ದೂರುವ ಮುನ್ನ ದಾಟಿದರೆ ಚೆನ್ನ!
ಜೀವನವು ಹೇಗೆ ಯಾವುದೇ ವ್ಯಾಖ್ಯಾನಕ್ಕೆ ನಿಲುಕುವುದಿಲ್ಲವೋ ಹಾಗೆಯೇ ಜೀವನದಲ್ಲಿ ಬಂದು ಹೋಗುವ ಸ್ನೇಹ, ಪ್ರೀತಿ, ಬಾಂಧವ್ಯ ಮೊದಲಾದ ಮನುಷ್ಯ ಸಂಬಂಧಗಳು. ಇದು ಹೀಗೆಯೇ, ಇದು ಇಂಥದೇ ಎಂದು ಹೇಳಿ ಗೆರೆ ಕೊರೆದ ತಕ್ಷಣ ಅದನ್ನು ಮೀರಿ ಬೆಳೆಯುವ ಲಕ್ಷಣ ಇಂಥವುಗಳದು. ಪೂರ್ವಗ್ರಹಿಕೆ ಮತ್ತು ತಪ್ಪುಗ್ರಹಿಕೆಗಳಿಲ್ಲದೇ ಜೀವಿಸುವುದೇ ಬಹು ದೊಡ್ಡ ಸಾಧನೆ ಎಂಬುದು ಮನವರಿಕೆಯಾಗುವ ಹೊತ್ತಿಗೆ ಮರಣ ಸಮೀಪಿಸಿರುತ್ತದೆ. ಸಾಯುವತನಕ ಬದುಕಿರುವುದೇ ಯಶಸ್ಸು ಎಂಬಂತಾಗುತ್ತದೆ.
ವಿಭಿನ್ನ ಆಚಾರ, ವಿಚಾರ, ಜೀವನ ಪದ್ಧತಿಗಳಿಂದ ಬೆಳೆದು ಬಯಲಾಗುವ ವೈವಿಧ್ಯಮಯ ನಡೆನುಡಿಗಳಲ್ಲಿ ಸಮಾನಮನಸ್ಕತೆ ಇದ್ದವರು ಸ್ನೇಹಿತರಾಗುತ್ತಾರೆ ಎಂಬುದೇನೋ ಒಪ್ಪುವಂಥದು. ಆದರೆ ಅದು ಅಲ್ಲದವರು ಶತ್ರುಗಳಾಗುತ್ತಾರೆ ಎಂಬುದೇ ಅಪಕ್ವ ಚಿಂತನೆ. ಸ್ನೇಹಕ್ಕೆ ವಿರುದ್ಧ ಪದ ಶತ್ರುತ್ವ ಎಂದು ಚಿಕ್ಕಂದಿನಿಂದ ಬಾಯಿಪಾಠ ಮಾಡಿಕೊಂಡವರೇ ನಮ್ಮ ನಿಜವಾದ ತಲೆನೋವಿಗರು. ಸ್ನೇಹಕ್ಕೆ ವಿರುದ್ಧ ಪದ ಶತ್ರುತ್ವ ಅಲ್ಲ. ಹಾಗಾದರೆ ಮತ್ತೇನು? ಸ್ನೇಹವಿಲ್ಲದ್ದು ಅಷ್ಟೇ. ಯಾರೋ ರಸ್ತೆಯಲ್ಲಿ ಹೋಗುತ್ತಿರುತ್ತಾರೆ. ಅವರು ನನಗೆ ಗೊತ್ತಿಲ್ಲ, ನನಗೆ ಸ್ನೇಹಿತರೂ ಅಲ್ಲ. ಹಾಗೆಂದ ಮಾತ್ರಕೇ ಅವರು ನನಗೆ ಶತ್ರುಗಳಾಗುತ್ತಾರೆಯೇ? ಸ್ನೇಹವೂ ಅಲ್ಲದ ದ್ವೇಷವೂ ಅಲ್ಲದ ನಡುವಿನ ಸ್ಥಿತಿಯೊಂದಿದೆ. ಸರಿಯೂ ಅಲ್ಲದ ತಪ್ಪೂ ಅಲ್ಲದ ನಡುವಿನ ಒಂದು ಸ್ಥಿತಿ ಇದೆ. ಇದನ್ನು ತಿಳಿಯಲು ಇಂಟಲೆಕ್ಚುವಲ್ ಆಗಬೇಕಿಲ್ಲ; ವ್ಯಕ್ತಿತ್ವದ ವೈಚಿತ್ರ್ಯಗಳನ್ನು ಭೂತಗನ್ನಡಿಯಲ್ಲಿಟ್ಟು ನೋಡುವ ಸೂಕ್ಷ್ಮತೆ ಸಾಕು!
ಈ ವಿರುದ್ಧ ಪದಗಳು ಮಾಡಿರುವ ಹಾವಳಿ ತುಂಬ. ಅಪ್ಪನಿಗೆ ಅಮ್ಮ ವಿರುದ್ಧ ಪದ ಅಲ್ಲ; ಅಣ್ಣನಿಗೆ ತಂಗಿ ವಿರುದ್ಧ ಪದ ಅಲ್ಲ. ಹಾಗೆಯೇ ಗಂಡನಿಗೆ ಹೆಂಡತಿ? ಶಾಲೆಗಳಲ್ಲಿ ಹೀಗೆ ಬಾಯಿಪಾಠ ಮಾಡಿದ ಮಕ್ಕಳು ಮುಂದೆ ದೊಡ್ಡವರಾಗಿ ಸಂಸಾರ ಮಾಡುವಾಗ ಗಂಡನನ್ನು ಹೆಂಡತಿಯು, ಹೆಂಡತಿಯನ್ನು ಗಂಡನು ಶತ್ರುವೆಂದೂ ಬಗೆದರೆ ಅದು ದಾಂಪತ್ಯವಾದೀತೇ? ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ವಿರುದ್ಧ ಪದವಲ್ಲ! ಜಸ್ಟ್ ವಿಭಿನ್ನ ಅಷ್ಟೇ! ಹಾಗೆಯೇ ಆನೆಗೆ ಇರುವೆ ವಿರುದ್ಧವಲ್ಲ. ಕಪ್ಪಿರುವೆಗೆ ಕೆಂಪಿರುವೆ ವಿರುದ್ಧವಲ್ಲ. ಲೋಕದಲಿ ಯಾವುದೂ ವಿರುದ್ಧಪದವಲ್ಲವೆಂಬ ಪ್ರಾಯೋಗಿಕ ವ್ಯಾಕರಣ ತಿಳಿಯುವ ತನಕ ನಮಗೆ ಮೆಚೂರಿಟಿ ಬರುವುದಿಲ್ಲ. (ವಾಸ್ತವವಾಗಿ ವ್ಯಾಕರಣದಲ್ಲಿ ಪ್ರಯೋಗವಾಗುವ ವಿರುದ್ಧ ಪದ (Opposite word / antonyms) ಎಂಬ ಪದವನ್ನು ವಿರುದ್ಧಾರ್ಥಕ ಪದ ಎಂದು ಕರೆಯಬೇಕು.)
ಪ್ರಪಂಚದ ಎಲ್ಲಕೂ ವಿರುದ್ಧ ಪದಗಳು ಇರುವುದಿಲ್ಲ. ಪರಸ್ಪರ ‘ವಿರುದ್ಧ ಸ್ವಭಾವ’ಗಳಿರುವ ಕೆಲವೇ ಕೆಲವು ಪದಾರ್ಥಗಳಿವೆ. ಅದೂ ಮೇಲ್ನೋಟಕ್ಕೆ ಅಷ್ಟೇ. ಎಲ್ಲಕೂ ವಿರುದ್ಧ ಪದಗಳನ್ನು ಹುಡುಕಿ, ಅದನೇ ನಮ್ಮ ಜೀವನದಲ್ಲಿ ಬೆದಕಿ ಬಾಳ್ವೆಯನ್ನು ರಾಡಿ ಮಾಡಿಕೊಂಡಿದ್ದೇವೆ! ನೀರು ಎಂಬುದು ಬೆಂಕಿಗೆ ವಿರುದ್ಧವಲ್ಲ; ಬೆಂಕಿಯನ್ನು ಆರಿಸುವ ಗುಣವಿದ್ದರೂ! ಬಿಸಿನೀರೂ ಬೆಂಕಿಯನ್ನು ಆರಿಸುವ ಶಕ್ತಿ ಹೊಂದಿದೆ! ನೀರಿನಲ್ಲಿ ವಿದ್ಯುತ್ ಇದೆ. ಒತ್ತಡ ಮತ್ತು ಘರ್ಷಣೆಗಳಿಂದ ಜೋರಾಗಿ ಹರಿದಾಗ ಏರ್ಪಡುವ ಶಕ್ತಿಸಂಚಯ. ಅದು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಇಟ್ಟುಕೊಂಡಿದೆ. ಹಾಗೆಂದು ನೀರನ್ನು ಮುಟ್ಟಿದರೆ ಕರೆಂಟು ಹೊಡೆಯುವುದಿಲ್ಲ. ನೀರಿನಲ್ಲಿದ್ದು ಕರೆಂಟು ಮುಟ್ಟಬಾರದು ಅಷ್ಟೇ. ನನ್ನ ಅಭಿಪ್ರಾಯ ಒಪ್ಪದವರನ್ನು ವಿರೋಧಿಗಳೆಂದು ತಿಳಿದರೆ ಆಗುವ ನಷ್ಟ ನನ್ನದೇ. ನನಗೆ ನನ್ನದೇ ಆದ ಅಭಿಮತವಿರುವಂತೆ, ಉಳಿವರಿಗೂ ಇದೆ ತಾನೇ. ನನ್ನ ಮಾತುಗಳನ್ನು ನೀವು ಗೌರವಿಸಬೇಕೆಂದು ಬಯಸುವ ನಾನು ಉಳಿದವರ ಮಾತುಗಳನ್ನು ಆಲಿಸುವ, ಅದರ ಸದಾಶಯ ಗುರುತಿಸುವ ವ್ಯವಧಾನವನ್ನು ಇಟ್ಟುಕೊಳ್ಳದಿದ್ದರೆ ಹೇಗೆ? ಹೀಗೆ ಜಗತ್ತು ನಾವಂದುಕೊಂಡಿರುವಂತೆ ಇರುವುದಿಲ್ಲ; ಹಾಗಂತ ನೊಂದುಕೊಂಡರೆ ಬೇಗ ಬದಲಾಗುವುದೂ ಇಲ್ಲ.
ವಿರುದ್ಧ ಎಂದರೆ ಎದುರು ಬದುರು ಅಂತರ್ಥ. ಎಲ್ಲ ಸಂದರ್ಭಗಳಲ್ಲೂ ಎದುರು ಬದುರು ನಿಂತವರು ವಿರುದ್ಧವಾಗಿಯೇ ಇರುತ್ತಾರೆಂದೇನಲ್ಲ. ಪ್ರಜಾಸತ್ತಾತ್ಮಕ ಹಾಗೂ ಸಹನಾವಂತಿಕೆಗಳ ಮೌಲ್ಯ ಅರಿತವರು ಹೀಗೆ ಎದುರು ಬದುರಾದರೂ ಗುದ್ದಾಡುವುದಿಲ್ಲ. ಗೌರವಿಸುವುದನ್ನು ಕಲಿಯುತ್ತಾರೆ. ಒಂದಲ್ಲ ಒಂದು ಕಾರಣಕೆ ಅಭಿಪ್ರಾಯ ಭೇದಗಳು ಏರ್ಪಡುತ್ತಿರುತ್ತವೆ. ಒಂದು ಕಡೆ ಕೆಲಸ ಮಾಡುವಾಗ, ಒಂದು ಕಡೆ ವಾಸಿಸುವಾಗ ಇದು ಸಹಜ. ಅಂಥಲ್ಲಿ ನಮ್ಮತನವನ್ನು ಪಕ್ಕಕಿಟ್ಟು, ನಮ್ಮನ್ನೇ ಕೇಂದ್ರವಾಗಿಸಿಕೊಂಡು ನೋಡುವುದನ್ನು ಬಿಟ್ಟು ವಿವಿಧ ದೃಷ್ಟಿಕೋನಗಳಿಂದ ಆಲೋಚಿಸಿ, ಎದುರಿನವರ ಅನಿಸಿಕೆಗಳಲ್ಲಿ ನಮ್ಮದನ್ನು ಬೆರೆಸಿ, ಒಟ್ಟಾರೆ ಇರುವ ಉದ್ದೇಶ, ಆಶಯ ಮತ್ತು ಸಮಸ್ಯಾಪೂರಣದತ್ತ ಕಾರ್ಯ ನಿರ್ವಹಿಸಬೇಕು. ಇದನ್ನೇ ಸಹಿಷ್ಣುತೆ ಎನ್ನುವುದು. ಮುಖ್ಯವಾಗಿ ಒಂದು ಸೂರಿನಡಿ ದಿನದ ಹಲವು ಗಂಟೆಗಳ ಕಾಲ ಕೆಲಸ ಮಾಡುವಾಗ ಟೀಮ್ ವರ್ಕ್ ಅಗತ್ಯ ಬೀಳುತ್ತದೆ. ಈಗಂತೂ ಕಾರ್ಪೊರೇಟ್ ಕ್ಷೇತ್ರದಲ್ಲಿ ಇದು ಅನಿವಾರ್ಯವೂ ಆಗಿದೆ. ಪ್ರಸ್ತುತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಕಾರ್ಪೊರೇಟ್ ಚಹರೆಗಳಿಂದ ಗುರುತಿಸಿಕೊಳ್ಳುತ್ತಿವೆ. ಹೀಗಿರುವಾಗ ಎಲ್ಲರಿಗೂ ತಂಡದ ಜೊತೆಗಿದ್ದು ಕೆಲಸ ಮಾಡುವ ಮನೋಧರ್ಮ ಇರುವುದಿಲ್ಲ. ಇಂಥ ಮನೋಭಾವ ನನ್ನದಲ್ಲ, ನಾನು ಒಂಟಿಸಲಗ ಎಂದು ಘೀಳಿಡದೇ ಐಡೆಂಟಿಟಿಗಳನ್ನು ಪಕ್ಕಕಿಟ್ಟು ಜೊತೆಗೆ ಸೇರಿ ಕೆಲಸ ಮಾಡಬೇಕು. ಮುಖ್ಯವಾಗಿ ಸ್ವಪ್ರತಿಷ್ಠೆ ಬಿಡಬೇಕು ಅಷ್ಟೇ. ಒಬ್ಬರೇ ಕೆಲಸ ಮಾಡುವುದಕಿಂತ ತಂಡವೊಂದರ ಜೊತೆ ಸೇರಿ ಕೆಲಸ ಮಾಡುವುದೇ ನಿಜವಾದ ಸಾಮಾಜಿಕತೆ. ಇದೊಂದು ಅರ್ಹತೆ. ಇದಕೆ ಯಾವ ಡಿಪ್ಲೊಮಾ, ಡಿಗ್ರಿಗಳಿಲ್ಲ. ತಾನೇ ಸಾಕಿಕೊಂಡ ಪೊಗರೆಂಬ ಟಗರಿನ ಪವರನ್ನು ಇಳಿಸಿಕೊಂಡು, ಖಾಲಿಮಾಡಿಕೊಳ್ಳುವುದೇ ಸರಿ ಮದ್ದು.
ಎಲ್ಲ ಸಂದರ್ಭಗಳಲ್ಲೂ ನಮ್ಮ ಮಾತೇ ನಡೆಯಬೇಕು, ನಮ್ಮದೇ ಸರಿ, ಅವರಿರುವುದೇ ನಮ್ಮನ್ನು ವಿರೋಧಿಸಲು ಎಂಬ ಸಂಕುಚಿತ ಭಾವನೆಯೇ ಮನೆ, ಕುಟುಂಬ, ಸಂಸ್ಥೆ, ದೇಶ ಮತ್ತು ಜಗತ್ತನ್ನು ಹಾಳು ಮಾಡುತ್ತಿರುವುದು. ಅವರಿರುವುದೇ ನಮ್ಮನ್ನು ವಿರೋಧಿಸಲು ಎಂದುಕೊಳ್ಳುವ ನಾವುಗಳು ಅವರಿಗಿಂತ ಮೊದಲೇ ನಾವೇ ಅವರನ್ನು ವಿರೋಧಿಸುವುದನ್ನು ಕಲಿತು, ಅಥವಾ ಹಾಗೆಂದು ಭ್ರಮಿಸಿ ಒಟ್ಟು ರಚನಾತ್ಮಕ ಕೆಲಸಗಳಿಗೇ ಕಲ್ಲು ಹಾಕುತ್ತೇವಲ್ಲ! ಇದು ಸರಿಯೇ? ಎಂದು ಮೊದಲಿಗೆ ನಾವು ಕೇಳಿಕೊಳ್ಳಬೇಕು. ಇನ್ನೊಬ್ಬರನ್ನು ಕೇಳುವ ಮುನ್ನ ನಮ್ಮನ್ನು ನಾವು ಅಂತರಂಗದಲ್ಲಿ ಕೇಳಿಕೊಳ್ಳಬೇಕು: ನನ್ನ ನಡೆ ಮತ್ತು ನುಡಿ ಸರಿಯಿದೆಯೇ? ಅಥವಾ ಅಹಮಿನಲಿ ಗೆದ್ದು ಬೀಗುವ ದುರಭ್ಯಾಸ ನನಗಿದೆಯೇ? ಏಕೆಂದರೆ ಅಹಮಿನ ಸಮರದಲಿ ಸೋತವರೇ ನಿಜವಿಜಯಿಗಳು! ನನ್ನನ್ನೇ ನಾನು ಅರಿಯದೇ, ನನ್ನೊಳಗಲ್ಲಿ ಬೆರೆಯದೇ ಇನ್ನೊಬ್ಬರಿಗೆ ಅರ್ಥ ಮಾಡಿಸುವ ವ್ಯರ್ಥ ಸಾಹಸದಲ್ಲಿ ಲೋಕದ ಮಂದಿ ಮಗ್ನವಾಗಿರುವುದನ್ನು ಕಂಡ ದಾಸವರೇಣ್ಯರು ‘ನಗೆಯು ಬರುತಿದೆ ನನಗೆ ನಗೆಯು ಬರುತಿದೆ, ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು’ ಎಂದು ವಿಡಂಬಿಸಿದರು. ಈ ಸಂದರ್ಭದಲ್ಲೊಂದು ಸಂಭವನೀಯ ಘಟನೆಯೊಂದನ್ನು ಕುರಿತು ಚರ್ಚೆ ಮಾಡೋಣ:
ಒಂದು ಸಂಸ್ಥೆಯ, ಕಂಪೆನಿಯ, ಕಛೇರಿಯ ಕಾರ್ಯಕ್ರಮವೊಂದಕ್ಕೆ ನನ್ನನ್ನು ಆಹ್ವಾನಿಸಲಿಲ್ಲ ಎಂದು ಅದರಲ್ಲೇ ಕೆಲಸ ಮಾಡುವ ನಾನು ಮುನಿಸಿಕೊಂಡರೆ ಅದಕ್ಕೆ ಅರ್ಥವಿಲ್ಲ! ಸ್ವಾರ್ಥವೇ ಎಲ್ಲ!! ಇನ್ನೊಬ್ಬರಲ್ಲಿ ಸಹೃದಯತೆ ಇಲ್ಲ ಎಂದು ಆರೋಪಿಸುವ ಮುನ್ನ ನನ್ನಲ್ಲಿ ಇದೆಯೇ? ಎಂದು ಕೇಳಿಕೊಳ್ಳಬೇಕು! ನಾನೇ ಹೃದಯ ವೈಶಾಲ್ಯ ತೋರಿ, ಬಿಡುವಾದಾಗ ಭಾಗಿಯಾಗಿ, ಶುಭ ಹಾರೈಸಿ, ಬರುವ ಸುಖ-ನೆಮ್ಮದಿ ನನ್ನಲ್ಲಿಲ್ಲ. ಕ್ಯಾತೆರಾಜರಾಣಿಯರೇ ನಾವೆಲ್ಲ! ಏನಾದರೊಂದು ಕೊಂಕು, ಕುಹಕ, ಕುಯುಕ್ತಿ, ಕ್ಯಾತೆ ತೆಗೆಯದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಇದೊಂದು ದುರಭ್ಯಾಸ ಮಾತ್ರವಲ್ಲ; ಮಾನಸಿಕ ಅನಾರೋಗ್ಯದ ಲಕ್ಷಣ. ಒಂಚೂರು ಸಹನೆ, ಒಂಚೂರು ಅರ್ಥ ಮಾಡಿಕೊಳ್ಳುವ ಗುಣ ನನ್ನಲಿಲ್ಲದೇ ಹೋದಾಗ ಜಗತ್ತೇ ನನ್ನ ವಿರುದ್ಧ ಚಿತಾವಣೆ ಮಾಡುತ್ತಿದೆಯೆಂಬ ಭ್ರಮೆ ಆವರಿಸುತ್ತದೆ. ಸಮಯಾವಕಾಶವಾದರೆ ನಾನೇ ಹೃತ್ಪೂರ್ವಕವಾಗಿ ಭಾಗವಹಿಸಬೇಕು. ದೊಡ್ಡತನ ತೋರಬೇಕು. ಆ ಮೂಲಕ ಸಣ್ಣತನವನ್ನು ಗೆಲ್ಲಬೇಕು. ನಾವು ದೊಡ್ಡವರಾಗುವ ಕೆಲವೇ ಕೆಲವು ಅವಕಾಶಗಳನ್ನು ಭಗವಂತ ದಯಪಾಲಿಸುತ್ತಾನೆ. ಅವನ್ನು ಒಳಗಣ್ಣಿಂದ ಕಾಣಬೇಕು; ಹೊರಗಣ್ಣನ್ನೇ ಮುಚ್ಚಿ ಮಾತಾಡಬಾರದು.
ಯಾವುದೇ ಸಂಸ್ಥೆಗೆ, ಇಲಾಖೆಗೆ, ಕಂಪೆನಿಗೆ ನಾನು ಮುಖ್ಯವಲ್ಲ; ಅವು ನನಗೆ ಮುಖ್ಯ ಅಷ್ಟೇ. ಅಂದರೆ ಒತ್ತಡದ ಆಧುನಿಕ ಜೀವನಶೈಲಿಯ ಒಂದು ಭಾಗವಾಗಿ ಈ ಈಗೋ ಪ್ರಾಬ್ಲಮ್! ಇದನ್ನು ಬಹಳ ನಾಜೂಕಾಗಿ ‘ಆ್ಯಟಿಟ್ಯೂಡ್’ ಎಂದು ಕರೆದು ಗೌರವಿಸಲಾಗಿದೆ. ‘ನನಗೆ ಹರ್ಟಾಯಿತು, ನನ್ನ ಈಗೋ ಒಪ್ಪಲ್ಲ, ನನ್ನ ಈಗೋ ಪರ್ಮಿಟ್ ಮಾಡ್ತಿಲ್ಲ!’ ಎಂದೆಲ್ಲ ಹೇಳಿಕೊಂಡು ತಿರುಗುವುದು ಪಾಸಿಟಿವ್ ವ್ಯಕ್ತಿತ್ವವಾಗಿಬಿಟ್ಟಿದೆ. ಅಪರಿಮಿತ ಆತ್ಮವಿಶ್ವಾಸ ಎಂದು ಇದನ್ನು ಕರೆದು ಬಹಳ ದೊಡ್ಡ ಕ್ವಾಲಿಫಿಕೇಷನ್ ಅನ್ನುವ ಹಾಗೆ ಬಿಂಬಿಸಿಕೊಳ್ಳುವ ಸೂಡೋ ನೇಚರಿದು. ಹಣ, ಅಧಿಕಾರ, ಪದವಿ, ಪ್ರತಿಷ್ಠೆ, ಪುರಸ್ಕಾರ, ಸ್ಥಾನಮಾನಗಳಲ್ಲಿ ಇದ್ದೇವೆಂದರೆ ಶಕ್ತ್ಯನುಸಾರ ಒಳ್ಳೆಯದನ್ನು ಮಾಡುವುದಕ್ಕೆ, ಅಹಮಿನಿಂದ ನರಳುವುದಕ್ಕಲ್ಲ! ಇದರಿಂದ ಯಾರಿಗೂ ಒಳಿತಾಗದು. ನನಗಾಗಲಿ, ನನ್ನ ಸಂಸ್ಥೆಗಾಗಲಿ, ದೇಶಕ್ಕಾಗಲಿ ಇನಿತೂ ಸದುಪಯೋಗವಾಗದು. ಸರಾಗವಾಗಿ ನಡೆಯುವ ಕೆಲಸ ಕಾರ್ಯಗಳಿಗೆ ಧಕ್ಕೆಯುಂಟಾಗುವುದೇ ಇದರ ನೆಗಟೀವ್ ಇಂಪ್ಯಾಕ್ಟ್.
ವಿದ್ಯೆಯು ಬೆಳಕಾಗಬೇಕು, ನನ್ನೊಂದಿಗಿರುವವರಿಗೂ! ದೀಪ ಹಚ್ಚಿದವ ನಾನೇ ಇರಬಹುದು. ಆದರೆ ಅದು ನನ್ನಾಚೆಗೂ ಬೆಳಗುತ್ತದೆ. ಇದೇ ಜ್ಯೋತಿಯ ಲಕ್ಷಣ. ಇಂಥ ಆತ್ಮಜ್ಯೋತಿಯು ಪರಂಜ್ಯೋತಿಯಾದರೆ ಅದನ್ನೇ ವ್ಯಕ್ತಿತ್ವದೌನ್ನತ್ಯ ಎನ್ನುವುದು. ‘ನಾನು ದೀಪವೂ ಆಗಲಾರೆ, ಅದು ಹರಡಿದ ಬೆಳಕಲ್ಲೂ ಬಾಳಲಾರೆ. ದೀಪದ ಬುಡದ ಕತ್ತಲಲೇ ಇರುವೆ’ ಎನ್ನುವವರಿಗೆ ಏನು ಹೇಳೋಣ? ಜಸ್ಟ್ ಕನಿಕರಿಸೋಣ! ಅದಕಾಗಿ ದೂರುವ ಮುನ್ನ ದಾಟೋಣ; ದೂರನೇ ದಾಟಿ ದೂರವಾಗೋಣ. ದೂರುವುದು ಒಂದು ವಾಸಿಯಾಗದ ಖಾಯಿಲೆ. ದೂರವಾಗುವುದು ಆರೋಗ್ಯದ ಕಲೆ.
–ಡಾ. ಹೆಚ್ ಎನ್ ಮಂಜುರಾಜ್,ಮೈಸೂರು
ನಿಮ್ಮ ವಿಚಾರವಂತಿಕೆಗೆ ನನ್ನ ನಮನಗಳು ಸಾರ್…ನೀವು ಬರೆಯುವ ಯಾವುದೇ ಬರಹವಾಗಲಿ..ಚಿಂತನೆಗೆ ಹಚ್ಚುವಂತಿರುತ್ತದೆ..ಅಧ್ಯಯನದ.. ಆಳದ ಅರಿವಾಗುತ್ತದೆ..ಸಾರ್
ನಿಮ್ಮ ಪ್ರತಿಕ್ರಿಯೆ ನನಗದು ಆಶೀರ್ವಾದ, ಧನ್ಯವಾದ ಮೇಡಂ
ಸೊಗಸಾಗಿದೆ ಲೇಖನ
ಧನ್ಯವಾದ ಮೇಡಂ, ಮೆಚ್ಚುನುಡಿಗೆ ವಂದನೆ.
ಇನ್ನೊಬ್ಬರನ್ನು ದೂರುವ ಮನಸ್ಥಿತಿಯಿಂದ ದೂರವಿರೋಣ… ನಮ್ಮನ್ನು ನಾವು ಅರಿಯಲು ಪ್ರಯತ್ನಿಸೋಣ ಎನ್ನುವ ಒಂದೊಳ್ಳೆಯ ಸಂದೇಶವನ್ನು ಹೊತ್ತ ವಿಚಾರಪೂರ್ಣ ಲೇಖನವು ಚಿಂತನಯೋಗ್ಯವಾಗಿದೆ…ಧನ್ಯವಾದಗಳು ಸರ್.
ಹೌದಲ್ಲವೇ ಮೇಡಂ…….
ಎಷ್ಟು ಕಾಲ ದೂರುತ ದುಗುಡ ಪಡುವುದು!
ಕಲಕಿದಷ್ಟು ಮನವು ಬಗ್ಗಡವಾಗುವುದು -ರಾಜ್ ಮಂಜು
ನಿಮ್ಮ ಸರಿಮಾತಿನ ಮೆಚ್ಚುಗೆಗೆ ವಂದನೆಗಳು
ನಿಮ್ಮ ತಾಳ್ಮೆ ಬರಹಕ್ಕೆ ನನ್ನ ನಮಸ್ಕಾರ ಅನುಭವದ ಬರಹಗಳು ಯಾವಾಗಲೂ ಓದುಗರಿಗೆ ಹತ್ತಿರ ಆಗುತ್ತದೆ ಸರ್
Nice article sir
ಇನ್ನೇನು ಉಳಿದಿಲ್ಲ ಎಲ್ಲಾ ದಿಲ್ ಇಂದ ಬಂದಿದೆ