ದಿವ್ಯ ಕವಿತೆ -ಕಿರು ಚಿಂತನೆ

Share Button

ಪು.ತಿ.ನರಸಿಂಹಾಚಾರ್ (ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್) ಪುತಿನ ಎಂದೇ ಪ್ರಸಿದ್ಧಿ ಪಡೆದವರು. ದಾರ್ಶನಿಕ ಕವಿ, ಮೇರು ಕವಿ, ಸಂತ ಕವಿ, ಶ್ರೇಷ್ಠ ಕವಿ, ಚಿಂತನಶೀಲ ಕವಿ, ಜಿಜ್ಞಾಸೆಯ ಕವಿ ಎಂದೆಲ್ಲಾ ಹೆಸರುಗಳಿಸಿದ್ದ ಪುತಿನ, ಹೊಸಗನ್ನಡದ ರತ್ನತ್ರಯರಲ್ಲಿ ಒಬ್ಬರು. ಕನ್ನಡ ಭಾಷೆಯ ಅತ್ಯದ್ಭುತ ಶಕ್ತಿಯನ್ನು ಅದರ ಎಲ್ಲಾ ಸಾಧ್ಯತೆಗಳನ್ನು ತಮ್ಮ ಕೃತಿಗಳಲ್ಲಿ, ಕಾವ್ಯಗಳಲ್ಲಿ ಒಡಮೂಡಿಸಿದವರು ಪುತಿನ.

ಮೇಲುಕೋಟೆಯಲ್ಲಿ 1905 ಮಾರ್ಚ್ 17ರಂದು ಜನಿಸಿದ ಪುತಿನ ಅಲ್ಲಿನ ಆಧ್ಯಾತ್ಮಿಕ ಪರಿಸರದಿಂದ ಬಹು ಪ್ರಭಾವಿತರಾದರು. ಪ್ರಕೃತಿ ಮತ್ತು ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಅವರ ಕಾವ್ಯಗಳ ಮೂಲಭೂತ ಅಂಶವಾಗಿದೆ. ಮಾತೃಭಾಷೆ ತಮಿಳಾದರೂ ಮೈಸೂರಿನಲ್ಲಿ ಓದುತ್ತಿದ್ದಾಗಲೇ ಆಂಗ್ಲ ಭಾಷೆ ಮತ್ತು ಕನ್ನಡ ಭಾಷೆಯ ಮೇಲೆ ಪ್ರಭುತ್ವ ಸ್ಥಾಪಿಸಿದರು.

ಹಣತೆ, ಮಾಂದಳಿರು, ಅಹಲ್ಯೆ, ಶಬರಿ ಮುಂತಾದ 13 ಕವನ ಸಂಕಲನಗಳನ್ನೂ, ಶ್ರೀಹರಿ ಚರಿತೆ ಎಂಬ ಮಹಾ ಕಾವ್ಯವನ್ನು, ಗೋಕುಲ ನಿರ್ಗಮನ ಹಂಸ ದಮಯಂತಿ ಮುಂತಾದ 13 ಗೀತ ನಾಟಕಗಳನ್ನು , ಎರಡು ಸಣ್ಣ ಕಥಾ ಸಂಕಲನಗಳನ್ನು, ಏಳು ಗದ್ಯ ಚಿತ್ರಗಳನ್ನು, ಏಳು ಅನುವಾದಗಳನ್ನು, ಮೂರು ಕಾವ್ಯಮೀಮಾಂಸಾಕೃತಿಗಳನ್ನು ರಚಿಸಿ, ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು ನಮ್ಮ ಪುತಿನ.

ಪಂಪಪ್ರಶಸ್ತಿ, ಪದ್ಮಶ್ರೀಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ ಪ್ರಶಸ್ತಿಯೇ ಮೊದಲಾದ ಹತ್ತು ಹಲವು ಪ್ರಶಸ್ತಿ- ಪುರಸ್ಕಾರಗಳಿಗೆ ಪುತಿನ ಪಾತ್ರರಾಗಿದ್ದಾರೆ. 93 ವರ್ಷಗಳ ತುಂಬು ಜೀವನ ನಡೆಸಿದ ಈ ವರಕವಿ ಕನ್ನಡಕ್ಕೆ ಸಲ್ಲಿಸಿದ ಸೇವೆ ಅನುಪಮವಾದದ್ದು.ಇಂತಹ ಮಹಾನ್ ಚೇತನದ ಒಂದು ಕವಿತೆ ನನ್ನ ಇಂದಿನ ಓದಿನ ವಸ್ತು. ಕವಿತೆ ಓದಿದಾಗ ನನಗನಿಸಿದ ಕೆಲವು ಅಂಶಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಕವಿತೆಯ ಹೆಸರು ‘ಲಘುವಾಗೆಲೆ ಮನ‘ .ಮೊದಲು ಪೂರ್ಣ ಕವಿತೆಯನ್ನು ಒಮ್ಮೆ ನೋಡೋಣ:

ಲಘುವಾಗೆಲೆ ಮನ
ಗೆಲವಾಗೆಲೆ ಮನ
ಹಾರು ನನ್ನಬಿಟ್ಟು
ಹಾರಿ ಹರಿಯ ಮುಟ್ಟು ||
ನನಗಂಟಲು ನೀನಾಗುವೆ ಕಷ್ಮಲ
ನನ್ನತೊರೆಯೆ ನೀನಿರ್ಮಲ ನಿಷ್ಕಳ
ಹರಿಯೊ ನನ್ನಬಿಟ್ಟು
ಮುಂಬರಿದು ಹರಿಯ ಮುಟ್ಟು ||

ನೀಲದಾಗಸದ ಹರಹೊಳು ಹಾರುತ
ಅಂಚೆಯಂತೆ ಮುಗಿಲಂಚನು ಸೇರುತ
ಕ್ಷೀರಾಬ್ಧಿಶಾಯಿ ಶಾಮಸುಂದರನ
ಉಸಿರೊಳಾಡು ನೀ ಅವನುಸಿರಾಗುತ ||

ಬೆಳಕಿಗೊಲಿದು ಬಿರಿದಲರಿನೆಲರು ಬರೆ
ಹೋಗು ಸಂಗಡಲೆ ನೀಮನವೇ
ಮುಗ್ಧರುಲಿವ ನಗೆಮಾತುಗಳಾಲಿಸಿ
ನಂದಗೋಕುಲವ ನೆನೆ ಮನವೇ ||

ಗರಿಮುದುರಿಸುವಳಲಂಟನು ಕರಗಿಸೆ,
ಶ್ಯಾಮನ ಮೈ ಬಣ್ಣದಿ ನೆನೆಯೋ
ಮಿಂದೇಳುತಲಾ ಪುಣ್ಯ ಕಾಳಿಮದಿ
ಚೆಲುಗಂಗಳ ತೇಜದಿ ಬೆರೆಯೋ ||

ಪ್ರಸ್ತುತ ಕವನದಲ್ಲಿ ಪುತಿನ ರವರು ತಮ್ಮ ಮನಸ್ಸನ್ನು ಸುಶಿಕ್ಷಿತಗೊಳಿಸುವ, ತರಬೇತು ಮಾಡುವ, ನಿರ್ದೇಶಸುವ ಪ್ರಯತ್ನದಲ್ಲಿ ಇದ್ದಾರೆ.

ಮೇರು ಕವಿ ಪು.ತಿ.ನರಸಿಂಹಾಚಾರ್

ಲಘುವಾಗೆಲೆ ಮನ, ಗೆಲವಾಗೆಲೆ ಮನ ಎನ್ನುವಲ್ಲಿ ಕವಿ, ಎತ್ತರಕ್ಕೆ ಹಾರುವ ಮುನ್ನ ಮನಸ್ಸು ಲಘುವಾಗಬೇಕು; ಹಗುರಾಗಬೇಕು ಎನ್ನುತ್ತಾರೆ. ಹಗುರಾಗದೆ ಭಾರವಾಗಿದ್ದರೆ ಅದೆಲ್ಲಿ ಹಾರೀತು!
ಆದ್ದರಿಂದ ಹೇ ಮನವೇ ಮೊದಲು ಹಗುರಾಗು ಎನ್ನುವ ಕವಿ, ಮುಂದುವರೆದು ಗೆಲವಾಗು ಎಂದು ಹೇಳುತ್ತಾರೆ. ಇಲ್ಲಿ ಗೆಲ ಎಂದರೆ ಗೆಲುವು ಎಂದಲ್ಲ. ಗೆಲ ಎಂದರೆ ಉತ್ಸಾಹಿತವಾಗು, ಭರವಸೆ ಹೊಂದು, ಉಲ್ಲಾಸ ಹೊಂದು ಎಂದರ್ಥ. ಗೆಲವಾದರೆ ಮಾತ್ರ ಹಾರಲು ಸಾಧ್ಯ. ಉತ್ಸಾಹಿತನಾದರೆ, ಭರವಸೆ ಹೊಂದಿದರೆ, ಉಲ್ಲಾಸ ಹೊಂದಿದರೆ ಮಾತ್ರ ಹಾರಲು ಸಾಧ್ಯ. ಮನಸ್ಸೆಂಬ ಈ ಪಕ್ಷಿ ಹಾರಲು ಹಗುರತೆಯೂ ಬೇಕು; ಉತ್ಸಾಹ ಉಲ್ಲಾಸವೂ ಬೇಕು.

ಹಾರು ನನ್ನ ಬಿಟ್ಟು, ಹಾರಿ ಹರಿಯ ಮುಟ್ಟು ಎನ್ನುವಲ್ಲಿ ಕವಿ ನನ್ನನ್ನು ಬಿಟ್ಟು ಅಂದರೆ ನನ್ನತನವನ್ನು ಕಳಚಿ,ಅರ್ಥಾತ್ ಅಹಂನ್ನು ಕಳಚಿ ಹಾರು ಮನವೇ ಎನ್ನುತ್ತಾ, ಹಾರಿದ ನಂತರ ಮುಂದೇನು ಎನ್ನುವ ಪ್ರಶ್ನೆಗೆ ಹಾರಿ ಹರಿಯ ಮುಟ್ಟು ಎನ್ನುತ್ತಾರೆ. ಇಲ್ಲಿ ಕವಿ ಶಬ್ದಾಲಂಕಾರವನ್ನು ಲ, ಗ(ಘ), ರ ಅಕ್ಷರಗಳ ಮೂಲಕ ತಂದಿರುವ ರೀತಿ ಆಕರ್ಷಕವೆನಿಸುತ್ತದೆ.

ನನಗಂಟಲು ನೀನಾಗುವೆ ಕಶ್ಮಲ. ನನ್ನ ತೊರೆಯೇ ನೀ ನಿರ್ಮಲ ನಿಷ್ಕಳ ಎನ್ನುವಲ್ಲಿ ಕವಿ ಈ ಲೋಕಕ್ಕೆ, ಈ ಭವಕ್ಕೆ ಅಂಟಿಕೊಂಡಿದ್ದರೆ ಹೇ ಮನವೇ, ನೀನು ಕೊಳೆಯಾಗಿಬಿಡುವೆ ಎನ್ನುತ್ತಾ, ಈ ಭವವನ್ನು ಬಿಟ್ಟರೆ, ಈ ಲೌಕಿಕವನ್ನು ತೊರೆದರೆ ನೀನು ನಿರ್ಮಲವೂ. ದೋಷರಹಿತವೂ ಆಗುವೆ ಎನ್ನುತ್ತಾರೆ. ಇಲ್ಲಿ ಕವಿ ಮತ್ತೊಮ್ಮೆ ನ ಕಾರವನ್ನು ವಿಶಿಷ್ಟವಾಗಿ ಬಳಸುವ ಮೂಲಕ ಶಬ್ದಾಲಂಕಾರವನ್ನು ತಂದಿರುವ ಪರಿ ಸೋಜಿಗವೆನಿಸುತ್ತದೆ.
ಮುಂದುವರೆದು,

ಹರಿಯೋ ನನ್ನ ಬಿಟ್ಟು ಮುಂಬರಿದು ಹರಿಯ ಮುಟ್ಟು ಎನ್ನುವಲ್ಲಿ ಕವಿ, ಹರಿ ಎಂಬ ಪದವನ್ನು ಬಳಕೆ ಮಾಡಿದ ರೀತಿಯೇ ವೈಶಿಷ್ಟ್ಯ ಪೂರ್ಣವೆನಿಸುತ್ತದೆ. ಇಲ್ಲಿ ಕವಿವರ್ಯರು ಹೇ ಮನವೇ – ನಾನು , ನಾನೆಂಬ ಅಹಂಕಾರವನ್ನು ನೀನು ತ್ಯಜಿಸುವುದರ ಮೂಲಕ ನೀನಾಗಿಯೇ ಮುಂದೆ ಸಾಗಿ ಹರಿಯನ್ನು ಮುಟ್ಟಬೇಕು; ಹರಿಯನ್ನು ಸೇರಬೇಕು ಎನ್ನುತ್ತಾರೆ. ಇಲ್ಲಿ ಹರಿ ಎಂಬ ಪದವನ್ನು ಶ್ಲೇಷೆಯಾಗಿ ಬಳಸಿ ಸಹೃದಯರಲ್ಲಿ ಒಂದು ವಿಶೇಷ ಅನುಭೂತಿಯನ್ನು ಮೂಡಿಸುತ್ತಾರೆ.

ನೀಲದಾಗಸದ ಹರಹೊಳು ಹಾರುತ ಅಂಚೆಯಂತೆ ಮುಗಿಲಂಚನು ಸೇರುತ ಎನ್ನುವಲ್ಲಿ, ಕವಿ ಹಾರಲು ಸಿದ್ಧವಾಗಿರುವ ಮನಸ್ಸಿಗೆ ಹೇ ಮನವೇ ನೀನು ಹರಿಯನ್ನು ಸೇರಲು ಸಾಗಬೇಕಾದ ಹಾದಿ ಬಹಳ ದೂರ ಮತ್ತು ಅತ್ಯಂತ ವಿಶಾಲವಾದದ್ದು ಅಂದರೆ ಅದು ನೀಲಾಕಾಶದಷ್ಟು ವಿಸ್ತಾರವಾದದ್ದು. ಆದ್ದರಿಂದ ನೀನು ಹಂಸದ ಹಾಗೆ ಮುಗಿಲಿನ ಅಂಚನ್ನು ದಾಟಿ ದಾಟಿ ಮುನ್ನುಗ್ಗಬೇಕು ಎನ್ನುತ್ತಾರೆ. ಇಲ್ಲಿ ಹಂಸವೊಂದು ತನ್ನ ಗುರಿಯನ್ನು ಸೇರಲು ಉತ್ಸಾಹದಿಂದ ಹಾರುವಂತೆ ಮನಸ್ಸೆಂಬ ಹಂಸವೂ ಸಹ ಹರಿಯನ್ನೇ ಗುರಿಯಾಗಿಸಿಕೊಂಡು ಹಾರಬೇಕು ಎನ್ನುವ ಅರ್ಥ ಇಲ್ಲಿ ಸ್ಫುರಿಸುತ್ತದೆ. ಈ ಸಾಲಿನಲ್ಲಿ ಕವಿ ಹ, ಚ, ಕಾರಗಳನ್ನು ಅತ್ಯಂತ ವೈಶಿಷ್ಯಪೂರ್ಣವಾಗಿ ಬಳಸುತ್ತಾರೆ.

ಕ್ಷೀರಾಬ್ಧಿಶಾಯಿ ಶ್ಯಾಮ ಸುಂದರನ ಉಸಿರುಳಾಡು ನೀನವನುಸಿರಾಗುತ ಎನ್ನುವಲ್ಲಿ ಕ್ಷೀರಸಾಗರದಲ್ಲಿ ಶ್ರೀ ಹರಿಯು ಆನಂದದಿಂದ ಪವಡಿಸಿದ್ದಾನೆ. ಆ ಶ್ಯಾಮ ಸುಂದರನ ಉಸಿರಿನಲ್ಲಿ ನೀನು ಉಸಿರಾಗಿ ಬೆರೆತು ಹೋಗುವ ಮೂಲಕ ಅವನಲ್ಲಿ ಐಕ್ಯವಾಗಬೇಕು ಎಂದು ಆಶಿಸುತ್ತಾರೆ. ಇಲ್ಲಿಯೂ ಕವಿ ಶ ಕಾರ ಷ ಕಾರ ಹಾಗೂ ಸ ಕಾರವನ್ನು ತಂದಿರುವ ರೀತಿ ಬಹು ನೂತನವೆನಿಸುತ್ತದೆ.

ಮುಂದುವರಿದು ಕವಿ, ಬೆಳಕಿಗೊಳಿದು ಬಿರಿದಲರಿನೆಲರು ಬರೆ ಹೋಗು ಸಂಗಡಲೇ ನೀ ಮನವೇ ಎನ್ನುತ್ತಾರೆ. ಬೆಳಕಿಗೆ ಅರಳುವ ಹೂವಿನ ಸುಗಂಧದ ಜೊತೆ ನೀನೂ ಸೇರಿ, ಒಂದಾಗಿ ಸಾಗುತ್ತಿರಬೇಕು ಎನ್ನುತ್ತಾರೆ. ಬೆಳಕು ಇಲ್ಲಿ ಪರಬ್ರಹ್ಮ ಸ್ವರೂಪ. ಬೆಳಕಿಗೆ ಒಲಿಯುವುದು ಎಂದರೆ ಆ ಪರಬ್ರಹ್ಮ ವಸ್ತುವಿಗೆ ಶರಣಾಗುವುದು. ಆ ರೀತಿಯಲ್ಲಿ ಅವನಿಗೆ ಒಲಿದ ಮತ್ತೊಂದು ಮನಸ್ಸು – ಗುರು ಎಂದೂ ಸಹ ಭಾವಿಸಬಹುದು. ಅಂತಹ ಗುರುವಿನೊಂದಿಗೆ ಕಲೆತು ಅವನಲ್ಲಿ ಬೆರೆಯಬೇಕು; ಗುರುವಿನೊಂದಿಗೆ, ಅವರ ಭಕ್ತಿಯೊಂದಿಗೆ ಸಾಗಬೇಕು ಎನ್ನುತ್ತಾರೆ ವರಕವಿ ಪುತಿನ.

ಮುಗ್ಧರುಲಿವ ನಗೆ ಮಾತುಗಳಾಲಿಸಿ ನಂದಗೋಕುಲವ ನೆನೆ ಮನವೇ ಎನ್ನುವಲ್ಲಿ ಮುಗ್ಧತೆಯೇ ದೇವರು; ಮುಗ್ಧತೆ ಇರುವಲ್ಲಿ ದೇವರಿರುತ್ತಾನೆ. ಆದ್ದರಿಂದಲೇ ಮಕ್ಕಳನ್ನು ನಾವು ದೇವರೆಂದು ಸಂಭೋದಿಸುತ್ತೇವೆ. ಹಾಗೆಯೇ ನಗೆಯಲ್ಲಿಯೂ, ಸಂತೋಷದಲ್ಲಿಯೂ ಭಗವಂತನ ಇರುವಿಕೆಯನ್ನು ನಾವು ಗುರುತಿಸಬಹುದು. ಅಂತೆಯೇ ಮುಗ್ಧತೆಯ ಇರುವಿಕೆ, ಸಂತೋಷದ ಇರುವಿಕೆಯನ್ನು ಎಲ್ಲಿ ಗಮನಿಸುವಿಯೋ, ಅಲ್ಲಿ ನೀನು, ಶ್ರೀ ಕೃಷ್ಣನು ತನ್ನ ಬಾಲ ಲೀಲೆಗಳನ್ನು ವಿಸ್ತಾರವಾಗಿ ತೋರಿಸಿದ ನಂದಗೋಕುಲವನ್ನು ನೆನೆಯಬೇಕು ಆ ನೆನೆಪಿನಲ್ಲಿಯೇ ನೀನು ಒಂದಾಗಬೇಕು; ಬೆರೆಯಬೇಕು ಎನ್ನುತ್ತಾರೆ. ಇಲ್ಲಿ ಕವಿ, ಬ ಕಾರ, ರ ಕಾರ, ಮ ಕಾರ ಗಳನ್ನು ಅತ್ಯಂತ ಅಪರೂಪ ರೀತಿಯಲ್ಲಿ ಕಟ್ಟಿಕೊಡುತ್ತಾರೆ.

ಗರಿಮುದುರಿಸುವಳಲಂಟನು ಕರಗಿಸೆ, ಶ್ಯಾಮನ ಮೈ ಬಣ್ಣದಿ ನೆನೆಯೋ ಎನ್ನುವಲ್ಲಿ ಕವಿ, ಭವಸಾಗರದಲ್ಲಿ ಅಳಲು, ದುಃಖ ಎಂಬುದು ಸರ್ವೇಸಾಮಾನ್ಯ. ಈ ದುಃಖವೆಂಬ ಅಂಟು ನಿನ್ನ ರೆಕ್ಕೆಗಳಿಗೆ ಅಂಟಿಕೊಂಡಾಗ ನಿನಗೆ ಹಾರಲು ಸಾಧ್ಯವಾಗುವುದಿಲ್ಲ. ಆ ಅಂಟು ಗರಿಯನ್ನು ಮುದುರಿಸಿಬಿಡುತ್ತದೆ. ಹಾರಲು ಸಾಧ್ಯವೇ ಇಲ್ಲವೆಂಬ ಭಾವನೆಯನ್ನು ಮೂಡಿಸಿಬಿಡುತ್ತದೆ. ಆದ್ದರಿಂದ ಹರಿಯಲ್ಲಿಗೆ ಹಾರುವ ಮೊದಲು ಹೇ ಮನವೇ, ನಿನಗೆ ಅಂಟಿರುವ ಈ ದುಃಖವನ್ನು ಮೊದಲು ಕರಗಿಸಿಕೊಳ್ಳಬೇಕು; ತೊಡೆದು ಹಾಕಬೇಕು; ಅದಕ್ಕೆ ಶ್ಯಾಮನ ಕೃಪೆ ಬೇಕು. ಆತನ ಮಹಿಮೆಯ ವರ್ಣದಲ್ಲಿ ನಿನ್ನ ಅಳಲನ್ನು. ಅಂಟನ್ನು ನೆನೆಸಿಕೊಳ್ಳುವುದರ ಮೂಲಕ ಅರ್ಥಾತ್ ತೊಳೆದುಕೊಳ್ಳುವುದರ ಮೂಲಕ ಕರಗಿಸಿಕೊಳ್ಳಬೇಕು ಎನ್ನುತ್ತಾರೆ. ಇಲ್ಲಿ ಕವಿ ನೆನೆ ಪದವನ್ನು ಶ್ಲೇಷೆಯಾಗಿ ಬಳಸಿರುವ ರೀತಿ ಅಪರೂಪವೆನಿಸುತ್ತದೆ. ಅಲ್ಲದೆ ಮತ್ತೊಮ್ಮೆ ರ ಕಾರ ಮತ್ತು ನ ಕಾರವನ್ನು ವಿಶೇಷವಾಗಿ ಬಳಸುತ್ತಾರೆ.

ಮಿಂದೇಳುತಲಾ ಪುಣ್ಯ ಕಾಳಿಮದಿ ಚೆಲುಗಂಗಳ ತೇಜದಿ ಬೆರೆಯೋ ಎನ್ನುವಲ್ಲಿ ಪುತಿನ ರವರು ಹೇ ಮನವೇ ನಿನ್ನ ದುಃಖ ಮತ್ತಷ್ಟು ಗಾಢವಾಗಿದ್ದರೆ, ಆ ದುಃಖವನ್ನೆಲ್ಲಾ ದೂರ ಮಾಡುವ ಆ ಪುಣ್ಯಕರವಾದ ಕಾಳಿಂದಿ ನದಿ ಅರ್ಥಾತ್ ಯಮುನಾ ನದಿಯಲ್ಲಿ ಸ್ನಾನ ಮಾಡಿ ಪವಿತ್ರ ತಮನಾಗುವ ಮೂಲಕ, ಆ ಚೆಲುವಿನ ಕಣ್ಗಳನ್ನು ಹೊಂದಿ ಎಲ್ಲರನ್ನೂ ಸದಾ ತನ್ನೆಡೆಗೆ ಸೆಳೆಯುವ, ಆಕರ್ಷಿಸುವ ಶ್ರೀ ಕೃಷ್ಣನನ್ನು ಬೆರೆತು ಹೋಗು ಎನ್ನುತ್ತಾರೆ. ಯಮುನೆ ಶ್ರೀ ಕೃಷ್ಣನ ಸತಿ ಎಂಬ ಪುರಾಣದ ಆಂಶವನ್ನು ನಾವಿಲ್ಲಿ ಗಮನಿಸಬಹುದು.

ಕವಿ ಇಡಿಯ ಕವನದಲ್ಲಿ ಈ ಜೀವನ ಸಾರ್ಥಕವಾಗುವ ಬಗೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಕಟ್ಟಿಕೊಡುತ್ತಾರೆ. ಕವನದ ತುಂಬೆಲ್ಲಾ ಪುತಿನರವರ ಪದ ಪ್ರಯೋಗ ಅತ್ಯಂತ ವಿನೂತನವೂ ಆಕರ್ಷಕವೂ ಆಗಿ ಮೂಡಿ ಬಂದಿದೆ ಎನ್ನುವುದು ಅತ್ಯಂತ ಗಮನಾರ್ಹ.

ವೆಂಕಟಾಚಲ.ಜಿ, ಮೈಸೂರು

7 Responses

  1. ಪದ್ಮಾ ಆನಂದ್ says:

    ಮಹಾನ್ ಕವಿ ಪುತಿನ ಅವರ ಕುರಿತಾದ ಸಂಕ್ಷಿಪ್ತ ಮಾಹಿತಿ, ಅವರ ಕವಿತೆ, ಅದರ ಭಾವ ಮತ್ತು ಪದಗಳ ವಿಶ್ಲೇಷಣೆ ಮತ್ತು ವಿವರಣೆ ಎಲ್ಲವೂ ಸೊಗಸಾಗಿದೆ.

  2. ಪು.ತಿ.ನ.ಅವರ ದಿವ್ಯ ಕವಿತೆಯ ವಿಶ್ಲೇಷಣೆ ಅತ್ಯಂತ ಸೊಗಸಾಗಿ ಪಡಿಮೂಡಿದೆ… ಅಭಿನಂದನೆಗಳು… ಸಾರ್

    • ವೆಂಕಟಾಚಲ says:

      ಧನ್ಯವಾದಗಳು ಪದ್ಮಾ ಮೇಡಮ್… ತಮ್ಮ ಹಾರೈಕೆ ಸದಾ ಇರಲಿ

      Reply

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. ವೆಂಕಟಾಚಲ says:

    ಧನ್ಯವಾದಗಳು,,

  5. Hema Mala says:

    ಮೇರುಕವಿಯ ದಿವ್ಯವಾದ ಕವಿತೆಯ ಬಗ್ಗೆ ವಿದ್ವತ್ಪೂರ್ಣವಾದ ಬರಹ.ಧನ್ಯವಾದಗಳು

  6. ಶಂಕರಿ ಶರ್ಮ says:

    ಮೇರುಕವಿ ಪು. ತಿ. ನ ಅವರ ದಿವ್ಯವಾದ ಮೇರು ಕವಿತೆಯ ಹಾಡು ‘ಲಘುವಾಗೆಲೆ ಮನ…’ ನನ್ನ ಪ್ರಿಯವಾದ ಹಾಡುಗಳಲ್ಲೊಂದಾಗಿದೆ. ಇದರ ವಿಮರ್ಶಾತ್ಮಕ ಲೇಖನದಲ್ಲಿ ಅದರ ಆಳರ್ಥವನ್ನು ಇನ್ನಷ್ಟು ವಿಸ್ತೃತರೂಪದಲ್ಲಿ ನೀಡಲಾಗಿದೆ… ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: