ಕಾವ್ಯ ಭಾಗವತ 22: ವೃತ್ರಾಸುರ
22.ಷಷ್ಟ ಸ್ಕಂದ, ಅಧ್ಯಾಯ-3
ವೃತ್ರಾಸುರ
ವೃತ್ರಾಸುರ
ಲೋಕಕಂಟಕ, ಪರಮಪಾಪಿಯಾಗಿದ್ದೂ
ಮರಣ ಸಮಯದಿ
ಇಂದ್ರನ ವಜ್ರಾಯುಧದಿಂ ಹತನಾದರೂ
ಸಕಲ ಕಾಮನೆಗಳನ್ನೂ ನೀಗಿ
ಭಗವಂತನಲಿ, ಅನನ್ಯ ಭಕ್ತಿ
ಉದಯವಾಗಿ
ಕಂಠಪ್ರದೇಶದಿಂ
ಉಜ್ವಲ ತೇಜಸ್ಸುದಯಿಸಿ
ಊರ್ಧಮುಖದಿಂದೇರುತ್ತ, ಏರುತ್ತ
ವೈಕುಂಠವ ಸೇರಿದ
ರಕ್ಕಸಗೆ ಭಗವತ್ ಭಕ್ತಿ
ಉದ್ಭವವಾದುದೊಂದು ಅಚ್ಚರಿಯ
ಸಂಗತಿಯೆಂದೆನಿಸಿದರೆ
ಚಿತ್ರಕೇತುವಿನ ಉಪಖ್ಯಾನ
ಕೇಳುವದೊಳಿತು
ಶೂರಸೇನ ದೇಶದಧಿಪತಿ
ಚಿತ್ರಕೇತುವಿಗೆ
ತಾಜ್ಯ, ಕೋಶ, ಪರಿವಾರವೆಲ್ಲದರ
ಸುಖವಿದ್ದರೂ,
ಪುತ್ರ ಸಂತಾನವಿಲ್ಲದ ಶೋಕ
ಅಪರಿಮಿತ
ಅಂಗೀರಸ ಮಹರ್ಷಿಗಳ
ಅನುಗ್ರಹದಿಂ, ಜನಿಸಿದ
ಪುತ್ರನಾಗಮನದಿಂ
ಚಿತ್ರಕೇತು, ಮತ್ತವನ
ಪಟ್ಟಮಹಿಷಿಯ
ಆನಂದೋತ್ಸಾಹಗಳಿಗೊಂದು
ಅಂತ್ಯ
ವರ್ಷದೊಳಗೆ ಒದಗಿ ಬಂದುದು
ವಿಧಿವಿಲಾಸ
ಪಟ್ಟಪಹಿಷಿ, ಕೃತದ್ಯುತಿಯ
ಸವತಿಯರ ದುಷ್ಟಕೂಟ
ಉಣಿಸಿದ
ವಿಷದ ಹಾಲಿಗೆ
ರಾಜಕುಮಾರನ ಬಲಿ
ಚಿತ್ರಕೇತುವಿನ
ಶೋಕಕ್ಕೆ ಎಲ್ಲಿದೆ ಎಲ್ಲೆ?
ಪುತ್ರಶೋಕಂ ನಿರಂತರಂ
ಎಂಬ ನಾಣ್ನುಡಿ ದಿಟವಾದರೂ
ರಾಜನಿಗೊಂದುಪದೇಶ ನೀಡಿ
ಅಂಗೀರಸ ಮಹರ್ಷಿಗಳ
ಕೃಪೆಯಿಂ ಸತ್ತ ಮಗ
ಎದ್ದು ಕುಳಿತರೂ
ಆ ಜೀವವು ಸಕಲರಿಗೆ
ತನ್ನ ಕರ್ಮಾನುಭವ ಯಾತ್ರೆಯಲಿ
ಪಡೆದ ಅನೇಕಾನೇಕ ದೇಹಗಳ
ಜೀವನ್ಮರಣ ಯಾತ್ರೆಯ
ಕೊನೆಮೊದಲಿಲ್ಲದ ಕರ್ಮವ ತಿಳಿಸಿ
ಮತ್ತೆ ಈ ಜನ್ಮದ ದೇಹತ್ಯಾಗ ಮಾಡಿ
ಚಿತ್ರಕೇತುವಿನಲಿ
ಜ್ಞಾನವೈರಾಗ್ಯದ ಬೀಜ ಬಿತ್ತಿದ
ಪರಿಣಾಮದಿಂ
ಪುನರ್ಜನ್ಮದಲಿ ವೃತ್ರಾಸುರನಾಗ
ಹರಿಭಕ್ತಿಯಲಿ
ದೇವೇಂದ್ರದಿಂದ ವಧಿಸಲ್ಪಟ್ಟು
ಮೋಕ್ಷಪಡೆದ ಕಥೆ
ಹರಿಭಕ್ತಿ
ಸಕಲ ಜೀವಿಗಳಲಿ
ಉದಯಿಸುವ ನಿತ್ಯ ಕಥೆ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41427
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಭಾಗವತದ ಕಾವ್ಯರೂಪದ ಈ ಭಾಗದ ಸರಳ ನಿರೂಪಣೆ, ಪುನರ್ಜನ್ಮದ ಕುರಿತಾದ ವಿಚಾರಧಾರೆಯನ್ನು ಮತ್ತೊಮ್ಮೆ ಯೋಚಿಸುವಂತೆ ಮಾಡಿತು.
Nice
Nice
ಭಗವತದ ಕಾವ್ಯ ರೂಪದಲ್ಲಿ ನ ಬರಹ.. ಆಪ್ತವಾಗಿ ದೆ ಹಾಗೇ ಚಿಂತನೆ ಗೆ ಹಚ್ಚುವಂತೆ ಮಾಡಿದೆ ಸಾರ್..
ಸರಳ ಕನ್ನಡದಲ್ಲಿ ಮೂಡಿ ಬರುತ್ತಿರುವ ಕಾವ್ಯ ಭಾಗವತ ಸರಣಿ ಬಲು ಸೊಗಸಾಗಿದೆ. ನಾವು ಎಂದೋ ಪಠ್ಯದಲ್ಲಿ ಓದಿದ್ದ/ಕೇಳಿದ್ದ ಕೆಲವು ಪೌರಾಣಿಕ ಕಥೆಗಳು ನೆನೆಪಾಗುತ್ತಿವೆ.
ಜನ್ಮ ಜನ್ಮಾಂತರದ, ಜೀವನ್ಮರಣದ ರಹಸ್ಯವನ್ನು ಸೂಕ್ಷ್ಮವಾಗಿ ತಿಳಿಸುವ ವೃತ್ತಾಸುರ ವೃತ್ತಾಂತವು ಸರಳ ಸುಂದರವಾಗಿ ಮೂಡಿಬಂದಿದೆ…ವಂದನೆಗಳು ಸರ್.