ವಾಟ್ಸಾಪ್ ಕಥೆ 47 : ವಸ್ತುವಿನ ಮೌಲ್ಯಮಾಪನ.
ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ. ಅವನ ಬಳಿಯಲ್ಲಿ ಪುರಾತನವಾದ ಒಂದು ವಜ್ರವಿತ್ತು. ಅದು ಅವನ ಅಜ್ಜನ ಕಾಲದಿಂದಲೂ ವಂಶಪಾರಂಪರ್ಯವಾಗಿ ಅವನ ವರೆಗೂ ಬಂದಿತ್ತು. ಅವನಿಗೆ ಅದರ ಬೆಲೆ ಎಷ್ಟಾಗುತ್ತದೆಂಬುದನ್ನು ತಿಳಿದುಕೊಳ್ಳುವ ಕುತೂಹಲವಾಯಿತು. ಅವನು ತನ್ನ ಬಹಳ ನಂಬುಗೆಯ ಸೇವಕನನ್ನು ಕರೆದು ಅವನಿಗೆ ಅದನ್ನು ಕೊಟ್ಟನು. ”ಇದನ್ನು ತೆಗೆದುಕೊಂಡು ಹೋಗಿ ಮಾರುಕಟ್ಟೆಯಲ್ಲಿ ಇದರ ಬೆಲೆಯೇನಾಗುತ್ತದೆ ತಿಳಿದುಕೊಂಡು ಬಾ” ಎಂದು ಆಜ್ಞಾಪಿಸಿದನು.
ಸೇವಕನಿಗೆ ಅದೇನೆಂಬುದು ತಿಳಿದಿರಲಿಲ್ಲ. ಮಾಲೀಕನು ಹೇಳಿದ ಕೆಲಸ ಮಾಡುವುದಷ್ಟೇ ಅವನ ಕರ್ತವ್ಯವಾಗಿತ್ತು. ಮೊದಲು ಅವನು ತರಕಾರಿ ಮಾರುವ ವ್ಯಾಪಾರಿಯೊಬ್ಬನ ಬಳಿಗೆ ಹೋಗಿ ತನ್ನ ಮಾಲೀಕ ಹೇಳಿದಂತೆ ಆ ವಸ್ತುವಿನ ಬೆಲೆ ಎಷ್ಟಾಗಬಹುದೆಂದು ಕೇಳಿದನು. ವ್ಯಾಪಾರಿಯು ಅದನ್ನು ಅತ್ತಿತ್ತ ತಿರುಗಿಸಿ ನೋಡಿದನು. ಅದೊಂದು ಅಮೂಲ್ಯ ವಸ್ತುವೆಂದು ಅನ್ನಿಸಿದರೂ ಏನೆಂಬುದು ತಿಳಿಯಲಿಲ್ಲ. ಅವನು ”ಇದಕ್ಕೆ ಬದಲಾಗಿ ನಾನು ಒಂಬತ್ತು ಕಿಲೋ ಟೊಮ್ಯಾಟೋ ಕೊಡಬಲ್ಲೆ. ಬೇರೆಯವರಾದರೆ ಎಂಟೇ ಕೊಡುತ್ತಾರೆ. ನಾನು ಒಂದು ಕಿಲೋ ಹೆಚ್ಚಾಗಿ ಕೊಡುತ್ತೇನೆ ” ಎಂದನು. ಸೇವಕನು ”ಆಗಲಿ, ನಾನು ನನ್ನ ಮಾಲೀಕರಿಗೆ ತಿಳಿಸಿ ತಮ್ಮಲ್ಲಿಗೆ ಮತ್ತೆ ಬರುತ್ತೇನೆ” ಎಂದು ಮನೆಗೆ ಬಂದನು. ವ್ಯಾಪಾರಿಯ ಮಾತುಗಳನ್ನು ಧಣಿಗೆ ತಿಳಿಸಿದನು.
ಶ್ರೀಮಂತನು ಸೇವಕನಿಗೆ ”ಈಗ ಇದನ್ನು ತೆಗೆದುಕೊಂಡು ಹೋಗಿ ಜವಳಿ ಅಂಗಡಿಯ ಮಾಲೀಕನಿಗೆ ತೋರಿಸಿ ಇದರ ಬೆಲೆಯನ್ನು ಕೇಳಿಕೊಂಡು ಬಾ” ಎಂದು ಕಳುಹಿಸಿದ. ಅದರಂತೆ ಸೇವಕನು ಜವಳಿ ಅಂಗಡಿಗೆ ಹೋಗಿ ಧಣಿಗಳ ಮಾತನ್ನು ಹೇಳಿದನು. ಮಾಲೀಕನು ವಸ್ತುವನ್ನು ಚೆನ್ನಾಗಿ ತಿರುಗಿಸಿ ನೋಡಿ ”ನೋಡಪ್ಪಾ ನಾನು ಇದಕ್ಕೆ ಬದಲಾಗಿ ನೂರು ರೂಪಾಯಿ ಕೊಡಬಲ್ಲೆ” ಎಂದ. ಸೇವಕನು ಅದನ್ನು ತನ್ನ ಧಣಿಗಳಿಗೆ ತಿಳಿಸಿ ಮತ್ತೆ ಬರುತ್ತೇನೆಂದು ವಾಪಸ್ಸು ಬಂದು ವಿಷಯವನ್ನು ತಿಳಿಸಿದ.
ಶ್ರೀಮಂತನು ಮನಸ್ಸಿನಲ್ಲಿಯೇ ಏನೋ ಆಲೋಚಿಸಿ ”ಇದನ್ನು ಒಡವೆ ಅಂಗಡಿಯ ಮಾಲೀಕರ ಬಳಿಗೆ ಕೊಂಡುಹೋಗಿ ಬೆಲೆ ಕೇಳಿಕೊಂಡು ಬಾ” ಎಂದು ಆದೇಶಿಸಿದನು. ಸೇವಕನು ಹಾಗೆಯೇ ಮಾಡಿದನು. ಜವಾಹಿರಿ ಅಂಗಡಿಯ ಮಾಲೀಕನಿಗೆ ಅದೇನೆಂಬುದು ಗೊತ್ತಾಯಿತು. ಅವನು ಸೇವಕನನ್ನು ”ಇದು ಹೇಗೆ ನಿನಗೆ ಸಿಕ್ಕಿತು?” ಎಂದು ಪ್ರಶ್ನಿಸಿದ. ಸೇವಕನು ”ಅಯ್ಯೋ ಅದು ನನ್ನದಲ್ಲ. ನನ್ನ ಧಣಿಗಳದ್ದು, ಅವರು ನನ್ನ ಕೈಗೆ ಕೊಟ್ಟು ಇದರ ಬೆಲೆ ತಿಳಿದು ಬಾ” ಎಂದು ಕಳಿಸಿದ್ದಾರೆ ಎಂದನು. ಅಂಗಡಿಯವನು ಇದನ್ನು ಸೇವಕನ ಕೈಯಲ್ಲಿ ಕೊಟ್ಟು ಕಳಿಸಿದ್ದಾನೆಂದ ಮೇಲೆ ಇದರ ಒಡೆಯನಿಗೂ ಬೆಲೆ ಗೊತ್ತಿಲ್ಲ. ನಾನು ಇದನ್ನು ಕೊಂಡರೆ ಸಾಕಷ್ಟು ಲಾಭ ಮಾಡಿಕೊಳ್ಳಬಹುದೆಂದು ಆಲೋಚಿಸಿ ”ನೋಡಪ್ಪಾ ಇದೊಂದು ಹೊಳಪುಳ್ಳ ಮಣಿ. ಆದ್ದರಿಂದ ನಿನಗೆ ನಾನು ಇದಕ್ಕೆ ಒಂದು ಸಾವಿರ ರುಪಾಯಿ ಕೊಡಬಲ್ಲೆ. ಅದಕ್ಕಿಂತ ಹೆಚ್ಚಿಗಿಲ್ಲ” ಎಂದನು. ಸೇವಕನು ”ಆಯ್ತು ನಾನು ನಮ್ಮ ಧಣಿಗಳಿಗೆ ತಿಳಿಸಿ ಮತ್ತೆ ಬರುತ್ತೇನೆ” ಎಂದು ಮನೆಗೆ ಬಂದನು. ಸೇವಕನಿಗೆ ತನ್ನ ಮಾಲೀಕನು ಹೀಗೆ ಮತ್ತೆ ಮತ್ತೆ ನನ್ನನ್ನೇಕೆ ಓಡಾಡಿಸುತ್ತಿದ್ದಾನೆ ಎಂಬುದು ತಿಳಿಯದೆ ಜವಾಹಿರಿ ಅಂಗಡಿಯ ಮಾಲೀಕನು ಹೇಳಿದುದೆಲ್ಲವನ್ನೂ ಹೇಳಿ ಮುಂದೆ ನಿಂತನು. ತನ್ನ ಮನಸ್ಸಿನಲ್ಲಿದ್ದ ಸಂದೇಹವನ್ನು ವ್ಯಕ್ತಪಡಿಸಿದನು.
ಆಗ ಶ್ರೀಮಂತನು ”ಹೌದು ನಾನು ನಿನ್ನನ್ನು ಮತ್ತೆಮತ್ತೆ ಓಡಾಡಿಸಿದ್ದಕ್ಕೆ ಕಾರಣವಿದೆ. ನನ್ನಲ್ಲಿರುವುದು ಒಂದು ಅಮೂಲ್ಯವಾದ ವಜ್ರ. ಅದರ ಬೆಲೆ ಹಲವು ಲಕ್ಷಗಳಷ್ಟಾಗುತ್ತದೆ. ನನಗೆ ಅದು ತಿಳಿದಿದೆ. ಆದರೆ ಹೊರಗಿನ ಜನ ನಿನ್ನ ಮೂಲಕ ಇದನ್ನು ಕಳುಹಿಸಿದಾಗ ಹೇಗೆಲ್ಲಾ ಮೋಸಮಾಡಲು ಆಲೋಚಿಸುತ್ತಾರೆ ಎಂಬುದನ್ನು ತಿಳಿದುಕೊಂಡೆ. ಏಕೆಂದರೆ ಜನರು ಮಾರಲು ಬಂದವನ ಸ್ಥಿತಿ, ಅವನ ಚಲನ ವಲನಗಳನ್ನೂ ಗಮನಿಸುತ್ತಾರೆ. ವಸ್ತು ಅತ್ಯಮೂಲ್ಯವಾದುದಾದ್ದರಿಂದ ಸೇವಕನ ಮೂಲಕ ಕಳುಹಿಸಿದ್ದಾನೆಂದರೆ ಅದರ ಮಾಲೀಕನಿಗೂ ಬೆಲೆ ಗೊತ್ತಿಲ್ಲವೆಂಬ ನಿರ್ಧಾರಕ್ಕೆ ಬರುತ್ತಾರೆ. ಆದಷ್ಟೂ ತಮ್ಮ ಲಾಭವನ್ನು ಮಾಡಿಕೊಳ್ಳಲು ಬಯಸುತ್ತಾರೆ. ನೀನು ಬೇಸರ ಮಾಡಿಕೊಳ್ಳಬೇಡ” ಎಂದು ಹೇಳಿ ವಜ್ರವನ್ನು ತಿಜೋರಿಯಲ್ಲಿ ಭದ್ರಪಡಿಸಿದನು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಕಟಿಸಿದಕ್ಕಾಗಿ ಗೆಳತಿ ಹೇಮಾಳಿಗೆ ಧನ್ಯವಾದಗಳು..
ಕೆಲವು ವಂಶ ಪಾರಂಪರ್ಯವಾಗಿ ದೊರೆತ ವಸ್ತುಗಳಿಗೆ ಬೆಲೆ ಕಟ್ಟಲಾಗದು. ಚೆನ್ನಾಗಿದೆ ಕಥೆ.
ಸಮಾಜದ ಓರೆ ಕೋರೆಗಳನ್ನು ಚಿತ್ರಿಸಿರುವ ಪುಟ್ಟ ಕಥೆ
ಒಳ್ಳೆಯ ನೀತಿಯನ್ನು ಹೊಂದಿದೆ
ಧನ್ಯವಾದಗಳು ನಯನ ಮೇಡಂ
ಕೆಲವು ವಸ್ತುಗಳು ತಮ್ಮ ದೇ ಆದ ಮೌಲ್ಯ ಗಳನ್ನು
ಹೊಂದಿರುತ್ತದೆ.ಸರಳ,ಸುಂದರಕಥೆ
ಧನ್ಯವಾದಗಳು ಗಾಯತ್ರಿ ಮೇಡಂ ಮುಕ್ತಾ ಮೇಡಂ
ವಸ್ತುವಿನ ಬೆಲೆಯನ್ನು ತಮ್ಮ ಅರಿವಿನ ಮಿತಿಯೊಳಗೆ ಕಟ್ಟುವ ಒಂದು ವರ್ಗ, ಬೆಲೆ ಗೊತ್ತಿದ್ದು ಅದರ ಅತಿಯಾದ ಲಾಭವನ್ನು ಪಡೆಯ ಬಯಸುವ ದುರಾಸೆಯುಳ್ಳ ಇನ್ನೊಂದು ವರ್ಗ ಹೀಗೆ ಜನ ಇರುವುದನ್ನು ಹೇಳುವ ಕಥೆ ಚೆನ್ನಾಗಿದೆ
ಧನ್ಯವಾದಗಳು ಪದ್ಮಿನಿ ಮೇಡಂ.
ಅವರವರ ತಿಳುವಳಿಕೆಯ ಪರಿಧಿಯೊಳಗೆ ಅಮೂಲ್ಯ ವಜ್ರಕ್ಕೆ ಬೆಲೆ ಕಟ್ಟಿದ ಪರಿ ಹಾಗೂ ಸ್ವಾರ್ಥ ಮನದ ಜನರ ಮೋಸದ ನಡೆಯ ಮೇಲೆ ಬೆಳಕು ಚೆಲ್ಲುವ ಉತ್ತಮ ಸಂದೇಶಯುಕ್ತ ಕಥೆಗೆ ಸುಂದರ ಸ್ವರಚಿತ ರೇಖಾಚಿತ್ರ….ಎಂದಿನಂತೆ ಚಂದ, ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ವಜ್ರದೊಂದಿಗೆ ಅದರ ಸಂಪರ್ಕಕ್ಕೆ ಬಂದ ಎಲ್ಲರ ಮೌಲ್ಯಮಾಪನವೂ ಆಗಿಹೋದುದು ಕಥೆಯ ವೈಶಿಷ್ಟ್ಯ. ಕಥೆ ಚೆನ್ನಾಗಿದೆ.
ಧನ್ಯವಾದಗಳು ಪದ್ಮಾ ಮೇಡಂ.
ಸೂಪರ್
ಧನ್ಯವಾದಗಳು ಆಶಾ ಮೇಡಂ