ಕಾದಂಬರಿ : ‘ಸುಮನ್’ – ಅಧ್ಯಾಯ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಹ್ಯಾಪಿ ಆನಿವರ್ಸರಿ

ನೋಡು ನೋಡುತ್ತಲೇ ಒಂದು ವರ್ಷ ಕಳೆದು ಹೋಯಿತು. ಸುಮನ್‍ಗೆ ಮದುವೆಯಾಗಿ. ಅಂದು ಮದುವೆಯ ಮೊದಲನೆಯ ವಾರ್ಷಿಕೋತ್ಸವ. ಸುಮನ್ ಕಣ್ಣು ತೆರೆಯುವ ಹೊತ್ತಿಗೆ ಗಿರೀಶ ಎದ್ದು ಅವಳ ಪಕ್ಕ ಒಂದು ದೊಡ್ಡ ಉಡುಗೊರೆ ಇಟ್ಟಿದ್ದ.  ಸಂಭ್ರಮದಿಂದ ಸುಮನ್ ಕಾಗದ ಬಿಡಿಸಿ ಡಬ್ಬ ತೆಗೆದು ನೋಡಿದಳು. ಅದರಲ್ಲಿ ಒಂದು  ಉದ್ದನೆಯ ಸ್ಕರ್ಟ್ ಅದಕೊಪ್ಪುವ ಬ್ಲೌಸ್, ಒಂದು ಪುಟ್ಟ ಡಬ್ಬದಲ್ಲಿ ಬಿಳಿ ಚಿನ್ನ ಹಾಗೂ ಪ್ಲಾಟಿನಮ್ ಮಿಶ್ರಿತ ಸುಂದರವಾದ ಸರ, ಕಿವಿಯ ಓಲೆ ಹಾಗೂ ಬಳೆ. ಇನ್ನೊಂದು ಡಬ್ಬದಲ್ಲಿ ಎರಡು ಇಂಚು ಹೀಲ್ಸ್ ಇರುವ ಮುದ್ದಾದ ಶೂಸು. ನೋಡಿ ಸುಮನ್‍ಗೆ ಗಿರೀಶ ಮೇಲೆ ಪ್ರೀತಿ ಉಕ್ಕಿ ಹರಿಯಿತು. ಗಿರೀಶ ಒಳಗೆ ಬಂದಾಗ ಪ್ರೀತಿಯಿಂದ “ಥ್ಯಾಂಕ್ ಯು” ಎಂದುಸಿರಿದಳು. ಅವಳ ಕಣ್ಣಲ್ಲಿ ಪ್ರೀತಿ ಚಿಮ್ಮುತ್ತಿತ್ತು.  

“ಬೇಗ ಆಫೀಸಿಗೆ ಹೋಗಿ ಬರ್ತೀನಿ. ತಯಾರಾಗು ಹೊರಗೆ ಹೋಗೋಣ” ಗಿರೀಶ ಕಾರಿನ ಬೀಗದ ಕೈ ಹಿಡಿದು ಹೊರ ನಡೆದ. ಮಧ್ಯಾಹ್ನ ಹೇಗೆ ಆಯಿತು ಸುಮನ್‍ಗೆ ತಿಳಿಯದು. ಅಷ್ಟು ಸಂಭ್ರಮ ಸಂತಸ. ಅಮ್ಮ ಅಪ್ಪ ಕರೆ ಮಾಡಿದ್ದರು. ಸಂಜು, ಸಂದೀಪ, ಶ್ವೇತ, ಲತಾ ಎಲ್ಲರೂ ಕರೆ ಮಾಡಿ ಶುಭ ಕೋರಿದ್ದರು. ಹನ್ನೊಂದಕ್ಕೆ ಕೂದಲನ್ನು ಚಿನ್ನಾಗಿ ಬಾಚಿ ಫ್ರೆಂಚ್ ಜಡೆ ಹಾಕಿದಳು. ಹೊಸ ಸ್ಕರ್ಟ್ ಹಾಕಿ ಅದರ ಬ್ಲೌಸ್ ನ್ನು ಕೈಗೆತ್ತಿದಳು. ಅದನ್ನು ನೋಡಿ ಹೌಹಾರಿದಳು. ಗಾಬರಿಯಿಂದ ಹಿಂದೆ ಮುಂದೆ ತಿರುಗಿಸಿ ನೋಡಿದಳು. ಅದಕ್ಕೆ ತೋಳು ಇಲ್ಲ ಭುಜವುನ್ನೂ ಮುಚ್ಚದು. ಹಾಗೇ ಹಾಸಿಗೆಯ ಮೇಲೆ ಅದನ್ನು ಹಾಕಿ ಕುಳಿತು ಡಬ್ಬವನ್ನು ಒಮ್ಮೆ ತಡಕಾಡಿದಳು. ಅದರಲ್ಲಿ ಅದಕೊಪ್ಪುವ ಒಳ ಉಡುಪು ಬಿಟ್ಟರೆ ಇನ್ನೇನು ಇರಲಿಲ್ಲ. ಇದು ತೀರಾ ಅತಿಯಾಯಿತು ಎನಿಸಿ ಅಸಹ್ಯದಿಂದ ಮುಖ ಹಿಂಡಿದಳು.  ಗಿರೀಶ ಅದನ್ನು ಹುಡುಕಿ ತಂದಿದ್ದೇ ಯಾಕೋ ಮುಜುಗರವಾಯಿತು. ಕಸಿವಿಸಿಯ ಜೊತೆ ಸಿಟ್ಟೂ ಬಂದಿತು. ಗಿರೀಶಗೆ ಅವಳು ಅಂತಹದು ಹಾಕುವಿದಿಲ್ಲ ಎಂದು ಚಿನ್ನಾಗಿ ಅರಿವಿತ್ತು. ಆದರೂ ಇದೆಂತಹ ಬಲವಂತ. ಥೂ ಅಂತಹ ಡ್ರೆಸ್ ಯಾರು ಹಾಕ್ತಾರೆ  ಬೇರೆ ಏನಾದ್ರು ಹಾಕಿಕೊಂಡು ಹೋಗೋಣ ಎನ್ನುತ್ತ ಎದ್ದವಳು ಒಂದ್ನಿಮಿಷ ಹಾಗೆ ನಿಂತಳು. ದಿನಾ ಏನೋ ಒಂದು ರಾದ್ಧಾಂತ, ಇವತ್ತು ಅದಕ್ಕೆ ಅವಕಾಶ ಕೊಡಬೇಡ ಮನಸ್ಸು ಎಚ್ಚರಿಸಿತು. ಏನೋ ತೋಚಿ ಸರಸರನೆ ಆ ಬ್ಲೌಸ್ ಹಾಕಿಕೊಂಡು ಕನ್ನಡಿ ನೋಡಿದಳು. ಸಿನಿಮಾ ನಟಿಯ ಹಾಗೆ ಕಾಣುತ್ತಿದಳು. ಆದರೆ ಸುಮನ್‍ಗೆ ಅವಳ ಪ್ರತಿಬಿಂಬ ಅಗ್ಗ ಹಾಗೂ ಅಸಭ್ಯ ಎನಿಸಿತು. ಬೀರುವಿನಿಂದ ಜೆನೆವಾದಲ್ಲಿ ತೆಗೆದುಕೊಂಡ ರೇಷ್ಮೆಯ ಕಸೂತಿ ಇದ್ದ ಪುಟ್ಟ ಶಾಲು ತೆಗೆದು ಹೊದ್ದಳು. ಬೆಳ್ಳಗಿನ ಭುಜ ಹಾಗೂ ತೋಳನ್ನು ಈಗ ಕಂಡು ಕಾಣದ ಹಾಗಿದ್ದು ಇನ್ನು ಮನಮೋಹಕವಾಗಿ ಕಾಣಿಸಿತು. ಗಿರೀಶ ಆಗಲೆ ತಯಾರಾಗಿ ಅವಳ ಕದ ತಟ್ಟುತ್ತಿದ್ದ. ಸರಸರನೆ ಸರ ಬಳೆ ಕಿವಿಗೆ ಓಲೆ ಎಲ್ಲಾ ಹಾಕಿಕೊಂಡು ಕಾಲಿಗೆ ಶೂಸು ತೊಟ್ಟು ಉಡುಪಿಗೆ ಒಪ್ಪುವ ಪುಟ್ಟ ಪರ್ಸ ಕೈಯಲ್ಲಿ ಹಿಡಿದು ಬಾಗಿಲು ತೆರೆದಳು. ಮಹಡಿ ಇಳಿದು ಬಾಗಿಲಿಗೆ ಬಂದು ಮೆಟ್ಟಲು ಮೇಲೆ ನಿಂತ ಸುಮನಳನ್ನು ಗಿರೀಶ ಎವೆಯಿಕ್ಕದೆ ನೋಡಿದ. ಒಳ್ಳೆ ರೂಪದರ್ಶಿಯ ತರಹ ಕಂಡಳು. ಅವನ ನೋಟಕ್ಕೆ ನಾಚುತ್ತ ಸುಮನ್ ಕಾರು ಹತ್ತಿದಳು.

ತಾಜ್ ವೆಸ್ಟೆಂಡ್ ಅಲ್ಲಿ ಊಟ ಮುಗಿಸಿ ಪಿವಿರ್‌ಗೆ ಹೋಗಿದ್ದರು. ಗಿರೀಶ ಬೀಗುತ್ತಿದ್ದ ಸುಂದರವಾದ ಹೆಂಡತಿಯ ಪಕ್ಕ. ರಸ್ತೆಯಲ್ಲಿ ಹೋಗುವರೆಲ್ಲ ಕತ್ತು ಕೊಂಕಿಸಿ ಸುಮನಳನ್ನು ತಿರುಗಿ ತಿರುಗಿ ನೋಡುವಾಗ ಅವಳು ಮುಜುಗರದಿಂದ ಗಿರೀಶ ಕೈಯನ್ನು ಲಘುವಾಗಿ ಹಿಡಿದು ಸಂಕೋಚದಿಂದ ನಡೆಯುತ್ತಿದ್ದಳು. ಚಿತ್ರ ಮಂದಿರದೊಳಗೆ ಹೋದರೇ ಸಾಕು ಆ ಕತ್ತಲೆಯಲ್ಲಿ ಕಳೆದು ಹೋದರೇ ಸಾಕು ಎಂದು ಬೇಗ ಬೇಗ ಹೆಜ್ಜೆ ಹಾಕಿದ್ದಳು. ಕೊನೆಗೆ ತನ್ನ ದಾರಿಗೆ ಬಂದಳು ಎಂದುಕೊಳ್ಳುತ್ತ ಗಿರೀಶ ಅವಳ ಮೇಲೆ ಪ್ರೀತಿಯ ಮಹಾಪೂರವನ್ನೇ ಹರಿಸಿದ್ದ. ಹೋದಲೆಲ್ಲ ಅವಳಿಗಾಗಿ ಬಾಗಿಲು ತೆರೆದು, ಲಿಫ್ಟಿನಲ್ಲಿ ಬೇರೆ ಗಂಡಸರ ಪಕ್ಕ ತಾನು ನಿಂತು ಸಿನಿಮಾ ನೋಡುವಷ್ಟು ಹೊತ್ತು ಸುಮನಳನ್ನು ಬಳಸಿ ಕಿವಿಯಲ್ಲಿ ಐ ಲವ್ ಯು ಹೇಳಿ ಒಂದೇ ಎರಡೇ ಅವನು ಪ್ರೀತಿ ತೋರಿದ ಪರಿ. ಸುಮನ್ ಎಲ್ಲಾ ಮರೆತು ಅದರಲ್ಲಿ ಮುಳಗಿ ಹೋದಳು.

ಲೀ ಮೇರಿಡಿಯನ್‍ಗೆ ಊಟಕ್ಕೆ ಹೊರಟರು. ದೊಡ್ಡ ರೂಮಿನ ಒಳಗೆ ನಡೆಯುತ್ತಿದ್ದ ಹಾಗೆ ದರವಾನಿನ ಕಣ್ಣುಗಳು  ಸುಮನಳನ್ನು ಮೆಚ್ಚುಗೆಯಿಂದ ನೋಡಿದ್ದನ್ನು ಗಮನಿಸಿದ ಗಿರೀಶಗೆ ಮತ್ತೇರಿತು. ಮಧ್ಯಾಹ್ನದಿಂದ ಅವನ ಕಣ್ಣು ಅವಳ ಶಾಲ್ ಮೇಲಿತ್ತು. “ಇಗೋ ನೋಡಿ ನನ್ನ ಹೆಂಡತಿಯನ್ನ” ಸರನ್ನೆ ಅದನ್ನು ಏಳೆದು ಜೇಬಿಗೆ ತುರಕಿದ. ಸುಮನ್ ಗಾಬರಿಯಿಂದ ಗಿರೀಶನ ನೋಡಿದಳು. ಕೋಣೆಯ ಜನರು ಅವಳನ್ನು ಎವೆಯಿಕ್ಕದೆ  ನೋಡುತ್ತಿದುದ್ದನ್ನು ಗಿರೀಶ ನೋಡುತ್ತಿದ್ದ. ಸುಮನ್ ನಾಚಿ ನೀರಾದಳು. ಬೆವರಿ ಹೋದಳು. ಬೆತ್ತಲಾದ ಅನುಭವ. ಭೂಮಿ ಬಾಯಿ ಬಿಡಬಾರದೇ. ನೆಲ ನೋಡುತ್ತ ಗಿರೀಶನ ಹಿಂದೆ ನಡೆದಳು. ಅವನು ಕಾಯ್ದಿರಿಸಿದ್ದ ಟೇಬಲ್ ಕೋಣೆಯ ಮಧ್ಯದಲ್ಲಿತು.

ಹೇಗೋ ಸಾವರಿಸಿಕೊಂಡು ಕುಳಿತಳು. ಕಣ್ಣು ಹನಿಗೂಡಿತು. ಮೇಜನ್ನು ನೋಡುತ್ತ ಕುಳಿತಳು. ಗಿರೀಶ ಹೆಮ್ಮೆಯಿಂದ ಕುಳಿತ್ತಿದ್ದ. ಅವಳ ಕಸಿವಸಿ ಅವನಿಗೆ ಕಾಣಲಿಲ್ಲ. ಮೊದಲೇ ಆರ್ಡರ್ ಮಾಡಿದ್ದ ಗಿರೀಶ. ಸೂಪ್ ಕುಡಿದು ಇನ್ನೇನು ಊಟ ಪ್ರಾರಂಭಿಸಬೇಕು. ಸುಮನ್ ಒಮ್ಮೆಯು ಕಣ್ಣೆತ್ತಿ ನೋಡಿರಲಿಲ್ಲ. ಹೇಗೋ ಸೂಪ್ ಮುಗಿಸಿದ್ದಳು. ಮೇಜಿನ ಮೇಲೆ ಕೇಕ್ ಇಟ್ಟಾಗ ಗಾಬರಿಯಿಂದ ತಲೆ ಎತ್ತಿದಳು. ಪಿಟೀಲ್ ನುಡಿಸುತ್ತಿದ್ದ ನಾಲ್ವರು ಹ್ಯಾಪಿ ಆನಿವರ್ಸರಿ ಎಂದು ಹಾಡುತ್ತಿದರು. ಗಿರೀಶ ಅವಳ ಗಾಬರಿಯನ್ನು ದಿಗ್ಭ್ರಮೆ ಎಂದು ಭ್ರಮಿಸಿದ. ಮೇಜಿನ ಮೇಲಿದ್ದ ಶಾಲು ಕಾಣಿಸಿತು ಸುಮನ್‍ಗೆ. ಮೆತ್ತಗೆ ಅದನ್ನು ತೆಗೆದುಕೊಂಡು ಬರೀಮೈ ಕಾಣದಂತೆ ಹೊದ್ದಳು. ಮರುಕ್ಷಣ ಗಿರೀಶ ಮೇಜಿನ ಮೇಲಿದ್ದ ಕಾರಿನ ಬೀಗದ ಕೈಯನ್ನು ಹಿಡಿದು ಬಾಗಿಲ ಕಡೆ ನಡೆದ ಸಿಟ್ಟಿನಿಂದ. ಪಿಟೀಲ್ ಒಮ್ಮೆಲೆ ಸ್ತಬ್ಧವಾಯಿತು. ಚಪ್ಪಾಳೆ ತಟ್ಟುತ್ತಿದ್ದ ಸುತ್ತಲಿನ ಮೇಜಿನವರ ಚಪ್ಪಾಳೆ ತಟ್ಟುವುದನ್ನು ನಿಲ್ಲಿಸಿದ ಕೈಗಳು ಗಾಳಿಯಲ್ಲಿ ಅತ್ತ ಇತ್ತ ಅಲ್ಲಾಡಿದವು. ಸುಮನ್ ಗರಬಡಿದವಳಂತೆ ಕುಳಿತ್ತಿದ್ದಳು. ಕೋಣೆಯಲ್ಲಿ ಸ್ಮಶಾನ ಮೌನ. ಅವಮಾನದಿಂದ ಸುಮನಳ ಮುಖ ಕೆಂಪೇರಿತ್ತು. ಮೆಲ್ಲಗೆ ಪರ್ಸಿನಿಂದ ಕ್ರೇಡಿಟ ಕಾರ್ಡ ತೆಗೆದು “ಬಿಲ್” ಎನ್ನುತ್ತ ಮೇಜಿನ ಮೇಲಿಟ್ಟಳು. ವೇಟರ್ ಮಾತಿಲ್ಲದೆ ಅದನ್ನು ತೆಗೆದುಕೊಂಡು ಹೋದ. ಅವನು ರಶೀತಿಗೆ ಅವಳ ಸಹಿ ಹಾಕಿಸಿಕೊಳ್ಳುವವರೆಗು ಯುಗ ಉರಳಿದಂತೆ ಎನಿಸಿತು ಅವಳಿಗೆ. ಅಕ್ಕಪಕ್ಕದವರು ಊಟ ಮಾಡುತ್ತಿದ್ದರೂ ಓರೆಗಣ್ಣಿನಿಂದ ಅವಳನ್ನು ನೋಡುತ್ತಿದ್ದಾರೆ ಎಂಬ ಅರಿವು ಅವಳಗಿತ್ತು. ರಶೀತಿ ಹಿಡಿದು  ಕಣ್ಣೀರು ಕಣ್ಣಿನಿಂದ ಇಳಿಯದ ಹಾಗೆ ಮನಸ್ಸು ಕಲ್ಲಾಗಿಸಿ ತಲೆ ಎತ್ತಿ ಹೊರ ನಡೆದಳು. ದರವಾನ್ ಬಾಗಿಲು ಹಾಕಿದ ತಕ್ಷಣ ರೂಮಿನಲ್ಲಿ ಎಲ್ಲರು ಒಟ್ಟಿಗೆ ದಿಗ್ಭ್ರಮೆಯಿಂದ ಆ ಘಟನೆಯ ಚರ್ಚೆ ಶುರು ಮಾಡಿದರು.  

ಹೋಟೆಲ್ ಹೊರಗೆ ಬಂದ ಸುಮನ್ ಆಟೋ ಹಿಡಿದು ಮನೆಗೆ ಬಂದಳು. ಗಿರೀಶ ಮನೆಗೆ ಬಂದಿರಲಿಲ್ಲ. ಸರಸರನೆ ಬಟ್ಟೆ ಬದಲಾಯಿಸಿ ದಿಂಬಿಗೆ ಒರಗಿದಳು. ಅಷ್ಟು ಹೊತ್ತಿನವರೆಗು ಬಿಗಿ ಹಿಡಿದಿದ್ದ ಕಂಬನಿ ನದಿಯಾಗಿ ಹರಿಯಿತು. ಬಿಕ್ಕಿ ಬಿಕ್ಕಿ ಅತ್ತಳು. ನೋವಿನಲ್ಲಿ ಅತ್ತಳು. ಅವಮಾನದಿಂದ ಬೆಂದಳು, ರೋಷದಲ್ಲಿ ಬುಸುಗುಟ್ಟಿದಳು. ಇದೆಂತಹ ಅಸಹ್ಯ ವರ್ತನೆ. ಇದು ಎಲ್ಲಿಯ ಸಂಸ್ಕೃತಿ ಹೀಗೆ ಹೆಂಡತಿಯನ್ನು ಅವಮಾನ ಮಾಡುವುದು. ಹೆಂಡತಿಯನ್ನು ಬೆತ್ತಲು ಮಾಡುವುದು ಎಲ್ಲರ ಮುಂದೆ. ಇದು ಎಲ್ಲಿಯ ಕಲ್ಚರ್. ಛೀ ನಾಚಿಕೆಗೇಡು. ನಡೆದದ್ದನ್ನು ನೆನೆಸಿಕೊಂಡು ಅವಳ ಮೈ ಉರಿಯಿತ್ತಿತ್ತು. ರಾತ್ರಿಯಿಡೀ ಕಣ್ಣು ಮುಚ್ಚಲಿಲ್ಲ. ಯೋಚಿಸಿ ಯೋಚಿಸಿ ಕಂಗೆಟ್ಟಳು. ಗಿರೀಶ ಯಾವಗಲೋ ಮನೆಗೆ ಬಂದ  ಸದ್ದಾಯಿತು. ಸುಮನ್ ಅವನ ಬಗ್ಗೆ ತಲೆ ಕೆಡಸಿಕೊಳ್ಳಲಿಲ್ಲ. ಕೋಣೆಯ ಬಾಗಿಲನ್ನೂ ತೆರೆಯಲಿಲ್ಲ. ಗಿರೀಶ ಬಟ್ಟೆ ಬದಲಾಯಿಸಿ ರಂಗಪ್ಪನ ಕೈಯಲ್ಲಿ ಚಹ ಮಾಡಿಸಿಕೊಂಡು ಟಿವಿ ಹಾಕಿದ. ಅವನಿಗೆ ಸಿಟ್ಟು ಇನ್ನು ಇಳಿದಿರಲಿಲ್ಲ. ಎಷ್ಟೋ ಹೊತ್ತಿನವರೆಗೆ ಟಿವಿ ನೋಡಿ ಸೋಫಾ ಮೇಲೆ ಮಲಗಿದ.

ಮಾರನೆಯ ದಿನ ಗಿರೀಶ ಆಫೀಸಿಗೆ ಹೋದ ಮೇಲೆ ಕೆಳಗೆ ಬಂದಳು ಸುಮನ್. ನೇರವಾಗಿ ಅಡುಗೆಮನಗೆ ಹೋಗಿ ಉಪ್ಪಿಟ್ಟು ಮಾಡಿಕೊಂಡು ತಿಂದು ಮತ್ತೆ ಮೇಲೆ ಹೋಗಿ ಕುಳಿತಳು. ಟಾಮಿ ಸುಮ್ಮನೆ ಅವಳನ್ನು ನೋಡುತ್ತ ಅವಳ ಬಳಿ ಕುಳಿತ್ತಿತ್ತು. ಸುಮನ್ ನಿನ್ನೆಯ ಘಟನೆಗಳನ್ನು ಮೆಲಕು ಹಾಕುತ್ತಿದಳು. ಒಲ್ಲದ ಮನಸ್ಸಿನಿಂದ ತೊಟ್ಟ ಉಡುಪಿನಿಂದ ಆರಂಭಿಸಿ, ತಾಜ್ ವೆಸ್ಟೆಂಡ್ ಊಟ, ಸಿನಿಮಾ ಅಲ್ಲಿಂದ ಲೀ ಮೇರಿಡಿಯನ್ ಡಿನ್ನರ್ ಒಂದು ಚಿತ್ರವನ್ನು ವೀಕ್ಷಿಸುವಂತೆ ಆ ಘಟನೆಗಳಲ್ಲಿ  ಅಭಿನೇತ್ರಿಯಾಗದೆ ಒಬ್ಬ ಪ್ರೇಕ್ಷಕಿಯಂತೆ ಅವುಗಳನ್ನು ಕಲ್ಪಿಸಕೊಂಡಳು. ತನ್ನ ಪಾತ್ರಕ್ಕಿಂತ ಗಿರೀಶ ಪಾತ್ರವನ್ನು ಸೂಕ್ಷ್ಮವಾಗಿ ವೀಕ್ಷಿಸಿದಳು. ಏನೋ ಹೊಳೆದು ಇನ್ನೂ ಧೀರ್ಘವಾಗಿ ಯೋಚಿಸಿದಳು. ತಮ್ಮ ಮದುವೆಯಾದ ದಿನದಿಂದ ಗಿರೀಶ ಅವಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾನೆ ಎಂಬ ಅರಿವಾಯಿತು. ಅವಳನ್ನು ಅವನ ಜೀವನಶೈಲಿಯನ್ನು ಅನುಕರಣಿಸಲು ಬಲವಂತಿಸುತ್ತಿರುವನು ಎನಿಸಿತು. ಮತ್ತೆ ನಿನ್ನೆಯ ಘಟನೆಗಳನ್ನು ಮೆಲಕು ಹಾಕಿದಳು. ಎಲ್ಲಿಯವರೆಗೂ ಅವಳು ಅವನು ಹೇಳಿದಂತೆ ಅಂದರೆ ಅವನು ತಂದ ಅಸಹ್ಯವಾದ ಉಡುಪು ಹಾಕಿಕೊಂಡು ಅವನ ಜೊತೆ ಹೋಗಿದ್ದಳೋ ಅಲ್ಲಿಯವರೆಗೆ ಅವನು ಅವಳನ್ನು ಮೆಚ್ಚಿ ಅವಳ ಜೊತೆ ಪ್ರೀತಿಯಿಂದ ವ್ಯವಹರಿಸಿದ್ದ. ಯಾವಾಗ ವಿರೋಧಿಸಿದಳೋ ಅವಳನ್ನು ಅವಮಾನಿಸಿದ್ದ. ರಶ್ಯಯನ್ ವಿಜ್ಞಾನಿ ಪಾವಲೊವ್ ನಾಯಿ ಬೆಕ್ಕುಗಳಿಗೆ ತರಬೇತಿ ನೀಡಿದ ಹಾಗೆ ಅನಿಸಿ ರೋಷ ಇಮ್ಮಡಿಯಾಯಿತು.  ಹಾಗೇ ಜಿಗುಪ್ಸೆ ಕೂಡ.  ಕ್ಷಣದಲ್ಲಿ ಕಾರಿನ ಬೀಗದ ಕೈಯನ್ನು  ಎತ್ತಿಕೊಂಡು ಹೊರಟಾಗ ಅವಳನ್ನು ನೋಡಿದ ಗಿರೀಶನ ನೋಟ ಜ್ಞಾಪಕವಾಗಿ ಅಳು ಬಂದಿತು. ಅಬ್ಬಾ ಅದರಲ್ಲಿ ಎಷ್ಟು ತಿರಸ್ಕಾರ. ತೋರಿಸಿಬಿಟ್ಟೆಯಲ್ಲ ನಿನ್ನ ಮಧ್ಯಮವರ್ಗದ ಸಂಸ್ಕಾರಾನಾ ಥೂ ಎಂದಿತ್ತು ಅದು.

ದಿನವಿಡೀ ಅತ್ತಿದ್ದಳು. ವಾರವಿಡೀ ಒಬ್ಬಳೆ ಕೋಣೆಯಲ್ಲಿ ಬಾಗಿಲು ಹಾಕಿ ಮಲಗಿದಳು. ತನಗೆ ಬೇಕಾದ ತಿಂಡಿ ಅಡುಗೆ ಮಾಡಿ ತಿಂದಳು. ಗಿರೀಶ ಜೊತೆ ಒಂದು ಅಕ್ಷರ ಮಾತಾಡಲಿಲ್ಲ. ಅವನೂ ಮನೆಯಲ್ಲಿ ಅವಳಿಲ್ಲವೇನೋ ಎನ್ನುವಂತೆ ಇದ್ದು ಬಿಟ್ಟ.

ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://surahonne.com/?p=38205

(ಮುಂದುವರಿಯುವುದು)

-ಸುಚೇತಾ ಗೌತಮ್.‌ 

10 Responses

  1. ನಯನ ಬಜಕೂಡ್ಲು says:

    ಯಾವುದನ್ನೇ ಆಗಲಿ ಉಸಿರು ಗಟ್ಟುವಂತೆ ಬಿಗಿಯಾಗಿ ಹಿಡಿಯಲು ಹೋದರೆ, ಅದು ಆ ಹಿಡಿತದಿಂದ ಹೊರ ಬರಲು ಪ್ರಯತ್ನಿಸಿಯೇ ತೀರುತ್ತದೆ. ಅದು ಸಂಬಂಧವಾದರೂ ಸರಿ, ಪ್ರೀತಿ ಸ್ನೇಹ, ಕಾಳಜಿಯಾದರೂ ಸರಿ. ಎಲ್ಲವೂ ಒಂದು ಮಿತಿಯಲ್ಲಿದ್ದರೆ ಚಂದ. ಮದುವೆ ಯ ಅನುಬಂಧದಲ್ಲಿ ಪರಸ್ಪರರನ್ನು ಗೌರವಿಸುವುದು ಬಹಳ ಮುಖ್ಯ. ಅದಿಲ್ಲದೆ ಹೋದಾಗ ಆ ಸಂಬಂಧ ತುಂಬಾ ದೂರದ ವರೆಗೆ ಸಾಗದು.

  2. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿ ಸಾಗುತ್ತಿದೆ ಕಥೆ

  3. ಆಚಾರ ವಿಚಾರಗಳ ಘರ್ಷಣೆ..ಸಂಸ್ಕಾರ ಗಳ ತಿಕ್ಕಾಟ.. ಸೂಕ್ಷ್ಮ ಅವಲೋಕನ ದ ಕೊರತೆ…ಪರಸ್ಪರ ಗೌರವಿಸುವಿಕೆಯಲ್ಲಿ…ಲೋಪ..ಅಭ್ಭಾ ಈ ದಂಪತಿಗಳ ಬದುಕು ಎತ್ತ ಸಾಗುತ್ತದೆಯೋ…ನಮಗಂತೂ ಮುಂದಿನ ಕಂತಿಗಾಗಿ ಕಾಯುವಂತಾಗಿದೆ…ಧಾರಾವಾಹಿ…

  4. ಶಂಕರಿ ಶರ್ಮ says:

    ಬಹಳ ಕುತೂಹಲಕಾರಿಯಾಗಿ ಸಾಗುತ್ತಿರುವ ಕಾದಂಬರಿಯು ಮುಂದಿನ ಕಂತಿಗೆ ಕಾಯುವಂತೆ ಮಾಡಿದೆ…ಧನ್ಯವಾದಗಳು ಮೇಡಂ.

  5. Padma Anand says:

    ಸುಮನ್ ಳ ಮನದ ಘರ್ಷಣೆ ತೊಳಲಾಟಗಳ ಚಿತ್ರಣ ಮನ ಕಲಕಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: