ಕನ್ನಡದ ಮಾಸಕ್ಕೆ ಕನ್ನಡಿಗಳಂತರಂಗದ ಬಿಚ್ಚುನುಡಿಗಳ ತಿದಿಗಳು…..
ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವ ಶಕ್ತಿ ನಮ್ಮ ಕನ್ನಡಕ್ಕಿದೆ ಅಲ್ವ…ಅದು ಕನ್ನಡದ ಶಕ್ತಿ. ಶತಶತಮಾನಗಳಿಂದ ಎಲ್ಲರೆದೆಯಲ್ಲಿ ಅಚ್ಚೊತ್ತಿದ ಒಂದು ನವನೀತ ಭಾವ ನಮ್ಮ ಕನ್ನಡ ಪರಂಪರೆಯದ್ದು.
“ಆರಂಕುಶವಿಟ್ಟೊಡಂ ನೆನೆವುದೆನ್ನಮನಂ ಬನವಾಸಿದೇಶಮಮಂ..” ಎನ್ನುವ ಸಾಲುಗಳು ನಮ್ಮ ಪಂಪನದ್ದು. ಅಲ್ಲದೇ ..”ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗಳ್ಗಾರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇನಾಗಿಯು ಮೇನೋ ತೀರ್ದಪುದೇ ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್ ” ಈ ಉತ್ಪಲಮಾಲಾ ವೃತ್ತದಲ್ಲಿ ರಚಿಸಿರುವ ಒಂದು ಕನ್ನಡಾಭಿಮಾನಿಗನ ಸಾಲುಗಳು. ನಮ್ಮ ರಾಜ್ಯದ ಬನವಾಸಿಯ ಸೌಂದರ್ಯವನ್ನು ಕುರಿತು ಹೇಳುವ ಸಾಲುಗಳನ್ನು ಗಮನಿಸಿದರೆ…..ಮನುಷ್ಯನಾಗಿ ಇಲ್ಲಿ ಜನ್ಮ ತಾಳಲು ಆಗದಿದ್ದರೂ ಪರವಾಗಿಲ್ಲ ಒಂದು ಪುಟ್ಟ ದುಂಬಿಯಾಗಿ ಜನ್ಮತಾಳಿದರೂ ಸಾಕು ಎನ್ನುವ ಮಹಾಕವಿ ಪಂಪನ ಆಶಯವನ್ನು ಹೊತ್ತ ,, ಈ ಕ್ಷಣದಲ್ಲಿನ ನಮ್ಮ ಹುಟ್ಟು ಕರ್ನಾಟಕದಲ್ಲಿ ಸಾರ್ಥಕತೆ ಪಡೆದುಕೊಂಡಿದೆ ಎಂದು ನನ್ನ ಭಾವನೆ.
ಎಲ್ಲರಿಗೂ ಅವರವರ ಮಾತೃ ನೆಲಕ್ಕೆ ಪ್ರಾಮುಖ್ಯತೆ ಇದ್ದೇ ಇರುತ್ತದೆ. ಆದರೆ ಕನ್ನಡಕ್ಕೆ ಕನ್ನಡತನಕ್ಕೆ ಒಂದು ವಿಶೇಷ ಸ್ಥಾನ ಮಾನವಿದೆ ಎಂದೇ ನನ್ನ ಅಭಿಪ್ರಾಯ. ಹಿತ್ತಲಗಿಡ ಮದ್ದಲ್ಲ ಅಂತ ಹೇಳುವರು. ಮತ್ತೆ ನಮ್ಮ ಬೆನ್ನು ಕೂಡಾ ನಮಗೆ ಕಾಣಿಸಲ್ಲ.
ಈ ನವೆಂಬರ್ ಗೂ ನಮ್ಮ ಕನ್ನಡಕ್ಕೂ ಒಂಥರಾ ಆತ್ಮೀಯತೆ . ಸೆಪ್ಟೆಂಬರ್ ಬಂದರೆ ಇಡೀ ತಿಂಗಳು ಶಿಕ್ಷಕರ ಬಗ್ಗೆ…. ಅಕ್ಟೋಬರ್ ಬಂದರೆ ಇಡೀ ತಿಂಗಳು ಗಾಂಧೀಜಿಯವರ ಬಗ್ಗೆ….ನವರಾತ್ರಿಯ ಬಗ್ಗೆ ಹೀಗೆ ಆಯಾ ತಿಂಗಳ ವಿಶೇಷತೆ ಕುರಿತು ಅಲ್ಲಲ್ಲೇ ಅನೇಕ ಕಾರ್ಯಕ್ರಮಗಳು ನಡೆಯುವುದನ್ನು ನಾವು ನೋಡುತ್ತೇವೆ. ಅದೇ ಸಾಲಿಗೆ ನವೆಂಬರ್ ತಿಂಗಳು ಕೂಡಾ ಕನ್ನಡದ ಕಾರ್ಯಕ್ರಮಗಳಲ್ಲಿ ಮುಳುಗುವುದನ್ನು ನೋಡುತ್ತೇವೆ.
ಸ್ನೇಹಿತರೆ ನಾನು ಕೇಳೋದು ಇಷ್ಟೇ ಕನ್ನಡ ನವೆಂಬರ್ ಗಷ್ಟೇ ಸೀಮಿತವಾಗಿರಬೇಕ…? ಇಲ್ಲ . ಕನ್ನಡವು ಪ್ರತೀ ದಿನದ ಆಚರಣೆಯಾಗಬೇಕು. ಯಾಕೇ ಒಂದು ತಿಂಗಳಿಗೆ ಬೇರೆಯ ಕಾರ್ಯಕ್ರಮಗಳಂತೆ ಸೀಮಿತಗೊಳಿಸಬೇಕು. ಇದು ನಮ್ಮತನವನ್ನು ಬಡಿದೇಳಿಸುವ …ಸ್ವಾಭಿಮಾನವನ್ನು ಕೆದಕುವ ಪ್ರಶ್ನೆ ಎಂದು ನಿಮಗೆ ಅನಿಸಲ್ಲವ .
ಸಾಲು ಸಾಲು ಕನ್ನಡ ಬಾವುಟಗಳನ್ನು ಹಾರಿಸಿ, ಅಬ್ಬರದ ಕನ್ನಡ ಹಾಡುಗಳಿಗೆ ನಾಲ್ಕು ಹೆಜ್ಜೆಗಳು ಕುಣಿದು ಮರೆಯಾಗುವ ಕನ್ನಡತನವನ್ನು ಕನ್ನಾಡಾಭಿಮಾನ ಎಂದು ಒಪ್ಪಿಕೊಳ್ಳುವ ಪರಿಸ್ಥಿತಿ ಬಂದಿದೆ. ” ಕನ್ನಡಕೆ ಹೋರಾಡು ಕನ್ನಡದ ಕಂದ ಕನ್ನಡವ ಕಾಪಾಡು ನನ್ನ ಆನಂದ ” .…ಎಂದು ಕುವೆಂಪು ಆದಿಯಾಗಿ ಅಂದು ಎಲ್ಲಾ ಕವಿಗಳು ಕರೆಕೊಟ್ಟಿದ್ದರು. ಯಾಕೆ ಗೊತ್ತಾ ಎಂದಾದರೊಂದು ದಿನ ಕನ್ನಡ ಹಾಗೂ ಕರ್ನಾಟಕವನ್ನು ಭೂಪಟದಲ್ಲಿ ನೋಡಬೇಕಾಗುತ್ತದೆ ಎಂಬ ನೋವಿನಿಂದ. ನಮ್ಮ ತಾಯಿಯನ್ನು ನಾವು ಉಳಿಸಿಕೊಳ್ಳಲು ನಾವು ಬೇಡಿಕೊಳ್ಳಬೇಕ….ಇಲ್ಲ. ಇದು ನಮ್ಮ ಕರ್ತವ್ಯ. ನಾವು ಹೇಗೆ ನಮ್ಮ ಮಕ್ಕಳನ್ನ…ತಾಯಿಯನ್ನ…ಬಂಧುವನ್ನ. ಉಳಿಸಿಕೊಳ್ಳಲು ಒದ್ದಾಡುತ್ತೇವೆಯೋ ಹಾಗೆ ಮನವು ಕನ್ನಡಕ್ಕಾಗಿ ಒದ್ದಾಡಬೇಕು.
ನಾವು ಯಾರನ್ನು ಕನ್ನಡಿಗರ ಆಸ್ತಿಗಳೆಂದು ಕರೆದಿದ್ದೇವೆ ಅವರ ಕನ್ನಡ ಅಭಿಮಾನವನ್ನು ಸ್ಮರಿಸಬೇಕು. ಈ ದಿಸೆಯಲ್ಲಿ ಮೊದಲು ಮನೆಯಲ್ಲಿ ತಾಯಿ ತಂದೆಯರು ಬದಲಾಗಬೇಕು. ಯಾಕೆ ಈ ಮಾತನ್ನು ಹೇಳುತ್ತಿರುವೆ ಎಂದರೆ , ನಮ್ಮ ಸಂಸ್ಕಾರಗಳು ಉಳಿದು ಬೆಳೆಯುವುದು ಮಾತೃಭಾಷೆಯ ಮೂಲಕವೇ. ನಾವು ಏನೇ ಕೊಡುವುದಿದ್ದರೂ ಮೊದಲು ಮಾತೃಭಾಷೆಯ ಮೂಲಕ ಕೊಡಬೇಕು. “ಮಕ್ಕಳಿಸ್ಕೂಲ್ ಮನೇಲಲ್ಲವೇ”, “ಮನೆಯೇ ಮೊದಲ ಪಾಠಶಾಲೆ…ತಾಯಿ ತಾನೆ ಮೊದಲ ಗುರುವು ” ಎಂಬ ನುಡಿಗಳನ್ನು ನಾವು ಮರೆಯಬಾರದು. ತಾಯಿಯೊಡನೆಯ ಒಡನಾಟದಿಂದ ಮಗು ನಾಡು, ನುಡಿ,ಸಂಸ್ಕೃತಿಯ ಅಭಿಮಾನ ಕಲಿಯುವುದು ಎನ್ನುವುದನ್ನು ಮರೆಯಬಾರದು. ಮಗು ಮಾತೃಭಾಷಯಲ್ಲಿ ಕಲಿತ ವಿದ್ಯೆ ಗಟ್ಟಿಯಾಗುತ್ತದೆ. ಮಗುವಿಗೆ ಚೆನ್ನಾಗಿ ಮನವರಿಕೆಯಾಗುತ್ತದೆ.
ಪ್ರತೀ ಪೋಷಕರು ಇಂಗ್ಲಿಷ್ ಹುಚ್ಚು ಹಿಡಿಸಿಕೊಂಡಿರುವುದು ಖಂಡಿತಾ ಸುಳ್ಳಲ್ಲ. ಭಾಷೆಗಳು ಎಲ್ಲವೂ ಎಲ್ಲರಿಗೂ ಬೇಕು. ಕಲಿಯಬೇಕು. ಒಂದು ಹಂತಕ್ಕೆ ಬಂದಾಗ ತಾವೇ ಕಲಿಯುವರು…ಆದರೆ ಅದು ಅತಿಯಾಗಬಾರದು. ನಮ್ಮ ಭಾಷಾಭಿಮಾನದ ತಿದಿಯನ್ನು ನಾವು ಬಾಲ್ಯದಲ್ಲಿ ಒತ್ತದೇ ಹೋದರೆ…..ಇನ್ನೆಂದೂ ನಾವು ಅಭಿಮಾನ ಮೂಡಿಸಲು ಸಾಧ್ಯವಿಲ್ಲ. ಮೊದಲು ಮಾತೃಭಾಷೆಯ ಶಿಕ್ಷಣಕೊಡಿಸಿ. ಭಾಷೆಯನ್ನು ಎಲ್ಲಿ..ಹೇಗೆ ಬೇಕಾದರೂ ಕಲಿಯಬಹುದು. ಮಾತನಾಡುವವರ ಸಂಪರ್ಕ ದೊರೆತರೆ ಕಲಿವು ತಾನಾಗಿ ಬರುತ್ತದೆ. ಆದರೆ ನಮ್ಮ ತನ ಅನ್ನುವ ಅಭಿಮಾನಬರುವುದು ಮಾತೃಭಾಷಾ ಕಲಿಕೆಯಿಂದ ಮಾತ್ರ. ಈಗಂತೂ ಯಾವ ಮಕ್ಕಳು ಕನ್ನಡದಲ್ಲಿ ಉತ್ತರಿಸುವುದನ್ನು ನೋಡಲು ಸಾಧ್ಯವೇ ಇಲ್ಲ. ಹಾಗಂತ ನಾನು ಎಲ್ಲರಿಗೂ ಹೇಳುತ್ತಿಲ್ಲ. ಬಹಳಷ್ಟು ಜನ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿ , ಕನ್ನಡ ಕಲಿಸಿ ಕನ್ನಡಾಭಿಮಾನವನ್ನು ಹುಟ್ಟುಹಾಕಿದ್ದಾರೆ. ಯಾವುದೋ ಒಂದು ಮಗು ಟಿವಿಯಲ್ಲಿ ಬಂದು ಮಿಂಚಿಹೋದರೆ ಸಾಕು ಆ ಮಕ್ಕಳನ್ನು ನಮ್ಮ ಮಕ್ಕಳಿಗೆ ತೋರಿಸಿ ಈ ರೀತಿಯಾಗಬೇಕೆಂದು ಬಯಸುತ್ತಾರೆ. ನಮ್ಮ ಮಗು ಸಂಗೀತ ಕಲಿಯಬೇಕು, ಶ್ಲೋಕಗಳನ್ನು,, ಗೀತೆಗಳನ್ನು ಕಲಿಯಬೇಕು ಹಾಗಿರಬೇಕು ಹೀಗಿರಬೇಕು ಎಂದೆಲ್ಲ ಯೋಚಿಸುತ್ತೇವೆ. ಅದನ್ನು ಅರ್ಥ ಮಾಡಿಕೊಳ್ಳಲಾದರೂ ಮಾತೃ ಶಿಕ್ಷಣ ಬೇಕಲ್ಲವ. ಸಾಧನೆಗೆ ಬೇರೆಭಾಷೆಯ ಅವಶ್ಯಕತೆ ಇಲ್ಲ ಎಂಬುದೇ ನನ್ನ ಅಭಿಪ್ರಾಯ. ಸರ್ಕಾರದ ಯೋಜನೆಗಳು ಬದಲಾಗುವುದು ಪೋಷಕರ ಅಭಿಪ್ರಾಯದ ಮೇಲೆಯೇ ನಿರ್ಧರಿಸಿರುತ್ತದೆ ಎಂಬುದನ್ನು ಮರೆಯಬೇಡಿ.
ಕನ್ನಡ ಕಲಿತು ಸಾಧಿಸಿದವರು ಬೇಕಾದಷ್ಟು ಜನ ಇರುವಾಗ ನಾವೇಕೆ ನಮ್ಮ ಮಾತೃಭಾಷೆಯನ್ನು ತಳ್ಳಿ ಪರಭಾಷೆಗೆ ಮಣೆಹಾಕಿದ್ದೇವೆ ಎಂಬುದೇ ತಿಳಿಯುವುದಿಲ್ಲ. ನಮ್ಮ ಕನ್ನಡ ಉಳಿಯಲು ಹೋರಾಟಮಾಡಬೇಕಾಗಿದೆ. ಆಂಗ್ಲದ ಚಕ್ರದೊಳಗೆ ಸಿಕ್ಕಿ ವಿಲ ವಿಲ ಒದ್ದಾಡುತಿರುವ ನಮ್ಮ ಕನ್ನಡವನ್ನೊಮ್ಮೆ ಆಸರೆಕೊಟ್ಟು ಹಿಡಿದೆತ್ತುವ ತೋಳುಗಳು ಬೇಕಾಗಿದೆ. ಆ ತೋಳುಗಳು ನಮ್ಮದಾಗಬೇಕಿದೆ. ಆಂಗ್ಲದ ನೇಣಿಗೆ ಸಿಲುಕಿಕೊಂಡ ಕನ್ನಡದ ಕೊರಳನ್ನು ಕುಣಿಕೆಯಿಂದ ಹೊರತೆಗೆಯುವ ಮನಗಳು ಬೇಕಾಗಿದೆ. ವರ್ಷಪೂರ್ತಿ ಕನ್ನಡಿಗರು ಕನ್ನಡದಲ್ಲೇ ಮುಳುಗೇಳುವ ಓಕುಳಿಯನ್ನು ಆಡಬೇಕಾಗಿದೆ.
ನಮ್ಮ ಕನ್ನಡಕ್ಕೆ ಎಂತಹ ಶಕ್ತಿಯಿದೆ ಎಂದು ತೋರಿಸುತ್ತಿರುವವರು ಯಾರು ಗೊತ್ತಾ…..ಸಾಕಷ್ಟು ಕಟ್ಟಿಕೊಂಡ ಸಾಹಿತ್ಯ ಕೂಟಗಳು…..ಅನೇಕ ಕನ್ನಡಪರ ಗುಂಪುಗಳು….ಪತ್ರಿಕೆಗಳು….ಮಾಧ್ಯಮಗಳು….ಸಾಮಾಜಿಕ ಜಾಲತಾಣಗಳಲ್ಲಿ ಹರಡಿಕೊಂಡ ಬಳಗಗಳು. ಅವುಗಳಲ್ಲಿ ಎಲ್ಲಿನೋಡಿದರೂ ಕನ್ನಡದ ಅಕ್ಷರಗಳು…..ಕವನಗಳು…ಕಥೆಗಳು…ಯೋಚನೆಗಳು ರಾರಾಜಿಸುತ್ತವೆ. ಈ ಕನ್ನಡ ಪರ ಬಳಗಗಳು ಬರಲಾಗಿ ಸಾಕಷ್ಟು ಜನ ಕನ್ನಡವನ್ನು ಟೈಪಿಸಲು ಕಲಿತರು. ಖುಷಿ ಪಟ್ಟರು . ಅನೇಕ ಬಳಗಗಳು ಕನ್ನಡವನ್ನು ಕಟ್ಟಿ ಬೆಳೆಸಲು ಪ್ರಯತ್ನ ಮಾಡುತ್ತಿವೆ. ಅವರಿಗೆ ನಾವೆಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಸಾಲದು.
ಎಲ್ಲ ತಾಯಂದಿರಲ್ಲೂ ನನ್ನ ಕೋರಿಕೆಯೆಂದರೆ ಪ್ರಾಥಮಿಕ ಹಂತದವರೆಗೆ ನಿಮ್ಮ ಮನೆಯ ಮಕ್ಕಳಿಗೆ ಕನ್ನಡ ಶಿಕ್ಷಣ ಕೊಡಿಸಿ ದಯಮಾಡಿ. ಇಂಗ್ಲಿಷ್ ಮಾತನಾಡಿದರೆ ಒಂದು ಹೆಮ್ಮೆ ಎನ್ನುವಂತೆ ಮಾತನಾಡುತ್ತಾರೆ…ಆದರೆ ನಮ್ಮ ಮನೆಯೊಳಗಿನ ಮಾತನಾಡುವ ಕನ್ನಡಪದಕ್ಕೆ ಅರ್ಥ ತಿಳಿಯದೆ ಒದ್ದಾಡುತ್ತಾರೆ. ಸರ್ಕಾರದ ಆದೇಶಗಳು ಕವಿಮನಸುಗಳಿಗೂ ಬೇಡ…ಕನ್ನಡಿಗರಿಗೂ ಬೇಡ .
ನಾವು ಭಾವುಕರಾಗಿರುವಷ್ಟೇ ಸತ್ಯದ ಜೊತೆಗೆ ನಮ್ಮ ಕನ್ನಡದ ಬಗ್ಗೆ ಕೆಚ್ಚೆದೆಯ ಬಿಚ್ಚುಮನಸುಗಳ ಕೊಡೋಣ. ನಮ್ಮತನವನ್ನು ನಾವು ಉಳಿಸಲಾರದೇ ಮತ್ತಾರು ಉಳಿಸಬೇಕು . ‘‘ ಬಾರಿಸು ಕನ್ನಡ ಡಿಂಡಿಮವ….ಓ ಕರ್ನಾಟಕ ಹೃದಯಶಿವ… ಓ ಕರ್ನಾಟಕ ಹೃದಯಶಿವ” ..ಎಂದು ಕುವೆಂಪುರವರು ಹೇಳಿದಂತೆ ಕನ್ನಡ ಡಿಂಡಿಮ ಬಾರಿಸುವ ಹೃದಯಗಳು ನಮ್ಮದಾಗಬೇಕು.
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ,,ಕನ್ನಡವೇ….ಸತ್ಯ , ಕನ್ನಡವೇ ….ನಿತ್ಯ..ಕನ್ನಡಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದ್ದರೆ….ನೀ ನಮಗೆ ಕಲ್ಪತರು….ಎನ್ನುವ ನುಡಿಗಳಲ್ಲಿ ಎಂತಹ ಬೇಡಿಕೆಯಿದೆ ನೋಡಿ.
ಮುಗ್ಧ ಮನಸು ನಮ್ಮ ಕನ್ನಡಿಗರದು. ಇಂತಹ ಮುಗ್ಧಮನಸಿನ ಗೋವುಗಳೇಕೆ ಆಂಗ್ಲದ ತುಳಿತಕ್ಕೆ ಶರಣಾಗತಿಯಾದರೆಂದು ತಿಳಿಯುತ್ತಿಲ್ಲ. ಹುಟ್ಟಿದ ಎಳೆಮಗುವನ್ನೂ ಇಂಗ್ಲೀಷ್ ಭಾಷೆಯಲ್ಲಿ ಮುದ್ದಾಡುವ ಈ ದುರಭಿಮಾನವನ್ನು ಮೊದಲು ಬಿಡಬೇಕು. ಒಂದು ಮಗುವಿಗೆ ಒಂದೇ ಸಮಯದಲ್ಲಿ ಬೆಳೆಯುತ್ತಾ ಹತ್ತು,,, ಹನ್ನೊಂದು ಭಾಷೆಗಳನ್ನು ಏಕಕಾಲದಲ್ಲಿ ಕಲಿಯುವ ಶಕ್ತಿ ಇರುತ್ತದೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಭಾಷೆಗಳನ್ನು ಒತ್ತಾಯ ಪೂರ್ವಕವಾಗಿ ತುಂಬಬೇಡಿ. ಚಂದದ ಮಾತೃಭಾಷೆ ಕಲಿಸಿ ಮಕ್ಕಳಿಗೆ. ಮೂರುವರ್ಷಗಳಾಗುವಂತಿಲ್ಲ ಅನಿವಾರ್ಯ ವೆಂದು ಕಾನ್ವೆಂಟ್ ಮುಖನೋಡುವ ಪೋಷಕರೇ ದಯಮಾಡಿ ಅಂತಹ ತಪ್ಪು ಮಾಡಬೇಡಿ. ಕಾನ್ವೆಂಟ್ ಗೆ ಹಾಕಿದರೂ ಮಾತೃಭಾಷಾಬೋಧನೆಯ ಶಾಲೆಗಳಿಗೆ ಸೇರಿಸಿರೆಂದೇ ತಮ್ಮಲ್ಲಿ ಮನವಿ. ಏಕೆಂದರೆ ತಳಪಾಯ ಮಕ್ಕಳಿಗೆ ಬಹಳ ಮುಖ್ಯ.
ಮನೆಯಲ್ಲಿ ಇರುವ ತಾಯಂದಿರಾದರೆ ಆರು ವರ್ಷಗಳ ತನಕ ಸೇರಿಸಬೇಡಿಎಂದೇ ನನ್ನ ಸಲಹೆ. ದಯಮಾಡಿ ಅಂತಹವರು ಮನೆಯಲ್ಲಿ ಶಿಕ್ಷಣ ಕೊಡಿ. ನಿಮಗೆ ತಿಳಿದ ಸಂಸ್ಕಾರ ಕೊಡಿ. ಏಕೆಂದರೆ ಆರು ದಾಟಿ ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದರೆ ಮುಂದೆ ನೀವು ಯಾವ ಸಂಸ್ಕಾರವನ್ನು ಕೊಡಲಾರಿರಿ. ನೀವು ಎಷ್ಟು ಬೇಗ ನಮ್ಮ ಮಗು ಜಾಣನಾಗುವನು ಎಂದು ದಬ್ಬಿಬಿಡುವಿರಿ. ಅದು ತಪ್ಪು. ಆಯಾ ವಯಸಿಗೆ ಎಷ್ಟು ಹಿಡಿದುಕೊಳ್ಳಲು ಸಾಧ್ಯವೋ ಅಷ್ಟೆ ಸಿದ್ಧಿಸಿಕೊಳ್ಳುತ್ತದೆ. ಒತ್ತಾಯವಾಗಿ ಮೃದುಮನಗಳಿಗೆ ತೊಂದರೆಕೊಡಬಾರದು. ಆಗ ತಾನೆ ಅರಳುತಿರುವ ಹೂಗಳವು. ನಮ್ಮ ಭಾಷೆಯಲ್ಲೇ ಸಂಸ್ಕಾರ….ಪಾಠ…ಹೇಳಿದರೆ ಅವಮಾನವೇ….ಯೋಚಿಸಿ. ನಾವೇಕೆ ಅಂಧಕಾರಕ್ಕೆ ಇಳಿಯುತ್ತಿದ್ದೇವೆಂದೂ ಪ್ರಶ್ನಿಸಿಕೊಳ್ಳಿ.
ನಾವು ನಮ್ಮದೆನ್ನುವ ಅಭಿಮಾನ ನಮ್ಮಲ್ಲಿ ಮೊದಲು ಚಿಗುರೊಡೆಯಬೇಕು. ಆಗ ನಮ್ಮಲ್ಲಿನ ಪ್ರತಿಭೆ ತಾನೇ ಸಾಕ್ಷಾತ್ಕಾರವಾಗುತ್ತದೆ. ಪ್ರತೀ ದಿನವು ಎಲ್ಲರ ಮನದಂಗಳದಲ್ಲಿ. ” ಹಚ್ಚೋಣ ಕನ್ನಡದ ದೀಪ ಕರುನಾಡದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ ಹಚ್ಚೋಣ ಕನ್ನಡದ ದೀಪ “
ಇಷ್ಟು ಹೊತ್ತು ಸಹೃದಯ ಕನ್ನಡಿಗರ ಮನದಲ್ಲಿ ಬೆಚ್ಚನೆಯ ಕನ್ನಡದ ತಿದಿಗಳನ್ನು ಒತ್ತುವ ಒಂದು ಸಣ್ಣ ಪ್ರಯತ್ನ ನನ್ನದಾಗಿತ್ತು. ಈ ಅಚ್ಚ ಕನ್ನಾಡಾಭಿಮಾನಿಯ ಹುಚ್ಚುನುಡಿಗಳಿಗೆ ನಿಮ್ಮ ನಯನಗಳನ್ನು ತೆರೆದು ಓದಿದ್ದಕ್ಕೆ ನನ್ನ ಸಾವಿರದ ಶರಣು. ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಜಾರಿಸುವಂತಹ ನುಡಿಗಳನ್ನು ನಾನು ಹೇಳಿಲ್ಲ ಎಂದು ಭಾವಿಸುವೆ. ಕನ್ನಡವು ನಿಜವಾಗಿ ಉಳಿಯುತಿರುವುದು ನಿಮ್ಮಂಥ ಸಹೃದಯ ಓದುಗರಿಂದ, ಬರಹಗಾರರಿಂದ….ಬೆಳೆಸುತ್ತಿರುವ ಇಂತಹ ಬಳಗಗಳಿಂದ . ನನಗೆ ಒಂದಷ್ಟು ಅನಿಸಿಕೆಗಳನ್ನು…. ಭಾಗ್ಯಾಂತರಂಗದ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಟ್ಟವರಿಗೆ ಧನ್ಯವಾದಗಳು.
– ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ
ಪ್ರಕಟಣೆಗಾಗಿ ಧನ್ಯವಾದಗಳು ಮೇಡಂ
ಮುದತಂದ ಲೇಖನ.. ಹಳೆಯ ಕನ್ನಡ ದ ಕಟ್ಟಾಳುಗಳ..
ಭಾಷಾಭಿಮಾನ..ನಾಡಿನ ಐಸಿರಿ..ಅವರ ಬಯಕೆ ಸಂದೇಶ ಚೆನ್ನಾಗಿ ಮೂಡಿಬಂದಿದೆ… ಹಾಗೇ ನಮ್ಮ ನೆನಪನ್ನು ಕೆದಕಿತು..ಸೋದರಿ..
ಚೆನ್ನಾಗಿದೆ ಬರಹ
ಕನ್ನಡ ಭಾಷೆಯನ್ನು ನಿರಂತರ ಉಳಿಸಿ ಬೆಳೆಸಬೇಕೆಂಬ ಹಂಬಲ ಹೊತ್ತ ಸೊಗಸಾದ ಬರಹ.