ಮಂಗಟ್ಟೆಗಳ ವಿಸ್ಮಯ ಲೋಕ

Share Button


(ಒಂದು ಅನುಭವ ಚಿತ್ರಣ)
ಮಂಗಟ್ಟೆ ಪಕ್ಷಿಗೆ ಆಂಗ್ಲಭಾಷೆಯಲ್ಲಿ ‘HORN BILL’ ಎನ್ನುತ್ತಾರೆ. ಇದು ಒಂದು ದೊಡ್ಡ ಪಕ್ಷಿ. ಉದ್ದ ಬಾಗಿದ ಕೊಕ್ಕಿನ ಬಹಳ ಬಣ್ಣದಿಂದ ಕೂಡಿದ ಪಕ್ಷಿ. ಭಾರತದಲ್ಲಿ ನಾಗಾಲ್ಯಾಂಡ್ ಹಾಗೂ ನೇಪಾಳದಲ್ಲಿ ಅಲ್ಲದೆ ಇತರ ರಾಜ್ಯಗಳಲ್ಲೂ ಕಾಣಬರುತ್ತದೆ. ಇದನ್ನು ಅಪಾಯದ ಅಂಚಿನಲ್ಲಿರುವ ((ENDANGFRED SPECIES) ಪ್ರವರ್ಗದ ಪಕ್ಷಿ ಸಮೂಹಕ್ಕೆ ಸೇರಿಸಿದ್ದಾರೆ. ಕರ್ನಾಟಕದಲ್ಲಿ ಉತ್ತರ ಕನ್ನಡದ ದಾಂಡೇಲಿ ಅರಣ್ಯಗಳಲ್ಲಿ ಇದು ಸಾಕಷ್ಟು ಕಾಣಬರುತ್ತದೆ. ಸರಕಾರವು ಈ ಅರಣ್ಯಗಳನ್ನು ಮಂಗಟ್ಟೆ ಅಭಯಾರಣ್ಯಗಳನ್ನಾಗಿ ಘೋಷಿಸಿ ಮಂಗಟ್ಟೆಗಳ ಸಂತತಿ ಅಭಿವೃದ್ಧಿಗೆ ಸಾಕಷ್ಟು ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ಪ್ರತಿವರ್ಷ ಮಂಗಟ್ಟೆ ಉತ್ಸವವನ್ನೂ ಏರ್ಪಡಿಸುತ್ತಾರೆ.

ನಾವು 2024 ಮಾರ್ಚ್ ಐದರಿಂದ ಮಾರ್ಚ್ ಒಂಭತ್ತರ ವರೆಗೆ ದಾಂಡೇಲಿ ಪ್ರವಾಸವನ್ನು ಮಾಡಿದ್ದೆವು. ಈ ಸಮಯ ಮಂಗಟ್ಟೆ ಪಕ್ಷಿಗಳ ಸಂತಾನಾಭಿವೃದ್ಧಿ (BREEDING SEASON) ಎಂಬುದು ಚಿರಪರಿಚಿತ. ನಾವು ತಾರೀಖು ಐದರಂದು ದಾಂಡೇಲಿಯ ಸಮೀಪದ ಅಂಬೆಲಿ ಗ್ರಾಮದ ಕಾಡಿನ ಮಧ್ಯೆಯಿರುವ ಹಾರ್ನ್‌ಬಿಲ್ ರಿವರ್ ರಿಸಾರ್ಟ್ ( HORN BILL RIVER RESORT ) ಎಂಬ ಸುಂದರ ಪರಿಸರದಲ್ಲಿ ವಾಸ್ತವ್ಯ ಹೂಡಿದ್ದೆವು. ಪ್ರಕೃತಿಯ ಮಧ್ಯೆ ಹಾಗೂ ಸುತ್ತಲೂ ಬೃಹತ್ ವೃಕ್ಷಗಳಿರುವ ಧಾಮವು ನಿಜಕ್ಕೂ ಮನಮೋಹಕವಾಗಿತ್ತು. ಆಶ್ಚರ್ಯವೆಂದರೆ ಅಲ್ಲಿ ಟಿ.ವಿ. ಇರಲಿಲ್ಲ. ಜಂಗಮವಾಣಿ ಕಾರ್ಯವೆಸಗುವುದಿಲ್ಲ. ಒಂದು ರೀತಿ ಹೊರಗಿನ ಪ್ರಪಂಚದಿಂದ ನಾವು ಪೂರಾ ವಂಚಿತರೆಂದೇ ಹೇಳಬಹುದು. ಆದರೆ ನಮಗೆ ಅದರ ಅವಶ್ಯಕತೆ ಸ್ವಲ್ಪವೂ ಕಂಡುಬರಲಿಲ್ಲ. ಆ ದಿನ ರಾತ್ರಿ ನಾವು ವಿಶ್ರಾಂತಿ ಪಡೆದು ಬೆಳಿಗ್ಗೆ ಉಪಹಾರವಾದ ಮೇಲೆ ಸುಮಾರು ನಾಲ್ಕು ಕಿಲೋಮೀಟರ್‌ನಷ್ಟು ಕಾಡಿನಲ್ಲಿ ಒಬ್ಬ ಮಾರ್ಗದರ್ಶಿಯ ನೇತೃತ್ವದಲ್ಲಿ ವಿಹಾರ ಮಾಡಿದೆವು. ಹಕ್ಕಿಗಳ ಚಿಲಿಪಿಲಿ, ಮಂಗಟ್ಟೆಗಳ ದರ್ಶನ, ಕಾಡುಪ್ರಾಣಿಗಳ ಹೆಜ್ಜೆ ಗುರುತು, ಜೀರುಂಡೆಗಳ ಸತತ ಝೇಂಕಾರ ನಿಜಕ್ಕೂ ನಮ್ಮನ್ನು ಬೆರಗುಗೊಳಿಸಿತು.

ವಾಪಸ್ ಬಂದ ಮೇಲೆ ಸುಮಾರು ಹತ್ತು ಗಂಟೆಗೆ ನಮ್ಮನ್ನು ತಯಾರಾಗಿರಲು ಹೇಳಿದರು. ಓರ್ವ ಮಾರ್ಗದರ್ಶಿ, ವಿಡಿಯೋಗ್ರಾಫರ್, ಫೋಟೋಗ್ರಾಫರ್‌ಗಳು ನಮ್ಮನ್ನು ಕಾಡಿನ ಮಧ್ಯ ಒಂದು ಜಾಗದಲ್ಲಿ ಕೂರಿಸಿದರು. ಅವರು ಒಂದು ಮರದ ಪೊಟರೆಗೆ ದೂರದರ್ಶಕ ಹಾಗೂ ವಿಡಿಯೋ ಕ್ಯಾಮೆರಾಗಳನ್ನು ಕೇಂದ್ರೀಕರಿಸಿದರು. ದೂರದರ್ಶನದಲ್ಲಿ ನಮಗೆ ಮರದ ಮೇಲೆ ಗೂಡು ಕಟ್ಟಿದ್ದ ಮಂಗಟ್ಟೆ ಕಾಣಿಸಿತು. ಶತ್ರುಗಳ ಕಣ್ಣಿಗೆ ಕಾಣದಂತೆ ಎತ್ತರದಲ್ಲಿ ಗೂಡು ಕಾಣುತ್ತಿತ್ತು. ನಾವು ಬರಿ ಕಣ್ಣಿನಲ್ಲೂ ನೋಡಬಹುದಿತ್ತು. ಮಂಗಟ್ಟೆಗಳು ದೊಡ್ಡ ಪೊಟರೆಗಳನ್ನು ಶುದ್ಧಿ ಮಾಡಿ ವಾಸ ಯೋಗ್ಯವನ್ನಾಗಿ ಮಾಡಿಕೊಳ್ಳುತ್ತವೆ. ಇವೆಲ್ಲ ಮೊಟ್ಟೆ ಇಡುವ ಮುನ್ನ ಗಂಡು ಹೆಣ್ಣು ಒಟ್ಟಾಗಿ ಮಾಡುವ ಕೆಲಸ ನಾವು ನೋಡಿದ ಗೂಡಿನಲ್ಲಿ ಹೆಣ್ಣು ಮಂಗಟ್ಟೆ ಆಗತಾನೆ ಮೊಟ್ಟೆಗಳನ್ನಿಟ್ಟು ಮುಖ ಹೊರಗೆ ಹಾಕಿ ಕಾಯುತ್ತಿತ್ತು. ಕೆಲ ಸಮಯದ ನಂತರ ಗಂಡು ಮಂಗಟ್ಟೆ ಎಲ್ಲಿಂದಲೋ ಹಾರಿಬಂದು ತನ್ನ ಬಾಯಿಂದ ಒಂದೊಂದೇ ಹಣ್ಣನ್ನು ಹೆಣ್ಣಿಗೆ ತಿನ್ನಿಸುತ್ತಿತ್ತು. ಗಂಡು ಮಂಗಟ್ಟೆಗಳು ದೂರ ದೂರ ಹಾರಿ 100 ರಿಂದ 500 ರವರೆಗೂ ಹಣ್ಣುಗಳನ್ನು ಗಂಟಲಲ್ಲಿ ತುಂಬಿ ಬರಬಲ್ಲದು. ಸುಮಾರು ಮೂರು ನಿಮಿಷಗಳ ಕಾಲ ತಿನ್ನಿಸಿದ ನಂತರ ಗಂಡು ಮಂಗಟ್ಟೆ ಹಾರಿ ಹೋಯಿತು. ಐದು ನಿಮಿಷದ ನಂತರ ಪುನಃ ಪ್ರತ್ಯಕ್ಷವಾಗಿ ಬಾಯಿ ತುಂಬ ಮಣ್ಣನ್ನು ತಂದು ಹೆಣ್ಣಿನ ಬಾಯಿಗೆ ಹಾಕಿತು. ಮತ್ತೆ ಹಾರಿ ಹಣ್ಣು ತರಲು ಹೋಯಿತು. ಹೆಣ್ಣು ಆ ಮಣ್ಣನ್ನು ಗೂಡಿನ ಹೊರಭಾಗದಿಂದ ತನ್ನ ಜೊಲ್ಲಿನ ಮೂಲಕ ಮುದ್ದೆ ಮಾಡಿ ಅಂಟಿಸಲು ಪ್ರಾರಂಭಿಸಿತು. ಗಂಡು ಮಂಗಟ್ಟೆ ಹತ್ತು, ಹದಿನೈದು ನಿಮಿಷಕ್ಕೆ ಮತ್ತೆ ಹಣ್ಣುಗಳನ್ನು ತಂದು ತಿನ್ನಿಸಲು ಪ್ರಾರಂಭಿಸಿತು. ಪುನಃ ಹಾರಿ ಹೋಗಿ ಮಣ್ಣನ್ನು ತಂದು ಹೆಣ್ಣಿನ ಬಾಯಿಗೆ ಹಾಕಿತು. ಹೆಣ್ಣು ಗೂಡು ಮುಚ್ಚಲು ಪ್ರಾರಂಭಿಸಿತು. ಈ ಚಕ್ರ ಸುಮಾರು ಒಂದು ವಾರದ ವರೆಗೂ ನಡೆದು ಒಂದು ಸಣ್ಣ ರಂಧ್ರ ಬಿಟ್ಟು ಪೂರ ಮುಚ್ಚುತ್ತದೆ. ಈಗ ಗಂಡು ಮಂಗಟ್ಟೆ ಸಮೀಪದಲ್ಲೇ ಸುತ್ತಲೂ ಕಾವಲಿರುತ್ತದೆ. ಸುಮಾರು ತೊಂಬತ್ತು ದಿನಗಳಲ್ಲಿ ಹೆಣ್ಣು ಮಂಗಟ್ಟೆ ಕಾವು ಕೊಟ್ಟು ಮೊಟ್ಟೆಗಳೆಲ್ಲಾ ಮರಿಯಾಗುತ್ತದೆ. ಆಗ ಅದು ತನ್ನ ರಂಧ್ರವನ್ನು ತೆರೆಯುತ್ತದೆ. ಗಂಡಿಗೆ ಗೊತ್ತಾಗುತ್ತದೆ. ಆಶ್ಚರ್ಯವೆಂದರೆ ತೊಂಬತ್ತು ದಿನವೂ ಹೆಣ್ಣು ಮಂಗಟ್ಟೆ ಕಾವು ಕೊಡುವುದರಲ್ಲಿ ನಿರತವಾಗಿರುತ್ತದೆ. ಈ ಕಾರಣಕ್ಕೆ ಗಂಡು ಮಂಗಟ್ಟೆಗಳಿಗೆ ಪ್ರಕೃತಿಯ ಶ್ರೇಷ್ಠ ತಂದೆ ಎಂಬ ಬಿರುದಿದೆ.


ಒಂದು ಆಶ್ಚರ್ಯದ ಸಂಗತಿ ಎಂದರೆ ಮಂಗಟ್ಟೆಗಳು ಏಕಪತ್ನಿ ಹಾಗೂ ಪತಿ ವ್ರತಸ್ಥರು ಒಮ್ಮೆ ಹೆಣ್ಣು ಮಂಗಟ್ಟೆ ಗಂಡಿನೊಂದಿಗೆ ಸಂಸಾರ ಪ್ರಾರಂಭಿಸಿದರೆ ಸಾಯುವ ತನಕ ಅವುಗಳು ಜೊತೆಯಾಗಿರುತ್ತವೆ. ಒಂದೊಮ್ಮೆ ಹಣ್ಣು ತರಲು ಹೋಗಿ ಶತ್ರುಗಳಿಗೆ ಬಲಿಯಾದರೆ, ಕಾಣೆಯಾದರೆ ಹೆಣ್ಣು ಗೂಡಿನಲ್ಲಿ ಉಪವಾಸವಿದ್ದು ಸಾಯುತ್ತದೆ. ಮರಿಗಳು ಕೂಡ. ಆದ್ದರಿಂದಲೇ ಮಂಗಟ್ಟೆಗಳ ಸಂತತಿಯನ್ನು ಅಪಾಯದ ಅಂಚಿನಲ್ಲಿ ಎಂಬ ಗುಂಪಿಗೆ ಸೇರಿಸಿದ್ದಾರೆ. ಇಂತಹ ಕೌತುಕಮಯ ದೃಶ್ಯಗಳನ್ನು ನಾವು ಸುಮಾರು ಎರಡು ಗಂಟೆಗಳ ಕಾಲ ನೋಡಿ ದಂಗು ಬಡಿದೆವು. ನಮ್ಮ ಜೀವಮಾನದಲ್ಲೇ ಅತ್ಯಂತ ವಿಸ್ಮಯಕಾರಿ ಅನುಭವ ಇದು ಎಂದರೆ ಅತಿಶಯೋಕ್ತಿಯಲ್ಲ. ಇದರ ಸಂಪೂರ್ಣ ಚಿತ್ರೀಕರಣವನ್ನು ಮಾಡಿದ್ದಾರೆ. ಮಂಗಟ್ಟೆಗಳು ಹಣ್ಣುಗಳಲ್ಲದೆ, ಸಣ್ಣ ಕೀಟ, ಹುಳು ಹುಪ್ಪಟೆಗಳನ್ನು ಸೇವಿಸುತ್ತವೆ ಅವುಗಳ ಜೀವಿತಾವಧಿ ಸುಮಾರು 50 ವರ್ಷಗಳು ಎಂದು ಅಂದಾಜಿಸಿದ್ದಾರೆ. 35 ರಿಂದ 40 ವರ್ಷ ಖಂಡಿತ ಬದುಕುತ್ತವೆ. ಇವುಗಳು ಮೊಟ್ಟೆ ಇಡಲು ಗೂಡುಗಳನ್ನು ಕೋರೈ (KORAI) ಎಂಬ ಮರಗಳು ಅತ್ಯಂತ ಪ್ರಿಯವೆನ್ನಲಾಗಿದೆ. ಮಂಗಟ್ಟೆಗಳನ್ನು ಅದೃಷ್ಟ ಪಕ್ಷಿ ಎನ್ನುತ್ತಾರೆ. ಅದು ಮನೆಕಡೆ ಬಂದರೆ ಅದು ಭಾಗ್ಯ ಹಾಗೂ ಸಂಪತ್ತನ್ನು ತರುತ್ತವೆ ಎಂಬ ನಂಬಿಕೆ ಇದೆ. ಮಂಗಟ್ಟೆಗಳು ಬಹಳ ಬುದ್ಧಿವಂತ ಪಕ್ಷಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮಂಗಟ್ಟೆಗಳನ್ನು ‘ಕಾಡಿನ ರೈತ‘ ಎಂದೂ ಕರೆಯುತ್ತಾರೆ. ಕಾರಣ ಮಂಗಟ್ಟೆಗಳು ಪ್ರತಿ ಕಿಲೋಮೀಟರ್‌ನಲ್ಲಿ 10,000 ಬೀಜಗಳನ್ನು ಚದುರಿಸುತ್ತ ಕಾಡಿನ ಜೀವ ವೈವಿಧ್ಯವನ್ನು ಕಾಪಾಡುತ್ತವೆ. ದಾಂಡೇಲಿಯ ಹಾಗೂ ಉತ್ತರ ಕನ್ನಡದ ಸುತ್ತುಮುತ್ತಲಿನ ದಟ್ಟವಾದ ಅರಣ್ಯವನ್ನು ಅವಲೋಕಿಸಿದರೆ ಇದರ ಸತ್ಯಾಸತ್ಯತೆಯ ಅರಿವಾಗುತ್ತದೆ.

ನಾಗಾಲ್ಯಾಂಡ್‌ನಲ್ಲಿ ಮಂಗಟ್ಟೆ ಉತ್ಸವ ((HORN BIL FESTIVAL) ಬಹಳ ಪ್ರಸಿದ್ಧ. ಇವುಗಳು ಡಿಸೆಂಬರ್ 1 ರಿಂದ 10 ರವರೆಗೆ ಪ್ರತಿವರ್ಷ ನಡೆಯುತ್ತದೆ. ನಾಗಾಲ್ಯಾಂಡಿನ ಪಾರಂಪರಿಕ ಗ್ರಾಮ ಕಿಸಾಮದಲ್ಲಿ ನೆರವೇರುತ್ತದೆ. ಇದು ನಾಗಾಲ್ಯಾಂಡಿನ ರಾಜಧಾನಿ ಕೋಹಿಮಾದಿಂದ 12 ಕಿ.ಮೀ. ದೂರದಲ್ಲಿದೆ. ನಾವು ನಾಗಾಲ್ಯಾಂಡಿನ ಪ್ರವಾಸದಲ್ಲಿದ್ದಾಗ ಗ್ರಾಮದ ಪಾರಂಪರಿಕ ಮಂಗಟ್ಟೆ ಹಬ್ಬಕ್ಕೆ ತಯಾರಿ ನಡೆಸಿತ್ತು. ದೇಶ ವಿದೇಶಗಳಿಂದ ವೀಕ್ಷಕರು ಇದಕ್ಕೆ ಬರುತ್ತಾರೆ. ಆ ಗ್ರಾಮದ ಸೊಬಗು ನಮ್ಮ ಆಲೋಚನೆಗೆ ಮೀರಿದ್ದು, ನಾಗಾಲ್ಯಾಂಡಿನ ಬುಡಕಟ್ಟು ಜನಾಂಗದವರು ಮಂಗಟ್ಟೆಗಳನ್ನು ಉಳಿಸುವ ದೃಷ್ಟಿಯಿಂದ ಈ ಉತ್ಸವದ ಮೂಲಕ ಪ್ರಚಾರ ಮಾಡುತ್ತಾರೆ. ಭಾರತದಲ್ಲಿನ ಮಂಗಟ್ಟೆಗಳ ವಿಶೇಷತೆಯೆಂದರೆ ಇವುಗಳ ರೆಕ್ಕೆಗಳ ಬಡಿತಗಳು ಒಂದು ಕಿಲೋಮೀಟರ್ ದೂರಕ್ಕೆ ಕೇಳಬಲ್ಲದು. ಮಂಗಟ್ಟೆಗಳ ಆಕಾರವೂ ದೊಡ್ಡದು. ಆದ್ದರಿಂದ ಇದನ್ನು ಗ್ರೇಟ್ ಹಾರ್ನ್‌ಬಿಲ್ ಎನ್ನುತ್ತಾರೆ. ಅರುಣಾಚಲ ಪ್ರದೇಶ ಹಾಗೂ ಕೇರಳದಲ್ಲಿ ಮಂಗಟ್ಟೆಗಳು ಕಾಣಬರುತ್ತವೆ. ಮಂಗಟ್ಟೆಗಳಲ್ಲಿ ಸುಮಾರು 60 ಉಪವರ್ಗಗಳಿವೆ. ಇವುಗಳು ಬರ್ಸಿರೋಟಿಡೇ (BUREROTIDAE) ಎಂಬ ವರ್ಗಕ್ಕೆ ಸೇರಿವೆ.

ಮಾನವನು ಮಂಗಟ್ಟೆಗಳಿಂದ ಕಲಿಯಬೇಕಾದ್ದು ಬಹಳಷ್ಟಿವೆ. ಇವುಗಳ ಪ್ರಾಮಾಣಿಕತೆ, ಕಾರ್‍ಯತತ್ಪರತೆ ಅಸಾಮಾನ್ಯ. ಮಂಗಟ್ಟೆಗಳು ತಾಳ್ಮೆ, ದೃಢ, ಅವಿರತ ಯತ್ನ ಹಾಗೂ ನಿಖರತೆಗೆ ಹೆಸರುವಾಸಿ. ಮಂಗಟ್ಟೆಗಳು ಏಕಪತ್ನೀವ್ರತಸ್ಥರು. ಮಾನವರು ಕಲಿಯಬೇಕಾದ್ದು ಇದನ್ನೇ. ಅಕಸ್ಮಾತ್ ಹೆಣ್ಣು ಅಥವಾ ಗಂಡು ಮಂಗಟ್ಟೆ ಅಕಾರಣವಾಗಿ ಸತ್ತರೆ ಇನ್ನೊಂದು ಕೂಡ ಆಹಾರ ಬಿಟ್ಟು ದೇಹತ್ಯಾಗ ಮಾಡುತ್ತದೆ. ಇದು ಸಾಮಾನ್ಯ ಪ್ರಾಣಿ ಪಕ್ಷಿಗಳಲ್ಲಿ ಅಸಂಭವನೀಯ. ಪ್ರಾಯಶಃ ಈ ಕಾರಣಕ್ಕಾಗಿಯೇ ಇವುಗಳ ಸಂತತಿ ಕುಸಿಯುತ್ತಿದೆ. ಮಂಗಟ್ಟೆಗಳು ತಮ್ಮ ಜೀವನ ಸಂಗಾತಿಯ ಆಯ್ಕೆಯಿಂದ ಹಿಡಿದು ಮೊಟ್ಟೆ ಮರಿಯಾಗಿ ಕೊನೆಯವರೆಗೂ ಜೊತೆಯಾಗಿರುವುದು ವಿಶೇಷ. ಮಂಗಟ್ಟೆಗಳಿಗೆ ಅಂಜೂರ (FIGS) ಬಹಳ ಪ್ರಿಯವಾದ ಹಣ್ಣು.

ಒಟ್ಟಿನಲ್ಲಿ ಮಂಗಟ್ಟೆಗಳ ಪ್ರಪಂಚ ನಿಜಕ್ಕೂ ವಿಸ್ಮಯಕರ ಹಾಗೂ ಎಲ್ಲರೂ ಅದನ್ನು ಅವಲೋಕಿಸಿದರೆ ಮನಸ್ಸು ಹಾಗೂ ನಮ್ಮ ಚರ್‍ಯೆ, ನಡವಳಿಕೆಯಲ್ಲಿ ಸ್ವಲ್ಪವಾದರೂ ಬದಲಾವಣೆ ಕಾಣಬಹುದು.

-ಕೆ.ರಮೇಶ್, ಮೈಸೂರು

6 Responses

  1. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  2. ಮಾಹಿತಿ ಪೂರ್ಣ ಲೇಖನ ಕ್ಕೆ ನನ್ನ ದೊಂದು ನಮನ ಸಾರ್.

  3. Padma Anand says:

    ಜಗತ್ತಿನ ಶ್ರೇಷ್ಠ ತಂದೆ ಹಾಗೂ ಕಟ್ಟುನಿಟ್ಟಿನ ಕುಟುಂಬ ಜೀವನವನ್ನು ನಡೆಸುವ ಮಂಗಟ್ಟೆ ಹಕ್ಕಿಗಳ ಕುರಿತಾದ ಲೇಖನ ನಿಜಕ್ಕೂ ಪ್ರಕೃತಿಯ ಮತ್ತೊಂದು ವೈಶಿಷ್ಟ್ಯವನ್ನು ತಿಳಿಸುವಲ್ಲಿ ಯಶಸ್ವಿಯಾಗಿದೆ.

  4. ಮಂಗಟ್ಟೆಗಳ ಕೌತುಕಮಯ ಜೀವನವನ್ನು ಚಂದವಾಗಿ ವರ್ಣಿಸಿರುವ ಲೇಖನ
    ವಂದನೆಗಳು, ಸರ್

  5. ಶಂಕರಿ ಶರ್ಮ says:

    ಬಹಳ ಚಂದದ ಮಂಗಟ್ಟಿಗಳ ಬದುಕಿನ ಕಾರ್ಯ ವೈಖರಿಯನ್ನು ಸ್ವತ: ವೀಕ್ಷಿಸಿದ ನೀವೇ ಧನ್ಯರು! ಅವುಗಳ ಸಾಂಸಾರಿಕ ಜೀವನದ ನಿಯತ್ತು ಪ್ರಕೃತಿಯ ಅದ್ಭುತಗಳಲ್ಲೊಂದು! ಮಾಹಿತಿಪೂರ್ಣ ಬರಹವು ಬಹಳ ಸೊಗಸಾಗಿದೆ.

  6. ಕೆ.ರಮೇಶ್ says:

    ,,, ಎಲ್ಲರಿಗೂ ಅನಂತ ಧನ್ಯವಾದಗಳು
    ಕೆ.ರಮೇಶ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: