ರಫೂ-ಗಾರಿಯೆಂಬ ಅಚ್ಚರಿ
ಏನಿದು ರಫೂಗಾರಿ? ಈ ಬಗ್ಗೆ ಬರೆಯುವ ಮುನ್ನ ಆ ಪದದ ಜಾಡು ಹಿಡಿಯಲು ಕಾರಣವಾದ ನನ್ನ ಅನುಭವವನ್ನು ಮೊದಲಿಗೆ ವಿವರಿಸದಿದ್ದರೆ ಈ ಲೇಖನ ಅಪೂರ್ಣವಾಗುವುದು.
@@@@@@@@@@@@@@
ನಾರಿಯರಿಗೆ ಸೀರೆಯ ಮೇಲಿರುವ ಒಲವು ಇಂದು ನಿನ್ನೆಯದಲ್ಲ. ಕಪಾಟು ಭರ್ತಿಯಾಗಿದ್ದರೂ ಸಹಾ ಪತಿರಾಯ ಹೊಸ ಸೀರೆ ತಂದಾಗ “ಯಾಕೆ ತಂದಿರಿ?” ಎಂದು ಕೇಳುವವರ ಸಂಖ್ಯೆ ಕಡಿಮೆಯೇ. ನನಗೂ ಸೀರೆಗಳೆಂದರೆ ಇಷ್ಟವೇ. ಸೀರೆಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇರುತ್ತದೆ. ಲೆಕ್ಕವಿಲ್ಲದಷ್ಟು ಸೀರೆಗಳನ್ನು ತೆಗೆಯುವ ಜಾಯಮಾನ ನನ್ನದಲ್ಲವಾದರೂ. ನಾನು ಖರೀದಿಸಿದ ಸೀರೆಗಳು ಮಾತ್ರವಲ್ಲದೇ ಸಂಬಂಧಿಗಳು, ಸ್ನೇಹಿತೆಯರು ಉಡುಗೊರೆಯಾಗಿ ಕೊಡುವ ಸೀರೆಗಳು! ಕೆಲವೊಮ್ಮೆ, ಹೊಸ ಸೀರೆಗಳನ್ನು ಕಪಾಟಿನಲ್ಲಿಡದೆ ಸಾರೀ ಆರ್ಗನೈಸರ್ ಬಾಕ್ಸಿನೊಳಗೆ (ಸೀರೆಗಳನ್ನು ಜೋಡಿಸಿಡುವ ಝಿಪ್ ಇರುವ ಚೀಲ) ಇಡುವ ಪರಿಪಾಠ ಇಟ್ಟುಕೊಂಡಿದ್ದೇನೆ. ಗಿಣಿ ಹಸಿರು ಬಣ್ಣದ ಮೈಗೆ ಗುಲಾಬಿ ಅಂಚುಳ್ಳ ರೇಶ್ಮೆ ಸೀರೆಯೊಂದನ್ನು ಮದುವೆ ಸಮಾರಂಭಕ್ಕೆ ಉಟ್ಟ ಬಳಿಕ ಕಪಾಟಿನಲ್ಲಿಡದೆ ಸಾರೀ ಆರ್ಗನೈಸರ್ ಬಾಕ್ಸಿನೊಳಗೆ ಇಟ್ಟು ತಿಂಗಳಾರು ಕಳೆದಿತ್ತು.
ಆ ದಿನ ಇನ್ನೊಂದು ಮದುವೆ ಸಮಾರಂಭಕ್ಕೆ ಹೋಗಬೇಕಿತ್ತು. ನನಗೆ ರೇಷ್ಮೆ ಸೀರೆಗಳೆಂದರೆ ಅಷ್ಟಕ್ಕಷ್ಟೇ. ಅಪರೂಪಕ್ಕೆ ಖರೀದಿ ಮಾಡುವುದು. ಹೇಗೂ ಒಂದೇ ಸಲ ಉಟ್ಟದ್ದು ಆ ಸೀರೆಯನ್ನೇ ಉಡುವ ಎಂದು ಯೋಚಿಸಿ ಬಾಕ್ಸಿನಿಂದ ಹೊರತೆಗೆದಾಗ ನನಗೆ ಆಘಾತ ಕಾದಿತ್ತು. ಮಡಚಿಟ್ಟ ಸೀರೆಯ ನಾಲ್ಕೂ ಅಂಚುಗಳಲ್ಲಿ ದೊಡ್ಡ ತೂತುಗಳು. ಇಲಿ ಕತ್ತರಿಸಿದಂತೆ ಇರಲಿಲ್ಲ. ಹಾಗಾದರೆ ಬಹುಶಃ ಜಿರಲೆಯ ಕೆಲಸವೇ ಇರಬೇಕು ಅಂದುಕೊಂಡೆ. ರೇಷ್ಮೆ ಸೀರೆಯ ಜೊತೆ ಜಿರಲೆಗಳು ಬರದಂತೆ ನಾಫ್ತಾಲಿನ್ ಉಂಡೆಗಳನ್ನು ಇಡುವುದು ಗೊತ್ತಿತ್ತು. ಆದರೆ ಜಿರಲೆ ಕೂಡಾ ಸೀರೆಯನ್ನು ಈ ರೀತಿ ಕತ್ತರಿಸುತ್ತದೆ ಅನ್ನುವುದು ನೋಡಿಯೇ ದಂಗಾಗಿದ್ದೆ. ಮನೆಯಲ್ಲಿ ಯಾರ ಬಳಿಯೂ ಹೇಳಲು ಹೋಗಲಿಲ್ಲ. ಹೇಳಿದರೆ ಹಾಳಾದ ಸೀರೆಯ ಜೊತೆಗೆ ಕೆಲವು ಬೈಗುಳದ ಮಾತುಗಳನ್ನು ವಾಪಸ್ ಕೇಳಬೇಕಷ್ಟೇ.ಅಷ್ಟು ಒಳ್ಳೆಯ ಸೀರೆ ಹಾಳಾಯಿತೆಂದು ಮನಸ್ಸಿಗೆ ತುಂಬಾ ಬೇಸರವಾಗಿತ್ತು.
ನಾನೇ ತೆಗೆದ ಸೀರೆಯಾಗಿದ್ದರೆ ಹೋಗಲಿ, ಏನು ಮಾಡುವುದು ಅಂದುಕೊಳ್ತಿದ್ದೆನೇನೋ. ನನ್ನ ಮದುವೆಯಾಗಿ ಇಪ್ಪತ್ತೈದು ವರ್ಷಗಳು ಸಂದ ಪ್ರಯುಕ್ತ ನನ್ನ ತವರು ಮನೆಯಿಂದ ಬಂದ ಉಡುಗೊರೆಯ ಸೀರೆಯದು. ನನ್ನ ತಮ್ಮನ ಹೆಂಡತಿ ಪ್ರೀತಿಯಿಂದ ಕೊಟ್ಟ ಸೀರೆ. ಸೀರೆಯನ್ನು ಉಡಲಂತೂ ಸಾಧ್ಯವೇ ಇಲ್ಲ. ಸಣ್ಣ ಹೆಣ್ಣು ಮಕ್ಕಳಿರುವವರಿಗೆ ಲಂಗ-ದಾವಣಿ ಹೊಲಿಯಬಹುದೋ ಏನೋ ಅನ್ನುವ ಯೋಚನೆ ಬಂದು ಹೋದರೂ, ಆ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಿರಲಿಲ್ಲ. ಅದೊಂದು ದಿನ ‘ತೂತುಗಳಿರುವ ಜಾಗಕ್ಕೆ ಎಂಬ್ರಾಯ್ಡರಿ ಹಾಕಿ ಏನಾದರೂ ವಿನ್ಯಾಸ ಮಾಡಿದರೆ ಹೇಗೆಂಬ’ ಆಲೋಚನೆ ಬಂತು. ಈ ಯೋಚನೆಯನ್ನು ಕಾರ್ಯಗತಗೊಳಿಸಬೇಕಾದರೆ ಒಳ್ಳೆಯ ಎಂಬ್ರಾಯ್ಡರಿ ಹಾಕುವವರು ಯಾರಿದ್ದಾರೆಂದು ಹುಡುಕಬೇಕಿತ್ತು. ಹೊಲಿಗೆ, ವಿನ್ಯಾಸಗಳ ಬಗ್ಗೆ ತಿಳಿದಿರುವ ನನ್ನ ಸಹೋದ್ಯೋಗಿಯೊಬ್ಬಳ ಬಳಿ ಈ ಕುರಿತು ವಿಚಾರಿಸಿದಾಗ ನನಗೆ ಬೇಕಾದ ಮಾಹಿತಿ ಕೊಟ್ಟಳು. ಆ ಸೀರೆಯ ಜೊತೆ ಅಂಗಡಿಗೆ ಹೋಗಿ ನನ್ನ ಯೋಜನೆಯಂತೆ ಮಾಡಿ ಕೊಡಲು ಸಾಧ್ಯವಿದೆಯೇ ಎಂದು ಕೇಳಿದಾಗ “ನೋಡೋಣ. ಒಂದು ತಿಂಗಳು ಬಿಟ್ಟು ಬನ್ನಿ” ಎಂದರು. ನಾನು ಸಮ್ಮತಿಸಿದೆ. ಒಂದು ತಿಂಗಳ ಬಳಿಕ ಹೋದಾಗ ” ಇಲ್ಲ ಮೇಡಂ, ಆ ಕೆಲಸ ಮಾಡುವವರು ರಜೆಯಲ್ಲಿ ಹೋಗಿದ್ದಾರೆ. ನಾಳೆ ಬರುತ್ತಾರೆ. ಒಂದು ವಾರ ಬಿಟ್ಟು ಬನ್ನಿ” ಅಂದರು. ಆ ದಾರಿಯಾಗಿ ಹೋಗುವುದಿದ್ದರೆ, ವಿಚಾರಿಸಿದಾಗ “ಇನ್ನೂ ಆಗಿಲ್ಲ, ಫೋನ್ ಮಾಡಿ ಬನ್ನಿ” ಅನ್ನುತ್ತಿದ್ದರು. ಫೋನ್ ಮಾಡಿದಾಗಲೂ ಆಗಿಲ್ಲವೆಂದು ಹೇಳುತ್ತಿದ್ದರು. ಇನ್ನೊಮ್ಮೆ ಅವರೇ ಫೋನ್ ಮಾಡಿ ‘ನಿಮ್ಮ ಸೀರೆಯ ಕೆಲಸ ಶುರು ಆಗಿದೆ. ಒಂದು ವಾರ ಬಿಟ್ಟು ಬಂದರೆ ಸೀರೆ ತೆಗೆದುಕೊಂಡು ಹೋಗಬಹುದು” ಅಂದರು. ಒಂದು ವಾರ ಬಿಟ್ಟು ಹೋದಾಗ ‘ಮೇಡಂ, ಅದು ನೂಲು ತುಂಬಾ ಎಳೆಯುತ್ತದೆ. ಸ್ವಲ್ಪ ಕಷ್ಟ” ಅಂದರು. “ಹಾಗಾದರೆ ಬೇಡ ಬಿಡಿ, ಸೀರೆ ವಾಪಸ್ ಕೊಡಿ” ಅಂದೆ. “ಮೇಡಂ, ಸೀರೆಯ ಒಂದು ತುದಿಯಲ್ಲಿ ಸ್ವಲ್ಪ ಬಟ್ಟೆ ಕತ್ತರಿಸಿ, ಚೌಕಾಕಾರದಲ್ಲಿ ಕತ್ತರಿಸಿ ತೂತಿರುವಲ್ಲೆಲ್ಲಾ ವಿನ್ಯಾಸ ಮಾಡಬಹುದಲ್ವಾ” ಅಂದರು. ಸೀರೆಯ ಆಸೆಯನ್ನೇ ಬಿಟ್ಟವಳು ನಾನು “ಏನೂ ಬೇಕಾದರೂ ಮಾಡಿ” ಎಂದೆ. ಒಂದು ವಾರ ಬಿಟ್ಟು ಹೋಗುವಾಗ ನನ್ನ ಸೀರೆ ಎಂಬ್ರಾಯ್ಡರಿ ಹೂಗಳಿಂದ ಕಂಗೊಳಿಸುತ್ತಿತ್ತು. ಸೀರೆಯನ್ನು ಕತ್ತರಿಸುವ ಅಗತ್ಯವೇ ಬರಲಿಲ್ಲ ಎಂದರು. ಅವರ ಜೊತೆ ಹಿಂದೆ ಕೆಲಸ ಮಾಡುತ್ತಿದ್ದ ಆದರೆ ಅವರ ಅಂಗಡಿ ಬಿಟ್ಟು ಹೋಗಿದ್ದ ನುರಿತ ಕೆಲಸಗಾರ ವಾಪಸ್ ಬಂದುದರಿಂದ ನನ್ನ ಸೀರೆಗೆ ಹೊಸ ಸ್ಪರ್ಶ ಸಿಕ್ಕಿತ್ತು.ಆದರೆ ನಾನು ಸೀರೆ ಕೊಟ್ಟು ಬರೋಬ್ಬರಿ ಐದುವರೆ ತಿಂಗಳ ನಂತರ! ತೂತುಗಳಿದ್ದವು ಅನ್ನುವುದನ್ನು ಗುರುತಿಸಲೂ ಸಾಧ್ಯವಾಗದಂತೆ ಸೀರೆ ಬದಲಾಗಿತ್ತು. ಅದೂ ನಾನೆಣಿಸಿದಂತೆಯೇ. ಅದೂ ಕೂಡಾ ನಾನೆಣಿಸಿದುದಕ್ಕಿಂತ ಕಡಿಮೆ ಹಣದಲ್ಲಿ.ಒಟ್ಟಿನಲ್ಲಿ ಸೀರೆಯ ಮೌಲ್ಯವರ್ಧನೆಯಾಗಿತ್ತು!ಜೊತೆಗೆ ಅದರಂದವೂ!
@@@@@@@@@@@@
ಸೀರೆ ಸರಿಯಾದ ನಂತರ ಬಂದ ಯೋಚನೆ. ಈ ತರಹ ಹಾಳಾದ ಬಟ್ಟೆಗಳಿಗೆ ಹೊಸ ರೂಪ ಕೊಡುವ ವಿಧಾನಕ್ಕೆ ಏನಾದರೂ ಹೆಸರಿರಬೇಕಲ್ವಾ? ಆಂಗ್ಲ ಭಾಷೆಯಲ್ಲಿ ಡಾರ್ನಿಂಗ್ ಅನ್ನುವರೆಂದು ಕೇಳಿ ಗೊತ್ತಿತ್ತು. ಡಾರ್ನಿಂಗ್ ಪದದ ಜಾಡು ಹಿಡಿದುಗೂಗಲಣ್ಣನ ಸಹಾಯ ಪಡೆದು ಹುಡುಕಿದಾಗ ಸಿಕ್ಕ ಶಬ್ದ ರಫೂ-ಗಾರಿ. ಬಾಲ್ಯದಲ್ಲಿ ರಪ್ಫು ಹಾಕುವುದು ಅನ್ನುವುದನ್ನು ಕೇಳಿ ಗೊತ್ತಿತ್ತು. ಹೆಚ್ಚಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ-ನಿರ್ವಾಹಕರ ಅಂಗಿಗಳಲ್ಲಿ ಈ ರಪ್ಫು ಹಾಕಿದ್ದನ್ನು ಕಂಡು ಗೊತ್ತಿತ್ತು. ಆದರೆ ಈ ರಫೂಗಾರಿಯ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕೆಂಬ ತುಡಿತ ಹೆಚ್ಚಾಯಿತು.
ರಫೂ – ಅನ್ನುವ ಶಬ್ದದ ಮೂಲ ಪರ್ಷಿಯನ್ ಭಾಷೆ. ರಫೂಗಾರಿಯೆಂದರೆ ಎಳೆ ತುಂಬುವಿಕೆ. ಹಿಂದಿಯಲ್ಲಿ “ಕಟೇ ಫಟೇ ಕಪ್ಡೇ ಕಾ ಮರ್ಮತ್ ಕರ್ನೇ ಕಾ ಕಾಮ್” ಅನ್ನುವ ವಿವರಣೆ ಸಿಕ್ಕಿತು. ರಫೂ ಮಾಡುವುದಕ್ಕೆ ರಫೂಗಾರಿ ಎಂದು ರಫೂ ಮಾಡುವವನನ್ನು ರಫೂಗಾರ್ ಎಂದೂ ಕರೆಯುವರು.ರಫೂಗಾರರು ಅತಿ ನೈಪುಣ್ಯತೆ ಹೊಂದಿರಬೇಕು. ಬಟ್ಟೆ ಹರಿದಿತ್ತು ಅಥವಾ ಬಟ್ಟೆಯಲ್ಲಿ ತೂತಿತ್ತು ಅನ್ನುವ ಕುರುಹುಗಳನ್ನು ಮರೆ ಮಾಚಿ, ಬಟ್ಟೆ ಮೊದಲು ಹೇಗಿತ್ತೋ ಹಾಗೆಯೇ ಕಾಣುವಂತೆ ಮಾಡುವ ನೈಪುಣ್ಯತೆ ರಫೂಗಾರನದ್ದು. ಅಲ್ಲಿ ಪರಿಪೂರ್ಣತೆ ಇರಬೇಕು. ರಪೂಗಾರಿಗೆ ಬಳಸುವ ದಾರದ ಎಳೆಗಳು ಹೊಂದಿಕೆಯಾಗಬೇಕು. ಕೆಲವೊಂದು ಬೆಲೆ ಬಾಳುವ ಬಟ್ಟೆಗಳು ಪರಂಪರಾಗತವಾಗಿ ಮುಂದಿನ ಪೀಳಿಗೆಗೆ ದಾಟಿಸಲ್ಪಡುತ್ತವೆ. ಉದಾಹರಣೆಗೆ ಕಾಶ್ಮೀರದ ಪಶ್ಮಿನಾ ಶಾಲು. ಪಶ್ಮಿನಾ ಶಾಲು ಇದೆಯೆಂದರೆ ಹೆಮ್ಮೆ. ಅದರ ಘನತೆಯೇ ಅಂತಹದು. ಪಶ್ಮಿನಾ ಶಾಲಿನಲ್ಲಿ ತೂತೇನಾದರೂ ಆದರೆ ಆ ತೂತುಗಳನ್ನು ಮರೆಮಾಚಲು ರಪೂಗಾರಿ ಕಲೆಗೆ ಜನರು ಮೊರೆ ಹೋಗುತ್ತಿದ್ದರು.ಬೆಲೆ ಬಾಳುವ ಅಜ್ಜಿಯ ರೇಶ್ಮೆ ಸೀರೆಗಳು ಮೊಮ್ಮಗಳ ಕೈ ಸೇರಿದಾಗ ಸೀರೆಗೆ ಮರುಜೀವ ಕೊಡಲು ನೆಚ್ಚಿದ್ದು ಜನರು ರಫೂಗಾರಿ ಕಲೆಯನ್ನೇ! ಹಾಗಾಗಿ ಭೂತ ಹಾಗೂ ವರ್ತಮಾನಗಳ ನಡುವೆ ಇರುವ ಸೂಕ್ಷ್ಮಾತಿಸೂಕ್ಷ್ಮ ಸಂಬಂಧಗಳನ್ನು ಜೋಡಿಸುವಲ್ಲಿ ರಫೂಗಾರನು ಬಳಸುವ ದಾರದ ಎಳೆಗಳ ಪಾತ್ರವಿದೆಯೆಂದರೂ ತಪ್ಪಿಲ್ಲ. ಆದರೆ ಇಲ್ಲೊಂದು ಸೂಕ್ಷ್ಮ ವಿಚಾರವಿದೆ. ಇಷ್ಟೆಲ್ಲಾ ನೈಪುಣ್ಯತೆಯುಳ್ಳ ರಫೂಗಾರರ ಕರಕುಶಲತೆಯ ಜಾದೂವಿನ ರಹಸ್ಯವನ್ನು ಯಾರೂ ಬಾಯಿ ಬಿಡುತ್ತಿರಲಿಲ್ಲ. ಹಾಗಾಗಿ ಇಂತಹ ಜಾದೂ ಸೃಷ್ಟಿಸುವ ರಫೂಗಾರಿ ಅಥವಾ ರಫೂಗಾರರು ಜನರ ನಡುವೆ ಇದ್ದರೂ ಅವರ ಇರುವಿಕೆ ಯಾರಿಗೂ ಗೊತ್ತಾಗುತ್ತಿರಲಿಲ್ಲ.
ಆದರೆ ಇಂದಿನ ದಿನಗಳಲ್ಲಿ ಜನರು ರಫೂಗಾರಿಯ ಬಗ್ಗೆ ಒಲವು ತೋರುವುದಿಲ್ಲ. ರಫೂಗಾರಿಗೆ ಬೇಡಿಕೆಯೂ ಇಲ್ಲವೆಂದು ರಫೂಗಾರರು ನೊಂದುಕೊಂಡು ನುಡಿಯುತ್ತಾರೆ. ಬಟ್ಟೆ ಹಾಳಾದರೆ ಹೊಸದನ್ನು ಖರೀದಿಸುವ ಪ್ರವೃತ್ತಿ ಬೆಳೆದಿದೆ. ಹಾಗೆಯೇ ಪ್ರಸಕ್ತ ಪೀಳಿಗೆಯು ಪರಂಪರೆಯಿಂದ ಹರಿದು ಬರುವ ಭಾವನಾತ್ಮಕ ಸಂಗತಿಗಳಿಂದ ವಿಮುಖವಾಗುತ್ತಿದೆ.ಹಿಂದಿನಂತೆ ಶ್ರೇಷ್ಠ ಗುಣಮಟ್ಟದ ಬಟ್ಟೆಗಳು ಕಣ್ಮರೆಯಾಗುತ್ತಿವೆ ಎಂದೇ ಹೇಳಬಹುದು.ಬೆಲೆಬಾಳುವ ಬಟ್ಟೆ ಅಥವಾ ಹೊಸ ಬಟ್ಟೆ ಯಾವುದೋ ಕಾರಣದಿಂದ ಸ್ವಲ್ಪ ಹರಿಯಿತು ಅಥವಾ ಬೆಂಕಿಯ ಕಿಡಿ ತಾಗಿ ಸಣ್ಣ ತೂತಾಯಿತೆಂದರೆ, ಖಂಡಿತವಾಗಿಯೂ ರಫೂಗಾರಿ ಮಾಡಬಹುದು. ರಫೂಗಾರಿಯಲ್ಲಿ ಬಳಸುವ ಕೆಲವು ಸುಲಭ ತಂತ್ರಗಳನ್ನು ತೋರಿಸುವ ವಿಡಿಯೋಗಳು ಲಭ್ಯವಿವೆ.ವಿಡಿಯೋ ಹುಡುಕಿ ನೋಡುವಿರಲ್ವಾ?
–ಡಾ. ಕೃಷ್ಣಪ್ರಭ ಎಂ, ಮಂಗಳೂರು
ಸುಂದರ ಬರಹ, ಮಾಹಿತಿ
ಸುಂದರ ಬರಹ, ಮಾಹಿತಿ
ಮೆಚ್ಚುಗೆಗೆ ಧನ್ಯವಾದಗಳು ನಯನಾ
ಕೌತುಕಮಯ ವಿಷಯವನ್ನೊಳಗೊಂಡ ನಾರಿಯರಿಗೆ ಆಸಕ್ತಿದಾಯಕ ಎನಿಸುವ ಲೇಖನ ನನಗಿಷ್ಟವಾಯಿತು.
ರಫೂಗಾರಿಯ ಬಗ್ಗೆ ಹುಡುಕಹೊರಟರೆ ಸಿಗುವ ಮಾಹಿತಿ ಕಡಿಮೆಯೆಂದೇ ಹೇಳಬಹುದು. ಮೆಚ್ಚುಗೆಗೆ ಧನ್ಯವಾದಗಳು ಮೇಡಂ
ಹೊಸ ಕಸೂತಿಯ…ಪರಿಚಯ ಮಾಡಿಕೊಟ್ಟಿದ್ದೀರಾ ಮಡಿವಾಳ ವೃತ್ತಿ ಯವರು.. ಡಾರ್ನಮಾಡುವುದ ಕೇಳಿ ದ್ದೆ..ಮಾಡುವುದನ್ನು ನೋಡಿದ್ದೆ..ನಾನೂ ಚಿಕ್ಕಪುಟ್ಟ..ತೂತುಗಳನ್ನು..ಮುಚ್ಚುವುದಕ್ಕೆ ಆ..ತಂತ್ರ ಬಳಸಿದ್ದಿದೆ..ಈ ಯೋಜನೆ..ತಿಳಿದಿರಲಿಲ್ಲ…ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು ಮೇಡಂ.
ಬಟ್ಟೆಯಲ್ಲಿರುವ ತೂತುಗಳನ್ನು ಸರಿಪಡಿಸಲು ಇಂತಹ ಒಂದು ಕಲೆಯೇ ಇದೆ ತಿಳಿದಾಗ, ಈ ಬಗ್ಗೆ ಬರೆಯಬೇಕು ಅನ್ನುವ ತುಡಿತ ಜಾಸ್ತಿಯಾಯಿತು. ಮೆಚ್ಚುಗೆಗೆ ಧನ್ಯವಾದಗಳು
ತೂತು ಬಿದ್ದ ಸೀರೆಗಳನ್ನು ಸುಂದರವಾದ ಕಸೂತಿಗಳ ಮೂಲಕ ಚೆಂದಗೊಳಿಸಿದ ಉಪಯುಕ್ತ ವಾದ ಬರಹ
ಹೊಸ ಸೀರೆಗೆ ಹಾಗಾದಾಗ ಬೇಸರವಾಗಿತ್ತು. ಹಾಗಾಗಿ ಪರಿಹಾರೋಪಾಯ ಯೋಚನೆ ಮಾಡಿದ್ದು. ಮೆಚ್ಚುಗೆಗೆ ಧನ್ಯವಾದಗಳು ಮೇಡಂ
ಇದೇನಪ್ಪಾ ರಫೂ-ಗಾರಿ… ಹೊಸದಾಗಿದೆಯಲ್ಲಾ? ಎಂದು ಕುತೂಹಲದಿಂದ ಓದಿದಾಗ ನಿಜವಾಗಿಯೂ ಹೊಸ, ಆಸಕ್ತಿದಾಯಕವಾದ, ಹೆಂಗೆಳೆಯರಿಗೆ ಉಪಯುಕ್ತವಾದ ಮಾಹಿತಿ ಲಭ್ಯವಾಯಿತು! ನನ್ನದೊಂದು ಸಲಹೆ… ವರ್ಷಕ್ಕೊಮ್ಮೆ; ಸ್ವಾತಿ ಮಹಾನಕ್ಷತ್ರದ ಸಮಯದಲ್ಲಿ ಸಿಲ್ಕ್ ಸೀರೆಗಳನ್ನು ಗಾಳಿಯಾಡಲು ಹಾಕಿದರೆ ಸೀರೆಗಳು ಹಾಳಾಗುವುದಿಲ್ಲ…ಇದು ನನ್ನ ಅನುಭವವವೂ ಹೌದು.
ರಫೂಗಾರಿ ಕಲೆಯೇನೋ ಹಳೆಯದೇ. ಆದರೆ ಮಾಹಿತಿ ಇರಲಿಲ್ಲ. ನಿಮ್ಮ ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಅಮೂಲ್ಯ ಸಲಹೆಗೂ ಧನ್ಯವಾದಗಳು
ಎಷ್ಟೊಂದು ಸುಂದರ ಕಲೆಗಾರಿಕೆ. ಡೆಲ್ಲಿಯಲ್ಲಿ ಇರುವಾಗ ಈ ತರಹದ ಕಲೆಯನ್ನು ನಾನು ನೋಡಿದ್ದೇನೆ ಇದನ್ನು ಹೆಚ್ಚಾಗಿ ಕೊಲ್ಕತ್ತಾ,ಪಶ್ಚಿಮ ಬಂಗಾಲದ ಜನರು ಮಾಡುತ್ತಾರೆ
ಲೇಖನ ಓದಿದ ಬಂಧುವೊಬ್ಬರು ನೀಡಿದ ಮಾಹಿತಿ
ಇದೊಂದು ಕುತೂಹಲಕಾರಿಯಾದ ಉಪಯುಕ್ತವಾದ ಮಾಹಿತಿ. ನನ್ನ ವಾರ್ಡ್ ರೋಬ್ ನಲ್ಲಿ ಹಳೆಯ ಸೀರೆಗಳು ಹೇಗಿವೆ ಎಂದು ಗಮನಿಸಬೇಕು! ತೂತಾಗಿದ್ದರೆ ರಫೂಗಾರಿ ಮಾಡಿಸಿದರಾಯಿತು! ತಿಳಿಸಿದ್ದಕ್ಕೆ ಧನ್ಯವಾದಗಳು
ಇಂತಹ ಅಪರೂಪದ ಕಲೆಗಳ ಬಗ್ಗೆ ಎಲ್ಲರಿಗೂ ತಿಳಿದಿದ್ದರೆ ಎಷ್ಟು ಚೆನ್ನ? ಲೇಖನ ಪ್ರಕಟಿಸಿದ ತಮಗೆ ಧನ್ಯವಾದಗಳು
ಮಾಹಿತಿಯನ್ನು ಕುತೂಹಲ ಹುಟ್ಟಿಸುವಂತೆ ನಿರೂಪಿಸಿದ್ದೀರಿ. ಚೆನ್ನಾಗಿದೆ
Dr. Krishnaprabha’s article on Rafoogari brilliantly transforms the perception of this traditional art, showcasing how ordinary practices can be rendered extraordinary through meticulous explanation and cultural context.
Rafoogari, the age-old craft of darning, is often viewed as a mundane repair technique. However, Dr. Krishnaprabha’s narrative elevates it to an art form, highlighting its historical significance, intricate techniques, and the skill of the artisans who practice it. The article delves into the meticulous process of Rafoogari, emphasizing the patience, precision, and expertise required to repair and restore fabrics seamlessly.
What sets this article apart is Dr. Krishnaprabha’s ability to connect Rafoogari with broader cultural and social themes. She explores the sustainability aspect of this practice, illustrating how it aligns with contemporary movements towards sustainable fashion and the conservation of resources. By doing so, she celebrates the artisans and underscores the relevance of traditional crafts in today’s world.
The article is well-researched and richly detailed, providing readers with a deep understanding of Rafoogari. Dr. Krishnaprabha’s passion for the subject shines through her writing, making it both informative and engaging. Her ability to explain complex techniques in an accessible manner ensures that readers can appreciate the artistry involved regardless of their familiarity with the craft.
In conclusion, Dr. Krishnaprabha’s article is a captivating tribute to Rafoogari, turning an ordinary craft into an extraordinary cultural treasure. It is a must-read for anyone interested in traditional arts, sustainability, and the beauty of meticulous craftsmanship.
Oh my god….you have written an article itself….really I don’t have words to express my grattitude….thank you dear sir…
I made an attempt to connect my experience with the art of Rafoogari