ಕಾದಂಬರಿ : ಕಾಲಗರ್ಭ – ಚರಣ 23
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮಗ ಶಂಕರ, ಸೊಸೆ ಶಾರದೆಗೆ ಬಸಮ್ಮನವರ ಈ ವರ್ತನೆ ಅಚ್ಚರಿಯನ್ನುಂಟುಮಾಡಿತು. ಕಣ್ಣುಕಣ್ಣು ಬಿಡುತ್ತಾ ಒಬ್ಬರನ್ನೊಬ್ಬರು ನೋಡಿಕೊಂಡರು. ಅವರನ್ನು ನೋಡುತ್ತಿದ್ದ ಗೌರಮ್ಮನವರು ಗಂಡಹೆಂಡತಿಯೆಂದರೆ ಹೀಗಿರಬೇಕು. ಎಲ್ಲರಿಗೂ ಉದಾಹರಣೆಯಾಗುವಂತೆ ಬಾಳಿದವರು. ಇಂದು ತಮ್ಮ ಸಂಗಾತಿಯನ್ನು ಕಳೆದುಕೊಂಡು ಹೀಗೆ ವೈರಾಗ್ಯದ ಮಾತು. ಮಿಕ್ಕವರು ಧೃತಿಗೆಟ್ಟಾರೆಂದೇ. ಏನೋ ಎಲ್ಲವೂ ಅಯೋಮಯವಾಗಿದೆ. ಬೆಳಗ್ಗೆ ನೋಡಿದರೆ ತಮ್ಮ ಗೆಳೆಯನ ಜೊತೆ ಬಂದವರು ಹೀಗೆ. ಎಂದು ಮನದಲ್ಲೆ ಚಿಂತಿಸಿದರು. ನಂತರ ತಮ್ಮವರನ್ನುದ್ದೇಶಿಸಿ “ಏಳಿ ಗೆಳೆಯನ ಪಕ್ಕಬಿಟ್ಟು ಎದ್ದೇಳಿ, ಹುಡುಗರ ಜೊತೆಗೂಡಿ ಮುಂದಿನ ಸಿದ್ಧತೆಗೆ ಕೈಜೋಡಿಸಿ” ಎಂದು ಹೇಳಿದರು. ಶಂಕರಪ್ಪ ನಿನ್ನ ಒಡಹುಟ್ಟಿದವರು ಮತ್ತು ಸುಬ್ಬುವಿನ ಮನೆಕಡೆಯ ನಮ್ಮ ಕುಟುಂಬದವರಿಗೆಲ್ಲ ಸುದ್ಧಿ ತಿಳಿಸಿದ್ದೇನೆ.” ಎಂದು ಎಲ್ಲರನ್ನೂ ಮಾಡಬೇಕಾದ ಕರ್ತವ್ಯದ ಕಡೆ ಗಮನ ಹರಿಸಲು ಸೂಚಿಸಿದರು.
ಎರಡೂ ಕುಟುಂಬದವರೊಡನೆ ಊರಿನ ಜನರಲ್ಲದೆ, ನೆರೆಯೂರಿನ ಪರಿಚಿತರೆಲ್ಲ ಬಂದು ಸೇರಿದರು. ಎಲ್ಲರ ಬಾಯಲ್ಲು ಒಂದೇ ಮಾತು ‘ಚೆನ್ನಾಗಿಯೇ ಇದ್ದರಲ್ಲ. ಹಠಾತ್ತನೆ ಏನಾಯ್ತು?’ ಅದಕ್ಕೆ ವೈದ್ಯರು ಕೊಟ್ಟ ಉತ್ತರವೇ ಹೃದಯಾಘಾತ. ನಿಜಾಂಶ ಮಹೇಶ ದೇವಿಯರನ್ನು ಹೊರತುಪಡಿಸಿ ಯಾರಿಗೂ ಗೊತ್ತಾಗಲಿಲ್ಲ. ಅದರ ಸಾಧ್ಯತೆಯೂ ಇರಲಿಲ್ಲ. ಅಯ್ಯೋ ಒಳಗೆ ಬರುವಾಗ ಮುಂಬಾಗಿಲನ್ನು ಹಾಕದೇ ಬಂದಿದ್ದೆನಲ್ಲಾ ಎಂಬ ಅಳಲು ದೇವಿಯ ಮನದಲ್ಲಿ ಹೊಯ್ದಾಟವಾಡಿದರೆ ಅಷ್ಟೊಂದು ಆಕ್ರೋಷ ತೋರಿಸುವ ಆವಶ್ಯಕತೆಯೇನಿತ್ತು. ಇದನ್ನು ಮನೆಯಲ್ಲೆ ಮಾತನಾಡಬಹುದಿತ್ತಲ್ಲ. ತನ್ನ ದೌರ್ಬಲ್ಯವನ್ನು ಒಪ್ಪಿಕೊಳ್ಳದ ಮಹೇಶನ ಉದ್ಧಟತನ. ಹೊರಗಡೆ ತೋರ್ಪಡಿಸಿಕೊಳ್ಳಲಾಗದೆ ಅಲ್ಲಿ ನಡೆಯುತ್ತಿರುವ ಕಾರ್ಯದಲ್ಲಿ ಭಾಗಿಯಾಗಿದ್ದರು.
ಗುರುಗಳು ಸಂಪ್ರದಾಯದಂತೆ ನೀಲಕಂಠಪ್ಪನವರನ್ನು ಸಂಸ್ಕಾರಕ್ಕೆ ಸಿದ್ಧಗೊಳಿಸಿದರು. ಧ್ಯಾನದಲ್ಲಿ ಕುಳಿತಿರುವರೇನೋ ಎಂಬ ಭಂಗಿಯಲ್ಲಿ ಕೂಡಿಸಿದ್ದರು. ನೋಡುತ್ತಿದ್ದವರೆಲ್ಲ ಇನ್ನು ಕೆಲವೇ ಕ್ಷಣದಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಾರೆಂದು ಕೊನೆಯದಾಗಿ ಕಣ್ತುಂಬಿಸಿಕೊಳ್ಳುತ್ತಾ ಅವರಿಗೆ ಪೂಜೆಗೈದರು. ಮುಂದಿನ ಕ್ರಿಯೆಯೆಲ್ಲ ಶಾಸ್ತ್ರೋಕ್ತವಾಗಿ ನಡೆಯಿತು.
ಭಾರವಾದ ಮನಸ್ಸು ಮತ್ತು ಹೃದಯದಿಂದ ಎಲ್ಲರೂ ಮನೆಗೆ ತಲುಪಿದರು. ಗೌರಮ್ಮನವರ ಆದೇಶದಂತೆ ಕೆಲವು ಹೆಣ್ಣುಮಕ್ಕಳ ನೆರವಿನಿಂದ ಎರಡೂ ಮನೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸಲಾಯಿತು. ದೀಪವನ್ನು ಹಚ್ಚಿಟ್ಟು ಹುಳಿಯನ್ನವನ್ನು ಸಿದ್ಧಪಡಿಸಿದಳು ಮಂಗಳಮ್ಮ. ಎಲ್ಲರೂ ಶಾಸ್ತ್ರಕ್ಕೆ ಸೇರಿದಷ್ಟು ತಿಂದು ಮಲಗಿದರು.
ಬೆಳಗಿನಿಂದ ಇಬ್ಬರು ಮೊಮ್ಮಕ್ಕಳನ್ನು ಬಿಡದಂತೆ ತಮ್ಮೊಡನೆ ಇರಿಸಿಕೊಂಡಿದ್ದ ಬಸಮ್ಮನವರು ಈಗಲೂ ತಮ್ಮೊಡನೆಯೇ ರೂಮಿನಲ್ಲಿ ಮಲಗಿಸಿಕೊಂಡರು. ಹಿಂದಿನ ದಿನ ಕೇಳಿದ ಸಿಹಿಸುದ್ಧಿಯ ನಂತರ ಪೇಚಾಡಿಕೊಂಡ ಪತಿ ತೋಟದ ಮನೆಯಲ್ಲಿ ಮಾರನೆಯ ದಿನವೇ ಕೊನೆಯುಸಿರೆಳೆದ ರೀತಿ ಎಲ್ಲವೂ ಕಣ್ಮುಂದೆ ಬಂದಂತಾಯಿತು. ಅಲ್ಲಿಯವರೆಗೆ ತಡೆಹಿಡಿದಿದ್ದ ದುಃಖ ಸಶಬ್ಧವಾಗಿ ಕಣ್ಣೀರ ರೂಪದಲ್ಲಿ ಹೊರಬಂತು ಬಿಕ್ಕಳಿಸಿದರು ಬಸಮ್ಮ.
ತಿಥಿಯ ಕಾರ್ಯ ಮುಗಿಯುವವರೆಗೂ ಎರಡೂ ಮನೆಯ ಮಕ್ಕಳು, ಹತ್ತಿರದ ಬಂಧುಗಳು ಅಲ್ಲಿದ್ದು ನಂತರ ತಮ್ಮೂರುಗಳಿಗೆ ತೆರಳಿದರು. ಆ ಸಂದರ್ಭದಲ್ಲಿಯೂ ಮಹೇಶನ ಸೋದರಿಯರು ನಂಜಿನ ನಾಲಗೆಯಿಂದ “ಸುಬ್ಬಣ್ಣನ ಹೆಂಡತಿ ಚಂದ್ರಿಕಾಳ ಬಸಿರಿನ ಬಗ್ಗೆ ಸುದ್ಧಿಕೇಳೇ ನೀಲಕಂಠಮಾಮ ಎದೆಯೊಡೆದು ಹೋದರೂಂತ ಕಾಣುತ್ತೆ. ಈಮನೆಯ ಇನ್ನೊಬ್ಬ ಸೊಸೆ ದೇವಿ ಅವರ ಮುದ್ದಿನ ಮೊಮ್ಮಗಳಲ್ಲವೇ?” ಎಂದು ಕಟಕಿಯಾಡದೆ ಬಿಡಲಿಲ್ಲ. ಈ ಮಾತುಗಳು ಗೌರಮ್ಮನವರ ಕಿವಿಗೆ ಬಿದ್ದರೂ ಎಲ್ಲರೆದುರಿಗೆ ಪಂಚಾಯಿತಿ ಬೇಡವೆಂದು ಹಲ್ಲುಕಚ್ಚಿಕೊಂಡು ಇದ್ದುಬಿಟ್ಟರು. ಅವರೆಲ್ಲರೂ ಹೊರಟುಹೋದ ಮೇಲೆ ಸೊಸೆಯನ್ನು ಕೂಡಿಸಿಕೊಂಡು “ತಪ್ಪು ತಿಳಿಯಬೇಡ ನನ್ನವ್ವಾ, ಅವರು ನಾನೇ ಹೆತ್ತ ಮಕ್ಕಳು ನಿಜ. ಆದರೆ ಅವರನ್ನು ತಿದ್ದಲು ಕಾಲ ಮೀರಿಹೋಗಿದೆ. ಹೀನಸುಳಿ ಬೋಳಿಸಿದರೂ ಹೋಗದು ಎಂಬಂತೆ ಅವರ ಬುದ್ಧಿ, ಸ್ವಭಾವ ಆಗಿಹೋಗಿದೆ. ನೊಂದುಕೋಬೇಡ. ಎರಡು ಜೀವ ಹೊತ್ತವಳು ಕಣ್ಣೀರು ಹಾಕಬಾರದು.” ಎಂದು ಸಾಂತ್ವನ ಹೇಳಿದರು. ಮನಸ್ಸಿನಲ್ಲಿ ಏನೋ ನಿರ್ಧರಿಸಿಕೊಂಡರು. ಅದರಂತೆ ಮಗ, ಸೊಸೆ, ಗಂಡ, ಮಂಗಳಮ್ಮ, ಸುಬ್ಬು ಎಲ್ಲರೊಡನೆ ಚರ್ಚಿಸಿ ಒಮ್ಮತದ ಅಬಿಪ್ರಾಯದ ಮೇರೆಗೆ ಚಂದ್ರಕಾಳ ಹೆತ್ತವರನ್ನು ತಮ್ಮಲ್ಲಿಗೆ ಬರಮಾಡಿಕೊಂಡರು.
ಅವರಿಗೆ “ನಾನು ಹೇಳುವುದನ್ನು ಕೇಳಿ, ನೀಲಕಂಠಪ್ಪನವರು ಹೋದಾಗಿನಿಂದ ಎರಡೂ ಮನೆಗಳಲ್ಲಿ ಚೈತನ್ಯವೇ ಉಡುಗಿಹೋದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನನ್ನ ಸೊಸೆ ಚಂದ್ರಿಕಾ ಇಲ್ಲಿರುವುದು ಬೇಡ. ಅದಕ್ಕಾಗಿ ಇವಳನ್ನು ನಿಮ್ಮ ಸುಪರ್ದಿಗೆ ಒಪ್ಪಿಸುತ್ತಿದ್ದೇನೆ. ಹೆರಿಗೆ ಸುಸೂತ್ರವಾಗಿ ಆದಮೇಲೆ ಅವಳನ್ನು, ಮಗುವನ್ನು ಕರೆತರುವಿರಂತೆ. ಬೇಡ..ನಾವೇ ಬಂದು ಕರೆದುಕೊಂಡು ಬರುತ್ತೇವೆ. ಅಲ್ಲಿಯವರೆಗೆ ಅವಳ ಸಂಪೂರ್ಣ ಜವಾಬ್ದಾರಿ ನಿಮ್ಮದು. ಆಗಿಂದಾಗ್ಗೆ ಬಂದು ಹೋಗುತ್ತಿರುತ್ತೇವೆ. ತಪ್ಪು ತಿಳಿಯಬೇಡಿ” ಎಂದು ವಿನಯಪೂರ್ವಕವಾಗಿ ಕೇಳಿಕೊಂಡರು.
“ಛೇ..ಛೇ ನೀವು ಅಷ್ಟೊಂದು ಕೇಳಿಕೊಳ್ಳುವ ಆವಶ್ಯಕತೆಯಿಲ್ಲ ಬಿಡಿ, ನಮ್ಮ ಮನಸ್ಸಿನಲ್ಲೂ ಈ ವಿಚಾರ ಬಂದಿತ್ತು ಆದರೆ ನೀವೇನೆಂದುಕೊಳ್ಳುತ್ತೀರೋ ಅಂತ ಬಾಯಿಬಿಡಲಿಲ್ಲ. ಅನ್ಯಥಾ ಭಾವಿಸಬೇಡಿ. ನಮ್ಮ ತಂದೆಯವರು ಇದ್ದಿದ್ದರೆ ಬೇರೆಯೇ ಮಾತಾಗಿರುತ್ತಿತ್ತು.” ಎಂದಳು ಕಾತ್ಯಾಯಿನಿ. ಜಗದೀಶನೂ ತಲೆಯಾಡಿಸಿದ.
ಬೇರೇನೂ ಯೋಚಿಸದೆ ಹೋಗಿ ಬಾ ಚಂದ್ರಾ ತಾಯಿಯಾಗುವ ಈ ಸಂದರ್ಭದಲ್ಲಿ ಕೂಸಿನ ಆರೋಗ್ಯ ಬಹಳ ಮುಖ್ಯ. ದೇವರು ಕರುಣಿಸಿದ್ದಾನೆ ಸಂದರ್ಭವನ್ನು ಕಳೆದುಕೊಳ್ಳಬೇಡ.” ಎಂದಳು ದೇವಿ. ಅವಳ ಮಾತಿಗೆ ಅಲ್ಲಿದ್ದವರೆಲ್ಲ ಹೂಗುಟ್ಟಿದರು. ಮಹೇಶ ಮಾತ್ರ ಮಾತುಬಾರದ ಮೂಕನಂತೆ ನಿಂತಿದ್ದ. ಪರೋಕ್ಷವಾಗಿ ದೇವಿ ತನ್ನನ್ನು ಉದ್ದೇಶಿಸಿಯೇ ಇದನ್ನು ಮೂದಲಿಸುವಂತೆ ಆಡಿದ್ದಾಳೆಂದು ತಿಳಿದ. ಮೈಮೇಲೆ ಭೂತ ಹೊಕ್ಕವಳಂತೆ ಆಡುತ್ತಿದ್ದಾಳೆ. ಇದಕ್ಕೊಂದು ಕೊನೆ ಹಾಡಲೇಬೇಕು ಎಂದುಕೊಂಡು ಆ ಜಾಗದಿಂದ ನಿರ್ಗಮಿಸಿದ.
ಕಾಲ ಸರಿದಂತೆ ಎಲ್ಲರೂ ತಮ್ಮತಮ್ಮ ಪಾಲಿನ ಕೆಲಸಗಳ ಕಡೆ ಗಮನ ಹರಿಸತೊಡಗಿದರು. ಅದಕ್ಕೆ ಮಾದೇವಿ ಮಹೇಶರೂ ಹೊರತಾಗಲಿಲ್ಲ. ಆದರೆ ಅವರಿಬ್ಬರ ವೈಯಕ್ತಿಕ ಬದುಕಿನಲ್ಲಿ ಭಾರೀ ಕಂದಕ ನಿರ್ಮಾಣವಾಯಿತು.
ದೇವಿಯ ಆರ್ಭಟದಿಂದಲೇ ಆ ಹಿರಿಯ ಜೀವಕ್ಕೆ ಕುತ್ತಾಯಿತೆಂಬ ನಿಲುವು ಮಹೇಶನದ್ದಾದರೆ, ಹೂಂ ಇನ್ನೆಷ್ಟು ದಿನ ನನ್ನ ದುಗುಡವನ್ನು ಅಂತರಂಗದಲ್ಲಿ ಬಚ್ಚಿಟ್ಟುಕೊಳ್ಳಲಿ. ಆದರೆ ಇದರ ಪರಿಣಾಮ ಜೀವವನ್ನು ಬಲಿ ತೆಗೆದುಕೊಳ್ಳುತ್ತದೆಂದು ಕಲ್ಪನೆಯೇ ಬರಲಿಲ್ಲ. ಒಂದೇಕ್ಷಣದ ಅಜಾಗರೂಕತೆಯಿಂದ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಯೋಚಿಸದೆ ದುಡುಕಿ ಮಾತನಾಡಿಬಿಟ್ಟೆನಲ್ಲಾ. ‘ಆತುರಗಾರನಿಗೆ ಬುದ್ಧಿಮಟ್ಟ’ ಎಂಬಂತಾಯಿತು. ಪರಿಣಾಮ ಎರಡೂ ಕುಟುಂಬಗಳ ಸೇತುವೆಯಾಗಿದ್ದ ನನ್ನಕ್ಕರೆಯ ತಾತನ ಆಹುತಿ. ಛೇ..ಹಾಗೆ ಆಗಲು ಅಸಹನೆಯಿಂದ ವರ್ತಿಸಲು ಕಾರಣ ಈ ಮಹೀ, ಸಮಯ..ಸಮಯಾವಕಾಶವಂತೆ ಇನ್ನೆಷ್ಟು ಸಮಯ..ಕೈಲಾಗದವ ಮೈಯೆಲ್ಲ ಪರಚಿಕೊಂಡನಂತೆ ಎಂಬಂತೆ ಏನಾಗಿದೆಯೆಂಬುದನ್ನು ವೈದ್ಯರಲ್ಲಿ ತೋರಿಸಿಕೊಳ್ಳಲು ಏನಡ್ಡಿ. ಈಗಲೂ ಗಟ್ಟಿಸಿ ಕೇಳಿ ವೈದ್ಯರ ಬಳಿಗೆ ಎಳೆದುಕೊಂಡು ಹೋಗೋಣವೆಂದರೆ ತಾತ ತೀರಿಹೋದಾಗಿನಿಂದ ಬಿಗಿದ ಮುಖಹೊತ್ತು ತಿರುಗಾಡುತ್ತಿದ್ದಾನೆ. ನೇರವಾಗಿ ನನ್ನನ್ನು ಎದುರಿಸಲಾಗದೆ ಹೇಡಿಯಂತೆ ನಡೆದುಕೊಳ್ಳುತ್ತಿದ್ದಾನೆ. ಇಂಥಹವರ ಹತ್ತಿರ ಏನು ಮಾತನಾಡುವುದು. ನಿಜ ಹೇಳಬೇಕಾದರೆ ನಾನವರ ಮೇಲೆ ಸಿಟ್ಟಿನಿಂದ ದುಮುಗುಟ್ಟುತ್ತಿರಬೇಕಾಗಿತ್ತು. ಎಲ್ಲವು ತಿರುವುಮುರುಗಾಗಿದೆ.
ಹೀಗೇ ಒಬ್ಬರಿಗೊಬ್ಬರು ತಮ್ಮದೇ ನಿಲುವಿಗೆ ಅಂಟಿಕೊಂಡಿದ್ದರಿಂದ ಒಂದೇ ಕೋಣೆಯಲ್ಲಿ, ಒಂದೇಕಡೆಯಲ್ಲಿ ಮಲಗಿದರೂ ಮೌನಕ್ಕೆ ದಾಸರಾಗಿದ್ದರು. ಬೇರೆಯವರಿಗೆ ನೋಡಿದರೂ ಏನೂ ಸುಳಿವು ಸಿಗದಂತೆ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದರು.
ಗೌರಮ್ಮನವರು ತಾವು ಮಾತು ಕೊಟ್ಟಂತೆ ಪತಿ, ದೇವಿ, ಮಂಗಳಾ, ಶಾರದೆ, ಮಹೇಶ ಯಾರಾದರೊಬ್ಬರನ್ನು ಜೊತೆಮಾಡಿಕೊಂಡು ಅಗಾಗ ಸೊಸೆಯನ್ನು ನೋಡಿಕೊಂಡು ಬರುತ್ತಿದ್ದರು. ಗೆಳತಿ ಬಸಮ್ಮನವರಿಗೆ ವರದಿ ಒಪ್ಪಿಸುತ್ತಿದ್ದರು.
ಸುಬ್ಬಣ್ಣನಂತೂ ತನ್ನ ದೊಡ್ಡಮ್ಮನ ಮುಂದಾಲೋಚನೆಗೆ ಮನಸ್ಸನಲ್ಲಿಯೆ ಕೃತಜ್ಞತೆ ಅರ್ಪಿಸಿದ್ದ. ಜೊತೆಗೆ ತಮಗೆ ಆಶ್ರಯ ಕೊಟ್ಟು ಮಗನಂತೆಯೇ ಕಾಣುತ್ತಿದ್ದ ಆ ಹಿರಿಯ ಜೀವಿಗಳಿಗೆ ಬೇಗನೆ ಆನಂದವಾಗುವಂತೆ ಅವರ ನಿಜವಾದ ವಾರಸುದಾರನು ತಂದೆಯಾಗುವಂತೆಮಾಡು ಭಗವಂತ ಎಂದು ಪ್ರಾರ್ಥಿಸುತ್ತಿದ್ದ. ಆ ಮನೆಗೆ ಸಂತೋಷವನ್ನು ಕರುಣಿಸಲಿ ಎಂದು ಬೇಡಿಕೊಳ್ಳುತ್ತಿದ್ದ.
ತವರಿನಲ್ಲಿ ತಂದೆತಾಯಿಯರ ಆರೈಕೆಯಲ್ಲಿ ಹಾಗೂ ಎರಡೂ ಮನೆಯವರ ಭರವಸೆಯ ನುಡಿಗಳಿಂದ ನವಚೈತನ್ಯ ಪಡೆಯುತ್ತಿದ್ದಳು ಚಂದ್ರಿಕಾ. ಒಮ್ಮೊಮ್ಮೆ ತಾತನವರ ನೆನಪಾಗಿ ಮನಸ್ಸು ಆರ್ದ್ರವಾಗುತ್ತಿತ್ತು. ಮರುಕ್ಷಣ ಕುಟುಂಬದ ನೆನಪಾಗಿ ತನ್ನೊಡಲಲ್ಲಿ ಬೆಳೆಯುತ್ತಿರುವ ಮಕ್ಕಳ ರಕ್ಷಣೆ ತನ್ನ ಕರ್ತವ್ಯವೆಂದು ಬೇರೆ ಆಲೋಚನೆಗಳನ್ನು ಪಕ್ಕಕ್ಕೆ ಸರಿಸಿದ್ದಳು. ವೈದ್ಯರು ಅವಳಿಗೆ ಅವಳಿ ಮಕ್ಕಳಾಗುವ ಸಂಭವವಿದೆಯೆಂದು ತಿಳಿಸಿದ್ದರು.
ನವಮಾಸಗಳು ತುಂಬಿ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿಗೆ ಜನ್ಮನೀಡಿದಳು ಚಂದ್ರಿಕಾ. ತನ್ನ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ತನ್ನ ಸೋದರಿಯಂತಿದ್ದ ಓರಗಿತ್ತಿಯೂ ಆಗಿದ್ದ ಚಂದ್ರಾಳ ಮಕ್ಕಳ ಆರೈಕೆಗೆ ಟೊಂಕಕಟ್ಟಿ ನಿಂತಳು ದೇವಿ. ಇದನ್ನು ನೋಡಿ ಅವಳ ಹೆತ್ತವರು ಮನದಲ್ಲೇ ಮರುಗಿದರೆ ಹಿರಿಯರು ಆ ಮಕ್ಕಳ ಕಾಲ್ಗುಣದಿಂದಲಾದರೂ ಬೇಗ ಆ ದೇವಿಗೂ ಶುಭಫಲ ಸಿಗುವಂತಾಗಲೆಂದು ಹಾರೈಸುತ್ತಿದ್ದರು.
ಮಕ್ಕಳಿಗೆ ಮೂರು ತಿಂಗಳು ತುಂಬುತ್ತಿದ್ದಂತೆ ಗೌರಮ್ಮನವರು ತಾಯಿ ಮಕ್ಕಳನ್ನು ತಮ್ಮ ಮನೆಗೆ ಕರೆಸಿಕೊಳ್ಳುವ ಆತುರ ತೋರಿದರು. ಚಂದ್ರಾಳ ಮಾತಾಪಿತೃಗಳು ಸರಳವಾಗಿ ನಾಮಕರಣ ಶಾಸ್ತç ಮುಗಿಸಿ ಮಕ್ಕಳಿಗೆ ದೇವಿಯ ಅಪೇಕ್ಷೆಯಂತೆ ‘ನಿರಂಜನ’, ‘ನಿವೇದಿತಾ’ ಎಂಬ ಹೆಸರಿಟ್ಟು ಕರೆದರು. ತಾಯಿ ಮಕ್ಕಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟರು.
ಅ ಎರಡು ಕುಡಿಗಳು ಎರಡೂ ಮನೆಯ ಕಣ್ಮಣಿಗಳಾಗಿ ಬೆಳೆಯುತ್ತಿದ್ದವು. ನೋಡಲು ರೂಪದಲ್ಲಿ ಒಬ್ಬೊಬ್ಬರ ಕಣ್ಣಿಗೆ ಒಂದೊAದು ರೀತಿಯಲ್ಲಿ ಕಾಣಿಸುತ್ತಿದ್ದರು. ದೇವಿಯ ತವರಿನವರಿಗೆ ಮಗ ನೀಲಕಂಠಪ್ಪನವರAತೆ ಕಾಣಿಸಿದರೆ ಈ ಮನೆಯಲ್ಲಿ ಚಂದ್ರಾಳ ಪ್ರತಿರೂಪವಾಗಿದ್ದಳು ಮಗಳು. ಹೇಗೇ ಕಾಣಿಸಲಿ ಮಕ್ಕಳು ಎರಡೂ ಮನೆಗಳಲ್ಲಿ ಲವಲವಿಕೆ ಮೂಡಿಸಿದ್ದವು.
ಪುಟ್ಟ ಮಕ್ಕಳು ತಮ್ಮಮ್ಮನಿಗಿಂತ ದೇವಿಯನ್ನೇ ಹೆಚ್ಚಾಗಿ ಹಚ್ಚಿಕೊಂಡಿದ್ದವು. ಅವಳೂ ಅಷ್ಟೆ ತನ್ನ ಕೆಲಸ ಕಾರ್ಯಗಳ ಮಧ್ಯೆ ಬಿಡುವು ಮಾಡಿಕೊಂಡು ಅವರುಗಳ ಜೊತೆ ಒಡನಾಟ ಬೆಳೆಸಿಕೊಂಡಿದ್ದಳು. ಮಹೇಶ ದೇವಿಯಷ್ಟು ಹಚ್ಚಿಕೊಳ್ಳದಿದ್ದರೂ ದೂರ ಸರಿದಿರಲಿಲ್ಲ.
ದೇವಿ ಮಹೇಶರು ಕೈಗೊಂಡಿದ್ದ ಕೆಲಸಗಳು ನಿರೀಕ್ಷೆಗೂ ಮೀರಿ ಹೆಸರು ಪಡೆಯುತ್ತಿದ್ದವು. ಆಕೆಯ ಹೋಂ ಪ್ರಾಡಕ್ಟ್÷್ಸ ಹೋಟೆಲುಗಳು, ಮೆಸ್ಸುಗಳು, ಹೊರಗಡೆಯ ಊರುಗಳಿಗೂ ಹೋಗುತ್ತಿದ್ದವು. ಮಹೇಶನ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆಗಳು ರೈತಾಪಿ ಜನರಲ್ಲಿ ಮೋಡಿ ಮಾಡಿಸಿದ್ದವು. ಹೊರಗಡೆಯಿಂದಲೂ ಆಹ್ವಾನಗಳು ಬರುತ್ತಿದ್ದವು. ಮೊದಮೊದಲು ನಿರಾಕರಿಸುತ್ತಿದ್ದವನು ಕ್ರಮೇಣ ಆಹ್ವಾನಗಳನ್ನು ಒಪ್ಪಿಕೊಂಡು ಹೋಗತೊಡಗಿದ. ಇದರಿಂದಾಗಿ ಹಲವು ಬಾರಿ ಹೆತ್ತವರೊಡನೆ ಮಾತಿನ ಚಕಮಕಿಗೂ ಕಾರಣವಾಯಿತು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅವನಲ್ಲಿ ಮೊದಲಿದ್ದ ಸೌಮ್ಯತೆ, ಹಿರಿಯರೊಡನೆ ಇದ್ದ ಗೌರವಗಳು ಸ್ವಲ್ಪ ಕಡಿಮೆಯಾದವೇನೋ ಅನ್ನಿಸುತ್ತಿತ್ತು. ಹಠ, ಸಿಟ್ಟು, ತನ್ನ ಮಾತನ್ನೇ ಕೇಳಬೇಕೆಂಬ ಧೋರಣೆ ಇಣುಕತೊಡಗಿತ್ತು. ದೇವಿಯಂತೂ ಅದು ತನಗೆ ಸಂಬಂಧಿಸಿದ್ದಲ್ಲವೆಂಬಂತೆ ಇದ್ದಳು. ಹೊರಗಿನವರಿಗೆ ಗಂಡ, ಹೆಂಡತಿ, ಒಳಗೆ ಪರಸ್ಪರ ಯಾವ ನಂಟನ್ನೂ ಬೆಳೆಸಿಕೊಳ್ಳದೆ ಎಲ್ಲಿದ್ದರೇನು? ಹೇಗಿದ್ದರೇನು? ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಳು.
ಚಂದ್ರಿಕಾಳಿಗೆ ತಾತನವರು ತೀರಿಹೋದಾಗಿನಿಂದ ಈ ಜೋಡಿಗಳು ಮೊದಲಿನಂತಿಲ್ಲ ಎಂದೆನ್ನಿಸುತ್ತಿತ್ತು. ಸುಬ್ಬುವಿನೊಡನೆ ಅಭಿಪ್ರಾಯವನ್ನು ಹಂಚಿಕೊAಡು ಪೇಚಾಡಿಕೊಳ್ಳುತ್ತಿದ್ದಳು. ಆಗ ಸುಬ್ಬುವೂ ಹೌದು ಚಂದ್ರಾ ನನಗೂ ಅಕ್ಕ, ಅಣ್ಣನ ನಡುವೆ ಏನೋ ತಾಳ ತಪ್ಪಿದೆ ಎನ್ನಿಸಿದೆ, ಆದರೇನು ಮಾಡೋಣ, ಅವರನ್ನು ಪ್ರಶ್ನೆ ಮಾಡಿ ಸಮಸ್ಯೆಯನ್ನು ಬಗೆಹರಿಸುವಷ್ಟು ದಾಷ್ಟಿಕತೆ ನಮಗಿಲ್ಲ. ನಮಗೆ ಅವರು ತೋರುವ ಪ್ರೀತಿ, ಕೊಟ್ಟಿರುವ ಸ್ಥಾನಮಾನ, ಇಟ್ಟಿರುವ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ ಅದನ್ನು ಮಾಡೋಣ. ದೊಡ್ಡಮ್ಮನವರು ಮನಸ್ಸಿನಲ್ಲೇ ಕೊರಗುತ್ತಿದ್ದಾರೆ. ದೊಡ್ಡಪ್ಪನವರಿಗೆ ತಮ್ಮ ಗೆಳೆಯನನ್ನು ಕಳೆದುಕೊಂಡು ಏಕಾಂಗಿಯಾಗಿಬಿಟ್ಟಿದ್ದಾರೆ. ಈ ವಯಸ್ಸಿನಲ್ಲಿಯೂ ಆಗಾಗ್ಗೆ ಜಮೀನಿನ ಕಡೆಗೆ ಬರುವಂತಾಗಿದೆ. ನನಗಂತೂ ಒಂದು ನಿಮಿಷವೂ ಪುರುಸೊತ್ತಿಲ್ಲ. ಯಾರೇನೇ ಹೇಳಲಿ ನೀನುಮಾತ್ರ ದೇವಿಯಕ್ಕನಿಗೆ ನೋವಾಗುವಂತೆ ನಡೆದುಕೊಳ್ಳಬೇಡ. ಆದಷ್ಟೂ ಬೇಗ ಇವರಿಬ್ಬರೂ ಮೊದಲಿನಂತಾಗುವAತೆ ದೇವರಲ್ಲಿ ಬೇಡಿಕೊಳ್ಳೋಣ. ಅಷ್ಟೇ ನಮ್ಮ ಕೈಯಲ್ಲ್ಲಾಗುವುದು. ಅವನ ಮಾತನ್ನು ಕೇಳಿ ಚಂದ್ರಿಕಾಗೂ ಅದೇ ಸರಿಯೆನ್ನಿಸಿ ತಾನೂ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಂಡಳು.
ಮನೆಯಲ್ಲಿ ದೊಡ್ಡವರ ವಿಚಾರವೇನೇ ಇರಲಿ ಮಕ್ಕಳು ಮಾತ್ರ ಎಲ್ಲರ ಅಕ್ಕರೆಯ ಗೊಂಬೆಗಳAತೆ ಬೆಳೆಯುತ್ತಿದ್ದರು. ಅವರ ವಯಸ್ಸಿಗೆ ಮೀರಿದ ಚುರುಕುತನ, ಬುದ್ಧವಂತಿಕೆಗಳಿAದ ಎಲ್ಲರ ಮನವನ್ನು ಗೆಲ್ಲುತ್ತಿದ್ದರು. ಊಟ, ಆಟ, ಪಾಠ ಎಲ್ಲಕ್ಕೂ ದೇವಿಯಮ್ಮನೇ ಬೇಕು, ಅವಳ ಹಿಂದೆಯೇ ಸುತ್ತಾಟ. ಹೀಗೆಯೇ ಮತ್ತೆರಡು ವರ್ಷಗಳೂ ಕಳೆದುಹೋದವು. ದೇವಿ ಮಹೇಶ ಜೋಡಿಯ ಕಡೆಯಿಂದ ಯಾವ ಶುಭಸುದ್ಧಿಯೂ ಬರಲಿಲ್ಲ.
ಆಗುಹೋಗುಗಳನ್ನು ಗಮನಿಸುತ್ತಿದ್ದ ಕುಟುಂಬದ ವೈದ್ಯರಾಗಿದ್ದ ಡಾ.ಚಂದ್ರಪ್ಪನವರು ದಂತಿಗಳೊಡನೆ ಮಾತನಾಡುವಾಗ ನೀವಿಬ್ಬರೂ ನಮ್ಮ ಕ್ಲಿನಿಕ್ಕಿಗೆ ಬನ್ನಿ, ಒಮ್ಮೆ ಪರೀಕ್ಷೆ ಮಾಡಿಸೋಣ ಎಂದು ಹೇಳಿದಾಗಲೆಲ್ಲ ಮಹೇಶ ತುಟಿ ಎರಡು ಮಾಡುತ್ತಿರಲಿಲ್ಲ. ಇದರಿಂದ ವೈದ್ಯರು ನಮ್ಮಲ್ಲಿ ಅವರಿಗೆ ನಂಬಿಕೆಯಿಲ್ಲದಿರಬಹುದು. ಅಥವಾ ಇಲ್ಲಿ ತೋರಿಸಿಕೊಂಡರೆ ಪರಿಚಯದವರಲ್ಲಿ ಗುಲ್ಲಾಗಬಹುದೆಂಬ ಅಭಿಪ್ರಾಯವಿರಬಹುದು. ಏಕೋ ನನ್ನ ಗೆಳೆಯ ಇತ್ತೀಚೆಗೆ ಬಹಳ ಬದಲಾಯಿಸಿದಂತೆ ತೋರುತ್ತಿದೆ. ಬೇರೆ ಕಡೆ ತೋರಿಸಿಕೊಳ್ಳುತ್ತಿರಬಹುದು. ಏನೇ ಆಗಲಿ ಅವರಿಗೆ ಒಳ್ಳೆಯದಾಗಲಿ ಎಂದು ತಮ್ಮ ಪ್ರಯತ್ನವನ್ನು ಕೈಬಿಟ್ಟರು ಡಾ,ಚಂದ್ರಪ್ಪ.
ಮಹೇಶನ ಸಹಪಾಠಿ, ಆತ್ಮೀಯ ಗೆಳೆಯ ಗಣಪತಿಯ ಮನೆಯಲ್ಲಿ ಕೂಡ ಇವರ ಬಗ್ಗೆ ಚರ್ಚೆಗಳಾಗುತ್ತಿದ್ದವು. ಒಮ್ಮೆ ಗಣಪತಿಯ ತಾಯಿ ಶಾಂತಮ್ಮನವರು “ಮಗಾ ನಿನ್ನ ಗೆಳೆಯನ ಸುತ್ತಾಟ ಬಹಳ ಹೆಚ್ಚಾದಂತೆ ಕಾಣುತ್ತಿದೆ ಅಲ್ಲವೇ? ಇಲ್ಲಿನ ಸುತ್ತಮುತ್ತಲ ಊರುಗಳಿಗೆ ಕಾರ್ಯಾಗಾರಗಳಿಗಾಗಿ ಬಂದಾಗಲೆಲ್ಲ ನಮ್ಮಲ್ಲಿಯೇ ಉಳಿದುಕೊಳ್ಳುತ್ತಾನಲ್ಲ ಅದಕ್ಕೇ ಕೇಳಿದೆ” ಎಂದರು.
ತಾಯಿಯ ಮಾತುಗಳನ್ನು ಕೇಳಿ ಗಣಪತಿ “ಹಾಗೇನಿಲ್ಲಮ್ಮ ಇಲ್ಲಿ ನೀವೇ ಹೇಳಿದಂತೆ ಕಾರ್ಯಾಗಾರಗಳು, ಸಲಹೆ , ಸೂಚನೆ ಕೊಡುವುದಕ್ಕಾಗಿ ಬರುತ್ತಿರುತ್ತಾನಲ್ಲಾ, ಹೀಗಾಗಿ ಇಲ್ಲಿಗೇ ಬರುತ್ತಾನೆ. ಏಕೆ ಇದರಿಂದ ನಿಮಗೇನಾದರೂ..”
“ಛೇ ಛೇ ಹಾಗೇನಿಲ್ಲಪ್ಪ ಮೊದಲೆಲ್ಲ ತಮ್ಮ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಲೇ ತಮ್ಮ ಜಮೀನಿನಲ್ಲೆ ಕಾರ್ಯಾಗಾರಗಳನ್ನು ನಡೆಸುತ್ತಿದ್ದ ಎಂದು ನೀನೇ ಹೇಳಿದ ನೆನಪು. ನಿನ್ನ ಗೆಳೆಯನ ಜೊತೆ ಮದುವೆಯಾದ ಇನ್ನೊಂದು ಜೋಡಿಗೆ ಮಕ್ಕಳಾಗಿವೆ ಎಂಬ ಸುದ್ಧಿಯೂ ನಿನ್ನಿಂದಲೇ ತಿಳಿದದ್ದು. ಇವನಿಗೂ ಮದುವೆಯಾಗಿ ಐದಾರು ವರ್ಷಗಳಾಗಿವೆಯಲ್ಲವೇ? ಇವನ ಕಡೆಯಿಂದ ಏನೂ ಸಿಹಿಸುದ್ಧಿ ಬಂದಿಲ್ಲವಲ್ಲಾ. ಯಾಕೆ ಏನಾದರೂ ದೈಹಿಕ ದೋಷವೇ? ಈಗಂತೂ ಎಷ್ಟೊಂದು ಅನುಕೂಲತೆಗಳು ಬಂದಿವೆ. ತೋರಿಸಿಕೊಳ್ಳಬಾರದೇ? ಅವನ ಜಾತಕ ತರಿಸಿ ಅದರಲ್ಲೇನಾದರೂ ಗ್ರಹಗತಿಗಳ ಕಾಟವಿದ್ದರೆ ದೋಷಪರಿಹಾರ ಮಾಡಿಕೊಡು ಪಾಪ. ಅವನ ಹೆಂಡತಿ ಎಷ್ಟು ಮುದ್ದಾದ ಹೆಣ್ಣುಮಗು. ಸೌಮ್ಯಸ್ವಬಾವದವಳು. ಮತ್ತೊಮ್ಮೆ ನಮ್ಮ ಮನೆಗೆ ಬರಲೇ ಇಲ್ಲ. ನಿನ್ನ ಗೆಳೆಯ ಬಂದಾಗ ನಾನು ಒಂದೆರಡು ಸರ್ತಿ ಕರೆದುಕೊಂಡು ಬರುವಂತೆ ಹೇಳಿದ್ದೆ. ಆಗ ಆಕೆ ಅದೇನೋ ಸ್ವಯಂ ಉದ್ಯೋಗ ಮಾಡುತ್ತಿದ್ದಾಳೆ ಎಂದಿದ್ದ. ಪುರುಸೊತ್ತಿಲ್ಲ ಎಂದುತ್ತರಿಸಿದ್ದ, ಉತ್ಸಾಹ ತೋರಲೇ ಇಲ್ಲ. ಹೀಗೇ ಒಬ್ಬೊಬ್ಬರೂ ತಮ್ಮದೇ ಲೋಕದಲ್ಲಿದ್ದರೆ ವಂಶ ಬೆಳೆಯುವುದು ಹೇಗೆ?” ಎಂದರು.
ಅಲ್ಲಿಯೇ ಇದ್ದ ಗಣಪತಿಯ ತಂದೆಯವರು ಹೆಂಡತಿಯ ಮಾತುಗಳನ್ನು ಕೇಳುತ್ತಾ “ಮಾರಾಯ್ತೀ ನಿನ್ನ ವಾಕ್‌ಪ್ರವಾಹ ನಿಲ್ಲಿಸುತ್ತೀಯಾ? ಅ ಹುಡುಗ ಇಲ್ಲಿಗೇನಾದರೂ ಬಂದಾಗ ಅಪ್ಪಿತಪ್ಪಿಯೂ ಒಂದೇ ಸಮ ಇಂತಹ ಪ್ರಶ್ನೆಗಳನ್ನು ಕೇಳಿಬಿಟ್ಟೀಯೆ ಜೋಕೆ. ಅವರವರ ಬದುಕು ಅವರವರದ್ದು. ನಮಗಿಂತ ಈಗಿನವರು ಬುದ್ಧಿವಂತರು ತಿಳಿಯಿತೇ.” ಮಕ್ಕಳ ಸ್ನೇಹಕ್ಕೆ ಇದರಿಂದ ಅಡ್ಡಿಯಾದೀತೆಂದು ಎಚ್ಚರಿಸಿ “ರಾತ್ರಿ ಬಹಳ ಹೊತ್ತಾಗಿದೆ ಮಲಗು ನಡಿ” ಎಂದು ತಾವೂ ಕುಳಿತಲ್ಲಿಂದ ಎದ್ದು ರೂಮಿನ ಕಡೆಗೆ ನಡೆದರು. ಅವರ ಪತ್ನಿಯೂ ಹಿಂಬಾಲಿಸಿದರು. ಗಣಪತಿಯೂ ತನ್ನ ರೂಮಿಗೆ ಹೊರಟ.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=41070
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ..
ಬಹಳ ಚೆನ್ನಾಗಿದೆ
ಧನ್ಯವಾದಗಳು ನಯನಮೇಡಂ
ಸೂಕ್ತ ವಿವರಣೆಗಳೊಂದಿಗೆ ಪಾತ್ರಗಳ ಮನದ ತಲ್ಲಣ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.
ಧನ್ಯವಾದಗಳು ಪದ್ಮಾ ಮೇಡಂ
ಪಾತ್ರಗಳು ಜೀವಂತವಾಗಿ ನಮ್ಮೊಡನೆ ಮಾತಾಡುತ್ತಿವೆಯೇನೋ ಅನ್ನಿಸುವಂತಿದೆ, ನಾಗರತ್ನ ಮೇಡಂ…ನಿಮ್ಮ ಕಥಾ ನಿರೂಪಣೆ..
ಧನ್ಯವಾದಗಳು ಶಂಕರಿ ಮೇಡಂ
ಕಥಾ ವಲ್ಲರಿ ಚೆನ್ನಾಗಿ ಹಬ್ಬುತ್ತಿದೆ
ಧನ್ಯವಾದಗಳು ಪದ್ಮಿನಿ ಮೇಡಂ