ಗಂಭೀರರ ವ್ಯಾಧಿಗೆ ವಿನೋದವೇ ಮದ್ದು, ಗುದ್ದು!
ಕೃತಿಯ ಹೆಸರು: ಸಕ್ಕರೆಗೆ ಮದ್ದು ಹುಡುಕುತ್ತಾ (ಲಲಿತ ಪ್ರಬಂಧಗಳು)
ಕೃತಿಕಾರರು: ಸಮತಾ ಆರ್, ಮೈಸೂರು
ಪ್ರಕಾಶಕರು: ನಯನ ಪ್ರಕಾಶನ, ಉತ್ತರಾದಿಮಠದ ರಸ್ತೆ, ಮೈಸೂರು
ಮೊದಲ ಮುದ್ರಣ: 2024, ಪುಟಗಳು: 180, ಬೆಲೆ: ರೂ. 200
ಸ್ನಾತಕೋತ್ತರ ವಿಜ್ಞಾನ ಪದವೀಧರೆ, ಸರ್ಕಾರಿ ಶಾಲೆಯ ಗಣಿತಶಾಸ್ತ್ರದ ಹಿರಿಯ ಶಿಕ್ಷಕಿ ಶ್ರೀಮತಿ ಸಮತಾ ಅವರ ಎರಡನೆಯ ಪ್ರಬಂಧ ಸಂಕಲನವಿದು. ಮೊದಲ ಪ್ರಬಂಧ ಸಂಕಲನ 2022 ರಲ್ಲಿ ಪ್ರಕಟವಾದ ‘ಪರಿಮಳಗಳ ಮಾಯೆ’ಯು ಸಹೃದಯರ ಪ್ರೀತಿಗೆ ಪಾತ್ರವಾಯಿತು. ಇದರಿಂದ ಉತ್ತೇಜಿತಗೊಂಡ ಸಮತಾ ಇನ್ನಷ್ಟು ಬರೆದರು; ಬರೆದು ಇಟ್ಟಿದ್ದ ಇನ್ನಷ್ಟರ ಜೊತೆಗೆ ಸೇರಿಸಿ, ಆತ್ಮವಿಶ್ವಾಸದಿಂದ ಪ್ರಕಟಿಸಿದರು. ಇದೇ ‘ಸಕ್ಕರೆಗೆ ಮದ್ದು.’ ಒಟ್ಟು ಇಪ್ಪತ್ತೆರಡು ವಿವಿಧ ಪ್ರಬಂಧಗಳು ಇಲ್ಲಿವೆ. ಕನಿಷ್ಟವೆಂದರೆ ನಾಲ್ಕು ಪುಟ; ಗರಿಷ್ಠವೆಂದರೆ ಹತ್ತು ಪುಟಗಳ ಇವರ ಬರೆಹದ ಮೊದಲ ಲಕ್ಷಣವೆಂದರೆ ಆಕರ್ಷಕತೆ. ಈ ಗುಣವು ಪ್ರಬಂಧಕ್ಕೆ ಇವರು ಆಯ್ದುಕೊಂಡ ವಸ್ತುವಿಗೂ ಅಭಿವ್ಯಕ್ತಿಸುವ ಶೈಲಿಗೂ ಅನ್ವಯಿಸುತ್ತದೆ. ಅಪಾರ ಜೀವನಪ್ರೀತಿಯುಳ್ಳ ಇವರ ಮನೋಧರ್ಮ ಮತ್ತು ಅನುಸರಿಸುವ ಕಾಮಿಕ್ ತಂತ್ರದಿಂದಾಗಿ ಓದುಗರನ್ನು ಸೆಳೆಯುತ್ತದೆ. ಇಂಥ ಕಾಂತಾಸಮ್ಮಿತವು ಕಾಂತೆಯ ಸಂಹಿತೆಯೂ ಆಗಿದೆ; ಅಯಸ್ಕಾಂತದಂತೆ ಎಲ್ಲ ವರ್ಗದ ಓದುಗರನ್ನೂ ಹಿಡಿದಿಡುತ್ತದೆ. ಸಾಹಿತ್ಯದ ಸರಳ ಉದ್ದೇಶವೇ ಇದು. ಓದುವಂತೆ ಮತ್ತು ಬರೆಯುವಂತೆ ಮಾಡುವ ಸಮ್ಮೋಹನವೇ ನಿಜ ಬರೆವಣಿಗೆಯ ಸದಾಶಯ; ಅಥವಾ ಓದಿದ್ದನ್ನು ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುವಂತೆ ಮಾಡುವಲ್ಲಿ ಶುಭಾಶಯ! ಸಮತಾ ಅವರು ತಮ್ಮ ತಂದೆಯವರಿಂದ ಪಡೆದ ಬಳುವಳಿಯಿದು. ಅವರೇ ಓದಿನ ಹುಚ್ಚು ಹಿಡಿಸಿದವರು. ಬರೆವಣಿಗೆಯ ಹಿಂದಿನ ಪ್ರೇರಕಶಕ್ತಿಯಾದರು.
ನನ್ನ ಸೋದರಿಯ ಸ್ನೇಹಿತೆಯೂ ಸಹಪಾಠಿಯೂ ಆದ ಸಮತಾ ಅವರು ಅದ್ಭುತವಾಗಿ ಬರೆಯಬಲ್ಲ ಮತ್ತು ಬರೆವಣಿಗೆಯ ಗುಟ್ಟು ಬಲ್ಲ ಸೃಜನಶೀಲೆ ಎಂಬುದನ್ನು ಪರಿಮಳಗಳ ಮಾಯೆಯಿಂದ ತಿಳಿದಿದ್ದೇ ತಡ, ನಾನು ಇವರ ಮೊದಲ ಕೃತಿಯನ್ನು ಕುರಿತು ಪುಸ್ತಕ ಪರಿಚಯ ಮಾಡುವ ನೆಪದಲ್ಲಿ ಲೇಖನವಾಗಿಸಿದ್ದೆ. ಇದು ನವೆಂಬರ್ 2, 2022 ರ ಪಂಜು ಅಂತರ್ಜಾಲ ಪತ್ರಿಕೆಯಲಿ ‘ಪರಿಮಳದ ಪಯಣದಲಿ ಜೀವ ಜೀವನ ಧನ್ಯ’ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವೂ ಆಯಿತು. ನನ್ನ ವಲಯದ ಓದುಗರನೇಕರು ಆ ಮೂಲಕ ಪರಿಮಳಗಳ ಮಾಯೆಯನ್ನು ತರಿಸಿಕೊಂಡು ಓದಿ ಖುಷಿಪಟ್ಟರು. ಅಷ್ಟೇ ಅಲ್ಲ, ತಮ್ಮ ಎರಡನೆಯ ಪ್ರಬಂಧ ಸಂಕಲನದ ಲೇಖಕಿಯ ಒಂದೆರಡು ಮಾತುಗಳಲ್ಲಿ ತಮ್ಮ ಬರೆವಣಿಗೆಯನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟಿದ ಮತ್ತು ಪ್ರಕಟಿಸಿದ ಎಲ್ಲ ಆತ್ಮೀಯರಿಗೆ, ಸಂಪಾದಕರಿಗೆ ಮರೆಯದೇ ಧನ್ಯವಾದಗಳನ್ನು ಹೇಳಿದ್ದಾರೆ. ಅವರ ಮಾನವೀಯ ಮತ್ತು ವಿಶಾಲ ಹೃದಯದ ದ್ಯೋತಕವಿದು.
ಹಾಗೆ ನೋಡಿದರೆ ತಮ್ಮ ಗಣಿತ ಕಲಿಸುವ ವೃತ್ತಿ ಸಂಬಂಧದ ವಿಚಾರಗಳನ್ನು ಸಮತಾ ಅವರು ತಮ್ಮ ಈ ಪ್ರಬಂಧಗಳಲ್ಲಿ ಹೆಚ್ಚು ತಂದಿಲ್ಲ. ಅವನ್ನೆಲ್ಲ ತಂದು ವಿನಾಕಾರಣ ಬರೆಹದ ಭಾರ ಹೆಚ್ಚು ಮಾಡಿಕೊಳ್ಳಲು ಅವರಿಗೆ ಸುತರಾಂ ಇಷ್ಟವಿಲ್ಲ. ಉಳಿದಂತೆ ಅವರು ಆಯ್ಕೆ ಮಾಡಿಕೊಂಡಿರುವ ವಿಷಯಗಳು ನಮ್ಮ ನಿಮ್ಮ ಸಾಮಾನ್ಯರಿಗೆ ಗೊತ್ತಿರುವಂಥದೇ. ಆದರೆ ಅವನ್ನು ನಿರೂಪಿಸುವ ಶೈಲಿ ಮತ್ತು ವಿಧಾನಗಳು ಸರಸ ಸುಂದರವಾಗಿವೆ; ಲಲಿತ ಪ್ರಬಂಧಗಳಾಗಿವೆ. ಸಮತಾ ಅವರು ಏನೊಂದನೂ ಸಲೀಸಾಗಿ ಬರೆಯಬಲ್ಲರು; ವೈನೋದಿಕವಾಗಿಸಬಲ್ಲರು! ಇದರ ಒಡಲಿನಲ್ಲೇ ನಮ್ಮ ಕಾಲಮಾನದ ಸಂಸ್ಕೃತಿಯ ಮತ್ತು ಪೀಳಿಗೆಯ ಆಲೋಚನೆಗಳನ್ನು ನಿರಾಳವಾಗಿ ಅಭಿವ್ಯಕ್ತಿಸಬಲ್ಲರು. ಲಲಿತ ಪ್ರಬಂಧಗಳೇ ಹಾಗೆ. ಒಂದು ವಿಷಯದ ಸುತ್ತ ಚೆಲ್ಲುವ ಬೆಳಕು ; ಮನೋಲಹರಿ ; ಬದುಕಿನ ದೃಷ್ಟಿಕೋನದ ಆ ಕ್ಷಣದ ವ್ಯಾಖ್ಯಾನ. ಲೈಟಾಗಿದ್ದರೂ ಲೈಟ್ ಆಗಿಬಿಡುವ ಚೋದ್ಯ.
ಲೇಖಕಿಯು ಆಯ್ದುಕೊಂಡ ವಿಷಯಗಳೇ ತುಂಬ ಇಂಟರೆಸ್ಟಿಂಗ್ ಆಗಿರುವಂಥವು. ಆ ಮಟ್ಟಿಗೆ ಜನಪರವೂ ಜನಪದವೂ ಆಗಿ ಓದುಗರನ್ನು ಆವರಿಸಿಕೊಳ್ಳುತ್ತವೆ. ಓದುಗ ರಸಿಕರು ಸಹ ತಮ್ಮ ಅನುಭವಗಳೊಂದಿಗೆ ಸಮೀಕರಿಸಿಕೊಂಡು ಖುಷಿಪಡುವ ಆನಂದವು ಜಿಲೇಬಿ, ಜಹಂಗೀರುಗಳ ಒಳಗಣ ರಸಪಾಕದಂತೆ ಮಡುಗಟ್ಟಿದೆ. ಮೇಲ್ನೋಟಕೆ ಹಾಸ್ಯ ಮತ್ತು ವಿನೋದಗಳೇ ಪ್ರಧಾನವಾಗಿದ್ದರೂ ಅಂತರಂಗದಲ್ಲಿ ಒಂದು ಬಗೆಯ ಗಾಢ ವಿಷಾದ ಮತ್ತು ವಿಷಣ್ಣತೆಗಳು ದಾಖಲಾಗಿರುವುದನ್ನು ಒಳಗಣ್ಣಿಂದ ಗುರುತಿಸಬಹುದು. ಪುಟಿಯುವ ಜೀವಂತಿಕೆ ಮತ್ತು ಅದಮ್ಯ ಜೀವನೋತ್ಸಾಹಗಳೆರಡೂ ಬರೆಹಗಳಲ್ಲಿ ವ್ಯಕ್ತವಾಗುವುದರಿಂದ ಓದುಗರು ಸಹ ಇವರಂತೆಯೇ ಸಂಭ್ರಮಿಸುವುದು ಖಚಿತ. ತಮ್ಮ ಸುತ್ತಲಿನ ಲೋಕವನ್ನು ತಾದಾತ್ಮ್ಯವಾಗಿ ಮತ್ತು ಅವು ಇರುವ ರೀತಿಯಲ್ಲಿ ಸ್ವೀಕರಿಸುವ ಮುಕ್ತತೆ ಸಮತಾ ಅವರದು. ಇದರಿಂದಾಗಿ ಯಾವ ಪೂರ್ವಗ್ರಹಿಕೆ ಮತ್ತು ತಪ್ಪುಗ್ರಹಿಕೆಗಳೂ ನುಸುಳಲಾರವು. ಅವರ ನೆನಪಿನ ಶಕ್ತಿ ಮತ್ತು ಬರೆಯುವಾಗಿನ ಉಚಿತಾನುಚಿತ ವಿವೇಕದ ಬಗ್ಗೆ ನನಗೆ ಅತೀವ ಮೆಚ್ಚುಗೆ ಮೂಡಿತು.
‘ಎನ್ನ ಪಾಡೆನಗಿರಲಿ; ಅದರ ಹಾಡನಷ್ಟೇ ನೀಡುವೆನು ರಸಿಕ ನಿನಗೆ! ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹನಿಸು ನನಗೆ’ ಎಂದ ಕವಿ ಬೇಂದ್ರೆ ನನಗೆ ನೆನಪಾದರು. ಲೇಖಕಿಯು ಪಾಡನ್ನು ಹಾಡಾಗಿಸುವ ಕಲೆಯಲ್ಲಿ ಪಾರಂಗತರು. ಜೊತೆಗೆ ಕಲ್ಲು ಹೃದಯವನೂ ಹಗುರಗೊಳಿಸಿ, ತುಟಿಯ ಮೇಲೊಂದು ಮಂದಸ್ಮಿತ ಮೂಡಿಸುವಷ್ಟು ಹಾಸ್ಯಪ್ರಿಯರು ಎಂಬುದು ಇಲ್ಲಿನ ಬರೆಹಗಳಿಂದ ಮನದಟ್ಟಾಗುವುದು. ‘ಕವಿಯ ಹೃದಯವೊಂದು ವೀಣೆ; ಲೋಕವದನು ಮಿಡಿವುದು’ ಎಂಬ ಕವಿ ಕುವೆಂಪು ಅವರ ಮಾತೊಂದಿದೆ. ಅದರಂತೆ ಇವರು ಜಗತ್ತಿನ ವಿದ್ಯಮಾನಗಳಲಿ ಅಡಗಿರುವ ಬೇರೊಂದು ಆಯಾಮವನ್ನು ನಮ್ಮ ಗಮನಕೆ ತಂದು ಸಂಕೀರ್ಣ ಬದುಕಿಗೊಂದು ರಿಲೀಫು ಕೊಡುವಲ್ಲಿ ಸಿದ್ಧಹಸ್ತರು. ಉರಿವ ಹಣತೆಯಿಂದ ಇನ್ನೊಂದು ಹಣತೆಯನ್ನು ಬೆಳಗುವ ಕೆಲಸವನ್ನಷ್ಟೇ ಅವರು ಮಾಡಿದ್ದಾರೆ. ತಾವೇನೂ ಕಳೆದುಕೊಳ್ಳದೆ ತಾವು ಪಡೆದ ಅನಿರ್ವಚನೀಯ ಖುಷಿಯನ್ನು ಉಣಬಡಿಸಿದ್ದಾರೆ. ಎರಡು ವೀಣೆಗಳನ್ನು ಶ್ರುತಿಗೊಳಿಸಿ, ಕೊಠಡಿಯ ಎರಡು ಮೂಲೆಗಳಲಿ ನೆಲೆಗೊಳಿಸಿ, ಒಂದನ್ನು ನುಡಿಸಿದರೆ ಇನ್ನೊಂದು ಅದರ ಕಂಪನಕೆ ತಾನೇ ತಾನಾಗಿ ಮಿಡಿಯುವುದಂತೆ. ಇದೊಂದು ಲೋಕ ವಿಸ್ಮಯ. ಹಾಗೆ ಸಮತಾ ಅವರ ಸವಿರಾಗ ಸಲೀಸು ಬರೆಹಗಳನು ಓದುತಿದ್ದರೆ ನಾವೂ ಹೀಗೆ ಬರೆಯಬೇಕು ಎಂದೆನಿಸುವುದು ಸತ್ಯ ಮತ್ತು ಸಹಜ. ಆದರೆ ಇಂಥ ಬರೆಹಗಳ ಕೃಷಿ ಮೇಲ್ನೋಟಕೆ ಅನಿಸುವಷ್ಟು ಸರಳವೂ ಅಲ್ಲ; ಸಾಮಾನ್ಯವೂ ಅಲ್ಲ! ಬಾಳಿನ ಬದ್ಧತೆ ಮತ್ತು ಸಾಕಷ್ಟು ಸಿದ್ಧತೆಗಳಿಲ್ಲದಿದ್ದರೆ ಹೀಗೆ ಇವು ಗದ್ಯಕವಿತೆಗಳಾಗಿ ಹೊರ ಹೊಮ್ಮುವುದೂ ಇಲ್ಲ!!
ಮೇಲಿನ ಮೂರು ಪ್ಯಾರಾಗಳ ಮಾತು ನನ್ನವೇ. ಇವರ ‘ಪರಿಮಳಗಳ ಮಾಯೆ’ ಪುಸ್ತಕವನ್ನು ಓದಿ ಬರೆದ ಮೆಚ್ಚು ಮಾತು. ಈ ಮಾತುಗಳೆಲ್ಲಾ ಇವರ ಈ ಎರಡನೆಯ ಪ್ರಬಂಧ ಸಂಕಲನಕ್ಕೂ ಅನ್ವಯಿಸುತ್ತವೆ. ಆದರೆ ಇಲ್ಲಿ ಅವರ ಬರೆವಣಿಗೆಯು ಇನ್ನಷ್ಟು ಮಾಗಿದೆ. ನೂತನ ಆಯಾಮಗಳನ್ನು ತನ್ನದಾಗಿಸಿಕೊಳ್ಳುತ್ತಾ, ಹೊಸ ಸಂಗತಿಗಳಿಗೆ ತಾಗಿದೆ. ಸಾಮಾನ್ಯ ಎನಿಸುವ ಸಂಗತಿಗಳಲ್ಲೂ ಅಡಗಿರಬಹುದಾದ ಮತ್ತು ಅಡಕಗೊಂಡು ತಮ್ಮ ಪಾಡಿಗೆ ತಾವಿದ್ದು ಬಿಡಬಹುದಾದ ಏನೆಲ್ಲ ಪುಟ್ಪುಟ್ಟ ಅನಿರ್ವಚನೀಯಗಳನ್ನು ಗುರುತಿಸಿ, ಅವನ್ನು ನೇವರಿಸಿ, ನೇರವಾಗಿ ಮುಖಾಮುಖಿಯಾದ ಆಲೋಚನಗಳಿಗೆ ಭಾವನಾತ್ಮಕ ಸ್ಪರ್ಶದಿಂದ ಸಂವೇದಗೊಳಿಸಿ, ಒಂದು ಚೆಂದದ ಬರೆಹವಾಗಿಸುವ ಕುಸುರಿಕಲೆ ಇವರದು. ಹೀಗೆ ಕಲೆಯಾಗಿಸುವಲ್ಲಿ ಎಲ್ಲಿಯೂ ಕಸರತ್ತು ಕಾಣುವುದಿಲ್ಲ. ಹೇಗೋ ಮುಗಿಸಿದರಾಯಿತು ಎಂಬ ಯಾಂತ್ರಿಕವಿಲ್ಲ. ಮೊದಲಿನಿಂದ ಕೊನೆಯವರೆಗೂ ಅದೇ ಸ್ನಿಗ್ಧತೆ, ತನ್ಮಯತೆ ಮತ್ತು ಉತ್ಸುಕತೆ. ಏನನ್ನು ಬರೆಯಬೇಕು? ಎಷ್ಟು ಬರೆಯಬೇಕು; ಯಾವುದನ್ನು ಬಿಡಬೇಕು? ಎಂಬುದನ್ನು ಯೋಚಿಸಿ, ಯೋಜಿಸಿ ಗಿಡದ ಮೊಗ್ಗು ಹೂವಾಗಿ ಅರಳುವಷ್ಟು ನಿರುಮ್ಮಳವಾಗಿ ಬರೆದ ಧಾಟಿ ಇಲ್ಲಿಯದು. ಎಲ್ಲಿಯೂ ಆತ್ಮವಂಚನೆಗೈಯದೇ ದಾಖಲಿಸಿಬಿಡುವಲ್ಲಿ ಧಾವಂತವಿದ್ದರೂ ದುಗುಡವಿಲ್ಲ; ಜರೂರಿದ್ದರೂ ಜಬರ್ದಸ್ತಿಲ್ಲ; ಅಲ್ಲಲ್ಲಿ ತುಸು ಚೇಷ್ಟೆ-ವ್ಯಂಗ್ಯ ಸುಳಿದಾಡಿದರೂ ಉದ್ದೇಶಪೂರ್ವಕವಲ್ಲ; ಉಳಿದವರ ಮಾತುಗಳನ್ನು ಎಳೆದು ತಂದರೂ ಬಲವಂತವಿಲ್ಲ; ನಿರಾಳ ಶೈಲಿಯಿದ್ದರೂ ಅಹಂ ವಿಜೃಂಭಿಸಿಲ್ಲ! ಇದೇ ನನಗೆ ಇಷ್ಟವಾದದ್ದು.
ಇವರ ಬರೆವಣಿಗೆಯು ಹಸಿರು ಗಿಡದ ತುಂಬ ಮೊಸರು ಚೆಲ್ಲಿದಂತೆ ಖುಷಿಯನರಸುವ ನಗೆಮಲ್ಲಿಗೆಯಾಗಿದೆ; ಜಂಭದ ಡಂಬಕೆ ವಶವರ್ತಿಯಾಗಿ, ಮುಳ್ಳಿನೊಂದಿಗೇ ತನ್ನ ಚೆಲುವನ್ನು ಸಾರುವ ಅಪಾಯಕಾರಿ ಗುಲಾಬಿಯಾಗಿಲ್ಲ! ಎಷ್ಟಾದರೂ ಗುಲಾಬಿಯದು ತೋರಿಕೆಯ ಪ್ರದರ್ಶನವಾಗಿ, ಕಣ್ಣಿಗೆ ಹಬ್ಬವಾಗುವ ದೌಲತ್ತು. ಮಲ್ಲಿಗೆ ಹಾಗಲ್ಲ. ಬಿಡಿಯಾಗಿಯೂ ಇಡಿಯಾಗಿಯೂ ಹಿಡಿ ತುಂಬ ಲಭಿಸುವ ಶ್ವೇತಶುಭ್ರ ಸೌಭಾಗ್ಯ. ತನ್ನೊಂದೇ ಬಣ್ಣದಲೇ ಸ್ವಾಭಾವಿಕ ಕಂಪು ಬೀರುತ್ತಾ ಗೌರವ ತರುವ ಅಂದಚೆಂದದ ಮಕರಂದ. ಸಮತಾ ಅವರ ಪ್ರಬಂಧಗಳು ಈ ಬಗೆ. ಒಂದೊಮ್ಮೆ ಬಿಡಿ ಹೂ ಚೆಲುವು, ಮತ್ತೊಮ್ಮೆ ಕಟ್ಟಿದ ಹೂಮಾಲೆಯ ಒಲವು, ಮಗದೊಮ್ಮೆ ತನ್ನ ನರುಗಂಪಿನ ಮೂಲಕ ಸುತ್ತಮುತ್ತಲಿನವರನ್ನು ಒಂದೆಡೆ ಸೆಳೆಯುವ ಗೆಲುವು. ತನ್ನ ಸ್ವಗತವೂ ಇದೆ, ತನ್ನೊಂದಿಗೆ ಸಂವಾದಿಸಿದ ಮಂದಿ ಮನಸೂ ದಾಖಲಾಗಿದೆ, ಒಟ್ಟೂ ಸಮಾಜದ ಸಾಂಸ್ಕೃತಿಕ ಚಹರೆಗಳೂ ಜೊತೆಯಲ್ಲಿ ಸೇರಿಕೊಂಡಿವೆ. ಅವರಿಗೇ ಗೊತ್ತಿಲ್ಲದಂತೆ ಇವರ ಪ್ರಬಂಧಗಳು ನಮ್ಮ ಕಾಲಘಟ್ಟದ ಸೋಷಿಯೋ ಕಲ್ಚರಲ್ ಇನ್ಸಿಡೆಂಟುಗಳನ್ನು ನಿರ್ವಚಿಸಿವೆ. ಹೀಗಾಗಿ ಇವರ ಈ ಬರೆಹಗಳು ಕೇವಲ ಸಕ್ಕರೆಗೆ ಮದ್ದು ಹುಡುಕುವುದಕಷ್ಟೇ ಸೀಮಿತವಾಗದೇ, ತನ್ನ ಚಿಕಿತ್ಸಕ ದೃಷ್ಟಿಯಿಂದಾಗಿ, ಬದುಕಿನ ಜೀವಂತಿಕೆಗೆ ದ್ಯೋತಕವಾಗಿವೆ. ಗೊಳೋ ಎಂಬುದರ ಬದಲು ಇರುವ ಒಂದು ಜೀವ ಜೀವನವನ್ನು ಚೆಂದವಾಗಿ ನಕ್ಕು, ನಗಿಸಿ, ಬಾಳುವುದೊಂದೇ ನಮಗಿರುವ ಸಾಧ್ಯತೆ ಎಂಬುದನ್ನು ಪ್ರತಿಪಾದಿಸಿವೆ. ಇದರಿಂದಾಗಿಯೇ ಇವರ ಬರೆವಣಿಗೆಗೆ ಸಾಹಿತ್ಯಕ ಆಯಾಮ ದೊರೆತಿದೆ. ಒಂದು ಕಾಲಮಾನದ ವಿದ್ಯಮಾನವನ್ನು ದಾಖಲಿಸುತ್ತಲೇ ತನ್ನ ಆರೋಗ್ಯವಂತ, ಹೃದಯವಂತ ಮನೋಧರ್ಮವನ್ನು ಸೃಷ್ಟಿಶೀಲವಾಗಿಸಿದೆ. ಇಲ್ಲಿನ ಹಲವು ಪ್ರಬಂಧಗಳಲ್ಲಿ ಬರುವ ಪ್ರಸಂಗಗಳು ನಮ್ಮ ನಿಮ್ಮೆಲ್ಲರ ಜೀವನದಲ್ಲೂ ಕಾಣಸಿಗುವಂಥವು. ಆದರೆ ಅವನ್ನು ಗುರುತಿಸಿ, ಸುಂದರ ಲಲಿತ ಪ್ರಬಂಧಗಳನ್ನಾಗಿಸುವ ಚಾತುರ್ಯ ಮತ್ತು ಮಾಧುರ್ಯ ಸಮತಾ ಅವರ ಕಲಾತ್ಮಕ ಪ್ರತಿಭಾವಂತಿಕೆಗೆ ಸಾಕ್ಷಿ. ನಾವೆಲ್ಲರೂ ಮರೆತು ಹೋಗುವ ಗಳಿಗೆಗಳಿಗೆ ಇವರು ಚೌಕಟ್ಟು ನಿರ್ಮಿಸಿ, ಅದಕ್ಕೊಂದು ಷರಾ ಬರೆದು, ಶಾಶ್ವತ ನೆನಪಾಗಿಸುವ ಸುಂದರ ಕಾಯಕದಲ್ಲಿ ಇವರು ಸಿದ್ಧಹಸ್ತರು. ಹೊತ್ತಗೆಯು ಸುಂದರವಾಗಿದೆ. ಶೀರ್ಷಿಕೆ, ಆಕಾರ, ಬಳಸಿದ ಕಾಗದದ ಗುಣಮಟ್ಟ, ಆಯ್ದುಕೊಂಡ ವರ್ಣವಿನ್ಯಾಸ, ಇಟ್ಟ ಬೆಲೆ ಎಲ್ಲವೂ ಕರೆಕ್ಟಾಗಿದೆ. ಏಕೆಂದರೆ ಪ್ರತಿ ಪುಸ್ತಕಕೂ ತನ್ನದೇ ಆದ ಅಸ್ತಿತ್ವ ಮತ್ತು ವ್ಯಕ್ತಿತ್ವಗಳಿರುತ್ತವೆ. ಅಂಥ ಎದ್ದು ಕಾಣುವ ಗುಣವು ಈ ಕೃತಿಯಲ್ಲಿದ್ದು, ಸಾಹಿತ್ಯದ ಮೂಲ ಲಕ್ಷಣವೆನಿಸಿದ ರಸಾಸ್ವಾದ ಮತ್ತು ಮನೋ ಆಹ್ಲಾದಗಳೆರಡೂ ಪ್ರತಿ ಪುಟ ಪುಟಗಳಲ್ಲಿ ಅನುರಣಿತವಾಗಿವೆ. ತೀರ್ಥಹಳ್ಳಿಯ ಶ್ರೀಮತಿ ಎಲ್ ಸಿ ಸುಮಿತ್ರ ಅವರು ಪುಸ್ತಕಕ್ಕೆ ಮುನ್ನುಡಿಸಿದ್ದಾರೆ. ಅವರದೇ ಕೆಲವು ಮಾತುಗಳನ್ನು ಆಯ್ದು, ಪುಸ್ತಕದ ಬೆನ್ನುಡಿಗೂ ಬಳಸಿಕೊಂಡಿದ್ದಾರೆ. ಆದರೆ ಪುಸ್ತಕದ ಪ್ರಕಟಿತ ವರ್ಷವನ್ನೇ ನಮೂದಿಸಲು ಮರೆತದ್ದು ಒಂದು ಪುಟ್ಟ ಲೋಪ. ಇರಲಿ.
ಇನ್ನು ಈ ಪುಸ್ತಕದ ಬರೆಹಗಳ ಒಳಲೋಕದತ್ತ ಕಣ್ಣಾಡಿಸೋಣ: ‘ಬೊನ್ಸಾಯ್ ಗಿಡ’ಗಳೊಂದಿಗೆ ಆಪ್ತವಾದ ದಿನಗಳನ್ನು ದಾಖಲಿಸಿದ್ದಾರೆ. ಪುಟ್ಟ ಆಲದಮರದೊಂದಿಗೆ ಭಾವಪೂರ್ಣವಾಗಿ ಮಾತಾಡಿದ್ದಾರೆ. ಪ್ರತಿಯಾಗಿ ಅದು ಸಹ ಇವರೊಂದಿಗೆ ಸಂವಾದಿಸುತ್ತದೆ. ‘ಹತ್ತು ವರ್ಷಕ್ಕೆ ಹತ್ತೆಲೆ ಸಾಕೇನೇ?’ ಎಂಬ ಸಮತಾ ಪ್ರಶ್ನೆಗೆ ಅದೂ ಸಮತೆಯ ಉತ್ತರ ನೀಡುತ್ತದೆ: ‘ಇನ್ನೇನೂ, ನೀನು ಕೊಟ್ಟಿರುವ ಹಿಡಿ ಮಣ್ಣಲ್ಲಿ ನೂರೆಲೆ ಮಾಡ್ಲ?’ ಇದು ಕೇವಲ ಬೊನ್ಸಾಯ್ ಗಿಡದ ಉತ್ತರವಲ್ಲ. ಜಗತ್ತಿನ ಅಷ್ಟೂ ಪರಿಸರ ತನ್ನಳಲನ್ನು ತೋಡಿಕೊಳ್ಳುವಂತಿದೆ. ಇವರ ಪ್ರಬಂಧಗಳು ಒಂದಕ್ಕಿಂತ ಒಂದು ಚೆನ್ನಾಗಿವೆ, ನಮ್ಮೊಳಗೆ ಜೀವಂತವಾಗುತ್ತವೆ. ಅಷ್ಟೇ ಅಲ್ಲ, ನಾಟಕ, ಚಲನಚಿತ್ರಗಳ ವೀಕ್ಷಕರು ಪಾತ್ರಗಳಲ್ಲಿ ತಮ್ಮನ್ನು ಏಕೀಭವಿಸಿಕೊಂಡಂತೆ, ಓದುಗರಾದ ನಾವೂ ಪ್ರಬಂಧಕಾರರ ಮೂಲಕ ಆಪ್ಯಾಯಮಾನವಾಗಿ ಬರುವ ವಿವರಗಳೊಂದಿಗೆ ಒಂದಾಗುತ್ತೇವೆ. ಎಲ್ಲ ಸ ಮತ್ತು ಸು-ಹೃದಯರ ಸಂಕೇತವಾಗಿ ಸಮತಾ ಸಮಾ ಚೆಂದದ ಅಭಿವ್ಯಕ್ತಿಯಲ್ಲಿ ಸಾಮಾನ್ಯತೆಯನ್ನು ಅಸಾಮಾನ್ಯಗೊಳಿಸಿದ್ದಾರೆ. ಪ್ರಬಂಧ ಸಂಕಲನದ ಶೀರ್ಷಿಕೆಯ ಭಾಗ್ಯ ಪಡೆದ ‘ಸಕ್ಕರೆಗೆ ಮದ್ದು ಹುಡುಕುತ್ತಾ’ ಬರೆಹವು ಸಕ್ಕರೆ ಖಾಯಿಲೆಗರ ದುಗುಡ ದುಮ್ಮಾನಗಳನ್ನು ಹೇಳುತ್ತಲೇ ಸುಮ್ಮನೆ ಧಾವಂತಪಟ್ಟು ಪಡಿಪಾಟಲು ಪಡುವುದರಲ್ಲಿ ಅರ್ಥವಿಲ್ಲವೆಂಬ ಸ್ವಭಾವ ವೈರಾಗ್ಯಕ್ಕೆ ಬಂದು ನಿಲ್ಲುತ್ತದೆ. ಸ್ವಾನುಭವ ಕಥನವಾಗಿರುವುದರಿಂದ ಬಹಳ ಮಂದಿಯ ಒದ್ದಾಟ ಮತ್ತು ರೋಗದೊಂದಿಗಿನ ಗುದ್ದಾಟಗಳ ಮುಖವಾಣಿಯೇ ಇದಾಗಿ ಸುಡುವಾಸ್ತವವನ್ನು ಸ್ಥಾಪಿಸಿದೆ.
ಪಾಠ, ಪಾಠಶಾಲೆ, ಸಾಕುಪ್ರಾಣಿಗಳು, ಬೀದಿನಾಯಿಗಳು, ನಿದ್ರೆ, ಸೋಮಾರಿತನ, ಬೆಳಗಿನ ವಾಯುವಿಹಾರ, ಬ್ಯೂಟಿ ಪಾರ್ಲರು, ಸೀರೆ, ಸ್ನಾನದ ಮನೆ, ಮಾಂಸಾಹಾರಿ ಅಡುಗೆ, ಕೇಟರಿಂಗ್, ಹಲಸಿನ ಹಣ್ಣು, ದುಡ್ಡು, ಸಿರಿವಂತಿಕೆ, ಮಧ್ಯಮವರ್ಗ, ಪ್ರಯಾಣ, ಮಗುವಿನ ಹೆಸರು, ಪರಿಸರ ಮಾಲಿನ್ಯ, ಅತಿಶಿಸ್ತು, ಸರಳಜೀವನಾಕಾಂಕ್ಷೆ – ಹೀಗೆ ಹತ್ತು ಹಲವು ರೋಚಕ ಆದರೆ ಬಹುತೇಕ ಪರಿಚಿತ ವಿಷಯಗಳನ್ನು ಆಯ್ದುಕೊಂಡು ಬರೆದರೂ ಸಮತಾ ಅವರ ಲೇಖನಿಯು ಆಯಾಚಿತವಾಗಿ ಬಾಲ್ಯಕಾಲದ ಅನುಭವಗಳನ್ನು ಮರೆಯದೇ ಮೆಲುಕಾಡುತ್ತದೆ. ಈಗಿನ ದಿನಮಾನಗಳ, ಪ್ರಸ್ತುತ ಸನ್ನಿವೇಶ ಸಂದರ್ಭಗಳ ವಿಚಾರ ಬಂದರೂ ಅದು ಹೇಗೋ ಲೇಖಕಿಯು ತನ್ನ ಹಿಂದಿನ ಸಿಹಿಕಹಿ ನೆನಪುಗಳನ್ನು ಜೊತೆಯಾಗಿಸಿಯೇ ತೂಗಿ ನೋಡುವಲ್ಲಿ ಆಸಕ್ತರು ಮತ್ತು ಶಕ್ತರು. ಕರಿಮಣಿ ಸರದ ಚೆಲುವು ಮತ್ತು ಗೌರವಗಳನ್ನು ಹೆಚ್ಚು ಮಾಡುವ ಕೆಂಪು ಹವಳಗಳಂತೆ ಇವು. ಪ್ರಬಂಧಗಳನ್ನೂ ಸಹ್ಯವಾಗಿಸಿವೆ; ಓದುಗರನ್ನೂ ತಂತಮ್ಮ ಕಾಲಕ್ಕೆ ಕರೆದುಕೊಂಡು ಹೋಗುತ್ತವೆ. ಇವರ ವಿಶೇಷ ಇರುವುದು, ಇಂಥ ಗೊತ್ತಿರುವ ಪ್ರಸಕ್ತಿಗಳಲ್ಲೇ ಅಡಗಿರುವ ಅಪರೂಪದ ವಿಚಾರಮಂಥನದಲ್ಲಿ; ಅಲ್ಲಲ್ಲಿ ಮಿಂಚಿ, ನಗೆ ತರಿಸುವ ಹಾಸ್ಯನಂದನದಲ್ಲಿ! ಬಹಳಷ್ಟು ಬರೆಹಗಳು ಹರಟೆಯ ರೂಪವನ್ನು ಧರಿಸಿವೆ. ಇದು ಸಹಜ ಕೂಡ. ಏಕೆಂದರೆ ಆಯ್ದುಕೊಂಡ ವಸ್ತು ಮತ್ತದರ ಅಭಿವ್ಯಕ್ತಿಯು ತಂತಾನೇ ವೈನೋದಿಕಗಳಾಗಿವೆ. ಆದರೆ ಎಲ್ಲಿಯೂ ಗೊಡ್ಡು ಹರಟೆಯಾಗದೇ ಸ್ವಾರಸ್ಯಕರ ಸಂಗ-ಪ್ರಸಂಗಗಳ ಆಕರ್ಷಕ ನಿರೂಪಣೆಯಾಗಿರುವುದಕ್ಕೆ ಮೂಲ ಕಾರಣ ಸಮತಾ ಅವರ ಭಾಷಾಶೈಲಿ. ನಡು ನಡುವೆ ಅವರು ತರುವ ಗ್ರಾಮ್ಯವೂ ಆಡುಗನ್ನಡವೂ ಆದ ನುಡಿತೋರಣ! ಪುಟ್ಟ ಪುಟ್ಟ ವಾಕ್ಯಗಳಲ್ಲಿ ಮಿನುಗುವ ವಿಡಂಬನಾ ದನಿಯ ಬನಿ. ಲಲಿತ ಪ್ರಬಂಧಗಳ ಶಕ್ತಿಯಿರುವುದೇ ಇಲ್ಲಿ; ಸರಸ ಸಂಪೂರಣ ಉಕ್ತಿಯಲ್ಲಿ!! ಈ ವಿಷಯದಲ್ಲಿ ಪ್ರಬಂಧಕಾರರ ಕರುಳೂ ಮಿದುಳೂ ರೈಲ್ವೆ ಹಳಿಗಳಂತೆ ಜೊತೆ ಸಾಗಿವೆ. ಟ್ರೈನು ಸಾಗಲು ಎರಡೂ ಹಳಿಗಳು ಬೇಕು. ಯಾವುದೂ ಹೆಚ್ಚಲ್ಲ; ಯಾವುದೂ ಕಡಮೆಯಲ್ಲ. ಬುದ್ಧಿ ಭಾವಗಳು ಹದವರಿತು ಮುದವನೀಂಟಿ ಪ್ರಮೋದವಾಗಿ, ಓದುಗರನ್ನು ತಣಿಸುತ್ತವೆ, ಆರೋಗ್ಯಕರ ಹಾಸ್ಯದಲಿ ಅದ್ದಿ ತೆಗೆಯುತ್ತವೆ.
ಬರೆವಣಿಗೆಯೊಂದು ಕೇವಲ ವಿವರಣೆಯಾಗದೇ ಒಂದು ಕಾಲಮಾನದ ಮನೋಮಾನದ ಸಂಗತಿಗಳನ್ನು ದಾಖಲಿಸಬೇಕು; ಸಾಧ್ಯವಾದರೆ ವ್ಯಾಖ್ಯಾನಿಸಬೇಕು. ಹೊರಗೆ ಮಕ್ಕಳಾಡುವಾಗ ಮರೆಯಲ್ಲಿ ನಿಂತು ಕಟ್ಟೆಚ್ಚರದಲಿ ಕಾಯುವ ತಾಯ್ತನದಂತೆ ಇದು ಇರಬೇಕೇ ವಿನಾ ಹೀಗೆಯೇ ಆಡಬೇಕೆಂಬ ಗೊಡ್ಡು ನಿಯಮಗಳನ್ನು ಹೇರುವ ದಾದಿಯಂತಾಗಬಾರದು. ಈ ವಿಚಾರದಲ್ಲೂ ಸಮತಾ, ಸಮರಸತೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಯೊಂದು ಪ್ರಬಂಧದಲ್ಲೂ ಇಂಥ ಸಾಂಸ್ಕೃತಿಕ ಕಾಣ್ಕೆಗಳು ಗುರುತಾಗಿವೆ ಮಾತ್ರವಲ್ಲ ಸಾದಾಸೀದಾ ವ್ಯಾಖ್ಯಾನಕ್ಕೆ ಪಕ್ಕಾಗಿವೆ. ಬರೆಹಗಾರರ ಅಧಿಕೃತತೆ ಇರುವುದು ಇಲ್ಲಿಯೇ. ‘ಸ್ನಾನದ ಮನೆಯಲ್ಲಿ’ ಎಂಬ ಪ್ರಬಂಧವೊಂದೇ ಸಾಕು: ತಮಾಷೆ, ವ್ಯಂಗ್ಯಗಳಲ್ಲೇ ಅಂದಿನ ಮತ್ತು ಇಂದಿನ ಸ್ನಾನದ ಮನೆಗಳ ತುಲನಾತ್ಮಕ ನೋಟ ಕಾಣಿಸುವರು; ಒಂದು ಕಾಲದ ಸಹಬಾಳ್ವೆಯ ಸಾರ್ಥಕ್ಯವನ್ನು ಕೊಂಡಾಡುವರು. ಇಂಥ ದರ್ಶನಗಳು ಅತ್ಯಂತ ಸಹಜವಾಗಿ ಸಾಗುವುವು. ಓದುಗರಾದ ನಾವು ಆ ಸಾಲುಗಳ ಮೂಲಕ ಪ್ರಬಂಧಕಾರರು ಕಟ್ಟಿ ಕೊಡುತ್ತಿರುವ ಅದಮ್ಯ ಜೀವಕಾರುಣ್ಯದತ್ತ ಗಮನವಿತ್ತರೆ ಇವರ ಬರೆಹಗಳೆಲ್ಲಾ ಸಮಾಜಶಾಸ್ತ್ರೀಯ ಅಧ್ಯಯನವೆನಿಸುವುದರಲ್ಲಿ ಸಂದೇಹವಿಲ್ಲ. ಹೀಗಾಗಿ ಈ ಬರೆಹಗಳು ಯಾರಿಗೂ ಭಾರವಾಗದೇ, ತಂಗಾಳಿ ತರುವ ತರುಲತೆಯ ಕಂಪು ಸುತ್ತೆಲ್ಲ ಚೆಲ್ಲಾಡಿ ಒಟ್ಟೂ ಪರಿಸರವನ್ನು ಆಹ್ಲಾದಗೊಳಿಸುವ ತೆರದಲ್ಲಿ ಹಗೂರವಾಗಿವೆ; ಸರಳವಾಗಿವೆ; ಸತ್ಯಕ್ಕೆ ಸಮೀಪವಲ್ಲ-ಸತ್ಯದ ಸಾಕ್ಷಾತ್ಕಾರವೇ ಆಗಿವೆ.
ಮೊದಲು ಕಲಿತ ಶಾಲೆಯ ನೆನಪು, ಸರ್ಕಾರಿ ಶಾಲೆಯಲ್ಲಿ ಕಲಿಸುವ ಮತ್ತು ಕಲಿಯುವ ಸುಖ, ಪ್ರಯಾಣ ಕಾಲದ ಪ್ರಸಂಗಗಳು, ಪಾರ್ಲರಿನ ವಿನೋದಮಯ ಪ್ರಕರಣಗಳು, ಆರೋಗ್ಯ ಸಂಬಂಧೀ ಆಲಾಪಗಳು, ಹಲಸಿನ ಸೌಂದರ್ಯ ಮತ್ತು ಮಾಧುರ್ಯ, ಅದಕ್ಕೆ ಕಲ್ಪವೃಕ್ಷದ ಸ್ಥಾನ ಸಿಗದೇ ಹೋದದ್ದಕ್ಕೆ ವಿಷಾದ, ನಾಯಿಮರಿ ಕಥನ, ಮೈಸೂರು ಸಿಲ್ಕ್, ತಿನ್ನುವ ಚಪಲ, ಪೂಜೆ ಪುರಸ್ಕಾರಗಳ ಇತಿಮಿತಿ, ಪತಿಯ ಅತಿಶಿಸ್ತಿನ ಬೇಸರಿಕೆಗಳು, ಸೋಮಾರಿತನದಿಂದಾಗುವ ಲಾಭೋಪಾಯಗಳು, ಕೊನೆಗೂ ಇಡ್ಲಿ ಮಾಡಲು ಕಲಿತ ಖುಷಿ – ಹೀಗೆ ಇವರ ಈ ಬರೆಹಗಳು ಕೇವಲ ಡಯಾಬಿಟೀಸ್‌ಗೆ ಮಾತ್ರ ಮದ್ದು ಹುಡುಕದೇ, ಯಾಂತ್ರಿಕ ಬದುಕಿನಿಂದ ಜಡ್ಡುಗಟ್ಟಿದ, ಗಂಟು ಮುಖದಲ್ಲಿ ನಗೆಯುಕ್ಕಿಸುವ ಚಿಕಿತ್ಸಕ ಗುಣವನ್ನೂ ಹೊಂದಿವೆ. ಮಂಕಾದ ಮನಸಿಗೆ ಸಂತಸ ತರಿಸಿ, ಚಿಕ್ಕ ಪುಟ್ಟ ಸಂದರ್ಭ ಸನ್ನಿವೇಶಗಳಲ್ಲೂ ಅಡಗಿರುವ ಜೀವನೋತ್ಸಾಹವನ್ನು ಕಂಡರಿಸುತ್ತವೆ. ಸಮತಾ ಅವರಲ್ಲಿ ಓರ್ವ ಯೋಗ್ಯ ಮತ್ತು ಅರ್ಹ ಶಿಕ್ಷಕಿ ಒಳಗೆ ಕುಳಿತು ಬರೆಸಿದ ಕಾರಣವಾಗಿ ಬೋಧಪ್ರದ ಗುಣವೂ ಜೊತೆಗೂಡಿ, ಕಾಲಕಾಲಕ್ಕೂ ಸಲ್ಲುವ ಸಂಗ್ರಹಯೋಗ್ಯ ಸಂಚಿಕೆಯಾಗಿದೆ. ಸಾಹಿತ್ಯದ ಅಧ್ಯಯನ, ವಿಜ್ಞಾನದ ಜೀವನ, ತನ್ನಂಥ ಇತರ ಬರೆಹಗಾರರ ಸನ್ನಿಧಾನ-ಗಳು ಇವರ ರಚನೆಗಳ ಹಿಂದಿನ ಪ್ರೇರಕ ಶಕ್ತಿಯಾಗಿವೆ. ಎಲ್ಲಕಿಂತ ಮುಖ್ಯವಾಗಿ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲವೆಂಬ ಜ್ಞಾನೋದಯವಾಗಿದೆ. ಇದರಿಂದಾಗಿ ಸಕಲ ಜೀವಜಾಲದ ನಂಟಿನಂಟು ಇವರ ಬರೆಹಗಳಲ್ಲಿ ಸ್ಥಾಯಿಯಾಗಿದೆ. ಜೊತೆಗೆ ತಾನು ಕಂಡುಂಡ ಅನುಭವಗಳ ಸಾರವನ್ನು ರಸವತ್ತಾಗಿ ಅಭಿವ್ಯಕ್ತಿಸುವ ಮೂಲಕ ಸಕಲ ರಸಗಳನ್ನೂ ಉಣಬಡಿಸಬೇಕೆಂಬ ತಹತಹವಿದೆ; ಆ ಮೂಲಕ ಬಾಳುವೆಯ ಸಮತೆಯನ್ನು ಹದವರಿತು ಆಚರಿಸಬೇಕೆಂಬ ಇರಾದೆಯಿದೆ. ಇದೆಲ್ಲವೂ ಇವರ ರಚನೆಗಳಲ್ಲಿ ಸದ್ದಿಲ್ಲದೇ ಸುಪ್ತವಾಗಿ ಅಡಗಿ, ಓದುಗರ ತೆಕ್ಕೆಯಲಿ ಆಪ್ತವಾಗಿವೆ. ಇವರು ಮೂಲತಃ ಕಥನಪ್ರಿಯರು, ಚೆಂದವಾಗಿ ಕತೆ ಹೇಳುವಲ್ಲಿ ಸುಪ್ರಸಿದ್ಧರು, ಈ ಪ್ರಬಂಧಗಳ ನಿರೂಪಣೆಯಲ್ಲಿ ಇದು ಸುವ್ಯಕ್ತ. ಇಷ್ಟಕ್ಕೂ ಒಂದು ಒಳ್ಳೆಯ ರಚನೆಯು ಹರಟೆಯಾಗಿಯೂ ಪ್ರಬಂಧವಾಗಿಯೂ ಕತೆಯಾಗಿಯೂ ತೋರುತ್ತಿರುತ್ತದೆ. ಆಯ್ದುಕೊಂಡ ವಸ್ತುವಿನ ಆಳ ಅಗಲಗಳನು ಗುರುತು ಮಾಡಿ, ಔಚಿತ್ಯಪೂರ್ಣ ಚೌಕಟ್ಟನ್ನು ಹಾಕಿ, ನೇರ ಓದುಗರ ಗಮನವನ್ನು ಅಪಹರಿಸಿ, ತದೇಕವಾಗಿ ಓದಿಸಿಕೊಂಡು ಹೋಗುವಂತೆ ಬರೆಯುವ ಅಂತರ್ದೃಷ್ಟಿಯೇ ಸಮರ್ಥ ಲೇಖನಿಯ ಹುಟ್ಟೂ ಗುಟ್ಟು! ಇದು ಸಮತಾ ಅವರಿಗೆ ಆಯಾಚಿತವಾಗಿ ಒಲಿದಿದೆ. ಅವರ ಲೇಖನಿಯಿಂದ ಇನ್ನೂ ಇಂತಹ ನೂರಾರು ಪ್ರಬಂಧಗಳೂ ಕಥಾರೂಪದ ರಚನೆಗಳೂ ಹೊರಹೊಮ್ಮಿ, ಸಹೃದಯರನ್ನು ತಣಿಸಲಿ ಎಂದು ಹಾರೈಸುತ್ತೇನೆ.
–ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ
ಸುರಹೊನ್ನೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು….
ಓದಿ, ಪ್ರತಿಕ್ರಿಯಿಸುವ ಎಲ್ಲ ಸಹೃದಯರಿಗೂ ನಾನು ಆಭಾರಿ.
ಲೇಖಕಿ ಸಮತಾ ಅವರಿಗೆ
ನಿಮ್ಮ ಕಮೆಂಟು ತಲಪಿದರದು
ನಿಜದ ಖುಷಿ…8660716693
ಕೃತಿಯನ್ನು ಕುರಿತು ನಿಮ್ಮ ವಿಮರ್ಶೆ ಅತ್ಯಂತ ಸೊಗಸಾಗಿದೆ.
ಧನ್ಯವಾದ ಸ್ನೇಹಿತರಿಗೆ
Super sir nanagu avatar book sadyavadare talupisi guruvarya
ಚೆನ್ನಾಗಿದೆ ಪುಸ್ತಕ ಪರಿಚಯ
thanks madam
ನನಗೂ ಅವರ ಪುಸ್ತಕಗಳನ್ನೂಸಾದ್ಯವಾದರೆ ತಲುಪಿಸಬುಹುದೇ
ಲೇಖಕಿ ಶ್ರೀಮತಿ ಸಮತಾ ಅವರಲ್ಲಿ ವಿಚಾರಿಸಿದರೆ ಪುಸ್ತಕ ಲಭಿಸೀತು…..
8660716693
ಸೊಗಸಾದ ಪುಸ್ತಕ ಪರಿಚಯದೊಂದಿಗೆ..ಪ್ರಬಂಧ ಗಳ ರೂಪು ರೇಖೆಗಳನ್ನು.. ಸಾಂದರ್ಭಿಕ ವಾಗಿ…ನಮೂದಿಸುರುವುದು..ನನಗಂತೂ ತುಂಬಾ.. ಮುದ ತಂದಿತು….
ಧನ್ಯವಾದಗಳು…ಮಂಜುರಾಜ್ ರವರಿಗೂ ಹಾಗೂ ಸುರಹೊನ್ನೆಗೂ
thank you Samatha, ನಿಮ್ಮ ಪುಸ್ತಕವು ಎಲ್ಲ ಸಹೃದಯರನೂ ತಲಪಲಿ. ಓದಿ ಖುಷಿ ಪಡಲಿ ಎಂದು ಹಾರೈಸುವೆ.
ನಾನು ಸಮತ ಅವರ ಎರಡು ಕೃತಿ ಗಳನ್ನ ಓದಿದ್ದೇನೆ… ಬರಹಗಳ ರಸ ವನ್ನು ಸವಿದಿದ್ದೇನೆ… ಖಂಡಿತ ಓದಲೇ ಬೇಕಾದ ಬರಹಗಳು…. ಯಾಕಂದ್ರೆ.. ಬರಹಗಳನ್ನು ಓದುತ್ತಾ ಓದುತ್ತಾ.. ನಮ್ಮ ಬಾಲ್ಯ.. ನಮಗೆ.. ನೆನಪಾಗುತಾ ಹೋಗುತ್ತದೆ.. ಎಷ್ಟೋ ವಿಷಯ ಗಳು ನಮ್ಮ ಮನೆಯಲ್ಲೇ ಆಗಿರುವoತವುಗಳೇ… ಆಗಿವೆ.. ಅವುಗಳನ್ನು ಸಮತ ಅವರು.. ತುಂಬಾ ಸರಳವಾಗಿ ಬರೆದಿದ್ದಾರೆ.. ಅದು ನನಗೆ ಇಷ್ಟವಾಯಿತು..
ನಿಜ. ಕೃತಿಗಳನ್ನು ಓದಿದರೆ ಈ ಬರೆಹ ಸಾರ್ಥಕ. ಕೃತಿಗಳನ್ನು ಓದಲಿ ಎಂಬುದೇ ಬರೆಹದ ಆಶಯ. ಪ್ರತಿಕ್ರಿಯೆಗೆ ಧನ್ಯವಾದ
ವಿಮರ್ಶಾತ್ಮಕ ಪುಸ್ತಕ ಪರಿಚಯವು ಬಹಳ ಚೆನ್ನಾಗಿ ಮೂಡಿಬಂದಿದೆ.
ಪುಸ್ತಕದ ಪರಿಚಯ ತುಂಬಾ ಸೊಗಸಾಗಿದೆ
ಪುಸ್ತಕವನ್ನು ಓದಲು ಪ್ರೇರೇಪಿಸುವಂತಿದೆ
ವಂದನೆಗಳು