ಕಾದಂಬರಿ : ‘ಸುಮನ್’ – ಅಧ್ಯಾಯ 10
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಕೆಂಭೂತ
ಸಿಂಗಾಪುರಿನ ವಾಸ ಗಿರೀಶನ ಹೊಸ ಜೀವನದ ಮೊದಲನೆಯ ಅಧ್ಯಾಯ. ಅವನ ಸಹಪಾಠಿಯರು ಯಾರೂ ಅಲ್ಲಿ ಇರಲಿಲ್ಲ. ಸಹಪಾಠಿಯರೇ ಏಕೆ ಅವನ ಪರಿಚಯದವರೂ ಇಲ್ಲ ಅಲ್ಲಿ. ಕೆಲಸದ ಜೊತೆ ಮೊದಲು ಅಲ್ಲಿ ವಿಶ್ವವಿದ್ಯಾಲಯದಲ್ಲಿ ಇನ್ನೊಂದು ಮ್ಯಾನೆಜ್‍ಮೆಂಟ್ ಪದವಿ ಪಡೆದ. ಒಮ್ಮೆ ಅವನ ಕಂಪನಿಯವರು ಅವನನ್ನು ಒಂದು ಎಟಿಕೆಟ್ (ಶಿಷ್ಟಾಚಾರ) ತರಬೇತಿ ಕಾರ್ಯಕ್ರಮಕ್ಕೆ ಕಳುಹಿಸಿದ್ದರು. ಅಲ್ಲಿ ಪಾಶ್ಚಿಮಾತ್ಯ ದೇಶದ ನಡೆ ನುಡಿ ಹೇಳಿಕೊಡಲಾಗುತ್ತಿತ್ತು. ಚಮಚ, ಚಾಕು ಹಿಡಿದು ಊಟ ಮಾಡುವುದು, ಜಾಮ್ ಹಾಗೂ ಮಾರ್ಮಲೇಡ್ ವ್ಯತ್ಯಾಸವೇನು, ವಿಸ್ಕಿ ಹಾಗೂ ಶಾಂಪೇನ್ ಹೇಗೆ ಗುರುತಿಸುವುದು. ಹೀಗೇ. ಆ ತರಬೇತಿ ಮುಗಿದರೂ ಗಿರೀಶ ಅಲ್ಲೆ ನಡೆಸುತ್ತಿದ್ದ ಫಿನಿಶಿಂಗ್ ಸ್ಕೊಲ್‍ಗೆ ಸಂಜೆ ಹೊತ್ತು ಹೋಗುತ್ತಿದ್ದ. ಫಾರ್ಮಲ್ ಉಡುಪು ಎಂದರೇನು ಅದನ್ನು ಯಾವಾಗ ಧರಿಸಬೇಕು. ಯಾವ ಬಣ್ಣದ ಶರ್ಟ್ ಗೆ ಯಾವ ಬಣ್ಣದ ಟೈ ಒಪ್ಪುವುದು, ಯಾವ ಪ್ಯಾಂಟಿಗೆ ಯಾವ ಕಾಲಚೀಲ ಧರಿಸಬೇಕು ಇವುಗಳಿಂದ ಆರಂಭಿಸಿ ಅವನು ಅಲ್ಲಿದ್ದ ವೈನ್ ಟೇಸ್ಟಿಂಗ್, ಆರ್ಟ ಅಪ್ರಿಸಿಯೇಶನ್, ಬಾಲ್‍ರೂಮ ಡಾನ್ಸಿಂಗ್, ಗೋಲ್ಫ್ ಆಡುವುದು, ಬಿಲಿಯರ್ಡ್ಸ್ ಆಡುವುದು ಎಲ್ಲವನ್ನು ಕಲಿತ. ಮೈ ಚಳಿ ಬಿಟ್ಟು ಪಬ್‍ಗಳಲ್ಲಿ ಇಂಗ್ಲಿಷ್ ಹಾಡುಗಳಿಗೆ ನರ್ತಿಸುವುದನ್ನು ಕಲಿತ. ಎಣಿಸುತ್ತ ಹೋಗುವುದಕ್ಕಿಂತ ಆ ಶಾಲೆಯಲ್ಲಿದ್ದ ಬಹುಪಾಲು ಎಲ್ಲಾ ಕೋರ್ಸುಗಳಿಗು ಹೋದ.
ರಜೆಯಲ್ಲಿ ಊರಿಗೆ ಬಂದಾಗ ಅವನಲ್ಲಾದ ಬದಲಾವಣೆ ಈಗೀಗ ನಾಗರಾಜರಾಯರಿಗೂ ಜಯಮ್ಮನವರಿಗೂ ಕಸಿವಿಸಿ ತರಿಸುತ್ತಿತ್ತು. ಅವನು ತಮ್ಮ ಮಗನೇ ಎಂಬ ಅಚ್ಚರಿ ಕೂಡ. ಇನ್ನು ಅವರ ಪುಣ್ಯಕ್ಕೆ ಅವರು ಅವನ ಮನಸ್ಸನ್ನು ಅರಿತಿರಲಿಲ್ಲ. ಅರಿತ್ತಿದ್ದರೇ ಮುಜುಗರಪಡುತ್ತಿದ್ದರು. ಅವನು ತನ್ನ ಹಳೆ ಜೀವನಶೈಲಿಯನ್ನು ಅಳಿಸಿ ಹಾಕುವ ಪ್ರಯತ್ನದಲ್ಲಿದ್ದ. ಆ ಮಾರ್ಪಾಟು ಪೂರ್ಣಗೊಳ್ಳುವ ಮುಂಚೆ ಅವರಿಬ್ಬರು ಅಸುನೀಗಿದರು. ತಿರುಪತಿಗೆ ಹೋಗಿ ಬರುತ್ತಿದ್ದಾಗ ಆದ ಅಪಘಾತದಲ್ಲಿ ಇಬ್ಬರು ಈ ಲೋಕವನ್ನು ತ್ಯಜಿಸಿದರು. ಅದು ಅವರ ಪುಣ್ಯ. ಮಗನ ಅಧಿಪತನವನ್ನು ಕಣ್ಣಾರೆ ನೋಡುವುದು ತಪ್ಪಿತು. ಊರಿನ ಮನೆ, ಆಸ್ತಿ ಎಲ್ಲವನ್ನು ಚಿಕ್ಕಪ್ಪನಿಗೆ ಮಾರಿ ಊರಿನ ಕೊಂಡಿ ಹರಿದು ಹಾಕಿದ ಗಿರೀಶ. ಕೊನೆಯಲ್ಲೂ ನಾಗರಾಜರಾಯರು ಹಾಗೂ ಜಯಮ್ಮನವರ ಮನೋಭಾವವನ್ನು ಅವನು ಒಪ್ಪಲಿಲ್ಲ. ಅವರ ಆ ಸರಳತೆ ಅವನಲ್ಲಿ ಹುಟ್ಟು ಹಾಕಿದ ಕೀಳರಿಮೆ, ಕಿಚ್ಚು, ಛಲ ಅವರ ಅರಿವಿಗೆ ಬರಲೇ ಇಲ್ಲ. ವಿಚಿತ್ರವೆಂದರೆ ದೊಡ್ಡವನಾದ ಮೇಲೂ ಅವರ ಸರಳತೆಯ ಮರ್ಮವನ್ನು ಎಷ್ಟು ವಿಶ್ಲೇಷಿಸಿದರೂ ಅದನ್ನು ಅವನ ಮನಸ್ಸು ಒಪ್ಪದೇ ಹೋಯಿತು. ಅದರಿಂದ ತನಗೆ ಆದ ಅವಮಾನವೇ ಅವನ ಹೊಸ ಜೀವನಶೈಲಿಗೆ ಬುನಾದಿ ಆಯಿತು.
**
ಸಿಂಗಾಪುರ್, ಅಮೆರಿಕ, ಲಂಡನ್, ಪ್ಯಾರಿಸ್, ಆಸ್ಟ್ರಿಯಾ, ನಾರವೇ, ಜಿನೆವಾ ಮುಂತಾದ ದೇಶಗಳಲ್ಲಿ ವಾಸ ಮಾಡಿದ ಗಿರೀಶ ಬೆಂಗಳೂರಿಗೆ ತೆರಳಿದ. ಹನ್ನೆರಡು ವರ್ಷದಲ್ಲಿ ಗಳಿಸಿದ ಹಣ ಲೆಕ್ಕದಷ್ಟು. ಡಾಲರ್ ಕಾಲೋನಿಯಲ್ಲಿ ಸುಂದರವಾದ ಮನೆ ಕಟ್ಟಿಸಿ ಬಹಳ ಅಕ್ಕರಾಸ್ಥೆಯಿಂದ ಅದನ್ನು ಸಜ್ಜುಗೊಳಿಸಿದ. ಪ್ರದರ್ಶನಗಳಿಗೆ ಹೋಗಿ ಕಲಾಕೃತಿಗಳನ್ನು ತಂದು ಗೋಡೆಗಳನ್ನು ಅಂದಗೊಳಿಸಿದ. ಖುದ್ದಾಗಿ ಬೆಂಗಳೂರಿನ ಅತ್ಯುತ್ತಮ ಪೀಠೋಪಕರಣಗಳ ಅಂಗಡಿಗಳಿಗೆ ಹೋಗಿ ಸೋಫಾ ಸೆಟ್, ಮಂಚಗಳು, ಬೀರುಗಳು ತಂದು ಮನೆ ಸಜ್ಜುಗೊಳಿಸಿದ. ಇಂಟಿರೀಯರ್ ಡೆಕೋರೆಟರ್ ಜೊತೆ ಊರೆಲ್ಲ ಸುತ್ತಾಡಿ ತರಾವರಿ ದೀಪಗಳು, ಕಾಫಿ ಟೇಬಲ್ ಪುಸ್ತಕಗಳನ್ನು ಖರೀದಿಸಿ ಮನೆಯ ಅಲಂಕಾರ ಮಾಡಿದ. ಮನೆಗೆ ರಂಗಪ್ಪ ಅಡುಗೆಯವನಾಗಿ ಬಂದ. ಬೆಳಗ್ಗಿನ ಉಪಹಾರ ಬ್ರೆಡ್, ಆಮ್ಲೆಟ್, ಹಣ್ಣಿನ ರಸ ಆದರೆ, ಮಧ್ಯಾಹ್ನ ಗ್ರೀನ್ ಸಲಾಡ್, ಸಬ್ಜಿ. ರೋಟಿ ಇನ್ನೇನೋ. ಗೆಳೆಯರು ಬಂದಾಗ ಮನೆಯಲ್ಲಿ ವೈನ್, ವಿಸ್ಕಿ ರಮ್ ಹೊಳೆಯಾಗಿ ಹರಿಯುತ್ತಿದ್ದವು. ಠಾಕುಠೀಕಾಗಿ ಡ್ರೆಸ್ ಮಾಡುವ ಗಿರೀಶ ರಂಗಪ್ಪನ ಹೆಮ್ಮೆಯ ಸಾಹೇಬ.
**
ಗಿರೀಶ ಚಿಕ್ಕಪ್ಪನಿಗೆ ಪುರೋಹಿತರು ಸುಮನ್ ಜಾತಕ ಕೊಟ್ಟಾಗ ಅಣ್ಣನ ಜ್ಞಾಪಕವಾಗಿ ಗಿರೀಶ ಮನೆಗೆ ಓಡೋಡಿ ಬಂದರು. ಅವನ ಜೀವನಶೈಲಿ ಅವರಿಗೆ ಕಸಿವಿಸಿ ಉಂಟು ಮಾಡಿದರೂ ಸುಮನಳನ್ನು ನೋಡಲು ಗಿರೀಶನ ಜೊತೆ ಹೋಗಿ ಅವನು ಹುಡಗಿಯನ್ನು ಒಪ್ಪಿದ್ದಾಗ ಸಂತೋಷದಿಂದ ಧಾರೆ ಎರೆದುಕೊಳ್ಳಲು ಒಪ್ಪಿದರು. ಗಿರೀಶ ಸುಮನಳನ್ನು ನೋಡಿ ಅವಕ್ಕಾಗಿದ್ದ. ಹುಡುಗಿ ಬಹಳ ಸುಂದರವಾಗಿದ್ದಾಳೆ. ಚಿನ್ನಾಗಿ ಡ್ರೆಸ್ ಮಾಡಿದರೇ ಒಳ್ಳೆ ರೂಪದರ್ಶಿಯ ತರಹ ಕಾಣಿಸುತ್ತಾಳೆ. ಅವನಿಗೆ ತಾವಿಬ್ಬರು ಬಹಳ ಆಕರ್ಷಕವಾದ ಜೋಡಿ ಆಗುವರು ಎಂಬ ಕಲ್ಪನೆ ಬಹಳ ಮುದ ನೀಡಿತ್ತು. ಅವರ ಮನೆಯನ್ನು ಒಮ್ಮೆ ಕಣ್ಣಾಡಿಸಿ ನೋಡಿದ್ದ. ಮನೆಯಲ್ಲಿ ಎಲ್ಲಾ ಸೌಲಭ್ಯಗಳಿದ್ದವು ಆದರೇ ಶ್ರೀಮಂತಿಕೆಯ ಛಾಯೆ ಇಲ್ಲ. ಮನಸ್ಸಿನ ಮೂಲೆಯಲ್ಲಿ ಅವನ ತಂದೆ ತಾಯಿಯ ಜ್ಞಾಪಕವಾಗಿ ಮನಸ್ಸು ಹುಳಿಯಾಯಿತು. ಆದರೂ ಅದರಲ್ಲಿ ಒಂದು ಬೆಳ್ಳಿ ಗೆರೆ ಕಂಡಿತು. ಶ್ರೀಮಂತಿಕೆಯನ್ನು ಕಾಣದ ಮೇಷ್ಟ್ರ ಮಗಳಿಗೆ ಸಿರಿತನದ ಆಸೆ ಇರುವುದು ಖಂಡಿತ. ಅವಳು ತನ್ನ ಜೀವನಶೈಲಿಗೆ ಸೋಲುವುದು ನಿಶ್ಚಿತ. ಅವಳನ್ನು ತನ್ನ ವಿಚಾರಧಾರೆಗೆ ಬದಲಾಯಿಸುವುದು ಸುಲಭ. ಹೀಗೆ ಯೋಚಿಸಿ ಮದುವೆಗೆ ಒಪ್ಪಿಗೆ ನೀಡಿದ.
ಒಂದು ತಿಂಗಳ ನಂತರ ಚಿಕ್ಕಪ್ಪ ಚಿಕ್ಕಮ್ಮನನ್ನು ಜೊತೆ ಮಾಡಿಕೊಂಡು ಮದುವೆಗೆ ಬೇಕಾದ ಎಲ್ಲಾ ಖರೀದಿ ಮಾಡಿ ಊರಿಗೆ ಕಳುಹಿಸಿದ. ಅವರ ಜೊತೆ ಸೀರೆ ಖರೀದಿಸಲು ಬಂದಿದ್ದಳು ಸಮನ್. ಮೊದಲೇ ಅಂಗಡಿಯವರಿಗೆ ಹೇಳಿದ್ದರಿಂದ ಅವನು ತೆಗೆದು ಹಾಕಿದ್ದ ಸೀರೆಗಳೆಲ್ಲಾ ಹತ್ತು ಇಪ್ಪತ್ತು ಸಾವಿರದ ಮೇಲಿನವು. ಸುಮನ್ ಸಂಕೋಚದಿಂದ ಸೀರೆ ಆರಿಸುವುದನ್ನು ವಿಸ್ಮಯದಿಂದ ನೋಡಿದ.
ಮದುವೆಯಾದ ತಕ್ಷಣ ಮಧುಚಂದ್ರಕ್ಕೆ ವಿದೇಶಕ್ಕೆ ಹೋಗಿ ಬಂದ ನಂತರ ಬೆಂಗಳೂರಿನಲ್ಲಿ ರಿಸೆಪ್ಶನ್ ಇಟ್ಟುಕೊಳ್ಳುವುದು. ತನ್ನ ಸಹುದ್ಯೋಗಿಗಳಿಗೆ ಸುಮನಳನ್ನು ಕಂಡು ಹೊಟ್ಟೆಕಿಚ್ಚು ಆಗಬೇಕು. ಅವರ ನಡೆನುಡಿ ಹಾವಭಾವಕ್ಕೆ ಕಕ್ಕಾಬಿಕ್ಕಿಯಾಗದ ಹಾಗೆ ಸುಮನಳನ್ನು ಮೊದಲು ವಿದೇಶಕ್ಕೆ ಕರೆದೊಯ್ಯಬೇಕು. ಅವಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಪರಿಚಯ ಮಾಡಿಸಬೇಕು. ಅವನ ಜೀವನಶೈಲಿಗೆ ಪಾದಾಪರ್ಣೆ ಮಾಡಲು ಇದು ಮೊದಲನೆಯ ಪಾಠ.
ಹೀಗೆ ಯೋಚಿಸಿದ್ದ ಗಿರೀಶ. ಹಾಗೆಯೇ ಲಂಡನ್ ಪ್ಯಾರಿಸ್ ಹಾಗೂ ಜಿನೆವಾಗೆ ಹೋಗಿದ್ದರು. ಅಲ್ಲಿಯ ಪ್ರೇಕ್ಷಣಿಯ ಸ್ಥಳಗಳನ್ನು ಬೆರಗು ಮಿಶ್ರಿತ ಸಂತಸದಿಂದ ನೋಡಿ ಚಿಕ್ಕ ಹುಡುಗಿಯ ಹಾಗೆ ನಲಿದ ಸುಮನಳನ್ನು ನೋಡಿ ಗಿರೀಶ ತನ್ನ ಅನಿಸಿಕೆ ಸರಿ ಎಂದುಕೊಂಡ. ಸುಮನ್ ಇಂಗ್ಲಿಷ್ ಕಥೆ ಕಾದಂಬರಿಗಳಲ್ಲಿ ಓದಿದ್ದನ್ನು ಕಣ್ಣಾರೆ ನೋಡಿ ಸಂತೋಷಪಡುತ್ತಿದ್ದಳು. ಇದು ಅವನಿಗೆ ತಿಳಿಯಲಿಲ್ಲ. ಅಲ್ಲಿಂದ ಬಂದಿಳಿದ ಮಾರನೆಯ ದಿನವೇ ರಿಸೆಪ್ಶನ್ ಅದಕ್ಕೆ ಅವನು ಆಸೆಯಿಂದ ತಂದ ಘಾಗ್ರಾ ಚೋಲಿ ಧರಿಸಿ ಕತ್ತಿಗೆ ಅವನೇ ಆರಿಸಿದ ನೆಕಲೆಸ್ ತೊಟ್ಟ ಸುಮನ್‍ನಿಂದ ಗಿರೀಶನಿಗೆ ಕಣ್ಣು ಕಿತ್ತಲು ಅಸಾಧ್ಯವಾಗಿತ್ತು. ಅಷ್ಟು ಸುಂದರವಾಗಿ ಕಾಣುತ್ತಿದ್ದಳು. ಸುಸಜ್ಜಿತ ಕೋಣೆಗೆ ಅವನ ಕೈ ಹಿಡಿದು ಒಳ ನಡೆದಾಗ ಅಲ್ಲಿದ್ದ ಅವನ ಗೆಳೆಯರ ಬೆರಗು ಅವನು ಎಂದೂ ಮರೆಯದಂತೆ ಮನಸ್ಸಿನಲ್ಲಿ ಅಚ್ಚು ಒತ್ತಿತು. ಅರೆಘಳಿಗೆ ನಿಂತು ಒಮ್ಮೆ ಎಲ್ಲರನ್ನು ನೋಡಿದ. ಹೆಂಗಸರು ಕಣ್ಣಿನಲ್ಲಿ ಕೂಡ ಮೆಚ್ಚುಗೆ. ಅದನ್ನು ಕಂಡ ಗಿರೀಶ ಎದೆ ಉಬ್ಬಿತು. ಇಡೀ ಸಂಜೆ ಗಿರೀಶ ಬೀಗುತ್ತಿದ್ದ. ಸ್ವರ್ಗಕ್ಕೆ ಮೂರೇ ಗೇಣು.
ಮದುವೆಯ ರಜೆ ಮುಗಿಸಿ ಗಿರೀಶ ಆಫೀಸಿಗೆ ಮರಳಿದ. ಆಫೀಸಿನಲ್ಲಿ ಎಲ್ಲರು “ಯು ಆರ್ ಎ ಲಕ್ಕಿ ಗಯ್” ಎಂದು ಬೆನ್ನು ತಟ್ಟುವರೇ “ಹೇ ಗಿರೀಶ ಯುವರ್ ವೈಫ್ ಈಸ್ ಪ್ರಿಟಿ” ಮಹಿಳೆಯರೂ ಹೊಗಳಿದ್ದರು. ವಾರವಾದರೂ ಗಿರೀಶ ಧರೆಗೆ ಇಳಿದಿರಲಿಲ್ಲ. ಅಂದು ಮಧ್ಯಾಹ್ನ ಸುಮನಳನ್ನು ನೋಡಲು ಮನೆಗೆ ಓಡೋಡಿ ಹೋಗಿದ್ದ. ಹೊಟ್ಟೆ ಚುರುಗುಟ್ಟುತ್ತಿತ್ತು. ಸುಮನ್ ತಟ್ಟೆಗೆ ಅನ್ನ ಹುಳಿ ಬಡಿಸಿ ಬೋಂಡಾ ಹಾಕವುದನ್ನು ಅಚ್ಚರಿಯಿಂದ ನೋಡಿದ. ಪರೀಕ್ಷೆ ಮುಗಿಸಿ ಊರಿಗೆ ಹೋದಾಗ ಅವನ ತಾಯಿ ಹುರಿಟ್ಟು ಕಲಿಸಿ ತಂದುಕೊಟ್ಟಿದ್ದು ಕಣ್ಣು ಮುಂದೆ ತೇಲಿತು. ಅವನ ತಾಯಿ ಅದರ ಹಿಂದೆ ಅವರ ಮನೆ, ಅಂಗಳ ಎಲ್ಲಾ ಒಮ್ಮೆ ತೇಲಿ ಹೋದವು. ಸುಮನಳ ಆಸೆ ಕಣ್ಣುಗಳಲ್ಲಿ ತಾಯಿಯ ಪ್ರೀತಿಯ ಕಣ್ಣುಗಳು ಕಂಡವು. ಸರ್ರನ್ನೆ ಸಿಟ್ಟು ನೆತ್ತಿಗೇರಿತು “ಯಾರು ಮಾಡಿದ್ದು ಅಡುಗೆನ?” ಗರ್ಜಿಸಿದ್ದ. ಆ ಘಟನೆಗೆ ಸುಮನಳ ಪ್ರತಿಕ್ರಿಯೇ ಕೂಡ ಅವರಮ್ಮನನ್ನು ಜ್ಞಾಪಿಸಿ ಇನ್ನು ಕೆಂಡ ಮಂಡಲವಾಗಿದ್ದ.
ಸುಮನಳನ್ನು ಮೆಲ್ಲಗೆ ತನ್ನ ಭೋಗ ಹಾಗೂ ವಿಲಾಸಿ ಜೀವನಶೈಲಿಗೆ ಮತಾಂತರ ಗೊಳಿಸುಲು ಸೋನಾಲಳ ಕಿಟ್ಟಿ ಪಾರ್ಟಿ ಒಂದು ಒಳ್ಳೆಯ ಅವಕಾಶ ಅನಿಸಿತ್ತು ಗಿರೀಶಗೆ. ಸೋನಾಲಳ ಮನೆಗೆ ಕಳುಹಿಸಿದ್ದ. ಸಂಜೆ ಮನೆಗೆ ಬಂದಾಗ ಆ ದಿನದ ಆಗುಹೋಗುಗಳ ಬಗ್ಗೆ ಸುಮನಳ ಮಾತಿನಲ್ಲಿದ್ದ ಅಸಹ್ಯ ಅವಳಿಗಾದ ಮಾನಸಿಕ ಹಿಂಸೆ ಅವನಲ್ಲಿ ಜಿಗುಪ್ಸೆ ಮೂಡಿಸಿತ್ತು. ಆದರೂ ತನ್ನ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಇನ್ನೂ ಬಲವಂತ ಮಾಡತೊಡಗಿದ. ಆದರೆ ಮೆಲ್ಲಗೆ ಅವನು ಸಹನೆಯನ್ನು ಕಳೆದುಕೊಳ್ಳತೊಡಗಿದ. ಏನನ್ನು ಮರೆಯಲು ಪ್ರಪ್ರಯತ್ನಪಟ್ಟಿದ್ದನೋ ಅದನ್ನೇ ಜ್ಞಾಪಿಸುತ್ತಿದ್ದಳು ಸುಮನ್. ಯಾವ ಜೀವನಶೈಲಿಯನ್ನು ಮರೆಮಾಚಲು ಕಷ್ಟಪಟ್ಟು ಹೊಸ ಜೀವನಶೈಲಿಗೆ ಮತಾಂತರಗೊಂಡಿದ್ದನೋ ಆ ಹಳೆಯ ಜೀವನಶೈಲಿಯನ್ನು ಮರುಕಳಿಸುವ ಪ್ರಯತ್ನ ಸುಮನ್ ದು. ಸಮಾಜದಲ್ಲಿ ಯಾವ ಎತ್ತರದ ಸ್ಥಾನವನ್ನು ಗಳಿಸಬೇಕು, ಶ್ರೀಮಂತರ ಜೊತೆ ಸರಿಸಮಾನನಾಗಿ ತನ್ನ ಒಡನಾಟವಿರಬೇಕು ಎಂದು ಬಯಸಿದ್ದ. ಎಲ್ಲವನ್ನು ಸಾಧಿಸಿದ್ದ. ಯಾವುದೇ ಸಿದ್ಧಾಂತಕ್ಕೆ ಮತಾಂತರಗೊಂಡವರಲ್ಲಿ ಆ ಸಿದ್ಧಾಂತದ ಬಗ್ಗೆ ಇರುವ ಶ್ರದ್ಧೆ, ನಿಯತ್ತು ಆ ಸಿದ್ಧಾಂತದ ಮೂಲ ಅನುನಾಯಿಗಳಲ್ಲಿ ಇರುವುದಿಲ್ಲ. ಹಾಗಾಗಿತ್ತು ಗಿರೀಶಗೆ. ಶ್ರೀಮಂತರ ಯಾವ ದರ್ಪ ಹಾಗೂ ಕ್ರೂರತನ ಅವನನ್ನು ನೋಯಿಸಿತ್ತೋ ಈಗ ಅದೇ ದರ್ಪ ಕ್ರೂರತನ ಅವನಲ್ಲಿ ಮನೆ ಮಾಡಿತ್ತು. ಸಿಟ್ಟಿನಲ್ಲಿ ಮಾತಾಡಿದರೇ ಅದೇ ತಿರಸ್ಕಾರ, ತಾತ್ಸರ. ನಾಲಿಗೆ ಒಂದು ಹರಿತವಾದ ಚಾಕು.
ಹೌದು ಸುಮನ್ ಇಂತಹ ಸಿರಿತನ ನೋಡಿರಲಿಲ್ಲ. ಅವಳಿಗೆ ಅದರ ಆಸೆಯೂ ಇರಲಿಲ್ಲ. ದುಡ್ಡು ಎಲ್ಲಿರಬೇಕೋ ಅದು ಅಲ್ಲಿರಬೇಕು. ಅದು ನಮ್ಮನ್ನು ಆಳಬಾರದು. ಒಡವೆ ವಸ್ತು ಇದೆಯಾ ಸರಿ ಹಾಕಿಕೊಳ್ಳುವುದು. ಬೇರೆಯವರ ಬಳಿ ಇದ್ದದ್ದು ತನ್ನ ಬಳಿ ಅದರ ಅಪ್ಪನಂತಹದು ಇರಬೇಕು ಇದು ಸುಮನಳ ಆಸೆ ಅಲ್ಲ. ಅವಳ ಈ ಮನೋಧರ್ಮ ಗಿರೀಶ ವಿಚಾರಧಾರೆಗೆ ವಿರುದ್ಧ. ಹೀಗೆ ವಿಪರೀತ ವಿಚಾರಧಾರೆಯ ಇಬ್ಬರು ಮದುವೆಯ ಬಂಧನದಲ್ಲಿ ಬಂಧಿತರಾಗಿದ್ದು ಒಂದು ವಿಪರ್ಯಾಸ.
**
ಗಿರೀಶ ಬುಸುಗುಟ್ಟುತ್ತಿದ್ದ. ರೇಖಾಳ ಕರೆ ಬಂದಾಗಿನಿಂದ ಅವನ ತಲೆ ಕೆಟ್ಟಿತ್ತು “ಏನು ನಿನ್ನ ಮುದ್ದಿನ ಗಿಳಿ ಪಾರ್ಟಿಯಿಂದ ಓಡಿ ಹೋದಳು” ರೇಖಾಳ ಮಾತಿನ ವ್ಯಂಗ್ಯ ಹಾಗೂ ಧಾಟಿ ಅವನ ಅಹಂಗೆ ಚಾಟಿ ಏಟಿನಂತೆ ಇತ್ತು. ಸಾವರಿಸಿಕೊಂಡು “ಲೇಟಾಯಿತು ಅಂತ ಬಂದಿರಬೇಕು ಸುಮನ್” ಅವನ ಮಾತಿನಲ್ಲಿ ಅವನಿಗೇ ನಂಬಿಕೆ ಇರಲಿಲ್ಲ. ಅದು ಅವನ ಧ್ವನಿ ಸಾರುತ್ತಿತ್ತು. ಕಿಲಕಿಲನೆ ನಗುತ್ತ ರೇಖಾ ಫೋನ್ ಕೆಳಗಿಟ್ಟುಳು. ಗಿರೀಶ ಮುಖ ಕೆಂಪಗಾಗಿತ್ತು. ತಕ್ಷಣ ಮನೆಗೆ ಹೋಗಿ ಸುಮನಳನ್ನು ಬಯ್ಯೂವಷ್ಟು ಸಿಟ್ಟು. ಹೋದಲೆಲ್ಲಾ ಇವಳಿಂದ ಅವಮಾನನೇ. ಅವತ್ತು ರಿಸಾರ್ಟ್‍ಗೆ ಒಳ್ಳೆ ಅಜ್ಜಿ ತರಹ ಡ್ರೆಸ್ ಮಾಡಿದ್ದಲದೇ ಪಾರ್ಟಿಲಿ ಒಳ್ಳೆ ಮಡಿ ಹೆಂಗಸಿನಂತೆ ವರ್ತಿಸಿದ್ದಳು. ಅವಳನ್ನು ಎಷ್ಟು ಜನ ತಾತ್ಸರದಿಂದ ನೋಡಿದ್ದರು. ಅದಕ್ಕಿಂತ ಹೆಚ್ಚಾಗಿ ಎಲ್ಲರ ಅಯ್ಯೋ ಪಾಪ ಗಿರೀಶ ಎನ್ನುವ ಅವರ ನೋಟವನ್ನು ಅವನಿಗೆ ಎದುರಿಸಲು ಆಗಿರಲಿಲ್ಲ. ಗಿರೀಶನ ಮುಖದಲ್ಲಿ ಸಿಟ್ಟು ಅವಮಾನ ನಾ ಮುಂದೆ ತಾ ಮುಂದೆ ಎಂದು ಪೈಪೋಟಿ ನಡೆಸಿದ್ದವು. ಮನಸ್ಸಿನ ಮೂಲೆಯಲ್ಲಿ ಸುಮನ್ ಅವನ ಜೀವನಶೈಲಿಗೆ ಬದಲಾಗುವುದಿಲ್ಲ ಎಂಬ ಸಂಶಯ ಮನೆ ಮಾಡಿತ್ತು. ಅವಳಿಂದಾಗಿ ತಾನು ಕಷ್ಟಪಟ್ಟು ಕಟ್ಟಿದ ಹೊಸ ಬಾಳು ಮರಳಿನಗೂಡಿನಂತೆ ಕುಸಿಯುವ ಹಾಗೆ ಕಂಡಿತು.
ಬಾಗಿಲು ತಟ್ಟಿದ ಶಬ್ದ ಕೇಳಿ ಮೇಜಿನ ಮೇಲಿದ್ದ ಕಡತವನ್ನು ಎಳೆದುಕೊಂಡು ಪೆನ್ ಕೈಗೆತ್ತಿಕೊಂಡು “ಯಸ್ ಕಮ್ ಇನ್” ಅಂದ. “ಹಲೋ ಗಿರೀಶ ಮೀಟ್ ಅನುಪಮಾ ಅವರ ನ್ಯೂ ಫನ್‍ಕ್ಷನಲ್ ಕನ್ಸಲ್‍ಟೆಂಟ್” ರವಿ ಕುಮಾರ ಒಳಗೆ ಬರುತ್ತ ತಮ್ಮ ಜೊತೆಯಲಿದ್ದ ಮಹಿಳೆಯನ್ನು ಪರಿಚಯಿಸಿದರು.
“ಹಲೋ ಗಿರೀಶ” ಅನುಪಮಾ ಕೈ ಮುಂದೆ ಮಾಡಿದಾಗ ಅವಳನ್ನು ನೋಡಿ ತಬ್ಬಿಬ್ಬಾದ ಗಿರೀಶ ಎದ್ದು ಅವಳ ಕೈ ಕುಲಕಿದ “ಹೌ ಆರ್ ಯು. ಲಾಂಗ್ ಟೈಮ್ ನೋ ಸಿ.”
“ಫೈನ್ ಥ್ಯಾಂಕ ಯು. ಹೌ ಆರ್ ಯು ?”
“ಗುಡ್ ಯು ಗೈಯ್ಸ್ ನೋ ಈಚದರ್. ಕ್ಯಾಚ್ ಅಪ್. ಬರ್ತೀನಿ ಗಿರೀಶ ಆ ಹೊಸ ಪ್ರಾಜೆಕ್ಟ್ ಬಗ್ಗೆ ಅನುಪಮಾಗೆ ತಿಳಿಸಿಬಿಡು” ರವಿ ಕುಮಾರ ಹೊರಗೆ ನಡೆದರು.
ಎಮ್.ಬಿ,ಎ ಮುಗಿಸಿ ಗಿರೀಶ ಹಾಗೂ ಅನುಪಮಾ ಒಂದೊಂದು ದಿಕ್ಕಿನಲ್ಲಿ ಹೋಗಿದ್ದರು. ಈಗ ಹೀಗೆ ಭೇಟಿಯಾಗಿದ್ದರು. ಅವಾಗಿನಿಂದ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದ ಆಗುಹೋಗುಗಳ ಬಗ್ಗೆ, ಎಲ್ಲಾ ಸಹಪಾಠಿಗಳ ಬಗ್ಗೆ ವಿಚಾರಿಸಿ ಚರ್ಚಿಸುವ ಹೊತ್ತಿಗೆ ಮಧ್ಯಾಹ್ನದ ಊಟದ ಸಮಯ. ಇಬ್ಬರೂ ಊಟಕ್ಕೆ ಒಟ್ಟಿಗೆ ಹೋಗಿದ್ದರು. ಅಲ್ಲಿಂದ ವಾಪಸ್ಸಾದಾಗ ಅನುಪಮಾ ತನ್ನ ಟೀಮ್ ಅನ್ನು ಭೇಟಿಯಾಗಲು ಹೋದಳು.
ವಾರದ ಹಿಂದೆ ರವಿ ಕುಮಾರ ಅನುಪಮಾಳ ಬಯೋಡೆಟಾ ತೋರಿಸಿ ಅವಳು ತಮ್ಮ ಕಂಪನಿ ಸೇರಲು ಒಪ್ಪಿದ್ದಾಳೆ ಎಂದು ತಿಳಿಸಿದನ್ನು ಗಿರೀಶ ಮರೆತು ಬಿಟ್ಟಿದ್ದ. ಅವಳನ್ನು ಇಂದು ನೋಡಿದಾಗ ಸ್ವಲ್ಪ ದಂಗಾಗಿದ್ದ. ನೋಡಲು ಈಗಲೂ ಸ್ಮಾರ್ಟಾಗೇ ಇದ್ದಳು. ದಟ್ಟವಾದ ಬಾಬ್ ಕೂದಲು ನವಿರಾಗಿ ಮಾಡಿದ ಮೇಕಪ್ ಉಟ್ಟ ಬೆಲೆ ಬಾಳುವ ಸೀರೆ ಎಡ ಭುಜದ ಮೇಲೆ ಅದಕ್ಕೆ ಸಿಕ್ಕಿಸಿದ ಬ್ರೂಚ್ ಕತ್ತಲ್ಲಿ ತೆಳುವಾದ ಚಿನ್ನದ ಸರ, ಒಂದು ಕೈಯಲ್ಲಿ ದಪ್ಪನೆಯ ಬಳೆ ಇನ್ನೊಂದು ಕೈಯಲ್ಲಿ ಸಿಟಿಜನ್ ಗಡಿಯಾರ ಎಲ್ಲಾ ಇತ್ತು ಆದರೆ ಓದುತ್ತಿರುವಾಗ ಇದ್ದ ದರ್ಪ ಇರಲಿಲ್ಲ ಮೂಖದಲ್ಲಿ. ಲವಲವಿಕೆಯ ಬದಲು ಗಿರೀಶಗೆ ಅವಳಲ್ಲಿ ಸೋತ ಭಾವನೆ ಕಂಡಿತ್ತು. ಬಾಲ ಮುದುರಿದ ಒದ್ದೆ ನಾಯಿಯ ಹಾಗೆ.
ಅಮೆರಿಕಾಗೆ ಹೋದ ಅನುಪಮಾ ವಾಲ್ ಸ್ಟ್ರೀಟಿನಲ್ಲಿ ಕೆಲಸ ಮಾಡಿದ್ದಳು. ಅಲ್ಲಿಯ ಕರೋಡಪತಿಯನ್ನು ಮದುವೆ ಆಗಿದ್ದಳು. ಮದುವೆ ಆರು ತಿಂಗಳಲ್ಲಿ ಮುರಿದು ಬಿದ್ದಿತು. ಆನಂತರ ಸಿಕ್ಕವರನೆಲ್ಲ ಡೇಟ್ ಮಾಡಿದ್ದಳು. ಆದರೆ ಯಾರೂ ಅವಳನ್ನು ಮದುವೆಯಾಗಲು ಮುಂದೆ ಬಂದಿರಲಿಲ್ಲ. ಅವಳ ದರ್ಪ ಅದಕ್ಕೆ ಕಾರಣ ಎಂದು ಅರಿವಾಗುವ ಹೊತ್ತಿಗೆ ಅವಳಿಗೆ ಮೂವತ್ತಾರು ವರ್ಷ. ಒಂಟಿ ತೋಳದ ಜೀವನ ಸಾಕಾಗಿ ಮನೆ, ಗಂಡ, ಮಕ್ಕಳು ಬೇಕು ಎನ್ನುವ ಹೊತ್ತಿಗೆ ಕೈ ಖಾಲಿ. ಇನ್ನು ಸ್ವದೇಶಕ್ಕೆ ಮರಳಿ ಅಮ್ಮ ಅಪ್ಪ ತೋರಿಸಿದವರನ್ನು ಮದುವೆಯಾಗುವುದು ಎಂದು ನಿರ್ಧರಿಸಿದಳು. ಅದಕ್ಕೆ ತಕ್ಕ ಹಾಗೆ ಬೆಂಗಳೂರಿನ ಕಂಪನಿಯೊಂದರಲ್ಲಿ ಫಂಕ್ಚನಲ್ ಕನ್ಸಲೆಟೆಂಟ್ ಹುದ್ದೆಯ ಜಾಹೀರಾತು ನೋಡಿ ಅದರ ವೆಬ್‍ಸೈಟ್ ನೋಡಿದ್ದಳು. ಅಲ್ಲಿಯ ಆಡಳಿತ ಮಂಡಳಿಯಲ್ಲಿ ಗಿರೀಶನ ಫೋಟೋ ನೋಡಿ ಇನ್ನೊಂದು ಯೋಚನೆ ಮಾಡದೆ ತನ್ನ ಅರ್ಜಿ ಕಳುಹಿಸಿದ್ದಳು. ಗಿರೀಶ ಆ ಕಂಪನಿಯಲ್ಲಿದ್ದಾನೆ ಎಂದರೆ ಆ ಕಂಪನಿ ಒಳ್ಳೆಯದೇ ಅಷ್ಟು ನಂಬಿಕೆ ಇತ್ತು ಅವಳಿಗೆ. ಹಾಗೇ ಇಷ್ಟು ವರ್ಷ ಅಮೆರಿಕಾದಲ್ಲಿ ಕೆಲಸ ಮಾಡಿದ್ದರಿಂದ ಭಾರತದ ಕಂಪನಿಯ ಪರಿಸರದಲ್ಲಿ ತನಗೆ ಯಾರಾದರೂ ಗೊತ್ತಿರುವವರಿದ್ದರೆ ಒಳ್ಳೆಯದು ಎಂಬ ಲೆಕ್ಕಾಚಾರ.
ಗಿರೀಶನ ನೋಡಿ ಅವಳಿಗೂ ಅಚ್ಚರಿಯಾಗಿತ್ತು. ಅವನಲ್ಲಿ ಒಂದು ಠೀವಿ ಇತ್ತು. ಕಣ್ಣಿನಲ್ಲಿದ್ದ ಅಮಾಯಕತೆ, ನಾಚಿಕೆ, ಕೀಳರಿಮೆಯ ಛಾಯೆ ಮಾಯವಾಗಿತ್ತು. ಅವುಗಳಲ್ಲಿ ಈಗ ಒಂದು ಆತ್ಮವಿಶ್ವಾಸ ತಾಂಡವಾಡುತ್ತಿತ್ತು. ಮೂಲೆಯಲ್ಲಿ ದರ್ಪವೂ ಇತ್ತು. ಅವನು ಹಾಕಿದ್ದ ಆಲೆನ್ ಸೊಲಿ ಶರ್ಟು, ಡಾಕರ್ಸ್ ಪ್ಯಾಂಟ್, ಗುಸ್ಸಿ ಶೂಸು ಎಲ್ಲವನ್ನು ಗಮನಿಸಿದ್ದಳು ಅನುಪಮಾ. ಬಾಗಿಲು ತೆರೆದು ಅವಳು ಮುಂದೆ ನಡೆಯಲು ಬಿಟ್ಟ ಗಿರೀಶ, ಊಟಕ್ಕೆ ಹೋದಾಗ ಅವಳನ್ನು ಅವನು ನೋಡಿಕೊಂಡ ಪರಿ ಯಾವುದೂ ಅನುಪಮಾಳ ಕಣ್ಣು ತಪ್ಪಿಸಿರಲಿಲ್ಲ. ಹದಿನೈದು ವರ್ಷದ ಹಿಂದೆ ನೋಡಿದ ಗಿರೀಶನಿಗೂ ಈಗಿನ ಸಾಹೇಬನಿಗೂ ವ್ಯತ್ಯಾಸ ಅಜಗಜಾಂತರ. ಅನುಪಮಾ ಗರಬಡಿದವಳಂತೆ ಅವನ ಹಾವಭಾವವನ್ನು ಮೆಲಕು ಹಾಕುತ್ತ ಕುಳಿತ್ತಿದಳು. ಮದುವೆಯಾದರೇ ಇವನ್ನನ್ನೆ ಏಕೆ ಆಗಬಾರದು ಎಂಬ ಯೋಚನೆ ಅವಳ ಮೆದುಳನ್ನು ಕೊರೆಯಲಾರಂಭಿಸಿತು. ಗಿರೀಶಗೆ ಮದುವೆ ಆಗಿದೆ ಎಂಬ ವಿಷಯ ತಿಳಿದರೂ ಆ ಗುರಿಯನ್ನು ಸಾಧಿಸುವ ಬಗ್ಗೆ ಯೋಚನೆ ಮಾಡತೊಡಗಿದಳು.
ಬಹಳ ಬೇಗ ಆ ಗುರಿಯತ್ತ ಕಾರ್ಯಗತಳಾದಳು. ಒಂದೇ ಆಫೀಸಿನಲ್ಲಿ ಕೆಲಸ ಮಾಡವುದೂ ಅಲ್ಲದೇ ಒಂದು ಪ್ರಾಜೆಕ್ಟ್ ಮೇಲೆ ಇಬ್ಬರ ಮಧ್ಯ ಬಹಳ ಒಡನಾಟವಿತ್ತು. ಗಿರೀಶ ಜೊತೆ ಇರುವಷ್ಟು ಹೊತ್ತು ತನ್ನ ದರ್ಪದ ಪಳಿಯುಳಿಕೆಯನ್ನು ಮೆಟ್ಟಿ ಅಮಾಯಕಳಂತೆ ವರ್ತಿಸುತ್ತಿದ್ದಳು. ಕೆಲ ಸಂದರ್ಭಗಳಲ್ಲಿ ಭಾರತದ ಕಂಪನಿಯಲ್ಲಿನ ವ್ಯವಹಾರ ತನೆಗೆ ಹೊಸದು ಎನ್ನುತ್ತ ಗಿರೀಶನ ನಿರ್ಧಾರಗಳು ತನಗೆ ಒಪ್ಪಿಗೆ ಇಲ್ಲದಿದ್ದರೂ ಅನುಮೋದಿಸುತ್ತಿದ್ದಳು. ಗಿರೀಶನ ಅಹಂಗೆ ಯಾವ ರೀತಿಯಲ್ಲಿ ನೀರೆರಯಬಹುದೋ ಅದಕ್ಕೆ ಚೆನ್ನಾಗಿ ನೀರೆರಿಯುತ್ತಿದ್ದಳು, ಇದನ್ನು ಬಹಳ ನಾಜುಕಿನಿಂದ ಮಾಡುತ್ತಿದ್ದಳು, ಗಿರೀಶನಿಗೆ ಅದರ ಸುಳಿವೇ ಸಿಗದಂತೆ. ಗಿರೀಶ ಅವಳ ಸಾನಿಧ್ಯದಲ್ಲಿ ಉಬ್ಬತೊಡಗಿದ. ಹದಿನೈದು ಹದಿನಾರು ವರ್ಷದ ಹಿಂದಿನ ಅವಳ ಮೇಲಿನ ಅವನ ಆರಾಧನೆಗೆ ಪುನರ್ಜನ್ಮವಾಯಿತು. ಹೋದಲೆಲ್ಲ ಅವಮಾನವಾಗುವ ಸುಮನ್‍ಗಿಂತ ಅವನ ಠೀವಿಗೆ ಮೆರಗು ಕೊಡುವ ಅನುಪಮಾಳನ್ನು ಬಯಸತೊಡಗಿದ.
ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://surahonne.com/?p=38348
(ಮುಂದುವರಿಯುವುದು)
-ಸುಚೇತಾ ಗೌತಮ್.
ಹೊಸ ತಿರುವು. ಬ್ಯೂಟಿಫುಲ್
ಧನ್ಯವಾದಗಳು ಮೇಡಂ
ಬದಲಾವಣೆ…ಬದಲಾಗದ..ಸಂಸ್ಕಾರ..ಎರಡರ ನಡುವೆ…ಹೊಸತಿರುವು..ಕುತೂಹಲ ಕಾರಿಯಾಗಿದೆ…ಗೆಳತಿ…
ಧನ್ಯವಾದಗಳು ಮೇಡಂ
ಚಂದವಿದೆ
ಧನ್ಯವಾದಗಳು ಮೇಡಂ .
ಕಾದಂಬರಿ ಸುಮನ್. ಓಘ ಚೆನ್ನಾಗಿದೆ.ತಂಗಿ.
ಧನ್ಯವಾದಗಳು ಮೇಡಂ .
ಕಥಾಹಂದರ ಬಹಳ ಆಸಕ್ತಿದಾಯಕವಾಗಿದೆ.
ಧನ್ಯವಾದಗಳು ಮೇಡಂ .