ಕಾದಂಬರಿ : ‘ಸುಮನ್’ – ಅಧ್ಯಾಯ 12

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)
ಸಂದರ್ಶನ

“ಅಮ್ಮ, ಅಪ್ಪ ಎಲ್ಲಿ?” ಮಗಳ ಧ್ವನಿ ಕೇಳಿ ರಾಜಲಕ್ಷ್ಮಿ ತಿರುಗಿದರು. ಕಣ್ಣು ಕೆಂಪಾಗಿ ಬಾಡಿದ ಸುಮನ್ ಮುಖದಲ್ಲಿ ಏನೋ ಒಂದು ನಿರ್ಧಾರ. “ವಾಕಿಂಗ್ ಹೋಗಿದಾರೆ ಮರಿ” ಕಕ್ಕುಲತೆಯಿಂದ ಉತ್ತರಿಸಿದರು. ಕಾಫಿ ಲೋಟ ಹಿಡಿದು ಟಿವಿ ಮುಂದೆ ಕುಳಿತಳು. ಸುಮನ್ ಮುಂದಿನ ಹೆಜ್ಜೆಯ ಬಗ್ಗೆ ಒಮ್ಮೆ ಯೋಚಿಸಿ ಸ್ನಾನ ಮಾಡಿ ತಿಂಡಿ ತಿಂದು “ಅಮ್ಮ ಪೋಸ್ಟ್ ಆಫೀಸಿಗೆ ಹೋಗಿ ಬರ್ತೀನಿ” ಎನ್ನುತ್ತ ಹೊರ ನಡೆದಳು. ಬೀದಿ ಜನರೆಲ್ಲ ಸೊರಗಿದ ಸುಮನಳನ್ನು ನೋಡುತ್ತಿರುವುದು ಅವಳಿಗೆ ಕಾಣಿಸಲಿಲ್ಲ. ಅವಳ ಯೋಚನೆಯಲ್ಲಿ ಅವಳು ಮುಳಗಿದ್ದಳು. ಗಿರಿಜಮ್ಮ ಸುಮನ್ ಕಣ್ಣಿನಿಂದ ಮರೆಯಾಗುವವರೆಗೂ ನೋಡುತ್ತ ನಿಂತ್ತಿದರು. ಅವರ ಹಿಂದೆ ಲಕ್ಷ್ಮಿ ಕಣ್ಣು ಒರಿಸಿದಳು.

ಅಂಚೆ ಕಛೇರಿ ಅಂತ ಹೇಳಿದ್ದು ಒಂದು ನೆಪ. ಸುಮನ್‍ಗೆ ಮನೆಯಾಚೆ ಹೋಗಬೇಕಿತ್ತು. ಆ ದುಃಖದ ವಾತಾವರ್ಣದಿಂದ ದೂರ. ಎಲ್ಲಾದರೂ ದೂರ ಹೋಗಿ ಯೋಚಿಸ ಬೇಕಿತ್ತು. ಮನೆಯ ಹತ್ತಿರವಿದ್ದ ಅಂಚೆ ಕಛೇರಿಗೆ ನಡೆದಳು. ಅದು ಒಂದು ಬಂಗಲೆ. ಅವಳಿಗೆ ಅದರ ಸುತ್ತ ಇದ್ದ ದೊಡ್ಡ ಉದ್ಯಾನವನದ ಆಕರ್ಷಣೆ. ಉದ್ಯಾವನದಲ್ಲಿ ಕೂರಲು ಕಲ್ಲು ಬೆಂಚುಗಳು ಇದ್ದವು. ಹೋಗಿ ಒಂದರ ಮೇಲೆ ಕುಳಿತಳು. ಸುತ್ತ ಕಣ್ಣು ಹಾಯಿಸಿದಳು. ಬಗೆ ಬಗೆಯ ಬಣ್ಣದ ಹೂಗಳು. ಎಲ್ಲಾ ಮರದಲ್ಲೂ ಹೂವು.  ಮನಸ್ಸಿಗೆ ಒಂದು ತರಹ ಹಾಯಾಗಿತ್ತು. ಬೆಂಚಿಗೆ ವರಗಿ ಯೋಚಿಸಿದಳು. ಹತ್ತು ನಿಮಿಷದಲ್ಲಿ ಎರಡು ನಿರ್ಧಾರ ಮಾಡಿದಳು. ಒಂದು ತಕ್ಷಣ ಕೆಲಸಕ್ಕೆ ಸೇರುವುದು. ಇನ್ನೊಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದು.

ತಲೆ ಎತ್ತಿದರೇ ದೂರದ ಇಂಜಿನಿಯರಿಂಗ್ ಕಾಲೇಜು ಕಟ್ಟಡ ಕಾಣಿಸಿತು. ಪರ್ಸು ತೆಗೆದು ನೋಡಿದಳು. ಅದರ ಒಂದು ಖಾನೆಯಲ್ಲಿ ಹಿಂದೆ ಯಾವಾಗಲೋ ಇಟ್ಟ ಅವಳ ಬಯೋಡೆಟಾ ಇತ್ತು. ಸರಸರನೆ ಕಾಲೇಜಿನ ದಿಕ್ಕಿನಲ್ಲಿ ನಡೆದು ಬಿಟ್ಟಳು. ಭದ್ರತಾ ಸಿಬ್ಬಂದಿಗೆ ಪ್ರಾಂಶುಪಾಲರ ಕಛೇರಿ ಎಲ್ಲಿ ಎಂದು ವಿಚಾರಿಸಿ ಅವರ ಬಳಿ ಹೋಗಿ ತನ್ನನ್ನು ಪರಿಚಯಿಸಿಕೊಂಡು ಬಯೋಡೆಟಾ ಇತ್ತು ಕೆಲಸಕ್ಕೆ ಅರ್ಜಿ ಸಲ್ಲಿಸಬಹುದೇ ಎಂದು ವಿನಯದಿಂದ ಕೇಳಿದಳು. ಅವಳು ಆರು ವರ್ಷ ಊರಿನ ಪ್ರತಿಷ್ಟಿತ ಕಾಲೇಜಿನಲ್ಲಿ ಕೆಲಸ ಮಾಡಿರುವುದನ್ನು ನೋಡೇ ಪ್ರಾಂಶುಪಾಲರಿಗೆ ಸಂತೋಷವಾಗಿತ್ತು. ಹುಡುಗಿಯ ಮುಖ ಕೆಳಗುಂದಿದರೂ ಅವಳ ಧಾಟಿಯಲ್ಲಿ ಪ್ರತಿಭೆ ಎದ್ದು ಕಾಣುತ್ತಿತ್ತು. ಹೊಸ ಸೆಮಿಸ್ಟರ್ ಶುರು ಆಗುತ್ತಿತ್ತು. ಎಲ್ಲಾ ವಿಭಾಗಗಳಲ್ಲಿ ಅಧ್ಯಾಪಕರ ಹುದ್ದೆಗಳು ಖಾಲಿ ಬಿದಿದ್ದವು. ಇದು ಇನ್ನೂ ಹೊಸ ಕಾಲೇಜು ಬೇರೆ. ಮೇಷ್ಟ್ರ ವೃತ್ತಿ ಯಾರಿಗೂ ಬೇಡ ಎಲ್ಲರೂ ಸಾಫ್ಟವೇರ್ ಇಂಜಿನಿಯರ್ರೇ ಆಗಬೇಕು. ಒಂದು ಸೆಮಿಸ್ಟರ್ ಇಲ್ಲಿ ಕೆಲಸ ಮಾಡಿದರೇ ಆಯಿತು ಇನ್ನೊಂದು ಕಾಲೇಜು ಇಲ್ಲಿಯ ಸಂಬಳಕ್ಕಿಂತ ಒಂದೈನೂರು ರೂಪಾಯಿ ಹೆಚ್ಚು ಕೊಟ್ಟರೆ ಸಾಕು ಹೋಗಿ ಬಿಡ್ತಾರೆ. ಅಂತಹ ಪರಿಸ್ಥಿಯಲ್ಲಿ ಹೀಗೆ ಅನುಭವಿ ಅಭ್ಯರ್ಥಿ ತಾನಾಗಿ ಹುಡುಕಿಕೊಂಡು ಬಂದಿರುವಾಗ ಒಂದು ಸಂದರ್ಶನ ಯಾಕೆ ಮಾಡಿ ನೋಡಬಾರದು ಎಂದು ಯೋಚಿಸಿ “ಏನಮ್ಮ ಒಂದು ಡೆಮೋ ಮಾಡಿ ಬಿಡ್ತೀಯಾ? ಆಮೇಲೆ ಇಂಟರ್ವ್ಯೂ ಮಾಡಬಹುದು” ವಿಚಾರಿಸಿದರು. ಸುಮನ್ ತನ್ನ ಸಮ್ಮತಿ ಸೂಚಿಸಿದಳು. ಕೆಲ ವಿವರಗಳನ್ನು ತುಂಬುವ ಒಂದು ಅರ್ಜಿ ನಮೂನೆ ತುಂಬಲು ಹೇಳಿದರು. ಅದನ್ನು ತುಂಬುತ್ತ  ಸುಮನ್ ಅವರ ಕಛೇರಿಯ ಹೊರಗೆ ಹಾಕಿದ್ದ ಮೇಜಿನ ಮುಂದೆ ಕುಳಿತಳು. “ಏನ್ ಮರಿ ಹೊಸ ಅಡ್ಮಿಶ್‍ನಾ” ಕೇಳಿ ತಲೆ ಎತ್ತಿದಳು. ಒಂದು ಗುಂಪು ಹುಡುಗರು ನಗುತ್ತ ಅವಳ ಮುಂದೆ ಹಾದು ಹೋದರು. ಚುಡಿದಾರ ಹಾಕಿಕೊಂಡ ಸುಮನ್ ಇನ್ನು ಕಾಲೇಜು ವಿಧ್ಯಾರ್ಥಿಯ ಹಾಗೆ ಕಾಣುತ್ತಿದ್ದಳು. ಸುಮನ್ ತನ್ನ ಕೆಲಸ ಮುಂದವರಿಸಿದಳು.

ಹತ್ತು ನಿಮಿಷದಲ್ಲಿ ಆಫೀಸಿನ ಗುಮಾಸ್ತನೊಬ್ಬ “ಮ್ಯಾಡಮ್ ಡೆಮೋಗೆ ಇಲ್ಲಿ ತಯಾರಿ ಮಾಡಿದೆ” ಎಂದ. ಸುಮನ್ ಅವನ ಹಿಂದೆ ನಡೆದಳು. ಗುಮಾಸ್ತ ಒಳಗಿದ್ದ ಒಬ್ಬ ಅಧ್ಯಾಪಕರಿಗೆ ಸುಮನಳನ್ನು ಪರಿಚಯಿಸಿ ಹೊರಟು ಹೋದ.  ಅವರು ಸುಮನ್‍ಗೆ ವೇದಿಕೆ ಬಿಟ್ಟು ಹಿಂದೆ ಹೋಗಿ ಕುಳಿತರು. ಸುಮನ್ ಒಮ್ಮೆ ಧೀರ್ಘವಾಗಿ ಉಸಿರೆಳೆದು ಎಲ್ಲರನ್ನು ನೋಡಿದಳು. ದೊಡ್ಡ ತರಗತಿ ಅದು.  ಕೋಣೆಯಲ್ಲಿ ಎಂಬತ್ತು ಜನ ಇದ್ದ ಹಾಗೆ ಕಂಡಿತು. ಹಿಂದಿನ ಸಾಲಿನಲ್ಲಿ ಒಂದು ಹದಿನೈದು ಅಧ್ಯಾಪಕರು ಕುಳಿತಿರುವುದನ್ನು ಗಮನಿಸಿದಳು. ಮುಂದಗಡೆಯ ಸಾಲಿನಲ್ಲಿ ಹೊಸಾ ಅಡ್ಮಿಶನ್ನಾ ಎಂದ ಗುಂಪು ಕುಳಿತ್ತಿತ್ತು. ಕೆಲವರು ಅವಳನ್ನು ವೇದಿಕೆಯ ಮೇಲೆ ನೋಡಿ ತಬ್ಬಿಬ್ಬಾಗಿ ತಲೆ ಬಗ್ಗಿಸಿದರೇ ಕೆಲವರ ಮುಖದಲ್ಲಿ ಇನ್ನೂ ರೇಗಿಸೋಣ ಎಂಬ ಕೊಂಕು ನಗೆ. ಅವರಿಗೆ ಗೊತ್ತಿಲ್ಲ ಸುಮನ್ ಪಳಗಿದ ಕೈ. ಇಂತಹ ಎಷ್ಟೋ ಹುಡುಗರ ನೀರಿಳಿಸಿದ್ದಳು. ಕೋಣೆಯ ತುಂಬ ಗಲಾಟೆ, ಮಾತು, ನಗೆ. ಒಂದ್ನಿಮಿಷ ಯೋಚಿಸಿದಳು. ಕಪ್ಪು ಹಲಗೆಯ ಮೇಲೆ “MICROPROCESSOR” ಬರೆದು ಅವರ ಕಡೆ ತಿರುಗಿದಳು. “ಗುಡ್ ಮಾರ್ನಿಂಗ್ ಎವರಿಬಡಿ. ಐ ಆಮ್ ಸುಮನ್. ಐ ಆಮ್ ಹಿಯರ್ ಟು ವಾಕ್ ಯು ಥ್ರೂ ಧ ಆರ್ಕಿಟೆಕ್ಚರ್ ಆಫ್ 8085. ಮೈಕ್ರೂ ಮೀನ್ಸ ಸ್ಮಾಲ್, ಪ್ರೊಸೆಸರ್ ಈಸ ಒನ್ ವಿಚ್ ಪ್ರೊಸ್ಸಸ್” ಅವಳ ಧ್ವನಿಯ ಮೋಡಿಗೆ ಕೋಣೆಯಲ್ಲಿದ್ದವರು ದಂಗಾದರು. ಅದರಲ್ಲಿ ಘನತೆ ಇತ್ತು, ಒಂದು ಸೆಳೆತವಿತ್ತು. ಧ್ವನಿವರ್ಧಕವಿಲ್ಲ, ಅವಳು ಪ್ರಯಾಸದಿಂದ ಧ್ವನಿ ಎತ್ತಿರಿಸಲಿಲ್ಲ. ಆದರೂ ಕೊನೆಯಲ್ಲಿ ಕುಳಿತವರಿಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಅಧ್ಯಾಪಕರೂ ಸೇರಿದಂತೆ ಎಲ್ಲರ ಕಿವಿ ನಿಮಿರಿ ನಿಂತಿತು. ಕೋಣೆಯಲ್ಲಿ ಎಲ್ಲರೂ ಬೆರಗಿನಿಂದ ಮೌನ. ಸರಿಯಾಗಿ ಎರಡು ವರ್ಷಗಳ ನಂತರ ಪಾಠ ಮಾಡುತ್ತಿದ್ದಳು. ಆದರೂ ಕಿಂಚಿತ್ತು ಭಯವಿಲ್ಲ. ನಿರರ್ಗಳವಾಗಿ ಅವಳ ಮೆಚ್ಚಿನ ವಿಷಯದ ಮಾಹಿತಿ ಅಡೆ ತಡೆಯಿಲ್ಲದೆ ಹರಿದು ಬಂದಿತು. ಸರಳವಾದ ಇಂಗ್ಲಿಷಿನಲ್ಲಿ ಎಲ್ಲರಿಗೂ ಅರ್ಥವಾಗುವ ಹಾಗೆ ಹೇಳುತ್ತ ಹೋದಳು. ಬರಿ ಮುಂದಿನ ಹುಡುಗರಿಗೆ ಅಲ್ಲದೆ ಕೋಣೆಯಲ್ಲಿ ಎಲ್ಲರ ಮೇಲೂ ಕಣ್ಣು ಹಾಯಿಸುತ್ತ ಬಹಳ ಸಲೀಸಾಗಿ ಕ್ಲಿಷ್ಟವಾದ ತಾಂತ್ರಿಕ ವಿಷಯವನ್ನು ಸರಾಗವಾಗಿ ವಿವರಿಸತೊಡಗಿದಳು. ಮೊದಲು ಮುಂದಗಡೆ ಕುಳಿತ ಹುಡುಗರ ಮುಖದಲ್ಲಿ ನಗು ಮಾಯವಾಗಿ ಕತೂಹಲ ಮೂಡಿತು. ನೆಟ್ಟಗೆ ಕುಳಿತರು. ಅವಳ ವಾಕ್ ಪ್ರವಾಹ ಶುರುವಾದ ಎರಡು ನಿಮಿಷದಲ್ಲಿ “ಎಸ್ ಮ್ಯಾಮ್” ಅರ್ಥವಾಯಿತು ಎನ್ನುವಂತೆ ಹುಡುಗರು ತಲೆದೂಗಲಾರಂಭಿಸಿದರು. ಇನ್ನೂ ಸ್ವಲ್ಪ ಸಮಯದ ನಂತರ ಅಧ್ಯಾಪಕರೂ ತಲೆ ಅಲ್ಲಾಡಿಸಿದರು. ಅವಳ ಪಾಠದ ಮೋಡಿಗೆ ಎಲ್ಲರು ಮನಸ್ಸು ಸೋತರು. ಸಮಯ ಹೋಗಿದ್ದೇ ಅರಿವಾಗಲಿಲ್ಲ. ಸುಮನ್ ತನ್ನ ಎಲ್ಲಾ ದುಃಖವನ್ನು ಮರೆತು ಪಾಠದಲ್ಲಿ ಮಗ್ನಳಾದಳು. ಅವಳಲ್ಲಿ ಹೊಸ ಚೈತನ್ಯ, ಜೀವಕಳೆ ಮರುಳಿತು. ಸಭಿಕರ ಪ್ರತಿಕ್ರಿಯೆಗೆ ಉಲ್ಲಾಸಗೊಂಡಳು. ಅದು ಅವಳ  ಧ್ವನಿಗೆ ವಿಶೇಷ ಮೆರಗು ನೀಡಿತು. ಅವಳು ಇನ್ನೂ ಉತ್ಸಾಹದಿಂದ ಪಾಠ ಮಾಡಿದಳು. ಅದರ ಅಲೆಯಲ್ಲಿ ಎಲ್ಲರು ತೇಲಿ ಹೋದರು.

PC: Internet

ಅರ್ಧ ಗಂಟೆಯಲ್ಲಿ 8085ರ ಪ್ರವರ ಹೇಳಿ ಮುಗಿಸಿ “ಎನಿ ಡೌಟ್ಸ್?” ಎಂದಳು. ಕೋಣೆಯಲ್ಲಿ ಒಂದು ವಿಧವಾದ ಮೌನ. ಯಾರೂ ಅವಳ ಪಾಠದ ಮೋಡಿಯಿಂದ ಹೊರ ಬಂದಿರಲಿಲ್ಲ. ಪಾಠ ಮಾಡುವ ಈ ವೈಖರಿ ಅವರಿಗೆ ಹೊಸದು. ಭಾಷೆ ಹಾಗೂ ತಂತ್ರಜ್ಞಾನದ ಮೇಲಿನ ಈ ಪರಿಯ ಹಿಡಿತ ಅವರು ಮೊದಲು ಬಾರಿ ಕೇಳಿದ್ದರು. ದಿಗ್ಭ್ರಮೆಗೊಂಡಿದ್ದರು ಪಾಠದ ಸೊಗಸಿಗೆ.  ಕಪ್ಪು ಹಲಿಗೆಯ ಮೇಲೆ ಬರೆದಿದ್ದನ್ನು ಅಳಿಸಿ ತಿರುಗಿ  “ಥ್ಯಾಂಕು ಯು” ಎಂದಳು. ಅವಳು ಇನ್ನು ಆಚೆ ಹೊರಡುವಳು ಎಂದು ಅರಿತು ಧಿಗ್ಗನೆ ಎಲ್ಲರು ಎದ್ದು ನಿಂತು “ಥ್ಯಾಂಕ್ ಯು ಮ್ಯಾಮ್” ಓಕ್ಕೊರಲಿನಲ್ಲಿ ಹೇಳಿದರು. ಅವರ ಕೈಗಳು ಚಪ್ಪಾಳೆ ತಟ್ಟಲು ಹಾತೊರೆಯುತ್ತಿದವು. ಅವರ ಧ್ವನಿಯಲ್ಲಿ ಗೌರವ ಉಕ್ಕುತ್ತಿತು. ಸುಮನ್ ಹೊರ ನಡೆದಳು. ಕೋಣೆಯಲ್ಲಿ ಕೋಲಾಹಲ. ಎಲ್ಲರು ತಮ್ಮ ಮೆಚ್ಚುಗೆ ವ್ಯಕ್ತ ಪಡಿಸುವವರೆ.

ಪ್ರಾಂಶುಪಾಲರ ಕಛೇರಿಯ ಎದುರಗಿನ ಮೇಜಿನ ಮುಂದೆ ಕುಳಿತಳು. ಕೋಣೆಯಿಂದ ಹೊರ ಬಂದ ಕೆಲ ಅಧ್ಯಾಪಕರು ಅವಳಿಗೆ ನಗೆ ಚೆಲ್ಲಿ ಅವಳನ್ನು ದಾಟಿ ಕಛೇರಿಯ ಒಳಗೆ ನಡೆದರು. ಆಮೇಲೆ ನಡೆದಿದ್ದು ಒಂದು ಔಪಚಾರಿಕ ಸಂದರ್ಶನ. ತಾಂತ್ರಿಕ ವಿಷಯಗಳ ಮೇಲೆ ಪ್ರಶ್ನೆ ಕೇಳಲು ಕುಳಿತ ಅಧ್ಯಾಪಕರುಗಳು ಆಗಲೇ ಅವಳ ಪಾಠವನ್ನು ಕೇಳಿದ್ದರು. ಆದರೂ ಒಂದೆರೆಡು ಪ್ರಶ್ನೆ ಕೇಳಿದರು. ಕೇಳುವವರಿಗೇ ಭಯ, ಹಿಂಜರಿಕೆ. ಉತ್ತರ ಹೇಳುವ ಸುಮನ್‍ಗೆ ಹೆಚ್ಚಿನ ಆತ್ಮವಿಶ್ವಾಸ. ಅಷ್ಟರಲ್ಲಾಗಲೆ ನೇಮಕಾತಿ ಪತ್ರ ತಯಾರ ಮಾಡಿ ಕೊಟ್ಟು ಬಿಟ್ಟರು. ಸುಮನ್ ಮಾರನೆ ದಿನವೇ ಸೇರುವುದಾಗಿ ಆಶ್ವಾಸನೆ ಇತ್ತು ಮನೆಗೆ ಹೊರಟಳು.

**

ಬಾಗಿಲು ತೆರೆದ ರಾಜಲಕ್ಷ್ಮಿಯ ಮುಖದಲ್ಲಿ ಆತಂಕ. ಮೂರು ತಿಂಗಳಿಂದ ಗೋಳಾಡುತ್ತ ಕೋಣೆಯ ಆಚೆ ಬರದ ಮಗಳು ಇಂದು ಹೊರಗೆ ಹೋಗಿದ್ದಳು.

ಅವಳಿತ್ತ ಕಾಗದ ನೋಡಿ ಇನ್ನೂ ಅಚ್ಚರಿ “ಆ ಹೊಸ ಕಾಲೇಜಾ?” ಕೇಳಿದರು.

“ಹೂಂ.”

“ನಿನ್ನ ಕಾಲೇಜು ಬೇಡವಾ?”

“ಬೇಡ” ತಾನು ಓದಿ ಕೆಲಸ ಮಾಡಿದ ಕಾಲೇಜಿಗೆ ಹೋಗಲು ಸುಮನ್‍ಗೆ ಏನೋ ಹಿಂಜರಿಕೆ, ಸಂಕೋಚ. ಅಲ್ಲಿದ್ದವರ ಪ್ರಶ್ನೆಗಳಿಗೆ ಅವಳ ಬಳಿ ಉತ್ತರವಿರಲಿಲ್ಲ. ಅವರ ಅನುಕಂಪ ಅವಳಿಗೆ ಹಿಂಸೆಯಾಗುವುದು, ಇದು ಖಚಿತ. ಇವರಿಬ್ಬರ ಮಾತು ಕೇಳಿಸಿ ಅವಳ ತಂದೆ ಕೋಣೆಯಿಂದ ಹೊರ ಬಂದು “ಏನದು?” ಕೇಳಿದರು. ಆ ಕಾಗದವನ್ನು ಅವರ ಕೈಗಿತ್ತು ಅವರನ್ನೆ ನೋಡುತ್ತ ನಿಂತರು ರಾಜಲಕ್ಷ್ಮಿ. ಅದನ್ನು ಓದಿ ಅಶ್ವತನಾರಾಯಣರು ಸುಮನಳ ತಲೆ ನೇವರಿಸಿ ಒಳ ನಡೆದರು. ಹೋಗುವ ಮುನ್ನ ಹೆಂಡತಿಯ ಮುಖ ನೋಡಿದರು. ಆ ನೋಟದಲ್ಲಿದ್ದ ದುಃಖ ಹತಾಶೆ ಸುಮನ್ ಕಣ್ಣಿಗೂ ಬಿತ್ತು. ಅವರನ್ನು ಹಿಂಬಾಲಿಸಿದಳು “ಅಪ್ಪ ಯಾರಾದ್ರೂ ವಕೀಲರ ಹತ್ರ ಹೋಗೋಣ. ವಿಚ್ಛೇಧನಕ್ಕೆ ಅರ್ಜಿ ಹಾಕಬೇಕು” ಉಕ್ಕುತ್ತಿದ್ದ ಅಳುವನ್ನು ತಡೆದು ಉಗುಳು ನುಂಗಿದಳು. ಅವಳ ಹಿಂದೆ ಬಂದ ಅವರಮ್ಮನಿಗೆ ಅದು ಸಾಧ್ಯವಾಗಲಿಲ್ಲ. ಕಣ್ಣೀರು ಸುರಿಸುತ್ತ ಅಡುಗೆಮನೆಗೆ ನಡೆದು ಬಿಟ್ಟರು. “ಸರಿ ಮರಿ” ಅಶ್ವತನಾರಾಯಣರು ಕಷ್ಟಪಟ್ಟು ಆ ಪದಗಳನ್ನು ಉಚ್ಚರಿಸಿದರು. ಸುಮನ್ ಅವರ ಮುಂದೆ ತನಗೆ ಅಳು ತಡೆಯಲು ಆಗದು ಎಂದು ಅರಿತು ಸರಸರನೆ ಕೋಣೆಯೊಳಗೆ ಸೇರಿದಳು. ಕಿಟಕಿಯ ಬಳಿ ನಿಂತ ಮೌನವಾಗಿ ಅತ್ತಳು.

ಮಗಳು ಹಳೆಯದನ್ನು ಮರೆತು ಹೊಸ ಜೀವನ ಕಟ್ಟಲು ಹೊರಟ್ಟಿದ್ದಾಳೆ. ಅದು ಸರಿ. ಆದರೆ ದೇವರು ಅವಳಿಗೆ ಈ ಪರಿಯ ಶಿಕ್ಷೆ ನೀಡಬೇಕಿತ್ತೇ? ಅವಳ ಯಾವ ಜನ್ಮದ ಕರ್ಮ ಅವಳನ್ನು ಹೀಗೆ ಗೋಳು ಹೊಯ್ಯಿಕೊತಾ ಇದೆ? ಸುಮನ್ ತಂದೆ ತಾಯಿ ಇಬ್ಬರದು ಇದೇ ಕೊರಗು. 

ಸುಮನಳ ವಿಷಯ ತಿಳಿದು ಗಿರಿಜಮ್ಮ ಅವರ ಯಜಮಾನರು ಶ್ರೀಧರ್ ಮೂರ್ತಿ ಅಶ್ವತನಾರಾಯಣರನ್ನು ಭೇಟಿಯಾಗಲು ಬಂದರು ಅಂದು ಸಂಜೆ. ಅಶ್ವತನಾರಾಯಣರ ಬಾಯಿಂದ ಮಾತೇ ಹೊರಡದು. ಸುಮನ್ ತಂದ ಫೋಟೋಗಳನ್ನು ಅವರ ಮುಂದೆ ಇಟ್ಟು ಸುಮ್ಮನಾಗಿ ಬಿಟ್ಟರು. ಒಂದೆರಡು ಫೋಟೋ ನೋಡಿದ ಶ್ರೀಧರ್ ಮೂರ್ತಿಗೆ ಎಲ್ಲಾ ಅರ್ಥವಾಯಿತು. ಅವರಿಗೂ ಬಹಳ ನೋವಾಯಿತು. ಎಷ್ಟು ಸುಸಂಕೃತ ಜನ. ಮುತ್ತಿನಂಥ ಹುಡುಗಿ. ತಡವಾದರೂ ಒಳ್ಳೆಯ ಕಡೆ ಮದುವೆಯಾಯಿತು ಎಂದು ಸಂತೋಷಪಟ್ಟಿದ್ದರು. ಹೀಗೆ ಮೋಸ ಮಾಡೋದಾ? ಮದುವೆಗೆ ಮುಂಚೇನೇ ಈ ಸಂಬಂಧ ಇತ್ತಾ ಅಥವಾ ಹೊಸಾದಾ ನೂರೆಂಟು ಪ್ರಶ್ನೆ ಮನಸ್ಸಿನಲ್ಲಿ ಆದರೆ ಹೇಗೆ ಕೇಳುವುದು  ಇವರನ್ನು ಈ ಸ್ಥಿತಿಯಲ್ಲಿ? ಏನು ಹೇಳುವುದು? ತಲೆ ತಗ್ಗಿಸಿ ಸುಮ್ಮನೆ ಕುಳಿತರು.

ಸುಮನ್ ಬೆಳಗ್ಗೆ ಹೇಳಿದ್ದು ಜ್ಞಾಪಕವಾಗಿ “ಸುಮನ್‍ಗೆ ವಿಚ್ಛೇಧನೆ ಬೇಕಂತೆ. ಸ್ವಲ್ಪ ಸಹಾಯ ಮಾಡ್ತೀರಾ?” ಅಶ್ವತನಾರಾಯಣರ ಧ್ವನಿ ಎಲ್ಲಿಂದಲೋ ಬಂದಂತೆ ತೋರಿತು.

ಶ್ರೀಧರ ಮೂರ್ತಿಗಳು ವಕೀಲರು, “ಖಂಡಿತ ನಿಮಗೆ ಏನು ಸಹಾಯ ಬೇಕೋ ಹೇಳಿ ನಾನು ಮಾಡ್ಕೊಡ್ತೀನಿ.”

ಒಮ್ಮೆ ಸುಮನಳನ್ನು ಮಾತಾಡಿಸಿ ಎಲ್ಲಾ ಕೂಲಂಕಷವಾಗಿ ಕೇಳಿದರು. ಕೇಳಿದರು ಎನ್ನುವುದಕ್ಕಿಂತ ಎಲ್ಲಾ ವಿಷಯಗಳನ್ನು ಸುಮನ್ ತಾನೇ ವಿವರಿಸಿದಳು. ಅಳು ಬಂದಾಗ ಬಿಕ್ಕಿ, ಕಣ್ಣೀರು ಒರೆಸಿಕೊಳ್ಳುತ್ತ, ಬಿಕ್ಕುತ್ತ ಎಲ್ಲವನ್ನು ಹೇಳಿದಳು. ಅವಳಿಗಿಂತ ಹೆಚ್ಚಾಗಿ ಅಳುತ್ತಿದ್ದ ಅವರಮ್ಮ ಅಪ್ಪನ ನೋಡಿ ಶ್ರೀಧರ ಮೂರ್ತಿ ಬಹಳ ನೊಂದರು. ಅವರಿಗರಿವಿಲ್ಲದಂತೆ ಅವರ ಕಣ್ಣುಗಳಲ್ಲೂ ನೀರು. ಸಾವರಿಸಿಕೊಂಡು ಅವಳಿಗೆ ಆಶ್ವಾಸನೆ ಇತ್ತರು. ಸುಮನ್ ತಲೆಯನ್ನು ಒಮ್ಮೆ ಪ್ರೀತಿಯಿಂದ ನೇವರಿಸಿ ಅಶ್ವತನಾರಾಯಣರ ಕೈಯನ್ನು ಧೈರ್ಯದಿಂದಿರು ಎನ್ನುವಂತೆ ಒಮ್ಮೆ ಅದುಮಿ ಹೊರ ನಡೆದರು.

ಬೀದಿಯ ಕೊನೆಯ ಮನೆ ಸರೋಜಮ್ಮನ ಕಿವಿಗೆ ಸುಮನಳ ವಿಷಯ ತಿಳಿಯುವ ಹೊತ್ತಿಗೆ ಇನ್ನೂ ಮೂರು ದಿನ. ಅದೇ ಕೊನೆ ಆ ಬೀದಿಯಲ್ಲಿ ಅವಳ ಬಗ್ಗೆ ಗುಸುಗುಸು ಕೇಳಿ ಬಂದದ್ದು. ಅವಳ ಬಗ್ಗೆ ಎಲ್ಲರಲ್ಲೂ ಅನುಕಂಪ. ಕೆಲಸಕ್ಕೆ ಹೋಗಿ ಬರುವ ಸುಮನ್ ಗೆ ಅವರ ಈ ಅನುಕಂಪವನ್ನು ಎದುರಿಸುವ ಧೈರ್ಯ ಇಲ್ಲ. ಸುಮನ್ನೆ ತಲೆ ತಗ್ಗಿಸಿ ಓಡಾಡುತ್ತಿದಳು. ಅವರಿಗೆ ಅವಳಿಗೆ ಏನೆಂದು ಸಾಂತ್ವನ ಹೇಳುವುದು ಅದೇ ತಿಳಿಯದು. ಸುಮ್ಮನೆ ಅವಳ ಚಟುವಟಿಕೆಯನ್ನು ಗಮನಿಸುತ್ತಿದರು.

ಶ್ರೀಧರ ಮೂರ್ತಿಗೆ ಸುಮನ್ ಬಂದ ಮೇಲೆ ಗಿರೀಶ ಖುದ್ದಾಗಿ ಒಂದು ಸಲೀನೂ ಕರೆ ಮಾಡಿರಲಿಲ್ಲ ಎಂದು ಕೇಳಿದಾಗಲೇ ಖಚಿತವಾಗಿತ್ತು ಅವನಿಗೆ ಈ ಮದುವೆಯನ್ನು ಉಳಿಸುವ ಆಸಕ್ತಿ ಇಲ್ಲವೆಂದು. ವಿಚ್ಛೇಧನೆ ಪತ್ರವನ್ನು ತಯಾರಿಸಿ ಸುಮನ್ ಕೈಯಲ್ಲಿ ಸಹಿ ಮಾಡಿಸಿ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಗಿರೀಶಗೆ ಖುದ್ದಾಗಿ ಹೋಗಿ ಕೊಟ್ಟಿದ್ದರು. ಅಹಂಕಾರದಿಂದ ನನ್ನ ವಕೀಲರು ಇದಕ್ಕೆ ಉತ್ತರಿಸುತ್ತಾರೆ ಎಂದಿದ್ದ ಗಿರೀಶ.

ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿhttps://surahonne.com/?p=38440

(ಮುಂದುವರಿಯುವುದು)

-ಸುಚೇತಾ ಗೌತಮ್.‌

6 Responses

  1. ಅಂತೂ ಕಾದಂಬರಿಯ.. ನಾಯಕಿ..ಗಟ್ಟಿ ನಿರ್ಧಾರ ಮಾಡಿದಳು..ಅದಕ್ಕೆ ನಾಯಕನ ಪ್ರತಿ ಕ್ರಿಯೆಯ ..ಒಂದು ಎಳೆ..ಕಾಣಿಸಿತು…ಯಾವ ದಿಕ್ಕಿಗೆ ಸಾಗುತ್ತದೆಯೋ ಮುಂದಿನ…ಕಂತಿಗೆ..ನೋಡಬೇಕಾಗಿದೆ..

  2. ನಯನ ಬಜಕೂಡ್ಲು says:

    ಅದ್ಭುತವಾಗಿ ಸಾಗುತ್ತಿದೆ ಕಾದಂಬರಿ. ಸುಮನ್ ಕಾನ್ಫಿಡೆನ್ಸ್ ಇಷ್ಟ ಆಯಿತು. ಹೊಸ ದಾರಿಯತ್ತ ಹೆಜ್ಜೆ ಹಾಕುವ ನಿರ್ಧಾರ ತುಂಬಾ ಚೆನ್ನಾಗಿದೆ.

  3. ಶಂಕರಿ ಶರ್ಮ says:

    ಸುಮನ್ ದೃಢ ಮನಸ್ಸಿನಿಂದ ತನ್ನ ಜೀವನ ಪಥವನ್ನು ಆರಿಸಲು ಸಮರ್ಥಳಾದುದು ಖುಷಿಕೊಟ್ಟಿತು. ಕಥಾಹಂದರ ಬಹಳ ಚೆನ್ನಾಗಿದೆ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: