ವಾಟ್ಸಾಪ್ ಕಥೆ 38 : ಅವಕಾಶ
ಒಂದೂರಿನಲ್ಲಿ ಒಬ್ಬ ಬಡ ರೈತನಿದ್ದನು. ಅವನು ತನಗಿದ್ದ ತುಂಡು ಹೊಲದಲ್ಲಿ ಕಷ್ಟಪಟ್ಟು ದುಡಿಯುತ್ತಾ ಬಂದಿದ್ದರಿಂದಲೇ ಜೀವನ ಸಾಗಿಸುತ್ತಿದ್ದ. ವರ್ಷಗಳುರುಳಿದಂತೆ ಮಳೆ ಬೀಳುವುದು ಕಡಿಮೆಯಾಗಿ, ಕೆಲವು ವರ್ಷಗಳು ಮಳೆಯೇ ಇಲ್ಲದೆ ಬರಗಾಲ ಬಂದೊದಗಿತು. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಎದ್ದಿತು. ರೈತನ ಬದುಕು ಇದರಿಂದಾಗಿ ಮತ್ತೂ ಸಂಕಷ್ಟಕ್ಕೊಳಗಾಯಿತು. ದಿನಗಳನ್ನು ಕಳೆಯುವುದು ಅಸಾಧ್ಯವಾಯಿತು.
ರೈತನಿಗೆ ಅಪಾರ ದೈವಭಕ್ತಿ. ಅವನು ದಿನನಿತ್ಯ ದೇವರನ್ನು ಭಕ್ತಿಯಿಂದ ಪ್ರಾರ್ಥಿಸುತ್ತಾ ತನ್ನ ಕಷ್ಟಗಳನ್ನು ಪರಿಹಾರ ಮಾಡುವಂತೆ ಬೇಡುತ್ತಿದ್ದ. ಹೀಗೆಯೇ ಮಾಡುತ್ತಿರುವಾಗ ಒಂದುದಿನ ಅವನಿಗೆ ಅಶರೀರವಾಣಿಯೊಂದು ಕೇಳಿಸಿತು. ”ಭಕ್ತಾ, ನಿನಗೆ ಈ ದಿನ ಕಾಡಿನಲ್ಲಿ ನಿಧಿಯೊಂದು ಲಭಿಸಲಿದೆ. ಅದನ್ನು ತೆಗೆದುಕೊಂಡು ಬಂದು ನೀನು ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳಬಹುದು”
ಆಗ ರೈತನು ”ದೇವರೇ, ನಿಧಿ ಎಲ್ಲಿ? ಮತ್ತು ಹೇಗೆ ದೊರೆಯುತ್ತದೆ?” ಎಂದು ಪ್ರಶ್ನೆ ಮಾಡಿದ. ಆದರೆ ಅದಕ್ಕೆ ಪ್ರತ್ಯುತ್ತರ ಬರಲಿಲ್ಲ.
ಹೋಗಲಿ ಬಿಡು ದೇವರೇ ಹೇಳಿದ್ದಾನೆಂದರೆ ಅದು ಸುಳ್ಳಾಗಲಾರದು ಎಂದು ಭಾವಿಸಿ ಮತ್ತೊಮ್ಮೆ ಕೈಮುಗಿದು ಹೊರನಡೆದ.
ದೇವನ ಆದೇಶದಂತೆ ಮನೆಯಿಂದ ಹೊರಟು ಕಾಡನ್ನು ಹೊಕ್ಕ ರೈತನ ಕಾಲಿಗೆ ಏನೋ ಚೂಪಾದದ್ದು ತೊಡರಿತು. ಎಡವಿದ ರೈತನು ‘ತಥ್’ ಎಂದಂದುಕೊಂಡು ಕಾಲ್ಬೆರಳತ್ತ ನೋಡಿಕೊಂಡ. ಹೆಬ್ಬೆರಳು ಕಿತ್ತು ರಕ್ತ ಒಸರಿತ್ತು. ‘ಛೇ ಛೇ ಈ ಕಾಡಿನಲ್ಲಿ ಬರೀ ಕಲ್ಲು ಮುಳ್ಳುಗಳೇ ಸಿಗುತ್ತವೆ. ನಿಧಿ ಎಲ್ಲಿಯೂ ಗೋಚರಿಸುತ್ತಿಲ್’ಲ ಎಂದುಕೊಂಡು. ಹೆಗಲ ಮೇಲಿದ್ದ ಬಟ್ಟೆಯಿಂದ ಒಂದಿಷ್ಟು ಹರಿದು ಕಾಲಿನ ಬೆರಳಿಗೆ ಸುತ್ತಿ ಮುನ್ನಡೆದ. ಅವನಿಗೆ ಕಾಲು ಎಡವಿದ್ದು, ಗಾಯವಾಗಿದ್ದೇ ಮನಸ್ಸಲ್ಲಿ ತುಂಬಿತ್ತು ಅದರ ಬಗ್ಗೆಯೇ ಚಿಂತಿಸುತ್ತಾ ಸ್ವಲ್ಪ ದೂರ ನಡೆಯುತ್ತಿದ್ದ. ಒಂದು ಮರದ ಮೇಲೆ ಕುಳಿತಿದ್ದ ಕೋತಿಯೊಂದು ದಪ್ಪದಾದ ತೂಕವಿದ್ದ ಗಂಟೊಂದನ್ನು ಎತ್ತಿ ಕೆಳಕ್ಕೆಸೆಯಿತು. ಅದು ನಡೆಯುತ್ತಿದ್ದ ರೈತನ ತಲೆಗೆ ಸರಿಯಾಗಿ ತಾಗಿತು. ಪೆಟ್ಟು ಜೋರಾಗಿದ್ದು ತಲೆ ದಿಮ್ಮೆಂದಿತು. ತಲೆ ಮುಟ್ಟಿ ನೋಡಿಕೊಂಡ. ಅಲ್ಲಿಯೂ ಸ್ವಲ್ಪ ಗಾಯವಾದಂತೆನ್ನಿಸಿತು. ಕೊಂಚಹೊತ್ತು ನೆರಳಿನಲ್ಲಿ ವಿಶ್ರಮಿಸಿಕೊಂಡ. ಬಾಯಾರಿಕೆಯಿಂದ ಬಳಲಿದ. ಎಲ್ಲಿಯಾದರೂ ನೀರಿನ ತಾಣವಿದೆಯೇ? ಎಂದು ಹುಡುಕತೊಡಗಿದ. ಹತ್ತಿರದಲ್ಲಿಯೇ ಒಂದು ಕಲ್ಯಾಣಿ ಕಾಣಿಸಿತು. ಖುಷಿಯಾಯಿತು. ಗಾಯಗಳಿಂದಾದ ರಕ್ತದ ಕಲೆಗಳನ್ನು ತೊಳೆದುಕೊಂಡ. ಕೈಕಾಲುಗಳಿಗೆ ತಣ್ಣನೆಯ ನೀರು ಹಾಕಿಕೊಂಡು ಸುಧಾರಿಸಿಕೊಂಡ. ಮುಖ ತೊಳೆದು ಸರ್ವಚ್ಛವಾದ ನೀರನ್ನು ಸಾಕಾಗುವಷ್ಟು ಕುಡಿದ. ದಾಹ ಪರಿಹಾರವಾಯಿತು. ಅವನಿಗೆ ಕಾಲು, ತಲೆಗೆ ಬಿದ್ದ ಪೆಟ್ಟುಗಳನ್ನು ಬಿಟ್ಟು ಬೇರೇನೂ ಯೋಚನೆಗಳೇ ಬರಲಿಲ್ಲ. ‘ಈದಿನ ದೇವರ ಮಾತೆಂದು ನಂಬಿ ಕಾಡಿಗೆ ಬಂದದ್ದೇ ವ್ಯರ್ಥವಾಯಿತು. ಸುಮ್ಮನೆ ನೋವು, ಆಯಾಸವಷ್ಟೇ. ಮನೆಗಾದರೂ ಹಿಂದಿರುಗೋಣ’ ಎಂದುಕೊಂಡು ಮನೆಯ ಕಡೆಗೆ ಹೆಜ್ಜೆ ಹಾಕಿದ. ಆಯಾಸದಿಂದ ವಿಶ್ರಾಂತಿಗೆ ಮೊರೆಹೋದ.
ಮತ್ತೆ ಮಾರನೆಯ ದಿನ ಪದ್ಧತಿಯಂತೆ ಬೆಳಗಿನ ಪ್ರಾರ್ಥನೆಗೆ ತೊಡಗಿದ. ”ಆಗ ದೇವರೇ ನಿನ್ನನ್ನೇ ನಂಬಿದ ನನಗೆ ಹೀಗೆ ಮಾಡಬಹುದೇ? ನಾನೇನು ಅಪರಾಧ ಮಾಡಿದೆನೆಂದು ನೀನು ನನಗೆ ಸುಳ್ಳು ಹೇಳಿದೆ” ಎಂದು ಹೇಳಿಕೊಂಡ.
ತಕ್ಷಣ ಅಶರೀರವಾಣಿ ಕೇಳಿಬಂತು ”ನಾನೇನು ಸುಳ್ಳು ಹೇಳಿದೆ?”
”ಭಗವಂತಾ ಇದೇನಪ್ಪಾ ನಿನ್ನ ಲೀಲೆ? ನನ್ನ ಕಾಲಿಗೆ ಗಾಯವಾಯಿತು, ತಲೆಗೆ ಪೆಟ್ಟಾಯಿತು. ಸುಸ್ಥಾಗಿ ಮನೆ ಸೇರಿದೆ. ನೀನು ಹೇಳಿದಂತೆ ನಿಧಿ ಎಲ್ಲಿಯೂ ದೊರೆಯಲೇ ಇಲ್”ಲ ಎಂದು ನಿರಾಶೆ ವ್ಯಕ್ತಪಡಿಸಿದ.
ಆಗ ಭಗವಂತನು ”ನಾನು ಸುಳ್ಳಾಡಲಿಲ್ಲ. ನಿನಗೆ ನಿಧಿ ಸಿಗುವ ಮೂರು ಅವಕಾಶಗಳನ್ನು ಒದಗಿಸಿದೆ. ಆದರೆ ನೀನು ಅವುಗಳನ್ನು ಉಪಯೋಗಿಸಿಕೊಳ್ಳಲಿಲ್ಲ. ಅದನ್ನು ಬಿಟ್ಟು ನನ್ನನ್ನೇ ದೂರುತ್ತಿದ್ದೀಯೆ” ಎಂದನು.
”ಭಗವಂತಾ ಒಂದು ಸಾರಿಯೂ ನಿಧಿಯು ನನ್ನ ಕಣ್ಣಿಗೇ ಕಾಣಲಿಲ್ಲವಲ್ಲಾ. ನಿನ್ನ ಮಾತು ಎಷ್ಟು ನಿಜವೆಂದು ನಂಬಲಿ ”ಎಂದು ಪ್ರಶ್ನಿಸಿದ.
”ಹುಚ್ಚಾ ಮೊದಲನೆಯ ಬಾರಿ ನಿನ್ನ ಕಾಲಿಗೆ ಏನೋ ತೊಡರಿತು. ನೀನು ನಿನ್ನ ಕಾಲಿಗಾದ ಪೆಟ್ಟಿನ ಬಗ್ಗೆ ಮಾತ್ರ ಯೋಚಿಸಿದೆ. ಕಾಲಿಗೆ ತೊಡರಿದ್ದೇನು ಎಂದು ಪರಿಶೀಲಿಸುವ ಗೋಜಿಗೇ ಹೋಗಲಿಲ್ಲ. ಅದೊಂದು ರತ್ನಾಭರಣಗಳಿಂದ ತುಂಬಿದ್ದ ಬಿಂದಿಗೆಯ ಕಂಠ. ನೆಲದಲ್ಲಿ ಹುಗಿದಿತ್ತು. ಅದನ್ನು ಕಳೆದುಕೊಂಡೆ, ಹೋಗಲಿ ಎಂದು ಮತ್ತೆ ಕೋತಿಯ ಕೈಯಿಂದ ಬಂಗಾರದ ನಾಣ್ಯಗಳಿದ್ದ ಗಂಟನ್ನು ನಿನ್ನತ್ತ ಎಸೆಯುವಂತೆ ಮಾಡಿದೆ. ಅದು ನಿನ್ನ ತಲೆಗೆ ಪೆಟ್ಟು ಮಾಡಿತು ಎಂದು ಆಲೋಚಿಸಿದೆಯೇ ಹೊರತು ಗಂಟಿನಲ್ಲಿ ಏನಿದೆಯೆಂದು ನೀನು ತೆರೆದು ನೋಡಲೇ ಇಲ್ಲ. ಅದೂ ವ್ಯರ್ಥವಾಯಿತು. ನೀರನ್ನು ಅರಸುತ್ತಾ ಕಲ್ಯಾಣಿಗೆ ಬಂದೆ. ಅಲ್ಲಿ ನೀರು ಸ್ಫಟಿಕಶುದ್ಧವಾಗಿತ್ತು. ನೀನು ಕೈಕಾಲು ಮುಖ ತೊಳೆದುಕೊಂಡೆ, ನೀರನ್ನು ಕುಡಿದೆ. ಕೊಳದ ನೀರಿನಲ್ಲಿ ಏನು ಕಾಣುತ್ತದೆಯೆಂದು ದಿಟ್ಟಿಸಿ ನೋಡಲೇ ಇಲ್ಲ. ನೀರಿನಲ್ಲಿ ವಜ್ರದ ಹರಳುಗಳು, ಬೆಲೆಬಾಳುವ ಮುತ್ತು ರತ್ನಗಳನ್ನು ಇರಿಸಿದ್ದೆ. ನೀನವನ್ನು ನೋಡಲೇ ಇಲ್ಲ. ನಿನಗೆ ನಿನ್ನ ಗಾಯದ ನೋವು, ಆಯಾಸವಷ್ಟೇ ಮುಖ್ಯವಾಯಿತೇ ಹೊರತು ಎಲ್ಲ ಸಾರಿಯೂ ಕುತೂಹಲದಿಂದ ಪರಿಶೀಲಿಸದೇ ಸಿಗಬಹುದಾದ ನಿಧಿಯನ್ನು ಕಳೆದುಕೊಂಡೆ. ನಿನ್ನ ಹಣೆ ಬರಹದಲ್ಲಿ ಕಷ್ಟಪಡುವುದು ಮಾತ್ರ ಇದ್ದಹಾಗಿದೆ. ಹಾಗೆಂದು ನಾನು ಸುಮ್ಮನಾದೆ” ಎಂದು ಭಗವಂತನು ಉತ್ತರಿಸಿದನು. ಇವೆಲ್ಲವನ್ನೂ ಕೇಳಿದ ರೈತ ”ಅಯ್ಯೋ ! ಎಂಥಹ ಕೆಲಸವಾಯಿತು. ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಯ್ತು ” ಎಂದುಕೊಂಡು ಪಶ್ಚಾತ್ತಾಪ ಪಟ್ಟುಕೊಂಡನು.
ಹೀಗೆ ದೇವರು ನಮಗೆ ನಮ್ಮ ಉದ್ಧಾರವಾಗಲೆಂದು ಅನೇಕ ಅವಕಾಶಗಳನ್ನು ನೀಡುತ್ತಾನೆ. ನಾವು ಅದನ್ನು ಗುರುತಿಸಿ ಸದುಪಯೋಗ ಮಾಡಿಕೊಳ್ಳಬೇಕಾದದ್ದು ನಮ್ಮ ಕೈಯಲ್ಲೇ ಇದೆ. ಅದು ಬಿಟ್ಟು ದೇವರನ್ನು ದೂರುವುದು ಸರಿಯಲ್ಲ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಸುಂದರವಾದ ಕಥೆ
ತುಂಬಾ ಚೆನ್ನಾಗಿದೆ ಕಥೆ. ಎಂದಿನಂತೆ ಉತ್ತಮ ಸಂದೇಶವನ್ನು ಒಳಗೊಂಡಿದೆ.
ತುಂಬಾ ಒಳ್ಳೆಯ ಸಂದೇಶವನ್ನು ಹೊತ್ತ ಸುಂದರ ಕಥೆ…ಎಂದಿನಂತೆ ಚಂದ! ಧನ್ಯವಾದಗಳು…ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಧನ್ಯವಾದಗಳು ಗಾಯತ್ರಿ ಮೇಡಂ ನಯನಾ ಮೇಡಂ
ತುಂಬಾ ಚಂದದ ಸಂದೇಶ ಹೊತ್ತ ಸುಂದರ ಕಥೆ. ಅದಕ್ಕೇ ಹಿರಿಯರು ಹೇಳುವುದು – ಕಣ್ಣಿದ್ದೂ ಕುರುಡಾಗಬಾರದು – ಎಂದು. ಅಭಿನಂದನೆಗಳು.
ಧನ್ಯವಾದಗಳು ಪದ್ಮಾ ಮೇಡಂ