ಅನ್ನದೇವರು

Share Button

ಕುಟೀರದ ಭೋಜನಶಾಲೆಗೆ ಹೋದರೂ ಯಾಕೋ ಊಟ ಮಾಡಲೇ ಮನಸಾಗಲಿಲ್ಲ. ಹಸಿವಾಗಿದೆಯೋ? ಹಸಿವಾಗಿಲ್ಲವೋ? ಒಂದೂ ತಿಳಿಯದೆ ನನ್ನ ಶರೀರದ ಐಚ್ಛಿಕ ಮತ್ತು ಅನೈಚ್ಛಿಕ ಕ್ರಿಯೆಗಳತ್ತ ಗಮನ ಕೊಟ್ಟೆ. ಆದರೂ ಏನೊಂದೂ ಗೊತ್ತಾಗಲಿಲ್ಲ. ‘ಹಸಿಯದಿರೆ ಉಣಬೇಡ’ ಎಂಬ ಸರ್ವಜ್ಞನ ಮಾತು ನೆನಪಾಗಿ ನಗು ಬಂತು. ಹುರುಳೀಸಾರು, ಪಲ್ಯ ನನಗಿಷ್ಟವಾದ ಮೆನು ಇದ್ದರೂ ಏಕೆ ಹೀಗಾಯಿತು? ಎಂದು ಕೇಳಿಕೊಂಡೆ. ನನ್ನ ಸರದಿ ಬರುವುದರೊಳಗೆ ಸಾಲಿನಿಂದ ಎದ್ದು ಬಂದೆ. ‘ತೀವ್ರವಾಗಿ ಅನಿಸುವ ತನಕ ಏನೊಂದನೂ ಮಾಡಬಾರದು’ ಎಂಬ ಗುರುಗಳ ಮಾತು ನೆನಪಿಗೆ ಬಂತು. ನನ್ನ ಸಹಪಾಠಿ ಗೆಳೆಯನಂತೂ ಭರ್ಜರಿಯಾಗಿ ಊಟ ಮಾಡುತ್ತಾ, ನನ್ನನ್ನು ಅಣಕಿಸಿದ. ‘ಇಂಥ ಸುಗ್ರಾಸ ಭೋಜನ ಬಿಟ್ಟು ಹೋಗುತ್ತಿರುವೆಯಲ್ಲಾ?’ ಎಂಬ ಕೀಟಲೆಯಿತ್ತವನ ಕಣ್ಣಲಿ. ನಾನು ನಕ್ಕು, ‘ನನ್ನ ಪಾಲಿನದೂ ನೀನೇ ಮಾಡು; ಆಮೇಲೆ ಅದರ ಶಕ್ತಿ ಸಂಚಯವನು ನನಗೆ ಊಡು’ ಎಂದು ಹೇಳಿ ಅವನನ್ನು ನಗಿಸಿ, ಹೊರ ಬಂದೆ.

ಮಧ್ಯಾಹ್ನವೇ ಆಕಾಶ ಕಪ್ಪಾಗಿ ಮೋಡ ಮುಸುಕಿ ಗಾಳಿ ಭೋರ್ಗರೆಯುತಿದ್ದ ವೇಳೆ. ಒಂಥರಾ ಮಳೆಗಾಲ ಮುಗಿದ ಚಳಿಗಾಲ ಶುರುವಾಗದ ಸಂಕ್ರಮಣಾವಸ್ಥೆ. ಊಟ ಮಾಡದ ನನ್ನ ವರ್ತನೆಯನ್ನು ಮತ್ತೊಮ್ಮೆ ಮೆಲುಕು ಹಾಕಿದೆ. ಆಗಾಗ ಇಂಥ ಸ್ಕಿಪ್‌ಗಳನ್ನು ಮಾಡಿ ಅಭ್ಯಾಸವಾಗಿತ್ತಾದರೂ ದಣಿದ ದೇಹಕ್ಕೆ ಹಸಿವೇ ಆಗಿಲ್ಲವಲ್ಲ! ಎಂಬ ಆತಂಕ ಬೆರೆತ ಅಚ್ಚರಿ ನನ್ನನ್ನು ಕಾಡತೊಡಗಿತು. ಮನುಷ್ಯ ಜೀವನ ಎಷ್ಟು ವಿಚಿತ್ರ! ‘ತಿಂದೂ ಇರಲಾರ; ತಿನ್ನದೆಯೂ ಇರಲಾರ.’ ಬಹುಶಃ ನಾನಂಥ ವಿಚಿತ್ರಪ್ರಾಣಿ ಎನಿಸಿ ನಗು ಬಂತು. ನಮ್ಮನ್ನು ನಾವು ವಿಡಂಬಿಸಿಕೊಳ್ಳುವುದು ಎಲ್ಲಕಿಂತ ದೊಡ್ಡ ಆರೋಗ್ಯ. ಇದರಿಂದ ಬೇರೊಬ್ಬರು ನಮ್ಮನು ವ್ಯಂಗ್ಯಿಸಿದರೂ ಏನೂ ನೋವಾಗುವುದಿಲ್ಲ. ಈ ಅಬ್ಸೇಷನ್‌ನಿಂದ ಹೊರ ಬರಬೇಕೆಂದು ಬಲವಂತವಾಗಿ ಬೇರೊಂದು ಚಿಂತನೆಯ ಸೆಳಕನ್ನು ಹುಡುಕಿದೆ. ಮನಸು ಹುರುಳಿಯನ್ನು ಕುರಿತು ಆಲೋಚಿಸಿತು. ಹುರುಳಿಯೆಂಬ ದ್ವಿದಳ ಧಾನ್ಯದ ಲಕ್ಷಣವೇ ಅದ್ಭುತ. ಕಲ್ಲು ಮುಟ್ಟಿ ಪ್ರದೇಶದಲ್ಲೂ ಅದು ಹುಲುಸಾಗಿ ಬೆಳೆಯುತ್ತದೆ, ಬೀದಿ ಮಕ್ಕಳು ಬೆಳೆದಂತೆ. ಬಿರುಸು ಧಾನ್ಯವಾದರೂ ಪೌಷ್ಟಿಕಾಂಶ ಇರುವಂಥದು. ಗಟ್ಟಿಯಾದುದರಿಂದ ಜೀರ್ಣವಾಗಲು ಸಮಯ ಕೇಳುತ್ತದೆ; ಬೇಯಿಸುವಾಗಲೂ ಅಷ್ಟೇ. ಶಾಖ ಜಾಸ್ತಿ ಬೇಡುತ್ತದೆ. ಮೊಳಕೆ ಕಟ್ಟಿದ ಹುರುಳಿಯಲ್ಲಿ ಜೀವಸತ್ತ್ವ ಹೆಚ್ಚು. ಆದರೆ ಇದು ದೇಹದಲ್ಲಿ ಉಷ್ಣಾಂಶವನ್ನು ಹೆಚ್ಚು ಮಾಡುವುದರಿಂದ ನಮ್ಮ ಹಿಂದಿನವರು ಮಳೆಗಾಲ ಮತ್ತು ಚಳಿಗಾಲದಲ್ಲಿ ಮಾತ್ರ ಬಳಸುತ್ತಿದ್ದರು. ದೇಹದ ಉಷ್ಣತೆ ಹೆಚ್ಚಾಗುವುದರಿಂದ ಅದನ್ನು ಸಮತೋಲಿಸಲು ಹೆಸರುಬೇಳೆ ಮತ್ತು ಹೆಸರುಕಾಳು ಬಳಸುವುದು ರೂಢಿ. ಏಕೆಂದರೆ ಇದು ದೇಹವನ್ನು ತಂಪಾಗಿಸುವಂಥದು. ನಮ್ಮ ಮನೆಯಲ್ಲಿ ಹುರುಳಿಸಾರು ಮತ್ತು ಪಲ್ಯ ಮಾಡಿದ ದಿನ ತಪ್ಪದೇ ಹೆಸರುಬೇಳೆ ಪಾಯಸ ಮಾಡುತ್ತಿದ್ದುದು ನೆನಪಾಗಿ ಒಂದೆರಡು ನಿಮಿಷ ಆ ಬಾಲ್ಯಕಾಲಕ್ಕೆ ಟೈಮ್ ಟ್ರಾವೆಲ್ ಮಾಡಿದೆ! ದೇಹದ ಮಾತನ್ನು ಆಲಿಸಿದ್ದರಿಂದ ನನಗಿಷ್ಟವಾದರೂ ಊಟ ಮಾಡದೇ ವಾಪಸಾಗಿದ್ದಕೆ ನನ್ನ ಬಗ್ಗೆಯೇ ಸಮಾಧಾನವಾಯಿತು. ಯಾವುದೇ ಗಿಲ್ಟು ಕಾಡಲಿಲ್ಲ. ಅಷ್ಟರಲಿ ನಾನು ಅನ್ಯಮನಸ್ಕನಾಗಿದ್ದನ್ನು ಕಂಡ ಗುರುವು ಸಮೀಪ ಬಂದರು. ‘ಯಾಕೆ ಊಟ ಮಾಡಲಿಲ್ಲ?’ ಎಂದರು. ಕಾರಣ ಹೇಳಿದೆ. ʼಸರಿʼ ಎಂದು ಚುಟುಕಾಗಿ ಉತ್ತರಿಸಿ, ಸುಮ್ಮನಾದರು. ‘ಗುರುವೇ, ನಿಮ್ಮದು ಊಟವಾಯಿತೆ?’ ಎಂದೆ. ‘ಇಲ್ಲ, ಇವತ್ತು ನನ್ನದು ನೀರಾಹಾರ’ ಎಂದರು. ಹದಿನೈದು ದಿವಸಗಳಿಗೊಮ್ಮೆ ಕೇವಲ ನೀರು, ಪಾನಕ, ಎಳನೀರು, ಮಜ್ಜಿಗೆಯನ್ನು ಮಾತ್ರ ಸೇವಿಸಿ ಸುಮ್ಮನಾಗುತಿದ್ದರು. ಇದು ನನಗೆ ಗೊತ್ತಿತ್ತು.

ಊಟ ಮಾಡದೇ ಕುಳಿತಿದ್ದ ಗುರುಗಳು ಮೆಲ್ಲಗೆ ಮಾತಾಡಿದರು. ಮಳೆಯ ಬಗ್ಗೆ ಅಂದುಕೊಂಡು ಕಿವಿಯಾದೆ! ‘ನಾನು ಮಳೆ ಕುರಿತು ಮಾತಾಡಲ್ಲ, ಅಂಥದೇ ಇನ್ನೊಂದರ ಬಗ್ಗೆ ಹೇಳ್ತಿದೀನಿ’ ಅಂದರು. ಆಸಕ್ತಿಯಾದೆ.

‘ನೋಡು ಆಹಾರದ ವಿಚಾರದಲಿ ತುಂಬ ತಲೆ ಕೆಡಿಸಿಕೊಳ್ಳಬಾರದು. ಹಸಿದಿರುವಾಗಲೂ ತಿನ್ನುವುದರತ್ತಲೇ ಗಮನ; ಹಾಗೇನೇ ಡಯಟ್ ಅಥವಾ ಉಪವಾಸ ಮಾಡುವಾಗಲೂ ಅನ್ನದ ಬಗ್ಗೇನೇ ಗಮನ! ಒಬ್ಬರದು ತಿನ್ನಬೇಕು ಅಂತ; ಇನ್ನೊಬ್ಬರದು ತಿನ್ನಬಾರದು ಅಂತ! ಆದರೆ ಇಬ್ಬರೂ ಒಂದೇ ದೋಣಿಯ ಪ್ರಯಾಣಿಕರು ಮಾತ್ರವಲ್ಲ ಇಬ್ಬರಿಗೂ ಯಾವ ವ್ಯತ್ಯಾಸ ಇಲ್ಲ’ ಅಂದರು. ನಾನು ದಿಗ್ಭ್ರಮಿತನಾದೆ. ನಸು ನಕ್ಕು ಹೇಳಿದರು. ‘ಈ ಜಗತ್ತಿನ ಸ್ವರೂಪವೇ ಹೀಗೆ. ನಿನ್ನ ತಲೆಯಲ್ಲಿ ಸ್ನೇಹಿತರಿಗಿಂತ ಶತ್ರುಗಳಿಗೇ ಜಾಗ ಜಾಸ್ತಿ. ಶತ್ರುಗಳನ್ನು ಮೆಚ್ಚಿಸಲು ನಿರಂತರ ಪ್ರಯತ್ನ ಪಡುವೆ. ಇಷ್ಟಕೂ ಅವರು ಒಂದು ಕಾಲದಲಿ ಮಿತ್ರರಾಗಿದ್ದವರೇ! ಒಂದರ ಎರಡು ಅತಿಗಳು ಒಂದೇ. ಇದು ನಿನಗೆ ಅರ್ಥವಾಗಬೇಕಾದರೆ ಉದಾಹರಣೆ ನೀಡುತ್ತೇನೆ. ಹಗ್ಗದ ಒಂದು ತುದಿ ಮತ್ತು ಅದರ ಇನ್ನೊಂದು ತುದಿ ಬೇರೆ ಬೇರೆಯಲ್ಲ. ಆ ಎರಡು ತುದಿಗಳನ್ನು ಸೇರಿಸಿದರೆ ವೃತ್ತಾಕಾರ ಸಿಗುತ್ತದೆ. ಈ ವೃತ್ತಾಕಾರವೇ ಪೂರ್ಣ. ಒಂದು ಪ್ರೊಸೆಸ್ ಕಂಪ್ಲೀಟಾಯಿತು ಎಂದರ್ಥ. ಜಗತ್ತನ್ನು ಒಂದು ಹಗ್ಗವೆಂದು ಭಾವಿಸು. ಅದರ ಒಂದು ತುದಿ ಎಲ್ಲೋ ಇದೆ; ನಿನಗೆ ಕಾಣಿಸುತ್ತಿಲ್ಲ. ಇನ್ನೊಂದು ತುದಿಯನ್ನು ನೀನು ಕೈಯಲ್ಲಿ ಹಿಡಿದುಕೊಂಡು ನನ್ನ ಬಳಿ ಇರುವುದು ಇದೊಂದೇ ಎನ್ನುತ್ತಿರುವೆ. ಇದೇ ಅಜ್ಞಾನ. ಅತಿಯಾದ ದ್ವೇಷವು ಅತಿಯಾದ ಸ್ನೇಹದ ಇನ್ನೊಂದು ರೂಪ. ಅತಿಯಾದ ಹಸಿವು ಆಹಾರವನ್ನು ಜಪಿಸುತ್ತದೆ. ಅತಿಯಾಗಿ ತಿಂದ ಮೇಲೆ ತಿಂದದ್ದರ ಎದುರು ನಿಂತಿರುವ ಉಪವಾಸವನ್ನು ಕುರಿತು ಮನವು ಚಿಂತಿಸುತ್ತದೆ. ಡಯಟ್ ಮಾಡುವವರು ಮಾನಸಿಕವಾಗಿ ಆಹಾರವನ್ನು ತಿಂದು ತೇಗುತ್ತಾರೆ. ತಿನ್ನುವವರು ಡಯಟ್ ಬಗ್ಗೆ ಯೋಚಿಸತೊಡಗುತ್ತಾರೆ. ಇವೆರಡೂ ಅತಿಗಳು. ಅದಕಾಗಿ ನಾವು ವ್ಯಕ್ತಮಧ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಇದೇ ಬುದ್ಧರು ಹೇಳಿದ ಮಧ್ಯಮ ಮಾರ್ಗ. ತಿನ್ನದೆಯೂ ಇರಬಾರದು; ತಿನ್ನುತ್ತಲೇ ಇರಬಾರದು. ಇದು ಎಲ್ಲಕೂ ಅನ್ವಯವಾಗುತ್ತದೆ. ಅತಿಯಾದರೆ ಅಮೃತವೂ ವಿಷವೇ! ಎಂಬ ಮಾತೇ ಇಂಥ ವಿಚಾರಲಹರಿಯನ್ನು ಸಮರ್ಥಿಸುವುದು.

‘ಅನ್ನಂ ಬ್ರಹ್ಮೇತಿ’ ಎಂಬುದು ವೇದೋಕ್ತ. ಅನ್ನದಿಂದಲೇ ಜನಿಸಿ, ಜೀವಿಸಿ, ಕೊನೆಗೆ ತಾನೇ ಮತ್ತೊಂದಕ್ಕೆ ಅನ್ನವಾಗಿ ಹೋಗುವುದು ಅನ್ನದ ಚಕ್ರ. ಆದ್ದರಿಂದಲೇ ನಮ್ಮ ಧರ್ಮ ಮತ್ತು ಸಂಸ್ಕೃತಿಯಲ್ಲಿ ಅನ್ನಕ್ಕೆ ದೈವಿಕ ಸ್ಥಾನ. ಅನ್ನದೇವರ ಮುಂದೆ ಇನ್ನು ದೇವರು ಇಲ್ಲ ಎಂಬ ಮಾತಿದೆ. ‘ಅಹಂ ಅನ್ನಂ, ಅಹಮನ್ನಾದಃ’ ಅಂದರೆ ನಾನು ಈ ಲೋಕಕ್ಕೆ ಅನ್ನವಾಗಿದ್ದೇನೆ; ಈ ಲೋಕವು ನನಗೆ ಅನ್ನವಾಗಿದೆ ಎಂದರ್ಥ. ಇದು ತೈತ್ತಿರಿಯೋಪನಿಷತ್ತಿನ ಸಾಲು. ಯಾವುದು ಸೇವಿಸಲ್ಪಡುವುದೋ ಅದೇ ಅನ್ನ. ಅಂದರೆ ಅನ್ನವನ್ನು ತಿನ್ನುವವನೂ ನಾನೇ ಆಗಿದ್ದೇನೆ. ಇಲ್ಲಿ ಅನ್ನವೆಂದರೆ ಕೇವಲ ಆಹಾರವಲ್ಲ, ಆಹಾರ ಮೀರಿದ ಆಲೋಚನೆ, ಕಲ್ಪನೆ, ಕಾಮನೆ, ಭಾವನೆ ಏನೇ ಆಗಿರಬಹುದು. ಇಷ್ಟೊಂದು ವಿಶಾಲಾರ್ಥ ಇದೆ, ಇದರ ಮಾತಲ್ಲಿ! ಸಸ್ಯಾದಿಗಳು ಪ್ರಾಣಿಗಳಿಗೆ ಅನ್ನ, ಪ್ರಾಣಿಗಳು ಇನ್ನು ಕೆಲವು ಪ್ರಾಣಿಗಳಿಗೆ ಅನ್ನ, ಪಶುಪ್ರಾಣಿ, ಕೀಟಗಳೆಲ್ಲ ಸತ್ತ ಮೇಲೆ ಮತ್ತೆ ಸಸ್ಯಗಳಿಗೆ ಅನ್ನ, ಪ್ರಳಯವಾದಾಗ ಈ ಜಗತ್ತೇ ಲಯಕರ್ತನಾದ ರುದ್ರನ ಅನ್ನ! ಅಖಂಡ ಬ್ರಹ್ಮಾಂಡಗಳು ಭಗವಂತನ ಅನ್ನ. ನಾನಿದನ್ನು ಬೆಳೆಸುವುದಿಲ್ಲ. ಇದು ಅನ್ನದ ತತ್ತ್ವಶಾಸ್ತ್ರ. ಲೌಕಿಕದಲ್ಲೇ ವ್ಯಾಖ್ಯಾನಿಸುವೆ.

ಆಹಾರ ಎಂದರೆ ಜೀವ. ಉಪವಾಸ ಎಂದರೆ ಅದರ ಭಾವ. ದೈಹಿಕವಾಗಿ ತಿನ್ನುವುದು ಬೇರೆ; ಮಾನಸಿಕವಾಗಿ ತಿನ್ನುವುದು ಬೇರೆ. ಯಾವತ್ತೂ ನಮ್ಮ ಮನಸ್ಸು ನಮಗೆ ವಿರುದ್ಧವೇ. ಏನನ್ನು ಕುರಿತು ಚಿಂತಿಸಬೇಕೆನಿಸುವುದೋ ಅದರ ವಿರುದ್ಧವನ್ನೇ ನಮ್ಮ ಕಣ್ಮುಂದಿಟ್ಟು ಆಟವಾಡುವುದು. ಅದಕಾಗೇ ಇದನ್ನು ಚಂಚಲ ಎಂದು ಕರೆಯುವುದು. ಈ ಕಳ್ಳಾಟವನ್ನು ಸುಮ್ಮನಿದ್ದು ಅರಿಯಬೇಕು. ಇದಕಾಗಿ ಏಕಾಂತ ಬೇಕು. ಅದನ್ನೇ ನಮ್ಮವರು ಧ್ಯಾನ ಎಂದರು.

ತಿನ್ನುವಿಕೆಯು ಒಂದು ದಿನದ ಬಾಳಲ್ಲ; ಬದುಕಲ್ಲ! ಸಾಯುವವರೆಗೂ ಅಥವಾ ಆರೋಗ್ಯ ಕೈ ಕೊಡುವವರೆಗೂ ತಿನ್ನುತ್ತಲೇ ಇರುತ್ತೇವೆ. ಏನು ತಿನ್ನಬೇಕು? ಎಷ್ಟು ತಿನ್ನಬೇಕು? ಯಾವಾಗ ತಿನ್ನಬೇಕು? ಮತ್ತು ಯಾವಾಗ ತಿನ್ನಬಾರದು ಎಂಬುದನ್ನು ಟೀವೀ ಪ್ರೋಗ್ರಾಮುಗಳು ಹಾಗೂ ಯೂಟ್ಯೂಬು ಚಾನೆಲ್ಲುಗಳು ಹೇಳುವಂತೆ ಒಂದೇ ನಿಯಮ ಮಾಡಲು ಬರುವುದಿಲ್ಲ. ಇಷ್ಟಕೂ ಆಯಾ ಪ್ರದೇಶದಲ್ಲಿ ಬೆಳೆಯುವ ಸ್ಥಳೀಯ ಆಹಾರವನ್ನೇ ನಾವು ಬಳಸಿದರೆ ಹೆಚ್ಚು ಸೂಕ್ತ. ಸ್ಥಳೀಯವಾಗಿ ಏನನ್ನು ಬೆಳೆಯಬೇಕೆಂಬುದನ್ನು ನಮ್ಮ ರೈತಾಪಿ ಸಮುದಾಯ ಕಂಡುಕೊಂಡಿರುತ್ತದೆ. ಅವರಿಗೆ ಅವರ ಹಿಂದಿನವರು ಹೇಳಿ ಹೋಗಿರುತ್ತಾರೆ. ನಾನು ಎಲ್ಲ ರೀತಿಯ ಜಾಗತೀಕರಣವನ್ನೂ ಒಪ್ಪುತ್ತೇನೆ. ಏಕೆಂದರೆ ಇರುವುದೊಂದೇ ಭೂಮಿ. ಆದರೆ ಆಹಾರದ ಜಾಗತೀಕರಣವನ್ನು ಸಮರ್ಥಿಸಲಾರೆ. ಇದರಿಂದಲೇ ಇಂದು ಹಲವು ನೂತನ ಕಾಯಿಲೆಗಳು ನಮ್ಮನ್ನು ನರಳಿಸುತ್ತಿರುವುದು. ನಾವು ತುಂಬ ಹಿಂದಿನಿಂದಲೂ ಗುಂಪು ಗುಂಪಾಗಿ ಒಂದು ಕಡೆ ಜೀವನ ಮಾಡುತ್ತಿದ್ದವರು. ಹಳೆಯ ಶಿಲಾಯುಗದ ಮಾನವರು ಅಲೆಮಾರಿಗಳು, ನಿಜ. ಆದರೆ ಮತಿವಂತ ಮಾನವ ಅಂದರೆ ಹೋಮೋ ಸೆಪಿಯನ್ಸ್ ಆದ ಮೇಲೆ ನಾವು ಮನೆ, ಕುಟುಂಬ, ಪಶುಪಾಲನೆ, ಬೇಸಾಯ ಅಂತ ಒಂದು ಕಡೆ ಇರಲು ಶುರುವಾದೆವು. ಅಲ್ಲಿ ಆ ಪ್ರದೇಶದಲ್ಲಿ ಆ ವಾಯುಗುಣ ಮತ್ತು ಹವಾಮಾನಕ್ಕೆ ತಕ್ಕಂತೆ ಏನು ಬೆಳೆಯುತ್ತಿತ್ತೋ ಅದನ್ನು ಕಂಡುಕೊಂಡ ರೈತರು ಕೃಷಿ ಮಾಡಿದರು. ಇದು ಒಂದೆರಡು ವರುಷಗಳ ಮಾತಲ್ಲ; ಸಾವಿರಾರು ವರುಷಗಳ ಅವಧಿಯಲ್ಲಿ ಕಂಡುಕೊಂಡ ತಿಳಿವಿದು. ನೀರಿರುವ ಅಥವಾ ನೀರಿಲ್ಲದ ಪ್ರದೇಶ, ಉಷ್ಣತೆ ಹೆಚ್ಚಿರುವ ಅಥವಾ ತಂಪು ಹವೆಯಿಂದ ಕೂಡಿರುವ ಹೀಗೆ ನಿಸರ್ಗದ ಹಲವು ಗುಟ್ಟುಗಳನ್ನು ತನ್ನ ಅನುಭವಮಾತ್ರದಿಂದಲೇ ಅರಿತ ನಮ್ಮ ಹಿಂದಿನವರು ಅದನ್ನೇ ಯಥೇಚ್ಛವಾಗಿ ಬೆಳೆದರು. ತಮಗೆ ಬೇಕಾದುದನ್ನು ಬೇರೊಬ್ಬರು ಬೇರೊಂದು ಕಡೆ ಬೆಳೆದಿದ್ದನ್ನು ವಿನಿಮಯ ಮಾಡಿಕೊಂಡರು. ಹೀಗಿರುವಾಗ ಒಂದು ವಿಧವಾದ ಆಹಾರವು ನಂನಮ್ಮ ಶರೀರಕ್ಕೆ ಒಗ್ಗಿತು; ಅಥವಾ ನಮ್ಮ ಶರೀರವು ಒಗ್ಗಿಸಿಕೊಂಡಿತು. ಹಾಗೆಯೇ ನಮ್ಮ ಶರೀರ ರಚನೆಯು ವಿನ್ಯಾಸಗೊಂಡಿತು. ಇದೆಲ್ಲಾ ಹೀಗೆ ಹೀಗೆಯೇ ಆಯಿತು ಎಂದು ಸಿದ್ಧಾಂತ ಮಾಡಿಯೋ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ನೋಡಿಯೋ ಹೇಳಲಾಗದು. ಒಟ್ಟಿನಲ್ಲಿ ಸ್ಥಳೀಯವಾಗಿ ಬೆಳೆದ ಆಹಾರಕ್ಕೆ ನಾವು ಒಗ್ಗಿಕೊಂಡಿದ್ದೆವು. ಆದರೆ ಆಹಾರದ ಜಾಗತೀಕರಣ ನಡೆದು ಎಲ್ಲವೂ ಅಯೋಮಯವಾದವು; ನಮ್ಮ ದೇಹದೊಳಗಿರುವ ಬಯಲಾಜಿಕಲ್ ಕ್ಲಾಕ್‌ಗೆ ಇದು ಅರಿವಾಗಬೇಕಾದರೆ ಮತ್ತೆ ನೂರು ಸಾವಿರ ವರುಷಗಳು ಬೇಕು; ಅಲ್ಲಿಯವರೆಗೂ ನಾವು ಆಹಾರದಿಂದಲೇ ಹಲವು ತೆರನಾದ ಹೊಸ ರೋಗಗಳನ್ನು ಅನುಭವಿಸಬೇಕು.’

ನಾನು ಅವಾಕ್ಕಾದೆ. ಗುರುಗಳು ಒಂದೇ ಸಮನೆ ಮಾತಾಡುತಿದ್ದರು. ಅವರ ಮುಂದಿನ ಮಾತುಗಳು ನನ್ನ ಕಿವಿಗೆ ಬೀಳಲೇ ಇಲ್ಲ. ಅವರು ಹೇಳಿದ ವಿಚಾರಗಳನ್ನು ಮನಸ್ಸು ಮಥಿಸುತ್ತಿತ್ತು. ಆಹಾರದ ಜಾಗತೀಕರಣವನ್ನು ನಮ್ಮ ಗುರುಗಳು ಆಕ್ಷೇಪಿಸುತ್ತಿದ್ದಾರೆ ಎಂದಷ್ಟೇ ತಲೆಗೆ ಹೋಯಿತು. ಈ ಆಲೋಚನೆಯ ಹಿಂದೆಯೇ ನಮ್ಮಜ್ಜಿ ಹೇಳುತ್ತಿದ್ದ ಸಂಗತಿಯೊಂದನ್ನು ಕೇಳಿದೆ. ‘ಗುರುಗಳೇ, ನಮ್ಮಜ್ಜಿ ಹೇಳುತ್ತಿದ್ದರು: ಭೂಮಿಯಲ್ಲಿ ದುಡಿಯುವ ಮತ್ತು ಶ್ರಮಜೀವನ ನಡೆಸುವ ಮಂದಿಯು ತಾಮಸ ಮತ್ತು ಗಟ್ಟಿಯಾದ ಆಹಾರವನ್ನು ಸೇವಿಸುತ್ತಾರೆ; ಅದೇ ದೈಹಿಕ ಶ್ರಮವಿಲ್ಲದ ನಮ್ಮಂಥವರು ಸರಳವಾದ ಮತ್ತು ಸುಲಭವಾಗಿ ಜೀರ್ಣವಾಗುವಂಥ ಸಾತ್ತ್ವಿಕ ಆಹಾರ ಸೇವಿಸುತ್ತಾರೆ ಎನ್ನುತ್ತಿದ್ದರು. ಇದರ ಹಿಂದೆ ಏನಾದರೂ ಸೂಕ್ತ ತಾರ್ಕಿಕತೆ ಇದೆಯೇ?’

ಅಷ್ಟರಲ್ಲಿ ಕುಟೀರಕೆ ಭೇಟಿ ಕೊಟ್ಟವರಲ್ಲಿ ಕೆಲವರು ಗುರುಗಳನ್ನು ಕಾಣಲು ಬಂದರು. ಒಂದೆರಡು ಕುಶಲೋಪರಿ ಮಾತು ಮತ್ತು ನಗುಗಳ ವಿನಿಮಯವಾಯಿತು. ಸರಳತೆಯು ವಿರಳವಾಗುತ್ತಿರುವ ಇಂಥ ಕಾಲದಲ್ಲಿ ಸರಾಗವಾಗಿ ನಡೆಯುತ್ತಿರುವ ಆಶ್ರಮದ ಚಟುವಟಿಕೆಗಳನ್ನು ಕುರಿತಂತೆ ಮೆಚ್ಚುಮಾತುಗಳು ಹೊರ ಬಂದವು. ಎಲ್ಲಕೂ ಗುರುಗಳ ಹಸನ್ಮುಖತೆಯೇ ಉತ್ತರ. ಅವನಿಟ್ಟಂತಿದ್ದೇನೆ; ಅವನೇ ನಡೆಸುತ್ತಿದ್ದಾನೆ ಎಂಬ ಒಂದೇ ವಾಕ್ಯ ಯಾವಾಗಲೂ ಗುರುವಿನ ಬಾಯಲ್ಲಿ. ಇಂಥ ಅಹಮಿಳಿದ ವ್ಯಕ್ತಿಯ ಬಳಿ ಒಂದು ಧನಾತ್ಮಕ ಶಕ್ತಿ. ಅದಕಾಗಿಯೇ ಅಲ್ಲವೇ ನಾನೂ ಆಗಾಗ ಕಂಡು ಆನಂದಗೊಂಡು ಜೀವೋತ್ಸಾಹ ಹೊಂದುವುದು ಎಂದು ಅವರೊಂದಿಗೆ ನಾನೂ ಪಾಲ್ಗೊಂಡೆ. ಎಲ್ಲರೂ ಹೊರಟ ಮೇಲೆ ಗುರುಗಳು ನನ್ನತ್ತ ತಿರುಗಿದರು. ಅವರು ಏನನ್ನೂ ಮರೆಯುವುದಿಲ್ಲ ಎಂಬುದಕೆ ಇದು ಇನ್ನೊಂದು ಸಾಕ್ಷಿಯಾಯಿತು.

‘ನೋಡು, ಆಹಾರದಿಂದ ನಮ್ಮ ಸ್ವಭಾವ ಬದಲಾಗದು; ಆದರೆ ನಮ್ಮ ಸ್ವಭಾವದಿಂದ ಆಹಾರದ ಆಯ್ಕೆಯಾಗುತ್ತದೆ. ಎಲ್ಲವೂ ಹಲವು ನೂರು ಸಾವಿರ ವರುಷಗಳ ಪ್ರಾಕ್ಟೀಸಿನ ಪ್ರತಿಫಲ. ನಮ್ಮ ಪೂರ್ವಜರು ಏನನ್ನೋ ಅನುಸರಿಸಿದರು ಎಂದರೆ ಮಕ್ಕೀಕಾ ಮಕ್ಕಿ ಅಲ್ಲ; ಯಾವುದೋ ಗಹನ ಸತ್ಯ ಅದರಲ್ಲಿ ಮಿಳಿತ. ನಮಗೆ ಗೊತ್ತಿರುವುದಿಲ್ಲ ಅಷ್ಟೇ. ಶ್ರಮ ಪಟ್ಟು ಕೆಲಸ ಮಾಡುವವರ ಆಹಾರಕೂ ಬೌದ್ಧಿಕ ನೆಲೆಯಿಂದ ತತ್ತ್ವಾನ್ವೇಷಕರಾಗಲು ಹೊರಟವರ ಆಹಾರಕೂ ಸಹಜವಾಗಿಯೇ ವ್ಯತ್ಯಾಸವಾಯಿತು. ಬ್ರಹ್ಮವಿದ್ಯೆಯನ್ನು ಅರಿಯಲು ಹೊರಟವರು ಅಧ್ಯಯನ, ಅಧ್ಯಾಪನ ಮತ್ತು ಧ್ಯಾನಗಳಲ್ಲಿ ನಿರತರು. ಅವರಲ್ಲಿ ದೈಹಿಕ ಶ್ರಮ ಕಡಮೆ. ಹಾಗಾಗಿ ಸುಲಭವಾಗಿ ಜೀರ್ಣವಾಗುವಂಥ ಅನ್ನ, ಸಾರು, ಪಲ್ಯ, ಕೋಸಂಬರಿ, ಮಜ್ಜಿಗೆ, ಪಾನಕ, ಪಾಯಸ ಎಂಬ ವೆರೈಟಿಗಳು. ಭೂಮಿಯ ಜೊತೆಯೇ ಇದ್ದು, ಕೆಲಸ ಮಾಡುವವರಿಗಿದು ಸಾಲದು; ಜೀರ್ಣವಾಗಲು ಹೆಚ್ಚು ಸಮಯ ಬೇಡುವಂಥ ಸಂಕೀರ್ಣ ಆಹಾರ ಅವರ ಕ್ರಮವಾಯಿತು. ಸಸ್ಯಾಹಾರ, ಮಾಂಸಾಹಾರ, ಫಲಾಹಾರ ಎಂಬಂಥವು ನಮ್ಮ ವಿಂಗಡಣೆ. ಮೂಲತಃ ಎಲ್ಲವೂ ಆಹಾರ ಎಂಬ ತಿಳಿವು ನಮ್ಮಲ್ಲಿರಬೇಕು. ಸಸ್ಯಗಳಿಗೂ ಜೀವವಿದೆಯಲ್ಲವೇ? ಅವುಗಳನ್ನು ಕೊಯ್ದರೆ ಜೀವ ಹೋಗುವುದಿಲ್ಲವೇ! ಹಸುವಿನ ಹಾಲು ಹೇಗೆ ಸೃಷ್ಟಿಯಾಗುತ್ತದೆ? ಇದು ಹೇಗೆ ಮಾಂಸಾಹಾರವಲ್ಲ? ಇಂಥ ತರ್ಕ-ವಿತರ್ಕಗಳು ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಲೇ ಇವೆ. ಸಾಕುಪ್ರಾಣಿಗಳೊಂದಿಗೆ ನಮಗೆ ಭಾವನಾತ್ಮಕ ಸಂಬಂಧ ಇರುವುದರಿಂದ ಅವನ್ನು ಕೊಂದಾಗ ನಮಗೆ ನೋವಾಗುವುದು ಅಷ್ಟೇ. ಯಾವುದೇ ಪ್ರಾಣಿ, ಪಕ್ಷಿಗಳೊಂದಿಗೆ ನಾವು ಭಾವನಾತ್ಮಕತೆ ತೋರಿದಾಗ ಅವುಗಳ ಹತ್ಯೆಯು ದುಃಖ ತರುವುದು ಸಹಜ. ಹುಲಿಗೆ ಹುಲ್ಲು ತಿನ್ನಲು ಬೋಧನೆ ಮಾಡಲು ಸಾಧ್ಯವೆ? ಹಾಗೆ ನೋಡಿದರೆ ಜೀವಸೃಷ್ಟಿಯೇ ಹಿಂಸೆಯ ಪರಮಾಧಿಕ್ಯ! ನಾವು ಜನಿಸುವಾಗ ತಾಯಿಗೆ ಎಷ್ಟು ನೋವು ನೀಡಿದ್ದೇವೆ? ಯೋಚಿಸು! ಅವಳಿಗೆಷ್ಟು ಕಷ್ಟ ನಷ್ಟ ಕೊಟ್ಟಿದ್ದೇವೆ? ಆಲೋಚಿಸು. ಯಾವುದನ್ನು ಪರಮಾನಂದವೆನ್ನುತ್ತೇವೆಯೋ ಅದು ಅತಿಯಾದರೆ ಪರಮಹಿಂಸೆಯೇ ಆಗುವುದು ತಾನೇ? ಹೀಗೆ ನಾವು ಚಿಂತಿಸಿ, ಕಲ್ಪಿಸಿ, ವಾದಿಸುತ್ತಾ ಹೋದರೆ ಬದುಕಿನ ಅನರ್ಥಗಳು ಒಂದೊಂದಾಗಿ ಅರಿವಾಗಿ ಜೀವನಪ್ರೀತಿಯ ಜಾಗದಲ್ಲಿ ಜೀವವಿರೋಧೀ ನಿಲವು ಬೃಹದಾಕಾರ ತಾಳಿ ನಮ್ಮನ್ನೇ ಅಣಕಿಸಿ, ಜುಗುಪ್ಸೆ ತರಿಸಿ ಬಿಡುತ್ತವೆ. ಅದಕಾಗಿಯೇ ಇಂಥವನ್ನು ವಿಪರೀತ ಎಳೆಯದೆ, ವಿಸ್ತರಿಸದೇ, ನಮ್ಮ ದೇಹಪ್ರಕೃತಿ ಮತ್ತು ಆಗಿನ ಮನೋಸ್ಥಿತಿಗೆ ಅನುಗುಣವಾಗಿ ಯಾವ ಮತ್ತು ಎಂಥ ಆಹಾರ ಬೇಕೆನಿಸುವುದೋ, ಆರೋಗ್ಯಕ್ಕೆ ಪೂರಕವಾಗುವುದೋ ಅದನ್ನು ಆಯ್ಕೆ ಮಾಡಿಕೊಳ್ಳುವುದಷ್ಟೇ. ಈಗ ನನಗಾಗಲೀ ನಿನಗಾಗಲೀ ಸಸ್ಯಾಹಾರ ಸಾಕು. ಹಾಗಂತ ಬೇರೆಯವರ ಆಹಾರ ಪದ್ಧತಿಯನ್ನು ಹೀಗಳೆಯಬಾರದು. ಇದು ಪ್ರಬುದ್ಧತೆಯಲ್ಲ. ಆಹಾರ, ಆಚಾರ, ವಿಚಾರ, ಇರುವಿಕೆ, ಬದುಕುವಿಕೆ ಇವಾವುವೂ ನಮ್ಮ ನಡುವಿನ ತರತಮಗಳಿಗೆ ಕಾರಣವಾಗಬಾರದು. ಇದೇ ಸುಶಿಕ್ಷಣ. ಪ್ರಕೃತಿಯ ಹರಿವು ಮತ್ತು ಬದುಕಿನ ಅರಿವು – ಇವೆರಡನ್ನೂ ಸಂಯೋಜಿಸಿ, ನಮ್ಮ ವಿವೇಕದಿಂದ ಬೆರೆಸಿ ಒಂದು ಮಧ್ಯಮ ಮಾರ್ಗದ ತೀರ್ಮಾನಕ್ಕೆ ಬರಬೇಕು. ನಿಮ್ಮ ಸಸ್ಯಾಹಾರದಲ್ಲಿ ಪ್ರೋಟೀನೇ ಇಲ್ಲ ಎಂಬ ಮಾತನ್ನೂ ಮಾಂಸಾಹಾರದಿಂದಲೇ ಸದೃಢರಾಗುತ್ತೇವೆಂಬ ಮಾತನ್ನೂ ಒಟ್ಟಿಗೆ ಸ್ವೀಕರಿಸಿ, ನಂನಮ್ಮ ಮನೆತನ, ಸಂಸ್ಕಾರ, ರೂಢಿ, ಸಂಪ್ರದಾಯ, ಅಭಿರುಚಿ, ಬದುಕಿನ ಉದ್ದೇಶ ಮತ್ತು ಆರೋಗ್ಯದ ಕಾಳಜಿಗಳಿಂದ ಭಾಗಿಸಿ, ಒಂದು ಸ್ವಂತದ ಆಯ್ಕೆಯನ್ನು ಮಾಡಿಕೊಳ್ಳಬೇಕು. ಅವರವರ ತೇಗಿನಲ್ಲಿ ಅವರವರು ತಿಂದದ್ದು ತಾನೇ ಸುಗಂಧವೋ? ದುರ್ಗಂಧವೋ? ಅವರವರ ಆಯ್ಕೆಯೇ ಅವರವರ ಸಫಲತೆಗೂ ವಿಫಲತೆಗೂ ಕಾರಣ. ಈ ವಿಚಾರದಲ್ಲಿ ಇದಮಿತ್ಥಂ ಎಂಬ ಮಾತಿಲ್ಲ. ಒಟ್ಟಿನಲ್ಲಿ ನಮ್ಮ ಆಹಾರ ಪದ್ಧತಿಗಳು ಜಾಗತೀಕರಣದಿಂದಾಗಿ ದಿಢೀರನೆ ಬದಲಾದವು. ಇಂದು ಆಹಾರವೆಂಬುದು ಕೇವಲ ಬದುಕಲಿಕ್ಕೆ ಮಾತ್ರ ತಿನ್ನುವಂಥದ್ದಲ್ಲ; ಶಕ್ತಿ ಸಂಚಯನ ಮಾತ್ರ ಉದ್ದೇಶವಾಗುಳಿದಿಲ್ಲ. ನಾಲಗೆಯ ರುಚಿಗೆ ಮತ್ತು ವೈವಿಧ್ಯಮಯ ಅಭಿರುಚಿಗೆ ಮುಕ್ತವಾಗಿ ತೆರೆದುಕೊಂಡಂಥ ರಂಗಸ್ಥಲ. ಆದರೆ ಸರಳವಾದ ಮತ್ತು ಸುಲಭವಾಗಿ ಜೀರ್ಣವಾಗುವಂಥ ಸಸ್ಯಾಹಾರೀ ಖಾದ್ಯ ಪದಾರ್ಥಗಳು ಆತ್ಮೋನ್ನತಿಗೆ ಅಧ್ಯಾತ್ಮದನುಭವಕ್ಕೆ ಅನುಕೂಲ ಎಂದಷ್ಟೇ ಹೇಳಬಹುದು. ಆರೋಗ್ಯದ ಕಾರಣಕ್ಕೋ ಆಧ್ಯಾತ್ಮಿಕತೆಯ ಅನುಭವಕ್ಕೋ ಜಗತ್ತಿನಲ್ಲಿ ಬಹುತೇಕರು ಸಸ್ಯಾಹಾರಿಗಳಾಗುವತ್ತ ಮನಸಾಗಿದ್ದಾರೆ. ಹಾಗಂತ ಎಲ್ಲರೂ ಸಸ್ಯಾಹಾರಿಗಳಾದರೂ ಕಷ್ಟವೇ! ಜಗತ್ತು ನಡೆಯಲು ಹುಲ್ಲುಗಾವಲೂ ಬೇಕು; ಅದನ್ನು ತಿಂದು ಬದುಕುವ ಜಿಂಕೆಯೂ ಬೇಕು. ಜಿಂಕೆಯನ್ನು ತಿನ್ನುವ ಹುಲಿಸಿಂಹಗಳೂ ಇರಬೇಕು! ಇದನ್ನೇ ಪ್ರಾಕೃತಿಕ ಸಮತೋಲನ ಎನ್ನುವುದು. ಈಗೀಗ ಪ್ರಾಣಿಜನ್ಯ ಉತ್ಪನ್ನಗಳನ್ನು ತ್ಯಜಿಸುವ ವೀಗನ್‌ಗಳು ಹುಟ್ಟಿಕೊಂಡಿದ್ದಾರೆ. ಇವರು ಹಾಲು ಮೊದಲಾದ ಜಾನುವಾರು ಉತ್ಪನ್ನಗಳನ್ನೂ ಜೇನುತುಪ್ಪ ಮೊದಲಾದುವನ್ನೂ ಸೇವಿಸುವುದಿಲ್ಲ. ಒಂದು ಕಡೆ ಹುಳಹುಪ್ಪಟೆಗಳನ್ನು ಎಣ್ಣೆಯಲ್ಲಿ ಕರಿದು, ಹಾವು ಚೇಳು ಮೊದಲಾದವುಗಳನ್ನು ತರಕಾರಿಯಂತೆ ಬಳಸುವ ಮಂದಿ; ಇನ್ನೊಂದು ಕಡೆ ಹಾಲು, ಮೊಸರು, ಬೆಣ್ಣೆ, ತುಪ್ಪ, ಜೇನುತುಪ್ಪಗಳನ್ನೂ ಸೇವಿಸದೇ ಇರುವ ಮಂದಿ. ಹೀಗೆ ಲೋಕದ ವಿಭಿನ್ನ ರುಚಿಯಭಿರುಚಿ ಆಹಾರದಲ್ಲಿ ಸುವ್ಯಕ್ತ. ಅತಿಭೋಗ, ಅತಿಯೋಗ ಎರಡೂ ಅಪಾಯಕಾರಿ. ಗೌತಮ ಬುದ್ಧರ ಮಧ್ಯಮಮಾರ್ಗವೇ ಈ ನಿಟ್ಟಿನಲ್ಲಿ ಸುವರ್ಣಮಾಧ್ಯಮ.’

PC: Internet



ನಾನು ಕೇಳುತ್ತಾ ಕೇಳುತ್ತಾ ಅವರ ಮಾತುಗಳಲ್ಲಿ ವಿಲೀನವಾಗಿದ್ದೆ. ‘ನೀರಾಹಾರದಲ್ಲೇ ಇಷ್ಟು ಮಾತಾಡುತ್ತಾರಲ್ಲ; ಇನ್ನು ಊಟ ಮಾಡಿದ್ದರೆ ಹೇಗೆ?’ ಎಂದು ಅನಿಸಿ ನಗು ಬಂತು. ಇದನ್ನು ಹೇಳಿಯೂ ಬಿಟ್ಟೆ. ಆಗ ಗುರುವು ನಕ್ಕು, ‘ನೀನೂ ಊಟ ಮಾಡಿಲ್ಲವಲ್ಲ!’ ಎಂದು ನೆನಪಿಸಿದರು. ತಲೆಗೆ ಕೆಲಸ ಕೊಟ್ಟಿದ್ದರಿಂದ ಹಸಿವೆಯ ಅನುಭವ ಆಗತೊಡಗಿತು. ‘ಸ್ವಲ್ಪ ಊಟ ಮಾಡಿಕೊಂಡು ಹಾಗೆಯೇ ಮನೆಯ ಕಡೆಗೆ ಹೊರಡುವೆ’ ಎಂದು ಹೇಳಿ, ಅವರ ಅನುಮತಿ ಪಡೆದು ಭೋಜನಶಾಲೆಯ ಕಡೆಗೆ ಹೆಜ್ಜೆ ಹಾಕಲು ಮೇಲೆದ್ದೆ. ಅಲ್ಲೆ ಇದ್ದ, ಅರ್ಧಂಬದ್ಧ ಓದಿದ್ದ ಪುಸ್ತಕವೊಂದನ್ನು ಕೈಗೆ ತೆಗೆದುಕೊಳ್ಳಲು ಗುರುಗಳು ತೋಳು ಚಾಚಿದರು. ಮಧ್ಯಾಹ್ನವು ಸಂಜೆಯಾಗಿ, ಅದು ರಾತ್ರಿಯಾಗಲು ಒಂದೇ ಸಮನೆ ಸ್ಪರ್ಧೆಗಿಳಿದಂತೆ ಓಡುತ್ತಿತ್ತು; ಇದು ಸುತ್ತಲ ನಿಸರ್ಗದ ಬದಲಾವಣೆಯಿಂದ ಗೊತ್ತಾಗುತ್ತಿತ್ತು.

-ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ                                                                                          

5 Responses

  1. MANJURAJ H N says:

    ಪ್ರಕಟಿಸಿದ ಸುರಹೊನ್ನೆಗೆ ಧನ್ಯವಾದಗಳು.
    ಓದಿ ಪ್ರತಿಕ್ರಿಯಿಸುವ ಎಲ್ಲ ಸಹೃದಯರಿಗೂ ಕೃತಜ್ಞತೆಗಳು

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  3. ಮಾಹಿತಿ ಪೂರ್ಣ ಲೇಖನ… ತುಂಬಾ ಸೊಗಸಾದ ನಿರೂಪಣೆಯಿಂದ ಒಡಮೂಡಿದೆ…ಈ ಲೇಖನ ದಲ್ಲಿ..ಉಪವಾಸವಿದ್ದೇ..ಇಷ್ಟುಹೊತ್ತು ಮಾತನಾಡಿದ ಗುರುಗಳು..ಮಾಡಿದ್ದರೆ..ಅದೇ ರೀತಿ ಇಷ್ಟೆಲ್ಲಾ ಜವಾಬ್ದಾರಿ ಹೊಂದಿರುವ ನೀವೇ ಇಷ್ಟು.. ಬರಯುವಾಗ..ಪುರಸೊತ್ತಾಗಿದ್ದರೆ..ನನಗನ್ನಿಸಿದ್ದು ಸಾರ್

  4. ಶಂಕರಿ ಶರ್ಮ says:

    ಗುರುಗಳ ಮೂಲಕ ನಾವು ತಿನ್ನುವ ಆಹಾರದ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ನೀಡಿದ ಸತ್ವಪೂರ್ಣ ಲೇಖನಕ್ಕಾಗಿ ತಮಗೆ ವಂದನೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: