ಕಾದಂಬರಿ : ‘ಸುಮನ್’ – ಅಧ್ಯಾಯ 6
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಇನ್ನೊಂದು ಪಾರ್ಟಿ
ಪಿಕ್ನಿಕ್‍ನಿಂದ ಬಂದಾಗಿನಿಂದ ಇಬ್ಬರ ಮಧ್ಯದಲ್ಲಿ ಕವಿದಿದ್ದ ಮೌನ ಎರಡು ದಿನವಾದರು ಅಂತ್ಯಗೊಂಡಿರಲಿಲ್ಲ. ಗಿರೀಶ ಪ್ರಕಾರ ಅವನಿಗೆ ಎಲ್ಲರ ಮುಂದೆ ತನ್ನ ಹಳ್ಳಿ ಹೆಂಡತಿಯಿಂದಾಗಿ ಅವಮಾನವಾಗಿತ್ತು. ಅವನಿಗೆ ರೋಷ ಇನ್ನು ಇಳಿದಿರಲಿಲ್ಲ. ಇತ್ತ ಸುಮನ್ ಗೆ ಅವಳು ತಪ್ಪು ಮಾಡಿದ್ದಾಳೆ ಎಂದೆನಿಸಿರಲಿಲ್ಲ. ಪ್ರಾಣ ಹೋದರೂ ನಾನು ಆ ತರಹದ ಜೀನ್ಸ್ ಹಾಕುವುದಿಲ್ಲ. ಇನ್ನು ಆ ಈಜುವ ಉಡುಪು ಹಾಕುವುದು ಕನಿಸಿನ ಮಾತೇ ಸರಿ ಎಂದು ಯೋಚಿಸುತ್ತ ಕುಳಿತಳು. ನನಗೆ ಗಿರೀಶ ಜೊತೆ ಡಾನ್ಸ್ ಮಾಡುವುದಕ್ಕೆ ಬರುವುದೂ ಇಲ್ಲ ಅಂತಹದರಲ್ಲಿ ಬೇರೆ ಗಂಡಸಿನ ಜೊತೆ ವಿಚಿತ್ರ ಪೇಪರ್ ಡಾನ್ಸ್ ನನ್ನ ಕೈಯಲ್ಲಿ ಆಗದ ಮಾತು. ನಾನೇನು ಗಿರೀಶಗೆ ಈಜ ಬೇಡಿ ಅನ್ನಲಿಲ್ಲ ಹಾಗೇ ಆ ರತ್ನನ ಜೊತೆ ಅವರು ಡಾನ್ಸ್ ಮಾಡಿದಾಗ ಅಸೂಯೆಯಾದರೂ ಸುಮ್ಮನೆ ಇದ್ದೆ. ಹೀಗೆ ನಡೆದಿತ್ತು ಅವಳ ತರ್ಕ. ದಿನವಿಡೀ ಯೋಚಿಸಿದರೂ ಅವಳಿಗೆ ತನ್ನಿಂದ ತಪ್ಪು ಆಗಿದೆ ಅಥವಾ ಗಿರೀಶಗೆ ಯಾಕೆ ಅಷ್ಟು ಸಿಟ್ಟು ಬಂದಿದೆ ಎಂದು ತಿಳಿಯಲೇ ಇಲ್ಲ. ಒಂದು ವಾರ ಯೋಚಿಸಿ ಯೋಚಿಸಿ ಸುಣ್ಣವಾದಳು. ಟಾಮಿ ಜೋಲು ಮೋರೆ ಹಾಕಿಕೊಂಡು ಅವಳ ಹಿಂದೆ ಮುಂದೆ ಓಡಾಡಿತು. ಅವಳು ತನ್ನಿಂದ ಏನೂ ತಪ್ಪು ನಡೆದಿಲ್ಲವೆಂದು ಇದ್ದು ಬಿಟ್ಟಳು.
ಗಿರೀಶಗೆ ಮಡದಿಯ ಮೇಲೆ ಪ್ರೀತಿ ಇಲ್ಲವೆಂದೇನಿಲ್ಲ. ಆದರೆ ಆ ಪ್ರೀತಿ ಒಂದು ತರಹ ನಿಯಮಗಳಿಗೆ ಬಂಧಿತವಾಗಿತ್ತು. ಅವನು ಹೇಳಿದ ಹಾಗೆ ಸುಮನ್ ನಡೆದುಕೊಂಡರೆ ಆಗ ಉಕ್ಕಿ ಹರೆಯುತ್ತಿತ್ತು ಅವನ ಅನುರಾಗ. ಇದರ ಅರಿವು ಸುಮನಗಾಗಿರಲಿಲ್ಲ. ಪ್ರೀತಿ ತೋರಿಸುವುದು ಅಂದರೆ ಗಿರೀಶ ಪ್ರಕಾರ ಅವನ ಅಭಿರುಚಿಗೆ ತಕ್ಕಂತೆ ಬಟ್ಟೆ ಬರೆ ತೆಗೆದುಕೊಡುವುದು ಅಥವಾ ಅವನ ಘನತೆಗೆ ಸರಿ ಹೊಂದುವ ಹೋಟೆಲ್ ಗೆ ಕರೆದುಕೊಂಡು ಹೋಗುವುದು.
ಈ ರಾದ್ಧಾಂತ ಆದ ಒಂದು ತಿಂಗಳ ನಂತರ ಒಂದು ದಿನ ಸುಮನಳ ಮೊಬೈಲ್ ಟ್ರಿನ್‍ಗುಟ್ಟಿತ್ತು. ಅದು ರೇಖಾಳ ಕರೆ. ಅವಳು ಸುಮನಳನ್ನು ತನ್ನ ಹುಟ್ಟುಹಬ್ಬಕ್ಕೆ ಆಮಂತ್ರಿಸಿಲು ಫೋನಾಯಿಸಿದ್ದಳು. ಆ ಶುಕ್ರವಾರ ಸಂಜೆ ಅವಳ ಮನೆಯಲ್ಲಿ ಪಾರ್ಟಿಗೆ ಬರಲು ಕೋರಿದ್ದಳು. ಸುಮನ್ ಗಿರೀಶ ಜೊತೆ ಹೋದರಾಯಿತು ಎಂದು ಬರುವುದಾಗಿ ಒಪ್ಪಿಕೊಂಡಳು. ಸಂಜೆ ಗಿರೀಶ ಬಂದಾಗ ಅದರ ಬಗ್ಗೆ ಚರ್ಚಿಸಿದಾಗ ತಿಳಿದ ವಿಷಯ ವಿಸ್ಮಯಗೊಳೆಸಿತು. ರೇಖಾ ಅವಳನ್ನು ಮಾತ್ರ ಮನೆಗೆ ಕರೆದಿದ್ದಳು. ಗಿರೀಶ ಹಾಗೂ ರೇಖಾಳ ಗಂಡ ಇನ್ನಿತರ ಸ್ನೇಹಿತರೊಂದಿಗೆ ಕಂಟ್ರಿ ಕ್ಲಬ್ಬಿಗೆ ಪಾರ್ಟಿಗೆ ಹೋಗುವರಿದ್ದರು. “ಡ್ರೈವರಿಗೆ ರೇಖಾ ಮನೆ ಗೊತ್ತು. ಹೋಗಿ ಬಾ. ನಿನಗೂ ಚೇಂಜಾಗುತ್ತೆ” ಎಂದ ಗಿರೀಶ ತನ್ನ ಶುಕ್ರವಾರದ ಕಾರ್ಯಕ್ರಮವನ್ನು ವಿವರಿಸುತ್ತ. “ಗಿಫ್ಟ್ ಹುಡುಕೊಕ್ಕೆ ಹೋಗಬೇಡ. ನಾನೇ ಒಂದು ಒಳ್ಳೆ ಬೊಕೆ ಆರ್ಡರ್ ಮಾಡ್ತೀನಿ ಅದನ್ನ ತೊಗೊಂಡು ಹೋಗು.” ಸರಿ ಎನ್ನುವಂತೆ ತಲಿದೊಗಿ ಸುಮನ್ ಶಕ್ರವಾರ ಏನು ಹಾಕಿಕೊಳ್ಳಬೇಕು ಎಂದು ಯೋಚಿಸತೊಡಗಿದಳು. ಅಲ್ಲಿಗೆ ಖಂಡಿತವಾಗಿ ಯಾರೂ ಸೀರೆಯಲ್ಲಿ ಬಂದಿರುವದಿಲ್ಲ. ಅದು ಬರಿ ವಿಧ್ಯುಕ್ತ ಸಮಾರಂಭಗಳಿಗೆ ಮಾತ್ರ ಮೀಸಲು. ಇನ್ನು ಪ್ಯಾಂಟ್ ಹಾಕಿಕೊಂಡು ಹೋಗಲು ಅದೇನು ಪಿಕ್ನಿಕ್ ಅಲ್ಲ. ಸರಿ ಇವೆರಡರ ಮಧ್ಯ ಇರುವುದು ಚುಡಿದಾರ ಒಂದೇ. ಅದೆ ಸರಿಯಾದ ಉಡುಪು. ಸುಮನ್ ಬೀರುವಿನ ಮುಂದೆ ನಿಂತು ತನ್ನ ಚುಡಿದಾರಗಳ ಮೇಲೆ ಕಣ್ಣಾಡಿಸಿದಳು. ಕಸೂತಿ ಇರುವ ಪಾಚಿ ಹಸಿರು ಜಾರ್ಜೆಟಿನ ತುಸು ಮಂಡಿ ಮೇಲಿರುವ ಕುರ್ತಾ ಅದಕ್ಕೆ ವಿಭಿನ್ನವಾದ್ದ ಕೇಸರಿ ಸಲ್ವಾರ ಮತ್ತು ಅದೇ ಕೇಸರಿ ಬಣ್ಣದ ಕಸೂತಿ ಕೆಲಸದ ದಾವಣಿ ಆರಿಸಿಕೊಂಡಳು. ಆ ಉಡುಪಿಗೆ ಹೊಂದುವ ಕಪ್ಪು ಎನ್ನುವ ಹಸಿರ ಬಣ್ಣದ ಸ್ವೆಡ್ ಶೂಸು ಹಾಗೂ ಪರ್ಸು ತೆಗೆದಿಟ್ಟಳು. ಉಡುಪಿಗೆ ಹೊಂದುವಂತೆ ಕತ್ತಿಗೆ ಮುತ್ತಿಕ್ಕುವ ಹಸಿರು ಕೇಸರಿ ಮುತ್ತಿನ ಚಿನ್ನದ ಸರ ಕೈಗೆ ಬಳೆ ಒಮ್ಮೆ ಹಾಕಿಕೊಂಡು ಕನ್ನಡಿ ನೋಡಿದಳು.
ಶುಕ್ರವಾರ ಬಂದೇ ಬಿಟ್ಟಿತು. ಗಿರೀಶ ಚಾಲಕನ ಕೈಯಲ್ಲಿ ಸುಂದರವಾದ ಬಣ್ಣ ಬಣ್ಣದ ಗುಲಾಬಿ ಹೂಗಳಿರುವ ಹೂಗುಚ್ಛವನ್ನು ಕಳುಹಿಸಿದ್ದ. ಸುಮನ್ ವಾರದ ಹಿಂದೆ ಆರಿಸಿಟ್ಟ ಚುಡಿದಾರ ಧರಸಿ, ಕತ್ತಿಗೆ, ಕೈಗೆ ಒಡವೆ ಧರಿಸಿ ತೆಳುವಾಗಿ ಮೇಕಪ್ ಮಾಡಿ ಕೂದಲಿಗೆ ಫ್ರೆಂಚ್ ನಾಟ್ ಹಾಕಿ ಶೂಸು ಧರಿಸಿ ಪರ್ಸ ಭುಜಕ್ಕೇರಿಸಿ ಕನ್ನಡಿ ಮುಂದೆ ನಿಂತಳು. ಚೆಲುವಿನ ಸಿರಿಯ ನೋಡಿ ಕನ್ನಡಿ ಮಂದಹಾಸ ಬೀರಿತು. ಸುಮನ್ ಕೆಳಗಿಳಿದು ಕಾರು ಹತ್ತಿದಳು. ಟಾಮಿ ತನ್ನ ಮೆಚ್ಚುಗೆಯನ್ನು ತೋರಿಸಲು ಕಾರು ಹಿಂದೆ ಗೇಟಿನವರೆಗೆ ಬೊಗಳುತ್ತ ಓಡಿತು.
ರೇಖಾ ಮನೆಯೊಳಗೆ ಕಾಲಿಡುತ್ತಿದ್ದಂತೆ ಅದೇ ನಾಟಕೀಯವಾದ ಮುತ್ತಿಡುವ ಆದರ ಅವಳನ್ನು ಎದುರುಗೊಂಡಿತು. ಎಲ್ಲಾ ನಾಟಕ ಮುಗಿದ ಮೇಲೆ ಸುಮನ್ ರೇಖಾಗೆ ಹೂಗುಚ್ಛವನ್ನು ಕೊಟ್ಟು ಅಭಿನಂದಿಸಿದಳು. ಅಲ್ಲೆ ಇಟ್ಟಿದ್ದ ಹಣ್ಣಿನ ರಸವನ್ನು ಕೈಗೆತ್ತಿಕೊಂಡು ದಿವಾನಿನ ದಿಂಬಿಗೆ ಒರಗಿದಳು. ಮೀನಾ ತಮ್ಮ ಸಿಂಗಾಪುರ್ ಪ್ರವಾಸದ ಬಗ್ಗೆ ಹೇಳುತ್ತಿದ್ದಳು. ಎಲ್ಲರು ತಿಂಡಿ ತಿನ್ನುತ್ತ ಹಣ್ಣಿನ ರಸವನ್ನು ಕುಡಿಯುತ್ತ ಅವಳ ಮಾತಿಗೆ ನಗುತ್ತಿದ್ದರು. ಒಂದರ್ಧ ಜನ ಚುಡಿದಾರ ಹಾಕಿರುವುದನ್ನು ನೋಡಿ ಸುಮನ್‍ಗೆ ಸಮಾಧಾನವಾಯಿತು. ಒಂದು ಹತ್ತು ನಿಮಿಷದ ನಂತರ ರೇಖಾ ಒಳಗಿನಿಂದ ಬಂದು “ಆಲ್ ಸೆಟ್ ಲೆಟ್ಸ್ ಗೋ” ಎನ್ನುತ್ತಿದಂತೆ ಎಲ್ಲರು ಒಳ ನಡೆದರು. ಆ ಬಂಗಲೆಯ ಊಟದ ಕೋಣೆ ಅಗಾಧವಾಗಿತ್ತು. ಸಲೀಸಾಗಿ ಒಂದು ಮುಂಜಿಯೋ ಅಥವಾ ಸರಳವಾದ ಒಂದು ಮದುವೆಯೋ ಅದರಲ್ಲಿ ಮಾಡಬಹುದಾಗಿತ್ತು. ಕೋಣೆಯಲ್ಲಿದ್ದ ಪೀಠೋಪಕರಣಗಳನ್ನು ತೆಗೆದಿದ್ದರಿಂದ ಇನ್ನು ವಿಶಾಲವಾಗಿತ್ತು. ಒಂದು ಕಡೆಯಲ್ಲಿ ವೇದಿಕೆ ತರಹ ಮಾಡಿ ಅದರ ಪಕ್ಕ ದೊಡ್ಡ ಮ್ಯೂಸಿಕ್ ಸಿಸ್ಟಮ್ ಇರಿಸಲಾಗಿತ್ತು. ವೇದಿಕೆಯ ಮಧ್ಯದಿಂದ ಒಂದು ಸುಮಾರಾದ ಅಗಲವಾದ ಇಳಿಜಾರನ್ನು ರೂಮಿನ ಇನ್ನೊಂದು ಕೊನೆಯವರೆಗು ಕಟ್ಟಲಾಗಿತ್ತು. ವೇದಿಕೆ ಹಾಗೂ ಆ ಇಳಿಜಾರಿಗೆ ಮಾತ್ರ ಬೆಳಕು ಚೆಲ್ಲುವ ಹಾಗೆ ಬಣ್ಣ ಬಣ್ಣದ ದೀಪಗಳನ್ನು ಇಡಲಾಗಿತ್ತು. ಒಂದಿಷ್ಟು ಕುರ್ಚಿಗಳನ್ನು ಗೋಡೆಗೆ ಆನಿಸಿದ್ದರು. ಸುಮನ್ ಆ ಇಳಿಜಾರನ್ನು ನೋಡಿ ಎಲ್ಲೋ ಫ್ಯಾಶನ್ ಶೋಗೆ ತಯಾರಿ ಮಾಡಿದ್ದಾರೆ ಎಂದುಕೊಂಡಳು.
ಸಮಯ ಆಗಲೇ ರಾತ್ರಿಯ ಏಳುವರೆ. ಹೊರಗಡೆ ಕತ್ತಲಾಗಿತ್ತು. ದಿಡೀರನೆ ಕೋಣೆಯ ದೀಪಗಳು ಆರಿ ಬರೀ ವೇದಿಕೆ ಮುಂದೆ ಒಂದು ಮಿಣುಕು ದೀಪ ಹತ್ತಿಕೊಂಡಿತು ಕೋಣೆಯ ಸುತ್ತ ಅಳವಡಿಸಿದ್ದ ಧ್ವನಿವರ್ಧಕಗಳಿಂದ “ರೂಪ ತೇರಾ ಮಸ್ತಾನಾ” ಹಾಡು ತೇಲಿ ಬರಲಾರಂಭಿಸಿತು. ಪ್ರೇಕ್ಷಕರೆಲ್ಲ ಉಸಿರು ಬಿಗಿ ಹಿಡಿದು ವೇದಿಕೆ ನೋಡುತ್ತಿದ್ದಂತೆ ಅದರ ಪರದೆ ಮೇಲೇರಿತು. ಆ ಮಂದ ಬೆಳಕಿನಲ್ಲಿ ಸುಮನ್ ಇಬ್ಬರು ಗಂಡಸರು ಸೂಟಿನಲ್ಲಿ ಹಾಡಿನ ಲಯಕ್ಕೆ ತಕ್ಕಂತೆ ನರ್ತಿಸುತ್ತಿರುವುದನ್ನು ಗುರುತಿಸಿದಳು. ಅವಳ ಸುತ್ತಲಿನವರು ಹೋ ಎಂದು ಸಂತೋಷ ಆಶ್ಚರ್ಯದಿಂದ ಉದ್ಗರಿಸಿ ಚಪ್ಪಾಳೆ ತಟ್ಟಿದರು. ತಾವೂ ಆ ಮಾದಕ ಹಾಡಿಗೆ ನರ್ತಿಸಲು ಶುರು ಮಾಡಿದರು. ಸುಮನ್ ಗೋಡೆಗೆ ಒರಗಿ ಎಲ್ಲರನ್ನು ನೋಡುತ್ತ ನಿಂತಿದ್ದಳು. ಮೆಲ್ಲಗೆ ವೇದಿಕೆ ಹಾಗೂ ಇಳಿಜಾರಿನ ಸುತ್ತಲಿನ ದೀಪಗಳು ನರ್ತಿಸಲು ಶುರು ಮಾಡಿದವು. ಒಂದರ ಮೇಲೆ ಒಂದು ಹಾಡು ಬಿಡುವಿಲ್ಲದಂತೆ ಬರುತ್ತಲೇ ಇತ್ತು. ದೀಪಗಳು ಆ ಇಬ್ಬರ ಗಂಡಸರ ಮೇಲೆ ಯಾವಾಗಲೂ ಒಂದೇ ಸಮನೆ ಕೇಂದ್ರಿಕೃತವಾಗಿತ್ತು. ರೇಖಾ “ಕಮಾನ್ ಸುಮನ್” ಎಂದಾಗ ಸುಮನ್ ನಕ್ಕು ಸುಮ್ಮನಾದಳು. ಹಿಂದಿ, ಇಂಗ್ಲಿಷ್, ತೆಲಗು, ತಮಿಳು, ಪಂಜಾಬಿ ಯಾವುದೇ ಭಾಷೆಯ ಹಾಡಾದರೂ ಅದರಲ್ಲಿನ ಮಾದಕತೆಯನ್ನು ಗುರುತಿಸುವಂತ್ತಿತ್ತು. ಸುಮನಳನ್ನು ಬಿಟ್ಟು ಮಿಕ್ಕವರೆಲ್ಲ ಮದ್ಯ ಸೇವಿಸುತ್ತ ನಲಿಯುತ್ತಿದ್ದರು. ರಾತ್ರಿಯ ನಶೆ ಏರಿದಂತೆ ಸುಮನ್ ಆ ಗಂಡಸರು ಮೊದಲು ಕೋಟ್ ಬಿಚ್ಚಿ ಎಸೆದಿದ್ದನ್ನು ನೋಡಿದಳು. ಆ ಕೋಟನ್ನು ತುಟಿಗೊತ್ತಿಕೊಂಡ ಸೋನಾಲಳನ್ನು ಬೆರಗಿನಿಂದ ನೋಡಿದಳು ಸುಮನ್.
ಇನ್ನು ಎರಡು ಹಾಡಿನ ನಂತರ ಆ ನರ್ತಕರು ತಮ್ಮ ಪ್ಯಾಂಟ್‍ಅನ್ನು ಎಲ್ಲರ ಎದುರು ಕಳಚಿ ಎಸೆದಾಗ ಹೌಹಾರಿದಳು. ಆ ಪ್ಯಾಂಟ್‍ಗಾಗಿ ಕಚ್ಚಾಡಿದರಿಬ್ಬರು. ಹಾಡಿನ ಮಾದಕತೆ ಹೆಚ್ಚಾದಂತೆ ನರ್ತನ ಅಶ್ಲೀಲವಾಯಿತು ಎನಿಸಿತು ಸುಮನ್‍ಗೆ. ನರ್ತಕರು ವೇದಿಕೆ ಬಿಟ್ಟು ಇಳಿಜಾರಿನ ಮೇಲೆಲ್ಲ ಓಡಾಡುತ್ತಿದ್ದರು. ಕತ್ತಲೆಯ ಮುಸುಕಿನಲ್ಲಿ ಅವರನ್ನು ಹುರಿದುಂಬಿಸುತ್ತ ತೂರಾಡುತ್ತಿದ್ದರು ಅನೇಕರು. ಸುಮನ್ ದೂರದ ಗೋಡೆಗೆ ಆನಿ ಅಸಹ್ಯದಿಂದ ಎಲ್ಲರನ್ನು ನೋಡುತ್ತಿದ್ದಳು. ಆ ನರ್ತಕರು ತಮ್ಮ ಶರ್ಟುಗಳನ್ನು ಕಳಚಿ ಪ್ರೇಕ್ಷಕರ ಮೇಲೆ ಎಸೆದಾಗ ಆ ನರ್ತನ “ಸ್ಟ್ರಿಪ್ ಟೀಸ್” ಎಂದು ಅರ್ಥವಾಯಿತು. ಅವಳಿಗೆ ಅಸಹ್ಯ ಗಾಬರಿ ಎಲ್ಲ ಒಮ್ಮೆಲೆ ಮುತ್ತಿಕಿದವು. ಅವಳಿಗೆ ಇನ್ನು ಅಲ್ಲಿರಲು ಮನಸ್ಸಾಗಲಿಲ್ಲ. ಆ ನರ್ತಕರು ಮೈಮೇಲೆ ಬೀಳುತ್ತಿದ್ದ ಹೆಂಗಸರನ್ನು ಒಮ್ಮೆ ನೋಡಿದಳು. ಇವರ ಪ್ರಚೋದನೆ ಹಾಗೂ ಉತ್ತೇಜನಕ್ಕೆ ಒಳಗಾಗಿ ಆ ನರ್ತಕರು “ಫುಲ್ ಮಾಂಟಿ” ಮಾಡಿದರೇ ಎಂಬ ಯೋಚನೆ ಹೊಳೆದಿದ್ದೇ ತಡ ಮೆಲ್ಲಗೆ ಕೋಣೆಯ ಹೊರಗೆ ಹೋಗಿ ಕಿಟಕಿಯಾಚೆ ನೋಡಿದಳು. ಚಾಲಕ ಕಾರಿನಲ್ಲಿ ಕಂಡ. ಕೋಣೆಯೊಳಗೆ ಬಂದು ರೇಖಾಳನ್ನು ಹುಡಕಿದಳು. ರೇಖಾ ನಶೆಯಲ್ಲಿ ಇವಳು ಬೈ ಹೇಳಿದ್ದನ್ನು ಕೇಳಿಸಿಕೊಳ್ಳೂವ ಸ್ಥಿತಿಯಲ್ಲಿರಲಿಲ್ಲ. ಸುಮನ್ ಸರಸರನೆ ನಡೆದು ಕಾರಿಗೆ ಓಡಿದಳು. ಡವಡವಗುಟ್ಟುತ್ತಿರುವ ಹೃದಯನ್ನು ಸಾವರಿಸಕೊಳ್ಳಲು ನೀಳವಾಗಿ ಉಸಿರೆಳೆದುಕೊಂಡು ಕಾರು ಹತ್ತಿದಳು.
***
ಇದಾದ ಮೂರು ದಿನದದ ನಂತರ ರಾತ್ರಿ ಆಫೀಸಿನಿಂದ ಬಂದ ಗಿರೀಶ ಊಟದ ಸಮಯದಲ್ಲಿ “ಏನು ರೇಖಾ ಪಾರ್ಟಿಯಿಂದ ಓಡಿ ಬಂದೆಯಂತೆ” ಎಂದ ಸೊಟ್ಟು ಮೊರೆ ಮಾಡುತ್ತ.
ರಂಗಪ್ಪ ಅಡುಗೆ ಇಟ್ಟು ಹೋಗುತ್ತಿದ್ದವನು ಸುಮನಳನ್ನು ನೋಡುತ್ತ ಅಲ್ಲೆ ನಿಂತ. ಕೆಲಸದ ವಿಜಯ ಅಡುಗೆಮನೆಯಲ್ಲಿ ಕಿವಿ ನಿಮಿರಿಸಿ ನಿಂತಿದ್ದಾಳೆಂದು ಗೊತ್ತಿತ್ತು ಸುಮನ್‍ಗೆ.
“ಇಲ್ಲವಲ್ಲ” ಹೆದರುತ್ತಲೆ ಉಸರಿಸಿದಳು ಸುಮನ್.
ರಂಗಪ್ಪ ಗಿರೀಶನ ಪ್ರತಿಕ್ರಿಯಕ್ಕೆ ಅವನ ಮುಖ ನೋಡಿದ.
“ಅವಳಿಗೆ ಹೇಳಿ ಬಂದ್ಯಾ?”
ರಂಗಪ್ಪ ಸುಮನ್ ಮುಖಕ್ಕೆ ದೃಷ್ಟಿ ಹರಿಸಿದ.
“ಹೂಂ” ಸುಮನ್‍ಗೆ ಈ ಕೆಲಸದವರ ಮುಂದೆ ತನ್ನ ಗಂಡ ಮಾಡುತ್ತಿರುವ ತನಿಖೆಗೆ ವಿಲಿವಿಲಿ ಒದ್ದಾಡುತ್ತ ನುಡಿದಳು.
“ಯಾಕೆ ಓಡಿ ಬರಬೇಕಿತ್ತು? ಇನ್ನೊಂದೆರಡು ಗಂಟೆ ಇದ್ದು ಬಂದಿದ್ದರೆ ಏನಾಗಿರೋದು ನಿಂಗೆ? ಹೋದಲೆಲ್ಲ ನಿನ್ನ ಅನಾಗರಿಕತೆಯ ಪ್ರದರ್ಶನ ಮಾಡ್ತೀಯಾ. ಏನೂ ಸ್ಪೊರ್ಟಿವ್ ಆಗಿ ತೊಗೊಳಕ್ಕೆ ಬರಲ್ಲ ನಿಂಗೆ” ಅಬ್ಬರಿಸಿದ ಗಿರೀಶ ಊಟ ಶುರು ಮಾಡಿದ.
ಸುಮನ್ ಅಳುತ್ತಿರುವುದನ್ನು ನೋಡಿ ರಂಗಪ್ಪ ಹಲ್ಲುಬಿಟ್ಟುಕೊಂಡು ಅಡುಗೆಮನೆಗೆ ಹೋದ. ಸುಮನ್ ಊಟದ ಶಾಸ್ತ್ರ ಮಾಡಿ ಕೋಣೆ ಸೇರಿದಳು. ಗಿರೀಶ ಹೊಟ್ಟೆ ತುಂಬ ತಿಂದು ತೇಗಿ ಟಿವಿ ಮುಂದೆ ಕುಳಿತ.
ರೇಖಾಳ ಹುಟ್ಟುಹಬ್ಬ ಆಗಿ ಒಂದು ವಾರವಾಗಿತ್ತು. “ಏನಿದು ಸುಮನ್ ಹೀಗೆ ಅಳ್ತಾ ಕೂತಿದಿಯಾ? ಗಿರೀಶ ತನ್ನ ಪಾಡಿಗೆ ತಾನು ತಯಾರಾಗಿ ಹೋದ. ನಿನ್ನನ್ನು ಒಂದು ಸಲಿಯೂ ರಮಿಸಲಿಲ್ಲ. ಏಳು ಊಟ ಮಾಡು” ಸುಮನಳ ಮನಸ್ಸು ಅವಳನ್ನು ರಮಿಸುವ ಪ್ರಯತ್ನ ಮಾಡುತ್ತಿತ್ತು. ಚಿನ್ನ ರನ್ನ ಅನ್ನಬೇಕಾಗಿದ್ದ ಗಿರೀಶ ಕೂತರೆ ನಿಂತರೆ ಅವಳನ್ನು ಅವಮಾನಿಸುತ್ತಿದ್ದ. ಹೀಯಾಳಿಸುತ್ತಿದ್ದ. ಮೃದು ಮನಸ್ಸಿನ ಸುಮನ್ ನೋವಿಗೆ ತತ್ತರಿಸುತ್ತಿದ್ದಳು. ಎಷ್ಟೇ ಯೋಚನೆ ಮಾಡಿದರೂ ಅವಳಿಗೆ ಗಿರೀಶ ಇಚ್ಛಿಸಿದಂತೆ ಹೊಂದಿಕೊಳ್ಳಲಾಗಿತ್ತಿರಲಿಲ್ಲ. ಅವನು ಹೇಳಿದ ಹಾಗೆ ಡ್ರೆಸ್ ಮಾಡಲು ಆಗದು, ಪಾರ್ಟಿಗಳಲ್ಲಿ ಚೆಲ್ಲು ಚೆಲ್ಲಾಗಿ ಆಡುವುದು ಅವಳ ಕೈಯಲ್ಲಿ ಆಗದು. ತಿಂಡಿಗೆ ಬ್ರೆಡ್ ಹಾಗೂ ಆಮ್ಲೆಟ್, ಊಟಕ್ಕೆ ಬೆಳ್ಳುಳ್ಳಿ ಹಾಕಿದ ವ್ಯಂಜನಗಳು ಗಂಟಲಲ್ಲಿ ಇಳಿಯುತ್ತಿರಲಿಲ್ಲ. ಗಿರೀಶ ಅವಳಿಗೆ ಕಲಿಸಲು ಹೊರಟ ಸಂಸ್ಕೃತಿ ಅವಳಿಗೆ ಹಿಡಿಸದು. ಅದನ್ನು ಅವಳ ಮನಸ್ಸು ಒಪ್ಪದು.
ಸುಮನ್ ಯೋಚಿಸಿ ಯೋಚಿಸಿ ಹಣ್ಣಾದರೆ ಗಿರೀಶ ಅವಳನ್ನು ತನ್ನ ಜೀವನಶೈಲಿಗೆ ಬದಲಾಯಿಸುವ ಪ್ರಯತ್ನವನ್ನು ದ್ವಿಗುಣಗೊಳಿಸಿದ. ಅವಳ ಮನಸ್ಸು ಅಂತಹ ಕೃತಕ ಜೀನಶೈಲಿಯನ್ನು ನೈತಿಕವಾಗಿ ವಿರೋಧಿಸುವುದು. ಅವಳು ಬೆಳೆದು ಬಂದ ಸಂಸ್ಕೃತಿ ಅದನ್ನು ಒಪ್ಪಿಕೊಳ್ಳದು. ಅವಳ ಸಂಸ್ಕಾರ ಅವಳನ್ನು ಕಟ್ಟಿ ಹಾಕುವುದು ಇಂತಹ ವಿಕೃತ ಜೀವನಶೈಲಿಯನ್ನು ನಡಿಸದ ಹಾಗೆ. ಇದನ್ನು ಗಿರೀಶ ಆರ್ಥ ಮಾಡಿಕೊಳ್ಳುವಲ್ಲಿ ವಿಫಲನಾದ.
ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://surahonne.com/?p=38170
(ಮುಂದುವರಿಯುವುದು)
-ಸುಚೇತಾ ಗೌತಮ್.
ಮದುವೆ, ಎಂದರೆ ಹೊಂದಾಣಿಕೆ, ಪರಸ್ಪರರನ್ನು ಗೌರವಿಸುವುದು, ಪರಸ್ಪರ ಪ್ರೀತಿ ಇವೆಲ್ಲ. ಇದಲ್ಲದೆ ಒಬ್ಬರ ಮೇಲೊಬ್ಬರು ಅಧಿಕಾರ ಚಲಾಯಿಸುವ ಮನೋಭಾವ ಬೆಳೆದಾಗ ಆ ಮದುವೆ ತುಂಬಾ ದೂರ ಸಾಗದು.
ಧನ್ಯವಾದಗಳು ಮೇಡಂ
ಎರಡು ಸಮಾನಾಂತರ ರೇಖೆಯತ್ತ ಸಾಗಿದೆ ಕಾದಂಬರಿ…ಎಲ್ಲಿಗೆ ಮುಟ್ಟುತೋ ನೋಡಬೇಕು…ಸರಳ ಶೈಲಿ…ಧನ್ಯವಾದಗಳು ಗೆಳತಿ..
ಧನ್ಯವಾದಗಳು ಮೇಡಂ
ಸೊಗಸಾದ ಸರಳ, ಸುಂದರ ಶೈಲಿಯ ಕಾದಂಬರಿ ‘ಸುಮನ್ ` ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಿದೆ…ಧನ್ಯವಾದಗಳು ಮೇಡಂ.
ಧನ್ಯವಾದಗಳು ಮೇಡಂ