ಹಾಕಿರದ ಬೀಗಕೆ ಇಲ್ಲದ ಕೀಲಿಕೈ !
‘ನಿನ್ನ ಯಾತನೆಗಳು ಅವನ ಸಂದೇಶ; ಎಚ್ಚರದಲಿ ಅನುಭವಿಸು’ ಎನ್ನುವನು ರೂಮಿ ಎಂಬ ಸಂತ ಕವಿ. ಇಂಗ್ಲಿಷಿನಲಿ ರುಮಿ (RUMI) ಎಂದೇ ಖ್ಯಾತವಾಗಿರುವ ಜಲಾಲ್ ಉದ್ ದೀನ್ ಮಹಮ್ಮದ್ ರೂಮಿ ಓರ್ವ ಪರ್ಷಿಯನ್ ಕವಿ ಮತ್ತು ತತ್ತ್ವಶಾಸ್ತ್ರೀಯ ರಹಸ್ಯದರ್ಶಿ. ಅರೆಬಿಕ್ನಲ್ಲಿ ಈತನ ಹೆಸರಿನ ಅರ್ಥ: ನಂಬಿಕೆಯ ವೈಭವ ಎಂದು! ಇಸ್ಲಾಮಿಕ್ ದರ್ವಿಶ್ ಆಗಿಯೂ ಸೂಫಿ ಸಂತನಾಗಿಯೂ ಈತ ಮಾತಾಡಿದ್ದೆಲ್ಲವೂ ಮಾಣಿಕ್ಯವಾಗಿದೆ. ಈತನ ಜನನ: ಸೆಪ್ಟಂಬರ್ 30, 1207 ಮರಣ: ಡಿಸೆಂಬರ್ 17, 1273. ನಮ್ಮಲ್ಲಿ ಶಿವಶರಣರು ಮಹಾನ್ ವಚನಕಾರರಾಗಿಯೂ ಆಧ್ಯಾತ್ಮಿಕ ಪಥಿಕರಾಗಿಯೂ ನುಡಿದು ನಡೆದ ಮರುಗಳಿಗೆಯಲ್ಲೇ ಅಲ್ಲಿ ರೂಮಿ ಕಾಣಿಸಿಕೊಂಡನು. ಹಾಗಾಗಿ ಕ್ರಿ ಶ 13ನೇ ಶತಮಾನದ ಪರ್ಷಿಯಾದ ಕವಿಯೆಂದು ಜಗತ್ತು ಮಾನ್ಯ ಮಾಡಿದೆ. ಈತ ಕೇವಲ ಕವಿ ಮಾತ್ರವಲ್ಲದೇ ನ್ಯಾಯಾಧೀಶ, ತತ್ತ್ವಶಾಸ್ತ್ರಜ್ಞ ಮತ್ತು ಸೂಫಿ ಸಂತರೂ ಆಗಿದ್ದರು. ಇವರ ಆಧ್ಯಾತ್ಮಿಕ ವಿಚಾರಧಾರೆಯು ಜಗತ್ತಿನ ಜನರ ಪ್ರೀತಿಗೆ ಪಾತ್ರವಾಗಿದೆ. ರೂಮಿಯ ಮಹತ್ವವು ರಾಷ್ಟ್ರೀಯ ಮತ್ತು ಜನಾಂಗೀಯ ಗಡಿಗಳನ್ನು ಮೀರುವಂಥದು ಎಂದು ಕೊಂಡಾಡಲಾಗಿದೆ.
ರೂಮಿಯ ಮಾತು-ಕಾವ್ಯ-ಬೋಧನೆಗಳಲ್ಲಿ ಆಳವಾದ ಆಧ್ಯಾತ್ಮಿಕ ತಿಳಿವಿದೆ. ಸೆಪ್ಟಂಬರ್ 2007 ರಲ್ಲಿ ಬಿಬಿಸಿಯು ರೂಮಿಯನ್ನು ಅಮೆರಿಕದ ಅತ್ಯಂತ ಜನಪ್ರಿಯ ಕವಿಯೆಂದೂ ಯುನೆಸ್ಕೋ ಕೂಡ ಇದೇ ವರ್ಷವನ್ನು ಅಂತಾರಾಷ್ಟ್ರೀಯ ರೂಮಿ ವರ್ಷವೆಂದೂ ಘೋಷಿಸಿತು. ಈತನ ಕಾವ್ಯ ಮತ್ತು ವಿಚಾರಧಾರೆಗಳನ್ನು ಜಗತ್ತಿನ ಅನೇಕ ಭಾಷೆಗಳಲ್ಲಿ ಅನುವಾದಿಕೊಳ್ಳಲಾಗಿದೆ. ಪರ್ಷಿಯನ್ ಸೂಫಿ ಸಂತ ಕವಿಯಾದ ಶಮ್ಸ್ ತಬ್ರೀಜಿಯ ಶಿಷ್ಯರಾಗಿ ರೂಮಿ ಕಾಣಿಸಿಕೊಂಡರು. ‘ಬಿಟ್ಟು ಹೋಗುವವರ ಬಳಿಯೊಂದು ಹಾರೈಕೆಯಿದೆ’ ಎಂಬ ಮಾತು ರೂಮಿ ಗುರುವಿನ ಜನಪ್ರಿಯ ಹೇಳಿಕೆ.
ಈ ಲೋಕದಲಿ ಒಬ್ಬೊಬ್ಬರದೂ ಒಂದೊಂದು ತೆರನಾದ ಯಾತನೆಯೇ ಮತ್ತು ಬದುಕಿನ ಯಾಚನೆಯೇ! ಹಣವಿದ್ದರೆ ಸುಖ ಎಂದುಕೊಳ್ಳುತ್ತೇವೆ. ಗುಣವೇ ಹಣ ಎಂದೂ ಮಾತಾಡುತ್ತೇವೆ. ಎಲ್ಲಕಿಂತ ಮುಖ್ಯ ಆರೋಗ್ಯ; ಇದೇ ಮಹಾಭಾಗ್ಯ ಎಂದೂ ಅಲವತ್ತುಕೊಳ್ಳುತ್ತೇವೆ. ಹಣ, ಹೆಸರು, ಅಧಿಕಾರ, ಸಂಪತ್ತು, ಪದವಿ, ಸುಖಲೋಲುಪ ಜೀವನ – ಯಾವುದೂ ನಮ್ಮ ಒಂದಲ್ಲ ಒಂದು ರೀತಿಯ ಯಾತನೆಯನ್ನು ಹೋಗಲಾಡಿಸದು. ಏಕೆಂದರೆ ಇರುವುದೊಂದೇ ಜೀವನ; ಎಷ್ಟೂ ಅಂತ ಪ್ರಯೋಗ ಮಾಡಿ ನೋಡುವುದು? ಸಾವಿರ ವರುಷಗಳ ಆಯುಷ್ಯವಿದ್ದರೂ ಅಪರಿಮಿತ ಭೋಗದಲ್ಲಿ ನಿರತನಾಗಿದ್ದರೂ ಆದಿನಾಥ ವೃಷಭದೇವನು ಕೆನ್ನೆಯಲೊಂದು ನರೆಗೂದಲು ಕಂಡು ಆತಂಕಿತನಾದನು; ಆಮೇಲೆ ಜೀವನದ ನಶ್ವರತೆಯನ್ನು ಮನಗಂಡು ವೈರಾಗ್ಯಪರನಾದನು. ಹೀಗೆ ಯಾತನೆಯು ಒಂದಿಲ್ಲೊಂದು ರೀತಿಯಲ್ಲಿ ಅಸ್ತಿತ್ವದಲ್ಲಿ ಇದ್ದೇ ಇರುತ್ತದೆ. ಒಂದಲ್ಲಾ ಒಂದು ರೀತಿಯ ದುಗುಡ ಮತ್ತು ಕೊರಗು ಉಳಿದೇ ಬಿಡುತ್ತದೆ. ನೋವು ಶಾಶ್ವತ; ಸಫರಿಸುವುದು ನಿನ್ನಾಯ್ಕೆ ಉಚಿತ ಎಂದಿಲ್ಲವೇ? ಸಂಬುದ್ಧರು. ಬಡವರಿಗೊಂದು ಚಿಂತೆ; ಸಿರಿವಂತರಿಗೊಂದು ಚಿಂತೆ. ಬಹುಶಃ ಚಿತೆಯ ಮೇಲೆ ಮಲಗಿದರೂ ನಮಗೆ ಸ್ವರ್ಗ ಸಿಗುವುದೋ ಇಲ್ಲವೋ ಎಂಬ ಚಿಂತೆ! ಈ ನಿಟ್ಟಿನಲ್ಲಿ ರೂಮಿಯ ಮಾತನ್ನು ಮೆಲುಕು ಹಾಕಬೇಕು. ನೋವು, ಯಾತನೆ, ದುಃಖ, ದುಗುಡ ಇವು ಅನಿವಾರ್ಯ ಎಂದ ಮೇಲೆ ಅವನ್ನು ಅನುಭವಿಸುವ ರೀತಿಯಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕು. ಪರಿಸ್ಥಿತಿ ಹತೋಟಿಗೆ ಸಿಗದೇ ಹೋದಾಗ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಹೊರಗಿನದು ನಮ್ಮ ಕೈಯಳತೆಯಲಿಲ್ಲ; ಒಳಗಿನದು ನಮ್ಮ ನಿಯಂತ್ರಣದಲೇ ಇದೆಯಲ್ಲವೇ? ನಿರಾಕರಿಸಿದಷ್ಟೂ ನೋವು ಹೆಚ್ಚಾಗುವುದರಿಂದ ಮೊದಲಿಗೆ ಅದನ್ನು ಸ್ವೀಕರಿಸಬೇಕು. ಅದಕ್ಕೇ ರೂಮಿ ಹೇಳುವನು: ಎಚ್ಚರದಲಿ ಅನುಭವಿಸು; ಏಕೆಂದರೆ ಅದು ‘ಅವನ ಸಂದೇಶ!’ ಈ ಮೂಲಕ ನಿನ್ನ ಜೀವ-ಜೀವನದ ಗುಟ್ಟೊಂದನ್ನು ರಟ್ಟು ಮಾಡಲಿದೆ; ಅದನು ಪ್ರಜ್ಞಾವಂತಿಕೆಯಿಂದ ರಿಸೀವಿಸಿದರೆ ನಿನ್ನ ಜೀವನ ಪಾವನ. ಅಂದರೆ ಸಾರಾಂಶವಿಷ್ಟೇ: ಬದುಕಿನ ರಹಸ್ಯದರಮನೆಯ ಒಳಹೊಕ್ಕರೆ, ಅರ್ಥ ಮಾಡಿಕೊಳ್ಳುವ ಕೀಲಿಕೈಯೊಂದು ನಿನಗೆ ದೊರೆಯುವುದು.
ದಾರಿ ತಪ್ಪುವುದಿರಲಿ, ದಿಕ್ಕೇ ತಪ್ಪಿದಾಗ ಎಲ್ಲವೂ ಅಯೋಮಯ ಎನಿಸಿದಾಗ ಹುಟ್ಟಿಕೊಳ್ಳುವ ಯಾತನೆಗೆ ಭೀಮಬಲ. ನಮ್ಮನು ಬುಡಸಮೇತ ಅಲ್ಲಾಡಿಸಿ, ಹೊಸಕಿ ಹಾಕುವಷ್ಟು ನೋವು, ದುಗುಡ ಮತ್ತು ದುರಂತ. ನಿಜ, ಯಾತನಾ ಶಿಬಿರದ ಮೆಂಬರಾದ ಮೇಲೆ ಬಾಳುವುದು ಕರಕಷ್ಟ. ಅದು ದೈಹಿಕವೇ ಇರಲಿ, ಮಾನಸಿಕವೇ ಇರಲಿ, ಸ್ವಯಂಕೃತವೋ, ಪರಪೀಡನೆಯೋ ಒಟ್ಟಿನಲ್ಲಿ ನೋವು ನೋವೇ. ಯಾರ ನೋವನ್ನೂ ಸಾಲ ಪಡೆಯಲಾಗದು; ಬಡ್ಡಿ ಸಮೇತ ಹಿಂದಿರುಗಿಸಿದರೆ ಅದು ದ್ವೇಷದ ದಳ್ಳುರಿಯಾಗಿ ಸಮಸ್ತವನೂ ಆಪೋಶನ ತೆಗೆದುಕೊಳ್ಳುವುದು. ಅಂದರೆ ನೋವನ್ನು ಹಂಚಿದಷ್ಟೂ ಅದು ಹೆಚ್ಚೇ ಆಗುವಂಥ ದಾವಾನಲ. ಅದಕಾಗಿ ಅವುಡುಗಚ್ಚಿ ಸಹಿಸಬೇಕು; ಸಹಿಸಿಕೊಳ್ಳುವ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚು ಮಾಡಿಕೊಳ್ಳಬೇಕು. ಹತ್ತಿಕ್ಕಿದಷ್ಟೂ ಹೆಚ್ಚಾಗುವುದೇ ನೋವಿನ ಸ್ವರೂಪ. ವಾಸ್ತವ ಅರ್ಥ ಮಾಡಿಕೊಂಡು ಅನುಭವಿಸಿದಷ್ಟೂ ಅದು ಒಗ್ಗಿ ಹೋಗುತ್ತದೆ. ನೋವಿಗೇ ನೋವಾಗಿ ಹೊರಟು ಹೋಗುತ್ತದೆ. ಇರಲಿ.
ಯಾವುದೇ ನೋವಿರಲಿ, ಅದು ಅಸಹನೀಯ ಮತ್ತು ದುಸ್ತರ. ದೈಹಿಕವೋ ಮಾನಸಿಕವೋ ಅದು ಮುಖ್ಯವಲ್ಲ. ಅನುಭವಿಸುತ್ತಿರುವ ನೋವಂತೂ ನಿಜವಷ್ಟೇ. ನಿನ್ನ ನೋವು ನೋವೇ ಅಲ್ಲ, ಅದು ನಿನ್ನ ಕೈಯ್ಯಾರೆ, ಕಪೋಲಕಲ್ಪಿತ ಎಂದೆಲ್ಲಾ ಹೇಳುವವರಿಗೆ ಬದುಕು ಎಲ್ಲ ಆಯಾಮಗಳೂ ಗೊತ್ತಿರುವುದಿಲ್ಲ. ತಮಗಾಗದ ಮತ್ತು ತಮಗಿಲ್ಲದ ಯಾವುದೂ ಈ ಲೋಕದಲ್ಲಿ ಇಲ್ಲವೆಂಬ ಉಡಾಫೆಯಹಂಕಾರ ಅಂಥವರದು. ಇದು ಲೋಕಸಹಜ ಕೂಡ. ‘ನನ್ನ ಜಾಗದಲ್ಲಿ, ನನ್ನ ಮನಸ್ಥಿತಿಯಲ್ಲಿ, ನನ್ನ ಪರಿಸ್ಥಿತಿಯಲ್ಲಿ ನೀನಿಲ್ಲ; ಅದಕಾಗಿ ಇಂಥ ಮಾತು’ ಎಂದು ನಾವೇ ಕಡು ಸಂಯಮದಿಂದ ಅಂಥವರನ್ನು ಅರ್ಥ ಮಾಡಿಕೊಂಡು, ದೂರವಿಡಬೇಕು; ದೂರಬಾರದು. ಯಾರೇ ಅಹಂಕಾರಿಗಳಿರಲಿ, ಕನಿಕರಿಸಬೇಕಷ್ಟೇ. ಬೇರೆಯವರ ಮಕ್ಕಳನು ದೂಡಿ ಬಾವಿಯ ಆಳ ನೋಡುವ ಇಂಥವರಿಗೆ ಜಗತ್ತಿನ ಹಸಿವು, ದಾರಿದ್ರ್ಯ, ದುಃಖ ದುಮ್ಮಾನಗಳು ಬೇಕಾಗಿಯೂ ಇಲ್ಲ. ಕೇವಲ ಅವಕಾಶವಾದೀ ಸ್ವಾರ್ಥಮೂಲ ಸಂವೇದನಾಶೂನ್ಯ ದಾನವರಿವರು. ಹಾಗಾಗಿಯೇ ನೋವನ್ನು ಅನುಭವಿಸುತ್ತಿರುವಷ್ಟೂ ಹೊತ್ತು ಅದು ನಿಜವೇ. ಅದನ್ನು ‘ಎಚ್ಚರದಲಿ ಅನುಭವಿಸು’ ಎನ್ನುವನು ರೂಮಿ. ಇದು ಆ ಭಗವಂತನ ಸಂದೇಶ ಎಂದರೆ ಅರ್ಥ ಇಷ್ಟೇ: ಜೀವನಪಾಠವೊಂದು ಸದ್ದಿಲ್ಲದೇ ನಿನಗೆ ತಲಪುತ್ತಿದೆ!
ಎಲ್ಲವನೂ ಪ್ರಯೋಜನದ ದೃಷ್ಟಿಯಿಂದ ನೋಡ ಹೊರಟರೆ ಬದುಕನ್ನು ಇಡಿಯಾಗಿ ಅನುಭವಿಸಲಾಗದು. ಎಲ್ಲಕೂ ತಕ್ಕಡಿಯ ಬಟ್ಟೇ ಪ್ರಧಾನವಾದರೆ ಸಂಬಂಧಗಳ ನಿರ್ವ್ಯಾಜ ಪ್ರೀತಿ ದೊರಕದು. ನಮಗೆ ಇನ್ನೊಬ್ಬರು ಸಮಸ್ಯೆಯಲ್ಲ; ಸಮಸ್ಯೆಯಿರುವುದು ನಾವು ಅವರನು ತೂಗುವ ತಕ್ಕಡಿಯಲ್ಲಿ! ‘ನೀನು ನೀರು ಕೇಳಿದೆ; ಅವರು ವಿಷ ಕಕ್ಕಿದರು’ ಎಂದು ಹೇಳುವ ಮೊದಲು ಆಲೋಚಿಸಬೇಕು. ಕೇಳಿದ್ದೇ ತಪ್ಪೆಂದು!! ಏನಾದರೂ ಕೇಳಿದಾಗ, ಏನಾದರೂ ಬೇಡಿದಾಗ, ಏನನೋ ನಿರೀಕ್ಷಿಸಿದಾಗ ನಮ್ಮ ಆಕಾಂಕ್ಷೆಗಳನು ದೂರಬೇಕೇ ವಿನಾ ಅವರ ಅನಿರೀಕ್ಷಿತ ನಡೆಯನ್ನಲ್ಲ.
ಗಳಿಸುವುದು ಮತ್ತು ಕಳೆದುಕೊಳ್ಳುವುದು ಎಂಬೆರಡು ಪರಿಕಲ್ಪನೆಗಳನ್ನು ಲೌಕಿಕದಲಿಟ್ಟು ನೋಡಿದರೆ ಅದು ವಾಣಿಜ್ಯಕ; ಅದೇ ಲಾಭ-ನಷ್ಟಗಳಾಚೆಗೆ ಕಂಡರೆ ಅದು ಆಧ್ಯಾತ್ಮಿಕ. ಇಷ್ಟೇ ಜೀವನ. ನಮ್ಮದು ನಮಗೆ; ಅವರದು ಅವರಿಗೆ. ಹುಟ್ಟಿನಿಂದ ಏನನೂ ತರಲಿಲ್ಲ; ಸಾಯುವಾಗ ಹೊತ್ತೊಯ್ಯುವುದಿಲ್ಲ ಅಂದ ಮೇಲೆ ಲಾಭವೂ ಇಲ್ಲ; ನಷ್ಟವೂ ಇಲ್ಲ. ಯಾರ ಜೀವನಕೂ ಯಾರೂ ಜವಾಬ್ದಾರರೂ ಅಲ್ಲ; ಅಮಲ್ದಾರರೂ ಅಲ್ಲ. ನಾನು ಹೇಗಿರುವೆನೋ ಜಗತ್ತು ಹಾಗೆ; ಎಲ್ಲವನೂ ನನ್ನ ಮೂಲಕ ನೋಡುವ, ಆಲೋಚಿಸುವ, ಪರಿಶೀಲಿಸುವ ಕಾರಣ, ನನ್ನ ಭ್ರಮೆ, ಕನಸು ಮತ್ತು ಕಾಮನೆಗಳೂ ನನ್ನವೇ. ಇನ್ನೊಬ್ಬರ ಅನುಭವವನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ; ಊಹಿಸಬಹುದಷ್ಟೇ! ಈ ಊಹೆ ವಾಸ್ತವಕೆ ಮತ್ತು ಸತ್ಯಕೆ ಎಷ್ಟು ಹತ್ತಿರವಿರುವುದೋ ಅಷ್ಟು ಅದು ಅಥೆಂಟಿಕ್ಕು. ಸತ್ಯಕೆ ಸಮೀಪವಿಲ್ಲದಿದ್ದರೆ ಅದೇ ಪ್ಯಾಥೆಟಿಕ್ಕು!!
ಅಂದರೆ, ಚಿಕ್ಕಂದಿನಿಂದಲೂ ನನ್ನಲಿ ಈ ಲೋಕದ ಮಾತು-ಕತೆಗಳೇ ತುಂಬಿರುತ್ತವೆ. ಅವನ್ನೇ ನನ್ನವೆಂದು ಬಗೆದು, ಬದುಕುತ್ತಿರುತ್ತೇನೆ. ಒಬ್ಬರನು ಕುರಿತು ಇನ್ನೊಬ್ಬರು ಹೇಳುವುದನ್ನೇ ನನ್ನ ಅನಿಸಿಕೆಯೆಂದು ಎಲ್ಲಿಯವರೆಗೆ ಅಂದುಕೊಳ್ಳುವೆನೋ ಅಲ್ಲಿಯವರೆಗೂ ನೊಂದುಕೊಳ್ಳುವುದು ಇದ್ದೇ ಇರುತ್ತದೆ. ಮಹಾರಾಜನಾಗಿ ರಾಜ್ಯವನ್ನಾಳಬೇಕಾಗಿದ್ದ ಸಿದ್ಧಾರ್ಥನು ಗೌತಮ ಬುದ್ಧರಾಗಿ ಬೀದಿಯಲಿ ಅಲೆಯುತಾ ಸಂನ್ಯಾಸಿಗೆ ತಕ್ಕುದಾದ ಚರಿಗೆ ಹಿಡಿದು ಭಿಕ್ಷೆಗೆ ಹೋದಾಗ ಊರಿಗೇ ಅರಸರಾದ ಆತನ ತಂದೆ ಶುದ್ಧೋದನ ಆತಂಕಿತನಾದರು; ಜ್ಞಾನೋದಯಗೊಂಡ ಗೌತಮರು ಸಮಾಧಾನಿಸಿದರು: ‘ಈ ಲೋಕದಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಿಕ್ಷುಕರೇ! ನೀನೊಂದು ಥರ; ನಾನೊಂದು ಥರ!! ಅಹಮಿದ್ದರೆ ನಾನು ಕೊಡುವವನಾಗುವೆ; ಅಹಮು ಕಳೆದರೆ ಕೊಡುವುದೇನು? ಬರೀ ಪಡೆಯುವುದಷ್ಟೇ.’ ಕಣ್ತೆರೆಸುವ ಮಾತಿದು. ಬಹುಶಃ ಇಂಥ ಸ್ವಭಾವದಿಂದಲೋ ಏನೋ ಸ್ವತಃ ಸಿದ್ಧಾರ್ಥರ ಸ್ವಂತ ಅಣ್ಣನೇ ಆತನ ಶಿಷ್ಯೋತ್ತಮನಾಗಿ ಮುಂದೆ ಆನಂದನೆಂಬ ಅಭಿಧಾನದಿಂದ ಬುದ್ಧರ ಮನ ಗೆದ್ದನು. ಪರಮಹಂಸರು ಮತ್ತವರ ಧರ್ಮಪತ್ನಿ ಮಾತೆ ಶಾರದಾದೇವಿಯವರು, ಮಹಾತ್ಮ ಗಾಂಧೀಜಿ ಮತ್ತವರ ಮಡದಿ ಕಸ್ತೂರಿಬಾ ಅವರು. ಅದೇ ರೀತಿ ಓಶೋ ರಜನೀಶರ ತಾಯ್ತಂದೆಯರು ಕೊನೆಯಲ್ಲಿ ತಮ್ಮ ಮಗನ ಮೂಲಕವೇ ಸಂನ್ಯಾಸ ದೀಕ್ಷೆ ಪಡೆದರು! ನಮ್ಮ ಕನ್ನಡ ನಾಡಿನ ಶಿವಶರಣರೇ ಸಾಕಲ್ಲವೇ? ಬೇರೆಡೆಗೆ ಏಕೆ ಕಣ್ಣು ಹಾಯಿಸಬೇಕು? ಸತಿಪತಿಗಳೊಂದಾದ ಭಕ್ತಿಯನು ಪಡೆದ ಶಿವನೇ ಧನ್ಯನಾದನು ಇವರುಗಳಿಂದ.
ಜ್ಞಾನೋದಯಗೊಳ್ಳದ ಮುಂಚಿನ ಮನಸ್ಥಿತಿಯಾಗಿದ್ದರೆ ಸಿದ್ಧಾರ್ಥರದೂ ನಮ್ಮಂಥ ಪರಿಸ್ಥಿತಿಯೇ! ಡೋಲಾಯಮಾನ. ಅಷ್ಟೊಂದು ಐಶ್ವರ್ಯ, ಸ್ಥಾನಮಾನ, ಅಧಿಕಾರ, ಪದವಿ, ವೈಭೋಗಗಳನ್ನು ತೃಣವೆಂದು ಬಗೆದು ಹೊರಟು ಬಂದದ್ದು ಸರಿಯೇ? ಅರಮನೆಯ ರಾಜಾತಿಥ್ಯ ಬಿಟ್ಟು ಹೀಗೆ ಹಾದಿಯಲ್ಲಿ ಕಂಡಕಂಡವರ ಮನೆ ಮುಂದೆ ಬೇಡುವುದು ಸರಿಯೇ? ಈ ತಾಕಲಾಟ, ತುಯ್ದಾಟಗಳೆಂಬ ದೊಂಬರಾಟಗಳನ್ನು ಮೀರಿದ್ದರಿಂದ ಬುದ್ಧರಿಗೆ ಅಂಥ ಯಾವ ಹೊಯ್ದಾಟವಿಲ್ಲ. ಅದಕಾಗಿಯೇ ಅವರು ಸಂಬುದ್ಧರು. ವಿವೇಕ ತರುವ ನಿಶ್ಚಲತೆಯ ಮುಂದೆ ಇನ್ನಾವುದೂ ಸಲ್ಲ. ಜ್ಞಾನೋದಯವೆಂದರೆ ಇದೇ. ಶಾಂತಕಾಂತ ಸಂತುಲಿತ.
ನಾವು ಹುಲುಮಾನವರು. ಅಂಥ ಸಂಬುದ್ಧತೆ ಮತ್ತು ಪ್ರಬುದ್ಧತೆಗಳು ನಮಗಿಲ್ಲ; ಅಷ್ಟೊಂದು ಸಂತತನವು ನಮಗೆ ಬೇಕಾಗಿಯೂ ಇಲ್ಲ. ಸಂಸಾರ ಬಿಟ್ಟು ಓಡಿ ಹೋಗಲೂ ಸಾಧ್ಯವಿಲ್ಲ. ಅಂದ ಮೇಲೆ ಲೌಕಿಕದಲಿದ್ದೇ ಇಂಥದೊಂದು ಲೋಕೋತ್ತರ ಮನಸ್ಥಿತಿಯನ್ನು ಹೊಂದಲು ಸಾಧ್ಯವಿದೆ! ಅದೇ ಈ ಬರೆಹದ ಆಶಯ.
ಕ್ವಾಲಿಟಿ ಇಲ್ಲದಿದ್ದರೂ ಪರವಾಗಿಲ್ಲ; ಕ್ಲಾರಿಟಿ ಇರಬೇಕು. ಏಕೆಂದರೆ ಕ್ವಾಲಿಟಿ ಎಂಬುದನು ನಿರ್ಧರಿಸಲು ಹೊರಗಿನ ಮಾನದಂಡಗಳೂ ಬೇಕು. ಗಿಡ ನೆಟ್ಟು ಹಣ್ಣು ತಿನ್ನಲು ಕಾಯುವ ವಜ್ರದ ಸಹನೆ ಮತ್ತು ತಪನೆ. ಆದರೆ ಕ್ಲಾರಿಟಿ ಹಾಗಲ್ಲ. ಇದು ನಮ್ಮೊಳಗೆ ನಿಧಾನವಾಗಿ ಅರಳಿ ಮಗಮಗಿಸುವ ಪುಷ್ಪ ಪರಾಗ. ಅಸ್ಪಷ್ಟತೆಯನ್ನು ದೋಷವೆಂದು ಪರಿಗಣಿಸದೇ, ಗುಣವೆಂದು ಕೊಂಡವರೊಂದಿಗೆ ಮಾತಾಡುವುದೂ ಮತ್ತು ಬದುಕುವುದೂ ತುಂಬಾ ದುಸ್ತರ. ತಪ್ಪಾಗಿಯೇ ತಿಳಿದಿರಲಿ, ಆದರೆ ಕ್ಲಾರಿಟಿ ಇರಲಿ ಎಂಬ ಮನೋಭಾವ ನನ್ನದು. ಕಾರಣವೆಂದರೆ, ಸರಿ ತಪ್ಪುಗಳು ದೇಶ ಕಾಲ ಮನೋಬಾಧಿತ. ಒಮ್ಮೆ ಸರಿಯೆನಿಸಿದ್ದು ಮತ್ತೊಮ್ಮೆ ತಪ್ಪೆನಿಸಬಹುದು; ತಪ್ಪಾಯಿತಲ್ಲ ಎಂದುಕೊಳ್ಳುವಾಗಲೇ ಅದೇ ಸರಿ ಎನಿಸಬಹುದು. ಇದು ಆ ಕ್ಷಣದ ಸತ್ಯ. ಆ ಕ್ಷಣದ ಸತ್ಯಗಳು ಉಲ್ಕೆಯಂತೆ, ಮಿಂಚಿ ಮಾಯವಾಗಿ ಬಿಡುತ್ತವೆ. ವಾಸ್ತವವಾಗಿ ಇವು ಸತ್ಯಗಳೇ ಅಲ್ಲ; ಸತ್ಯದ ಆಭಾಸ ಅಷ್ಟೇ. ಶಾಶ್ವತ ಸತ್ಯವೆಂಬುದೊಂದು ಇದ್ದರೆ ಅದು ನಮ್ಮ ಅಂತರಾತ್ಮ ಮತ್ತು ಪರಮಾತ್ಮ ಅಷ್ಟೇ. ಇನ್ನು ಉಳಿದವೆಲ್ಲಾ ಹೀಗೆ ಬಂದು ಹಾಗೆ ಹೋಗುವಂಥ ಚಲಿಸುವ ಮೋಡ; ಇವನ್ನು ನಿಜವೆಂದು ಬದುಕುವುದು ಬೇಡ!
‘ತನ್ನ ತಂದೆಗೆ ಅವಮಾನವಾಗುವುದು, ತಾಯಿ ನೋಯುವಳು, ಮಡದಿ ಕಂಗಾಲಾಗುವಳು, ಮಗನ ಪೋಷಣೆ ಹೇಗೆ?’ ಎಂದೆಲ್ಲಾ ಸಿದ್ಧಾರ್ಥರು ಯೋಚನೆ ಮಾಡಿದರೆ ಆಗವರು ಬುದ್ಧರಾಗುವುದು ಅಸಂಭವ ಆಗುತ್ತಿತ್ತು. ಒಂದಲ್ಲ ಒಂದು ಲೌಕಿಕದ ಉಪಾಧಿ ನಮ್ಮನ್ನು ಬಂಧಿಸಿಯೇ ಇರುತ್ತದೆ. ಮಾತಾಪಿತೃಋಣ, ಸಮಾಜದ ಋಣ ಎಂದೆಲ್ಲ ನಮ್ಮನ್ನು ಕಟ್ಟಿ ಹಾಕಿರುತ್ತದೆ. ಅಲ್ಲಿಯೇ ಇದ್ದು ಒದ್ದಾಡುವುದಕಿಂತ ಹೊರ ಬಂದು ಒದ್ದಾಡುವುದೇ ಸೂಕ್ತವೆಂಬ ತೀರ್ಮಾನಕೆ ಸಿದ್ಧಾರ್ಥರಂಥವರು ಬಂದಿರುತ್ತಾರೆ. ತಮ್ಮ ಪೂರ್ವಾಶ್ರಮ ಏನೇ ಇರಲಿ, ಹೇಗೇ ಇರಲಿ, ಅದು ಅವರಿಗೆ ಬೇಡವೆನಿಸಿತು ಅಷ್ಟೇ. ಇಂಥಲ್ಲಿ ನಾವು ರಾಜ್ಯಾಧಿಕಾರದಿಂದ ಪಲಾಯನ, ಪ್ರಜಾಪರಿಪಾಲನೆಯ ಹೊಣೆಗೇಡಿತನ, ಸ್ತ್ರೀವಿರೋಧೀ ನೀತಿ, ಇದೊಂದು ಬಗೆಯ ಕೌಟುಂಬಿಕ ದೌರ್ಜನ್ಯ ಎಂದೆಲ್ಲಾ ಹೇಳಬಹುದು. ಏನೇ ಹೇಳಿದರೂ ಅದು ನಮ್ಮ ದೃಷ್ಟಿಕೋನವಷ್ಟೇ! ಬುದ್ಧರದಲ್ಲ. ಸಾಮಾನ್ಯರಾದ ನಮಗೇ ಇಂಥ ಆಲೋಚನೆಗಳು ಬರುವಾಗ, ತೀವ್ರತೆಯಲ್ಲಿ ಬೆಂದ ಸಿದ್ಧಾರ್ಥರಿಗೆ ಬಂದಿರಲಾರದೇ? ಸಾಧನೆ ಪರಮಪದ ಎಂದುಕೊಂಡವರಿಗೆ, ಅಜ್ಞಾನ ಯಾವುದು? ಜ್ಞಾನ ಯಾವುದು? ಎಂಬುದರ ಹಾದಿಯೂ ದೃಗ್ಗೋಚರವಾಗುವುದು. ಅವರೊಳಗೆ ಎಂಥೆಂಥ ತುಯ್ತ ತಳ್ಳಂಕಗಳೂ ಕುದಿತಗಳೂ ಭೋರ್ಗರೆದು ಬೊಬ್ಬಿಡಿದು ಹಲುಬಿದವೋ? ಹುಲುಮಾನವರಾದ ನಮಗೇನು ಗೊತ್ತು? ಅಂಥದೊಂದು ಕಠಿಣತಮ ಘೋರ ನಿರ್ಣಯಕೆ ಬಂದರೆಂದರೆ ಅದರ ಹಿಂದೆ ಎಷ್ಟೊಂದು ಚಿಂತನ ಮಂಥನಗಳು ಕಡೆಗೋಲಾದವೋ? ದೇವರಿಗಷ್ಟೇ ಗೊತ್ತು!
ಹೃದಯದ ಪಿಸುದನಿ, ಮನಸಿನ ಮಾತು ಮತ್ತು ಬುದ್ಧಿ ಹೊಳೆಯಿಸಿದ ಹಾದಿಗೆ ನಿಷ್ಠರಾದವರ ಕತೆಯಲ್ಲೇ ಹೀಗೆಯೇ. ಸಂತರೂ ಮಹಾತ್ಮರೂ ರಹಸ್ಯದರ್ಶಿಗಳೂ ದಾರ್ಶನಿಕರೂ ಅವಧೂತರೂ ಎಲ್ಲರಲ್ಲೂ ಇಂಥದೊಂದು ಸಂಘರ್ಷ ನಡೆದು, ಒಂದು ಯುದ್ಧ; ತನ್ನ ವಿರುದ್ಧ ಎಂಬಂತಾಗಿ ಅದರಲ್ಲಿ ನಾನತ್ವ ಕಳೆದುಕೊಂಡು, ಸಕಲ ಚರಾಚರದಲ್ಲಿ ತಮ್ಮನ್ನು ಏಕೀಭವಿಸಿಕೊಂಡು, ತಮ್ಮನ್ನು ತಾವೇ ಸೋಲಿಸಿಕೊಂಡು, ಗೆಲ್ಲುತ್ತಾರೆ; ಪರೋಕ್ಷವಾಗಿ ನಮ್ಮನ್ನೂ ಗೆಲ್ಲಿಸುತ್ತಾರೆ! ಸೋಲುವುದೇ ಸುಖವೆಂದ ಸಂತರಿವರು. ಇಂಥವರನ್ನೂ ಇನ್ನಾರೂ ಸೋಲಿಸಲಾಗದು; ಕಾರಣ, ಅವರನ್ನು ಅವರೇ ಸೋಲಿಸಿಕೊಂಡವರು. ಇನ್ನಾರು ಸೋಲಿಸಲು ಸಾಧ್ಯ? ಇಷ್ಟಕೂ ಸೋಲು ಗೆಲುವುಗಳ ಅರ್ಥಕ್ಕೆ ಹೊಸದೊಂದು ವ್ಯಾಖ್ಯೆ ಬರೆದವರಿವರು. ನಾವೂ ನೀವೂ ಅಂದುಕೊಂಡ ಲೌಕಿಕಾರ್ಥದ ಸೋಲು ಗೆಲುವಲ್ಲ ಇದು; ಅವುಗಳಾಚೆಗೆ ಇರುವ ಸುಖ ನೆಮ್ಮದಿಗಳನ್ನು ತಮ್ಮರಿವಿಗೆ ತಂದುಕೊಂಡು, ನಮ್ಮರಿವಿಗೆ ಉಣಬಡಿಸುವವರಿವರು.
ನಾವಿದನ್ನು ಅರ್ಥ ಮಾಡಿಕೊಳ್ಳದೇ, ನಾವೇ ಹಾಕಿಕೊಂಡ ಬೀಗದ ಕೀಲಿಯನ್ನು ಕಳೆದುಕೊಳ್ಳುವ ಭೀತಿಯಿಂದಾಗಿ ಇನ್ನಾರಿಗೋ ಕೊಟ್ಟು, ಬೇಕೆಂದಾಗ ಓಪನಿಸಲಾಗದೇ ಒದ್ದಾಡಿ ಪೇಚಾಡಿಕೊಳ್ಳುತ್ತೇವೆ. ದುಡ್ಡು ಕೊಟ್ಟು ದಯ್ಯ ಹಿಡಿಸಿಕೊಳ್ಳುವ ಜಾಯಮಾನ ನಮ್ಮದು. ದೆವ್ವ ಬಿಡಿಸಲು ದುಡ್ಡು ಕೊಡುವುದು ಲೋಕಾರೂಢಿ; ಆದರೆ ನಮ್ಮದು ಉಲ್ಟಾ. ಅಲ್ಲೆಲ್ಲೋ ಹಗ್ಗವೊಂದು ಸುಮ್ಮನೆ ಬಿದ್ದು ವೇಸ್ಟಾಗುತಿದೆಯೆಂದು ನೇಣು ಹಾಕಿಕೊಂಡು ಹಗ್ಗವನ್ನು ಉಪಯೋಗ ಮಾಡಿದ ಅವಿವೇಕದ ಹುಚ್ಚು ನಮ್ಮಗಳದು. ಅಥವಾ ನಾವೇ ಹಗ್ಗವನ್ನು ಇನ್ನೊಬ್ಬರ ಕೈಗಿತ್ತು, ಕಟ್ಟಿಸಿಕೊಂಡು, ನಮ್ಮನ್ನು ಬಂಧಿಸಿದರೆಂದು ಕೂಗಾಡಿ, ಅಳಲು ಪಡುವ ಆತುರಗಾರರು ನಾವು. ಬೀಗವೂ ನಮ್ಮದೇ; ಕೀಲಿಕೈಯೂ ನಮ್ಮ ಬಳಿಯೇ. ಇಷ್ಟಕೂ ಬೀಗವೆಂಬುದು ಸಂಕೇತ. ಒಳಗಿಂದ ಬೀಗ ಹಾಕಿಕೊಂಡು ಇರುವ ಒಂದೇ ಕೀಲಿಕೈಯನ್ನು ಕಿಟಕಿಯಾಚೆ ಎಸೆದು, ಹಾದಿ ಬೀದಿಯಲ್ಲಿ ಹೋಗುವವರನ್ನೆಲ್ಲಾ ಕೂಗಿ, ಬೀಗ ತೆರೆದು ಮುಕ್ತರನ್ನಾಗಿ ಮಾಡಿರೆಂದು ಗೋಗರೆಯುವ ಗಾಂಪರು ನಾವು. ನಮ್ಮೂರಿನಲೊಬ್ಬ ಜನಪ್ರಿಯ ವೈದ್ಯರಿದ್ದಾರೆ. ಕ್ಲಿನಿಕ್ಕಿನಲಿ ಇಲ್ಲದ ವೇಳೆಯಲಿ ತಾವಿರುವ ಮಹಡಿ ಮನೆಗೇ ರೋಗಿಗಳು ಹುಡುಕಿಕೊಂಡು ಬಂದು ತೊಂದರೆ ಕೊಡುತ್ತಾರೆಂದು ಮನೆಯೊಳಗಿದ್ದೇ ಹೊರಗೆ ಬೀಗ ಹಾಕಿಸಿಕೊಂಡು ಕೆಳಗಿನ ಮನೆಯವರಿಗೆ ಕೀಲಿಕೈ ಕೊಡುವುದು ರೂಢಿ. ಒಮ್ಮೆ ಅರುಜೆಂಟು ಬೀಗ ತೆಗೆಸಿಕೊಳ್ಳಬೇಕು; ಆದರೆ ಕೀಲಿಕೈ ಇರುವ ಕೆಳಗಿನ ಮನೆಯವರು ತಮಗೆ ಅರುಜೆಂಟೆಂದು ಪರವೂರಿಗೆ ಪಯಣಿಸಿದ್ದಾರೆ! ತಮ್ಮ ಮನೆಯಲೇ ತಾವು ಬಂಧಿಗಳಾಗಿ, ತಾವೇ ಕೈಯ್ಯಾರೆ ಬೀಗದ ಕೈ ಕೊಟ್ಟು ಬೀಗ ಹಾಕಿಸಿಕೊಂಡು ಪರಿತಾಪ ಪಟ್ಟರು. ಈ ಕತೆಯನು ಕೇಳಿದ ನನ್ನ ಸ್ನೇಹಿತರೊಬ್ಬರು ‘ಈ ವೈದ್ಯಕೀಯ ವೃತ್ತಿಯೂ ಸಾಕು; ಸ್ವಂತದ ಜೀವನವನ್ನು ಕಳೆದುಕೊಂಡು ಬದುಕುವ ನರಕವೂ ಸಾಕು’ ಎಂದು ಹುಯಿಲಿಟ್ಟರು. ಹೀಗೆ ನಾವೆಲ್ಲಾ ಸ್ವತಂತ್ರರೆಂದು ಬೀಗುತ್ತಿರುತ್ತೇವೆ; ಆದರೆ ನಾವೇ ಸೃಷ್ಟಿಸಿಕೊಂಡ ಜೈಲಿನಲ್ಲಿ ಕೊಳೆಯುತ್ತಿರುತ್ತೇವೆ. ಅಂಗೈ ಅಗಲದ ಜೈಲಿನ ಪುಟ್ಟ ಜಾಗದಲ್ಲೇ ಓಡಾಡಬಹುದೆಂಬ ಕುತರ್ಕಕೆ ಬಿದ್ದು ಬಸವಳಿಯುತ್ತಿರುತ್ತೇವೆ.
ನಮ್ಮ ಅಗಾಧ ಚೈತನ್ಯದ ಅರಿವೇ ಇಲ್ಲದೇ, ಸತ್ತಂತೆ ಬಿದ್ದು ಹೊರಳಾಡುವಾಗ ನೆನಪಿರಬೇಕು. ಎದುರಾದ ಎಲ್ಲ ಅಡಚಣೆಗಳನ್ನೂ ನಾವೇ ನಿರ್ಮಿಸಿಕೊಂಡಿದ್ದೇವೆಂಬ ಅರಿವನ್ನು ಬೆಳೆಸಿಕೊಂಡು, ಒಮ್ಮೆ ನಮ್ಮೊಳಗೆ ಇಣುಕಿ ಸರಿಯಾಗಿ ನೋಡಿದರೆ ‘ಮುಕ್ತಿಯೆಂಬುದು ಎಲ್ಲಿಂದಲೋ ಬರುವಂಥದಲ್ಲ; ಯಾರೋ ಬಂದು ಕೊಡುವಂಥದಲ್ಲ. ನಮ್ಮ ಬಂಧನಕೂ ನಮ್ಮ ಬಿಡುಗಡೆಗೂ ನಾವೇ ಮೂಲಚೂಲ’ ಎಂಬುದು ಹೊಳೆದು ಬಿಡುವುದು. ಆ ಕ್ಷಣದಿಂದ ಜಗತ್ತು ಹೊಸದಾಗಿ ಕಾಣಲಾರಂಭಿಸುವುದು. ನಾವೇ ಹೊಸಬರಾಗುವೆವು. ದೂರದೇ, ರೇಗದೇ, ಬಯ್ಯದೇ, ಅಸಹನಿಸದೇ, ಚಡಪಡಿಸದೇ ವೇದನೆಯ ಸಂವೇದನೆಯಾಗಿಸಿ ಬದುಕತೊಡಗಿದಾಗ ನಮ್ಮೆಲ್ಲ ಅನಿಸಿಕೆಗಳು ಕಾಲ ಕಳೆದಂತೆಲ್ಲಾ ಹಾಕಿರದ ಬೀಗಕ್ಕೆ ಇಲ್ಲದ ಕೀಲಿಕೈಗಳಂತೆ ಅನಿಸಿ ಬಿಡುತ್ತವೆ. ಅಂದುಕೊಂಡದ್ದರಾಚೆಗೂ ಏನೋ ಇದೆ; ನೊಂದುಕೊಂಡದ್ದರೀಚೆಗೂ ನಲಿವಿದೆ ಎಂಬುದು ಮನವರಿಕೆಯಾಗುತ್ತದೆ. ಜ಼ೆನ್ ಸಂನ್ಯಾಸಿಯೊಬ್ಬ ತನ್ನ ಶಿಷ್ಯರೊಂದಿಗೆ ನದಿ ದಾಟುವಾಗ ಅಲ್ಲೋರ್ವ ಸುಂದರ ತರುಣಿ ಭಯಸ್ಥಳಾಗಿ ನೆರವು ಕೇಳಿದಳು. ಸಂನ್ಯಾಸಿಯು ಏನನೂ ಯೋಚಿಸದೇ ಅನಾಮತ್ತಾಗಿ ಆಕೆಯನ್ನು ಹೊತ್ತುಕೊಂಡು ಹೊಳೆ ದಾಟಿದ. ತೀರದಳಿಸಿ, ನಸು ನಕ್ಕು ಅವಳ ಕೃತಜ್ಞತೆಗೆ ತಲೆಬಾಗಿ ನಮಸ್ಕರಿಸಿ, ನಸು ನಕ್ಕು ಮುಂದುವರೆದ. ಇದನೆಲ್ಲ ನೋಡುತಿದ್ದ ಶಿಷ್ಯರು ಮೂಕವಿಸ್ಮಿತರಾಗಿಯೂ ಹೆಣ್ಣನ್ನು ಸ್ಪರ್ಶಿಸಿದ ಗುರುವನ್ನು ಗುಮಾನಿಯಿಂದಲೂ ನೋಡುತ್ತಾ, ತಲೆಯಲ್ಲಿ ಏನೇನೋ ಯೋಚಿಸುತ್ತಾ, ಚಿಂತಾಕ್ರಾಂತರಾಗಿ ಕಿಲೋಮೀಟರುಗಟ್ಟಲೆ ಕ್ರಮಿಸಿದರು. ಓರ್ವ ಶಿಷ್ಯನು ಧೈರ್ಯ ಮಾಡಿ, ಗುರುವನ್ನು ಕೇಳಿಯೇ ಬಿಟ್ಟ: ಅದಕೆ ಗುರುವು ಮತ್ತೆ ನಸು ನಕ್ಕು, ‘ಅಯ್ಯೋ ಮೂರ್ಖರಾ! ಅವಳು ಮನುಷ್ಯಳಷ್ಟೇ. ನೆರವು ಕೇಳುವುದು ಅವಳ ಹಕ್ಕು; ನೆರವು ನೀಡುವುದು ನನ್ನ ಕರ್ತವ್ಯ. ಇಷ್ಟಕೂ ಅವಳನು ನಾನು ತೀರದಲೇ ಇಳಿಸಿಬಿಟ್ಟೆ; ನೀವಾದರೋ ಕಿಲೋಮೀಟರುಗಟ್ಟಲೆ ತಲೆಯಲ್ಲಿ ಹೊತ್ತು ತಂದಿದ್ದೀರಿ. ಈಗಲೂ ಅವಳನ್ನು ಮನದಲ್ಲಿ ಹೊತ್ತುಕೊಂಡು ಆಯಾಸ ಪಡುತಿದ್ದೀರಿ. ಹೇಳಿ ಈಗ: ಅವಳನ್ನು ಹೊತ್ತುಕೊಂಡು ಬಂದದ್ದು ನಾನೋ? ನೀವೋ?’ ಈ ಮಾರ್ಮಿಕ ಕತೆಯ ಆಯಾಮಗಳು ಏನೇ ಇರಲಿ, ನಾವೂ ಅಷ್ಟೇ: ಜೀವನದಲ್ಲಿ ವಿನಾಕಾರಣ ಏನೇನೋ ಹೊತ್ತುಕೊಂಡು (ಬಹಳ ಸಲ ಸ್ವಕಪೋಲಕಲ್ಪಿತ) ಕಡುಗತ್ತಲಲಿ ಅಲ್ಲಿ ಇಲ್ಲದ ಕರಿಬೆಕ್ಕೊಂದನು ಹುಡುಕುತಾ ನಿಸ್ತೇಜರಾಗುತ್ತೇವೆ; ಬಾಳುವೆಯ ಅಮೂಲ್ಯ ಸಮಯವನ್ನೂ ಇರುವ ಅಲ್ಪಾಯುಷ್ಯವನ್ನೂ ಅರ್ಥಹೀನ ನರಳಾಟದಿಂದ ಕಳೆದು ಬಿಡುತ್ತೇವೆ. ಸಾಯುವ ಕೊನೆಯ ಗಳಿಗೆಯಲ್ಲಿ ‘ಸರಿಯಾಗಿ ಬದುಕಲಿಲ್ಲ’ ಎಂದು ಅಲವತ್ತುಕೊಳ್ಳುತ್ತೇವೆ.
ಮತ್ತೆ ರೂಮಿಯ ಮಾತಿನತ್ತ ಬರುತ್ತೇನೆ: ನಿನ್ನ ಎಂದರೆ ನನ್ನ ಎಂದರ್ಥ. ಅವನ ಎಂದರೆ ಈವರೆಗೆ ನಾನು ಯಾರನ್ನೂ ಮರೆತು ಬದುಕುತ್ತಿರುವೆನೋ ಅವನು! ಯಾವ ಹೆಸರಿನಿಂದಲಾದರೂ ಕರೆದುಕೊಳ್ಳೋಣ; ಏನೂ ಬಾಧೆಯಿಲ್ಲ! ಅವರವರ ಭಾವಕ್ಕೆ ಅವರವರ ಬಕುತಿಗೆ ಬಿಟ್ಟಿದ್ದು. ಆ ಅವನು ಬೇರೆಲ್ಲೂ ಇಲ್ಲ; ಇರಲು ಸಾಧ್ಯವೂ ಇಲ್ಲ. ಅಂತರಾತ್ಮ ಎಂದಾದರೂ ಅನ್ನೋಣ; ಪರಮಾತ್ಮ ಎಂದಾದರೂ ಅನ್ನೋಣ. ಅಡ್ಡಿಯಿಲ್ಲ. ಒಟ್ಟಿನಲ್ಲಿ ನಾನು ಅವನನ್ನು ಮರೆತಿರುವೆ. ಹಾಗಾಗಿಯೇ ಬಹುಶಃ ಯಾತನೆ! ಇದು ನನಗೆ ಬಂದ ಸಂದೇಶವೋ ಆದೇಶವೋ? ಆವೇಶವಿಲ್ಲದೇ ಅತ್ಯಂತ ಸೈರಣೆಯಿಂದ ಏಕಾಂತದಲಿ ಕೇಳಿಕೊಳ್ಳಬೇಕು. ಇದೆಲ್ಲಾ ಇನ್ನೊಬ್ಬರನು ಕೇಳುವುದಲ್ಲ; ನನ್ನೊಳಗೆ ಕೇಳಿಕೊಳ್ಳುವುದು. ಅದನ್ನು ಪ್ರಾರ್ಥನೆಯೆನ್ನೋಣವೋ? ಧ್ಯಾನವೆನ್ನೋಣವೋ? ಪ್ರಾಣಾಯಾಮ ಎನ್ನೋಣವೋ? ಹೆಸರೇಕೆ!? ಹೆಸರೆನ್ನುವುದು ಅತಿಬುದ್ಧಿ, ಅತಿವಿವೇಕ, ಅತಿವಿದ್ಯಾಹಂಕಾರದ ಪಿಡುಗು. ಎಲ್ಲಕೂ ಹೆಸರಿಡುವುದು ಮತ್ತು ಹೆಸರೇನೆಂದು ಕೇಳುವುದು ನಾಗರಿಕತೆಯ ಕೊರಗು! ಹಾಗಾಗಿ ಹೆಸರಿಲ್ಲದೇ ಕೇವಲ ಅನುಭವ ಆಗುವಾಗ ಪಂಚೇಂದ್ರಿಯಗಳಾಚೆಗಿನ ಅನುಭಾವವೊಂದು ನಮ್ಮಲ್ಲಿ ಅರಳುವುದು ಖಂಡಿತ. ಹಣ, ಹೆಸರು, ಪದವಿ, ಅಧಿಕಾರ, ಹುದ್ದೆ, ಒಳ್ಳೆಯವನೆಂಬ ಮೇಲರಿಮೆ, ಕೆಟ್ಟವನೆಂಬ ಕೀಳರಿಮೆ ಇವನೆಲ್ಲಾ ಪಕ್ಕಕಿಟ್ಟು ಕೇವಲ ಒಂದು ಅಂತರ್ಯಾತ್ರೆಯಲಿ ಕಳೆದು ಹೋಗುವ ಸುಖವನು ಅನುಭವಿಸುವಾಗ ಯಾತನಾ ಶಿಬಿರದ ಸದಸ್ಯ ನಾನೇಕೆ ಆಗಿರುವೆ? ಎಂಬುದು ಮನವರಿಕೆ ಆಗುವುದು. ಲೋಕವನು ಕಟ್ಟಿಕೊಂಡು, ಸದಾ ಗಿಜಿಗುಡುವ ಸಂತೆಗದ್ದಲದಲಿ ಇದು ಏಕೆ ಸಾಧ್ಯವಿಲ್ಲವೆಂದರೆ ನಾನು ನನ್ನ ಅಹಮಿಗೆ ಆಹಾರ ಕೊಡುತಿರುವತನಕ ಅವನ ಸಂದೇಶವೇನೆಂಬುದು ಅರಿವಿಗೆ ಬರದು. ಯಾವುದೇ ಬಾಧೆಯಿರಲಿ, ಅದನ್ನು ಅನುಭವಿಸುವಾಗ ಎಚ್ಚರ ಇರಲಿ ಎಂದಾಗ ಇಲ್ಲಿ ಎಚ್ಚರ ಎಂದರೇನು? ಮತ್ತು ಎಚ್ಚರ ಯಾವುದು? ಎಂಬುದೇ ಮುಖ್ಯ.
ಎಚ್ಚರದಲಿ ಎರಡು ವಿಧ: ಒಂದು ಹೊರಗಿನದು, ಇದು ಶುದ್ಧ ಲೌಕಿಕ. ಟ್ರಾಫಿಕ್ಕಿನ ಸಿಗ್ನಲುಗಳಂತೆ. ಇನ್ನೊಂದು ಒಳಗಿನದು. ಇದೂ ಟ್ರಾಫಿಕ್ಕೇ! ಆದರೆ ನಾನೇ ನಿರ್ಮಾಣ ಮಾಡಿಕೊಂಡದ್ದು; ನನ್ನ ತಲೆಯೊಳಗೆ ತುಂಬಿಕೊಂಡದ್ದು. ಇದಕೆ ನಾನೇ ಹೊಣೆ. ಬೇರಾರೂ ಅಲ್ಲ. ಬೇರಾರನ್ನು ದೂರಿದರೆ ಆ ಮಟ್ಟಿಗೆ ನಾನು ಎಚ್ಚರದಲಿಲ್ಲ ಎಂದೇ ಅರ್ಥ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು; ಎಚ್ಚರದಲಿ ಬದುಕಬೇಕು. ಆಧ್ಯಾತ್ಮಿಕ ಪರಿಭಾಷೆಯಾಗಿರುವ ಸಾಕ್ಷಿತ್ವ ಮತ್ತು ವೈರಾಗ್ಯವನ್ನು ಲೌಕಿಕಕ್ಕೆ ಹೊಂದಿಸಿದರೆ ಅದುವೇ ಈ ಎಚ್ಚರ. ಪ್ರಜ್ಞಾವಂತಿಕೆ ಎಂದೂ ಹೇಳಬಹುದು. ಮತ್ತೆ ಪದಗಳ ಹಂಗು! ಆ ಮಟ್ಟಿಗೆ ಭಾಷೆಯ ನುಂಗು. ಕೇವಲ ಭಾವಗಳವು. ಆಯ್ದುಕೊಂಡವು. ಪರಿಮಳ ಸೂಸುತಿರುವ ಹೂವನ್ನು ಯಾವ ಹೆಸರಿನಿಂದ ಕರೆದರೂ ಸೂಸುವ ಪರಿಮಳಕೇನೂ ಕುಂದಿಲ್ಲ; ಅದೇ ರೀತಿ ಇದು ಕೂಡ. ಪ್ರತಿಯೊಂದನೂ ಎಚ್ಚರವಿಟ್ಟು ಗಮನಿಸಿದರೆ ನನ್ನ ಯಾತನೆಯ ಮೂಲ ದೊರೆತೀತು, ಉಪಶಮನವೂ ಹೊಳೆದೀತು. ಕೇವಲ ನಮ್ಮ ಉಸಿರಾಟವನ್ನು ಗಮನಿಸುತ ಹೋದರೆ ಸಾಕು, ಪವಾಡ ಸಂಭವಿಸುವುದು. ನಮ್ಮ ಆಲೋಚನೆಗೂ ಉಸಿರಾಟಕೂ ನೇರ ಸಂಬಂಧವಿದೆ. ಹಾಗೆಯೇ ನಮ್ಮ ಭಾವನೆಗಳಿಗೂ! ನಿಧಾನವಾಗಿ ಮತ್ತು ಲಯಬದ್ಧವಾಗಿ ನಾವು ಉಸಿರಾಡುವಾಗ ಯಾವುದೇ ತಾಮಸ ಅಥವಾ ನೆಗಟೀವ್ಗಳನ್ನು ಆಲೋಚಿಸಲಾರೆ! ಅದೇ ರೋಷಾವೇಶದಲಿದ್ದಾಗ ನಾನು ಏದುಸಿರು ಬಿಡುತ್ತಾ ಬುದ್ಧಿ ಹೃದಯಗಳ ನಿಯಂತ್ರಣ ಇಟ್ಟುಕೊಳ್ಳಲಾರೆ!! ಹಾಕಿರದ ಬೀಗಕೆ ಇಲ್ಲದ ಕೀಲಿಕೈ ಎಂದರೆ ಇದೇ.
-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಪ್ರಕಟಿಸಿದ ಸುರಹೊನ್ನೆಗೆ ಧನ್ಯವಾದಗಳು
ಅಭ್ಭಾ..ಮಂಜು ಸಾರ್ ಮೆದುಳಿಗೆ ಕಸರತ್ತು ಕೊಡುವ ಲೇಖನ…ಬೀಗ ..ಕೀ..
ನೈಸ್
thanks for giving valuable information about Rumi .
Lalitha S
ಪೂರಕ ಘಟನೆಗಳೊಂದಿಗೆ, ಮೊಗೆ ಮೊಗೆದು ಸುರುವಿದ ಚಿಂತನಾತ್ಮಕ, ಪ್ರೌಢ ಲೇಖನವು ಓದಿದಷ್ಟೂ ನಿಗೂಢವೆನಿಸುವಂತಿದೆ! ವಂದನೆಗಳು ಸರ್.
ಎಷ್ಟೊಂದು ವಿಚಾರ ಚರ್ಚಿಸಿದ್ದೀರಿ. ಏನೆಲ್ಲಾ ವಿವರಿಸಿದ್ದೀರಿ ನೈಸ್ ಗುರೂಜಿ
ತುಂಬಾ ಅದ್ಭುತ ಲೇಖನ ಗುರುಗಳೆ
Stock elli ittiruttiri sir
ಒಂದೊಳ್ಳೆ ಲೇಖನ ಸರ್
ಬದುಕಿನ ಕುರಿತಾಗಿ, ದಾರ್ಶನಿಕ ರೂಮಿಯ ವಿಚಾರಗಳ ಪ್ರತಿಪಾದನೆಯೊಂದಿಗೆ ಜೀವನಕ್ಕೆ ಸರಳ ಆಧ್ಯಾತ್ಮಿಕ ಪಾಠವನ್ನೂ ಹೇಳುವ ಚಂದದ ಲೇಖನ.