ಶ್ರೀ ಗಣೇಶರ ಕಲಾಕೌತುಕ !
ಕರ್ನಾಟಕವನ್ನು ಒಳಗೊಂಡಂತೆ, ಭಾರತದಾದ್ಯಂತ ಹೆಸರಾದ ಬಹುಶ್ರುತ ವಿದ್ವಾಂಸರೂ ಶತಾವಧಾನಿಗಳೂ ಆದ ಡಾ. ಆರ್ ಗಣೇಶ್ ಅವರು ಬಹುಭಾಷಾವಿದ್ವಾಂಸರು ಕೂಡ. ಅವಧಾನ ಕಲೆಯ ಪುನರುಜ್ಜೀವನದ ಸಾರ್ಥಕ್ಯ ಅವರದು. ಈವರೆಗೂ ಅರುವತ್ತಕ್ಕೂ ಹೆಚ್ಚಿನ ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ಕೊಟ್ಟವರು. ರಂಜನ ಮತ್ತು ನಿರಂಜನ ಎರಡೂ ಮಾರ್ಗಗಳಲ್ಲೂ ಅವಧಾನವನ್ನು ಪರಿಚಯಿಸಿದ ಕೀರ್ತಿ ಇವರದು. ಹಲವು ಶಾಸ್ತ್ರ ಮತ್ತು ಕಲೆಗಳನ್ನೊಳಗೊಂಡ ಪ್ರಗಲ್ಭ ಬುದ್ಧಿ ಭಾವಗಳ ವಿದ್ಯುದಾಲಿಂಗನವೇ ಇವರ ಪ್ರತಿಭೆಯ ಮಹಾಜ್ಯೋತಿ. ಸಾವಿರಾರು ಅಷ್ಟಾವಧಾನಗಳನ್ನೂ ನೂರಾರು ಶತಾವಧಾನಗಳನ್ನೂ ನಡೆಸಿಕೊಟ್ಟು ಪಂಡಿತ ಪಾಮರರಿಬ್ಬರನ್ನೂ ಪ್ರಬುದ್ಧಗೊಳಿಸಿದ ಕೀರ್ತಿ ಶ್ರೀಯುತರದು. ಇವರ ಪ್ರತಿಭೆಯ ಗೌರೀಶಂಕರ, ಭಾಷಾಶುದ್ಧಿಯ ಅಚ್ಛೋದ ಸರೋವರ, ಹಲವು ಭಾಷಾಸಾಹಿತ್ಯಗಳ ಮೇಲಿರುವ ಅದ್ಭುತ ಹಿಡಿತ ಮತ್ತು ತುಡಿತಗಳೆಂಬ ಸಮುದ್ರೋಲ್ಲಂಘನ ಅಪಾರ. ಇಂಥವರು ನಮ್ಮ ಭಾರತೀಯ ಕಲಾ ಸಾಹಿತ್ಯ ಪರಂಪರೆಯ ಅಮೋಘ ಪ್ರತಿನಿಧಿ. ನಮ್ಮ ದೇಶದ ಹೆಮ್ಮೆ ಮತ್ತು ಅಭಿಮಾನ. ಇವರನ್ನು ಕುರಿತು ಬರೆಯುವುದಿರಲಿ, ಮಾತಾಡಲೂ ಒಂದು ಬಗೆಯ ಭಯಭಕ್ತಿ! ನಾನಿವರ ನಿತ್ಯಾಭಿಮಾನಿ. ಹೀಗೇ ಇರಲು, ನಮ್ಮ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಶ್ರೀ ಸುರೇಶ್ ಅವರು ಕೊರಿಯರ್ ಅಂಚೆಯ ಮೂಲಕ ಆರ್ ಗಣೇಶರ ‘ಕಲಾಕೌತುಕ’ ವೆಂಬ ಅನನ್ಯ ಕೃತಿಯನ್ನು ತರಿಸಿಕೊಂಡು ನನ್ನ ಕೈಗಿತ್ತಾಗ ನಾನು ಸಖೇದಾಶ್ಚರ್ಯಗೊಂಡೆ. ಅವರ ಪಿಹೆಚ್ ಡಿ ಸಂಶೋಧನಾಧ್ಯಯನಕ್ಕೇನಾದರೂ ಇದು ಪರಾಮರ್ಶನವೇನೋ ಎಂದುಕೊಂಡು ಕೇಳಿಯೂ ಬಿಟ್ಟೆ. ‘ಹಾಗೇನಿಲ್ಲ, ಇವರ ಕೃತಿಗಳನ್ನು ಓದೋಣವೆಂದು ತರಿಸಿಕೊಂಡೆ’ ಎಂದು ಹೇಳುವುದರ ಮೂಲಕ ನನ್ನ ಸೋಜಿಗಕ್ಕೆ ಇನ್ನಷ್ಟು ಕಾರಣರಾದರು. ಕಲೆ ಮತ್ತು ವಿನೋದಗಳನ್ನು ಕುರಿತ ವಿವೇಚನೆಗಳನ್ನೊಳಗೊಂಡ ಗಣೇಶರ ‘ಕಲಾಕೌತುಕ’ ಕೃತಿಯನ್ನು ನಾನು ಗಮನಿಸಿರಲಿಲ್ಲ. ‘ನೀವೇ ಮೊದಲು ಓದಿ ಕೊಡಿ, ಆನಂತರ ಓದುತ್ತೇನೆ’ ಎಂದು ಕೈಗಿತ್ತಾಗ ಸ್ವರ್ಗ ಸನಿಹವಾಯಿತು. ಹಾಗಾಗಿ ಈ ಬರೆಹ ಜನಿಸಿತು. ಇದಕಾಗಿ ಆತ್ಮೀಯ ಮಿತ್ರರಾದ ಶ್ರೀ ಸಿ ಸುರೇಶ್ ಅವರಿಗೆ ನನ್ನ ಅನಂತ ಧನ್ಯವಾದಗಳು.
ಶತಾವಧಾನಿ ಆರ್ ಗಣೇಶ್ ಅವರದು ಬಹುಮುಖ ಸಾಧನೆ. ಅರುವತ್ತಕ್ಕೂ ಹೆಚ್ಚಿನ ಕೃತಿರತ್ನಗಳ, ಮುನ್ನೂರಕ್ಕೂ ಹೆಚ್ಚಿನ ಸಂಶೋಧನ ಲೇಖನಗಳ ಅಧಿಕೃತ ವಾರಸುದಾರರು. ಸಾವಿರಕ್ಕೂ ಮಿಗಿಲಾದ ಅಂಕಣ ಬರೆಹಗಳು. ಕನ್ನಡ, ಸಂಸ್ಕೃತ ಮತ್ತು ತೆಲುಗು ಭಾಷೆಗಳಲ್ಲಿ ಅಷ್ಟಾವಧಾನ, ದಶಾವಧಾನ, ಶತಾವಧಾನ ಮತ್ತು ಸಂಪೂರ್ಣಾವಧಾನ ಕಾರ್ಯಕ್ರಮಗಳು ಸಾವಿರದೈನೂರು ದಾಟಿವೆ. ಇವರು ಸತತವಾಗಿ ಇಪ್ಪತ್ನಾಲ್ಕು ಗಂಟೆಗಳ ಅವಿರತ ಆಶುಕವಿತೆಗಳನ್ನು ಕಟ್ಟಿರುವುದೊಂದು ವಿಶ್ವದಾಖಲೆಯಾಗಿದೆ ಎಂದರೆ ಅಚ್ಚರಿಯಲ್ಲವೇ! ಪ್ರಾಚೀನ ಮತ್ತು ಅರ್ವಾಚೀನ ಎರಡೂ ಬಗೆಯ ಎಲ್ಲ ಸಾಹಿತ್ಯಾದಿ ಲಲಿತಕಲೆಗಳನ್ನು ಆಮೂಲಾಗ್ರ ಅಧ್ಯಯನ ಮಾಡಿ, ಶಾಸ್ತ್ರೀಯವಾಗಿ ಅಷ್ಟೇ ರೋಚಕವಾಗಿ ಮಾತಾಡುವ ಮತ್ತು ಬರೆಯುವ ಸಾಮರ್ಥ್ಯ ಇವರದೆಂದರೆ ಇದು ಒಬ್ಬ ವ್ಯಕ್ತಿ ಒಂದು ಜನ್ಮದಲ್ಲಿ ಮಾಡಲಾಗದ ಸಾಧನೆ. ಹಾಗಾಗಿ ಶ್ರೀಯುತ ಗಣೇಶರೇ ನಮಗೆ ಜಗದಚ್ಚರಿ. ಇವರ ಕಲಾಕೌತುಕಕ್ಕೆ ಭಾರತದ ಹೆಸರಾಂತ ಕಾದಂಬರಿಕಾರರಾದ ಡಾ. ಎಸ್ ಎಲ್ ಭೈರಪ್ಪನವರು ಮುನ್ನುಡಿರೂಪದ ಪ್ರವೇಶಿಕೆ ನೀಡಿರುವುದಂತೂ ಕೃತಿಯ ಮೌಲಿಕತೆ ಹೆಚ್ಚಿದೆ.
ಈ ಕೃತಿಯಲ್ಲಿ ಇಪ್ಪತ್ತೇಳು ಅತ್ಯಪೂರ್ವ ಲೇಖನಗಳಿವೆ. ಕೃತಿಕಾರರಾದ ಶ್ರೀ ಗಣೇಶ್ ಅವರು ಹೇಳುವಂತೆ, ‘ವಿವಿಧ ಕಲೆಗಳ ತತ್ತ್ವವನ್ನೋ ಪ್ರಯೋಗವನ್ನೋ ಆಸ್ವಾದ-ವಿಮರ್ಶನಗಳನ್ನೋ ವಿವೇಚಿಸಲು ಹೊರಟ ಯತ್ನಗಳು.’ ಶ್ರೀಯುತರು ತಮ್ಮ ಈ ಬರೆಹವನ್ನು ‘ಯತ್ನಗಳು’ ಎಂದಿದ್ದಾರೆ. ಆದರೆ ಅವರ ಈ ಯತ್ನಗಳೇ ನಮ್ಮ ಪಾಲಿಗೆ ಕಲಾಕೌತುಕ! ಮನೋರಂಜನವನ್ನೂ ಆತ್ಮೋದ್ಧಾರದ ಹಾದಿಯೇ ಆಗಿರುವ ನಿರಂಜನನನ್ನೂ ತೋರುವ ಲಲಿತಕಲೆಗಳ ಆಳಗಲಗಳನ್ನು ಸಾದ್ಯಂತವಾಗಿ ವಿಚಕ್ಷಿಸುವ ಸದ್ಭಾವ, ಚಿದ್ಭಾವ ಮತ್ತು ಆನಂದಭಾವಗಳ ಅನ್ವೇಷಣೆಯೇ ಆಗಿದೆ. ‘ಕಾವ್ಯಮಾನಂದಾಯ’ ಎಂಬುದಿಲ್ಲಿ ಮುಂಬರಿದು, ರಸಜ್ಞರ ಪರಿಪೂರ್ಣ ಬದುಕಿನ ಸಂದಾಯ ಎಂದೇ ಆಗಿದೆ. ದೇಶದ ಒಳಗೆ ಮತ್ತು ಹೊರಗೆ ಅತಿ ಹೆಚ್ಚು ಓದುಗರನ್ನು ಸಂಪಾದಿಸಿರುವ ಕನ್ನಡದ ಅಭಿಮಾನಧನ್ಯ ಕಾದಂಬರಿಕಾರರಾದ ಡಾ. ಎಸ್ ಎಲ್ ಭೈರಪ್ಪನವರು ಇವರ ಈ ಕೃತಿಯ ಮಹತ್ವವನ್ನು ಮಾನ್ಯ ಗಣೇಶರ ಆಸ್ಥೆ ಮತ್ತು ಆಸಕ್ತಿಗಳ ಹಿನ್ನೆಲೆಯಲ್ಲಿ ವಿವೇಚಿಸುತ್ತಾ ಸಮರ್ಥ ಪ್ರವೇಶಿಕೆಯೊಂದನ್ನು ಒದಗಿಸಿ ಕೊಟ್ಟಿದ್ದಾರೆ. ಈ ಕೃತಿಯ ಇನ್ನೊಂದು ವಿಶೇಷವೆಂದರೆ ಶ್ರೀ ಗಣೇಶರು ತಮ್ಮ ಸಂಗೀತವಿದ್ಯಾಗುರುಗಳಾದ ಡಾ. ನಾಗವಲ್ಲೀ ನಾಗರಾಜ್ ಅವರಿಗೂ ಭರತನೃತ್ಯ ಪ್ರಬೋಧಕರಾದ ವಿದುಷಿ ಸುಂದರೀ ಸಂತಾನಂ ಅವರಿಗೂ ಈ ಕೃತಿರತ್ನವನ್ನು ಸವಿನಯಪೂರ್ವಕ ಸಮರ್ಪಿಸಿದ್ದಾರೆ. ಈ ಸಂಬಂಧ, ಬರೆದು ಅರ್ಪಿಸಿರುವ ಸಂಸ್ಕೃತ ಕಾವ್ಯ ವಲ್ಲರಿಯೊಂದು ಅದ್ಭುತವಾಗಿದೆ. ಹೀಗೆ ಈ ಕೃತಿಯು ಸರ್ವಾಲಂಕಾರ ಭೂಷಣಪ್ರಾಯವಾಗಿದೆ. ಕಲಿತವರ ಕಾಮಧೇನುವಾಗಿ ಕಲಿಯುವವರಿಗೆ ದಾರಿದೀಪವಾಗಿ, ಒಟ್ಟಿನಲ್ಲಿ ಇದು ಕನ್ನಡ ಸಾರಸ್ವತ ಲೋಕದ ಮಹತ್ವದ ಮೈಲಿಗಲ್ಲಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಈ ಪುಸ್ತಕದ ವಿಶೇಷಾಂಶಗಳು ಹಲವು. ಸಾಮಾನ್ಯ ಎನ್ನಬಹುದಾದ ಸಂಗತಿ ಮತ್ತು ವಿಚಾರಗಳ ಒಳಗನ್ನು ವಿದ್ವತ್ಪೂರ್ಣವಾಗಿ ಬಗೆದು, ಅದರ ನಾನಾ ಅರ್ಥಸ್ತರಗಳನ್ನು ಪರಿಚಯಿಸುತ್ತಾ ಅರಿವನ್ನು ಮೂಡಿಸುವುದು. ಹಾಗೆಯೇ ಪಾಂಡಿತ್ಯಪೂರ್ಣವಾದ ಸಂಗತಿಗಳನ್ನು ಸಾಮಾನ್ಯರ ಅರ್ಥಗ್ರಹಿಕೆಗೆ ಎಟುಕುವಂಥ ಪರಿಭಾಷೆ ಬಳಸುತ್ತಾ, ಆ ಎತ್ತರಬಿತ್ತರಗಳಿಗೆ ಕರೆದುಕೊಂಡು ಹೋಗುವುದು. ಲೇಖಕರು ಬಹುಶ್ರುತರೂ ಶಾಸ್ತ್ರೀಯ ವಿದ್ವತ್ತನ್ನೂ ಪ್ರತಿಭಾಶಾಲೀ ವಿದ್ಯುತ್ತನ್ನೂ ಬೆಸೆದು ಬರೆಯುವ ಅಪರೂಪದ ವಿದ್ವಾಂಸರು. ‘ಇವರು ಸಂಸ್ಕೃತದವರು, ಅಷ್ಟಾವಧಾನ ಮಾಡಿಕೊಂಡು, ಚಿತ್ರಕಾವ್ಯ ಕಟ್ಟುತ್ತಾ, ಆಶುಕವಿತೆ ಹೊಸೆದವರು, ಒಂಥರಾ ಹಿಂದಿನ ಕಾಲದವರು’ ಎಂಬ ಉಪೇಕ್ಷೆ ಮತ್ತು ಉದಾಸೀನ ಧೋರಣೆ ಹೊಂದಿದವರು ಮೊದಲು ಇವರ ಈ ಕೃತಿಯನ್ನು ಸಾದ್ಯಂತ ಓದಬೇಕು. ಅಂತ್ಯಾಕ್ಷರಿಯಿಂದ ಹಿಡಿದು ಆಧುನಿಕ ಸಿನಿಮಾಗಳವರೆಗೆ ಇವರ ಒಳನೋಟ ಇಲ್ಲಿ ದಾಖಲಾಗಿದೆ; ತಲಸ್ಪರ್ಶಿ ಅಧ್ಯಯನವು ಹೊಸ ಹೊಳಹುಗಳಿಂದ ಕಂಗೊಳಿಸಿದೆ. ಕೃತಿಯುದ್ದಕೂ ಭರತಖಂಡದ ವಿವೇಕ ಕೈ ಹಿಡಿದು ನಡೆಸಿದೆ. ಒಳನೋಟ ಮತ್ತು ಸಂಶೋಧನೆ ಇಲ್ಲಿಯ ಎಲ್ಲ ಬರೆಹಗಳ ಮೂಲಗುಣವಾಗಿದೆ. ಗಣೇಶರೇ ಹಾಗೆ. ಮುಟ್ಟಿದ್ದೆಲ್ಲವನೂ ಚಿನ್ನ ಮಾಡುವ ಪರುಷಮಣಿಯಿದ್ದಂತೆ; ಭರತಖಂಡದ ಎಲ್ಲವನೂ ಒಂದೇ ಗುಟುಕಿನಲ್ಲಿ ಕೈಗಿಟ್ಟು ಕುಡಿಸಿದಂತೆ! ಸತ್ವ ಮತ್ತು ಸತ್ಯಗಳೇ ಇಲ್ಲಿಯ ಬರೆವಣಿಗೆಯ ಚೌಕಟ್ಟು ಮತ್ತು ಮೈಕಟ್ಟು.
ಪ್ರತಿಮಾಲೆ ಎಂದರೆ ಅಂತ್ಯಾಕ್ಷರೀ ಸಾಹಿತ್ಯಕ್ರೀಡೆ ಕುರಿತು ತಮ್ಮನುಭವದ ಹಿನ್ನೆಲೆಯಲ್ಲಿ ಅದರ ಒಳಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಇಂದ್ರಜಾಲ ಎಂದರೆ ಮ್ಯಾಜಿಕ್ ಕಲೆಯ ನೆಲೆಬೆಲೆಗಳನ್ನು ನಿರ್ವಚಿಸಿದ್ದಾರೆ. ಅಂಗಸಾಧನೋಪಕರಣಗಳನ್ನು ಬಳಸಿಕೊಂಡು, ಅಂಗಸೌಷ್ಠವ ಮೋಹಕ್ಕೆ ಒಳಗಾದ ಯುವಕ ಯುವತಿಯರ ಸೌಂದರ್ಯಮೀಮಾಂಸೆ ನಡೆಸುತ್ತಾ, ‘ಭಾರತದ ಪ್ರಾಚೀನ ಸಂಪ್ರದಾಯದ ದೇಹಸಂಸ್ಕಾರವಿಧಾನವು ಹೀಗಲ್ಲ. ಶರೀರವನ್ನೊಂದು ವೀಣೆಯಂತೆ ವಿಶ್ವದ ಆಧಾರಶ್ರುತಿಗೆ ಅನುಸಾರವಾಗಿ ಶ್ರುತಿ ಮಾಡುವ ಈ ಕ್ರಮದಲ್ಲಿ ಭೌತಿಕಭಾರಕ್ಕಿಂತ ಚೈತನ್ಯಸಾರವನ್ನು ಹೆಚ್ಚಾಗಿಸುವ, ಬಲವಿದ್ದೂ ಸೊಗಸಿದ್ದೂ ಮೈ ಮನಗಳನ್ನು ಮಿಗಿಲು ಹಗುರವಾಗಿಸುವ ಪ್ರಕ್ರಿಯೆ’ ಎನ್ನುತ್ತಾರೆ. ಕ್ರಿಕೆಟ್ ಆಟದ ಮೂಲಕ ಕ್ರೀಡಾಮೀಮಾಂಸೆ ನಡೆಸುತ್ತಾರೆ. ಕಲಾನಂದನದಲ್ಲಿ ಅರಳಿ ಮಗಮಗಿಸುತ್ತಿರುವ ಅದೆಷ್ಟೋ ಸೃಷ್ಟ್ಯಾತ್ಮಕ ಕುಸುಮಗಳ ಕೈಂಕರ್ಯವನ್ನು ದಾಖಲಿಸುತ್ತಾರೆ. ಈಗಿನ ಚಲನಚಿತ್ರಗಳಲ್ಲಿ ಎಲ್ಲರೂ ನಾಯಕರೇ! ‘ಶರೀರ ಚೇಷ್ಟೆಯೇ ಅಭಿನಯʼವೆನಿಸಿರುವ ದಿನಮಾನದಲ್ಲಿ ಹಿಂದಿನ ಕಾಲದ ಚಲನಚಿತ್ರಗಳನ್ನು ಅರ್ಥಪೂರ್ಣವಾಗಿ ಹೆಸರಿಸುತ್ತಾರೆ. ರಂಗವಲ್ಲಿ ಕಲೆಯನ್ನು ಕುರಿತು ಬಲು ಚೆನ್ನಾಗಿ ಬರೆಯುತ್ತಾರೆ. ಹಾಗೆಯೇ ಬಣ್ಣಗಳ ಬಗೆಗೊಂದು ಬಣ್ಣನೆ ಬಂದಿದೆ. ಕಲಾಜಗತ್ತಿನಲ್ಲಿ ಕಲಾಭಾಸವೂ ಇದೆ; ಅಗ್ಗದ ಅನುಕರಣೆಯೂ ಇದೆ ಎಂಬುದನ್ನು ಒಂದು ಬರೆಹ ಸದ್ದಿಲ್ಲದೇ ಸಾರಿದೆ. ಭಾರತೀಯ ಶಿಲ್ಪ ಕಲಾರಂಗದ ಹೊಸ ಸಾಧ್ಯತೆಗಳನ್ನು ಒಂದು ಬರೆಹ ಚಿಂತನಿಸಿದೆ. ಚಿತ್ರಕೂ ಶಿಲ್ಪಕೂ ಸೌಂದರ್ಯಕೂ ಇರುವ ನಂಟನ್ನು ವಿಚಾರಿಸಿದೆ. ನಾಟ್ಯ ಮತ್ತು ನೃತ್ಯಗಳ ನಡುವಿನ ಸಂಬಂಧ, ಕಲಾವಿಮರ್ಶೆಗೊಂದು ವಿಮರ್ಶೆ, ಕಲೆಯಲ್ಲಿ ಔದಾರ್ಯವೆಂದರೇನು? ಆಶುಕಲಾಕೌಶಲ, ವಿಜ್ಞಾನ-ತತ್ತ್ವಕಲೆಗಳ ಅನುಭವಪೂರ್ಣತೆ, ಕಲಾಚಿಕಿತ್ಸೆ ಅಂದರೆ ಆರ್ಟ್ ಥೆರಪಿಯ ಕೋಲಾಹಲ, ರಣರಂಗದಿಂದ ರಸರಂಗದತ್ತ, ಭಾರತೀಯ ರಂಗಭೂಮಿಯನ್ನು ಕುರಿತ ಗಿರೀಶ್ ಕಾರ್ನಾಡರ ಅಭಿಪ್ರಾಯಕ್ಕೊಂದು ಪ್ರತಿಸ್ಪಂದನೆ, ಸೋದರಕಲೆಗಳ ನಡುವೆ ಯಕ್ಷಗಾನ, ಲಗಾನ್ ಮತ್ತು ಬೆನ್‌ಹರ್ ಸಿನಿಮಾಗಳ ತೌಲನಿಕ ಅಭ್ಯಾಸ, ಸಿನಿಮಾ ಹಾಡುಗಳ ಸಾಹಿತ್ಯಮೀಮಾಂಸೆ, ಕಾವ್ಯಸಂಗೀತ – ಹೀಗೆ ಶ್ರೀ ಗಣೇಶರದು ವೈವಿಧ್ಯಮಯವೂ ಅತ್ಯದ್ಭುತವೂ ಆದ ಅಪೂರ್ವ ಬರೆಹಗಳು. ಲೇಖನಗಳ ಶೀರ್ಷಿಕೆಯೇ ಮಹೋನ್ನತ; ಹೇಳುವ ವಿಚಾರಗಳಿಗೆ ಸಂಗತ. ಕೃತಿಯ ಕೊನೆಯಲ್ಲಿ ‘ನನ್ನ ರಾಗಾನುರಾಗ: ಒಂದು ಮನೋಲಹರಿ’ ಎಂಬ ಎಂಬತ್ತು ಪುಟಗಳ ದೀರ್ಘ ಬರೆಹವಿದೆ. ಇದು ಸಂಗೀತಲೋಕದಲ್ಲಿ ಪಯಣಿಸಿದ ಲೇಖಕರ ದಿಗ್ವಿಜಯವೇ ಸರಿ. ಭಾರತೀಯ ರಾಗಗಳ ಮೂಲಕ ಸ್ವಂತ ಅನುಭವದ ಬೆಳಕಿನಲ್ಲಿ ನಿಜಕ್ಕೂ ರಾಗ ತಾನ ಪಲ್ಲವಿಗಳಂತೆಯೇ ಬರೆದುಕೊಳ್ಳುತ್ತಾ ಸಾಗಿದೆ. ಈ ಕ್ಷೇತ್ರದಲ್ಲಿ ಪ್ರವೇಶ ಮತ್ತು ಪರಿಚಯಗಳಿದ್ದವರಿಗೆ ರಸದೌತಣವಾಗಿದೆ. ಬೆಂಗಳೂರಿನ ವಸಂತ ಪ್ರಕಾಶನವು ಹೊರ ತಂದ ಈ ಕೃತಿಯಲ್ಲಿ ಇನ್ನೂರ ಮೂವತ್ತಕ್ಕೂ ಹೆಚ್ಚಿನ ಪುಟಗಳಿವೆ. ಬೆಲೆ ನೂರೆಂಬತ್ತು ರೂಪಾಯಿಗಳು. ಏಕಕಾಲಕ್ಕೆ ಈ ಪುಸ್ತಿಕೆಯು ಭಾರತೀಯ ಕಲೆ ಮತ್ತು ಪ್ರಸ್ತುತ ಅದು ಸಾಗಿದ ಹಾದಿಯನ್ನು ಮೌಲಿಕ ವಿಚಾರಧಾರೆಗಳ ಮೂಲಕ ಹಲವು ಭಾಷಾಸಾಹಿತ್ಯಗಳ ವಿದ್ವತ್ತಿನ ಬೆಳಕಿನಲ್ಲಿ ನಿರ್ವಚಿಸುವ ಅಚಾರ್ಯ ಕೃತಿ. ಭಾರತೀಯ ಕಲಾಜಗತ್ತು ಅಂದಿನಿಂದಲೂ ಭಾರತೀಯ ಪರಂಪರೆಯ ಚೌಕಟ್ಟಿನಲ್ಲಿ ಮೈದಾಳಿ ಅರಿವನ್ನೂ ಆನಂದವನ್ನೂ ಉಣಬಡಿಸಿದೆ ಎಂದು ಪ್ರತಿಪಾದಿಸುತ್ತದೆ.
–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಪ್ರಕಟಿಸಿದ ಸುರಹೊನ್ನೆಗೆ ನನ್ನ ಎಂದಿನ ಧನ್ಯವಾದ.
ಇದು ನನ್ನ ಈ ಹೊತ್ತಿನ ಖುಷಿ
ಮತ್ತು ಶ್ರೀ ಗಣೇಶರು ನಮ್ಮ ಈಗಿನ ಋಷಿ !
ಶತಾವಧಾನಿ ಗಣೇಶ್ ಅವರ ಕಲಾಕೌತುಕ ಕೃತಿಯ ಪರಿಚಯ ಸೊಗಸಾಗಿ ಮೂಡಿಬಂದಿದೆ ಕೃತಿ ಯನ್ನು ಓದಬೇಕೆಂಬ ಹಂಬಲವನ್ನು ಉಂಟುಮಾಡಿದ ನಿಮಗೆ ಶರಣು ಸಾರ್…
ವಂದನೆಗಳು ಮೇಡಂ
ಚೆನ್ನಾಗಿದೆ
ಧನ್ಯವಾದಗಳು
ಉತ್ತಮವಾದ ಪುಸ್ತಕ ವಿಮರ್ಶೆ ಗುರುವರ್ಯ
Nice article sir
ಉತ್ತಮವಾದ ಪುಸ್ತಕ ವಿಮರ್ಶೆ
ಶತಾವಧಾನಿ ಶ್ರೀ ಗಣೇಶರು ನಮ್ಮ ನಡುವಿರುವ ಒಂದು ಅದ್ಭುತ!!…ಅಚ್ಚರಿ!! ಒಬ್ಬ ವ್ಯಕ್ತಿಗೆ ಇಂತಹುದೂ, ಹೀಗೂ ಸಾಧ್ಯವೇ ಎನ್ನುವ ಕೌತುಕ ಉಂಟಾಗುತ್ತದೆ. ನಾವು ಅವರ ಸಮಕಾಲೀನರು ಎಂಬ ವಿಷಯವೇ ನಮ್ಮ ಹೆಮ್ಮೆ! ಅವರ ಪ್ರತಿಯೊಂದು ಕೃತಿಗಳೂ ಪಂಡಿತರ ಸೋಜಿಗದ ಕೂಸು!…. ನಮ್ಮಂತಹವರ ಅಳವಿಗೆ ಎಟಕುವಂತಹುದಲ್ಲ. ಅವರ ಕೃತಿಯೊಂದರ ಪರಿಚಯವನ್ನು ಮಾಡುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ…ವಂದನೆಗಳು ಸರ್.
ಶ್ರೀ ಗಣೇಶರು ವಿವೇಚಿಸಲು ಹೊರಟ ಯತ್ನಗಳು ಓದುಗರ ಪಾಲಿಗೆ ರತ್ನಗಳು ಎಂಬರಿವು ಮೂಡುವಂತಹ ಚಂದದ ಪುಸ್ತಕಾವಲೋಕನ. ವಂದನೆಗಳು.