ಜೇನು-ಅಡಳಿತ ವ್ಯವಸ್ಧೆ
ಜೇನ್ನೊಣಗಳ ಪರಿಸರ ಒಂದು ಅದ್ಭುತ ಲೋಕ. ಅವುಗಳ ಪ್ರಸಿದ್ಧಿಯ ಬಗ್ಗೆ ಬರೆದರೆ ದೊಡ್ಡ ಗ್ರಂಥವಾದೀತು. ಯಾವುದೇ ಭಾಗದಲ್ಲಿ ಸಾವಿರಾರು ಜೇನ್ನೊಣಗಳು ಸಾವನ್ನಪ್ಪಿದ್ದರೆ ಪರಿಸರದಲ್ಲಿ ಏರುಪೇರಾಗಿದ್ದರ ಒಂದು ಸ್ಪಷ್ಟ ಚಿತ್ರಣ ಕಾಣುತ್ತದೆ. ಜೇನ್ನೊಣದ ನಾಶವಾದರೆ ಈ ಮನುಕುಲದ ಕೊನೆಯೂ ಬಂತೆಂದೇ ಭಾವಿಸಬಹುದು ಎಂಬ ಪರಿಣಿತರ ಮಾತಿದೆ. ಇದರಿಂದಾಗಿಯೇ ಜೇನು ಸಾಕಣಿಯ ಪ್ರವರ್ತಕ ಅಂಟನ್ ಜನ್ಯಾ ಅವರ ಜನ್ಮದಿನದ ನೆನಪಿಗೆ ವಿಶ್ವಸಂಸ್ಧೆಯು ಮೇ 20 ರಂದು ಪ್ರತಿವರ್ಷ ‘ವಿಶ್ವ ಜೇನುನೊಣ ದಿನ’ ವನ್ನಾಗಿ ಆಚರಿಸಲು ನಿರ್ಧರಿಸಿದೆ.
ಮೇನೇಂಜ್‌ಮೆಂಟ್ ತರಗತಿಗಳಲ್ಲಿ ಮೊದಲು ಪ್ರಸ್ತಾಪಿಸುವುದೇ ಜೇನುನೊಣದ ಬಗ್ಗೆ. ಇವನ್ನು ಸಂಘಜೀವಿ, ಚತುರತೆ, ಕಾರ್‍ಯತತ್ಪರತೆ, ಪಾಳಿಬದಲಾವಣೆ, ಕರ್ತವ್ಯನಿಷ್ಠೆ, ಸಮಯ ಪರಿಪಾಲನೆ, ತೀಕ್ಷ್ಣತೆ, ಆಜ್ಞಾಪಾಲನೆ. ಇವೆಲ್ಲವು ಅಡಳಿತ ವ್ಯವಸ್ಧೆಯ ಕೈಗನ್ನಡಿ. ಪೀಟರ್ ಡ್ರೆಕರ್ ಎಂಬ ಖ್ಯಾತ ಮ್ಯಾನೆಂಜ್‌ಮೆಂಟ್ ಗುರುವಿನ ಭಾಷೆಯಲ್ಲೇ ಹೇಳುವುದಾರೆ ”Management is doing things right. Leadership is doing right things. But BEES are managers par excellence.”. ಜೇನ್ನೊಣಗಳನ್ನು ನೋಡಿ ಕಲಿಯಬೇಕಾಗದುದು ಬಹಳ ಇವೆ.
ಜೇನುನೊಣಗಳಿಗೆ ವಿಶ್ರಾಂತಿ, ರಿಲ್ಯಾಕ್ಸ್‌ನಲ್ಲಿ ನಂಬಿಕೆಯೇ ಇಲ್ಲ. ಗಡಿಯಾರ ನೋಡಿ ಕೆಲಸ ಮಾಡುವುದಿಲ್ಲ. ಬೆಳಗ್ಗೆಯಿಂದ ಸಾಯಂಕಾಲದವರೆಗೆ ನಿರಂತರ ಕೆಲಸ, ವರ್ಷಪೂರ್ತಿ ಕೆಲಸ, ಕೆಲಸ ಕದ್ದು ಗೊತ್ತೇ ಇಲ್ಲ. ಅವುಗಳ ಉಸ್ತುವಾರಿಗೆ ಯಾರು ಬೇಕಿಲ್ಲ, ಕಣ್ಗಾವಲು ಇಡಬೇಕಿಲ್ಲ. ಅದಕ್ಕೊಂದೇ ಗೊತ್ತಿರುವುದು ಸರಿಯಾದ ಹೂವನ್ನು ಆರಿಸಿ ಮಕರಂದವನ್ನು ಹೀರಿ ಜೇನು ಉತ್ಪಾದನೆ! ಅರ್ಧ ಕೆ.ಜಿ. ಜೇನುತುಪ್ಪ ತಯಾರಿಸಲು ಸುಮಾರು ಮುನ್ನೂರು ಹುಳಗಳು ಎಂಬತ್ತೆಂಟು ಸಾವಿರ ಕಿ.ಮೀ. ಪ್ರಯಾಣಿಸಿ, ಹತ್ತು ಲಕ್ಷ ಹೂವುಗಳ ಮೇಲೆ ಕುಳಿತು ಮಕರಂದ ಹೀರಿ ಗೂಡಿಗೆ ತರುತ್ತದೆ ಎಂಬ ಅಂದಾಜಿದೆ ಎಂದರೆ ಅವುಗಳ ಕಾರ್‍ಯಕ್ಷಮತೆಯ ಅರಿವಾದೀತು.
ಇನ್ನು ಜೇನುಹುಳಗಳು ಪ್ರಕೃತಿಯ ಪ್ರಚಂಡ ಟೀಮ್ ಪ್ಲೇಯರ್‌ಗಳು. ಉದಾಹರಣೆಗೆ ಸುಮಾರು ಐವತ್ತು ಸಾವಿರ ಹುಳುಗಳು ಒಂದು ಗೂಡಿನಲ್ಲಿದ್ದರೆ ಗೂಡುಗಳ ಹಿತರಕ್ಷಣೆ ಮಾಡುತ್ತದೆ. ಒಂದು ಹುಳು ಕಷ್ಟದಲ್ಲಿದ್ದರೆ ಅದರ ಕೆಲಸವನ್ನು ಉಳಿದವು ಮಾಡುತ್ತದೆ. ಹುಳದ ಹಿತಾಸಕ್ತಿಗಾಗಿ ಉಳಿದವು ಪರದಾಡುತ್ತವೆ. ಒಂದು ಸಂಘಟಿತ ತಂಡ ಹೇಗೆ ಕೆಲಸ ಮಾಡಬೇಕೆಂದುದಕ್ಕೆ ಜೇನು ಒಂದು ಉತ್ತಮ ಉದಾಹರಣೆ. ತಾವು ಸತ್ತಾದರೂ ತಮ್ಮ ಗೂಡಿನ ಹುಳಗಳ ರಕ್ಷಣೆ ಮಾಡುತ್ತವೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆಗೆ ಉತ್ತಮ ಉದಾಹರಣೆ ಈ ಜೇನ್ನೊಣಗಳು.
ಜೇನ್ನೊಣಗಳು ಪರೋಪಕಾರಿಗಳು. ಪರಾಗಸ್ಪರ್ಶ ಕಾರ್‍ಯದಲ್ಲಿ ಇವುಗಳ ಪಾತ್ರ ಅದ್ವಿತೀಯ. ಜೇನ್ನೊಣಗಳು ಇಲ್ಲದಿದ್ದಲ್ಲಿ ಪ್ರಾಯಶಃ ರೈತರ ಜೀವನ ಕಂಗಾಲಾಗುವುದು ನಿಶ್ಚಿತ. ಇವು ತಮ್ಮ ಲಾಭಕ್ಕಾಗಿ ಇದನ್ನು ಮಾಡುವುದಿಲ್ಲ ಎಂಬುದು ನಿಜಕ್ಕೂ ಶ್ಲಾಘನೀಯ. ಶೇಕಡ ೭೦ ಪರಾಗಸ್ಪರ್ಶ ಜೇನು ಹುಳುಗಳಿಂದಲೇ ಆಗುತ್ತವೆ ಎಂದರೆ ಅವುಗಳ ಪ್ರಾಧಾನತ್ಯೆಯ ಅರಿವಾದೀತು.
ಜೇನ್ನೊಣಗಳು ಏಕಕಾಲಕ್ಕೇ ಹಲವು ಕೆಲಸಗಳನ್ನು (ಒUಐಖಿI ಖಿಂSಏIಓಉ) ಮಾಡುವುದಿಲ್ಲ ಅದು ಏಕಾಗ್ರಚಿತ್ತ. ಒಂದು ಕೆಲಸ ವಹಿಸಿದರೆ ಅದನ್ನೇ ಮಾಡುತ್ತಿರುತ್ತದೆ, ಅದೂ ನಿಯತ್ತಾಗಿ. ಎಲ್ಲಾ ಹುಳುಗಳು ಕೆಲಸಕ್ಕೆ ಹೋಗುವುದಿಲ್ಲ ಕೆಲ ಹುಳುಗಳು ಗೂಡಿನ ನಿರ್ವಹಣೆಗೆ ನಿಯೋಜಿಸಲ್ಪಟ್ಟಿರುತ್ತದೆ. ಇವುಗಳು ಗೂಡಿನ ಶುಚಿತ್ವ, ವಿಸ್ತರಣೆ ಇತ್ಯಾದಿಗಳನ್ನು ನೋಡುತ್ತವೆ. ಜೇನುಗಳು ಸುಖಾಸುಮ್ಮನೆ ಗೂಡನ್ನು ವಿಸ್ತರಿಸುವ ಗೋಜಿಗೆ ಹೋಗುವುದಿಲ್ಲ. ಅವುಗಳಿಗೆ ಅಂತಹ ದುರಾಸೆ ಮಾನವರಂತೆ ಇಲ್ಲ. ಹುಳುಗಳ ಸಂಖ್ಯೆ ಹೆಚ್ಚಾದರೆ, ಆಹಾರ ದಾಸ್ತಾನಿಗೆ ಜಾಗಬೇಕಾದರೆ, ಹವಾಮಾನ ವೈಪರಿತ್ಯವಾಗಿ ಅಹಾರ ಅಭಾವ ತೊಂದರೆ, ನೈಸರ್ಗಿಕ ವಿಪತ್ತಿನ ಅಪಾಯದ ಸುಳಿವು ಸಿಕ್ಕಿದರೆ ಮಾತ್ರ ಅವುಗಳ ಗೂಡನ್ನು ವಿಸ್ತರಿಸುತ್ತವೆ. ಇವು ಯಾವ ಪರಿಸರಕ್ಕಾದರೂ ಹೊಂದಿಕೊಳ್ಳಬಹುದು. ಮರವಾಗಲೀ, ಕಾಂಕ್ರೀಟ್ ಗೋಡೆಯಾದರೂ ಇವು ಗೂಡುಕಟ್ಟಬಲ್ಲದು. ಇದು ಮನುಷ್ಯರಿಂದ ಸುಲಭ ಸಾಧ್ಯವಲ್ಲ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋದರೆ ತಕ್ಷಣ ಅಂಥಹ ಪರಿಸರಕ್ಕೆ ಹೊಂದಿಕೂಂಡು ತಮ್ಮ ಕೆಲಸವನ್ನು ತಕ್ಷಣ ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಜೇನುಹುಳಗಳು ಸಂಜೆ ಕತ್ತಲಾಗುತ್ತಿದ್ದಂತೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಲಸೆ ಹೋಗುತ್ತವೆ ಮತ್ತು ಆ ಪರಿಸರಕ್ಕೆ ತಕ್ಷಣ ಹೊಂದಿಕೊಳ್ಳುತ್ತವೆ. ಇದು ಕೂಡ ಆಡಳಿತ ಕಾರ್‍ಯ ನಿರ್ವಹಣೆ (Management) ಗೆ ಒಂದು ಉತ್ತಮ ಊದಾಹರಣೆ ಹಾಗೂ ಪಾಠ.
ಎಲ್ಲಕ್ಕಿಂತ ರಾಣಿಜೇನಿನ ಪಾತ್ರ ಅದ್ಭುತವಾದುದ್ದು. ಇದು ಕಾರ್ಪೋರೇಟ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರ ವೃತ್ತಿಯನ್ನೂ ಮೀರಿದ್ದು. ಎಲ್ಲಕಡೆ ಕಾರ್ಮಿಕರು, ಸೈನಿಕರು, ನೌಕರರು ತಮ್ಮ ಯಜಮಾನನ ಆಜ್ಞೆಯನ್ನು ಉಲ್ಲಂಘಿಸಬಹುದು. ಆದರೆ ರಾಣಿಜೇನಿನ ಆದೇಶವನ್ನು ಗೂಡಿನಲ್ಲಿರುವ ನಲವತ್ತು, ಐವತ್ತು ಸಾವಿರ ಹುಳುಗಳು ಯಾವ ಕಾರಣಕ್ಕೂ ಉಲ್ಲಂಘಿಸುವುದಿಲ್ಲ. ರಾಣಿ ಒಂದು ಜಾಗದಿಂದ ಇನ್ನೊದು ಜಾಗಕ್ಕೆ ವಲಸೆ ಹೋಗಬೇಕೆಂದು ನಿರ್ಧರಿಸಿದರೆ ಉಳಿದವು ಎದುರು ಮಾತಾಡದೆ ಹಿಂಬಾಲಿಸುತ್ತವೆ. ಈ ರೀತಿಯ ಶಿಸ್ತು ಜಗತಿನ ಯಾವ ಜೀವಿಯಲ್ಲೂ ಕಾಣಿಸುವುದಿಲ್ಲ. ರಾಣಿ ಹುಳು ಸುಪ್ರೀಂ ಆದರೂ ಅದೂ ಸಹ ಇನ್ನಿತರ ಹುಳುಗಳಂತೆ ಕಾರ್‍ಯತತ್ಪರತೆಯಲ್ಲಿರುತ್ತದೆ. ಅದು ಪ್ರಧಾನ ಸೇವಕಿ ಎಂದೇ ಪರಿಗಣಿಸುತ್ತದೆ.
ಜೇನುಹುಳುಗಳ ಸಂಪರ್ಕ ವ್ಯವಸ್ಥೆ ಸಾಮಾಜಿಕ ಜಾಲತಾಣದ ಸಾವಿರಪಟ್ಟು ಅಧಿಕ. ಪರಿಸರದಲ್ಲಿ, ಅಪಾಯ ಪರಿಸ್ಥಿತಿಯಲ್ಲಿ ಯಾವ ಚಿಕ್ಕ ಬದಲಾವಣೆಯಾದರೂ ಕ್ಷಣಾರ್ಧದಲ್ಲಿ ಎಲ್ಲ ಹುಳುಗಳಿಗೂ ಸುದ್ದಿ ಪ್ರಸಾರವಾಗುತ್ತದೆ. ಉದಾಹರಣೆ ವಲಸೆ ಸಮಯದಲ್ಲಿ ರಾಣಿ ಹುಳುವಿನ ಅದೇಶ ಬದಲಾವಣೆಯಾದರೆ ಹದಿನೈದು ಸೆಕೆಂಡಿನಲ್ಲಿ ಆದೇಶ ಎಲ್ಲ ಹುಳುಗಳನ್ನು ತಲುಪಿ ಆದೇಶ ಪಾಲನೆಯಾಗುತ್ತದೆ. ಗೂಡುಗಳ ಮೇಲೆ ಮನುಷ್ಯ ಅಥವಾ ಇತರೇ ದಾಳಿಗೊಳಗಾದರೆ ಎಲ್ಲ ಹುಳುಗಳು ಕಚ್ಚುವುದಿಲ್ಲ. ಕಾರಣ ಕಚ್ಚಿದರೆ ಪ್ರಾಣ ಹೋಗುತ್ತದೆ. ಕೆಲವು ಮಾತ್ರ ಈ ಕಾರ್‍ಯ ನಿರ್ವಹಿಸುತ್ತದೆ.
ಜೇನುಗೂಡಿನ ಹುಳುಗಳ ಕರ್ತವ್ಯ ಆಗಾಗ ಬದಲಾವಣೆಯಾಗುತ್ತಿರುತ್ತವೆ. ಅವು ದಾದಿಗಳಾಗಿ, ಉಸ್ತುವಾರಿಯಾಗಿ, ಸ್ವಚ್ಚತಾ ಕಾರ್ಮಿಕನಾಗಿ, ಜೇನುಹಟ್ಟಿ (HONEY COMB) ರಚನಾಕಾರರಾಗಿ, ನಿರ್ಮಾಣಕಾರರಾಗಿ, ಜೇನುಗೂಡಿನ ರಕ್ಷಣಾಪಡೆಯ ಸಿಪಾಯಿಯಾಗಿ ಹೀಗೆ ಹತ್ತು ಹಲವಾರು ಕಾರ್‍ಯಗಳನ್ನು ಪಾಳಿಯ ಮೂಲಕ ನೆರವೇರಿಸಿಕೊಳ್ಳುತ್ತಿರುತ್ತವೆ. ಈ ಕಾರ್‍ಯ ಕಾಲಕಾಲಕ್ಕೆ ಬದಲಾಗುತ್ತಿರುವುದು ನಿಜಕ್ಕೂ ವಿಸ್ಮಯಕರ. ಕಛೇರಿಯಲ್ಲಿ, ಕಾರ್ಖಾನೆಯಲ್ಲಿ ಈ ರೀತಿಯ ಬದಲಾವಣೆ ಮಾಡಲು ಖಂಡಿತ ಸಾಧ್ಯವಿಲ್ಲ. ಮಾಡಲು ಹೊರಟರೆ ಮುಷ್ಕರದ ಬಿಸಿ ತಟ್ಟಬಹುದು. ಜೇನು ಪ್ರತಿದಿನ ಪಾಳಿಬದಲಾದರೂ ಬೇಸರಿಸದೆ ತಮ್ಮ ಕಾರ್‍ಯ ನಿರ್ವಹಿಸುತ್ತದೆ. ಅವುಗಳ ಕಾರ್‍ಯ ಶುದ್ಧ ಹಾಗೂ ನೂರಕ್ಕೆ ನೂರು ಕಾರ್‍ಯಮಗ್ನ ಅದರಿಂದಲೇ ಜೇನುತುಪ್ಪ ಸಾವಿರ ವರ್ಷವಿಟ್ಟರು ಕೆಡುವುದಿಲ್ಲ.
ಜೇನುಗಳಲ್ಲೂ ವಿವಿಧ ರೀತಿಗಳಿವೆ. ಮನುಷ್ಯರಂತೆ ಅವುಗಳಿಗೂ ಭಾವಜೀವಿಗಳು ಒರಟು ಮನಸ್ಸಿನವು, ವ್ಯಾಗ್ರ, ಉಗ್ರ, ನಿರಾಶಾವಾದಿಗಳು, ನಿಷ್ಠುರವಾದಿಗಳು ಇತ್ಯಾದಿ. ಆದರೆ ಇದಾವುದೂ ರಾಣಿಜೇನಿನ ಆದೇಶ ಪರಿಪಾಲನೆಗೆ ಅಡ್ಡಿ ಬರುವಂಥಹುದಲ್ಲ. ಅತೀ ಕಡಿಮೆ ಮೇಣದ ಉಪಯೋಗದಿಂದ ಮಾತ್ರ ಷಡ್ಬುಜಾಕೃತಿಯ ಜೇನುಹಟ್ಟಿ ರಚನೆ ಸಾಧ್ಯ ಎಂಬ ಜೇನಿನ ತಾಂತ್ರಿಕ ಸೂಕ್ಷ್ಮತೆಯ ಬಗ್ಗೆ ನಿಜಕ್ಕೂ ಶ್ಲಾಘಿಸಬೇಕಾದ್ದು ನಮ್ಮಕರ್ತವ್ಯ.
ಹೀಗೆ ಜೇನಿಗಿಂತ ದೊಡ್ಡ ವ್ಯಕ್ತಿತ್ವವಿಕಸನ ಗುರು, ಮಾರ್ಗದರ್ಶಕ, ನಾಯಕ, ಸಂಗಾತಿ, ಕಾಯಕಪ್ರೇರಕ, ಆಧ್ಯಾತ್ಮಿಕಗುರು, ನಿಷ್ಟೆಯಪ್ರತೀಕ ಇನ್ನೊಬ್ಬನಿಲ್ಲ. ಇವೆಲ್ಲ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿದರೆ ನಮ್ಮದು ರಾಮರಾಜ್ಯವಾಗುವುದರಲ್ಲಿ ಯಾವ ಸಂದೇಹವಿಲ್ಲ. ಜೇನಿನ ಪೆಟ್ಟಿಗೆಯ ಮುಂದೆ ಕೆಲವು ನಿಮಿಷ ಕಳೆದರೆ ಈ ವಿಷಯ ಅಥವಾದೀತು ನೀವೇನಂತಿರಿ?
– ಕೆ.ರಮೇಶ್, ಮೈಸೂರು
ತುಂಬಾ ಚೆನ್ನಾಗಿದೆ
ಮಾಹಿತಿ ಸಂಗ್ರಹಿಸುವುದಷ್ಟೇ ಅಲ್ಲ ಅದನ್ನು ಸುಂದರ ಚೌಕಟ್ಟು ಹಾಕಿ ಬರಯುತ್ತೀರಲ್ಲ..ಅದಕ್ಕೆ ನನ್ನ ದೊಂದು ನಮನ ಸಾರ್.
ಮಾಹಿತಿಪೂರ್ಣ ಬರಹ
ಅದ್ಭುತ, ಪರಿಪೂರ್ಣ ಕ್ರಿಯಾಶೀಲ ಜೀವಿಯಾದ ಜೇನುಹುಳದ ಕಾರ್ಯವೈಖರಿ ಬಗ್ಗೆ ಕೂಲಂಕುಷ ಮಾಹಿತಿಗಳನ್ನೊಳಗೊಂಡ ಲೇಖನ ತುಂಬಾ ಚೆನ್ನಾಗಿದೆ ಸರ್.
ಮಾಹಿತಿಪೂರ್ಣ ಬರಹ ಸರ್