವಾ ಮಾನಸಿಕ ಸಮಸ್ಯೆಗಳೇ ಕಾರಣವಾಗಿ ಯಾವುದೇ ಕ್ರಿಯೆಗೆ ಅಥವಾ ಮಾತಿಗೆ ವ್ಯಕ್ತಿಯೋರ್ವ ಸ್ಪಂದಿಸುವ ರೀತಿ ಬದಲಾಗಬಹುದು. ಪ್ರತಿಯೊಬ್ಬರಿಂದಲೂ ಒಂದೇ ರೀತಿಯ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದು ಕೂಡಾ ತಪ್ಪಾಗುವುದು. ಮನದೊಳಗೆ ಚಿಂತನ ಮಂಥನ ನಡೆದಾಗ ಮೂಡಿದ ಬರಹವಿದು.

ಚಲನೆಗೆ ಸಂಬಂಧಿಸಿದಂತೆ ನ್ಯೂಟನ್ನನ ಮೂರು ನಿಯಮಗಳಿವೆಯಷ್ಟೇ! ಪ್ರತಿಯೊಂದು ಕ್ರಿಯೆಗೆ ಸಮನಾದ ಹಾಗೂ ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂಬುದು ಮೂರನೆಯ ನಿಯಮ. ಇದೇ ನಿಯಮವನ್ನು ನಮ್ಮ ಬದುಕಿಗೆ ಅನ್ವಯಿಸಿದಾಗ ನಾವು ಹೀಗೆ ಹೇಳಬಹುದು- ಯಾವುದೇ ಒಂದು ಕ್ರಿಯೆಗೆ ಪ್ರತಿಕ್ರಿಯೆ, ಮಾತಿಗೊಂದು ಪ್ರತಿಮಾತು ಅಥವಾ ಪ್ರತ್ಯುತ್ತರ ಇರುವುದು ಸಾಮಾನ್ಯ ಸಂಗತಿ. ಆದರೆ ಈ ಪ್ರತಿಕ್ರಿಯೆ ಅಥವಾ ಪ್ರತ್ಯುತ್ತರ ತಕ್ಷಣದ್ದೂ ಆಗಿರಬಹುದು ಅಥವಾ ಆಗಿಲ್ಲದೆಯೂ ಇರಬಹುದು. ಕೆಲವೊಮ್ಮೆ ಎದುರಿನವರು ಊಹಿಸಿಯೂ ಇಲ್ಲದ ರೀತಿಯಲ್ಲಿ ಪ್ರತಿಕ್ರಿಯೆ ಇರಬಹುದು. ಊಹಿಸಿಯೂ ಇಲ್ಲದ ಪ್ರತಿಕ್ರಿಯೆ ಒಬ್ಬನಿಂದ/ಒಬ್ಬಳಿಂದ ಬಂದಿದೆಯೆಂದರೆ ಆ ರೀತಿ ಯಾಕೆ ಪ್ರತಿಕ್ರಿಯಿಸಿರಬಹುದು ಅನ್ನುವುದಕ್ಕೂ ಒಂದು ನಿರ್ದಿಷ್ಟ ಕಾರಣವಿರಬಹುದು. ಇನ್ನು ಕೆಲವೊಂದು ಸಂದರ್ಭಗಳು ಪದೇ ಪದೇ ಎದುರಾದಾಗ ಆ ಸನ್ನಿವೇಶಗಳಲ್ಲಿ ನಾವು ತೋರ್ಪಡಿಸುವ ಪ್ರತಿಕ್ರಿಯೆ ಭಿನ್ನವಾಗಿರಬಹುದು.  ಪ್ರತಿ ದಿನದ ಪ್ರತಿ ಕ್ಷಣವೂ ಹೊಸತು. ಊಹಿಸದ ಘಟನೆಗಳಿಗೆ ಕೆಲವು ಕ್ಷಣಗಳು ಸಾಕ್ಷಿಯಾಗುವುದುಂಟು.

ಆ ಕ್ಷಣಗಳು ನಮಗೆ ಖುಷಿ ಕೊಟ್ಟಿರಬಹುದು ಅಥವಾ ನೋವುಂಟು ಮಾಡಿರಬಹುದು, ಹತಾಶೆಗೆ ನೂಕಿರಬಹುದು. ನಮ್ಮನ್ನು ಅಸಹಾಯಕರಂತೆ ಬಿಂಬಿಸಿದ್ದಿರಬಹುದು. ಆದರೆ ನಮ್ಮ ಪ್ರತಿಕ್ರಿಯೆಯನ್ನು ಗಮನಿಸಿದ ವ್ಯಕ್ತಿಗೆ ಆ ಪ್ರತಿಕ್ರಿಯೆಯ ಹಿಂದಿರುವ ಕಥೆ ಗೊತ್ತಿರುವುದಿಲ್ಲವಾದ್ದರಿಂದ, ಆ ವ್ಯಕ್ತಿಗೆ ನಮ್ಮ ಮೇಲೆ ಕೋಪ ಬರಬಹುದು. ಯಾಕೆ ಅಧಿಕವಾಗಿ ಆಡ್ತಾ ಇದ್ದಾರಲ್ವಾ ಅನ್ನಿಸಬಹುದು. ನಮ್ಮನ್ನು ಅರ್ಥ ಮಾಡಿಕೊಂಡಿಲ್ಲ ಅಂತ ಅನ್ನಿಸಬಹುದು. ಹಾಗಾಗಿ ನಾವು ಯಾರನ್ನೇ ಆದರೂ ಇವನು/ಇವಳು/ಇವರು ಹೀಗೆಯೇ ಅನ್ನುವ ತೀರ್ಮಾನಕ್ಕೆ ಖಂಡಿತಾ ಬರಲಾಗದು.

25 ವರ್ಷಗಳ ಹಿಂದಿನ ಘಟನೆಯೊಂದು ನೆನಪಿಗೆ ಬರುತ್ತಿದೆ. ಅವನು ವಿಧೇಯ ವಿದ್ಯಾರ್ಥಿ. ತುಂಬಾ ಮೃದು ಸ್ವಭಾವದವನು.ಪ್ರತಿ ಶಿಕ್ಷಕರ ಮೇಲೆ ಪ್ರೀತಿ ಗೌರವ. ಆ ದಿನ ಪ್ರಾಕ್ಟಿಕಲ್ಸ್ ಇತ್ತು. ಸಾಮಾನ್ಯವಾಗಿ ಹಿಂದಿನ ವಾರ ಮಾಡಿದ ಪ್ರಯೋಗಗಳ ವಿವರವನ್ನು ಪ್ರಾಕ್ಟಿಕಲ್ ರೆಕಾರ್ಡ್ ಪುಸ್ತಕದಲ್ಲಿ ಬರೆದು, ಪ್ರಾಕ್ಟಿಕಲ್ ವೇಳೆಯಲ್ಲಿ ತಂದು ಸಬ್ಮಿಟ್ ಮಾಡುವುದು ಕ್ರಮ. ಆ ದಿನ ಆ ಹುಡುಗ ರೆಕಾರ್ಡು ಪುಸ್ತಕ ತಂದಿದ್ದ. ಆದರೆ, ಪ್ರಯೋಗದ ಫಲಿತಾಂಶವುಳ್ಳ ಗ್ರಾಫ್ ಅಂಟಿಸುವುದನ್ನು ಮರೆತಿದ್ದ. ನಮ್ಮ ಸಹೋದ್ಯೋಗಿ “ಗ್ರಾಫ್ ಯಾಕೆ ಅಂಟಿಸಲಿಲ್ಲ?ಮನೆಯಲ್ಲಿ ಯಾಕೆ ಬಿಟ್ಟು ಬಂದದ್ದು? ಅಮ್ಮನಿಗೆ ನೋಡ್ಲಿಕ್ಕೆಯಾ?” ಅಂತ ಗದರಿದರು. ಅಷ್ಟೇನೂ ಜೋರಾಗಿ ಗದರಿರಲಿಲ್ಲ. ಆದರೆ ಆ ವಿದ್ಯಾರ್ಥಿಗೆ ಏನನ್ನಿಸಿತೆಂದು ಗೊತ್ತಿಲ್ಲ. ಅವನಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. “ಸಾರ್, ನನಗೆ ಏನೂ ಬೇಕಾದರೂ ಹೇಳಿ. ನನ್ನ ಅಮ್ಮನಿಗೆ ಮಾತ್ರ ಏನೂ ಹೇಳಬೇಡಿ” ಅಂತ ಹೇಳುತ್ತಾ ಆ ಬಳಿಕ ಅತ್ತೇ ಬಿಟ್ಟ.  ಆ ವಿದ್ಯಾರ್ಥಿಗೆ ಅಷ್ಟು ಸಿಟ್ಟು ಯಾಕೆ ಬಂತು ಅನ್ನುವುದು ಗೊತ್ತಾಗಲಿಲ್ಲ. ಎಷ್ಟೆಂದರೆ ಆ ವಿದ್ಯಾರ್ಥಿ ಆಪ್ತಸಲಹೆಗೂ ಸ್ಪಂದಿಸಲಿಲ್ಲ. ಆ ವರ್ಷ ಅನುತ್ತೀರ್ಣನಾಗಿದ್ದ ಬೇರೆ! ಪದವೀಧರನಾದ ಬಳಿಕ ಎರೆಡೆರಡು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಡಾಕ್ಟರೇಟ್ ಪದವಿ ಪಡೆದನೆಂಬುದು ಸಂತಸದ ವಿಚಾರ.

ಇತ್ತೀಚಿನ ವಿದ್ಯಾರ್ಥಿಗಳಲ್ಲಿ ಗಮನಿಸಿದ ಇನ್ನೊಂದು ವಿಷಯವಿದೆ. ತಾವು ಕಷ್ಟದಲ್ಲಿದ್ದೇವೆ ಅಥವಾ ಹಣಕಾಸಿನ ಅಡಚಣೆಯಿದೆ ಅಥವಾ  ಮನೆಯಲ್ಲೇನೋ ಸಮಸ್ಯೆಯಿದೆ ಅನ್ನುವುದನ್ನು ತಮ್ಮ ಶಿಕ್ಷಕರ ಬಳಿ ಹೇಳಲು ವಿದ್ಯಾರ್ಥಿಗಳು ಇಷ್ಟಪಡುವುದಿಲ್ಲ. ತಾವಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳದ ಕಾರಣ, ಆ ವಿದ್ಯಾರ್ಥಿಗಳು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಅನ್ನುವುದು ಕೂಡಾ ಗೊತ್ತಾಗುವುದಿಲ್ಲ. ನನ್ನೊಬ್ಬ ವಿದ್ಯಾರ್ಥಿ ಆಗಾಗ ತರಗತಿಗಳಿಗೆ ಗೈರುಹಾಜರಾಗುತ್ತಿದ್ದ. ಅವನ ಸಹಪಾಠಿಗಳು ಅವನು ಊರಿಗೆ ಹೋಗಿದ್ದಾನೆ ಅನ್ನುತ್ತಿದ್ದರು.  ಬಹುಶಃ ಹಾಸ್ಟೆಲಿನಲ್ಲಿರುವುದರಿಂದ ಮನೆಯ ನೆನಪು ಕಾಡುತ್ತಿದ್ದಿರಬೇಕು ಅಂದುಕೊಂಡಿದ್ದೆವು ನಾವು. ಗೈರುಹಾಜರಾದರೆ ಹಾಜರಾತಿ ಕೊರತೆಯಾಗಿ ಪರೀಕ್ಷೆ ಬರೆಯಲು ಕಷ್ಟವಾಗಬಹುದೆಂದು ಎಚ್ಚರಿಕೆ ಕೊಟ್ಟಾಗ, ಇನ್ನು ಮುಂದೆ ಗೈರುಹಾಜರಾಗುವುದಿಲ್ಲ ಅಂತ ಹೇಳುತ್ತಿದ್ದನಾದರೂ ಆಗಾಗ್ಗೆ ಗೈರುಹಾಜರಾಗುವುದು ಮಾಮೂಲಿಯಾಗಿತ್ತು. ಹಾಜರಾತಿ ತೀರಾ ಕಡಿಮೆಯಾದಾಗ ಅವನನ್ನು ಮತ್ತೊಮ್ಮೆ ಕರೆದು “ಪದವಿ ಮುಗಿಸುವ ಆಲೋಚನೆ ಇದೆ ತಾನೇ?ಹಾಜರಾತಿ ತುಂಬಾ ಕಡಿಮೆಯಿದೆ” ಎಂದು ಎಚ್ಚರಿಕೆ ನೀಡಿ “ಯಾಕೆ ನೀನು ಗೈರುಹಾಜರಾಗುವುದು? ಕಾರಣ ಆದರೂ ಹೇಳು” ಎಂದಾಗ “ಅಮ್ಮನಿಗೆ ಆರೋಗ್ಯ ಸರಿ ಇಲ್ಲ. ಆಸ್ಪತ್ರೆಯಲ್ಲಿ ಅಮ್ಮನ ಜೊತೆ ನಿಲ್ಲಲು ಬೇರೆ ಯಾರೂ ಇಲ್ಲ” ಅಂದ ಅವನ ಮಾತು ಕೇಳಿ ಮೌನಕ್ಕೆ ಮೊರೆ ಹೋಗಬೇಕಾಯಿತು.

ಇಂತಹ ಹಲವು ಉದಾಹರಣೆಗಳು ಆಗಾಗ ಕಾಣಸಿಗುತ್ತವೆ. ಹಾಗಾಗಿ ಯಾವುದೇ ವ್ಯಕ್ತಿಯನ್ನು ಅಥವಾ ಆ ವ್ಯಕ್ತಿಯ ನಡವಳಿಕೆಯನ್ನು ನೋಡಿದ ತಕ್ಷಣ, ಈ ವ್ಯಕ್ತಿ ಹೀಗೆಯೇ ಅನ್ನುವ ತೀರ್ಮಾನಕ್ಕೆ ಬರಲಾಗದು. ಆ ವ್ಯಕ್ತಿಯ ನಡವಳಿಕೆಗಳು ಸಮಯಕ್ಕನುಗುಣವಾಗಿ, ತನ್ನ ಸುತ್ತ ಮುತ್ತಲಿನ ಜನರ ಗುಣಕ್ಕನುಗುಣವಾಗಿ ಬದಲಾಗಬಹುದು. ಒಳಗೆ ಅದುಮಿಟ್ಟ ಭಾವಗಳ ಅನಾವರಣವೂ ಆಗಬಹುದು. ಹಾಗಾಗಿ ಪ್ರತಿಯೊಂದು ಕ್ರಿಯೆಯ ಹಿಂದೆ ಅಥವಾ ಪ್ರತಿಕ್ರಿಯೆಯ ಹಿಂದೆ ಕಾರಣವಂತೂ ಇದ್ದೇ ಇದೆ. ಜಗನ್ನಿಯಾಮಕನ ಕೈಚಳಕವೂ ಇದೆ! ಏನಂತೀರಾ?

ಡಾ. ಕೃಷ್ಣಪ್ರಭ ಎಂ, ಮಂಗಳೂರು

7 Responses

  1. MANJURAJ H N says:

    ನಿಜ……….

    ನಿಮ್ಮ ಅನುಭವದಿಂದೊಡಗೂಡಿದ ವಿಚಾರ ಮನ ಸೆಳೆಯಿತು.
    ಪ್ರತಿ ವರುಷವೂ ಹೊಸ ಪೀಳಿಗೆಯನ್ನು ಕಾಣುವ ಮತ್ತು ಕಂಡರಿಸುವ
    ಅವಕಾಶ ಶಿಕ್ಷಕವೃತ್ತಿಯದು. ವಿನಾಯಿತಿ, ರಿಯಾಯಿತಿ, ನೀತಿ-ನಿಯಮ,
    ಮಾನವತೆ- ಎಲ್ಲವೂ ಒಮ್ಮೊಮ್ಮೆ ಅಯೋಮಯ.

    ನಿಯಮ ಪಾಲಿಸಿದರೆ ಮಾನವತೆ ಸೊರಗುತ್ತದೆ
    ಮಾನವತೆ ಪಾಲಿಸಿದರೆ ಯೋಗ್ಯತೆ ಮಾಯವಾಗುತ್ತದೆ. ಈ ದ್ವಂದ್ವವು
    ಬದುಕಿನ ನಿಗೂಢ ಕೂಡ. ಚೆನ್ನಾಗಿದೆ. ಓದಿಸಿಕೊಂಡು ಹೋಯಿತು. ಧನ್ಯವಾದಗಳು

  2. ಅನುಭವದ ಸಂಗತಿಯಾದರೂ ಅಭಿವ್ಯಕ್ತಿ ಸುವ ರೀತಿ ತುಂಬಾ ಚೆನ್ನಾಗಿದೆ ಮೇಡಂ.

  3. ಕೆ.ರಮೇಶ್ says:

    ಲೇಖನ ಬಹಳ ಚೆನ್ನಾಗಿದೆ ಮೇಡಂ.ವಾಸ್ತವಿಕ ಸಂಗತಿಗಳನ್ನು ಪೋಣಿಸಿ ಬರೆದ ಲೇಖನ.

  4. ಪದ್ಮಾ ಆನಂದ್ says:

    ಮನದಲ್ಲಿ ಚಿಂತನ ನಡೆಸಿ ಬರೆದ, ಕಣ್ತೆರೆಸುವ ಲೇಖನ ಓದುಗರನ್ನೂ ಚಿಂತನೆಗೆ ಹಚ್ಚುವಲ್ಲಿ ಸಂಶಯವಿಲ್ಲ. ಎದುರಿನವರ ಪ್ರತಿಕ್ರಿಯೆಯನ್ನು ಯೋಚಿಸಿ ಅಂಗೀಕರಿಸಬೇಕು ಎಂಬ ಸಂದೇಶವೂ ಸರಿಯೇ ಹೌದು.

  5. ನಯನ ಬಜಕೂಡ್ಲು says:

    ಸೊಗಸಾಗಿದೆ ಲೇಖನ. ವಿದ್ಯಾರ್ಥಿಗಳ ಮನಸ್ಸನ್ನು ಅರಿತು ವ್ಯವಹರಿಸಬೇಕಾದ ಅನಿವಾರ್ಯತೆ ಇದೆ ಇವತ್ತಿನ ದಿನಗಳಲ್ಲಿ.

  6. ಶಂಕರಿ ಶರ್ಮ says:

    ಮಾತನಾಡುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ಸುಮ್ಮನೆ ತಮಾಷೆಗೆಂದ ಮಾತು ಮನ ಒಡೆಯಲೂಬಹುದು. ಕಣ್ತೆರೆಸುವ ಲೇಖನ…ಧನ್ಯವಾದಗಳು ಮೇಡಂ.

  7. Hema Mala says:

    ಶಿಕ್ಷಕರು ವಿಭಿನ್ನ ಪರಿಸರ/ಹಿನ್ನೆಲೆಯ ವಿದ್ಯಾರ್ಥಿಗಳೊಡನೆ ಸೂಕ್ತವಾಗಿ ವ್ಯವಹರಿಸಬೇಕಾದ ಅಗತ್ಯವನ್ನು ನಿರೂಪಿಸಿದ ಚೆಂದದ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: