ಹಸಿರು ಮತ್ತು ಹಾಸ್ಯದ ಹೊನಲಿನ ಮೇಧಾವಿ ವಿಜ್ಞಾನಿ ಡಾ.ಬಿ.ಜಿ.ಎಲ್.ಸ್ವಾಮಿ

Share Button

‘ಹಸುರು ಹೊನ್ನು’ ಎನ್ನುತ್ತಿದ್ದಂತೆ ಕನ್ನಡ ಸಾಹಿತ್ಯ ಪ್ರೇಮಿಗಳ ಮನಸ್ಸು ಪುಸ್ತಕದ ಕರ್ತೃ ಡಾ.ಬಿ.ಜಿಎಲ್‍ ಸ್ವಾಮಿಯವರನ್ನು ನೆನೆಯುತ್ತದೆ.  ಅಷ್ಟೊಂದು ಪರಿಚಿತರಾಗಿ ಜನಮಾನಸಕ್ಕೆ ಹತ್ತಿರವಾಗಿದ್ದ ಸ್ವಾಮಿಯವರು ನವೆಂಬರ್‍ 2, 1980ರಂದು ನಮ್ಮನ್ನಗಲಿದ್ದರೂ ಅಂತಹ ಮಹಾನುಭಾವರ ಹೆಸರು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿದೆ. ಕನ್ನಡದ ಓದುಗರಿಗೆ ಅವರ ತಿಳಿಹಾಸ್ಯ ತುಂಬಿದ ಬರೆವಣಿಗೆ ಬಹಳಪ್ರಿಯ. ವಿಜ್ಞಾನದ ಜೊತೆಗೆ ಹಾಸ್ಯವನ್ನು ಬೆರೆಸಿ ಹೇಳುವುದು ಸುಲಭವಲ್ಲ. ಅಂತಹ ಅಪೂರ್ವ ಲೇಖನಾ ಸಾಮರ್ಥ್ಯ ಸ್ವಾಮಿಯವರಿಗೆ ಒಲಿದಿತ್ತು. ವಿಶಿಷ್ಟ ರೀತಿಯ ಲೇಖಕ ಮತ್ತು ವಿಜ್ಞಾನಿ. ಅನೇಕ ವಿಷಯಗಳಲ್ಲಿ ಪಾರಂಗತ.

ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ – ಬಿ.ಜಿ.ಎಲ್. ಸ್ವಾಮಿಯವರ ಪೂರ್ಣ ಹೆಸರು. ಖ್ಯಾತ ಸಾಹಿತಿ, ದಾರ್ಶನಿಕ ಡಿ.ವಿ.ಗುಂಡಪ್ಪನವರ ಪುತ್ರ. ತಾಯಿಯ ಹೆಸರು ಭಾಗೀರಥಮ್ಮ. ಡಾ.ಬಿ.ಜಿ.ಎಲ್. ಸ್ವಾಮಿಯವರ ಜನನ 5ನೇ ಫೆಬ್ರವರಿ 1916. ಸ್ವಾಮಿಯವರ ಬಾಳ ಸಂಗಾತಿ ಶ್ರೀಮತಿ ವಸಂತ ಸರಳ ವ್ಯಕ್ತಿ. ಸ್ವಾಮಿಯವರನ್ನು ಸಮೀಪದಿಂದ ಕಂಡವರಿಗೆಲ್ಲಾ ಗೊತ್ತು ಅವರು ಧೂಮಪಾನ ಪ್ರಿಯರೆನ್ನುವುದು.

ಬಿ.ಜಿ.ಎಲ್. ಸ್ವಾಮಿಯವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯ ವಿಜ್ಞಾನದಲ್ಲಿ ಆನರ್ಸ್ ಪದವಿ ಗಳಿಸಿದರು. ತಮ್ಮ ತಂದೆಯವರ ಸಲಹೆಯಂತೆ ಮನೆಯಲ್ಲಿಯೇ ಪ್ರಯೋಗಾಲಯವನ್ನು ಮಾಡಿಕೊಂಡಿದ್ದರು. ವಿಜ್ಞಾನಿಯ ಆರಂಭವೇ ಚೆನ್ನಾಗಿದೆಯಲ್ಲವೇ? ಸೂಕ್ಷ್ಮದರ್ಶಕ, ಮೈಕ್ರೋಟೋಮ್ ಮತ್ತಿತರ ಪರಿಕರಗಳನ್ನು ಕೊಳ್ಳುವಾಗ ಉಪಯೋಗಿಸಿದ್ದನ್ನೇ (secon hand) ಕೊಂಡರು. ಆರ್ಕಿಡ್ ಹೂಗಳ(ಸೀತೆದಂಡೆ) ಭ್ರೂಣ ವಿಜ್ಞಾನವನ್ನು ತಮ್ಮ ಪ್ರಯೋಗಾಲಯದಲ್ಲೇ ಅಭ್ಯಾಸ ಮಾಡಿದರು. ಮೂಲತಃ ಸಸ್ಯವಿಜ್ಞಾನದ ವಿಜ್ಞಾನಿ. ಆದರೆ ಚಿತ್ರಕಲೆ, ಸಂಗೀತ, ಇತಿಹಾಸ, ಭಾಷಾಶಾಸ್ತ್ರ ಮುಂತಾದವುಗಳಲ್ಲಿಯೂ ಆಸಕ್ತಿ ಮತ್ತು ಪ್ರಾವೀಣ್ಯತೆ ಇತ್ತು.

ಮೈಸೂರು ವಿಶ್ವವಿದ್ಯಾಲಯವು ಡಿ.ಎಸ್ಸಿ. ಪದವಿಯನ್ನು ಬಿ.ಜಿ.ಎಲ್. ಸ್ವಾಮಿಯವರಿಗೆ 1947 ರಲ್ಲಿ ಪ್ರದಾನ ಮಾಡಿತು. ನಂತರ ತಮ್ಮ ಡಾಕ್ಟರೋತ್ತರ ಸಂಶೋಧನೆಯನ್ನು ಹಾರ್ವರ್ಡ್ ವಿಶ್ವವಿದ್ಯಾಲಯದ ವಿಡ್ಮರ್ ಬೈಲಿ ಅವರಲ್ಲಿ ನಡೆಸಿದರು. ಇವರ ಬೇರು-ಕಾಂಡ ಜೋಡಣೆಯ ಸಿದ್ಧಾಂತದ ಸಂಶೋಧನೆ, ನೂರು ವರ್ಷಗಳ ಸಿದ್ಧಾಂತವನ್ನೇ ಬುಡಮೇಲು ಮಾಡಿತು. ಕೆಲವು ಹೊಸ ಪ್ರಭೇದಗಳ ಸಸ್ಯಗಳನ್ನೂ ಗುರುತಿಸಿದ್ದಾರೆ. ಇವು ಆಸ್ಕರಿನ ಮಹೇಶ್ವರಿಯೈ ಮತ್ತು ಸಾರ್ಕಾಂಡ್ರ ಇರ್ವಿಂಗ್ ಬೈ ಲಿಯೈ ಹೆಸರಿನ ಸಸ್ಯಗಳು. ಇವುಗಳನ್ನು ಸ್ವಾಮಿಯವರು ತಮ್ಮ ಇಬ್ಬರು ಗುರುಗಳ ಜ್ಞಾಪಕಾರ್ಥ ಅವರ ಹೆಸರಿನಲ್ಲಿಯೇ ನಾಮಕರಣ ಮಾಡಿದ್ದಾರೆ.

ಭಾರತಕ್ಕೆ ವಾಪಸಾದ ಮೇಲೆ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ 1958 ರಲ್ಲಿ ಕೆಲಸಕ್ಕೆ ಸೇರಿದರು. ಸಸ್ಯವಿಜ್ಞಾನ ವಿಭಾಗದಲ್ಲಿ ಕೆಲಸ. ನಂತರ ಪ್ರಾಂಶುಪಾಲರಾಗಿಯೂ ಸೇವೆ. ತಮಿಳುನಾಡಿನಲ್ಲಿ ಕಳೆದ ದೀರ್ಘ ಅವಧಿಯ ಅನುಭವಗಳನ್ನು ಹಲವು ಪುಸ್ತಕಗಳಲ್ಲಿ ಬಣ್ಣಿಸಿದ್ದಾರೆ. ಇಲ್ಲಿ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಲು ಒಪ್ಪದೆ ಸುಮ್ಮನಿದ್ದರು. ಆದರೆ ಕುಲಪತಿಗಳು ಇವರನ್ನು ಕರೆಯಿಸಿ ಒಂದು ಹಾಳೆಯ ಮೇಲೆ ಅರ್ಜಿ ಬರೆಸಿಕೊಂಡು, ಮುಖ್ಯ ಪ್ರೊಫೆಸರ್ ಹುದ್ದೆ ನೀಡಿದರು. ನಿವೃತ್ತರಾದ ಮೇಲೆ ಬಿ.ಜಿ.ಎಲ್. ಸ್ವಾಮಿಯವರು 1979-80 ರ ಸಮಯದಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಸ್ಯವಿಜ್ಞಾನ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಆಗ ಇಲ್ಲಿಯ ವಿದ್ಯಾರ್ಥಿಗಳಿಗೆ ಹೊಸ ಹುಮ್ಮಸ್ಸು ಬಂದಿತು. ಸ್ವಾಮಿಯವರೇ ಬೆಳಗಿನ ಎಂಟು ಗಂಟೆಗೆ ಪ್ರಯೋಗಾಲಯದಲ್ಲಿರುತ್ತಿದ್ದರು. ಅನೇಕ ಸಂಶೋಧನಾ ಲೇಖನಗಳು ಪ್ರಕಟವಾದುವು. 

ಸ್ವಾಮಿಯವರ ಸಂಶೋಧನಾ ಚಟುವಟಿಕೆಗಳು ಕೇವಲ ಸಸ್ಯವಿಜ್ಞಾನಕ್ಕೆ ಸೀಮಿತವಾಗಿರಲಿಲ್ಲ. ಬಹುಮುಖ ಪ್ರತಿಭೆಯ ಅವರು ಕನ್ನಡ ಮತ್ತು ತಮಿಳು ಭಾಷೆಗಳ ಉಗಮ ಮತ್ತು ಸಾಹಿತ್ಯದ ಬಗ್ಗೆಯೂ ಸಂಶೋಧನೆ ನಡೆಸಿದ್ದಾರೆ. ಇದಲ್ಲದೆ ಇತಿಹಾಸ, ಶಾಸನಗಳು ಇವುಗಳನ್ನೂ ಆಳವಾಗಿ ಅಧ್ಯಯನ ಮಾಡಿದ್ದಾರೆ. ಇಂತಹ ಬಹುಮುಖ ಪ್ರತಿಭೆಯ ವ್ಯಕ್ತಿಯ ಕೌಶಲ್ಯಗಳ ಲಾಭವನ್ನು ಇನ್ನೂ ಪಡೆಯಬಹುದಾಗಿತ್ತು ಎನ್ನಿಸುತ್ತದೆ.

ಮುನ್ನೂರಕ್ಕೂ ಮೀರಿ ಸಂಶೋಧನಾ ಲೇಖನಗಳನ್ನು ಬಿ.ಜಿ.ಎಲ್.ಸ್ವಾಮಿಯವರು ಪ್ರಕಟಿಸಿದ್ದಾರೆ ಎಂದು ಎನ್.ಕೆ.ರಾಮಶೇಷನ್‍ ಹೇಳುತ್ತಾರೆ. ಆಂಗ್ಲಭಾಷೆ, ಸ್ಪ್ಯಾನಿಷ್, ಜರ್ಮನ್, ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳಲ್ಲಿಯೂ ಇವರ ಲೇಖನಗಳು ಪ್ರಕಟಗೊಂಡವು.

ಬಿ.ಜಿ.ಎಲ್. ಸ್ವಾಮಿಯವರು ಎಂದೂ ಪ್ರಶಸ್ತಿಗಳ ಹಿಂದೆ ಹೋದವರಲ್ಲ. ಹಲವಾರು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದವು. ಇವರ ‘ಅಮೆರಿಕದಲ್ಲಿ ನಾನು’ ಎನ್ನುವ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.

ಡಾ.ಬಿ.ಜಿ.ಎಲ್.ಸ್ವಾಮಿ

‘ಹಸುರು ಹೊನ್ನು’ ಸ್ವಾಮಿಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ತಂದುಕೊಟ್ಟಿತು. ಇದನ್ನು ಬರೆಯಲು ಮೂರು ಸಾವಿರಕ್ಕೂ ಮೇಲೆ ಕಾರ್ಡ್‍ಗಳಲ್ಲಿ ಬರೆದಿಟ್ಟಿದ್ದರಂತೆ. ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ತಂದೆ ಡಿ.ವಿ. ಗುಂಡಪ್ಪನವರು ಮತ್ತು ಮಗ ಸ್ವಾಮಿಯವರು ಇಬ್ಬರೂ ಗಳಿಸಿರುವುದು ವಿಶೇಷ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗೌರವವೂ ಸ್ವಾಮಿಯವರಿಗೆ ಸಂದಿದೆ. ಸಸ್ಯ ವಿಜ್ಞಾನದಲ್ಲಿ ಇವರು ಮಾಡಿರುವ ಸಂಶೋಧನೆಯನ್ನು ಗುರುತಿಸಿ ಬೀರಬಲ್ ಸಾಹ್ನಿ ಪ್ರಶಸ್ತಿಯನ್ನು ನೀಡಲಾಗಿದೆ. ಬಟಾನಿಕಲ್ ಸರ್ವೆ ಆಫ್ ಇಂಡಿಯದ ನಿರ್ದೇಶಕ ಹುದ್ದೆಯನ್ನು ತಿರಸ್ಕರಿಸಿದರು. ಅವರಿಗೆ ಸಂಶೋಧನೆ ಬರವಣಿಗೆ ಮತ್ತು ವಿದ್ಯಾರ್ಥಿಗಳು ಹೆಚ್ಚು ಆಪ್ಯಾಯಮಾನವೆನಿಸಿತ್ತು. ಬಿ.ಜಿ.ಎಲ್. ಸ್ವಾಮಿಯವರು ಅನೇಕ, ಪುಸ್ತಕಗಳನ್ನು ರಚಿಸಿದ್ದಾರೆ. ಎಲ್ಲರ ಮನಸ್ಸಿನಲ್ಲೂ ಮೊದಲು ಸುಳಿಯುವುದು ‘ಹಸುರು ಹೊನ್ನು’, ‘ಕಾಲೇಜು ರಂಗ’, ‘ತಮಿಳು ತಲೆಗಳ ನಡುವೆ’ ಮುಂತಾದವು. ಇದಲ್ಲದೆ ಇನ್ನೂ ಅನೇಕ ಪುಸ್ತಕಗಳು ಪಟ್ಟಿಯಲ್ಲಿ ಸೇರುತ್ತವೆ. ಕಾಲೇಜು ರಂಗ ಪ್ರಾಧ್ಯಾಪಕನ ಪೀಠದಲ್ಲಿ, ಪಂಚಕಲಶಗೋಪುರ, ಅಮೆರಿಕದಲ್ಲಿ ನಾನು, ದೌರ್ಗಂಧಿಕಾಪಹರಣ, ಫಲಶ್ರುತಿ, ಸಾಕ್ಷಾತ್ಕಾರದ ದಾರಿಯಲ್ಲಿ, ಬೃಹದಾರಣ್ಯಕ, ಜ್ಞಾನರಥ, ಮೀನಾಕ್ಷಿಯ ಸೌಗಂಧ. ‘ಮೈಸೂರು ಡೈರಿ’ ಯಲ್ಲಿ ತಮ್ಮ ಮೈಸೂರು ವಾಸ ಮತ್ತು ಅನುಭವಗಳನ್ನು ದಾಖಲಿಸಿದ್ದಾರೆ. ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಒಂದು ತಿಳಿಹಾಸ್ಯ ಭರಿತ, ನಾವು ದಿನವೂ ಉಪಯೋಗಿಸುವ, ಆ ದೇಶದಿಂದ ಹಲವು ಕಾಯಿಪಲ್ಲೆಗಳು ಬಂದಿವೆ ಎಂದು ತಿಳಿಸುವ ಪುಸ್ತಕ. ಮೆಣಸಿನಕಾಯಿ, ಈರುಳ್ಳಿ ನಮ್ಮ ದೇಶದ್ದು ಅಲ್ಲ! ‘ಸಸ್ಯ ಪುರಾಣದಲ್ಲಿ’ ಪುರಾಣಗಳಲ್ಲಿ ಬರುವ ಗಿಡಮರಗಳ ಬಣ್ಣನೆಯಿದೆ. ‘ಹರಿದಿಹೆ ಬಾಳೌ ಕಾವೇರಿ’ ಎನ್ನುವ ತಮಿಳಿನ ಪುಸ್ತಕವನ್ನು ಕನ್ನಡದಲ್ಲಿ ನೀಡಿದ್ದಾರೆ ಸ್ವಾಮಿಯವರು. ಕಾವೇರಿಯ ಉಗಮದಿಂದ, ಅವಳು ಸಮುದ್ರವನ್ನು ಸೇರುವವರೆಗಿನ ವಿವರಣೆಯಿದೆ. ಶಾಸನಗಳನ್ನು ಆಳವಾಗಿ ಅಭ್ಯಾಸ ಮಾಡುತ್ತಿದ್ದುದರ ಫಲವಾಗಿ ಶಾಸನಗಳಲ್ಲಿ ಗಿಡಮರಗಳು ಎನ್ನುವ ಪುಸ್ತಕದ ರಚನೆಯಾಯಿತು. ಇವರ ಪುಸ್ತಕಗಳಲ್ಲಿ ಬರುವ ಚಿತ್ರಗಳೆಲ್ಲಾ ಅವರೇ ರಚಿಸಿದ್ದು. ಚಿತ್ರಕಲೆಯೂ ಅವರಿಗೆ ಒಲಿದಿತ್ತು. ಇನ್ನೂ ಹಲವಾರು ಪುಸ್ತಕಗಳನ್ನು ಬರೆಯುವುದರಲ್ಲಿದ್ದರು. ಕರ್ನಾಟಕದ ಇತಿಹಾಸ ಬರೆಯಲು ವಿಷಯಗಳನ್ನು ನೂರಾರು ಸಂಶೋಧನಾ ಕಾರ್ಡ್‍ಗಳಲ್ಲಿ ಬರೆದಿಟ್ಟಿದ್ದರು. ಆದರೆ ಅದು ಬೆಳಕಿಗೆ ಬರಲು ಅವರೇ ಇಲ್ಲವಾದರು.

ಪ್ರಯೋಗಾಲಯದಲ್ಲಿಯೂ ಅನೇಕ ಚಿತ್ರಗಳು ಮತ್ತು ಹಾಸ್ಯಭರಿತ ಲೇಖನಗಳು ಇದ್ದುದನ್ನು ನೋಡಿದ್ದೇನೆ. ವಿಜ್ಞಾನವನ್ನು ಅಭ್ಯಾಸ ಮಾಡಿದರೆ ಸಾಲದು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುತ್ತಿದ್ದರು ಸ್ವಾಮಿ. ಗಿಡಗಳ ಕಾಂಡ, ಎಲೆ ಮತ್ತು ಇತರ ಭಾಗಗಳ ಸೂಕ್ಷ್ಮದರ್ಶಕದಲ್ಲಿ ಕಾಣುವ ಅಡ್ಡಸೀಳಿಕೆಯ ಚಿತ್ರಗಳನ್ನು ವರ್ಣ ಚಿತ್ರಗಳನ್ನಾಗಿ ಮಾಡುತ್ತಿದ್ದರು. ಇವುಗಳನ್ನು ಬಟ್ಟೆಯ ಮೇಲೆ ಪ್ರಿಂಟ್ ಮಾಡಿ ಕೈ ಚೀಲ ಇತ್ಯಾದಿ ಮಾಡಿದರು. ಇವುಗಳ ಪ್ರದರ್ಶನ ಕೂಡ ಏರ್ಪಾಡಾಗಿತ್ತು.

ಇಂತಹ ಅದ್ಭುತ ಮೇಧಾವಿ ವಿಜ್ಞಾನಿ ಇನ್ನೂ ಹಲವಾರು ವರ್ಷಗಳು ಬದುಕಿದ್ದರೆ ಕನ್ನಡಮ್ಮನ ಮಡಿಲಿಗೆ ಖಂಡಿತವಾಗಿ ಅನೇಕ ರತ್ನದಂತಹ ಪುಸ್ತಕಗಳು ಸೇರ್ಪಡೆಯಾಗುತ್ತಿದ್ದವು. ಆ ಭಾಗ್ಯ ಕನ್ನಡಿಗರಿಗೆ ಇಲ್ಲದೇ ಹೋಯಿತು. ಅವರನ್ನು ಕಂಡು ಮಾತನಾಡಲಿಲ್ಲವೆಂಬ ಕೊರಗು ನನ್ನಲ್ಲಿದೆ.

 ಡಾ. ಎಸ್. ಸುಧಾ

8 Responses

  1. S.sudha says:

    ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಹೇಮಾ ಮಾಲಾ. ನಮ್ಮ ಪುಸ್ತಕ ದಲ್ಲಿ 33 ವಿಜ್ಞಾನಿಗಳ ಬಗ್ಗೆ ಇದೆ.

  2. ಮಹಾಬಲ says:

    ಸೊಗಸಾದ ಮಾಹಿತಿಭರಿತ ಲೇಖನ

  3. ಬಿ ಜಿ ಎಲ್ ಸ್ವಾಮಿಯವರ ಬಗ್ಗೆ ಚೆಂದದ ಲೇಖಪ

  4. ಪದ್ಮಾ ಆನಂದ್ says:

    ಬಿ ಜಿ ಎಲ್ ಸ್ವಾಮಿಯವರ ಕುರಿತಾದ ಮಾಹಿತಿಪೂರ್ಣ ಲೇಖನ ನಿಜಕ್ಕೂ ಸಂಗ್ರಹಯೋಗ್ಯವಾಗಿದೆ.

  5. ನಯನ ಬಜಕೂಡ್ಲು says:

    ಚಂದದ ಲೇಖನ

  6. ಬಿ.ಜಿ.ಎಲ್..ಸ್ವಾಮಿ ಬಗ್ಗೆ ವಿಚಾರಪೂರಿರ ಲೇಖನ.. ಧನ್ಯವಾದಗಳು ಸುಧಾ ಮೇಡಂ ವಿಷಯ ಸಂಗ್ರಹ ಅದನ್ನು ಬರೆಹದಲ್ಲಿ ತಂದಿರುವ ರೀತಿ ಚೇತೋಹಾರಿಯಾಗಿದೆ..

  7. Hema Mala says:

    ಮಾಹಿತಿಯುಕ್ತವಾದ ಚೆಂದದ ಬರಹ.

  8. ಶಂಕರಿ ಶರ್ಮ says:

    ಅದ್ಭುತ ಮೇಧಾವಿ, ವಿಜ್ಞಾನಿ, ವಿಶೇಷ ಹಾಸ್ಯ ಪ್ರವೃತ್ತಿಯ ಡಾ.ಬಿ.ಜಿಎಲ್ ಸ್ವಾಮಿ ಅವರ ಕುರಿತ ಲೇಖನ ಬಹಳ ಚೆನ್ನಾಗಿದೆ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: