ಕಾದಂಬರಿ : ಕಾಲಗರ್ಭ – ಚರಣ 22
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ರಾತ್ರಿ ಊಟವಾದ ಬಳಿಕ ಒಂದೆರಡು ಫೋನ್‌ಗಳನ್ನು ಸ್ವೀಕರಿಸಿ ಸುಬ್ಬುವಿಗೆ ಮಾರನೆಯ ದಿನದ ಕೆಲಸಗಳ ಬಗ್ಗೆ ನಿರ್ದೇಶನ ಕೊಟ್ಟು ತಮ್ಮ ರೂಮಿಗೆ ಬಂದ ಮಹೇಶ. ಅಲ್ಲಿ ಅವನಿಗೆ ಅಚ್ಚರಿಯಾಯ್ತು. ಅವನಿಗಿಂತಲೂ ಮುಂಚೆ ದೇವಿಯ ಆಗಮನವಾಗಿತ್ತು. ಯಾವುದೋ ಫೈಲಿನಲ್ಲಿ ತಲೆ ಹುದುಗಿಸಿಕೊಂಡು ಕುಳಿತಿದ್ದುದನ್ನು ನೋಡಿದ.
ಅವನು ಬಂದದ್ದನ್ನು ಗಮನಿಸಿದವಳಂತೆ “ಮಹೀ.. ನಾಳೆ ಬೆಳಗ್ಗೆ ವಾಕಿಂಗ್ ಮುಗಿಸಿ ತೋಟದ ಮನೆಯ ಹತ್ತಿರ ಬನ್ನಿ. ನಾನಲ್ಲಿಗೆ ಬಂದಿರುತ್ತೇನೆ. ನಿಮ್ಮೊಡನೆ ಸ್ವಲ್ಪ ಮಾತನಾಡುವುದಿದೆ. ಮನೆಯಲ್ಲಿ ಮಾತನಾಡಲಾಗುವುದಿಲ್ಲ.” ಎಂದಳು ದೇವಿ.
ಏಕೆ? ಏನು? ಎತ್ತ? ಎಂಬ ಪ್ರಶ್ನೆಗಳನ್ನು ಕೇಳಿದರೆ ನನ್ನ ಕುತ್ತಿಗೆಗೆ ನಾನೇ ಉರುಳು ಹಾಕಿಕೊಂಡAತೆ ಎಂದುಕೊAಡ ಮಹೇಶ “ಆಯ್ತು ದೇವಿ, ಬಹಳ ಹೊತ್ತಾಗಿದೆ ಮಲಗುವುದಿಲ್ಲವೇ?” ಎಂದ.
“ನೀವು ಮಲಗಿಕೊಳ್ಳಿ, ನನಗೆ ಸ್ವಲ್ಪ ಕೆಲಸವಿದೆ” ಎಂದು ಫೈಲಿನಿಂದ ತಲೆಯೆತ್ತದೆ ಉತ್ತರಿಸಿದ್ದು ಕಂಡು ಮರುಮಾತಾಡದೆ ಸಿದ್ಧಪಡಿಸಿದ್ದ ಹಾಸಿಗೆ ಮೇಲೆ ಪವಡಿಸಿದ ಮಹೇಶ.
ಒಂದು ವಾರದಿಂದ ಕಾರ್ಯಾಗಾರಕ್ಕಾಗಿ ತಯಾರಿ, ಜಮೀನಿನ ಕೆಲಸ, ಮಾರ್ಕೆಟ್ಟಿಗೆ ಓಡಾಟ ಇದೆಲ್ಲದರಿಂದ ಬಸವಳಿದಿದ್ದ ಮಹೇಶನಿಗೆ ನಾಳೆಯ ಬಗ್ಗೆ ಯೋಚಿಸಲೂ ಆಸ್ಪದಕೊಡದೆ ಅವನ ಕಣ್ರೆಪ್ಪೆಗಳು ಮುಚ್ಚಿಕೊಂಡವು. ಸ್ವಲ್ಪ ಹೊತ್ತಿನಲ್ಲೇ ಸಣ್ಣದಾಗಿ ಗೊರಕೆಯ ಸದ್ದು ಕೇಳಿಸತೊಡಗಿತು.
‘ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆಯಂತೆ’ ಪುಣ್ಯಾತ್ಮ ಇಷ್ಟೆಲ್ಲಾ ನಡೆಯುತ್ತಿದ್ದರೂ ತನಗೆ ಸಂಬಂಧಿಸಿದ್ದಲ್ಲದಂತಿದ್ದಾರೆ. ಛೇ..ಇಲ್ಲ ಇನ್ನೆಷ್ಟು ಕಾಯುವುದು ಬಹಳ ಕಾಲವಾಯ್ತು. ನನ್ನಜೊತೆ ಅವರಿಗಿದ್ದ ಭಾವನೆ ಬದಲಾಗಿಲ್ಲವೋ ಅಥವಾ ಅವರ ವರ್ತನೆ ನೋಡಿದರೆ ಬೇರೇನೋ ವಾಸನೆ ಹೊಡೆಯುತ್ತಿದೆ. ಈಗಂತೂ ಪ್ರತಿಯೊಂದಕ್ಕೂ ಪರಿಹಾರವಿದೆ. ವೈದ್ಯರ ಹತ್ತಿರ ಹೋಗದಿದ್ದರೆ ಸಮಸ್ಯೆ ಗೊತ್ತಾಗುವುದಾದರೂ ಹೇಗೆ. ವಯಸ್ಸಿನಿಂದಲೂ ನಾವಿಬ್ಬರು ಸುಬ್ಬು ಚಂದ್ರಿಕಾರಿಗಿಂತ ಹಿರಿಯರು. ಮೇಲಾಗಿ ನನಗೂ ಮಹೀಗೂ ಹತ್ತು ವರ್ಷಗಳ ಆಂತರ. ಮದುವೆಯಾಗುವಾಗಲೇ ನನಗೆ 23 ವರ್ಷ. ಅವರಿಗೆ 33ವರ್ಷ. ಈಗದಕ್ಕೆ ಮತ್ತೆರಡು ವರ್ಷಗಳನ್ನು ಸೇರಿಸಲಾಗಿದೆ. ಇದನ್ನು ಹೀಗೇ ಮುಂದುವರಿಯಲು ಬಿಡಬಾರದು. ಹಿರಿಯರಿರುವ ಮನೆಯಲ್ಲಿ ಜೋರಾಗಿ ಮಾತನಾಡಲಾಗದು. ಅತ್ತೆಯಂತೂ ಸರೇಸರಿ. ಇನ್ನು ನಮ್ಮ ಮನೆಯ ಕಡೆ ಕೇಳುವ ಹಾಗೇ ಇಲ್ಲ. ಹಾಸ್ಯ ಮಾಡುತ್ತಲೇ ಏನು ಕೂಸೇ, ನಾನ್ಯಾವತ್ತು ಮುತ್ತಜ್ಜನಾಗುವುದು? ಈಗಾಗಲೇ ಆಗಿದ್ದೀರಿ ಎನ್ನಬೇಡ. ನಿನ್ನ ಒಡಲಿನಿಂದ ನನ್ನ ಮಡಿಲಿಗೊಂದು ಬರಲಿ. ಅಲ್ಲಿಗೆ ನನ್ನ ಜೀವನ ಸಾರ್ಥಕ. ಅಜ್ಜಿಯೋ ಏನು ಪುಟ್ಟೀ ಫ್ಯಾಮಿಲಿ ಪ್ಲಾö್ಯನಿಂಗಾ? ಈಗಿನವರು ನೀವು ಏನೇನೋ ಯೋಚಿಸುತ್ತೀರಾ. ಅದು ಸರಿಯಲ್ಲವೆಂದು ನಾನು ಹೇಳಲ್ಲ. ಆದರೆ ಚಿಕ್ಕಪುಟ್ಟ ವಯಸ್ಸೇನಲ್ಲ ನಿಮ್ಮದು. ಒಂದುಸಾರಿ ಇಬ್ಬರೂ ವೈದ್ಯರಲ್ಲಿಗೆ ಹೋಗಿ ಬನ್ನಿ ಎಂಬ ಉಪದೇಶ ಅದೂ ಪಿಸುಮಾತಿನಲ್ಲಿ. ಇನ್ನು ಅಪ್ಪ ಅಮ್ಮನಂತೂ ನಾನೆಲ್ಲಿ ನೊಂದುಕೊಳ್ಳುತ್ತೇನೋ ಎಂಬ ಭಯದಿಂದ ಈ ಬಗ್ಗೆ ಸೊಲ್ಲೇ ಎತ್ತುವುದಿಲ್ಲ. ಹೊರಗಿನವರು ಇಂತಹ ಸಮಯ ಬಿಟ್ಟಾರೆಯೇ, ಬರಿಯ ಮನೆತನ ಮುಂದುವರಿಕೆಯ ಮಾತಲ್ಲ, ತಾಯ್ತನದ ಬಯಕೆಯು ಎಲ್ಲ ಹೆಣ್ಣುಮಕ್ಕಳಿಗೂ ಸಹಜವಲ್ಲವೇ. ನನ್ನೊಡನೆ ಮಹಿಯ ಭಾವನೆ ಬದಲಾಯಿಸಲಾಗದಿದ್ದರೆ ಬೇರೊಬ್ಬಳನ್ನಾದರೂ ಆತ ವರಿಸಲಿ. ನಾನೇ ಅದಕ್ಕೆ ಅನುಮತಿ ಕೊಡುತ್ತೇನೆ. ಛೀ..ನಾನೇಕೆ ಹೀಗೆ ಯೋಚಿಸುತ್ತಿದ್ದೇನೆ, ನನ್ನಲ್ಲೇನು ಕುಂದಿದೆ. ಗಂಡನೆAಬ ಪ್ರಾಣಿಯು ನನ್ನೊಡನೆ ಸಹಕರಿಸುತ್ತಿಲ್ಲ. ಅವನ ವರ್ತನೆಯೆ ಅರ್ಥವಾಗದ ಕಗ್ಗಂಟಾಗಿದೆ. ನನ್ನ ಸಹನೆಗೂ ಒಂದು ಮಿತಿಯಿದೆ. ನಾಳೆ ಅದನ್ನು ಇತ್ಯರ್ಥ ಮಾಡಬೇಕು. ಇಬ್ಬರೂ ವೈದ್ಯರ ಹತ್ತಿರ ಹೋಗಲೇಬೇಕು. ದೈಹಿಕವಾಗಿ ಏನೂ ತೊಂದರೆಯಿಲ್ಲವೆAದರೆ ಕೌನ್ಸೆಲ್ಲಿಂಗಿಗಾದರೂ ಹೋಗಲು ಆತನನ್ನು ಒಪ್ಪಿಸಬೇಕು. ಹಾ ! ಅದೇ ಸರಿಯಾದದ್ದು. ಈ ನಿರ್ಧಾರ ಬರುತ್ತಿದ್ದಂತೆ ತರ್ಕವಿಚಾರವನ್ನು ಹಿಂದಕ್ಕೆ ತಳ್ಳಿದ ನಿದ್ರಾದೇವತೆ ದೇವಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಳು.
ಬೆಳಗ್ಗೆ ದೇವಿಯು ಏಳುವಷ್ಟರಲ್ಲಿ ಮಹೇಶ ಎದ್ದಾಗಿತ್ತು. ವಾಕಿಂಗಿಗೆ ಹಾಕಿಕೊಂಡು ಹೋಗುವ ಉಡುಪನ್ನು ಗೂಟದಿಂದ ತೆಗೆಯಲಾಗಿತ್ತು. ಸರಿ ದೇವಿಯೂ ಪ್ರಾತಃವಿಧಿಗಳನ್ನು ಪೂರೈಸಿ ಕೆಳಗೆ ಬಂದಳು. ಒಂದೆರಡು ಲೋಟ ಬಿಸಿನೀರನ್ನು ಕುಡಿದು ಅತ್ತೆಯ ಅನುಮತಿ ಪಡೆದು ಜಮೀನಿನ ಕಡೆಗೆ ಹೊರಟಳು. ತಲೆ ಬಿಸಿಯಾಗಿ ಕಾರ್ಖಾನೆಯ ಕುಲುಮೆಯಂತಾಗಿತ್ತು. ದಾರಿಯಲ್ಲಿ ಭೇಟಿಯಾದ ಕೆಲವರಿಗೆ ಏನು ಉತ್ತರ ಕೊಟ್ಟಳೋ ದೇವರೇ ಬಲ್ಲ. ದಾಪುಗಾಲಾಕುತ್ತಾ ತೋಟದ ಮನೆಗೆ ಬಂದಳು. ಅಷ್ಟರಲ್ಲಾಗಲೇ ಮಹೇಶನ ಆಗಮನವಾಗಿ ಮುಂದಿನ ಜಗುಲಿಯಮೇಲೆ ಕುಳಿತಿದ್ದ.
“ಮಹೀ ಬಂದು ಬಹಳ ಹೊತ್ತಾಯಿತೇ?” ಎಂದು ಕೇಳಿದಳು. “ಇಲ್ಲ ಈಗಷ್ಟೇ ಬಂದೆ. ನಡಿ ಅದೇನು ಮಾತನಾಡಬೇಕೋ ಆಡಿ ಬೇಗ ಮುಗಿಸು. ಪೇಟೆಯಕಡೆ ಹೋಗಬೇಕು ಕೆಲಸವಿದೆ” ಎಂದ ಮಹೇಶ.
ದೇವಿ ಸುತ್ತಮುತ್ತ ನೋಡುತ್ತಾ ತೋಟದ ಮನೆಯ ಬಾಗಿಲನ್ನು ತೆರೆದು ಒಳಗೆ ಆಹ್ವಾನಿಸಿದಳು. ಒಂದೈದು ನಿಮಿಷ ಮೌನವಾಗಿದ್ದು ನಂತರ ತಾನು ಹಿಂದಿನ ರಾತ್ರಿ ಏನೇನು ಹೇಳಬೇಕೆಂದು ಆಲೋಚಿಸಿದ್ದಳೋ ಅದೆಲ್ಲವನ್ನೂ ಮಹೇಶನಿಗೆ ಹೇಳಿ “ಈಗ ನಿಮ್ಮುತ್ತರವೇನೆಂದು ಹೇಳಿ?” ಎಂದು ಅವನ ಕೈಹಿಡಿದು ಜಗ್ಗಿದಳು.
ದೇವಿಯ ಮಾತುಗಳನ್ನು ಕೇಳಿದ ಮಹೇಶನ ತಾಳ್ಮೆಯೆಲ್ಲಾ ಮೀರಿದಂತಾಗಿ “ ನೋಡು ಪದೇಪದೆ ಇಂಥಹವೇ ಪ್ರಶ್ನೆಗಳನ್ನು ಕೇಳಬೇಡ. ವೈದ್ಯರ ಬಳಿಗೆ ಹೋಗಬೇಕಾದ ಪರಿಸ್ಥಿತಿ ಏನಾಗಿದೆ ನಮಗೆ? ಇನ್ನೂ ಸ್ವಲ್ಪ ಕಾಲಾವಕಾಶ ಕೊಡು”ಎಂದನು.
“ಹೂಂ..ಕಾಲಾವಕಾಶ ಎಲ್ಲಿಯವರೆಗೆ? ಇನ್ನೆಷ್ಟು ಕಾಲ? ರಾತ್ರಿಹೊತ್ತು ನಾನು ಮಲಗಿದ್ದೇನೆಂದುಕೊಂಡು ನನ್ನ ಹತ್ತಿರ ಬರುವುದು, ಇದ್ದಕ್ಕಿದ್ದಂತೆ ಹಿಮ್ಮೆಟ್ಟಿ ಮುಸುಗಿಕ್ಕಿ ಮಲಗುವುದು ನನಗೆ ಗೊತ್ತಾಗುತ್ತಿಲ್ಲ ಎಂದುಕೊಂಡಿರಾ? ನಾನೊಂದು ಜಡವಸ್ತುವೇನು? ಮೈಮೇಲೆ ಪ್ರಜ್ಞೆಯಿಲ್ಲದಂತೆ ನಿದ್ರೆಮಾಡುವ ಎಮ್ಮೆ ಚರ್ಮದವಳೇ? ನನಗ್ಯಾಕೋ ನಿಮ್ಮ ಪುರುಷತ್ವದ ಸಾಮರ್ಥ್ಯದ ಬಗ್ಗೆಯೇ ಅನುಮಾನ. ನೀವು…”
“ದೇವಿ ಏನು ಮಾತನಾಡುತ್ತಿದ್ದೀಯೆಂಬ ಎಚ್ಚರವಿದೆಯೇ?” ಎಂದಬ್ಬರಿಸಿದ ಮಹೇಶ.
“ ಶ್..ಕಿರುಚಬೇಡಿ..ವಿದ್ಯಾವಂತರು, ಬುದ್ಧಿವಂತರು ನೀವು, ಹೀಗಿದ್ದೂ ಮುಸುಕಿನೊಳಗಿನ ಗುದ್ದೇಕೆ” ಎಂದಳು ದೇವಿ.
“ಆಯಿತು ನೀನು ಏನೆಂದುಕೊಂಡಿದ್ದೀಯೋ ಹಾಗೇ ತಿಳಿದುಕೋ..ನಿನಗೆ ಅಂಥಹ ತೆವಲಿದ್ದರೆ ಬೇರೆ ಯಾರನ್ನದರೂ..”
“ಮಹೀ, ಇನ್ನೊಂದಕ್ಷರ ಮುಂದೆ ಮಾತನಾಡಿದರೆ ನಾನು ಭದ್ರಕಾಳಿಯಾಗಬೇಕಾಗುತ್ತದೆ. ಇಬ್ಬರೂ ಕುಳಿತು ಮಾತನಾಡೋಣ. ನಾನು ಹೇಳಿದಂತೆ ವೈದ್ಯರಲ್ಲಿಗೆ ಹೋಗೋಣ. ಮದುವೆಯಾಗಿ ಎರಡು ವರ್ಷವಾಯಿತು. ಇನ್ನೂ ನಾನು ಕನ್ಯೆಯಾಗಿಯೇ ಉಳಿದಿದ್ದೇನೆ.” ಎಂದಳು.
ಅಷ್ಟರಲ್ಲಿ “ಕೂಸೇ.,” ಎಂಬ ಚೀತ್ಕಾರದೊಂದಿಗೆ ದೊಪ್ಪೆಂದು ಯಾರೋ ಕೆಳಗೆ ಬಿದ್ದ ಸದ್ದು ಕೇಳಿಸಿತು. ಇಬ್ಬರೂ ತಮ್ಮ ವಾಗ್ಯುದ್ಧ ನಿಲ್ಲಿಸಿ ಒಳಗಡೆಯಿಂದ ಬಾಗಿಲಿಗೆ ಬಂದರು. ಅಲ್ಲಿ ಕಂಡ ದೃಶ್ಯ ದೇವಿಯ ಎದೆಯನ್ನು ನಡುಗಿಸಿತು. ನೀಲಕಂಠಪ್ಪನವರು ನೆಲದಮೇಲೆ ಬಿದ್ದು ಒದ್ದಾಡುತ್ತಿದ್ದರು. ಒಂದೆರಡು ಕ್ಷಣದಲ್ಲಿ ಆ ದೇಹ ನಿಶ್ಚಲವಾಯಿತು.
ಅದೇ ಹೊತ್ತಿಗೆ ಹೊರಗಿನಿಂದ ಬಂದ ಧ್ವನಿ “ಗೆಳೆಯಾ ನೀಲಾ ಇಲ್ಲಿಗೇಕೆ ಬಂದೆ?” ಯಾರಿದ್ದಾರೆಂದು ನೋಡಿದಾಗ ಗರಬಡಿದವರಂತೆ ನಿಂತಿದ್ದ ಮಗ, ಸೊಸೆ. ನೆಲದಮೇಲೆ ಅಸ್ತವ್ಯಸ್ಥವಾಗಿ ಬಿದ್ದಿದ್ದ ಅವರ ಗೆಳೆಯ. ಅರ್ಥವಾಗದಂತೆ “ ಮಗೂ ದೇವಿ ಏನಾಯಿತಮ್ಮಾ? ಜಾರಿಬಿದ್ದನಾ? ಏನಾದರೂ ತಗುಲಿಸಿಕೊಂಡನಾ?” ಎನ್ನುತ್ತಾ ಹತ್ತಿರ ಬಗ್ಗಿ ನೀಲಕಂಠಪ್ಪನವರನ್ನು ತಟ್ಟಿ ಮೇಲಕ್ಕೆಬ್ಬಿಸಲು ಪ್ರಯತ್ನಿಸಿದರು. ಕೈ, ಕಾಲು, ಹಣೆಯೆಲ್ಲಾ ಮುಟ್ಟಿ ನೋಡಿದರು. ಅಲ್ಲಿಯೇ ಪಕ್ಕದಲ್ಲಿದ್ದ ಚೆಂಬಿನಲ್ಲಿ ಸ್ವಲ್ಪ ನೀರಿತ್ತು. ತೆಗೆದು ಮುಖಕ್ಕೆ ಚಿಮುಕಿಸಿದರು. ಊಹುಂ..ಮಿಸುಕಾಡಲಿಲ್ಲ. ಅನುಮಾನ ಬಂದು ಶ್ವಾಸ ಪರೀಕ್ಷಿಸಿದರು. ಎದೆಯಮೇಲೆ ಕಿವಿಯಿಟ್ಟು ಆಲಿಸಿದರು. ಅರ್ಥವಾಗಿ ದೇಹದ ಮೇಲೆ ಬಿದ್ದು ಜೋರಾಗಿ ಗೋಳಾಡತೊಡಗಿದರು. ಮನೆಯಲ್ಲಿ ಸಿಹಿಸುದ್ಧಿ ಸಿಕ್ಕಿದೆಯೆಂದು ಗೆಳೆಯಾ ತಿರುಗಾಡಿಕೊಂಡು ಹಾಗೇ ಶಿವನಿಗೊಂದು ನಮಸ್ಕಾರ ಹಾಕಿ ಬರೋಣವೆಂದು ಕರೆದುಕೊಂಡು ಬಂದೋನು ನಾನು. ಈಗ ನನ್ನ ಬಿಟ್ಟು ಹೊರಟು ಹೋದೆಯಾ? ದಾರಿಯಲ್ಲಿ ಯಾರೋ ಸಿಕ್ಕಿದರೆಂದು ನಾನು ಸ್ವಲ್ಪ ಹಿಂದಾದೆ. ನೀನ್ಯಾವ ಮಾಯದಲ್ಲಿ ಇಲ್ಲಿಗೆ ಬಂದೆ? ಶಿವನಿಗೆ ನಮಸ್ಕಾರ ಹಾಕಲು ಬಂದವ ಶಿವನ ಪಾದವನ್ನೇ ಸೇರಿಬಿಟ್ಟೆಯಲ್ಲಾ. ಈಗಷ್ಟೇ ಜೊತೆಯಾಗಿ ಬಂದವರು ನಾವು. ಮನೆಯವರಿಗೆ ಏನೆಂದು ಉತ್ತರ ಹೇಳಲಿ?” ಎಂದೆಲ್ಲಾ ಹಲುಬುತ್ತಾ ಬಿಕ್ಕಿಬಿಕ್ಕಿ ಅಳತೊಡಗಿದರು ಗಂಗಾಧರಪ್ಪ.
ಅವರ ಅವಸ್ಥೆಯನ್ನು ನೋಡಿ ಮಹೇಶ ಇದ್ದುದರಲ್ಲೆ ಧೈರ್ಯವಹಿಸುತ್ತಾ “ಅಪ್ಪಯ್ಯಾ ಏಳಿ, ಅವರಿಗೇನೂ ಆಗಿಲ್ಲ. ನನ್ನ ಗೆಳೆಯ ಡಾಕ್ಟರ್‌ಗೆ ಫೋನ್ ಮಾಡಿದ್ದೇನೆ. ಅವನು ಇಲ್ಲಿಗೇ ಬರುತ್ತಿದ್ದಾನೆ” ಎಂದು ಹೇಳುತ್ತಾ ಅವರನ್ನು ಎಬ್ಬಿಸಲು ಪ್ರಯತ್ನಿಸಿದ.
“ಹೂನಪ್ಪಾ ಈಗ ಯಾರು ಬಂದು ಏನು ಮಾಡುತ್ತಾರೆ. ಇನ್ನೆಲ್ಲಿ ನನ್ನ ಗೆಳೆಯ. ನನಗಷ್ಟೂ ಗೊತ್ತಾಗದೇ? ಬಾ ನೀನೇ ನೋಡು ಗಟ್ಟಿಮುಟ್ಟಾಗಿ ಅರೋಗ್ಯದಿಂದ ನಳನಳಿಸುತ್ತಿದ್ದ ಆಜಾನುಬಾಹು ನನ್ನ ಗೆಳೆಯ ಹೇಗೆ ನಿರ್ಜೀವವಾಗಿ ನೆಲಕ್ಕೊರಗಿದ್ದಾನೆ. ತೋಟದ ಮನೆಯ ಬಳಿಯಿಂದ ಬರುತ್ತಿದ್ದ ಆಕ್ರಂದನ ಸಮೀಪದಲ್ಲಿದ್ದ ಕೆಲಸಗಾರರ ಕಿವಿಗೆ ಬಿತ್ತು. ಇದೇನು ಇಷ್ಟು ಬೇಗ ಇಲ್ಲಿಗೆ ಯಾರು ಬಂದಿದ್ದಾರೆ? ಅಳುವಿನ ಸದ್ದು, ಯಾರಿಗೇನಾಯಿತೋ ಎನ್ನುತ್ತಾ ಒಬ್ಬರಿಗೊಬ್ಬರು ಜೊತೆಯಾಗಿ ಆತಂಕ, ಧಾವಂತದಿಂದ ಅಲ್ಲಿಗೆ ಓಡಿಬಂದರು.
ಬಾಯಿಂದ ಬಾಯಿಗೆ ಸುದ್ಧಿ ಹರಡಿ ಸುತ್ತಮುತ್ತಲಿನ ಜಮೀನಿನ ಕೆಲಸಗಾರರೂ ಹಾಜರಾದರು. ಜಡ್ಡುಜಾಪತ್ರೆಯಿಲ್ಲದ ಮನುಷ್ಯ, ಏನಾಗಿತ್ತು? ಇದ್ದಕ್ಕಿದ್ದಂತೆ ! ನೆನ್ನೆ ಸಂಜೆ ಅವರ ಹತ್ತಿರ ಮಾತನಾಡಿದ್ದೆ. ಈಗತಾನೇ ಈ ಕಡೆಯಿಂದ ನಡೆದುಬರುತ್ತಿದ್ದುದನ್ನು ನೋಡಿದೆವು. ಹೀಗೆ ತಲೆಗೊಂದು ಮಾತು. ದೊಡ್ಡವರ ಮನೆ ವಿಚಾರ ಏನಿತ್ತೋ ಏನೋ ಎಂದು ಗುಸುಗುಸು ಪಿಸಿಪಿಸು ಮಾತುಗಳು ನಡೆದಿದ್ದವು. ಕೆಲವರಾಗಲೇ ಊರೊಳಕ್ಕೆ ಹೋಗಿ ಸುದ್ಧಿ ಹರಡುವ ಪ್ರಯತ್ನದಲ್ಲಿದ್ದರು. ಮತ್ತೆ ಕೆಲವರು ತಮ್ಮ ಫೋನುಗಳಿಂದ ವಿಷಯ ತಿಳಿಸುತ್ತಿದ್ದರು.
“ಏನಯ್ಯಾ ಹೀಗೆ ನಿಂತಿರುತ್ತೀಯೋ ಅಥವಾ ಮುಂದೇನು ಮಾಡಬೇಕಾದ್ದನ್ನು ಯೋಚಿಸುತ್ತೀಯೋ ಮಗಾ” ಎಂದರು ಗಂಗಾಧರಪ್ಪ.
ತಂದೆಯ ಮಾತಿಗೆ “ಇಲ್ಲಪ್ಪಾ ನನ್ನ ಗೆಳೆಯ ಚಂದ್ರು ಬರುವವರೆಗೆ ನಾನೇನೂ ಹೇಳಲಾರೆ. ಅವರಿಗೇನೂ ಆಗಿಲ್ಲ ನೀವು ಸುಮ್ಮನೆ..”
ಮಗನ ಮಾತು ಪೂರ್ತಿಯಾಗುವುದರೊಳಗೆ ಗಂಗಾಧರಪ್ಪನವರು “ಛೇ..ದಡ್ಡಾ ಇದ್ದೀಯೆ ಮಗಾ ಶತದಡ್ಡ. ಬಂದು ನೀನೇ ನೋಡೆಂದರೂ ಕೇಳದೆ ನಿನ್ನದೇ ಆಲಾಪ ಮಾಡುತ್ತಿದ್ದೀಯ” ಎಂದರು ಅಸಹನೆಯಿಂದ, ನೋವಿನಿಂದ.
“ಜಾಗಬಿಡಿ ಹಿಂದಕ್ಕೆ ಸರಿಯಿರಿ” ಎಂಬ ದನಿಕೇಳಿ “ಹಾ ನೋಡು ನಿನ್ನ ಗೆಳೆಯ ಡಾ.ಚಂದ್ರಪ್ಪ ಬಂದ” ಎಂದು ಪಕ್ಕಕ್ಕೆ ಸರಿಯುತ್ತಾ “ಬಾಪ್ಪಾ ಸರಿಯಾಗಿ ಪರೀಕ್ಷಿಸಿ ನೋಡು. ನನ್ನ ಮಾತು ನನ್ನ ಮಗನಿಗೆ ನಂಬಿಕೆಯಾಗುತ್ತಿಲ್ಲ.” ಎಂದರು.
ಚಂದ್ರಪ್ಪನಿಗೆ ಎಲ್ಲವೂ ಅರ್ಥವಾಯಿತು “ಮ್ಯಾಸಿವ್ ಹಾರ್ಟ್ ಅಟ್ಯಾಕ್ ಆಗಿದೆ.” ಎಂದನು.
“ಅಲ್ಲಪ್ಪ ಯಾವುದೇ ಸೂಚನೆಯನ್ನೂ ಕೊಡದೆ ಹೀಗೆ ಆಗುತ್ತಾ ಚಂದ್ರಪ್ಪ?” ಕೇಳಿದರು ಗಂಗಾಧರಪ್ಪ.
“ಹೂ ಅಪ್ಪಾವರೇ, ಯಾವುದಾದರೂ ಯೋಚನೆಯನ್ನು ತಮ್ಮೊಳಗೇ ಮುಚ್ಚಿಟ್ಟುಕೊಂಡು ಮಾನಸಿಕವಾಗಿ ಒತ್ತಡದಲ್ಲಿದ್ದಾಗ ಅದು ಸ್ಫೋಟವಾಗುವ ಸಂಭವ ಹೆಚ್ಚು. ಅವರ ವಯಸ್ಸೂ ಸುಮಾರು ಎಂಬತ್ತರ ಹತ್ತಿರ ಸಮೀಪಿಸಿತ್ತಲ್ಲವಾ. ಚಿಂತೆ ಮಾಡುವಂತಾದ್ದೇನಿತ್ತು ನನಗೆ ಅರ್ಥವಾಗದು” ಎಂದರು ಚಂದ್ರಪ್ಪ.
“ಎಂಬತ್ತೇನು ಅವನು ನನಗಿಂತ ಹಿರಿಯ. ಎಂಬತ್ತೈದು. ಆದರೂ ತನ್ನ ಹಾಸ್ಯಪ್ರಜ್ಞೆ, ಚಟುವಟಿಕೆಯಿಂದ ಬದುಕು ನಡೆಸಿದ್ದ. ಮನೆಯವರಿಗೆ ಹೇಗೆ ಯಾರ ಮೂಲಕ ಹೇಳಿ ಕರೆಸಬೇಕೆಂದು ತಿಳಿಯುತ್ತಿಲ್ಲ. ದಿಕ್ಕೇ ತೋಚದಂತಾಗಿದೆ.” ಎಂದು ತಲೆಮೇಲೆ ಕೈಹೊತ್ತು ದುಃಖಿತರಾದರು ಗಂಗಾಧರಪ್ಪ.
“ಹೆದರಬೇಡಿ ನಾನಿಲ್ಲಿಗೆ ಬರುವಾಗಲೇ ನನ್ನ ಹೆಂಡತಿಗೆ ಅಲ್ಲಿನ ಪರಿಸ್ಥಿತಿ ಹೇಗಿದೆಯೋ ಕಾಣೆ. ನೀನವರ ಮನೆಗೆ ಹೋಗಿ ಸೂಕ್ಷö್ಮವಾಗಿ ವಿಷಯ ತಿಳಿಸಿ ಅವರುಗಳನ್ನು ಇಲ್ಲಿಗೆ ಕರೆತರುವ ಭಾರ ನಿನ್ನದೆಂದು ಹೇಳಿ ಕಾರನ್ನು ತೆಗೆದುಕೊಂಡು ಹೋಗೆಂದು ತಿಳಿಸಿ ನಾನು ಸ್ಕೂಟರ್‌ನಲ್ಲಿ ಬಂದೆ. ಹಾಗೆಯೇ ಶಂಕರ, ಸುಬ್ಬುವಿಗೆ ಸಂಗತಿ ತಿಳಿಸಿ ಗಾಭರಿಯಾಗಿ ಗಾಡಿ ಓಡಿಸಬೇಡಿ, ನನ್ನ ಹೆಂಡತಿಯ ಜೊತೆಯಲ್ಲಿ ಬನ್ನಿ ಎಂದು ಹೇಳಿದ್ದೇನೆ. ಇನ್ನೇನು ಬರಬಹುದು.” ಎಂದರು ಚಂದ್ರಪ್ಪ.
ಎರಡೂ ಮನೆಯವರ ಆಗಮನವಾಯ್ತು. ನಿಂತಿದ್ದವರು ಅಕ್ಕಪಕ್ಕ ಸರಿದು ಜಾಗಬಿಟ್ಟರು. ಒಬ್ಬರ ಕೈ ಒಬ್ಬರು ಹಿಡಿದು ಬರುತ್ತಿದ್ದ ಬಸಮ್ಮ, ಗೌರಮ್ಮನವರನ್ನು ನೋಡಿದರು. ಸರಳ ವ್ಯಕ್ತಿತ್ವದ ಅವರ ಬಗ್ಗೆ ಜನರಿಗೆ ತುಂಬ ಗೌರವಾದರಗಳಿದ್ದವು. ಇಬ್ಬರ ಮನೆಯ ಬಗ್ಗೆ ಜನ ಆ ಮನೆಗಳ ಆತ್ಮೀಯತೆಗೆ ಗಂಡಸರಿಗಿಂತ ಹೆಂಗಸರ ಒಗ್ಗಟ್ಟೇ ಕಾರಣವೆನ್ನುತ್ತಿದ್ದರು. ಎಷ್ಟೋ ಸಂಸಾರಗಳಿಗೆ ಈ ಕುಟುಂಬಗಳು ಮಾದರಿಯಂತಿದ್ದವು. ಈಗೇನು ಮಾಡುತ್ತಾರೆಂದು ಕಾತುರದಿಂದ ಎಲ್ಲರೂ ಕಾಯುತ್ತಿದ್ದರು.
ಅಲ್ಲಿಯವರೆಗೆ ಮಾತುಬಾರದ ಮೂಕಿಯಂತೆ ಒಂದೆಡೆ ನಿಂತಿದ್ದ ದೇವಿ ಅಜ್ಜಿಯನ್ನು ಕಂಡೊಡನೆ ಒಂದೇ ನೆಗೆತಕ್ಕೆ ಓಡಿಬಂದು ಅವರನ್ನು ತಬ್ಬಿ ರೋಧಿಸತೊಡಗಿದಳು.
“ಅಳಬ್ಯಾಡ ಪುಟ್ಟೀ, ಅವರಿಗೆ ಭೂಮಿಯ ಋಣ ಅಷ್ಟೇ ಇದ್ದದ್ದು. ಅದು ಮುಗಿದಮೇಲೆ ಒಂದರೆಕ್ಷಣ ಕೂಡ ಇರೋಕೆ ಬಿಡೋದಿಲ್ಲ ವಿಧಾತ. ನಾವೆಲ್ಲ ಇಲ್ಲಿಗೆ ಬಂದಿರುವ ಬಾಡಿಗೆದಾರರು ಪುಟ್ಟೀ. ಗೊತ್ತಿಲ್ಲವೇನು ಅಲ್ಲಿದೆ ನಮ್ಮನೆ ಇಲ್ಲಿಗೆ ಬಂದೆವು ಸುಮ್ಮನೆ ಅಂತ. ಶಂಕರೂ ಗುರುಗಳು ಊರಿನಲ್ಲೇ ಇದ್ದಾರಂತೆ. ಫೋನ್ ಮಾಡು ಅವರಿಗೆ ಮನೆಗೆ ಇನ್ಯಾಕೆ ಹೊತ್ತೊಯ್ಯುವುದು. ಇಲ್ಲಿಯೇ ಜಮೀನಿನಾಗೆ ಅವರ ಹೆತ್ತವರ ಕೂಡ ಇವರನ್ನೂ ಕೂಡಿಸಿ ಕಳಿಸೋಣ” ಎಂದು ಪತಿಯ ದೇಹದ ಹತ್ತಿರ ಬಂದು “ಕಾರಣ ಏನೇ ಇರಲಿ, ಶರಣರ ಸಾವು ಮರಣದಲ್ಲಿ ನೋಡು, ಮರಣವೇ ಮಹಾನವಮಿ ಎಂಬ ಹಿರಿಯರ ನುಡಿಗಳಂತೆ ನೀವು ಮುಕ್ತಿ ಹೊಂದಿದಿರಿ. ನಾನು ಇಲ್ಲಿನ ಋಣ ಮುಗಿದಮೇಲೆ ಬಂದು ನಿಮ್ಮನ್ನು ಸೇರಿಕೊಳ್ಳುತ್ತೇನೆ” ಎಂದು ಭಾವುಕರಾಗಿ ನುಡಿದು ಪಾದಕ್ಕೆ ನಮಸ್ಕರಿಸಿ ಅಲ್ಲಿಯೇ ದುಃಖಿಸುತ್ತ ನಿಂತಿದ್ದ ಚಂದ್ರಿಕಾಳನ್ನು ಕಂಡು “ಈ ಸಮಯದಲ್ಲಿ ನೀನು ಹೆಚ್ಚು ಮನಸ್ಸಿಗೆ ಹಚ್ಚಿಕೊಳ್ಳುವುದು ಸರಿಯಲ್ಲ ಮುದ್ದೂ, ಬಾ..ನಿನ್ನ ತಾತನೇ ಮತ್ತೆ ನಿನ್ನಲ್ಲಿ ಹುಟ್ಟಿ ಬರಬಹುದು” ಎಂದು ಆಕೆಯ ಕೈ ಹಿಡಿದರು. ಒಂದು ಕೈಯಲ್ಲಿ ಮೊಮ್ಮಗಳು ದೇವಿಯನ್ನು ಮತ್ತೊಂದು ಕೈಯಲ್ಲಿ ಇನ್ನೊಬ್ಬ ಮೊಮ್ಮಗಳು ಚಂದ್ರಿಕಾಳನ್ನು ಹಿಡಿದುಕೊಂಡು “ಬನ್ನಿ, ಅವರೆಲ್ಲ ಸಿದ್ಧತೆಗಳನ್ನು ಮಾಡುವವರೆಗೆ ನಾವಲ್ಲಿ ಇರೋಣ.” ಎಂದು ತೋಟದ ಮನೆಯ ಒಳಕೊಣೆಗೆ ಕರೆದೊಯ್ದರು.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=41070
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
ಅಂದುಕೊಂಡೆ ಇರದ ತಿರುವು ಕತೆಯಲ್ಲಿ.
ಧನ್ಯವಾದಗಳು ನಯನಮೇಡಂ
ನೀಲಕಂಠಪ್ಪನವರ ಸಾವು ನಮಗೂ ಆಘಾತಕಾರಿ! ನನಗಂತೂ ಮಹೇಶ ಮತ್ತು ದೇವಿ ಮಾತುಗಳು ಅವರಿಗೆ ಆಘಾತಕಾರಿಯಾಗಿ ಪರಿಣಮಿಸಿತು ಎಂಬ ಅನುಮಾನ….ನಿಜವೇನೆಂದು ನೀವೇ ಹೇಳಬೇಕು…ನಾಗರತ್ನ ಮೇಡಂ…
ಓದುಗರ ಆಲೋಚನೆಗೆ …ಬಿಟ್ಟದ್ದು.. ಚಿಂತಿಸಿ..
ಪ್ರತಿ ಕ್ರಿಯೆ ಗೆ ಧನ್ಯವಾದಗಳು ಶಂಕರಿ ಮೇಡಂ
ಕೌಟುಂಬಿಕ ಅನಿವಾರ್ಯತೆಯಿಂದ ಕಾದಂಬರಿಯ ಕಂತುಗಳನ್ನು ಓದುತ್ತಿದ್ದರೂ ಕೌಡುಂಬಿಕ ಅನಿವಾರ್ಯತೆಯಿಂದ ಪ್ರತಿಕ್ರಿಯಿಸಲಾಗುತ್ತಿರಲಿಲ್ಲ.
ಈ ಕಂತಿನಲ್ಲಿ ದೇವಿಯ ಅಂತರಂಗದ ಭಾವನೆಗಳ ತೊಳಲಾಟವೂ, ಅನಿರೀಕ್ಷಿತ ತಿರುವುಗಳೂ ಪರಿಣಾಮಕಾರಿಯಾಗಿ ಮೂಡಿಬಂದಿದೆ.
ಧನ್ಯವಾದಗಳು ಪದ್ಮಾ ಮೇಡಂ
ಜಟಿಲ ಕೌಟುಂಬಿಕ ಸಮಸ್ಯೆಯ ಅನಾವರಣ ಚೆನ್ನಾಗಿದೆ
ಧನ್ಯವಾದಗಳು ಪದ್ಮಿನಿ ಮೇಡಂ..