ಹರಿಹರ ಕವಿಯ ಬಸವರಾಜದೇವರ ರಗಳೆ: ಬಸವಣ್ಣನ ಅಂತರಂಗ ವಿಕಸನ ಪ್ರತಿಮಾತ್ಮಕ ಚಿತ್ರಣ -ಭಾಗ 1
ಕವಿ, ಕೃತಿ: ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ 12ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಹರಿಹರ ಕನ್ನಡದ ಒಬ್ಬ ಸುಪ್ರಸಿದ್ಧ ಕವಿ. ಹಂಪೆಯವನಾದ ಈತ ಪಂಪಾಕ್ಷೇತ್ರದ ವಿರೂಪಾಕ್ಷನ ಪರಮಭಕ್ತ. ಈತನ ತಂದೆ ವೇದ ವೇದಾಂಗ ಪುರಾಣಾದಿ ವಿದ್ಯೆಗಳಲ್ಲಿ ಪಾರಂಗತನಾಗಿದ್ದ ಮಹಾದೇವ ಭಟ್ಟ, ತಾಯಿ ಶರ್ವಾಣಿ, ರುದ್ರಾಣಿ ತಂಗಿ. ಮಾಯಿದೇವ (ಮಾದರಸ) ಈತನ ಗುರು. ಇವರು ಸಾತ್ವಿಕ ಶೈವ ಬ್ರಾಹ್ಮಣರು, ಹೊಯ್ಸಳರ ರಾಜಧಾನಿ ದೋರಸಮುದ್ರಕ್ಕೆ (ಹಳೇಬೀಡಿಗೆ) ಹೋಗಿ 2ನೇ ಬಲ್ಲಾಳರಾಜನ
ಆಸ್ಥಾನದಲ್ಲಿ ಈತ ಕರಣಿಕನಾಗಿ ಕೆಲಕಾಲ ಸೇವೆ ಕೈಕೊಂಡಿದ್ದ. ಬಲ್ಲಾಳನ ಮಂತ್ರಿ ಕೆರೆಯ ಪದ್ಮರಸನ ಸಂಪರ್ಕ ಈತನಿಗಿತ್ತು. ಲೆಕ್ಕ ಪತ್ರಗಳಲ್ಲಿ ಅಂಕಿಗಳನ್ನು ಬಳಸದೆ ‘ವಿರೂಪಾಕ್ಷ’ ‘ವಿರೂಪಾಕ್ಷ’ ಎಂದು ಬರೆಯುತ್ತಿದ್ದುದರಿಂದ ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾಯಿತು ; ಅದರಿಂದ ಬೇಸರಪಡದ ಅವನು ಉತ್ಸಾಹದಿಂದ ಹಂಪೆಗೆ ಹಿಂತಿರುಗಿದ ಎನ್ನುವುದೊಂದು ಐತಿಹ್ಯ. ದಾರಿಯಲ್ಲಿ ಹರಿಹರ ಪುಣ್ಯಕ್ಷೇತ್ರದ ಶಿವಾಲಯದಲ್ಲಿ ಭೂತವಿದೆಯೆಂಬ ಜನರ ಭಯವನ್ನು ನಿವಾರಿಸಿದ, ಹಂಪಿಯನ್ನು ಸೇರಿ ಅಲ್ಲಿಯೇ ನೆಲೆಸಿದ. ಹೊಯ್ಸಳ ರಾಜವಂಶದ ಎರಡನೆಯ ವೀರಬಲ್ಲಾಳನ (1173-1220) ಆಳ್ವಿಕೆಯ ಕಾಲದಲ್ಲಿ ಈತ ಇದ್ದ ಎನ್ನುವ ಒಂದು ಆಧಾರದಿಂದ ಈತನ ಕಾಲವನ್ನು ಸು. 1150-1250 ಎಂದಿಟ್ಟುಕೊಳ್ಳಲಾಗಿದೆ.
ತನ್ನ ಕಾವ್ಯವಸ್ತುವಿಗಾಗಿ, ಸಂಸ್ಕೃತ ಮತ್ತು ಪ್ರಾಕೃತ ಮೂಲಗಳನ್ನು ಬಿಟ್ಟು ತಮಿಳು ಮೂಲವನ್ನು ಆರಿಸಿಕೊಂಡವರಲ್ಲಿ ಹರಿಹರನೇ ಮೊದಲಿಗ. ಹನ್ನೊಂದನೆಯ ಶತಮಾನದಲ್ಲಿ ಶೆಕ್ಕಿಯಾರ್ ಎನ್ನುವವರು ರಚಿಸಿದ ‘ಪೆರಿಯ ಪುರಾಣ’ವು ಈತನಿಗೆ ಶಿವಭಕ್ತರನ್ನು ಕುರಿತ ರಗಳೆಗಳನ್ನು ಬರೆಯಲು ಆಕರವಾಯಿತು. ಮಧ್ಯ ಕರ್ನಾಟಕದಲ್ಲಿದ್ದ ಹರಿಹರನಿಗೆ ಪೆರಿಯ ಪುರಾಣ ಕಾವ್ಯವು ಅದು ಪ್ರಕಟವಾದ ಹೊಸತರಲ್ಲಿಯೇ ಸಿಕ್ಕಿತ್ತೆನ್ನುವುದೊ0ದು ಕುತೂಹಲಕಾರಿಯಾದ ಸಂಗತಿ. ಪೆರಿಯ ಪುರಾಣವು ಅವನ ಮೇಲೆ ಪ್ರಭಾವ ಬೀರಿದ ಪರಿಣಾಮವಾಗಿ ಅವನ ರಗಳೆಗಳ ಸ್ಥಳ, ಜೀವನ ವಿವರಗಳು ಮತ್ತು ನಿರೂಪಣಾ ವಿಧಾನಗಳು ಸಂಪೂರ್ಣವಾಗಿ ಬದಲಾಗಿವೆ. ಅವು ದ್ರಾವಿಡ ಜೀವನಶೈಲಿಗೆ ನಿಕಟವಾಗಿವೆ. ಪುರಾತನರ ರಗಳೆಗಳ ವಿಚಾರದಲ್ಲಂತೂ ಈ ಮಾತು ಇನ್ನಷ್ಟು ನಿಜವಾಗಿದೆ. ನೂತನರನ್ನು ಕುರಿತ ರಗಳೆಗಳು ಮಧ್ಯಕಾಲೀನ ಕರ್ನಾಟಕದ ಜೀವನಕ್ರಮಕ್ಕೆ ಕನ್ನಡಿ ಹಿಡಿಯುತ್ತವೆ. ಹರಿಹರ ಕವಿ ಅಲ್ಲಲ್ಲಿಯ ವಿವರಗಳನ್ನು ಎಚ್ಚರಿಕೆಯಿಂದ ಗಮನಿಸಿ, ಸಂವೇದನಶೀಲವಾಗಿ ಚಿತ್ರಿಸಿದ್ದಾನೆ.
ರಾಜಸೇವೆಯನ್ನು ಧಿಕ್ಕರಿಸುವ ಒಂದು ಪರಂಪರೆಯನ್ನು ಹುಟ್ಟುಹಾಕಿದ ಹರಿಹರನದು ಸ್ವತಂತ್ರ ಯುಗ. ಹಳಗನ್ನಡದಿಂದ ಹೊಸಗನ್ನಡಕ್ಕೆ ಸಂಕ್ರಮಣ ಹೊಂದುವ ಕಾಲದ ಪ್ರಾಯೋಗಿಕ ಶೈಲಿಯ ಸಂಕೀರ್ಣತೆ, ಪ್ರಾಸ ನಿಯಮದ ತಿರಸ್ಕರಣೆ, ಹಳಗನ್ನಡದ ರಳ ಕುಳ ಕ್ಷಳಗಳ ವರ್ಜನೆ ಈತನ ಅದ್ಭುತ ಸಾಧನೆ. ಅದುವರೆಗೆ ಕನ್ನಡ ಸಾಹಿತ್ಯದಲ್ಲಿ ಪ್ರಧಾನವಾಗಿದ್ದ ಚಂಪೂಕಾವ್ಯ ಪರಂಪರೆಯನ್ನು ಹಿಂದಕ್ಕೆ ಸರಿಸಿ ರಗಳೆಗಳಲ್ಲಿ ಕಾವ್ಯ ರಚಿಸುವ ಹೊಸ ಸಂಪ್ರದಾಯಕ್ಕೆ ಅಸ್ತಿಬಾರ ಹಾಕಿ ಕನ್ನಡದಲ್ಲಿ ರಗಳೆ
ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಹರಿಹರನನ್ನು ಯುಗಪುರುಷ ಪಟ್ಟಕ್ಕೆ ಏರಿಸಿದುದು, ಕನ್ನಡ ಸಾಹಿತ್ಯಲೋಕದಲ್ಲಿ ಆತನನ್ನು ಚಿರಸ್ಥಾಯಿಗೊಳಿಸಿದುದು ಆತನ ಶಿವಶರಣರ ರಗಳೆಗಳು. ವರ್ಣನಾತ್ಮಕ ಭಾವಸದೃಶದ ಅಖಂಡವಾಹಿನಿಯ ರಗಳೆಯನ್ನು ಮೊಟ್ಟಮೊದಲಿಗೆ ರಚಿಸಿದ ಕೀರ್ತಿ ಇವನದು. ಶಿವನನ್ನು, ಶಿವಶರಣರನ್ನು ಸ್ತುತಿಸಲು ಮಾತ್ರ ಕಾವ್ಯಶಕ್ತಿಯನ್ನು ಬಳಸಬೇಕಲ್ಲದೆ ಹುಲು ಮಾನವರನ್ನು ಹೊಗಳಲು ಅಲ್ಲವೆಂಬ ಸಂಪ್ರದಾಯವನ್ನು ಕನ್ನಡ ಸಾಹಿತ್ಯದಲ್ಲಿ ರೂಢಿಗೆ ತಂದವನು ಈತನೇ.
ಹರಿಹರನ ಮತ್ತೊಂದು ಮಹತ್ವದ ಸಾಧನೆಯೆಂದರೆ ಪಾತ್ರಗಳ ಬಹಳ ವಾಸ್ತವಿಕವಾದ ಚಿತ್ರಣ ಮತ್ತು ಅವುಗಳನ್ನು ದೈವೀಕರಣಗೊಳಿಸುವ ಹಂಬಲಗಳ ನಡುವೆ ಅವನು ತಂದುಕೊಂಡಿರುವ ಸಮತೋಲನ. ಇದು ಅವನ ಮಹತ್ವದ ಕೃತಿಗಳಾದ ‘ಬಸವರಾಜದೇವರ ರಗಳೆ’ ಮತ್ತು ‘ನಂಬಿಯಣ್ಣನ ರಗಳೆ’ಗಳಲ್ಲಿ ಅತ್ಯಂತ ಯಶಸ್ವಿಯಾಗಿ ಸಾಧಿತವಾಗಿದೆ. ನಡುಗನ್ನಡ ಅಥವಾ ಮಧ್ಯಕಾಲೀನ ಕನ್ನಡದಲ್ಲಿ ಪರಿಣಾಮಕಾರಿಯಾಗಿ ರಚಿತವಾಗಿರುವ ಹರಿಹರನ ರಗಳೆಗಳಲ್ಲಿ ಸಂಸ್ಕೃತ ಪದಗಳ ಬಳಕೆಯು ಬಹಳ ಕಡಿಮೆಯಾಗಿದ್ದು, ಶೈಲಿಯು ಶರಣ ಸಂಸ್ಕೃತಿಯ ಮತ್ತು ಶಿವಭಕ್ತಿಯ ವಾತಾವರಣ ಸೃಷ್ಟಿಗೆ ಸಹಾಯಕವಾಗಿದೆ.
ಹರಿಹರ ಅರವತ್ತು ಮೂವರು ಪುರಾತನರು, ಬಸವಣ್ಣ, ದೇವರದಾಸಿಮಯ್ಯ, ಪ್ರಭುದೇವ ಮುಂತಾದ ಶಿವಶರಣರನ್ನುಕುರಿತಲ್ಲದೆ ಅನೇಕ ಸ್ತೋತ್ರಗಳನ್ನು ಹಾಗೂ ಆತ್ಮನಿವೇದನಗಳನ್ನು ರಗಳೆಯ ಪ್ರಕಾರದಲ್ಲಿ ರಚಿಸಿದ್ದಾನೆ. ಅವನ ರಗಳೆಗಳಲ್ಲೆಲ್ಲ ಬಸವರಾಜದೇವರ ರಗಳೆ ಮತ್ತು ನಂಬಿಯಣ್ಣ ರಗಳೆ ಮಹತ್ವದ ಕೃತಿಗಳೆಂಬ ಮನ್ನಣೆಗೆ ಪಾತ್ರವಾಗಿವೆ.
ಕಾವ್ಯಾತ್ಮಕ ಜೀವನಚರಿತ್ರೆ: ವ್ಯಕ್ತಿಯೊಬ್ಬನ ಜೀವನಚರಿತ್ರೆ ಆತನ ಲೌಕಿಕ ಜೀವನದ ಭೋಗಭಾಗ್ಯದ, ದುಃಖ ದುಮ್ಮಾನಗಳ ಕಥನವೊಂದೇ ಆಗಿರದೆ ಅದರಲ್ಲಿ ಆತನ ಆತ್ಮೋನ್ನತಿಯ ಚಿತ್ರಣವೂ ಇದ್ದರೆ ಆಗ ಅದು ಪರಿಪೂರ್ಣವೂ ಮಹೋಜ್ವಲವೂ ಆಗಿರುತ್ತದೆ. ತನ್ನ “ಬಸವರಾಜದೇವರ ರಗಳೆ” ಯಲ್ಲಿ ಹರಿಹರ ಕವಿ ಬಸವಣ್ಣನ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನೋನ್ನತಿಯ ಚಿತ್ರವನ್ನು ಚಿತ್ರಿಸುವಲ್ಲಿ ಆಂತರಂಗಿಕ ಬದುಕು ಬಾಹ್ಯದೊಂದಿಗೆ ಒಂದಾಗಿ ಕಾಯಾ ವಾಚಾ ಮನಸಾ ವಿಕಾಸಗೊಳ್ಳುವ ಹೆಜ್ಜೆಗಳನ್ನು ಬೆರಳಿಟ್ಟು ಗುರುತಿಸುತ್ತಾನೆ. ಈ ಪ್ರತಿಮಾತ್ಮಕ ಚಿತ್ರಣದ ಬಗೆ ನಿಜವಾಗಿಯೂ ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳಲ್ಲಿ ವಿರಳವಾದದ್ದು. ಮುಂದೆ ಈತನ ಶಿಷ್ಯ ರಾಘವಾಂಕ ತನ್ನ “ಹರಿಶ್ಚಂದ್ರ ಕಾವ್ಯ”ದಲ್ಲಿ ಇದೇ ರೀತಿ ಹರಿಶ್ಚಂದ್ರ ಬಾಹ್ಯ ಮತ್ತು ಆಂತರಂಗಿಕ ಉಪಾಧಿಗಳನ್ನು ಒಂದೊಂದಾಗಿ ಹರಿದೊಗೆಯುವ ರೀತಿಯನ್ನು ಚಿತ್ರಿಸಿರುವುದನ್ನು ಕಾಣಬಹುದು.
ಶಿವ ಮೆಚ್ಚಿದ ಬಸವಣ್ಣ: ಬಸವರಾಜದೇವರ ರಗಳೆಯು ಬಸವಣ್ಣನ ಜನನದ ಮಾಹಿತಿಯೊಂದಿಗೆ ಆರಂಭವಾಗುತ್ತದೆ. ಬಸವಣ್ಣ ಕಮ್ಮೆ ಬ್ರಾಹ್ಮಣರ ಕುಲದಲ್ಲಿ ಹುಟ್ಟಿದ್ದ, ತಂದೆ ತಾಯಂದಿರನ್ನು ಬಾಲ್ಯದಲ್ಲಿಯೇ ಕಳೆದುಕೊಂಡಿದ್ದ. ಮುತ್ತಬ್ಬೆಯ “ಪಕ್ಕದೊಳು ಶಿವಪ್ರಸಾದ ಸಂತುಷ್ಟ ಹೃದಯ”ನಾಗಿ ಬೆಳೆದ. ನಾಲ್ಕೈದು ವರ್ಷ ಸುಖದಲ್ಲಿ ಕಾಲ ಕಳೆಯಿತು. ಕಾಲಕ್ರಮದಲ್ಲಿ “ಶಿವಲಿಂಗಮಂ ನವಪೂಜೆಯಡರ್ವಂತೆ” ಬಾಲ್ಯ ಕಳೆದು ಅವನಿಗೆ ಯೌವನೋದಯವಾಯಿತು. ಅಷ್ಟರಲ್ಲಿಯೆ ಅವನಿಗೆ ಉಪನಯನ ಸಂಸ್ಕಾರ ಆಗಿತ್ತು. ವೇದ ವೇದಾಂಗಗಳ ಜ್ಞಾನವೂ ಸಾಧ್ಯವಾಗಿತ್ತು. ಜೊತೆಗೆ ಪರಂಪರಾಗತವಾಗಿ ಬಂದ ಯಾಗ ಯಜ್ನ ಹೋಮ ಹವನವೇ ಮೊದಲಾದವುಗಳನ್ನು ಒಳಗೊಂಡ ವೈದಿಕ ಆಚರಣೆಗೂ, ತಾನು ನಂಬಿದ ಶಿವಪೂಜೆಗೂ ಹೊಂದಿಕೆ ಇಲ್ಲದಿರುವುದರ ಅರಿವಾಯಿತು. “ಶಿವಭಕ್ತಿಯುಂ ಕರ್ಮಮುಂ” ಒಂದಾಗಿರಲೆಂದು “ಕರ್ಮಲತೆಯಂತಿದ್ದ ಜನ್ನಿವಾರಮಂ” ಕಳೆದೊಗೆದ. ಅದರ ಜೊತೆಗೆ ಹುಟ್ಟಿ ಬೆಳೆದ ಬಾಗೇವಾಡಿಯನ್ನೂ ತೊರೆದ. ಕೂಡಲಸಂಗಮಕ್ಕೆ ಅಭಿಮುಖವಾಗಿ ಹೊರಟು ಬಂದ. ಇವೆಲ್ಲ ಬಸವರಾಜದೇವರ ರಗಳೆಯ ಮೊದಲ ಎರಡು ಸ್ಥಲಗಳಲ್ಲಿ ಇರುವ ಬಸವಣ್ಣನ ಜೀವನದ ಆರಂಭದ ಗತಿಯ ವರ್ಣನೆಯ ಸಾರಾಂಶ.
ತನ್ನ ಮನೆ, ಜನ, ಧನ ಮೊದಲಾದ ಎಲ್ಲವನ್ನೂ ಬಿಟ್ಟು ಅನಾಥನಂತೆ ಬರುತ್ತಿದ್ದ ಬಸವಣ್ಣನಿಗೆ ಶಂಕರಾಲಯವೊಂದು ಒಮ್ಮೆಗೇ ಎನ್ನುವಂತೆ ಕಂಡಿತು. “ಕಣ್ ಬಂದಂತೆ ಉಸಿರ್ ಬಂದಂತೆ” ಓಡಿ ಬಂದು ಶಿವಾಲಯದ ರಂಗಮಂಟಪವನ್ನು ಪ್ರವೇಶಿಸಿದ. ಮುಂದಿರುವ ಶಿವಲಿಂಗಕ್ಕೆ ನಮಸ್ಕರಿಸಿದ. ಆರ್ತನಾಗಿ ಪ್ರಾರ್ಥಿಸಿದ “ದೇವ ದೇವ, ಅನಾಥ ನಾಥ, ಅನಿಮಿತ್ತ ಬಂಧುವೆ, ಬಳಗವೆ, ಕುಲವೆ, ಬಲವೆ, ಛಲವೆ, ಗತಿಯೆ, ಪುಣ್ಯವೆ ಕಾವುದು, ಕಾವುದು!”. ಹೀಗೆ ಶಿವಲಿಂಗದ ಮುಂದುಗಡೆ ಪ್ರಾರ್ಥಿಸುತ್ತಾ ಭಾವಾವೇಶಕ್ಕೆ ಒಳಗಾಗಿ ಮೂರ್ಛಿತನಾದಂತೆ ಇದ್ದ. ಆಗ ಬಸವಣ್ಣನ ಚಿತ್ತದಲ್ಲಿ ಶಿವನು ಬಂದು “ಅಂಜದಿರ್, ಅಂಜದಿರ್ ಮಗನೆ. ಭವದ ಮಾಲೆಯ ಹೊದ್ದಲೀಯದೆ ಸಲಹಿದಪೆಂ, ನೆಲಂ ಮೆಚ್ಚೆ ಮೆರೆದಪೆಂ” ಎಂದು ಅಭಯವನ್ನು ಕೊಟ್ಟ. ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ಬಂದ ಅಲ್ಲಿಯ ಸ್ಥಾನಾಧಿಪತಿ ಈಶಾನ್ಯಗುರುಗಳು ಇವನನ್ನು ಕಂಡರು. ಭಕ್ತಿಭಾವದಿಂದ ತುಂಬಿರುವ ಈತ ಕಾರಣಿಕನಾಗಿರಬೇಕೆಂದು ತಿಳಿದರು. “ಎಲೆ ಭಕ್ತ ನೀನೆಲ್ಲಿಗುಂ ಪೋಗಬೇಡ. ಆವುದುಂ ಚಿಂತೆ ಬೇಡ. ಸಂಗಮೇಶ್ವರಂಗೆ ಹೊಸ ಪುಷ್ಮಂ ತಿಳಿಯಗ್ಘವಣಿಯಂ ತಂದು ಓಜೆಯಿಂ ಪೂಜೆಗೈದು ಪ್ರಸಾದಕಾಯನಾಗಿ ಸುಖದೊಳಿಪ್ಪುದು” ಎಂದು ಬಸವಣ್ಣನನ್ನು ಆ ಶಿವಾಲಯದ ಸಂಗಮೇಶ್ವರನ ಪೂಜಾ ಕಾಯಕಕ್ಕೆ ನಿಯಮಿಸಿಕೊಂಡರು. ಇದು ಮನೆಯಿಂದ ಹೊರಬಿದ್ದ ಬಸವಣ್ಣನಿಗೆ ಇದ್ದ ಹೊಯ್ದಾಟಕ್ಕೆ ನಿಲುಗಡೆ ದೊರೆತ ಪ್ರಸಂಗದ ವರ್ಣನೆ.
ದೊರೆತಿರುವ ಬಸವರಾಜದೇವರ ರಗಳೆ ಕೃತಿಯಲ್ಲಿ 13 ಸ್ಥಲಗಳಿವೆ. ಅದರ ಮೂರನೆಯ ಸ್ಥಲ ಕಪ್ಪಡಿಯ ಕೂಡಲ ಸಂಗಮದಲ್ಲಿ ಬಸವಣ್ಣ ದಿನನಿತ್ಯವೂ ಶಿವಪೂಜೆಯಲ್ಲಿ ನಿರತನಾಗಿದ್ದ ಚಿತ್ರದ ವರ್ಣನೆಗೆ ಮೀಸಲಾಗಿದೆ. ಅವನು ಅಲ್ಲಿ “ದಿನ ದಿನಕೆ ಘಳಿಗೆ ಘಳಿಗೆಗೆ ಭಕ್ತಿ ಮಿಗಿಲಾಗೆ, ಅನುದಿನಂ ನೇಹಮಿಮ್ಮಡಿಸಿ ನೂರ್ಮಡಿಯಾಗೆ, ಸಂಗ ನಾಮಂಗಳಂ ಪುರಜನಕೆ ಕಲಿಸುತಂ, … ನಡೆವಲ್ಲಿ ನುಡಿವಲ್ಲಿ … ಉಡುವಲ್ಲಿ ಉಂಬಲ್ಲಿ … ಕೊಡುವಲ್ಲಿ ಕೊಂಬಲ್ಲಿ … ತೊಡುವಲ್ಲಿ … ಪೊದೆವಲ್ಲಿ …ಸಂಗನಾಮದೊಳಚ್ಚುವಿಡಿದು … ಸಂಗನಂ ಅಂತರಂಗದೊಳು ಒಲಿದಿರ್ದು … ರಾಗದಿಂ ಅರ್ಚಿಸುವ ಕಲ್ಪಂ ನಿಮಿಷಮಾಗೆ … ಲಿಂಗ ಜಂಗಮವೊ ಜಂಗಮ ಲಿಂಗವೊ ಲಿಂಗಜಂಗಮವೆರಡು ಇಳೆಯೊಳು ವಿಭೇದವೊ ಎಂಬಂತೆ ಸಾತ್ವಿಕ ಪ್ರಭು” ಪೂಜಾನಿರತನಾಗಿದ್ದ.
ಬಸವಣ್ಣನಿಗೆ ಕೂಡಲಸಂಗಮದ ಶಿವಾಲಯ ದರ್ಶನವಾದಾಗ ಆತ “ಕಣ್ ಬಂದಂತೆ ಉಸಿರ್ ಬಂದಂತೆ” ಪರಿತಂದು ತನ್ನೆಲ್ಲವನ್ನೂ ಅಲ್ಲಿರುವ ಸ್ಥಾವರ ಲಿಂಗದಲ್ಲಿ ಅರ್ಪಿಸಿಕೊಳ್ಳುವುದು, ಆ ಸ್ಥಾವರ ಲಿಂಗದ ಸೇವಾಭಾಗ್ಯದಲ್ಲಿ ತನ್ನನ್ನು ಮರೆತು ತಲ್ಲೀನನಾಗುವುದು ಬಸವಣ್ಣನ ಆತ್ಮೋನ್ನತಿಯ ಮೊದಲ ಹಂತ. ಅಚ್ಚರಿಯೆಂದರೆ ಬಸವಣ್ಣ ಈಶಾನ್ಯಗುರುವಿಗೆ ವಂದಿಸಿದ್ದಾಗಲೀ, ಅವರೊಂದಿಗೆ ಮಾತಾಡಿದ್ದಾಗಲೀ ಇಲ್ಲ. ಅವರು ಸಾಕ್ಷಾತ್ ಜಂಗಮರೂಪಿಗಳಾಗಿ ಒಂದು ಸಂಸ್ಥಾನದ ಪ್ರಮುಖರಾಗಿದ್ದರೂ ಅವರಲ್ಲಿ ಶಿವಾಂಶವನ್ನು ಕಾಣಲಿಲ್ಲವೆ? ಅವರು ಈತನನ್ನು ಕಾರಣಿಕನೆಂದು ಗುರುತಿಸಿದರೂ ಈತನಿಗೆ ಅವರ ಮಹತ್ತು ಮುಖ್ಯವೆನಿಸಲಿಲ್ಲವೆ? ಅದಕ್ಕೆ ಹರಿಹರನ ಚಿತ್ರಣದಲ್ಲೆ ಉತ್ತರವೂ ಇದೆ.
ಬಸವಣ್ಣನ ಅಂತರಂಗ ಎರಗಿದ್ದು ಶಿವಲಿಂಗಕ್ಕೆ, ಆತನಿಗೆ ಇನ್ನೂ ಸ್ಥಾವರಲಿಂಗವೇ ಸತ್ಯವಾಗಿತ್ತು ಶಿವ-ಜಂಗಮ ಸತ್ಯದ ಅರಿವು ಹೃದಯವನ್ನು ತುಂಬಿರಲಿಲ್ಲ. ಶಿವನು ಜಂಗಮರೂಪಿ, “ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು” ಎಂಬ ಸ್ಥಿರಸತ್ಯದ ಕಡೆಗೆ ಆತನ ಗಮನ ಇರಲಿಲ್ಲ. ಅದರಿಂದ ಒಂದು ದಿನ “ಕೂಡಲಸಂಗನನ್ನು ನೀಂ ಬಿಟ್ಟು ಬಿಜ್ಜಳರಾಯನಿದ್ದ ಮಂಗಳವಾಡಕ್ಕೆ ಪೋಗು” ಎಂದು ಶಿವನ ಆದೇಶವಾದಾಗ “ಕೆಟ್ಟೆಂ ಕೆಟ್ಟೆಂ” ಎಂದು ರಂಗಮಂಟಪದ “ಕಂಭಮಂ ಘಳಿಲನೆ ಹಾಯ್ದು ಕರುಣಿ, ಕರುಣಂ ಲೇಸಾಯ್ತು! ಅರ್ಚಿತಕ್ಕೆ ಫಲವಾಯ್ತು! ಇನ್ನೇನು ಇನ್ನೇನು!” ಎಂದು ಸಂಗನಂ ತೆಕ್ಕೈಸಿ ಗೋಳಿಡುತ್ತಾನೆ. ಅದಕ್ಕೆ ಯಾವ ಪ್ರತಿಕ್ರಿಯೆಯೂ ಶಿವನಿಂದ ದೊರೆಯುವುದಿಲ್ಲ.
ಸಂಗನಲ್ಲಿ ಮೋಹದ ಮುನಿಸು ಹೆಚ್ಚುತ್ತದೆ. ಒಳ್ಳೆಯ ಪಕ್ವಾನ್ನಗಳನ್ನು ಸಂಗನಿಗೆ ನಿವೇದಿಸಿ ತಾನು ಉಪವಾಸವಿರುತ್ತಾನೆ. ಗಂಡನಲ್ಲಿ ಸಿಟ್ಟು ಮಾಡಿಕೊಂಡ ಹೆಂಡತಿ ಗಂಡನಿಗೆ ಒಳ್ಳೆಯ ಊಟ ಬಡಿಸಿ ತಾನು ಉಪವಾಸವಿದ್ದು ಸೇಡು ತೀರಿಸಿಕೊಳ್ಳುವಂತೆ ಇಲ್ಲಿ ಬಸವಣ್ಣನ ಮನಸ್ಥಿತಿ. ಶಿವ ಮತ್ತೆ ಬಸವಣ್ಣನ ಕನಸಿನಲ್ಲಿ ಬಂದು ತಾನು ಎಂದೆಂದೂ ಅವನೊಡನೆ ಲಿಂಗರೂಪಿಯಾಗಿ ಇರುವೆನೆಂದೂ, ವೃಷಭನ ಮುಖಾಂತರ ಅವನೆಡೆಗೆ ಬರುವನೆಂದೂ, ಆತ ಅವನಿಗೆ ಸದ್ಗುರು ಎಂದೂ ಹೇಳಿ “ಪರಸಮಯದ
ಗರ್ವಮಂ ನಿಲಿಸಿ ಭಕ್ತರಂ ಗೆಲಿಸಿ ಲೌಕಿಕ ಧರ್ಮಮಂ ಮೀರಿ ಕಡುನಿಷ್ಠೆಯಂ ಹೇರಿ” ಸುಖಿಸುವುದೆಂದು ಹಾರೈಸುತ್ತಾನೆ.
ಶಿವನ ಆಜ್ಞೆಯಂತೆ ವೃಷಭರಾಜನು ಬಸವಣ್ಣನ ಹಸ್ತದಲ್ಲಿ ಸಂಗಮೇಶ್ವರ ಲಿಂಗವನ್ನು “ಭೋಂಕನೆ ಬಿಜಯಂಗೆಯ್ಸಿ” ಸತ್ಯೋಪದೇಶವನ್ನು ಮಾಡುತ್ತಾನೆ. ಬಸವಣ್ಣ ಕರಕಮಳ ಸ್ಥಿತ ಶಿವಲಿಂಗೋತ್ನನ್ನ ಆಗುತ್ತಾನೆ. ರಂಗಮಂಟಪ ವಿವಾಹಮಂಟಪವಾಗುತ್ತದೆ, ಭಕ್ತಿರಸ ಕೈಧಾರೆಯಾಗುತ್ತದೆ, ಗುರುಕಾರುಣ್ಯ ಮುಹೂರ್ತಕ್ಕೆ ಜನನ ಮರಣಗಳು ಹಿಡಿದಿದ್ದ ಸಂಸಾರ ತೆರೆ ಸರಿಯುತ್ತದೆ, “ನಿಷ್ಠೆ, ನೇಮಂಗಳ ಜೀರಿಗೆ ಬೆಲ್ಲವ ತಳಿಯಲು ಪಂಚಾಕ್ಷರಿಯೆ ಗತಿಯಾಗಿ, ಸದ್ಭಕ್ತಿ ಮತಿಯಾಗಿ, ಲಿಂಗವು ಪತಿ ಬಸವನು ಸತಿ” ಯಾಗಿ ಲಗ್ನ ನೆರವೇರುತ್ತದೆ. ಆದರೂ ಶಿವನ ಆದೇಶವನ್ನು ಪಾಲಿಸಿ ಕಪ್ಪಡಿಯನ್ನು ಬಿಡುವ ಮನಸ್ಸು ಬಸವಣ್ಣನಿಗೆ ಉಂಟಾಗಲಿಲ್ಲ. ತಂದೆಯ ಮನೆಯನ್ನು ಬಿಟ್ಟು ಗಂಡನ ಮನೆಗೆ ಹೊರಡಬೇಕಾದ ಹೆಣ್ಣಿನಂತೆ ಬಸವಣ್ಣ “ಮತ್ತೆ ಮತ್ತೆ ಪೋಗೆಂದಪಂ ಸಂಗಮಂ; ನಲಿದು ಪೂಜಿಸಲೀಯನು ಅಕ್ಕಟಾ ಸಂಗಮಂ” ಎಂದು ಒದ್ದಾಡುತ್ತಾನೆ. ಮಂಗಳವಾಡೆಗೆ ಹೋಗಲೇ ಬೇಕೆಂಬ ಶಿವನ ಒತ್ತಡ ಹೆಚ್ಚಾದಾಗ ನಿರುಪಾಯನಾದ ಬಸವಣ್ಣ ಕೊನೆಗೆ “ಪೋಗಿ ನೋಡುವೆನು, ಅಲ್ಲಿ ಅಕ್ಷರಜ್ಜಾನದಿಂದ ಗಣಕ ಕಾಯಕ ಮಾಡುವೆನು” ಎಂದು ನಿರ್ಧರಿಸುತ್ತಾನೆ. ಹೊರಡುವ ಮುನ್ನ ಸಂಗಮನಿಗೆ ಬಿನ್ನೈಸಲು ಶಿವನ ಆಲಯಕ್ಕೆ ಬರುತ್ತಾನೆ.
ಬಸವಣ್ಣನಿಗೆ ಶಿವನು ತಾನೇ ಪ್ರಾಣಲಿಂಗವಾಗಿ ಅವನ ಕೈ ಸೇರಿದ್ದರೂ, ನಿನ್ನ ಬೆಂಬಳಿವಿಡಿದು ನಾನು ಬರುವೆ ಎಂದು ಭರವಸೆ ನೀಡಿದ್ದರೂ, ನಿನ್ನನ್ನು ಜಗತ್ತಿನಲ್ಲೆಲ್ಲ ಶಿವಭಕ್ತನಾಗಿ ಮೆರೆಸುತ್ತೇನೆ ಎಂದಿದ್ದರೂ ಮಂಗಳವಾಡೆಗೆ ಹೋಗುವುದೆಂದರೆ ಲಿಂಗರೂಪಿ ಸಂಗಮನ ಅಗಲಿಕೆ ಎಂದೇ ಆಗಿತ್ತು. ಬಸವಣ್ಣನಿಗೆ ಶಿವನು ಸ್ಥಾವರ ಲಿಂಗವಾದ ಕೂಡಲಸಂಗನಾಗಿ ಮಾತ್ರ ಸತ್ಯವಾಗಿದ್ದ. ಆದ್ದರಿಂದಲೇ ಅವನ ಕೊರಳ ಸೆರೆ ಬಿಗಿಯುತ್ತದೆ. ಅವನು ಗದ್ಗದಿಸುತ್ತ, ಬಿಕ್ಕುತ್ತ, ಬಿದ್ದು ಹೊರಳುತ್ತ, ಅಳುತ್ತ, ಒರಲುತ್ತ ಎದ್ದು “ತಂದೆ, ನಿನ್ನಂ ನಂಬಿ, ನಚ್ಚಿ ಪೋದಪೆನಯ್ಯಾ, ಅಗಲಲಾರೆಂ. ದೇವ ದೇವ ಕರುಣಿಪುದೆನುತೆ” ಸಂಗನ ಮುಂದೆ ನಿಂತುಬಿಡುತ್ತಾನೆ.
ಶಿವ ಆತನ ಹತ್ತಿರ ಬಂದು “ಮನದೊಳಗೆ, ಕರದೊಳಗೆ, ತನುವಿನೊಳಗೆ ಇರ್ದಪೆಂ. ನಿಂದಲ್ಲಿ ನಿಂದಪೆಂ, ನಡೆದಲ್ಲಿ ನಡೆದಪೆಂ, ಮಾಡಿದಂ ಮಾಡುವೆಂ, ಕೂಡಿದಂ ಕೂಡುವೆಂ, ನಡೆಯಯ್ಯ. ನಡೆ ಮಗನೆ, ನಡೆ ಕಂದ, ಬಸವಣ್ಣ” ಎಂದು ಬಸವಣ್ಣನನ್ನು ಹೊರಡಿಸುತ್ತಾನೆ. “ಬಂದನೆಂತೆಂತಕ್ಕೆ ಅಗಲಲಾರದೆ ರಾಗಿ ಸಂಗನ ಕರುಣ ತನಗೆ ಬೆಂಬಲವಾಗಿ …. ಸಂಗನಿರ್ದ ಇರವ ನೆನೆದು ಹಿಗ್ಗುತ ,,, ಮೃಢನೆ ಶರಣೆನುತ” ಮಂಗಳವಾಡವನ್ನು ಬಸವಣ್ಣ ಸೇರುತ್ತಾನೆ ಎಂದು ಕವಿ ಮಂಗಳವಾಡೆಗೆ ಹೊರಟ ಬಸವಣ್ಣನ ಜೀವನಗತಿಯ ಆಧಾರ ಶಿವನ ಕಾರುಣ್ಯ ಎನ್ನುವುದನ್ನು ʼರಾಗಿ ಸಂಗನ ಕರುಣವೇ ತನಗೆ ಬೆಂಬಲʼ ಎಂದು ಬಸವಣ್ಣ ಹೇಳಿಕೊಳ್ಳುವ ಮಾತಿನಲ್ಲಿ ಸ್ಪಷ್ಟಪಡಿಸುತ್ತಾನೆ. ಆಗಿನ ಬಸವಣ್ಣನ ಮನಸ್ಥಿತಿಯ ಈ ಚಿತ್ರ ಆತನ ವಿರಹಸ್ಥಿತಿಯ ಚಿತ್ರವೊಂದೇ ಅಲ್ಲ, ಆತ ಸ್ಥಾವರ ಲಿಂಗದಲ್ಲಿ ತನ್ನ ಭಕ್ತಿಯನ್ನು ಎಷ್ಟು ಆಳವಾಗಿ ಬೇರೂರಿಸಿದ್ದ ಎನ್ನುವುದನ್ನೂ ತೋರುವ ಚಿತ್ರವೂ ಆಗಿದೆ.
ಕೂಡಲಸಂಗಮದಿಂದ ಹೊರಟ ಆ ಹೊತ್ತಿನಲ್ಲಿ ಬಸವಣ್ಣ ತನಗೆ ಸಂಗನನ್ನು ಪೂಜಿಸುವ ಅವಕಾಶ ಮಾಡಿಕೊಟ್ಟ ಈಶಾನ್ಯ ಗುರುವನ್ನು ನೆನೆಯಬೇಕಿತ್ತು, ನೆನೆಯುವುದಿಲ್ಲ. ಸಂಗನನ್ನು ಅಗಲಬೇಕಲ್ಲ ಎನ್ನುವ ದುಃಖ ತೀವ್ರತೆಯಲ್ಲಿ ಬೇರೆ ಯಾವುದೂ ಬಸವಣ್ಣನಿಗೆ ಕಂಡಿಲ್ಲ. ಸಂಗಮನಲ್ಲಿಯೇ ಮೋಹಾಧಿಕ್ಯವುಳ್ಳ ಆತನಿಗೆ ಶಿವನನ್ನು ಜಂಗಮನಾಗಿ ಕಾಣುವ ಸಾಧ್ಯತೆ ದೂರದಲ್ಲಿಯೇ ಇತ್ತು. ಆತನಿಗೆ ಅಲ್ಲಿಂದ ಹೊರಡುವಾಗ ಇನ್ನಾವುದೇ ಸೆಳೆತವಿರಲಿಲ್ಲ. ಕೇವಲ ಶಿವಲಿಂಗ ಸ್ವರೂಪಿ ಸಂಗನನ್ನು ಅಗಲುವ ಕಷ್ಟ ಮಾತ್ರ ಆತನನ್ನು ಮುತ್ತಿಕೊಂಡಿತ್ತು.
ಬಸವಣ್ಣ ಈ ಮನಸ್ಥಿತಿಯಿಂದ ಆಚೆ ಬಂದು ನಿಂತಲ್ಲಿ, ನಡೆದಲ್ಲಿ, ನೋಡಿದಲ್ಲಿ, ಮಲಗಿದಲ್ಲಿ, ಎಲ್ಲೆಲ್ಲೂ ಶಿವನನ್ನು ಕಾಣುವ, ಆಡಿದ ಮಾತೆಲ್ಲ ಶಿವತತ್ತ್ವವೇ ಆಗುವ ವ್ಯಕ್ತಿತ್ವದ ಬಸವಣ್ಣ ಆಗುವುದನ್ನು ಹರಿಹರ ಮುಂದಿನ ಸ್ಥಲಗಳಲ್ಲಿ ಚಿತ್ರಿಸುತ್ತಾನೆ. ಜಡ ಲಿಂಗದಲ್ಲಿದ್ದ ಬಸವಣ್ಣನ ಅಚಲ ಶ್ರದ್ಧೆಯು ನಿಧಾನವಾಗಿ ಚಲ ಅಚಲ ಎನ್ನುವ ಭೇದವಿಲ್ಲದೆ ಸಕಲದಲ್ಲಿಯೂ ಶಿವಸಂಗ ಕಾಣುವ ಸ್ಥಿತಿಗೆ ಏರುತ್ತದೆ.
(ಮುಂದುವರಿಯುವುದು)
–ಗಜಾನನ ಈಶ್ವರ ಹೆಗಡೆ
ಮಾಹಿತಿಯುಕ್ತವಾಗಿದೆ ಹಾಗೂ ಕುತೂಹಲಕಾರಿಯಾಗಿದೆ. ಇತಿಹಾಸ ಘಟನೆಗಳು ಕಣ್ಣ ಮುಂದೆ ಕಟ್ಟುತ್ತವೆ. ರಗಳೆಗಳಿಗೆ ಎಲ್ಲಿಂದ ಸ್ಪೂರ್ತಿ ಸಿಕ್ಕಿತು ಅನ್ನುವ ವಿಷಯ ಗೊತ್ತಾಯಿತು.ಮುಂದಿನ ಕಂತಿಗೆ ಕಾಯುವಂತಾಗಿದೆ.ಧನ್ಯವಾದಗಳು ಸರ್ ತಮಗೆ
ಉತ್ತಮ ವಾದ..ರಗಳೆ ಕವಿಯ..ರಚನಾತ್ಮಕ ..ಬರವಣಿಗೆ..ಮುಂದಿನ ಕಂತಿಗೆ ಕಾಯುವಂತಿದೆ..
ಉತ್ತಮವಾದ ಮಾಹಿತಿ ಪೂರ್ಣವಾದ ಲೇಖನ ವಂದನೆಗಳು ಸರ್
ಸಾಕಷ್ಟು ಮಾಹಿತಿಗಳನ್ನೊಳಗೊಂಡ ಬರಹ
ಹಳೆಯ ಪರಂಪರೆಯನ್ನು ಬಿಟ್ಟು ಹೊಸ ಪರಂಪರೆಯನ್ನು ಹುಟ್ಟು ಹಾಕಿದ ರಗಳೆ ಕವಿ ಹರಿಹರ ಹಾಗೂ ಬಸವರಾಜದೇವರ ರಗಳೆಯಲ್ಲಿ ಬಸವಣ್ಣನವರ ಜೀವನಗಾಥೆಯ ಈ ಕಂತು ಬಹಳ ರೋಚಕವಾಗಿದೆ…ಮುಂದಿನ ಕಂತಿಗೆ ಕಾಯುವಂತಾಗಿದೆ…ಧನ್ಯವಾದಗಳು ಸರ್.
ಕಾವ್ಯ ಮತ್ತು ಕರ್ತೃವನ್ನು ಆತ್ಮೀಯವಾಗಿ ಭಾವಿಸಿದ ಎಲ್ಲರಿಗೂ ಧನ್ಯವಾದಗಳು. ಗಜಾನನ ಈಶ್ವರ ಹೆಗಡೆ
ಪೀತಿಯಿಂದ ಬರೆಹ ಓದಿ ಸುಂದರವಾಗಿ ಪ್ರತಿಕ್ರಿಯೆ ನೀಡಿರುವ ಎಲ್ಲರಿಗೂ ಧನ್ಯವಾದಗಳು. ಗಜಾನನ ಈಶ್ವರ ಹೆಗಡೆ