ಬದಲಾದ ಬದುಕು ಭಾಗ -1
ಮನೆಗೆ ಹಾಕಿರುವ ಬೀಗ ಸರಿಯಿದೆಯೇ ಎಂದು ಎರಡೆರಡು ಸಲ ಜಗ್ಗಿ ನೋಡಿ ಖಾತ್ರಿ ಮಾಡಿಕೊಂಡ ಜಾನ್ಹವಿ, ಮಗ ಕಳಿಹಿಸಿರುವ ಓಲಾ ಟ್ಯಾಕ್ಸಿಯಲ್ಲಿ ಇಟ್ಟಿರುವ ಸಾಮಾನುಗಳು ಸರಿಯಾಗಿದೆಯೇ ಎಂದು ಒಮ್ಮೆ ಪರೀಕ್ಷಿಸಿ, ಆರಾಮವಾಗಿ ಕುಳಿತುಕೊಂಡಳು. ಟ್ಯಾಕ್ಸಿ ಬೆಂಗಳೂರು ಏರ್ ಪೋರ್ಟಿನ ಕಡೆ ಹೊರಟಿತು.
ಹೊರಟು ಸರಿಯಾಗಿ ಐದು ನಿಮಿಷಗಳೂ ಆಗಿಲ್ಲ, ಆಗಲೇ ಮಗ ಶರತ್ ಫೋನ್ ಮಾಡಿದ – ಏನಮ್ಮಾ, ಹೊರಟೆಯಾ, ಆರಾಮವಾಗಿ ಬಾ, ಏನೂ ಚಿಂತೆ ಬೇಡ, ನಿನಗೆ ಇದು ಮೊದಲ ವಿಮಾನ ಪ್ರಯಾಣವಾದ್ದರಿಂದ ಸ್ವಲ್ಪ ಗಡಿಬಿಡಿ ಅನ್ನಿಸಬಹುದು.
ಸ್ವಲ್ಪಾನೇ, ಇಲ್ಲಾ ತುಂಬಾ ಅಂದ್ರೆ ತುಂಬಾನೇ ಗಾಭರಿಯಾಗ್ತಾ ಇದೆ ಕಣೋ ಶರತ್
ಏ ನಮ್ಮ ಸ್ಮಾರ್ಟ್ ಅಮ್ಮನಿಗೆ ಇದೇನು ಮಹಾ. ನಾನು, ನಮಿತಾ ಇಬ್ಬರೂ ನಿನ್ನನ್ನು ರಿಸೀವ್ ಮಾಡಲು ಮುಂಬೈ ಏರ್ ಪೋರ್ಟಿಗೆ ಬಂದಿರುತ್ತೇವೆ. ಬೆಂಗಳೂರು ಏರ್ ಪೋರ್ಟಿನಲ್ಲಿ ಸ್ವಲ್ಪ ಹುಷಾರಾಗಿರು. ಏನೇ ಇದ್ರೂ ನಂಗೆ ಫೋನ್ ಮಾಡು. ನಮ್ಮ ಅಮ್ಮ ಮೊದಲ ಸಲ ನಮ್ಮ ಮನೆಗೆ ಬರ್ತಾ ಇದ್ದಾರೆ. ನಮ್ಮಿಬ್ಬರಿಗೂ ತುಂಬಾ ಖುಷಿ ಆಗ್ತಾಇದೆ.
ನನಗೂ ಅಷ್ಟೇ ಕಣೋ, ಮಗನ ಮನೆಗೆ ಹೋಗುತ್ತಿರುವ ಸಂಭ್ರಮ. ಆದರೆ ನಮ್ಮ ತುಮಕೂರಿನಿಂದ ಬೆಂಗಳೂರು ಏರ್ ಪೋರ್ಟಿಗೆ ಹೋಗಿ, ಅಲ್ಲಿಂದ ಮುಂಬೈಗೆ ಬರುವ ಬದಲು ಇಲ್ಲಿ, ತುಮಕೂರಿನಿಂದಲೇ ಸೀದಾ ಲಗ್ಷ್ಯುರಿ ಬಸ್ಸಿನಲ್ಲಿ ಬರ್ತಾ ಇದ್ದೆ.
ಇರ್ಲಿ ಬಿಡು, ೨೦ ಗಂಟೆ ಪ್ರಯಾಣ ಎಲ್ಲಿ, ೨ ಗಂಟೆ ಪ್ರಯಾಣ ಎಲ್ಲಿ. ಓಕೆ, ನೀನು ಇಲ್ಲಿಗೆ ಬಂದ ನಂತರ ಎಲ್ಲಾ ನಿಧಾನವಾಗಿ ಮಾತನಾಡೋಣ, ಈಗ ಬೆಂಗಳೂರು ವಿಮಾನ ನಿಲ್ದಾಣ ತಲಪುವ ತನಕ ಸ್ವಲ್ಪ ಆರಾಮವಾಗಿ ನಿದ್ರೆ ಮಾಡು, ನನಗೆ ಗೊತ್ತು, ಎರಡು ತಿಂಗಳು ಮನೆ ಬೀಗ ಹಾಕಿ ಹೊರಡ ಬೇಕಾದರೆ ನಿನಗೆ ಎಷ್ಟೊಂದು ಶ್ರಮ ಆಗಿರುತ್ತೆ ಅಂತ. ಸ್ವಲ್ಪ ರೆಸ್ಟ್ ಮಾಡು, ಆಮೇಲೆ ಮಾಡ್ತೀನಿ.
ಹಿಂದುಗಡೆಯಿಂದಲೇ ಸೊಸೆ ನಮಿತಳೂ – ಓಕೆ, ಸೀ ಯೂ ಸೂನ್ ಅಮ್ಮಾ- ಎಂದಳು.
ಜಾನ್ಹವಿ ಸೀಟಿಗೊರಗಿದಳು. ಮನ ತುಂಬಿ ಬಂತು. ಹತ್ತು ವರುಷಗಳ ಹಿಂದೆ ಯಜಮಾನರು ಸ್ಟೇಷನ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ಕಛೇರಿಯಲ್ಲೇ ಹೃದಯಾಘಾತವಾಗಿ ನಿಧನರಾದಾಗ, ಮಗ ಶರತ್ ಇಂಜಿನಿಯರಿಂಗ್ ಮೂರನೇ ಸೆಮಿಸ್ಟರ್ ಓದುತ್ತಿದ್ದ. ತಾನು ಅನುದಾನಿತ ಶಾಲೆಯೊಂದರ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೂ ಅತ್ತೆ, ಮಾವ, ಮೈದುನಂದಿರು, ನಾದಿನಿಯರು ಎಲ್ಲರನ್ನೂ ಒಂದು ದಡಹತ್ತಿಸಿ, ಆರಕ್ಕೆ ಏರದಂತೆ, ಮೂರಕ್ಕೆ ಇಳಿಯದಂತೆ ಸಂಸಾರ ನೌಕೆಯನ್ನು ತೂಗಿಸಿ ಸ್ವಂತಕ್ಕೆಂದು ಒಂದು ಮನೆಯನ್ನಷ್ಟೇ ಮಾಡಿಕೊಳ್ಳಲು ಸಾಧ್ಯವಾಗಿದ್ದುದು. ಆದರೆ ಯಜಮಾನರು ಸಾಲ ಎಂದರೆ ಹೆದರುತ್ತಿದ್ದುದರಿಂದ ಮಗನನನ್ನು ಒಂದು ದಡ ಹತ್ತಿಸುವ ಜವಾಬ್ದಾರಿಯೊಂದನ್ನು ಬಿಟ್ಟರೆ ಬೇರೆ ಯಾವುದೇ ತಾಪತ್ರಯಗಳಿಲ್ಲದಿದ್ದರೂ ಭಾವನಾತ್ಮಕವಾಗಿ ತೀರಾ ಒಬ್ಬರ ಮೇಲೊಬ್ಬರು ಅವಲಂಬಿತರಾದುದರಿಂದ ಆದ ಅಘಾತದಿಂದ ಹೊರಬರುವುದು ಅತ್ಯಂತ ಕಷ್ಟವೇ ಆದರೂ ತಮ್ಮಿಬ್ಬರ ನನಸಾದ ಕನಸು, ಶರತ್‌ನನ್ನುಒಂದು ದಡ ಹತ್ತಿಸುವ ಗುರಿಯಲ್ಲೇ ಮನಸ್ಸನ್ನು ಕೇಂದ್ರೀಕರಿಸಿ ದಿನಗಳನ್ನು ದೂಡಿದ್ದಾಯಿತು. ತನಗೆ ಇನ್ನೂ ಮೂರು ವರ್ಷ ಸರ್ವೀಸ್ ಇರುವಷ್ಟರಲ್ಲಿಯೇ ಮಗ ಒಂದು ನೆಲೆಯನ್ನು ಕಂಡು, ತಾನು ಸ್ವಯಂ ನಿವೃತ್ತಿಯನ್ನು ಹೊಂದಿ, ಚಿಕ್ಕಂದಿನಿಂದ ಇದ್ದ ಹವ್ಯಾಸಗಳಲ್ಲಿ ತೊಡಗುವಂತೆ ಮಾಡಿದ್ದ.
ಕಳೆದ ವರ್ಷ ತನ್ನೆಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ಹೊಂದಿಸಿಕೊಂಡು ಬಂದು, ತನ್ನ ಸಹೋದ್ಯೋಗಿಯನ್ನೇ ವಿವಾಹವಾಗುವುದಾಗಿ ತಿಳಿಸಿದಾಗ, ತನಗಾದರೂ ಹೇಳಲು ಬೇರೇನಿತ್ತು?
ಈಗ ತನ್ನ ಮುಂಬೈ ಮನೆಗೆ ಬರಲೇಬೇಕೆಂದು ಗಂಡ ಹೆಂಡರಿಬ್ಬರೂ ಆದರದಿಂದ ಆಹ್ವಾನಿಸಿದ್ದರಿಂದ ಈ ಪ್ರಯಾಣ. ಜಾನ್ಹವಿಗೂ ಮಗನ ಮನೆಗೆ ಹೋಗುವ ಸಂಭ್ರಮ, ಸಡಗರಗಳು ತುಸು ಹೆಚ್ಚೇ ಆಗಿತ್ತು.
ನೆನಪುಗಳ ಅಂಗಳದಲ್ಲಿ ವಿಹರಿಸುತ್ತಿರುವಾಗಲೇ ಹೈವೇ ರೆಸ್ಟೋರೆಂಟ್ ಒಂದರ ಮುಂದೆ ಕಾರು ನಿಲ್ಲಿಸಿದ ಡ್ರೈವರ್ ಹೇಳಿದ – ಅಮ್ಮಾ, ಹತ್ತು ನಿಮಿಷಗಳು ಕಾರು ನಿಲ್ಲಿಸುತ್ತೇನೆ. ನೀವು ರೆಸ್ಟ್ ರೂಮಿಗೆ ಹೋಗಿ, ಕಾಫಿ ಕುಡಿದು ಬರುವುದಿದ್ದರೆ ಬರಬಹುದು.
ಸರಿ, ಎಂದು ಒಳ ನಡೆಯುವಷ್ಟರಲ್ಲಿ, ಮತ್ತೆ ಶರತ್ ನ ಫೋನು – ಅಮ್ಮಾ, ಏನೂ ಪ್ರಾಬ್ಲಂ ಇಲ್ಲ ತಾನೇ, ಗಾಡಿ ಯಾಕೆ ನಿಲ್ಲಿಸಿದ್ದು, ನಾವು ಇಲ್ಲಿಂದ ನಿಮ್ಮ ಕಾರನ್ನು ಟ್ರಾಕ್ ಮಾಡುತ್ತಿದ್ದೀವಿ.
ಅಯ್ಯೋ, ಏನೂ ಇಲ್ಲಾ ಶರತ್, ಬಹುಶಃ ಡ್ರೈವರ್‌ಗೆ ರೆಸ್ಟ್ ರೂಮಿಗೆ ಹೋಗಬೇಕಿರಬಹುದು, ನಾನೂ ಕಾಫಿ ಕುಡಿಯುತ್ತೀನೆ.
ಓ ಹೌದಾ, ಓಕೆ, ಓಕೆ. ನೀನು ಮೊದಲ ಸಲ ಇಷ್ಟು ದೂರ ಒಬ್ಬಳೇ ಬರುತ್ತಿದ್ದಿಯಾದ್ದರಿಂದ ನನಗೆ ಆತಂಕ. ಅದಕ್ಕೇ ನೀನು ಬಸ್ಸಿನಲ್ಲಿ ಬರುತ್ತೀನಿ ಎಂದರೂ ನಾನು ಓಲಾ ಬುಕ್ ಮಾಡಿದ್ದು. ನನಗೆ ನಿನ್ನ ಎಲ್ಲಾ ವಿವರಗಳೂ ತಿಳಿಯುತ್ತಿರಬೇಕು.
ಓ, ನಾನೇನು ಚಿಕ್ಕ ಮಗೂನಾ ಶರತ್, ಇಡು ಫೋನು.
ಮಗನ ಅಕ್ಕರೆಗೆ ಹೃದಯ ಹೆಮ್ಮೆಯಿಂದ ಬೀಗಿತು.
ಮೊದಲ ವಿಮಾನಯಾನದ ಸುಖವನ್ನು ಅನುಭವಿಸಿ ಇನ್ನೂ ಸುಖಿಸುತ್ತಿರುವಷ್ಟರಲ್ಲಿಯೇ ಮುಂಬೈ ತಲುಪಿಯಾಗಿತ್ತು. ಮಗ, ಸೊಸೆ ಏರ್ ಪೋರ್ಟ್ ಹೊರಗೆ ಕಾಯುತ್ತಿದ್ದರು. ಹೊರಬಂದ ಕೂಡಲೇ ಕೈಯಾಡಿಸಿ ಹತ್ತಿರ ಬಂದರು.
ತುಮಕೂರಿಗೆ ಹೋಲಿಸಿದರೆ ಮುಂಬೈನ ಮಗನ ಮನೆ ಬೆಂಕಿಪೊಟ್ಟಣ ಅನ್ನಿಸಿದರೂ ಅಚ್ಚುಕಟ್ಟುತನ, ಸೌಲಭ್ಯಗಳಲ್ಲಿ ಯಾವುದೇ ಕೊರತೆಯಿರಲಿಲ್ಲ.
ಡೈನಿಂಗ್ ಟೇಬಲ್ಲಿನ ಮೇಲೆ ಆಗಲೇ ಅಡುಗೆಯನ್ನು ಜೋಡಿಸಿಟ್ಟಿದ್ದರು.
ನಮಿತಾ ಕಾಫಿ ಮಾಡಿ ತಂದು ಕೈಗೆ ಕೊಡುತ್ತಾ ಹೇಳಿದಳು – ಅಮ್ಮಾ ಕಾಫಿ ಕುಡಿದು ಫ್ರೆಶಪ್ ಆಗಿ ಬಂದು ಬಿಡಿ. ಆಗಲೇ ಗಂಟೆ ಏಳೂವರೆಯಾಗುತ್ತಿದೆ. ಅಡುಗೆಯನ್ನು ಒಮ್ಮೆ ಬಿಸಿ ಮಾಡಿ ಬಿಡುತ್ತೇನೆ. ಊಟ ಮಾಡಿಬಿಡೋಣ. ನಂತರ ಕುಳಿತು ನಿದ್ರೆ ಬರುವ ತನಕ ಹರಟೋಣ. ನನಗೆ ಫರ್ಫೆಕ್ಟ್ ಆಗಿ ಕಾಫಿ ಮಾಡಲು ಬರುವುದಿಲ್ಲ. ನಿಮ್ಮ ಮಗನೇ ಡಿಕಾಕ್ಷನ್ ಹಾಕಿದ್ದು. ನಾನು ಬಿಸಿ ಮಾಡಿ ತಂದೆ ಅಷ್ಟೆ.
ಅಯ್ಯೋ ಈಗಲೇ ಊಟ ಮಾಡೋಣ ಎಂದ ಮೇಲೆ ಕಾಫಿ ಯಾಕೆ, ಊಟದ ನಂತರವೇ ಮಾತನಾಡುತ್ತಾ ಕಾಫಿ ಕುಡಿಯ ಬಹುದಿತ್ತು
ಶರತ್ ಹೇಳಿದ – ಊಟದ ನಂತರ ನಿನ್ನ ಪ್ರೀತಿಯ ಡ್ರೈಫ್ರೂಟ್ ಐಸ್ ಕ್ರೀಮ್ ತಿನ್ನ ಬೇಕಿದೆ.
ʼಸರಿಯಪ್ಪಾʼ ಎನ್ನುತ್ತಾ ಎದ್ದು, ಟವಲ್ ತೆಗೆದುಕೊಳ್ಳಲು ಬ್ಯಾಗ್ ತೆಗೆಯ ಹೋದರೆ, ನಮಿತಾ ಹೊಸಾ ಟವಲ್ ತಂದು ಕೈಗೆ ಕೊಡುತ್ತಾ ಹೇಳಿದಳು – ಅಮ್ಮಾ ತೆಗೆದುಕೊಳ್ಳಿ, ನಂತರದಲ್ಲಿ ನಿಮ್ಮ ಸಾಮಾನುಗಳನ್ನು ಜೋಡಿಸಿದರಾಯಿತು. ಶರತ್ ನಿಮ್ಮ ಅಫಿಷಿಯಲ್ ಬ್ರಾಂಡ್, ಮೈಸೂರು ಸ್ಯಾಂಡಲ್ ಸೋಪು, ಹೊಸಾ ಟೂತ್ ಬ್ರೆಶ್, ಪೇಸ್ಟ್ ಎಲ್ಲಾ ತಂದಿಟ್ಟಿದ್ದಾರೆ.
ಮಕ್ಕಳ ಕಕ್ಕುಲಾತಿಗೆ ಜಾನ್ಹವಿಯ ಮನ ಹಿರಿಹಿರಿ ಹಿಗ್ಗಿತು.
ಊಟದ ನಂತರ ಬಾಲ್ಕನಿಯಲ್ಲಿ ಹರಟುತ್ತಾ ಕುಳಿತಾಗ, ನಮಿತಾ, “ಕೆಲವೊಂದು ಈಮೇಲ್ ಗಳನ್ನು ಚೆಕ್ಕ್ ಮಾಡುವುದಿದೆ” ಎನ್ನುತ್ತಾ ಎದ್ದು ಹೋದಳು. ಶರತ್ ಹೇಳಿದ – ಅಮ್ಮಾ ನಾವುಗಳು ಪ್ಲಾನ್ ಮಾಡಿಯೇ ಇಂದು ಶುಕ್ರವಾರ ನಿನ್ನನ್ನು ಬರಮಾಡಿಕೊಂಡಿದ್ದು. ನಾಳೆ, ನಾಡಿದ್ದು, ನಮ್ಮಿಬ್ಬರಿಗೂ ರಜಾ ಇದೆ. ಮುಂಬೈನ ಕೆಲವೊಂದು ನೋಡುವಂತಹ ಸ್ಥಳಗಳಿಗೆ ಹೋಗೋಣ. ಜೊತೆ ಜೊತೆಗೇ, ಇಲ್ಲೇ ಹತ್ತಿರ ಇರುವ ಯೋಗಾ ಸೆಂಟರ್, ದೇವಸ್ಥಾನ, ದೇವಸ್ಥಾನದ ಭಜನಾ ಮಂಡಳಿ, ವಾಕಿಂಗ್ ಹೋಗಲು ಪಾರ್ಕು, ಅಲ್ಲಿಯ ನಗೆಕೂಟ, ಹತ್ತಿರದ ತರಕಾರೀ ಮಾರ್ಕೆಟ್ಟು, ದಿನಸಿ ಅಂಗಡಿ, ಮಾಲ್, ಲೈಬ್ರೆರಿ, ಮೇಲುಗಡೆ ಫ್ಲಾಟಿನಲ್ಲಿನಲ್ಲಿರುವ ನಿನ್ನ ಸ್ವಾಭಾವಕ್ಕೆ ಹೋಂದಿಕೆಯಾಗುವಂತಹ ನಾನು, ನಮಿತಾ ಯೋಚಿಸಿ ಆರಿಸಿರುವ ಇಬ್ಬರು, ಮೂವರು ಆಂಟಿಯರು, ಎಲ್ಲರನ್ನೂ, ಎಲ್ಲವನ್ನೂ ನಿನಗೆ ಪರಿಚಯ ಮಾಡಿಸಿ ಬಿಡುತ್ತೇವೆ. ಸೋಮವಾರದಿಂದ ಇಬ್ಬರಿಗೂ ಆಫೀಸು ಶುರುವಾದರೆ, ನಿನಗೆ ಎಷ್ಟು ಟೈಮ್ ಕೊಡುವುದಕ್ಕೆ ಆಗುತ್ತದೋ ಗೊತ್ತಿಲ್ಲ. ಹಾಗಾಗಿ ನಿನಗೆ ಬೇಸರವಾಗದ ಹಾಗೆ, ಖುಷಿಯಾಗುವ ಹಾಗೆ ಹೇಗೆ ಬೇಕೋ ಹಾಗೆ ಆರಾಮವಾಗಿರು. ಮನೆ ಕೆಲಸಕ್ಕೆ, ಅಡುಗೆಗೆ, ಎಲ್ಲದಕ್ಕೂ ಜನ ಬರುತ್ತಾರೆ. ನೀನು ಸಂಸಾರಕ್ಕೆ ದುಡಿದು ದುಡಿದು ಸುಸ್ತಾಗಿರುವೆ. ನಿನಗಿಷ್ಟ ಬಂದ ಹಾಗೆ ಇರು. ನಾವಿಬ್ಬರೂ ಸಹ ಆದಷ್ಟೂ ಸಮಯವನ್ನು ಕೊಡುತ್ತೇವೆ. ರಜಾ ದಿನಗಳಲ್ಲಿ ಬೇರೆಲ್ಲಾ ಕಡೆ ಹೋಗೋಣ. ಬೆಳಗ್ಗೆಯಿಂದ ಧಾವಂತದಲ್ಲಿ ಸುಸ್ತಾಗಿರುತ್ತೆ, ನಿನ್ನ ರೂಮಿಗೆ ಹೋಗಿ ಮಲಗಿ ರೆಸ್ಟ್ ತೆಗೆದುಕೋ. ವಾಕಿಂಗ್ ಹೋಗಲು ನಾಲ್ಕಾರು ಚೂಡೀದಾರಗಳು, ೨-೩ ನೈಟಿಗಳು ಎಲ್ಲವನ್ನೂ ತಂದಿಟ್ಟಿದ್ದಾಳೆ, ನಿನ್ನ ಸೊಸೆ. ಈಗ ಹೋಗಿ ಸೂಟ್ ಕೇಸ್ ಬಿಚ್ಚುತ್ತಾ ಕುಳಿತುಕೊಳ್ಳಬೇಡ, ನಾಳೆ ನಿಧಾನವಾಗಿ ಬೀರುವಿನಲ್ಲಿ ಜೋಡಿಸಿಕೊಳ್ಳುವಿಯಂತೆ – ಎಂದಾಗ, ಜಾನ್ಹವಿ ಮಗ ಸೊಸೆಯರ ಅಕ್ಕರೆ, ಪ್ರೀತಿಯ ಅಲೋಚನೆಗಳಿಗೆ, ತನ್ನ ಬರವನ್ನು ಸಂಭ್ರಮಿಸುತ್ತಿರುವುದ ಕಂಡ ಮೂಕವಿಸ್ಮಿತಳಾದಳು.
ತಡೀ ಶರತ್ ನಾನು ತಂದಿರುವ ತಿಂಡಿಗಳನ್ನಾದರೂ ತೆಗೆದಿಟ್ಟು ಮಲಗಿಕೊಳ್ಳುತ್ತೇನೆ – ಎನ್ನುತ್ತಾ ಎದ್ದಳು.
ಓಕೆ, ಓಕೆ, ಒಂದೊಂದು ಸ್ಯಾಂಪಲ್ಲಿಗೆ ಏನು ತಂದಿದ್ದೀಯೋ ಇಬ್ಬರಿಗೂ ಕೊಡು, ತಿನ್ನುತ್ತಾ ಮಿಕ್ಕಿರುವ ಆಫೀಸಿನ ಕೆಲಸಗಳನ್ನು ಮುಗಿಸಿ ಮಲಗುತ್ತೇವೆ – ಎಂದನು ಶರತ್.
ಒಂದೊಂದು ಕೋಡುಬಳೆ, ರವೆಉಂಡೆ, ಚಕ್ಕುಲಿಗಳನ್ನು ಎರಡು ಪ್ಲೇಟುಗಳಲ್ಲಿ ಹಾಕಿ ಮಿಕ್ಕಿದ್ದನ್ನು ಅಲ್ಲೇ ಇದ್ದ ಏರ್ ಟೈಟ್ ಡಬ್ಬದಲ್ಲಿ ಹಾಕಿ ಮುಚ್ಚಿಟ್ಟು ಮಲಗಲು ಹೊರಟಳು ಜಾನ್ಹವಿ.
ಕಂಪ್ಯೂಟರಿನಿಂದ ಮುಖ ಎತ್ತಿ ನಮಿತಾ – ಓ, ಥ್ಯಾಂಕ್ಯೂ ವೆರಿಮಚ್ ಫಾರ್ ಆಲ್ ತಿಂಡೀಸ್ ಅಮ್ಮಾ, ಗುಟ್ ನೈಟ್ – ಎಂದಳು.
ಗುಡ್ ನೈಟ್ ಎಂದು ಇಬ್ರಿಗೂ ಹೇಳಿ, ತನಗಾಗಿ ಸಿದ್ದಪಡಿಸಿದ್ದ ಕೋಣೆಗೆ ಹೋಗಿ ಹಾಸಿಗೆಗೆ ತಲೆ ಕೊಟ್ಟಳು ಜಾನ್ಹವಿ. ಮೆತ್ತಗಿನ ಹಾಸಿಗೆ, ಪಕ್ಕದ ಸೈಡ್ ಟೇಬಲ್ಲಿನ ಮೇಲೆ ಆ ತಿಂಗಳ ಕನ್ನಡ ಮ್ಯಾಗಜೀ಼ನುಗಳು, ಎಲ್ಲವನ್ನೂ ನೋಡಿ ಸುಖಿಸಿದಳು. ಅಷ್ಟರಲ್ಲಿ ಶರತ್ ಒಂದು ಲೋಟಾ ಹಾಲು ಮತ್ತು ನೀರಿನ ಬಾಟಲಿಯೊಂದಿಗೆ ಒಳ ಬಂದು ನೀಡುತ್ತಾ – ಹಾಲು ಕುಡಿದು ಮಲಗು ಅಮ್ಮಾ – ಎಂದ.
ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸಮಯ ಇದೇ ಏನೋ, ಅನ್ನಿಸಿತು ಜಾನ್ಹವಿಗೆ.
ಶನಿವಾರ, ಭಾನುವಾರ ಹೇಗೆ ಕಳೆಯಿತೋ ತಿಳಿಯಲೇ ಇಲ್ಲ. ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ಟೆಂಪಲ್, ಚೌಪಾತಿಯ ಬೀಚ್ ಎಲ್ಲ ಕಡೆ ಸುತ್ತಿ ಅಕ್ಕ ಪಕ್ಕದ ಜಾಗಗಳನ್ನೆಲ್ಲ ಪರಿಚಯಿಸಿಕೊಂಡು ಭಾನುವಾರ ಮಧ್ಯಾನ್ಹ ನಾಲ್ಕು ಗಂಟೆಗೆ ಮೂರು ಜನರೂ ಮನೆಗೆ ಹಿಂದಿರುಗಿದರು.
ನಮಿತಾ, ವಾರಕ್ಕೆ ಬೇಕಿರುವಷ್ಟು, ತರಕಾರಿಗಳು, ಹಣ್ಣುಗಳು, ಫ್ರಿಡ್ಜಿನ ಮೇಲೆ ಸಿಕ್ಕಿಸಿದ್ದ ಚೀಟಿಯಲ್ಲಿ ಬರೆದಿಟ್ಟಿದ್ದ ಸಾಮಾನುಗಳು ಎಲ್ಲವನ್ನೂ ಆನ್ ಲೈನಿನಲ್ಲಿ ಆರ್ಡರ್ ಮಾಡಿದಳು. ಅರ್ಧ ಗಂಟೆಯಲ್ಲಿ ಸಾಮಾನುಗಳೆಲ್ಲಾ ಮನೆಗೆ ಬಂದು ಬಿತ್ತು.
ನಮಿತಾ ಹೇಳಿದಳು – ಅಮ್ಮಾ, ಸಧ್ಯಕ್ಕೆ ನಾನು ವಾರಕ್ಕೆ ಮೂರು ದಿನ ಮಾತ್ರ ಆಫೀಸಿಗೆ ಹೋಗಿ ಬರುತ್ತೇನೆ. ಮಿಕ್ಕ ದಿನಗಳು ವರ್ಕ್ ಫಂ ಹೋಂ ಇರುತ್ತೆ. ನಾಳೆ, ನಾಡಿದ್ದು ಮನೆಯಿಂದಲೇ ಕೆಲಸ ಮಾಡುತ್ತೇನೆ. ಶರತ್ ಸಹ ಹಾಗೇ. ಅಗತ್ಯವಿದ್ದಾಗಲೆಲ್ಲಾ ಆಫೀಸಿಗೆ ಹೋಗುತ್ತಿರುತ್ತಾರೆ. ನಾವುಗಳು ಆಫೀಸಿನ ಕೆಲಸದಲ್ಲಿ ಮುಳುಗಿ ಹೋದರೆ, ಬೇರೆ ಯಾವ ವಿಷಯಗಳ ಬಗ್ಗೆಯೂ ತಲೆ ಓಡುವುದೇ ಇಲ್ಲ. ನಿಮಗೆ ಏನು ಬೇಕಾದರೂ ದಯವಿಟ್ಟು ಕೇಳಿ. ನಮಗೇ ತೋಚಿಕೊಂಡು ಮಾಡಲು ತಿಳಿಯುವುದಿಲ್ಲ.
ಸೊಸೆಯ ಕಾಳಜಿ ಬೆರೆತ ಮಾತುಗಳು ಜಾನ್ಹವಿಗೆ ಇಷ್ಟವಾದವು. ಅವಳು ಮನತುಂಬಿ ಹೇಳಿದಳು –
ನಾನೂ ನೌಕರಿಯಲ್ಲಿ ಇದ್ದುದರಿಂದ, ಅಲ್ಲಿಯ ಒತ್ತಡಗಳ ಅರಿವು ನನಗೆ ಇದೆ. ನಮ್ಮಗಳಿಗಿಂತಾ ಹತ್ತರಷ್ಟು, ಹತ್ತರಷ್ಟೇಕೆ, ನೂರರಷ್ಟು ಜಾಸ್ತಿ ಒತ್ತಡ ನಿಮಗೆ ಇರುತ್ತೆ. ಇರಲಿ ಚಿಂತಿಸ ಬೇಡ, ನನಗೆಲ್ಲಾ ಅರ್ಥ ಆಗುತ್ತೆ.
ಥ್ಯಾಂಕ್ಯು ಸೋಮಚ್ ಅಮ್ಮಾ – ಎಂದಳು ನಮಿತಾ.
ವಾರ ಪ್ರಾರಂಭವಾಯಿತು. ಬೆಳಗ್ಗೆ ೬ – ೭ ಗಂಟೆಗೇ ಫೋನಿನಲ್ಲಿ ಮಾತು ಕತೆಗಳು, ಕಂಪ್ಯೂಟರಿನಲ್ಲಿ ಕೆಲಸಗಳು ಇಬ್ಬರಿಗೂ ಪ್ರಾರಂಭವಾಗುತಿತ್ತು. ಎಂಟೋ, ಒಂಭತ್ತೋ, ಒಮ್ಮೊಮ್ಮೆ ಹತ್ತು ಗಂಟೆಗೋ ಯಾವಾಗ ಪುರಸೊತ್ತು ಆಗುತ್ತೋ ಆಗ ಬಂದು ಪ್ಲೇಟಿನಲ್ಲಿ ತಿಂಡಿ ತೆಗೆದುಕೊಂಡು ಹೋಗುತ್ತಿದ್ದರು. ಊಟವೂ ಅಷ್ಟೆ. ಹೊತ್ತಿಲ್ಲ, ಗೊತ್ತಿಲ್ಲ.
ಬೆಳಗ್ಗೆ ಆರು, ಆರೂಕಾಲು ಗಂಟೆಯ ಹೊತ್ತಿಗೆ ಮನೆಕೆಲಸದ ʼಬಾಯಿʼ ಬಂದು ಅಡುಗೆ ಮನೆಯೂ ಸೇರಿದಂತೆ ಮನೆಯನ್ನೆಲ್ಲಾ ಕ್ಲೀನ್ ಮಾಡಿ ಹೋಗುತ್ತಿದ್ದಳು. ಏಳೂವರೆ, ಏಳೂಮುಕ್ಕಾಲರ ಹೊತ್ತಿಗೆ ಅಡುಗೆ ಕೆಲಸದ ಒಬ್ಬ ಮರಾಠಿ ಹೆಂಗಸು ಬಂದು ಅಡುಗೆ ಮಾಡಿಟ್ಟು ಹೋಗುತ್ತಿದ್ದರು. ಮತ್ತೊಮ್ಮೆ ಹನ್ನೊಂದು ಗಂಟೆಯ ಆಸುಪಾಸಿನಲ್ಲಿ ʼಬಾಯಿʼ ಮತ್ತೆ ಬಂದು ಬಟ್ಟೆಗಳನ್ನು ವಾಷಿಂಗ್ ಮಿಶೀನಿಗೆ ಹಾಕಿ, ಮತ್ತೆ ಪಾತ್ರೆಗಳನ್ನು ತೊಳೆದಿಟ್ಟು, ನಿನ್ನೆ ಒಗೆದಿದ್ದ ಬಟ್ಟೆಗಳನ್ನು ಮಡಚಿ ಅವರವರ ಬೀರುವಿನಲ್ಲಿಟ್ಟು ಹೋಗುತ್ತಿದ್ದಳು. ಬಂದಾಗಲೊಮ್ಮೆ, ಹೋಗುವಾಗಲೊಮ್ಮೆ ಜಾನ್ಹವಿಯೆಡೆಗೆ ಒಂದು ಮುಗುಳ್ನಗೆ ಬೀರಿ ಹೋಗುತ್ತಿದ್ದರು. ಶರತ್ ನಮಿತಾರೊಂದಿಗೂ ಮಾತಿಲ್ಲ, ಕತೆಯಿಲ್ಲ.
ತಡೆಯಲಾರದೆ ಒಮ್ಮೆ ಜಾನ್ಹವಿ ಕೇಳಿದಳು –
ನಮಿತಾ, ಏನು ಅಡುಗೆ ಮಾಡ ಬೇಕೆಂಬುದನ್ನು ಅಡುಗೆ ಮಾಡಲು ಬರುತ್ತಾರಲ್ಲಾ, ಅವರೇ ನಿರ್ಧರಿಸುತ್ತರಾ? ನೀವುಗಳು ಅವರೇನು ಮಾಡುತ್ತಾರೋ ಅದನ್ನೇ ತಿನ್ನುತ್ತೀರಾ?
ಯಾಕೆ ಅಮ್ಮ, ನಿಮಗಿಷ್ಟವಾಗಲಿಲ್ಲವಾ? ಏನು ಮಾಡಿಸಬೇಕು ಹೇಳಿ, ಅದನ್ನೇ ಮಾಡಲು ಹೇಳುತ್ತೇನೆ.
ಇಲ್ಲಾ, ಹಾಗೇನಿಲ್ಲಾ, ಎಲ್ಲಾ ಚೆನ್ನಾಗಿಯೇ ಇವೆ. ಆದರೂ . . . .
ಇಲ್ಲಾ ಅಮ್ಮಾ, ನಾನು, ನಾಡಿದ್ದು ಏನು ಮಾಡಬೇಕೆಂಬುದನ್ನುಇಂದೇ ವಾಟ್ಸಾಪ್ಪಿನಲ್ಲಿ ಕಳುಹಿಸಿರುತ್ತೇನೆ. ನಾಳೆ ಅವರು ಬಂದಾಗ ನಾಡಿದ್ದಿನ ಅಡುಗೆಗೆ ಬೇಕಿರುವ ಸಾಮಾನೆಲ್ಲಾ ಇದೆಯಾ ನೋಡಿಕೊಂಡು, ಇಲ್ಲದಿದ್ದರೆ, ಹಾಗೆಯೇ ಮತ್ಯಾವುದಾದರೂ ಸಾಮಾನು ಮುಗಿದಿದ್ದರೂ ಫ್ರಿಡ್ಜಿನ ಮೇಲಿನ ಚೀಟಿಯಲ್ಲಿ ಬರೆದಿರುತ್ತಾರೆ. ಮಧ್ಯಾನ್ಹ ಯಾವಾಗಲಾದರೂ ಕೆಲಸದ ಮಧ್ಯೆ ಬ್ರೇಕ್ ಬೇಕು ಎನ್ನಿಸಿದಾಗ ನಾನೋ ಅಥವಾ ಶರತ್ತೋ ನೋಡಿ ಆನ್ ಲೈನಿನಲ್ಲಿ ಆರ್ಡರ್ ಮಾಡಿರುತ್ತೇವೆ. ಮಾರನೆಯ ದಿನ ಇಬ್ಬರಲ್ಲೊಬ್ಬರು ಅವುಗಳನ್ನು ತೆಗೆದಿರಿಸುತ್ತಾರೆ. ಸಂಬಳವನ್ನೂ ಅಷ್ಟೆ, ಆನ್ ಲೈನಿನಲ್ಲಿ ಅವರುಗಳ ಅಕೌಂಟಿಗೇ ಕಳುಹಿಸಿ ಬಿಡುತ್ತೇನೆ. ದಿನಾ ದಿನಾ ಅವರುಗಳ ಜೊತೆ ಕಾಲ ಕಳೆಯಲು ನನಗೆ ಸಮಯವಿರುವುದೇ ಇಲ್ಲ. ಅವರುಗಳೂ ಇನ್ನೊಂದು ಮನೆಗೆ ಓಡುವ ಧಾವಂತದಲ್ಲಿ ಇರುತ್ತಾರೆ.
ಒಂದೆರಡು ವಾರ ಕಳೆಯುವಷ್ಟರಲ್ಲಿ ಜಾನ್ಹವಿಗೆ ಯಾಕೋ ಉಸಿರು ಕಟ್ಟುವಂತೆ ಆಗತೊಡಗಿತು. ಯಾಕೋ ಏನೂ ಸರಿಹೋಗುತ್ತಿಲ್ಲ ಎನ್ನಿಸತೊಡಗಿತು. ಬೆಳಗ್ಗೆ ಎದ್ದ ತಕ್ಷಣ ಕಂಪ್ಯೂಟರ್, ಫೋನ್‌ಗಳ ಮುಂದೆ ಇಬ್ಬರೂ ಕುಳಿತು ಬಿಡುತ್ತಿದ್ದರು. ಒಮ್ಮೊಮ್ಮೆ ಆಫೀಸಿನ ವಿಷಯಗಳ ಬಗ್ಗೆ ದೀರ್ಘವಾದ ಚರ್ಚೆಗಳೂ ನಡೆಯುತ್ತಿದ್ದವು. ಯಾವಾಗಲೋ ತಿಂಡಿ, ಯಾವಾಗಲೋ ಊಟ, ಯಾವಾಗಲೋ ಸ್ನಾನ. ಒಂದು ದೇವರಿಲ್ಲ, ದಿಂಡರಿಲ್ಲ. ಅಲ್ಲೇ ಒಂದು ಗೂಡಿನಲ್ಲಿ ಇಟ್ಟಿದ್ದ ದೇವರ ನಾಲ್ಕಾರು ಫೋಟೋಗಳಿಗೆ ಒಂದು ಹೂವನ್ನೂ ಏರಿಸುತ್ತಿರಲಿಲ್ಲ, ಒಂದು ದೀಪವನ್ನೂ ಹಚ್ಚುತ್ತಿರಲಿಲ್ಲ. ಜಾನ್ಹವಿಯೇ ಸಂಜೆ ವಾಕಿಂಗಿಗೆ ಎಂದು ಹೋಗಿ ಬರುವಾಗ ಹೂವನ್ನು ತಂದು ದೇವರಿಗೆ ಏರಿಸುತ್ತಿದ್ದಳು, ದೀಪವನ್ನೂ ಹಚ್ಚುತ್ತಿದ್ದಳು. ಆದರೆ ಇದ್ಯಾವುದರ ಬಗ್ಗೆಯೂ ಇಬ್ಬರೂ ತಲೆಯನ್ನು ಕೆಡಿಸಿಕೊಳ್ಳುತ್ತಿರಲಿಲ್ಲ.
ತಡೆಯಲಾಗದೆ, ಒಮ್ಮೆ ಶರತ್ ನಲ್ಲಿ ಕೇಳಿದಳು – ಇದೇನೋ ಶರತ್, ಯಾವುದಕ್ಕೂ ಒಂದು ಹೊತ್ತಿಲ್ಲಾ, ಗೊತ್ತಿಲ್ಲ, ರೀತಿಯಿಲ್ಲ, ನೀತಿಯಿಲ್ಲ, ಒಂದು ದೇವರಿಲ್ಲಾ, ದಿಂಡರಿಲ್ಲಾ, ನಂಗ್ಯಾಕೋ ಸರೀ ಅನ್ನಿಸುತ್ತಿಲ್ಲಪ್ಪಾ.
ಸರೀ ಮಾಡ್ಕೋಬೇಕು ಅಮ್ಮಾ, ಸರೀ ಮಾಡ್ಕೋಬೇಕು. ನಮಗೆ ಕೆಲಸಗಳ ಟೆನ್ಷನ್ ತುಂಬಾ ಇರುತ್ತೆ. ಅಲ್ಲದೆ ಇಬ್ಬರಿಗೂ ಈ ವಿಚಾರಗಳಲ್ಲಿ ಆಸಕ್ತಿಯೂ ಇಲ್ಲ, ನಂಬಿಕೆಯೂ ಇಲ್ಲ. ನಮ್ಮ ಅತ್ತೆ ಬಂದಿದ್ದಾಗ ಈ ದೇವರ ಫೋಟೋಗಳ ಸೆಟ್-ಅಪ್ ಮಾಡಿ ಹೋದರು. ನಮ್ಮಿಬ್ಬರಲ್ಲಿ ಒಬ್ಬರಿಗೆ ಆಸಕ್ತಿ, ನಂಬಿಕೆ ಇದಿದ್ದರೆ, ಎಲ್ಲಾ ನಡೆದುಕೊಂಡು ಹೋಗುತಿತ್ತು, ಅಥವಾ ಜಗಳಾ ಆಗುತಿತ್ತು. ಸಧ್ಯ ಅದಾಗುತ್ತಿಲ್ಲವಲ್ಲ ಖುಷಿ ಪಟ್ಟುಕೋ ಅಮ್ಮ. ನೀನೇ ಹೇಳುತ್ತಿದ್ದೆಯಲ್ಲಾ, ಕರ್ಮಣ್ಯೇ ವಾಧಿಕಾರಸ್ತೇ, ಕಾಯಕವೇ ಕೈಲಾಸ ಅಂತ, ಈಗ ನಾವುಗಳು ಅದನ್ನೇ ಫಲೋ ಮಾಡ್ತಾ ಇದೀವಿ. ಅವರ ಅಮ್ಮನಿಗೂ ಅವರ ಮಗಳ ಆಸಕ್ತಿಯ ಬಗ್ಗೆ ಗೊತಿತ್ತು, ಅದಕ್ಕೇ ಹೋಗುವಾಗ ಹೇಳಿ ಹೋಗಿದ್ದರು – ಕೊನೆಯ ಪಕ್ಷ ಬೆಳಗ್ಗೆ, ಸಂಜೆ ಒಂದೆರಡು ಗಂಟೆಗಳು ದೇವರ ಗೂಡಿನಲ್ಲಿರುವ ಎಲೆಕ್ಟ್ರಿಕ್ ದೀಪವನ್ನಾದರೂ ಬಿಡದೇ ಹಾಕಿರಿ. ಬರೀ ಸ್ವಿಚ್ ಆನ್, ಆಫ್, ಮಾಡುವುದು, ಅಷ್ಟನ್ನಾದರೂ ಮಾಡಿ ಕೈ ಮುಗಿಯಿರಿ – ಎಂದು. ನಮಗೆ ಅಷ್ಟು ಮಾಡಲೂ ನಂಬಿಕೆ, ಆಸಕ್ತಿ, ಸಮಯ ಇರುವುದಿಲ್ಲ. ನಿನಗೂ ಹೀಗೆಲ್ಲಾ ಇರುವುದು ಇಷ್ಟ ಆಗಲ್ಲ ಅಂತ ಗೊತಿತ್ತು. ಅದಕ್ಕೇ ನಾವುಗಳು ಸೆಟ್ ಮಾಡಿ ಇಟ್ಟುಬಿಟ್ಟಿದ್ದೇವೆ. ಬೆಳಗ್ಗೆ 8 ಗಂಟೆಯಿಂದ 10 ಗಂಟೆಯ ತನಕ ಮತ್ತು ಸಂಜೆ 6 ಗಂಟೆಯಿಂದ 8 ಗಂಟೆಯ ತನಕ ಆಟೋಮೆಟಿಕ್ ಆಗಿ ಸ್ವಿಚ್ ಆನ್, ಸ್ವಿಚ್ ಆಫ್ ಆಗುತ್ತದೆ. ನೀನು ಬಂದಾಗ ಪೂಜೆ ಮಾಡ್ತೀಯಾ ಅಂತ ಗೊತ್ತಿತ್ತು. ಅದಕ್ಕೇ ಅದನ್ನು ಆಫ್ ಮಾಡಿ ಇಟ್ಟಿದ್ದೇವೆ. ಸೋ, ಅಷ್ಟೇ ನಾವು ಮಾಡುವ ದೇವರ ಪೂಜೆ – ಎಂದ.
ಜಾನ್ಹವಿಗೆ ಏನು ಉತ್ತರಿಸಬೇಕೋ ತಿಳಿಯಲಿಲ್ಲ.
(ಮುಂದುವರಿಯುವುದು)
-ಪದ್ಮಾ ಆನಂದ್, ಮೈಸೂರು
ವಾಸ್ತವ ಬದುಕಿನ ಚಿತ್ರಣದ ಕಥೆ ಮುಂದಿನ ಕಂತಿಗಾಗಿ ಕಾಯುವಂತಿದೆ..ಸೊಗಸಾದ ನಿರೂಪಣೆ…
ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ವಂದನೆಗಳು.
ಬಹಳ ಸುಂದರ
ಧನ್ಯವಾದಗಳು.
ಕಥೆಯು ಮೊದಲ ಕಂತಲ್ಲೇ ಗಮನ ಸೆಳೆಯುವಂತಿದೆ. ಜಾಹ್ನವಿಯ ತುಮುಲವು ಸಮಕಾಲೀನರೆಲ್ಲರ ತುಮುಲವೂ ಹೌದು.
ನಿಮ್ಮ ಮಾತು ನಿಜ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಸೊಗಸಾಗಿದೆ
ಧನ್ಯವಾದಗಳು ಪದ್ಮಿನಿ ಮೇಡಂ.
ಮತ್ತೊಂದು ಸುಂದರ ಕಥೆ. ಇಂದಿನ ವಾಸ್ತವದ ಚಿತ್ರಣವೇ ಇದೆ. ಸೂಪರ್ ಮೇಡಂ ಜಿ
ನಿಮ್ಮ ಅಭಿಮಾನದ ಮೆಚ್ಚುಗೆಯ ನುಡಿಗಳಿಗಾಗಿ ಧನ್ಯವಾದಗಳು.
ಕತೆಯ ಮೊದಲ ಭಾಗವು, ಈ ಘಟನೆ ನಮ್ಮ ಕಣ್ಣ ಮುಂದೆ ನಡೆಯುತ್ತಿದೆಯೇನೋ ಎಂಬಷ್ಟು ಸಹಜವಾಗಿ ಸುಲಲಿತವಾಗಿ ಓದಿಸಿಕೊಂಡು ಹೋಯಿತು.
ಮೊದಲಿಗೆ ಕಥೆಯನ್ನು ಪ್ರಕಟಿಸಿದ್ದಕ್ಕಾಗಿ ವಂದನೆಗಳು ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.