ಗುಂಡಾಡಿ ಗುಂಡ

Share Button


ಶಾಲೆಗಳಲ್ಲಿ ಸಾಮಾನ್ಯವಾಗಿ ಹುಡುಗರಿಗೆ ಶೋಕಿ ಮಾಡುವ ಗೀಳು. ʼಹುಡುಗರುʼ ಎಂದರೆ ಕೇವಲ ಬಾಲಕರು ಎಂದರ್ಥ. ಬಾಲಕಿಯರಲ್ಲ. ಹೊಸದಾಗಿ ಮಾರುಕಟ್ಟೆಗೆ ಬಂದ ವಾಚು, ಸ್ಮಾರ್ಟ್‌ ವಾಚು, ಬೂಟುಗಳು, ಅಥವಾ ಬೆಲ್ಟು; ಎಲ್ಲಕ್ಕಿಂತ ಮುಖ್ಯವಾಗಿ ಹೇರ್‌ ಸ್ಟೈಲು! ಈ ಕೂದಲನ್ನು ಬೇರೆ ಬೇರೆ ರೀತಿಗಳಲ್ಲಿ ಕತ್ತರಿಸಿಕೊಳ್ಳುವುದು ಒಂದು ಚಟ. ವಾರವಾರಕ್ಕೂ ನಾಪಿತನಿಗೆ ಪಾಪ ಜೀವನವಾಗಲಿ ಎಂದು ಕ್ಷೌರಕ್ಕೆ ಹೋಗುವ ಹುಡುಗರ ಸ್ವಭಾವ ಎಷ್ಟು ಶ್ರೇಷ್ಠ! ಇಂತಹ ಹುಡುಗರಿಗೆ ಆದರ್ಶವಾಗಿ ಬಹಳಷ್ಟು ಮಂದಿ ನಟರೂ, ಪ್ರಸಿದ್ಧ ಆಟಗಾರರೂ ಅವರ ಕ್ಷೌರಿಕರಿಗೆ ಅನ್ನದಾತರಾಗಿ ಬೇರೆ ಬೇರೆ ಶೈಲಿಯಲ್ಲಿ ಕೇಶರಾಶಿಯನ್ನು ಕತ್ತರಿಸುವುದಿಲ್ಲವೇ?

ಶಾಲೆಯಲ್ಲಿ ಪೀ.ಟಿ ಮೇಷ್ಟ್ರಿಗೆ ಆಡುವ ಹುಡುಗರನ್ನು ಕಂಡರೆ ತುಂಬಾ ಇಷ್ಟ. ಆದರೆ ಅದಕ್ಕಿಂತಲೂ ಹೆಚ್ಚು ಇಷ್ಟಪಡುವುದು ಬೇರೆ ಬೇರೆ ಹೇರ್‌ ಸ್ಟೈಲ್‌ ಮಾಡಿಸಿಕೊಂಡಂತಹ ಹುಡುಗರನ್ನು. ಶಾಲೆಯ ಸಾತ್ವಿಕ ವಾತಾವರಣಕ್ಕೆ ನಿಮ್ಮಂತಹವರಿಂದ ಹಾನಿ ಹಾನಿ ಎಂದು ಉಗುಳಿ ಉಗುಳಿ ತಲೆ ಸವರಿ ಸವರಿ ಪ್ರೀತಿ ಮಾಡಿ ಮನೆಗೆ ಕಳುಹಿಸುತ್ತಿದ್ದರು.. ಆದರೆ ಅದೇ ಮೇಷ್ಟ್ರು  ಇನ್ನೂ ಹೆಚ್ಚಾಗಿ ಮಮಕಾರ ಇಡುವುದು ಇನ್ನೊಂದು ವಿಶಿಷ್ಟ ವರ್ಗದ ಹುಡುಗರ ಮೇಲೆ. ಅಲ್ಲ ಕಣ್ರೀ; ನಾನು ಜಾತಿ ಅಥವಾ ಕ್ಯಾಟಗರಿ ಬಗ್ಗೆ ಮಾತಾಡ್ತಾ ಇಲ್ಲ! ಆ ಇನ್ನೊಂದು ವಿಶಿಷ್ಟ ವರ್ಗ ಗೋವಿಂದನ ಭಕ್ತ ಬಾಲಕರದ್ದು. ತಿರುಪತಿ ತಿಮ್ಮಪ್ಪನ ಒಕ್ಕಲಿನವರದ್ದು; ಅರ್ಥಾತ್‌ ಗೋವಿಂದನಿಗೆ ಮುಡಿ ಕೊಟ್ಟು ಗುಂಡುಗಳಾಗಿ ಶಾಲೆಗೆ ಬಂದ ಹುಡುಗರದ್ದು. 

ಈ ಪೀ.ಟಿ ಮೇಷ್ಟ್ರು ಅವರನ್ನು ʼಗುಂಡು ಬಾರೋ ಲೇʼ ಎಂದು ಕರೆಯುವುದಲ್ಲದೆ, ʼನಿಂದು ಆರಾಮು ಕೆಲಸ ಕಣೋ; ಇನ್ನು ಆ ಕೂದಲು ಬೆಳೆಯುವವರೆಗೂ ನಿನಗೆ ಯಾವ ಪನಿಶ್ಮೆಂಟೂ ಇಲ್ಲʼ ಎಂದು ಆಗಾಗ ಹೇಳುವುದು. ಮುಂದಿನ ಮೂರು ನಾಲ್ಕು ತಿಂಗಳುಗಳ ಕಾಲ ಆ ಗುಂಡನ್ನು ಕೂದಲು ಆಚ್ಛಾದಿಸುವವರೆಗೂ; ಅವನ ʼಐಡೆಂಟಿಟಿʼಯೇ ಅದು. ಅವನು ಸತ್ಕಾರ್ಯಕ್ಕೆ ಹೆಸರುವಾಸಿಯಾದರೂ, ಅಥವಾ ಯಾವುದೋ ದುಷ್ಕರ್ಮದಲ್ಲಿ ಸಿಕ್ಕಿಬಿದ್ದರೂ, “ಯಾರು? ಆ ಗುಂಡೂನಾ?” ಎನ್ನುವುದು ಸಾಮಾನ್ಯ ಸಂಗತಿಯಾಗಿಬಿಡುತ್ತದೆ.

ಏನೇ ಬರೆದರೂ ಅದರ ಹಿಂದೆ ಅನುಭವದ ಅಧಿಕಾರ ಇರಬೇಕು ಎಂದು ಯಾರೋ ಹೇಳಿದ್ದನ್ನು ಕೇಳಿದ್ದೇನೆ. ಈ ʼಗುಂಡುʼ ವಿಷಯದಲ್ಲಿ (ದಯವಿಟ್ಟು ಅಪಾರ್ಥ ಬೇಡಾಪ್ಪ. ಗುಂಡು ಎಂದರೆ ಮುಂಡನ ಮಾಡಿಸಿಕೊಂಡ ತಲೆ ಎಂದರ್ಥ) ನನಗೆ ಅನುಭವ ಹೇರಳ. ನಮ್ಮ ಮನೆ ದೇವರು ತಿರುಪತಿ ತಿಮ್ಮಪ್ಪ. ಅದೇ, ಗಂಟೆಗಟ್ಟಲೆ ನಿಂತು ನಿಂತು ಕೊನೆಗೆ ನೋಡಿದಾಗ ಆನಂದ ಕೊಡುತ್ತಾನಲ್ಲ, ಅವನೇ. ಅವನ ಕ್ಷೇತ್ರವೆಲ್ಲಾ ಅವನ ಕೃಪಾಛಾಯೆಯೇ. 

ನಾವು, ಮನೆದೇವರು ಎಂದು ವರ್ಷದಲ್ಲಿ ನಾಲ್ಕೈದು ಬಾರಿ ತಿರುಪತಿಗೆ ಹೋಗುತ್ತಿದ್ದೆವು. ಅವು ಸಾಮಾನ್ಯವಾಗಿ ನನಗೆ ಶಾಲೆ ಇರುವಾಗಲೆ. ವಾರದ ಮಧ್ಯಯದಲ್ಲಿ ಹೋದರೆ ಜನ ಕಡಿಮೆ ಇರಬಹುದು ಎಂಬುದು ನಮ್ಮ ತರ್ಕ. ಅಲ್ಲಿ ಹೋದಾಗಲೆಲ್ಲಾ ನನ್ನದು ʼಕೂದಲು ಕೊಡಬೇಕುʼ ಎಂಬ ಹಟ. ಆದ್ದರಿಂದ ಇದು ನನಗೆ ವಾಡಿಕೆಯಾಗಿಹೋಯಿತು. ಮುಖ್ಯವಾಗಿ ನನ್ನ ಶಾಲೆಗೆ ಅಭ್ಯಾಸವಾಯಿತು. ನನ್ನ ಕೇಶವನ್ನು ನೋಡಿದ ನೆನಪೇ ಇಲ್ಲ ಅವರಿಗೆ. ಅದಕ್ಕಿಂತಲೂ ಸ್ವಾರಸ್ಯಕರವೆಂದರೇ ಶಾಲೆಯಲ್ಲಿ ವರ್ಷಂಪ್ರತಿ ಕೊಡುತ್ತಿದ್ದ ಐಡಿ ಕಾರ್ಡಿನಲ್ಲಿ ಒಂದು ಫೋಟೋ ಇರುತ್ತಿತ್ತು. ಆ ಚಿತ್ರದ ಗುಣಮಟ್ಟ, ಅದರಲ್ಲಿನ ನಮ್ಮ ಭಾವನೆ ಎಲ್ಲವೂ ಛಾಯಾಗ್ರಾಹಕನ ಮೇಲೆ ಅವಲಂಬಿತ. ನನ್ನ ಸಹಪಾಠಿಗಳಲ್ಲಿ ಕೆಲವರು ಖೈದಿಗಳಂತೆಯೂ, ಕೆಲವರ ಮುಖ ಅತ್ಯಂತ ಶ್ವೇತವರ್ಣಮಯವಾಗಿಯೂ, ಕೆಲವರು ಕಾಳರಾತ್ರರಾಗಿಯೂಬಿಡುತ್ತಿದ್ದರು. ಆದರೆ ಛಾಯಾಗ್ರಾಹಕ ಯಾರೇ ಆಗಿರಲಿ, ಆ ಕ್ಯಾಮೆರಾ ಯಾವುದೇ ಆಗಲಿ, ನಾನು ಮಾತ್ರ…….; ಹೌದು ನಿಮ್ಮ ಮನಸ್ಸಿನಲ್ಲಿ ಸರಿಯಾದ ಉತ್ತರವೇ ಬಂದಿರಬಹುದು- ನಾನು ಮಾತ್ರ ಗುಂಡು! 

ಈ ಗುಂಡು ಪದ ಬಳಕೆಯು ಬೇಕಾದಷ್ಟು ರೀತಿಗಳಲ್ಲಿ ಆಗಿದೆ. ಯಾರದ್ದೋ ದೇಹ ಭಾರೀ ಗಾತ್ರದ್ದಾಗಿದ್ದರೆ ʼಗುಂಡು ಗುಂಡಾಗಿದ್ದಾನೆʼ ಎನ್ನುವ ಜನರಿದ್ದಾರೆ. ಇನ್ನು ಸಮಾಜದ ಕೆಲವು ವರ್ಗಗಳಿಗೆ ಸೀಮಿತವಾಗಿರುವ ಬೈಗುಳಗಳಲ್ಲಿ ಈ ಪದದ ಬಳಕೆ ಇದೆ. ಪೆದ್ದ, ದಡ್ಡ ಇತ್ಯಾದಿ ಪದಗಳು ಸಾಲದಿದ್ದಾಗ, ಅದಕ್ಕೆ ವಿಶೇಷಣವೆಂಬಂತೆ, ʼಅವನು ಎಂತಹ ಗುಂಡು ಪೆದ್ದ್‌ ನನ್‌ ಮಗ ಆಗಿರಬೇಡ!ʼ ಎನ್ನುವವರನ್ನು ನಾನು ಕಣ್ಣಾರೆ ನೋಡಿದ್ದೇನೆ. ಅಷ್ಟೇ ಏಕೆ ಆ ಬೈಗುಳವನ್ನೇ ನಾನು ತಿಂದಿದ್ದೇನೆ! 


ಅಷ್ಟಕ್ಕೂ ʼತಿಮ್ಮಪ್ಪನಿಗೆ ಮುಡಿ ಕೊಡುವುದುʼ ಎಂಬುದರ ಅರ್ಥವೇನು? ತಿಮ್ಮಪ್ಪನಿಗೂ, ಅವನ ಕೃಪೆ, ಅವನ ಔದಾರ್ಯಕ್ಕೂ ನಮ್ಮ ಸಂಪೂರ್ಣ ಶರಣಾಗತಿಯ ಚಿಹ್ನೆ ಅದು!

ಗುಂಡು ಎಂದರೆ ಪೆದ್ದ, ದಡ್ಡ ಎಂಬ ಅರ್ಥ ಎಲ್ಲೂ ಇಲ್ಲ. ಈಗಿನ ತೆಲಂಗಾಣದಲ್ಲಿರುವ ವಾರಂಗಲ್‌, ೧೧ನೇ ಶತಮಾನದಲ್ಲಿ ʼಓರುಗಲ್ಲುʼ ಆಗಿತ್ತು. ರಾಷ್ಟ್ರಕೂಟರ ಸಾಮಂತರಾಗಿದ್ದ ಕಾಕತೀಯ ಸಾಮ್ರಾಜ್ಯದವರ ರಾಜಧಾನಿ ಅದಾಗಿತ್ತು. ಕಾಕತೀಯ ಸಾಮ್ರಾಜ್ಯದವರು ತೆಲುಗರು. ಅವರ ಕಾಲವನ್ನು ತೆಲುಗರು ಈಗಲೂ ಬಂಗಾರ ಕಾಲ ಎಂದು ನೆನಸಿಕೊಳ್ಳುತ್ತಾರೆ. ಬಯ್ಯಾರಂ ಶಾಸನದಲ್ಲಿ ಕೆತ್ತಿರುವಂತೆ, ಈ ಸಾಮ್ರಾಜ್ಯದ ಸ್ಥಾಪಕನ ಹೆಸರು: ಗುಂಡ! ಅಷ್ಟೇ ಅಲ್ಲ, ಅವನ ನಂತರ ಆಳಿದ ರಾಜರು ಅನುಕ್ರಮವಾಗಿ ಗುಂಡ ೧, ಗುಂಡ ೨, ಗುಂಡ ೩ ಆದಿಯಾಗಿ ಕರೆಯಲ್ಪಟ್ಟರು! ಮುಂದೆ ನಮ್ಮ ಕನ್ನಡದ ತೈಲಪನನ್ನು ಯಾವುದೋ ಒಂದು ಯುದ್ಧದಲ್ಲಿ ಸೋಲಿಸಿದ ಸಾಮ್ರಾಜ್ಯವೂ ಇದೇ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ಇರಲಿ. ನಮಗೆ ಮುಖ್ಯವಾಗಿ ಗುಂಡ ಎಂಬ ನಾಮವುಳ್ಳ ವೀರ ರಾಜರು ದೊರಕಿದಂತಾಯಿತಲ್ಲವೇ?

ಇನ್ನು scirpus kysoor ಎಂಬ ವೈಜ್ಞಾನಿಕ ನಾಮವುಳ್ಳ ಒಂದು ಬಗೆಯ ಹುಲ್ಲು ಹೃದಯಕ್ಕೆ ಅತ್ಯಂತ ಶ್ರೇಷ್ಠವಾದ ಔಷಧಿ. ಬೇರೆ ಬೇರೆ ರೋಗಗಳಿಗೂ ಔಷಧಿ ಇದು. ಇದರ ಸುಗಂಧವೂ ಅಷ್ಟೇ ಪ್ರಸಿದ್ಧ. ಇದರ ಸಂಸ್ಕೃತ ನಾಮವೇನು ಗೊತ್ತೆ? ಗುಂಡ!

ಇದು ʼಗುಂಡʼ ಎಂಬ ಪದದ ವಿಷಯವಾಯಿತು.

ಕೇಶಮುಂಡನಕ್ಕೆ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಮಗುವಿಗೆ ಒಂದು ಮಟ್ಟದ ವಯಸ್ಸು ತುಂಬಿದಾಗ, ಹಿರಿಯರು ತೀರಿಕೊಂಡಾಗ, ಸನ್ಯಾಸ ಸ್ವೀಕರಿಸುವಾಗ ಇತ್ಯಾದಿಯಾಗಿ ಕೇಶಮುಂಡನ ಮಾಡಿಸಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಕೂದಲು ತಾಮಸ ಗುಣವನ್ನು ಪ್ರತಿನಿಧಿಸುತ್ತದೆ. ಹಿರಿಯೋರ್ವರು ತೀರಿಕೊಂಡಾಗ ಅವರ ಅಂತ್ಯಸಂಸ್ಕಾರಗಳನ್ನು ಮಾಡಿದ ಪುರುಷನು ತನ್ನ ಅಹಂಕಾರವನ್ನೂ, ತಾಮಸ ಗುಣವನ್ನೂ ಬಿಡುತ್ತಿರುವನೆಂಬ ಲೆಕ್ಕದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುತ್ತಾನೆ. ಇದರಿಂದ ವೈರಾಗ್ಯ ಉಂಟಾಗಬೇಕು ಎಂಬುದೂ ಒಂದು ಉದ್ದೇಶವಾಗಿರುತ್ತದೆ. ಅಗಲಿದ ಆತ್ಮಕ್ಕೆ ತೋರುವ ಗೌರವದ ಸಂಕೇತವೂ ಅದಾಗಿರುತ್ತದೆ.

ಇನ್ನು ಹುಟ್ಟಿದ ಮಗುವಿಗೆ ಕೆಲವು ತಿಂಗಳುಗಳ ನಂತರ ಚೂಡಾಕರ್ಮ ಮಾಡುತ್ತಾರೆ, ಅಥವಾ ಚೌಲ ಎನ್ನುತ್ತಾರೆ. ಇದು ಬಹಳ ಸಂಭ್ರಮದ ವಿಷಯ. ಆ ಮಗುವಿನ ಸೌಂದರ್ಯವೇ ಬದಲಿಸಿಬಿಡುವ ಸಂಸ್ಕಾರವಿದು. ಇನ್ನು ಕೆಲ ಹಿರಿಯರಂತೂ, ʼಕೂದಲು ತೆಗೆಸಿದ ಮೇಲೆ ತರಲೆ ಜಾಸ್ತಿ ಆಗಿಬಿಟ್ಟಿದೆʼ ಎಂದೆಲ್ಲಾ ಚಾಡಿ ಹೇಳುತ್ತಾರೆ. 

ಆಯಮಗನ್ತ್ಸವಿತಾ ಕ್ಷುರೇಣೋಷ್ಣೇನ ವಾಯ ಉದಕೇನೇಹಿ।ಆದಿತ್ಯಾ ರುದ್ರಾ ವಸವ ಉನ್ದನ್ತು ಸಚೇತಸಃ ಸೋಮಸ್ಯ ರಾಜ್ಞೋ ವಪತ ಪ್ರಚೇತಸಃ ||

ಎಂದು ಅಥರ್ವವೇದ ೬.೬೮.೨ ರಲ್ಲಿ ಹೇಳಲಾಗಿದೆ. ʼಮಗುವಿಗೆ ಚೂಡಾಕರ್ಮ ಮಾಡುವ ನಾಪಿತನು ನೀರನ್ನೂ, ಸಣ್ಣ ಕತ್ತಿಯನ್ನೂ ಹಿಡಿದು ಶೀಘ್ರವಾಗಿ ಬಂದಿದ್ದಾನೆ. ಶಾಂತ ಸ್ವಭಾವರಾಗಿ ಬಾಲಕನ ಕೇಶಮುಂಡನ ಮಾಡುವವರಂತಾಗಿʼ ಎಂಬುದು ಇದರ ಸ್ಥೂಲ ಅರ್ಥ. ಇಷ್ಟೇ ಅಲ್ಲದೆ, ಅಶ್ವಲಾಯನ ಗೃಹಸೂತ್ರ ಇತ್ಯಾದಿಗಳಲ್ಲಿ ಕ್ಷೌರಿಕನಿಗೆ ಬಾಲಕನ ತಂದೆ ಹೇಳುವ ಮಾತುಗಳಿವೆ. ʼಅವನ ಕೂದಲನ್ನಷ್ಟೇ ಕತ್ತರಿಸು, ಅವನ ಆಯುಷ್ಯ ಹೆಚ್ಚಾಗಲಿʼ ಎಂಬ ಉದ್ದೇಶವುಳ್ಳ ಸೂಕ್ತಗಳವು.

ಕೇಶ ಮುಂಡನ ಮಾಡಿ, ಶಿಖೆ ಬಿಡುವ ಪದ್ಧತಿಯೂ ಇದೆ. ಶುಶ್ರುತನು ಹೇಳಿರುವಂತೆ ಶಿಖೆ ಬಿಡುವ ಜಾಗವು ಅತ್ಯಂತ ಸೂಕ್ಷ್ಮ ಪ್ರದೇಶ. ಎಲ್ಲಾ ನಾಡಿಗಳೂ ಒಂದಾಗುವಂತಹ ಜಾಗವದು. ಅಲ್ಲಿಗೆ ಏಟು ಬಿದ್ದರೆ ಅದು ಮಾರಣಾಂತಿಕ!

ಗುಂಡು ಎಂದರೇನು ಸಾಮಾನ್ಯವಲ್ಲ. 

ನಾನು ಕೇಶವನ್ನೇ ಬಿಡದ ಕಾರಣ, ಈಗೀಗ ಸ್ವಲ್ಪ ಮಟ್ಟಿಗೆ ಹೇರ್ಸ್ಟೈಲ್‌ ಮಾಡಿಕೊಂಡು ಹೋದರೆ, ಹಳೆಯ ಶಿಕ್ಷಕರುಗಳೆಲ್ಲಾ ʼಓಹೋ ಏನಪ್ಪಾ ಇದು, ಚೆನ್ನಾಗಿ ಸ್ಟೈಲ್‌ ಕಲಿತುಬಿಟ್ಟಿದ್ದೀಯೆʼ ಎಂದು ಅಣಕಿಸುವವರೇ.

ನಾನೇನು ಮಾಡಲಿ?

ಇತ್ತೀಚಿಗೆ ಜನರ ಅಭಿರುಚಿಯೂ ಬದಲಾಗುತ್ತಿದೆ. ಪೌರಾಣಿಕವಾಗಿ, ಸಂಸ್ಕಾರಗಳ ಪ್ರಕಾರ ಕೇಶಮುಂಡನವು ಶರಣಾಗತಿಯ, ವೈರಾಗ್ಯಸೂಚಕವಾಗಿತ್ತು. ಆದರೆ ಈ ಸಿನಿಮಾಗಳಲ್ಲಿ ಖಳನಾಯಕನ ತಲೆಯು ಶುಭ್ರವಾಗಿರುತ್ತದೆ, ಒಂದೇ ಒಂದು ಕೇಶ ಕಾಣದು. ಆದರೆ ಗಡ್ಡ ಮಾತ್ರ ಹೇರಳ.

ಒತ್ತಡದಿಂದಾಗಿ ಅರ್ಧಮರ್ಧ ಕೂದಲುದರುವಿಕೆಯನ್ನು ಮರೆಮಾಚಲು ಯುವಕರೆಲ್ಲರೂ ಈ ತಿರುಪತಿ ಶೈಲಿಗೇ ಮೊರೆಹೋಗುತ್ತಿದ್ದಾರೆ. ಆದರೆ ಸ್ವಭಾವ ಮಾತ್ರ ಎಷ್ಟರಮಟ್ಟಿಗೆ ಬದಲಾಗುತ್ತಿದೆಯೋ ನಾ ಕಾಣೆ.

ಇರಲಿ. ಮುಂದಿನ ಬಾರಿ ನೀವು ನನಗೆ ಸಿಕ್ಕಾಗ, ನಾನು ಹೇಗಿರುತ್ತೇನೋ ಸ್ವಲ್ಪ ಗಮನಿಸಿ.

ಶ್ರೀಮದ್ರಮಾರಮಣ ಗೋವಿಂದಾ! ಗೋವಿಂದಾ!

ತೇಜಸ್ ಎಚ್ ಬಾಡಾಲ.

3 Responses

  1. ತಿಳಿಹಾಸ್ಯದ ಹೊದಿಕೆಯುಳ್ಳ ಹಾಗೇ ಮಾಹಿತಿಯನ್ನು ಒದಗಿಸಿರವ ಗುಂಡಾಡಿ ಗುಂಡ ಲೇಖನ ಚೆನ್ನಾಗಿದೆ.. ಶುಭವಾಗಲಿ ತೇಜಸ್

  2. ನಯನ ಬಜಕೂಡ್ಲು says:

    ಸೊಗಸಾಗಿದೆ ಬರಹ

  3. ಶಂಕರಿ ಶರ್ಮ says:

    ಸೊಂಪಾಗಿ ಹೊಳೆಯುವ ಗುಂಡ ತಲೆಯ ಉಂಡಾಡಿಯ ತಿಳಿಹಾಸ್ಯ ಲೇಖನ ಚೆನ್ನಾಗಿದೆ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: