ಕಾಲಗರ್ಭ : ಮೊದಲ ಓದುಗರ ಅನಿಸಿಕೆಗಳು. (ಮೂಡಿದ ಭಾವಗಳು)
‘ಅನುಭವವೇ ಗಾದೆಮಾತು’. ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಮುಂತಾದವು ಗಾದೆಗಳ ಕುರಿತಾಗಿ ಪ್ರಚಲಿತವಾಗಿರುವ ಗಾದೆಗಳು. ಅಂತಹುದೇ ಮತ್ತೊಂದು ಜನಪ್ರಿಯ ಗಾದೆ “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ”.
ಇದೇನಿದು? ಕಾಲಗರ್ಭದ ಮೊದಲ ಓದುಗಳ ಅಭಿಪ್ರಾಯವೇನೋ ತಿಳಿಯೋಣ ಎಂಬ ಕುತೂಹಲದಿಂದ ಓದಲು ಹೊರಟರೆ ಗಾದೆ ಮಾತುಗಳ ಕುರಿತಾದ ವ್ಯಾಖ್ಯಾನ ಇರುವಂತಿದೆಯಲ್ಲಾ ಅನ್ನಿಸಿತೇ? ಇಲ್ಲ ; ಇದು ಸಂದರ್ಭೋಚಿತವೇ ಹೌದು ಎಂಬುದನ್ನು “ಕಾಲಗರ್ಭ” ಓದಿದ ನಂತರ ನೀವೂ ಒಪ್ಪುತ್ತೀರಿ. ನಲವತ್ತಕ್ಕೂ ಮೀರಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪುಸ್ತಕಗಳನ್ನು ರಚಿಸಿ ಪ್ರಕಟಿಸಿರುವ ಪ್ರೌಢ ಲೇಖಕಿ ಶ್ರೀಮತಿ ಬಿ.ಆರ್.ನಾಗರತ್ನ ಅವರು ಕಾಲಗರ್ಭ ಕೃತಿಯನ್ನು ನನಗೆ ತಲುಪಿಸಿದಾಗ ಮೂಡಿದ ಮೊದಲ ಭಾವವೇ ಹೆಸರು ನಿಗೂಢವಾಗಿದೆಯಲ್ಲಾ ! ಒಳಗಿನ ಹೂರಣ ಏನಿರಬಹುದು? ಎಂಬ ಕೌತುಕ. ಓದಲು ಪ್ರಾರಂಭಿಸಿದ ಕೂಡಲೇ ಅತ್ಯಂತ ಕುತೂಹಲವನ್ನು ಮನದಲ್ಲಿ ಹುಟ್ಟುಹಾಕಿ ಮುಂದೆ ಬಿಡದಂತೆ ಓದಿಸಿಕೊಂಡು ಹೋಗುವ ಪರಿಯಲ್ಲಿ ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪಳಗಿದ ಲೇಖನಿ ಯಶಸ್ವಿಯಾಗಿದೆ ಎಂಬುದು ನನ್ನ ಪ್ರಾಥಮಿಕ ಅನಿಸಿಕೆ. ಕಾದಂಬರಿಯ ಪ್ರಧಾನ ಪಾತ್ರಗಳಾದ ನಾಯಕಿ ಮಾದೇವಿ, ನಾಯಕ ಮಹೇಶರ ಸುತ್ತ ಸುತ್ತುವ ಕಥೆ ಇದಾದರೂ ಅವರುಗಳ ಮನೆಯ ಹಿರಿಯರುಗಳ ಸುಸಂಸ್ಕೃತ ನಡವಳಿಕೆಗಳು, ಒಂದು ಮಾದರಿ ಕುಟುಂಬದ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಸಫಲವಾಗಿದೆ.
ಯಾವುದೇ ರೀತಿಯ ಬಿನ್ನಾಭಿಪ್ರಾಯಗಳಿರದ ಸಹೃದಯಿ ಎರಡು ಕುಟುಂಬಗಳು ವಯಸ್ಸಿನ ಅಂತರ ತುಸು ಹೆಚ್ಚೇ ಅನ್ನಿಸುವಂತಿದ್ದರೂ ಹುಡುಗ ಹುಡುಗಿ ಒಪ್ಪಿದರೆ ಯಾಕಾಗಬಾರದು ಎಂದು ಯೋಚಿಸಿ ಪ್ರಸ್ತಾಪವನ್ನು ಮುಂದಿಟ್ಟಾಗ ಅವರುಗಳ ಮನದಲ್ಲೂ ಸುಮಧುರ ಭಾವನೆಗಳು ಸ್ಫುರಿಸಿ ಎಲ್ಲ ರೀತಿಯಲ್ಲೂ ‘ಪರಿಪೂರ್ಣ’ ಎನ್ನಿಸುವಂತಹ ವಾತಾವರಣ ನಿರ್ಮಾಣವಾಗಿ ಎರಡೂ ಕುಟುಂಬಗಳೂ ಧಾಂ..ಧೂಂ..ಎಂದು ಮದುವೆ ಕಾರ್ಯ ನೆರವೇರಿಸಿದಾಗ ‘ರಾಜ ರಾಣಿ ಮದುವೆಯಾಗಿ ಸುಖವಾಗಿದ್ದರು’ ಎಂಬ ಬಾಲ್ಯದಲ್ಲಿ ಕೇಳಿದ ಕಥೆಗಳಂತೆ ಮುಕ್ತಾಯವಾಯಿತಲ್ಲಾ ಇನ್ನೇನು? ಅನ್ನುವಷ್ಟರಲ್ಲಿ ಪ್ರಾರಂಭವಾಗುತ್ತದೆ ಇಬ್ಬರ ಮನದಲ್ಲೂ ಮೂಡುವ ಮಾನಸಿಕ ತುಮುಲಗಳು. ಸಂಸ್ಕಾರವಂತ ಕುಟುಂಬಗಳಿಂದ ಬಂದ ನಾಯಕ, ನಾಯಕಿ ಇಬ್ಬರೂ ವಿದ್ಯಾವಂತರಾಗಿದ್ದೂ ಬಂದೊದಗಿದ ತೊಂದರೆಯನ್ನು ಮುಕ್ತ ಮನಸ್ಸಿನಿಂದ ಚರ್ಚಿಸಿ ಪರಿಹಾರ ಕಂಡುಕೊಳ್ಳದೇ ದುರಂತವನ್ನಪ್ಪುವುದೇ ಅತ್ಯಂತ ನೋವಿನ ಸಂಗತಿ. ಹಾಗಾಗಿಯೇ ನಾನು ಮೊದಲಲ್ಲೇ ಹೇಳಿದ್ದು “ಮಾತು ಬಲ್ಲವನಿಗೆ ಜಗಳವಿಲ್ಲ” ಎಂದು. ಇನ್ನು ನಾನು ಅದನ್ನು ಕುರಿತು ಹೆಚ್ಚೇನೂ ಹೇಳುವುದಿಲ್ಲ. ಕೈಯಲ್ಲಿ ಪುಸ್ತಕವಿದೆ. ಓದಿ ಅನುಭವಿಸುವುದೇ ಸುಖದ ಕ್ರಿಯೆ,
ಎರಡು ಕ್ರಷಿ ಕುಟುಂಬಗಳ ಚಿತ್ರಣ, ಅವುಗಳ ಸಮೃದ್ಧತೆ, ಸದಸ್ಯರುಗಳ ಸಜ್ಜನಿಕೆಯ ಅಂತಃಕರಣವನ್ನು ಅತ್ಯಂತ ಸಹಜ ಎನ್ನಿಸುವ ರೀತಿಯಲ್ಲಿ ಕಟ್ಟಿಕೊಟ್ಟಿರುವ ಶ್ರಿಮತಿ ಬಿ.ಆರ್.ನಾಗರತ್ನ ಅವರು ಕಾದಂಬರಿ ಎಲ್ಲೂ ತನ್ನ ಓಘದಲ್ಲಿ ಎಡವದಂತೆ, ತೊಡರದಂತೆ ನೋಡಿಕೊಂಡಿದ್ದಾರೆ. ಪಾತ್ರಗಳ ಸಹಜ ನಡವಳಿಕೆಗಳು ವಾಸ್ತವಕ್ಕೆ ಹತ್ತಿರ ಎನ್ನಿಸುತ್ತಾ ಆಪ್ತವಾಗುತ್ತಾ ಹೋಗುತ್ತದೆ. ಎಲ್ಲೂ ಹೆಚ್ಚು ಎನ್ನಿಸುವಷ್ಟು ವಿವರಣೆಗಳು ಇಲ್ಲದೇ, ವಿವರಿಸುವಲ್ಲಿ ಚುಟುಕುಗೊಳ್ಳದೇ ಮುಂದೆ ಸಾಗಿದೆ ಕಾದಂಬರಿ.
ಕೆಲವೊಮ್ಮೆ ವ್ಯಕ್ತಿಗಳು ಎಷ್ಟೇ ಸುಸಂಸ್ಕೃತರೂ, ವಿದ್ಯಾವಂತರೂ ಆದರೂ ತಮ್ಮೊಳಗಿನ ಅಹಂ ಅಥವಾ ಬಂದದ್ದನ್ನು ಎದುರಿಸಿ ನಿವಾರಿಸಿಕೊಳ್ಳುವ ಮನಃಶ್ಶಕ್ತಿ ಇಲ್ಲದೆ ಪಲಾಯನವನ್ನೋ, ವಿಳಂಬಗತಿಯ ಸೂತ್ರವನ್ನೋ ಅನುಸರಿಸಿ ತಾವೂ ನೋವನ್ನುಂಡು ತಮ್ಮವರೂ ನೋಯುವಂತೆ ಮಾಡುತ್ತಾರೆ ಎನ್ನುವ ಮಾನವ ಸಹಜ ದೌರ್ಬಲ್ಯಗಳ ಚಿತ್ರಣ ಪರಿಣಾಮಕಾರಿಯಾಗಿ ಕಾದಂಬರಿಯಲ್ಲಿ ಬಿಂಬಿತವಾಗಿದೆ. ಗಂಡ ಹೆಂಡತಿ ಮಿಕ್ಕೆಲ್ಲ ವಿಷಯಗಳಲ್ಲಿಯೂ ಅನುರೂಪ ಎನ್ನಿಸುವಷ್ಟರ ಮಟ್ಟಿಗೆ ಒಬ್ಬರು ಇನ್ನೊಬ್ಬರ ಏಳಿಗೆಗೆ, ಯಶಸ್ಸಿಗೆ ಒತ್ತಾಸೆಯಾಗಿ ನಿಂತು ಸಹಕರಿಸುವ ಸಹೃದಯವಂತರಾದರೂ ವೈಯಕ್ತಿಕ ಬದುಕಿನ ಸಿಕ್ಕನ್ನು ಬಗೆಹರಿಸಿಕೊಳ್ಳುವಲ್ಲಿ ಎಡವಿದ್ದೇ ದುರಂತ. ಹಾಗೆ ನೋಡಲು ಹೋದರೆ ಮಹೇಶನಲ್ಲಿ ಯಾವುದೇ ದೈಹಿಕ ನ್ಯೂನತೆಗಳು ಕಂಡುಬರದಿದ್ದರೂ ಮನಸ್ಸಿನ ಮೇಲೆ ಉಂಟಾಗಿದ್ದ ದುಷ್ಪರಿಣಾಮವನ್ನು ಸಕಾಲದಲ್ಲಿಯೇ ನಿವಾರಿಸಿಕೊಳ್ಳಲು ಪ್ರಯತ್ನಿಸದಿದ್ದುದು, ಎರಡೂ ಕುಟುಂಬಗಳ ನೆಮ್ಮದಿಯನ್ನೇ ಹಾಳುಗೆಡವಿದಂತಾದುದು ವಿಷಾದಕರವೇ ಹೌದು. ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯತೆ ಇರುವ ಇಂದಿನ ಮುಂದುವರೆದ ದಿನಗಳಲ್ಲೂ ಮುಕ್ತವಾಗಿ ಚರ್ಚಿಸದೆ ಅನುಭವಿಸುವ ಅಪಾರವಾದ ನಿರಾಶೆಯನ್ನು ಕಂಡಾಗ ನಾಯಕಿ ಮಾದೇವಿ ಓದುಗರ ಅನುಕಂಪಕ್ಕೆ, ನಾಯಕ ಮಹೇಶ ಕ್ರೋಧಕ್ಕೆ ಪಾತ್ರರಾಗುತ್ತಾರೆ. ಅಂತ್ಯದಲ್ಲೂ ಮತ್ತದೇ ಅನುಭವದ ಗಾದೆಮಾತು “ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು” ಎಂಬಂತೆ ಸಹನೆಯ ಕಟ್ಟೆ ಒಡೆಯುತ್ತದೆ. ಪ್ರಕ್ಷುಬ್ಧಗೊಂಡಿರುವ ಮನಗಳು ಸರಿಯಾದ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗುತ್ತವೆ. ಇಂತಹ ಸಮಯದಲ್ಲಿ ಈಗಿನವರು ಯೋಚಿಸುವಂತೆ ನಾಯಕ ನಾಯಕಿಯರ ಮಧ್ಯೆ ಇದ್ದ ವಯಸ್ಸಿನ ಜಾಸ್ತಿ ಅಂತರವೂ ಮಾದೇವಿಯ ನಾಲಿಗೆಯನ್ನು ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತೇನೊ ಎಂಬ ಸಂಶಯವೂ ಒಮ್ಮೆ ಮನದಲ್ಲಿ ಮೂಡಿಬಿಡುತ್ತದೆ.
ಕಾದಂಬರಿಯುದ್ದಕ್ಕೂ ಸಂದರ್ಭೋಚಿತವಾದ ಚಂದದ ಗಾದೆಮಾತುಗಳು, ಕೃಷಿ ಕುಟುಂಬಗಳ ಅಚ್ಚುಕಟ್ಟಾದ ಚಿತ್ರಣ, ಶರಣರ ಸಜ್ಜನಿಕೆಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಕಾದಂಬರಿಯನ್ನು ಓದಿ ಮುಗಿಸಿದಾಗ ಮನಸ್ಸು ಆರ್ದ್ರಗೊಂಡಿದ್ದು ಜೀವನದಲ್ಲಿ ಸಂವಹನ ಕ್ರಿಯೆಯ ಮಹತ್ವವನ್ನು ಮನದಟ್ಟು ಮಾಡುತ್ತದೆ. ಮಾತನಾಡುವ ಅಗತ್ಯವಿದ್ದಲ್ಲಿ ವಿಳಂಬ ಮಾಡದೆ ಮಾತನಾಡಲೇಬೇಕು ಎಂಬ ಸಂದೇಶವನ್ನು ಹೊತ್ತು ನಿಂತಿರುವ “ಕಾಲಗರ್ಭ” ಮನವನ್ನು ಮುಟ್ಟಿದ ಪುಸ್ತಕಗಳ ಸಾಲಿನಲ್ಲಿ ಸೇರಿಬಿಟ್ಟಿತು.
-ಪದ್ಮಾ ಆನಂದ್, ಮೈಸೂರು.
ಪ್ರಕಟಿಸಿದ “ಸುರಹೊನ್ನೆ”ಗೆ ಧನ್ಯವಾದಗಳು.
ಶ್ರೀಮತಿ ಬಿ.ಆರ್.ನಾಗರತ್ನ ಅವರ ‘ಕಾಲಗರ್ಭ’ ಕಾದಂಬರಿಯ ಸಾರಾಂಶವನ್ನು ಸೊಗಸಾಗಿ ಸೆರೆ ಹಿಡಿದಿದ್ದೀರಿ. ಚೆಂದದ ಬರಹ.
ಪ್ರತಿಕ್ರಿಯೆಗಾಗಿ ಧನ್ಯವಾದಗಳು,
ನಾನು ಬರೆದು ಸುರಹೊನ್ನೆಯಲ್ಲಿ ಧಾರಾವಾಹಿಯರೂಪದಲ್ಲಿ ಪ್ರಕಟಿಸಿದ ಕಾಲ ಗರ್ಭ ಕಾದಂಬರಿ ಯನ್ನು ಓದಿ ಅದನ್ನು ವಿಶ್ಲೇಷಣೆ ಮಾಡಿ…ಮುಂದಿನ ಬರೆವಣಿಗೆಗೆ ಬೆನ್ನು ತಟ್ಟಿ..ಪ್ರೋತ್ಸಾಹ ನೀಡುರುವ ಲೇಖಕಿ.. ಹಾಗೂ ನನಗೆ ಆತ್ಮೀಯ ಗೆಳತಿಯೂ ಆಗಿರುವ ಪದ್ಮಾ ಆನಂದ್ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು.
ಅಷ್ಟು ಚಂದದ ಕಾದಂಬರಿಯನ್ನು ಓದಿದ ನಂತರ ಮನದಲ್ಲಿ ಮೂಡಿದ ಭಾವನೆಗಳಿಗೆ ನೀಡಿದ ಅಕ್ಷರ ರೂಪ, ನಿಮಗೆ ಇಷ್ಟವಾದುದು ನನಗೆ ಸಂತಸವನ್ನು ತಂದಿದರ.
ಬಹಳ ಚೆನ್ನಾಗಿ ಕಾಲಗರ್ಭ ಕಾದಂಬರಿಯ ಕುರಿತು ಹೇಳಿದ್ದೀರಿ ಮೇಡಂ. ನನಗೂ ಬಹಳ ಇಷ್ಟ ಆಗಿದೆ ಆ ಕಾದಂಬರಿ.
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗಾಗಿ.
ಮನಮುಟ್ಟುವಂತಹ ಸಮರ್ಥ ಕಥಾ ನಿರೂಪಣೆಯಿಂದ ಓದುಗರ ಮನಸೆಳೆದ ಕಾದಂಬರಿ,ಕಾಲಗರ್ಭದ ವಿಮರ್ಶಾತ್ಮಕ ಅನಿಸಿಕೆಯನ್ನು ಹಂಚಿಕೊಂಡ ಪದ್ಮಾ ಅನಂದ್ ಮೇಡಂ ಅವರಿಗೆ ಧನ್ಯವಾದಗಳು.
ಸಹೃದಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು