ನೀರೆಯ ಸೀರೆ !
ಡಿಸೆಂಬರ್ 21 ರಂದು ಪ್ರತಿ ವರ್ಷ ‘ವಿಶ್ವ ಸೀರೆ ದಿನ’ ವನ್ನಾಗಿ ಆಚರಿಸಲಾಗುತ್ತದೆ. ಸಾಂಸ್ಕೃತಿಕ ಸಿರಿವಂತಿಕೆಯ ದ್ಯೋತಕವಾದ ಸೀರೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ನಮ್ಮ ದೇಶದ್ದು. ಸೀರೆಯುಟ್ಟ ನಾರಿಯರು ನಮ್ಮ ಸಂಸ್ಕೃತಿಯ ಸನ್ನಡತೆ ಮತ್ತು ಸದ್ಭಾವನೆಯನ್ನು ಪಸರಿಸುತ್ತಾರೆ. ಬೇರಾವ ವೇಷಭೂಷಣಕ್ಕೂ ಇಲ್ಲದೇ ಇರುವ ಗೌರವವು ಸೀರೆಗಿದೆ. ಯಾವುದೇ ಶುಭ ಸಮಾರಂಭಗಳಲ್ಲಿ ಸೀರೆಗೇ ಮೊದಲ ಮನ್ನಣೆಯ ಮಣೆ. ಭಿಕ್ಷುಕಿ ತೊಟ್ಟು ಚಿಂದಿಯಾದದ್ದೂ ಸೀರೆಯೇ; ಲಕ್ಷಾಂತರ ರೂ ಬೆಲೆ ಬಾಳುವ ಪೀತಾಂಬರದ್ದೂ ಸೀರೆಯೇ. ಎಲ್ಲಿಯೂ ಹೊಲಿಗೆ ಹಾಕದ, ಉದ್ದನೆಯ ಬಟ್ಟೆಯೊಂದಕ್ಕೆ ಭಾರತೀಯ ನಾರಿಯರು ಕೊಡುವ ಮೌಲ್ಯ ಮಹೋನ್ನತ. ಇದನ್ನೊಂದು ತುಂಡುಬಟ್ಟೆಯಾಗಿಸದೇ ವೈವಿಧ್ಯಮಯವಾಗಿ ಉಡುವ ರೀತಿಯಿಂದ ನಮ್ಮ ದೇಶವು ಜಗತ್ತಿಗೇ ಮಾದರಿಯಾಗಿದೆ. ಸೀರೆಗೆ ಹೊಂದಿಸುವ ರವಿಕೆ, ಲಂಗ, ಅದರ ಮ್ಯಾಚಿಂಗು, ಅದಕೆ ಜಿಗ್‌ಜಾಗು, ಫಾಲ್ಸು, ಅಂಚು, ಸೆರಗು ಹೀಗೆ ಇದಕ್ಕೆ ನೂರೆಂಟು ಬಾಲಂಗೋಚಿಗಳು. ‘ಏನಿದರ ರಗಳೆ ’ ಎಂದು ನಾನು ಬೇಸರಪಟ್ಟಿದ್ದುಂಟು. ಆದರೆ ಸೀರೆಯಿಂದಾಗಿಯೇ ಭಾರತವು ವಿಶ್ವದ ಬಹುತೇಕ ಮಹಿಳೆಯರ ಮನಸೂರೆಗೊಂಡಾಗ ಅದರ ಬಗ್ಗೆ ಇದ್ದ ನನ್ನ ಅಭಿಪ್ರಾಯ ಬದಲಾಗಿದ್ದೂ ಉಂಟು. ಬೇರಾವುದೇ ವೇಷಭೂಷಣಗಳು ಮಾಡರ್ನ್ ಆಗಬಹುದು. ಆದರೆ ಸೀರೆಗೆ ದೊರಕುವ ‘ಕಲ್ಚರಲ್ ಟಚ್’ ಬೇರಾವುದಕ್ಕೂ ಸಿಗುವುದಿಲ್ಲ! ಹಿಂದಿನ ಕಾಲದಲ್ಲಿನ ಹೆಂಗಸರ ಕೆಲಸಕಾರ್ಯಗಳಿಗೆ ತಕ್ಕಂತೆ ಸೀರೆಯು ಅನುಕೂಲವಿತ್ತು; ಈಗಿನ ಕಾಲಕ್ಕೆ ಎಲ್ಲ ಸಂದರ್ಭಗಳಲ್ಲಿಯೂ ಸೀರೆಯು ‘ಸೂಟಬಲ್ ಅಲ್ಲ’ ಎಂಬ ಔಚಿತ್ಯವನ್ನಿಟ್ಟುಕೊಂಡೇ ಬರೆಯುತ್ತಿದ್ದೇನೆ.
ಸೀರೆಯ ಚಾರಿತ್ರಿಕತೆಯನ್ನು ಸಿಂಧೂ ಕಣಿವೆಯ ನಾಗರಿಕತೆಯ ತನಕ ಒಯ್ಯಬಹುದಂತೆ. ಅಂದರೆ ಅದು ಅಷ್ಟು ಪ್ರಾಚೀನತಮ. ಸಂಸ್ಕೃತದ ‘ಚೀರ’ ಎಂಬ ಶಬ್ದವು ಕನ್ನಡಕ್ಕೆ ಬಂದು ಸೀರೆ ಎಂದಾಗಿದೆ. ಇದೇ ಇಂಗ್ಲಿಷಿನಲ್ಲಿ ‘ಸ್ಯಾರಿ’ ಆಯಿತು. ಹಾಗೆಯೇ ಸಂಸ್ಕೃತದ ಕೂರ್ಪಾಸ ಎಂಬುದು ಕುಪ್ಪಸ ಎಂದಾಯಿತು. ಕೂರ್ಪಾಸ ಎಂದರೆ ಮೇಲು ಹೊದಿಕೆ, ಮೇಲಂಗಿ ಎಂದರ್ಥ, ಇಂಗ್ಲಿಷಿನ ಜಾಕೆಟ್ ಎಂದರ್ಥದಲ್ಲಿ. ಇದೇ ಅಪಭ್ರಂಶಗೊಂಡು ಜಾಕೀಟು ಎಂದಾಯಿತು. ಮುಂದೆ ಇದು ಅರ್ಥಸಂಕೋಚನ ಪ್ರಕ್ರಿಯೆಗೆ ಒಳಗಾಗಿ ರವಿಕೆ, ಸೀರೆಯ ಜೊತೆಗೆ ತೊಟ್ಟುಕೊಳ್ಳುವುದು ಎಂದಾಯಿತು. ‘ಚೀರ’ ಎಂದರೆ ಉಡುವ ವಸ್ತ್ರ ಎಂದರ್ಥ. ಮುಂದೆ ಇದು ಸೀರೆ ಎಂದಾಗಿ, ಹೆಂಗಸರ ವಸ್ತ್ರ ಎಂದಾಯಿತು. ‘ಊರ ಸೀರೆಗೆ ಅಸಗ ಬಡೆವಡೆದಂತೆ’ ಎಂಬ ಮತ್ತು ‘ಅನ್ನದೊಳಗೊಂದಗುಳ, ಸೀರೆಯೊಳಗೊಂದೆಳೆಯ’ ಎಂಬಂಥ ಮಾತು ಬಸವಣ್ಣನವರ ವಚನದಲ್ಲಿ ಬರುತ್ತದೆ. ಇದೇನೇ ಇರಲಿ, ಸೀರೆಯು ಹೆಣ್ಣುಮಕ್ಕಳ ಮಮತೆ, ಘನತೆ ಮತ್ತು ಮರ್ಯಾದೆಯ ದ್ಯೋತಕ. ಅರಿಶಿನ ಕುಂಕುಮದ ಜೊತೆಗೆ ಸೀರೆಯನ್ನು ಉಡುಗೊರೆಯನ್ನಾಗಿ ಕೊಡುವುದು ಸತ್ಸಂಪ್ರದಾಯ. ಅದರಲ್ಲೂ ತವರುಮನೆಯಿಂದ ಮಗಳು ಪಡೆದ ಗಿಫ್ಟುಗಳಲ್ಲಿ ಸೀರೆಗೇ ಮೊದಲ ಮನ್ನಣೆ. ಈಗಲೂ ಮಹಿಳೆಯರು ಸೀರೆಯ ವಿಚಾರದಲ್ಲಿ ತಮ್ಮೆಲ್ಲ ಅಸಮಾಧಾನಗಳನ್ನು ಮರೆತು ಗಂಟೆಗಟ್ಟಲೆ ಚರ್ಚಿಸುವರು. ಸೀರೆಯಂಗಡಿಯ ಮುಂದೆ ಒಂದು ಕ್ಷಣ ನಿಂತು ಹೊರಡುವರು. ಸಪೂರ ಗೊಂಬೆಗಳಿಗೆ ಉಡಿಸಿದ ಸೀರೆಗಳ ಮೇಲೆ ಕಣ್ಣು ನೆಟ್ಟು, ಹೊಸ ಫ್ಯಾಷನ್ನು ಮತ್ತು ಡಿಸೈನುಗಳನ್ನು ಮನದುಂಬಿಸಿಕೊಳ್ಳುವರು. ಒಂದು ಸೀರೆ ಖರೀದಿಸಲೋಸುಗ ಅಂಗಡಿಗೆ ಐದಾರು ಮಂದಿಯ ಭೇಟಿ. ತಾವು ತೆಗೆದುಕೊಳ್ಳದಿದ್ದರೂ ತೆಗೆದುಕೊಳ್ಳಲು ಆಗದಿದ್ದರೂ ಮತ್ತೋರ್ವ ಮಹಿಳೆಗೆ ಸೀರೆಯ ಆಯ್ಕೆಯಲ್ಲಿ ನಿರ್ವಂಚನೆಯ ನೆರವು. ‘ಇದೇ ಕಲರಿನಲ್ಲಿ ಬೇರೆ ಡಿಸೈನ್ ತೋರಿಸಿ’ ಅಂತಲೋ ‘ಇದೇ ಡಿಸೈನಿನಲ್ಲಿ ಬೇರೆ ಕಲರ್ ತೋರಿಸಿ’ ಅಂತಲೋ ಅಂಗಡಿಯವರನ್ನು ಕೇಳುವುದು ರೂಢಿ. ಅಂಗಡಿಯವರೂ ಅಷ್ಟೇ: ಜೊತೆಗೆ ಬಂದವರಿಗೂ ಸೀರೆ ಮಾರುವ ಕಲೆಯಲ್ಲಿ ನಿಷ್ಣಾತರು. ಸೀರೆ ಚೀಟಿ ಪಾಪ್ಯುಲರು. ಗಂಡಸರು ಬಹು ಬೇಗ ಸೀರೆಯ ವಿಚಾರದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಜೊತೆಗೆ ಅವರಲ್ಲಿ ಬಣ್ಣಗುರುಡುತನವು ಹುಟ್ಟಿನಿಂದ ಬಂದ ಬೇನೆ. ಹೆಂಗಸರಿಗೆ ಗೊತ್ತಿರುವಷ್ಟು ಬಣ್ಣಗಳು ಗಂಡಸರಿಗೆ ಗೊತ್ತಾಗುವುದಿಲ್ಲ. ಇದಕ್ಕೆ ಸೀರೆಯಂಗಡಿ ಸೇಲ್ಸ್‌ಮನ್ ಅಪವಾದ. ಬಟ್ಟೆಯಂಗಡಿಯಲ್ಲಿದ್ದು, ಒಂಥರಾ ಹೆಣ್ಣಿನ ಮನಸನ್ನೇ ಧರಿಸಿ ಬಿಟ್ಟಿರುತ್ತಾನೆ. ಏಕೆಂದರೆ ಒಂದು ಹೆಣ್ಣು ಮಾತ್ರ ಇನ್ನೊಂದು ಹೆಣ್ಣಿನ ಅಂತರಾಳವನ್ನು ಅರಿಯಬಲ್ಲಳು. ತಿಪ್ಪರಲಾಗ ಹಾಕಿದರೂ ಗಂಡಿಗೆ ಹೆಣ್ಣಿನ ಒಳತುಡಿತ ಅರ್ಥವಾಗುವುದಿಲ್ಲ.
ಮುನ್ನೂರರಿಂದ ಮೂರು ಲಕ್ಷದವರೆಗೂ ಬೆಲೆ ಬಾಳುವ ಸೀರೆಗಳಿವೆ. ರೇಷ್ಮೆ ಸೀರೆ ಅದರಲ್ಲೂ ಮೈಸೂರು ಸಿಲ್ಕ್ ವರ್ಲ್ಡ್ ಫೇಮಸ್ಸು. ರೇಷ್ಮೆಯೆಳೆಯ ಚಿನ್ನದ ಝರಿ. ಮದುವೆ ಮನೆಗಳಲ್ಲಿ ರೇಷ್ಮೆ ಸೀರೆಗಳದೇ ಭರಾಟೆ. ಛತ್ರದ ಒಂದು ಮೂಲೆಯಲ್ಲಿ ಕುಳಿತ ಗಂಡಸರು, ಹ್ಯಾಪು ಮೋರೆ ಹಾಕಿಕೊಂಡು ಮದುಮಗನ ಭವಿಷ್ಯವನ್ನು ಕರಾಳವಾಗಿ ಕಲ್ಪಿಸಿಕೊಳ್ಳುತ್ತಿದ್ದರೆ, ಇದಾವುದರ ಪರಿವೆಯೇ ಇಲ್ಲದ ಹೆಂಗಸರು ಮಾತ್ರ ಅರ್ಧಗಂಟೆಗೆಲ್ಲಾ ಒಂದೊಂದು ಸೀರೆ ಬದಲಿಸಿ, ಫೋಟೊಗೆ ಫೋಸು ಕೊಡುತ್ತಿರುತ್ತಾರೆ. ಮದುವೆಯಾಗುತ್ತಿರುವ ಮದುಮಗಳು ಸಹ ತಾನುಟ್ಟ ಬೆಲೆ ಬಾಳುವ ರೇಷ್ಮೆಸೀರೆಯನ್ನು ಪದೇ ಪದೇ ಮುಟ್ಟಿ ನೋಡಿಕೊಳ್ಳುತ್ತಾ ಛತ್ರಕ್ಕೆ ಬಂದ ಹೆಂಗಸರ ಸೀರೆಯ ಡಿಸೈನಿನತ್ತಲೇ ಕಣ್ಣಿಟ್ಟಿರುತ್ತಾಳೆ. ಇದೆಲ್ಲವೂ ನೀರೆಯರ ಸೀರೆಯ ಮಾಯಾಲೋಕ. ಹೆಂಗಸರು ಬೇಜಾರಿಲ್ಲದೇ ಮಾತಾಡುವ ಸಂಗತಿಗಳಲ್ಲಿ ಸೀರೆಗೇ ಮೊದಲ ಸ್ಥಾನ. ನಮ್ಮಜ್ಜಿ ಕಾಲದಲ್ಲಿ ಹದಿನೆಂಟು ಮೊಳದ ಸೀರೆಗಳದೇ ರಾಜ್ಯಭಾರ. ಅದರಲ್ಲೂ ಕಚ್ಚೆ ಹಾಕಿಕೊಂಡು ಉಟ್ಟುಕೊಂಡರೇನೇ ಮಡಿಗೆ ಬರುತ್ತಿದ್ದುದು. ಈಗಿನಂತೆ ಉಟ್ಟುಕೊಂಡರೆ ಅಂಥ ಹೆಂಗಸರನ್ನು ಅಸಡ್ಡೆಯಿಂದ ನೋಡುತಿದ್ದರು. ಅಷ್ಟೇ ಅಲ್ಲ, ಹೊಕ್ಕಳು ಕಾಣುವಂತೆ ಸೀರೆಯುಟ್ಟ ಹೆಂಗಸರಿಗೆ ಹಿಡಿಶಾಪ ಹಾಕುತ್ತಿದ್ದರು. ಕ್ರಮೇಣ ಸೀರೆಗಿದ್ದ ಮಡಿವಂತಿಕೆ ಮಾಯವಾಗುತ್ತಾ ಬಂತು. ಥರಾವರಿ ಸೀರೆಗಳು ಮಾರುಕಟ್ಟೆಯಲ್ಲಿ ಕಾಣಲಾರಂಭಿಸಿದವು. ಶಿಫಾನ್ ಸೀರೆ, ಜಾರ್ಜೆಟ್ ಸೀರೆ, ನೈಲಾನ್ ಸೀರೆಗಳು ಮೆರೆಯಲು ಶುರುವಾದವು. ಸಿನಿಮಾ ನಟಿಯರು ಉಟ್ಟ ಸೀರೆಯತ್ತ ಹೆಂಗಳೆಯರ ಗಮನ ಹೋಗುತ್ತಿದ್ದವು. ನಾಯಕಿಯು ಬಲು ಮೋಹಕವಾಗಿ ಸೀರೆಯುಟ್ಟು ನಾಯಕನೊಂದಿಗೆ ಹಾಡುವ ದೃಶ್ಯಗಳನ್ನಂತೂ ಎಂಬತ್ತು ತೊಂಬತ್ತು ದಶಕದ ಜನ ಮರೆತಿರಲಾರರು. ನಾನಂತೂ ಹೈಸ್ಕೂಲು ಓದುವಾಗ ಈ ಸಿನಿಮಾದ ಕಲಾವಿದರು ಅದೆಷ್ಟು ಸುಂದರವಾಗಿ ಸೀರೆಯುಡುತ್ತಾರೆ; ಆದರೆ ನಿಜಜೀವನದಲ್ಲೇಕೆ ಈ ಹೆಂಗಸರು ಇಷ್ಟೊಂದು ಕೆಟ್ಟದಾಗಿ ಸೀರೆಯುಟ್ಟು ಓಡಾಡುತ್ತಾರೆ? ಎಂಬ ಪ್ರಶ್ನೆಯನ್ನು ನನ್ನಲ್ಲೇ ಕೇಳಿಕೊಳ್ಳುತ್ತಿದ್ದೆ. ಅದರಲ್ಲೂ ಬಡವರು, ಅಲೆಮಾರಿಗಳು, ದೀನದರಿದ್ರರು ಹರಿದ, ಅಲ್ಲಲ್ಲಿ ತೇಪೆ ಹಾಕಿದ ಬಣ್ಣ ಮಾಸಿದ ಹಳೆಯ ಸೀರೆಯನ್ನು ಉಟ್ಟು ಓಡಾಡುವುದನ್ನು ನೋಡಿ, ಕಕಮಕವಾಗುತ್ತಿತ್ತು. ಅಂತೂ ಸೀರೆಯು ಬಡವರಿಗೂ ಭಾಗ್ಯವಂತರಿಗೂ ಬೇಕಾದುದು ಎಂದಾಯಿತು. ಅದು ಯಾರೋ ವಸ್ತ್ರ ವಿನ್ಯಾಸಕಾರರು ತಮ್ಮೊಂದು ಸಂದರ್ಶನದಲ್ಲಿ ‘ಭಾರತೀಯ ನಾರಿಯುಡುವ ಸೀರೆಯೇ ಅತ್ಯಂತ ಶೃಂಗಾರಮಯ ವಸ್ತ್ರಭೂಷಣ. ಎಷ್ಟು ಬೇಕೋ ಅಷ್ಟಷ್ಟೇ ಕಾಣುವ ತೆರದಿ, ಪಾರದರ್ಶಕವಾಗಿ ಸೀರೆಯುಟ್ಟ ಲಲನೆಯೇ ನಿಜವಾದ ಸುಂದರಿ’ ಎಂದು ಹೇಳಿದ್ದನ್ನು ನಾನಿನ್ನೂ ಮರೆತಿಲ್ಲ. ರವಿಚಂದ್ರನ್ ಅವರು ತಮ್ಮ ಚಲನಚಿತ್ರಗಳಲ್ಲಿ ಸೀರೆಯುಟ್ಟ ಚೆಲುವೆಯರನ್ನು ಇನ್ನಿಲ್ಲದಂತೆ ಮೆರೆಸಾಡಿದ್ದಾರೆ; ಸೀರೆಯ ಮಾದಕತೆಯನ್ನು ಜಗಜ್ಜಾಹೀರು ಮಾಡಿದ್ದಾರೆ.
ಕೈಮಗ್ಗದ ಸೀರೆಗಳಿಂದ ಹಿಡಿದು ಅತ್ಯಾಧುನಿಕ ಯಂತ್ರಗಳ ಮೂಲಕ ತಯಾರಾಗುವ ಸೀರೆಗಳವರೆಗೆ ಸ್ಯಾರಿಯೋದ್ಯಮ ಗರಿಗೆದರಿ ಜಾಗರವಾಡಿದೆ. ಸೀರೆ ಬ್ಯುಸಿನೆಸ್ ಎಂಬುದು ಅದೆಷ್ಟೋ ಹೆಣ್ಣುಮಕ್ಕಳ ಹೊಟ್ಟೆಪಾಡಾಗಿದೆ. ಅಂಗಡಿಗಳಲ್ಲಿ ಎಷ್ಟು ಸೀರೆಗಳು ಮಾರಾಟವಾಗುತ್ತವೆಯೋ ಅದಕ್ಕಿಂತ ಎರಡು ಪಟ್ಟು ಸೀರೆವ್ಯಾಪಾರವನ್ನು ಸೀರೆಮನೆಗಳು ಮಾಡುತ್ತಿವೆ. ಚೌಕಾಸಿ ಮಾಡಲು, ಕಂತುಗಳಲ್ಲಿ ಕೊಡಲು, ಬೆನಿಫಿಟ್ ಸ್ಕೀಂ ನಡೆಸಲು ಸೀರೆಯೇ ಹೇಳಿ ಮಾಡಿಸಿದ ಹೆಂಗರುಳಿ ತನುಮನದೊಡವೆ! ತಮಿಳುನಾಡು ಮತ್ತು ಆಂಧ್ರಗಳಿಂದ ಸೀರೆಯನ್ನು ತಂದು ಮಾರಾಟ ಮಾಡುವ ಬ್ಯುಸಿನೆಸ್ಸಿನಲ್ಲಿ ಕೆಲವೊಮ್ಮೆ ನಷ್ಟವಾಗುವುದೂ ಇದೆ. ಒಂದೆರಡು ಕಂತುಗಳನ್ನು ಕಟ್ಟಿದ ಮೇಲೆ ಕೊಂಡವರ ಮನೆಗೆ ನಿತ್ಯ ಅಲೆದಾಡುವ ಪರಿಸ್ಥಿತಿ ಸಹ ಇದೆ. ಪುಣ್ಯಕ್ಕೆ ನನ್ನ ಮಡದಿಗೆ ಸೀರೆಯ ಹುಚ್ಚಿಲ್ಲ. ಮೊನ್ನೆ ಕಾರ್ಯ ನಿಮಿತ್ತ ಹಾಸನಕ್ಕೆ ಹೋದಾಗ ಅಲ್ಲಿನ ಸಿಟಿ ಬಸ್ ನಿಲ್ದಾಣದ ಎದುರಿರುವ ‘ಪೈ ಸಿಲ್ಕ್’ ಶೋರೂಮು ಇಷ್ಟವಾಯಿತು. ಕಡಮೆ ಬೆಲೆಯಲ್ಲಿ, ಕೊಡುವ ದುಡ್ಡಿಗೆ ಮೋಸವಿಲ್ಲದಂಥ ನವನವೀನ ವಿನ್ಯಾಸದ ಥರಾವರೀ ಸೀರೆಗಳು ಇದ್ದುದನ್ನೂ ಅಂಗಡಿಯವರು ಗ್ರಾಹಕರ ಅಭೀಪ್ಸೆಯನ್ನರಿತು ಮಾರಾಟ ಮಾಡುವುದನ್ನೂ ಕಣ್ಣಾರೆ ಕಂಡು ಅಚ್ಚರಿಗೊಂಡೆ. ಮೊತ್ತ ಮೊದಲ ಬಾರಿಗೆ ನನಗೆ ಸೀರೆಯಂಗಡಿಯೊಂದು ಇಷ್ಟವಾಯಿತು.
ಸಂಕ್ರಾಂತಿ ಹಬ್ಬದಂದು ಪುಟ್ಪುಟ್ಟ ಹೆಣ್ಣುಮಕ್ಕಳು ಸೀರೆಯುಟ್ಟು ಎಳ್ಳು ಬೀರುತ್ತಿದ್ದುದನ್ನು ನೋಡುವುದೇ ಒಂದು ಚೆಂದವಾಗಿತ್ತು. ಮನೆಗಳಲ್ಲಿ ಪುಟ್ಟ ಮಕ್ಕಳು ಅಮ್ಮನ ಸೀರೆಯನ್ನು ಹೇಗೆ ಹೇಗೋ ಉಟ್ಟುಕೊಂಡು ತಮ್ಮ ತಾಯಿಯನ್ನು ಅನುಕರಿಸುತ್ತಿದ್ದ ಆಟಗಳೆಲ್ಲಾ ಮೊಬೈಲ್ ಫೋನ್ ಬಂದ ಮೇಲೆ ಮಾಯವಾಗಿವೆ. ವಯಸಿಗೆ ಬಂದ ಮಗಳು ಸೀರೆಯುಟ್ಟು ಓಡಾಡುವುದನ್ನು ನೋಡಿದ ತಂದೆಗೆ ‘ತನ್ನ ಮಗಳ ಮದುವೆ ಮಾಡಬೇಕೆಂಬ’ ಜವಾಬ್ದಾರಿ ನೆನಪಾಗುತ್ತದೆ. ಒಟ್ಟಿನಲ್ಲಿ ಸೀರೆಯು ಭಾರತೀಯ ಸಂಸ್ಕೃತಿಯಲ್ಲಿ ಭಕ್ತಿ-ಗೌರವದ ಇನ್ನೊಂದು ಹೆಸರಾಗಿದೆ. ವಿದೇಶೀಯರು ಸಹ ಸೀರೆಗೆ ಮಾರು ಹೋಗಿದ್ದಾರೆ. ಅಲ್ಲಿ ನಡೆಯುವ ಫಂಕ್ಷನ್ನು, ಉತ್ಸವಗಳಲ್ಲಿ ಸೀರೆಯುಟ್ಟು ನಲಿಯುವುದು ಹೆಚ್ಚಾಗುತ್ತಿದೆ. ಒಂದೊಂದು ವಸ್ತ್ರವಿನ್ಯಾಸದಲ್ಲಿ ಒಂದೊಂದು ಬಗೆಯ ಚೆಲುವನ್ನು ಚಿಮ್ಮಿಸುವ ಹುಟ್ಟುಗುಣ ಹೆಣ್ಣುಮಕ್ಕಳು ಪಡೆದುಕೊಂಡು ಬಂದ ವರ! ಅದರಲ್ಲೂ ಚೆಂದದ ಮೈಗೊಪ್ಪುವ ಸೀರೆಯುಟ್ಟ ನೀರೆಯರು ಎಲ್ಲ ಕಾಲದ ಸಂತಸ ಮತ್ತು ಉಲ್ಲಾಸಗಳ ಜುಗಲ್ ‘ಬಂಧಿ!’ ಜೈ ಸೀರೆ ; ಜೈ ನೀರೆ !
–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಪ್ರಕಟಿಸಿದ ಸುರಹೊನ್ನೆಗೆ ನನ್ನ ನಮನಗಳು
ವಾವ್.. ‘ನಾರಿಯ ಸೀರೆ’ಯ ಬಗ್ಗೆ ಸೊಗಸಾದ ಬರಹವನ್ನು ಕಳುಹಿಸಿ ಮೊದಲಿಗರಾಗಿದ್ದೀರಿ. ಧನ್ಯವಾದಗಳು, ಅಭಿನಂದನೆಗಳು . ಇನ್ನು ‘ಸುರಹೊನ್ನೆ ಬಳಗದ’ ನಾರಿಯರು ಬರೆದು ‘ ಮುಯ್ಯಿ’ ತೀರಿಸಿದಿದ್ದರೆ ಸೀರೆಗೇ ಅವಮಾನ ಮಾಡಿದಂತೆ ಎಂದು ಪರಿಗಣಿಸಿ, ಕಾರ್ಯಪ್ರವೃತ್ತರಾಗಲಿದ್ದೇವೆ!
ನೀರೆಯರ ಸೀರೆಗಳ ಬಗ್ಗೆ ನೀರೆಯರೇ ಮೂಗಿನ ಮೇಲೆ ಬೆರಳಿಡುವಂತೆ ಆಸಕ್ತಿದಾಯಕ ಲೇಖನ ಬರೆದ, ಮಂಜುರಾಜ್ ಸರ್, ನಿಮಗೂ ‘ಜೈ’
ಧನ್ಯವಾದ ಮೇಡಂ
ಇಂಥ ಸೃಷ್ಟಿಶೀಲ ಮುಯ್ಯಿಗಳು
ಸಾವಿರವಾಗಲಿ ….
ಶುಭ ಹಾರೈಕೆಗಳು
ಸೊಗಸಾದ, ಮಾಹಿತಿ ಪೂರ್ಣ ಲೇಖನ
ನಮನಗಳು
ವಾವ್..ನೀವು ಯಾವ ವಿಷಯವನ್ನೇ ಆರಿಸಿಕೊಳ್ಳಲಿ ಅದರ ಹಿಂದೆ ನಿಮ್ಮ ಅದ್ಯಯನ ಸೂಕ್ಷ್ಮವಲೋಕನ..ವಿಶ್ಲೇಷಣೆಯೊಂದಿಗೆ..ಸೊಗಸಾದ ನಿರೂಪಣೆ ಯಲ್ಲಿ ಮುಕ್ತಾ ಯ.. ಬರೆಹಗಾರರಿಗೆ ಮಾರ್ಗದರ್ಶನ ಮಾಡುವಂತಿರುತ್ತದೆ..ಸಾರ್ ಸೀರೆಯ..ಬಗ್ಗೆ ಯೂ ಹೊರತಾಗಿಲ್ಲ…ಸೂಪರ್..
ಧನ್ಯವಾದ ಮೇಡಂ
ನಿಮ್ಮಭಿಮಾನದ ನುಡಿ
ಬದುಕಿಗದು ಬೆನ್ನುಡಿ !
ಅನಂತ ಪ್ರಣಾಮ
ಚಿತ್ರವಿಚಿತ್ರವಾದ ವಿಶೇಷ ದಿನಗಳಿಗೆ ಈ ವಿಶ್ವ ಸೀರೆ ದಿನವೂ ಹೇಗೆ ಸೇರ್ಪಡೆಯಾಯಿತೆಂಬುದನ್ನು ತಿಳಿಯಲು ಕೂಲಂಕಶವಾಗಿ ಸಂಶೋಧನೆ ಮಾಡಬೇಕಿದೆ! ಏನೇ ಇರಲಿ…ನೀರೆಯರ ಸೀರೆ ವೈವಾಟಿನ ಕುರಿತು ತಾವು ಬರೆದ ವಿಸ್ತೃತ ಲೇಖನವು ನಾರಿಯ ಸೀರೆಯಷ್ಟೇ ಚೆನ್ನಾಗಿದೆ ಸರ್…ಧನ್ಯವಾದಗಳು.
ಸೀರೆಯ ನಾರಿಯರ ಮನದಂಗಳ ಹಾಗೂ ವಿವಿಧ ಸೀರೆಗಳ ಒನಪಿನ , ಬೆಚ್ಚನೆಯ ಅನಾವರಣ ಬಹಳ ಇಷ್ಟವಾಯ್ತು, sir. ಹಾಗೆಯೇ ಸಂಕ್ರಾಂತಿಗೆ ಹೊಸ ಸೀರೆ ಖರೀದಿಗೂ ಅಂಗಡಿಯ ವಿಳಾಸ ತಿಳಿದಂತಾಯಿತು ! ಅಮ್ಮನ ಮಡಿಲಿನ ಬಿಸುಪಿನ ರಕ್ಷೆ , ಅಮ್ಮ ಸೀರೆ ಉಟ್ಟಾಗಷ್ಟೇ !!
ನಾನು ನನ್ನ ಹೆಂಡತಿ ಜೊತೆಗೆ ಸೀರೆ ಕೊಳ್ಳಲು ಹೋಗಿ 20ವರ್ಷಗಳ ಸುದೀರ್ಘ ಅನುಭವ ಇದೆ ಒಂದು ಅನ್ಯಾಯ ಏನೆಂದರೆ ಗಂಡಸರಿಗೆ ಏನು ತೊಗೊಳಕ್ಕೆ ಆಗಲ್ಲ collections ಇರಲ್ಲ ಸರ್ ಈ ಅನ್ಯಾಯ ತಡೆಗಟ್ಟದು ಹೇಗೆ
Very good article
ಸೂಪರ್ ಲೇಖನ…
ಒಳ್ಳೆಯ ಲಘು ಬರೆಹದಂತಿರುವ ಪ್ರಬುದ್ಧ ಪ್ರಬಂಧ. ಸೀರೆಗೊಪ್ಪುವ ನೀರೆ ನೀರೆಗೊಪ್ಪುವ ಸೀರೆ. Dr. ಬನಾರಿ
ಸೀರೆಯ ಬಗ್ಗೆ ಎಷ್ಟೊಂದು ವಿವರಣೆಯನ್ನು, ಎಷ್ಟು ಸೊಗಸಾಗಿ ಮಾಡಿದ್ದೀರಾ, ಸರ್. ಓದಿ ಖುಷಿಯಾಯಿತು. ಧನ್ಯವಾದಗಳು.