ಸ್ವಾತಂತ್ರ್ಯ ಮೀಮಾಂಸೆ

Share Button

ಸ್ವಾತಂತ್ರ್ಯ ಎಂದಾಗ ನೆನಪಿಗೆ ಬಂದದ್ದು ನಮ್ಮ ಮನೆಗೆ ಸ್ನೇಹಿತರೊಬ್ಬರು ಬಂದಾಗ ನಡೆದ ಪ್ರಸಂಗ. ನಮ್ಮ ಮನೆಗೆ ಆಕಸ್ಮಿಕವಾಗಿ ಸ್ನೇಹಿತರೊಬ್ಬರು ಬಂದರು. ಅವರಿಗೆ ತಮಗೆ ಡಯಾಬಿಟೀಸ್‌  ಇದೆ ಎನ್ನುವುದು ಕೆಲವು ದಿನಗಳ ಹಿಂದೆ ಮಾತ್ರ ಗೊತ್ತಾಗಿತ್ತು. ಸ್ವಲ್ಪ ಸಕ್ಕರೆ ಹಾಕಿ ಟೀ ಕೊಡಿ ಎಂದು ಪದೇ ಪದೇ ಸೂಚನೆ ಕೊಟ್ಟರು. ಅವರ ಜೊತೆಗೆ ಬಂದಿದ್ದ ಉಳಿದ ಮೂವರೂ ನಮ್ಮ ಮನೆಗೆ ಆಗಾಗ ಬರುವವರೇ ಆಗಿದ್ದರು. ಅವರ ಟೀಗೆ ಎಷ್ಟು ಸಕ್ಕರೆ ಹಾಕಬೇಕು ಎಂಬುದು ನನಗೆ ಗೊತ್ತಿತ್ತು. ಒಬ್ಬರಿಗೆ ಅರ್ಧ ಚಮಚ, ಇನ್ನೊಬ್ಬರಿಗೆ ಒಂದೂ ಕಾಲು ಚಮಚ, ಮತ್ತೊಬ್ಬರಿಗೆ ಒಂದೂವರೆ ಚಮಚ ಸಕ್ಕರೆ ಹಾಕಿ ಟೀ ತಂದೆ. ಡಯಾಬಿಟೀಸ್‌ ಇದ್ದ ಸ್ನೇಹಿತರಿಗೆ ಸಕ್ಕರೆ ಹಾಕದೆಯೇ ತಂದು ನಿಮಗೆ ಎಷ್ಟು ಸಕ್ಕರೆ ಹಾಕಲಿ ಎಂದು ಕೇಳಿದೆ. ಡಯಾಬಿಟೀಸ್‌ ಇದ್ದ ಅವರ ಸಕ್ಕರೆಯ ಅಗತ್ಯ ಎಷ್ಟು ಎಂಬುದು ನನಗೆ ಗೊತ್ತಿರಲಿಲ್ಲ. ಅವರು ಎಲ್ಲರಿಗೂ ಹಾಕಿದಷ್ಟೇ ಹಾಕಿ ಎಂದುಬಿಟ್ಟರು. ಆಗ ನಾನು ಸಕ್ಕರೆ ಹಾಕಿದ ವಿವರಗಳನ್ನು ಕೊಟ್ಟೆ. ಅವರು ಒಂದು ಕ್ಷಣ ದಂಗಾದರು. ಕೊನೆಗೆ ಮುಕ್ಕಾಲು ಚಮಚ ಹಾಕಿ ಎಂದರು.

ಹೀಗೆ ಸ್ವಾತಂತ್ರ್ಯವು ಸಕ್ಕರೆ ಹಾಕಿಕೊಳ್ಳುವುದೂ ಸೇರಿದಂತೆ ಒಬ್ಬೊಬ್ಬರಿಗೆ ಒಂದೊಂದು ರೀತಿಯದು. ಪ್ರಸಿದ್ಧ ಇತಿಹಾಸಕಾರ ವಿಲ್‌ ಡ್ಯೂರೆಂಟ್‌ ತನ್ನ “ಇತಿಹಾಸದ ಪಾಠಗಳು” ಕೃತಿಯಲ್ಲಿ ತನ್ನ ದೀರ್ಘಕಾಲದ ಇತಿಹಾಸದ ಅಧ್ಯಯನವು ಸ್ವಾತಂತ್ರ್ಯ ಸಮಾನತೆಗಳು ಒಟ್ಟೊಟ್ಟಿಗೆ ಇರುವುದಿಲ್ಲ ಎಂಬುದನ್ನೇ ಸೂಚಿಸುತ್ತದೆ ಎನ್ನುತ್ತಾನೆ.  ನಾವು ನನ್ನ ಡಯಾಬಿಟೀಸ್‌ ಮಿತ್ರರಂತೆ ಸ್ವಾತಂತ್ರ್ಯ ಎಂದರೆ ಸಮಾನತೆ ಎಂದೇ ತಿಳಿದಿದ್ದೇವೆ. ಸಮಾನತೆಯನ್ನು ಸಾಧಿಸಲು ಮೀಸಲಾತಿಯ ಅಗತ್ಯವಿದೆ ಎನ್ನುತ್ತೇವೆ. ಮೀಸಲಾತಿ ಎಂದರೆ ಬೇರೆ, ಆದ್ಯತೆ ಎಂದರೆ ಬೇರೆ. ಸಮಾನತೆಯನ್ನು ಸಾಧಿಸಲು ಬೇಕಾದದ್ದು ಆದ್ಯತೆಯ ಪರಿಕಲ್ಪನೆ. 

ಎಲ್ಲಿಯವರೆಗೆ ಸಮಾಜದಲ್ಲಿ ವ್ಯಕ್ತಿ-ಸ್ವಾತಂತ್ರ್ಯ ಮತ್ತು ಹೊರಗಿನ ಕಟ್ಟುಪಾಡುಗಳ ನಡುವೆ ಹೊಂದಾಣಿಕೆ ಇರುತ್ತದೆಯೋ ಅಲ್ಲಿಯವರೆಗೆ ಮಾತ್ರ ಅಂಥ ಸಮಾಜ, ರಾಜ್ಯ, ದೇಶ ಸ್ವತಂತ್ರವಾಗಿರುತ್ತದೆ; ಹಾಗೆ ಇಲ್ಲ ಎಂದಾದರೆ ವ್ಯಕ್ತಿಯ ಬದುಕು ಫ್ರೆಂಚ್‌ ಕ್ರಾಂತಿಯ ನಂತರದ ಕೆಲವು ದಿನಗಳಲ್ಲಿ ದುರಂತಮಯ ಆದ ಹಾಗೆ ಆಗಿಬಿಡುತ್ತದೆ ಎನ್ನುತ್ತಾನೆ ವಿಲ್‌ ಡ್ಯೂರೆಂಟ್.‌ ಈ ಹೊಂದಾಣಿಕೆ ಆದ್ಯತೆಯ ಪರಿಕಲ್ಪನೆಯನ್ನು ಆಧರಿಸಿರುತ್ತದೆ. ಸ್ವಾತಂತ್ರ್ಯ ಎಂದರೆ ವ್ಯಕ್ತಿ ಸ್ವಾತಂತ್ರ್ಯ ಎಂದೇ ಕ್ರಿಸ್ತಪೂರ್ವದ ನಮ್ಮ ಭಾರತೀಯ ಚಿಂತಕರು ತಿಳಿದಿದ್ದರು. ಅವರಿಗೆ ವ್ಯಕ್ತಿಯ ಬದುಕಿನ ಆತ್ಯಂತಿಕ ಮೌಲ್ಯ ಮೋಕ್ಷ ಆಗಿತ್ತು. ಅವರು ಅದನ್ನು ವ್ಯಕ್ತಿಯ ಒಳಗಿನ ಸ್ವಾತಂತ್ರ್ಯ ಮತ್ತು ಹೊರಗಿನ ಸ್ವಾತಂತ್ರ್ಯಗಳೆರಡನ್ನೂ ಒಳಗೊಳ್ಳುವಂತೆ ವಿವರಿಸಿದ್ದರು. ಸ್ವನಿಯಂತ್ರಣವೇ ಒಳಗಿನ (ಆಂತರಿಕ) ಸ್ವಾತಂತ್ರ್ಯ; ಅದಿದ್ದರೆ ಹೊರಗಿನ ಸ್ವಾತಂತ್ರ್ಯವೂ ಇರುತ್ತದೆ ಎಂದು ಅವರು ಒಳಗಿನ ನಿಯಂತ್ರಣಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟರು. 

ಒಳಗಿನ ನಿಯಂತ್ರಣವು ಪ್ರತೀ ಸಂದರ್ಭವನ್ನೂ ಎಚ್ಚರಿಕೆಯಿಂದ ತೂಗಿನೋಡುವುದಕ್ಕೆ, ಪ್ರತಿಯೊಂದು ವೈಯಕ್ಕಿಕ ನಡೆಯನ್ನೂ ವಸ್ತುನಿಷ್ಟವಾಗಿ ಪರಿಶೀಲಿಸುವುದಕ್ಕೆ ಸಂಬಂಧಿಸಿದುದು. ಅದು ಹೊರಗಿನ ಪರಿಸ್ಥಿತಿಗಳಿಗೆ ಕಟ್ಟುಬೀಳಬೇಕಾಗುತ್ತದೆ ಎಂಬ ಅನಿವಾರ್ಯತೆಯು ಎದುರಾದಾಗಲೂ ಅಂಥ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುವ ವಿವೇಚನೆಗೂ ಸಂಬಂಧಿಸಿದುದು.  

ಒಳಗಿನ ನಿಯಂತ್ರಣವನ್ನು ಸಹನೆ, ತಾಳ್ಮೆ, ಬಂಡೇಳದ ಮನಸ್ಥಿತಿ ಎಂದು ಅರ್ಥೈಸುವವರು ಈ ಅರ್ಥದ ಒಳಗಿನ ನಿಯಂತ್ರಣದ ವಿವಿಧ ರೂಪಗಳಿಗೆ ಸ್ತ್ರೀಯರು ತಮ್ಮನ್ನು ತಾವೇ ಒಳಗಾಗಿಸಿಕೊಳ್ಳುತ್ತಾ ಬಂದಿದ್ದಾರೆ; ಅದರಿಂದಲೇ ಬಹುಮುಖಿಯಾದ ವಿವಿಧ ಅನುಭವಗಳಿಗೆ, ವಿಚಾರಗಳಿಗೆ, ಕ್ರಿಯಾ ಸಾಧ್ಯತೆಗಳಿಗೆ ತೆರೆದುಕೊಳ್ಳಲು ಸ್ತ್ರೀಯರಿಗೆ ಸಾಧ್ಯವಾಗಿಲ್ಲ; ಪರಿಣಾಮವಾಗಿ ಸ್ತ್ರೀಯರು ಪ್ರತಿಗಾಮಿಗಳಾಗಿಬಿಟ್ಟಿದ್ದಾರೆ; ಅಂದರೆ ಹಿಮ್ಮರಳುವವರು (ಹಿಂದಕ್ಕೆ ಮರಳುವವರು) ಆಗಿದ್ದಾರೆ; ಈ ಪರಿಸ್ಥಿತಿಯಲ್ಲಿ ಬದಲಾವಣೆ ಆಗಬೇಕು, ಆಗ ಮಾತ್ರ ಸ್ತ್ರೀಯರಿಗೆ ಸ್ವಾತಂತ್ರ್ಯ ದೊರೆಯುತ್ತದೆ ಎಂದು ವಾದಿಸುತ್ತಾರೆ. ಆಲ್‌ಬರ್ಟ್‌ ಕಾಮು “ಕಲೆಗಾರನ ಕಾಯಕದಲ್ಲಿ” ಎನ್ನುವ ಕಥೆಯನ್ನು ಬರೆದಿದ್ದಾನೆ. ಅದರಲ್ಲಿ ಅವನು ಚಿತ್ರಕಲಾವಿದನೊಬ್ಬನನ್ನು ಚಿತ್ರಿಸಿದ್ದಾನೆ. ಮೊದಲಿಗೆ ಚಿತ್ರ ಬಿಡಿಸುವುದರಲ್ಲಿಯೇ ತನ್ನನ್ನು ಕೇಂದ್ರೀಕರಿಸಿಕೊಂಡಿದ್ದ ಈ ಕಲಾವಿದನಿಗೆ ತನ್ನ ಈ ಏಕಾಂತ, ತಾನೇ ಹಾಕಿಕೊಂಡಿದ್ದ ನಿರ್ಬಂಧ ಆಗಿದ್ದು ಅದು ಚಿತ್ರ ಬಿಡಿಸುವ ತನ್ನ ಸೃಜನಶೀಲತೆಗೆ ಅಡ್ಡಿ ಎಂದೆನ್ನಿಸುತ್ತದೆ. ಅವನು ವಿವಿಧ ಜನರ ವಿವಿಧ ವಿಚಾರಗಳಿಗೆ ಸ್ಪಂದಿಸುತ್ತಾ ಹೋಗುತ್ತಾನೆ. ರಾಜಕೀಯ ಎಂದೆನ್ನಿಸಿದುದನ್ನು ಮಾತ್ರ ಬದಿಗಿಡುತ್ತಾನೆ. ಪರಿಣಾಮವಾಗಿ ಅವನಿಗೆ ತನ್ನದು ಎಂಬ ಪರಿಕಲ್ಪನೆಯ ಚಿತ್ರವನ್ನು ಬಿಡಿಸಲು ಆಗುವುದೇ ಇಲ್ಲ. ತನ್ನ ಸೃಜನಶೀಲತೆಯನ್ನು ಕಳೆದುಕೊಂಡು ಬರಿಯ ಆಕಾಶ ಆಗಿಬಿಡುತ್ತಾನೆ. ಆಕಾಶದಲ್ಲಿ ಕಾಣಬಹುದಾದ ನಕ್ಷತ್ರದ ಆಗಮನಕ್ಕಾಗಿ ಕಾಯುತ್ತಾ ಕುಳಿತು ಬಿಡುತ್ತಾನೆ. ಕಾಮು ನಿರೂಪಿಸುವ ಈ ಕಥೆ ಒಳಗಿನ ನಿಯಂತ್ರಣವನ್ನು ಬದಿಗಿಟ್ಟರೆ ಏನಾದೀತು ಎನ್ನುವುದನ್ನು ಗಮನಕ್ಕೆ ತರುವ ಕಥೆ ಆಗಿರುವುದರ ಜೊತೆಗೆ ಹೊರಗಿನ ಸಂಗತಿಗಳಿಗೆ ತೆರೆದುಕೊಳ್ಳುವುದಕ್ಕೆ ಒಳಗಿನ ನಿಯಂತ್ರಣದಿಂದಲೇ ಅರ್ಥ ದೊರೆಯುತ್ತದೆ ಎನ್ನುವುದನ್ನು ಹೇಳುವ ಕಥೆಯೂ ಆಗಿದೆ. 

ನಮ್ಮ ದೇಶದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೂ ಮಧ್ಯಮ ವರ್ಗದವರಿಗೂ ಆತ್ಮೀಯ ಅಂಟುನಂಟು. ಅವರು ಸ್ವಾತಂತ್ರ್ಯ ಚಳುವಳಿಯು ಎಲ್ಲರ ಧಮನಿಯೊಳಗೆ ಹರಿಯುವಂತೆ ಮಾಡಲು ಬಗೆ ಬಗೆಯ ಮಾರ್ಗಗಳನ್ನು ಅನುಸರಿಸಿದ್ದರು. ನಾಟಕ-ಮಾಧ್ಯಮ ಅಂಥ ಮಾರ್ಗಗಳಲ್ಲಿ ಒಂದು. ಸ್ವಾತಂತ್ರ್ಯಹೋರಾಟದ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳುವಳಿಯ ಉತ್ಸಾಹವನ್ನು ಜನರಿಗೆ ತಲುಪಿಸಿದ ಕನ್ನಡ ನಾಟಕಗಳ ಅಧ್ಯಯನವನ್ನು ಮಾಡಿರುವ ಕುರ್ತಕೋಟಿಯವರು ಮಧ್ಯಮವರ್ಗದವರಿಗೆ ನಾಟಕ ಬೇಕೇ ಎಂಬ ತಲೆಬರಹದಡಿಯಲ್ಲಿ ಮಧ್ಯಮವರ್ಗದವರ ಸ್ವತಂತ್ರ (ಇಂಡಿಪೆಂಡೆಂಟ್)‌ ಮನಸ್ಥಿತಿಯನ್ನು ಗಮನಕ್ಕೆ ತರುವ ಒಂದು ಲೇಖನ ಬರೆದಿದ್ದಾರೆ. ಮಧ್ಯಮವರ್ಗದವರ ಬಂಡಾಯವೇ ಅಮೆರಿಕ ಸ್ವಾತಂತ್ರ್ಯ ಸಂಗ್ರಾಮ ಎನ್ನುವುದೊಂದು ಐತಿಹಾಸಿಕ ಸಂಗತಿ. ಆರ್ಥಿಕ ವ್ಯವಸ್ಥೆಯ ಕೇಂದ್ರವಾಗಿ ಮಧ್ಯಮ ವರ್ಗವು ಸ್ಥಾನ ಪಡೆದುದರಿಂದಲೇ ಫ್ರಂಚ್‌ ಕ್ರಾಂತಿ ಸಾಧ್ಯವಾದದ್ದು ಮತ್ತೊಂದು ಐತಿಹಾಸಿಕ ಸಂಗತಿ. ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಯ ಯಶಸ್ಸಿಗೆ ಅಸಂಖ್ಯಾತ ಮಧ್ಯಮವರ್ಗದ ಸ್ತ್ರೀ ಪುರುಷರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದದ್ದು ತನ್ನದೇ ಆದ ಕಾಣಿಕೆ ಕೊಟ್ಟಿದೆ ಎಂಬುದೂ ಐತಿಹಾಸಿಕ ಸಂಗತಿಯೇ. ಈ ಎಲ್ಲ ಸ್ವಾತಂತ್ರ್ಯ ಹೋರಾಟಗಳ ಯಶಸ್ಸಿನ ಸ್ವರೂಪವನ್ನು ಗಮನಿಸುವ ವಿಲ್‌ ಡ್ಯೂರೆಂಟ್‌ “ಹೊರಗಿನ ಯಾವುದೇ ಆಮಿಷಗಳಿಗೆ ಒಳಗಾಗದೆ ಸ್ತ್ರೀ ಪುರುಷರು ಒಳಗಿನ ನಿಯಂತ್ರಣದೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು; ಆ ಭಾವ ಮುಂದೆಯೂ ಅಮೆರಿಕಾದಲ್ಲಿ ಉಳಿದುಕೊಂಡಿತು; ಅದರಿಂದಲೇ ಅಮೆರಿಕ ಆನಂತರ ಯಾವ ಕ್ರಾಂತಿಯ ಅಗತ್ಯವೂ ಇಲ್ಲದೆ ಎಲ್ಲ ವಿಷಯಗಳಲ್ಲಿ ಮುಂಚೂಣಿಯಲ್ಲಿದೆ” ಎಂದು ಅಭಿಪ್ರಾಯ ಪಡುತ್ತಾನೆ.  

ನಮ್ಮ ಸ್ವಾತಂತ್ರ್ಯ ಹೋರಾಟದ ಸಂದರ್ಭವನ್ನು ಗಮನಿಸಿದಾಗ ನಮ್ಮ ದೇಶದಲ್ಲಿ ಎಲ್ಲ ರೀತಿಯ ಬೇಗೆಗಳಿಗೆ ನಲುಗಿದವರು ಮಧ್ಯಮವರ್ಗದವರೇ; ಈಗ ಸ್ವಾತಂತ್ರ್ಯ ಸಿಕ್ಕಿರುವುದು ಮಧ್ಯಮವರ್ಗದವರಿಗೇ ಎಂದೆನ್ನಿಸುತ್ತದೆ. ಅವರು ಅದರಲ್ಲೂ ಸ್ತ್ರೀಯರು ಕಂಡದ್ದೆಲ್ಲವನ್ನೂ ತಮ್ಮದನ್ನಾಗಿಸಿಕೊಳ್ಳುವ ಆಸೆಗಳನ್ನು ಒಳಗಿನ ನಿಯಂತ್ರಣಕ್ಕೆ ಒಳಪಡಿಸದಿದ್ದರೆ ಅವರು ತಮ್ಮ ಶಕ್ತಿ, ಸಾಮರ್ಥ್ಯಗಳನ್ನು ವಿಕಸಿಸಿಕೊಳ್ಳುವುದರ ಬದಲಿಗೆ ತಮ್ಮ ಅನಿಯಂತ್ರಿತ ಆಸೆ ಆಕಾಂಕ್ಷೆಗಳಲ್ಲಿ, ಫ್ರೀ ಸೆಕ್ಸ್‌ ನಲ್ಲಿ ಕರಗಿಹೋಗುತ್ತಾರೆ. “ಸಾಹೇಬ”, “ಬೀಬಿ” ಆಗುತ್ತಾ “ಗುಲಾಮ”ರಾಗಿಬಿಡುತ್ತಾರೆ. ಬಗೆ ಬಗೆಯ ಹಗರಣಗಳ, ಮಾಲಿನ್ಯಗಳ, ಸಾಮಾಜಿಕವೇ ಮೊದಲಾದ ಸಮಸ್ಯೆಗಳ ಸರಮಾಲೆಯನ್ನು ಹುಟ್ಟುಹಾಕುತ್ತಾರೆ. ಅದರ ಧಗೆಯಲ್ಲಿ ಬೆಂದುಹೋಗುತ್ತಾರೆ. 

ಬೇಂದ್ರೆಯವರು “ಇನ್ನೂ ಬರಲಿಲ್ಲ ಯಾಕ ಹುಬ್ಬಳ್ಳಿಯವ” ಎಂಬ ಕವನವನ್ನು ಬರೆದಿದ್ದಾರೆ. ಅದು ಪ್ರಿಯಕರನಿಗಾಗಿ ಕಾಯುತ್ತಿರುವವಳ ಮುಗ್ಧ, ನಿರ್ವ್ಯಾಜ ಪ್ರೀತಿಯನ್ನು ವರ್ಣಿಸುತ್ತದೆ. ಇದನ್ನು ಹುಡುಗಿಯ ದೃಷ್ಟಿಯಿಂದ ವಿಶ್ಲೇಷಿಸಿದಾಗ “ಅವಳ ಮನಸ್ಥಿತಿಗೆ ತದ್ವಿರುದ್ಧವಾಗಿರುವವನು ಅವಳ ಪ್ರಿಯಕರ; ಇದು ಹುಡುಗಿಯ ಬದುಕಿನ ದುರಂತವನ್ನೂ, ಪುರುಷ-ಶೋಷಣೆಯನ್ನೂ, ಅಂಥ ಬದುಕಿಗೆ ಅವಕಾಶ ಕೊಡುವ ಸಮಾಜದ ದುಸ್ಥಿತಿಯನ್ನೂ ಸೂಚಿಸುತ್ತದೆ” ಎಂದು ಹೇಳಲು ಅವಕಾಶವಿದೆ. ಪ್ರೀತಿ, ವಿಶ್ವಾಸ, ಮಾನವೀಯ ಸ್ಪರ್ಷ ಇಲ್ಲದ ಸ್ತ್ರೀ ಪುರುಷರ ನಡುವಿನ ಸಂಬಂಧದ ಅಂತ್ಯ ದುರಂತವೇ, ನಿಜ. ಬದುಕಿಗೆ ಸ್ತ್ರೀ ಪುರುಷರ ನಡುವಿನ ಆತ್ಮೀಯ ಸಂಬಂಧ ಎನ್ನುವ ಏಕಮಾತ್ರ ಸ್ವರೂಪ ಇಲ್ಲ. ಅದು ಬದುಕಿನ ಏಕಮುಖ ಸತ್ಯ. ಇಂಥ ಹಲವಾರು ಏಕಮುಖ ಸತ್ಯಗಳನ್ನೇ ಇಡೀ ಸತ್ಯ ಎಂದು ಭಾವಿಸಿದ ಒಂದು ಗಂಭೀರವಾದ ಪರಿಣಾಮ ದೇಶದ ವಿಭಜನೆ ಮತ್ತು ಅದಕ್ಕೆ ಹೊಂದಿಕೊಂಡಂತೆ ಭುಗಿಲೆದ್ದ ಈಗಲೂ ಅದರ ಪರಿಣಾಮಕಾರಿ ಕರಿನೆರಳನ್ನು ಬಿಟ್ಟುಹೋಗಿರುವ ಹಿಂಸಾಚಾರ. 

ಆದರೂ ವಿಲ್‌ ಡ್ಯೂರೆಂಟ್‌ ಹೇಳುವ ಹಾಗೆ ಒಳ್ಳೆಯತನದ ಇತಿಹಾಸವನ್ನು ಸಮಗ್ರವಾಗಿ ಬರೆಯುವ ಸಾಹಸ, ಧೈರ್ಯ ಮಾಡಲು ಆಗುವುದಿಲ್ಲ. ಅದು ಅಷ್ಟು ವಿಸ್ತಾರವಾದದ್ದು ಮತ್ತು ಗಹನವಾದದ್ದು. ಒಳ್ಳೆಯತನದ ಇತಿಹಾಸ ಒಂದರ್ಥದಲ್ಲಿ ನಮ್ಮ ಸ್ವಾತಂತ್ರ್ಯಪರಂಪರೆಯ (ಒಳಗಿನ ನಿಯಂತ್ರಣದ ಸಾಧನಾ ಪರಂಪರೆಯ) ಇತಿಹಾಸವೇ ಎನ್ನಬೇಕು. ದೇಶದ ಸ್ವಾತಂತ್ರ್ಯಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಹೆಚ್ಚು ಸಾಧ್ಯತೆ ಇರುವುದು ಮಧ್ಯಮವರ್ಗದವರಿಗೆ ಎಂದೆನ್ನಿಸುತ್ತದೆ. ಅವರಿಗೆ ಮೈಮರೆಯುವಷ್ಟು ಶ್ರೀಮಂತಿಕೆ ಇಲ್ಲ. ಆದರೆ ಅವರು ಕಳೆದುಕೊಳ್ಳಬಾರದ, ಗಳಿಸದೇ ನಿರ್ಲಕ್ಷಿಸಬಾರದ ಬೌದ್ಧಿಕ ಶಕ್ತಿ, ಸಾಮರ್ಥ್ಯ ಇರುವ ವರ್ಗದವರು ಎಂದೆನ್ನಬಹುದು. ಇಂದಿನ ಮುಕ್ತವಾಗಿ ಬದುಕುವ ಸ್ವಾತಂತ್ರ್ಯವು ಎಲ್ಲಾ ಮುಖದ ಶ್ರೀಮಂತ ಬದುಕಿನ ಸಿಂಹಾಸನದ ಮೇಲೆ ರಾರಾಜಿಸುವ ಅವಕಾಶಗಳ ಎಲ್ಲಾ ದ್ವಾರಗಳನ್ನೂ ತೆರೆದಿದೆ. ಅವರು ಒಳಗಿನ ನಿಯಂತ್ರಣದಿಂದ ಎಲ್ಲವನ್ನೂ ಆಶ್ಚರ್ಯ, ಸಂತೋಷ, ಮೆಚ್ಚಿಗೆಗಳಿಂದ ಗಮನಿಸಬಲ್ಲ ಮನಸ್ಥಿತಿಯನ್ನು ರೂಢಿಸಿಕೊಳ್ಳಬಲ್ಲರು. ಇತರರ ತಪ್ಪುಗಳನ್ನು ಕಂಡು ಮುಗ್ಧವಾಗಿ ನಗಬಲ್ಲರು. ಅಂಥವರಿಗೆ ಅಗತ್ಯವಿದ್ದರೆ ಸಹಾಯಹಸ್ತ ಚಾಚಬಲ್ಲರು. ವ್ಯಕ್ತಿಸ್ವಾತಂತ್ರ್ಯ ಮತ್ತು ಕಟ್ಟುಪಾಡುಗಳ ನಡುವೆ ಸುಮಧುರ ಬಾಂಧವ್ಯವನ್ನು ರೂಪಿಸಬಲ್ಲರು. 

ಒಂದಂತೂ ನಿಜ. ಜೆ. ಕೃಷ್ಣಮೂರ್ತಿಯವರು ಹೇಳುವಂತೆ ಪ್ರತಿಯೊಬ್ಬರೂ ಅವರವರಿಗೆ ಅವರೇ ಗುರು. ನೈತಿಕ ಮೌಲ್ಯದ ಅಂತಸ್ಸತ್ವ, ಸತ್ಯಜ್ಞಾನವಿವೇಕದ ಗುರುತ್ವವಿರುವ ಗುರು ಆಗದಿದ್ದರೆ ವ್ಯಕ್ತಿ ಶರಶ್ಚಂದ್ರರ ಕಾದಂಬರಿಯ ತಲೆಬರಹವೊಂದು ಸೂಚಿಸುವಂತೆ “ಚರಿತ್ರಹೀನ”. ಬರಿಯ ಸೌಭಾಗ್ಯಗಳು ಇರಲಿ ರಿಸ್ಕ್‌ ಬೇಡ ಎನ್ಬಲು ಆಗುವುದಿಲ್ಲ. ಬರಿಯ ವ್ಯಕ್ತಿಸ್ವಾತಂತ್ರ್ಯ ಇರಲಿ ಬಾಧ್ಯತೆಗಳು ಬೇಡ ಎನ್ನಲಾಗುವುದಿಲ್ಲ. ಸುಖಭೋಗಗಳಿಗೆ ಅವಕಾಶ ಮುಕ್ತವಾಗಿ ಇರಲಿ ಸಮಾಜದ ಹಂಗು ಬೇಡ ಎನ್ಬಲಾಗುವುದಿಲ್ಲ. ಸ್ವಾಭಿಮಾನ-ವಿನಯ, ಸದಾಶಯ-ಕಾರ್ಯಶ್ರದ್ಧೆ, ಸ್ವಾವಲಂಬನೆ-ಪರ-ಹಿತಾಸಕ್ತಿಗಳ ಚೌಕಟ್ಟಿನೊಳಗೆ ಇದ್ದಾಗ ಒಳಗೂ ಸ್ವಾತಂತ್ರ್ಯವಿರುತ್ತದೆ, ಹೊರಗೂ ಸ್ವಾತಂತ್ರ್ಯವಿರುತ್ತದೆ. ಅದು ತಿಳುವಳಿಕೆಯ ಜೊತೆಯಲ್ಲಿ ಇರುವ ಮುಗ್ಧತೆ, ಸೃಜನಶೀಲತೆ ಆಗಿರುತ್ತದೆ.  

-ಕೆ.ಎಲ್.‌ ಪದ್ಮಿನಿ, ಮೈಸೂರು

4 Responses

  1. ಉತ್ತಮ ಲೇಖನ ಮೇಡಂ… ಧನ್ಯವಾದಗಳು..

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ. ಚೆನ್ನಾಗಿದೆ ಲೇಖನ

  3. ಶಂಕರಿ ಶರ್ಮ says:

    ಸ್ವಾತಂತ್ರ್ಯದ ಕುರಿತ ವಿಸ್ತೃತ, ಪ್ರಬುದ್ಧ ಲೇಖನ ಚೆನ್ನಾಗಿದೆ.

  4. Padmini Hegde says:

    ‌ಲೇಖನ ಪ್ರಕಟಿಸಿದ ಹೇಮಮಾಲ ಮೇಡಂ, ಸಹೃದಯಿ ಸ್ಪಂದನೆ ನೀಡಿದ ಬಿ.ಆರ್.ನಾಗರತ್ನ ಮೇಡಂ, ನಯನ ಬಜಕೂಡ್ಲು ಮೇಡಂ, ಶಂಕರಿ ಶರ್ಮ ಮೇಡಂ – ಅವರಿಗೆ ಅನಾಮಿಕ ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: