ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೇ..

Share Button

ಶ್ರೀ ಸಿ ವಿ ಶಿವಶಂಕರ್ , ಕನ್ನಡ ಸಾಹಿತಿ, ನಿರ್ದೇಶಕ

ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೇ….. ಎಂದಿದ್ದ, ಸಿ ವಿ ಶಿವಶಂಕರ್ ರವರು. ಹಾಗೂ ಸಾಹಿತಿಗಳು ಆದ ಸಿ ವಿ ಶಿವಶಂಕರ್ ರವರು ತಮ್ಮ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದೊಂದು ತುಂಬಲಾರದ ನಷ್ಟ. ತಾಯಿ ವೆಂಕಟ ಲಕ್ಷ್ಮಮ್ಮ ಮತ್ತು ತಂದೆ ರಾಮ ಧ್ಯಾನಿ ವೆಂಕಟ ಕೃಷ್ಣ ಭಟ್ಟ ರವರ ಸುಪುತ್ರರಾಗಿ 23.03.1933 ರಲ್ಲಿ ಜನಿಸಿದ ಇವರು ಮಂಗಳವಾರ ಮಧ್ಯಾಹ್ನ ಊಟ ಮಾಡಿ, ದೇವರಿಗೆ ಪೂಜೆ ಮಾಡಿದ ಬಳಿಕ ಹೃದಯಘಾತವಾಗಿದೆ. ಎಂತಹ ಸಾವು!.

90ರ ಇಳಿ ವಯಸ್ಸಿನಲ್ಲೂ ಕೂಡ ತುಂಬಾ ಲವಲವಿಕೆಯಿಂದ ಜೀವನ ಸಾಗಿಸಿರುವ ಸಿ ವಿ ಶಿವಶಂಕರ್ ರವರು ಸರಳ ಸಜ್ಜನಿಕೆಯ ಸಹಕಾರ ಮೂರ್ತಿಯಾಗಿದ್ದರು.ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ಆಯೋಜಕರು ಕರೆದರೆ ಅಲ್ಲಿಗೆ ತಪ್ಪದೆ ಹಾಜರಾಗುತ್ತಿದ್ದರು. ಇದು ಅವರ ದೊಡ್ಡ ಗುಣ. ನನ್ನ ಸ್ನೇಹಿತರಾದ ಕಣ್ಣೂರು ವಿ ಗೋವಿಂದಾಚಾರಿ ಅವರು ಕೊಳ್ಳೇಗಾಲದಲ್ಲಿ ಪಿ ಬಿ ಶ್ರೀನಿವಾಸ್ ರವರ ಹುಟ್ಟು ಹಬ್ಬದ ಸಂಗೀತ ಗಾಯನದ ಕಾರ್ಯಕ್ರಮಕ್ಕೆ ಕರೆದಿದ್ದಾಗ ಬಂದಿದ್ದರು. 

ಜೊತೆಗೆ ದೊಡ್ಡ ರಂಗೇಗೌಡರ ‘ಮರೆಯದ ಮಾಣಿಕ್ಯ’ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬೆಂಗಳೂರಿಗೆ ಬಂದಿದ್ದರು. ಆಗ ಅವರನ್ನು ಹತ್ತಿರದಿಂದ ನೋಡಿ….. ಫೋಟೋ ತೆಗೆಸಿಕೊಂಡು….. ಮಾತನಾಡಿ….. ಖುಷಿ ಪಟ್ಟೆವು. ಇವತ್ತು ಹೆಸರು ಮಾಡಿರುವ ಹಳೆಯ ಕಲಾವಿದರುಗಳಿಗೆಲ್ಲ ಮುಖ್ಯ ವೇದಿಕೆಯಾಗಿದ್ದುದ್ದು ನಮ್ಮ ರಂಗಭೂಮಿ. ರಂಗಭೂಮಿಯಲ್ಲಿ ಅವರಿಗೆ ಎಲ್ಲಾ ರೀತಿಯ ರಂಗ ಶಿಕ್ಷಣ ದೊರೆಯುತ್ತಿತ್ತು. ಅನುಭವಿ ಕಲಾವಿದರ, ನಟರ, ನಿರ್ದೇಶಕರ ಗರಡಿಯಲ್ಲಿ ಪಳಗಿದ ಅನೇಕರು ಸ್ವತಂತ್ರರಾಗಿ ಕೆಲಸ ನಿರ್ವಹಿಸಿದ ಉದಾರಣೆಗಳಿವೆ. ಅಂಥವರಲ್ಲಿ ಸಿ ವಿ ಶಿವಶಂಕರ್ ರವರು ಕೂಡ ಒಬ್ಬರು. ಹಂತ ಹಂತವಾಗಿ ಮೇಲೇರಿ ತಮ್ಮ ಪ್ರತಿಭೆ ಮೆರೆದವರು. ಬಾಲಕನಾಗಿದ್ದಾಗಲೇ ರಂಗಭೂಮಿಯನ್ನು ಪ್ರವೇಶ ಮಾಡಿದ ನಂತರ ಅನೇಕ ನಾಟಕಗಳಲ್ಲಿ ಇವರು ಅಭಿನಯಿಸಿದ್ದರು.

1962 ರಲ್ಲಿ ತಮ್ಮ ರತ್ನಮಂಜರಿ ಚಲನಚಿತ್ರದೊಂದಿಗೆ ನಟ, ಸಹಾಯಕ ನಿರ್ದೇಶಕ ಮತ್ತು ನಿರ್ಮಾಣ ವ್ಯವಸ್ಥಾಪಕರಾಗಿ ಚಿತ್ರರಂಗ ಪ್ರವೇಶ ಮಾಡಿದ್ದರು.ಸ್ಕೂಲ್ ಮಾಸ್ಟರ್, ಕೃಷ್ಣಗಾರುಡಿ, ರತ್ನಮಂಜರಿ, ರತ್ನಗಿರಿ ರಹಸ್ಯ, ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅವರ ನಟನೆ ಅತ್ಯದ್ಭುತ. ನಂತರದಲ್ಲಿ ಹಲವು ನಿರ್ದೇಶಕರ ಜೊತೆಯಲ್ಲಿ ಕೆಲಸ ಮಾಡಿದ್ದರ ಫಲವಾಗಿ….. ಮನೆ ಕಟ್ಟಿ ನೋಡು, ಸಿನಿಮಾವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದಾರೆ. ಪದವೀಧರ, ನಮ್ಮ ಊರು, ಮಹಡಿಯ ಮನೆ, ಮಹಾತಪಸ್ವಿ, ಕನ್ನಡ ಕುವರ, ವೀರ ಮಹದೇವ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.  

ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ’…….. ‘ಕನ್ನಡದ ರವಿ ಮೂಡಿ ಬಂದ’….. ‘ನಾಡ ಚರಿತೆ ನೆನಪಿಸುವ ವೀರ ಗೀತೆಯ’, ‘ಹಾಡು ನೀನು ಕನ್ನಡಿಗ ದೇಶ ಗೀತೆಯ’…… ‘ಬೆಳೆದಿದೆ ನೋಡ ಬೆಂಗಳೂರು ನಗರ’….. ‘ನಾ ನೋಡಿ ನಲಿಯುವ ಕಾರವಾರ.’…… ‘ಹೋಗದಿರಿ ಸೋದರರೇ’…… ‘ಎಂತಹ ಭಾಗ್ಯವಿದು’…….’ ಚೆಲುವಿನ ಗಣಿಯಾಗಿ ನಮ್ಮೂರು.’…….ಮುಂತಾದ ಸುಮಧುರ ಗೀತೆಗಳನ್ನು ಕೂಡ ರಚಿಸಿದ್ದಾರೆ. ಅವರು ರಚಿಸಿರುವ ಗೀತೆಗಳು ನಾಡು ನುಡಿ ಸಂಸ್ಕೃತಿಗೆ ಸಂಬಂಧಿಸಿದವೇ ಹೆಚ್ಚು. ಜೊತೆಗೆ ಆಕಾಶವಾಣಿ ದೂರದರ್ಶನಗಳಲ್ಲಿ ಇವರ ಹಲವಾರು ಸಂದರ್ಶನ ಕಾರ್ಯಕ್ರಮಗಳು ಮೂಡಿ ಬಂದಿವೆ. ಅದರಲ್ಲೂ ಮೈಸೂರು ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದ ದಿವಂಗತ ಜಿ ಕೆ ರವೀಂದ್ರ ಕುಮಾರ್ ರವರು ಪ್ರಸ್ತುತಪಡಿಸುತ್ತಿದ್ದ… “ಸಿರಿಗನ್ನಡಂ ಗೆಲ್ಗೆ” ಕಾರ್ಯಕ್ರಮಕ್ಕೆ ಪ್ರಾರಂಭಿಕ ಹಾಡಾಗಿ “ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆ…. ಎಂಬ ಗೀತೆಯ ಸಾಲುಗಳನ್ನು ಬಳಸಿಕೊಂಡಿದ್ದರು. ಇದು ನಾಡಿನಾದ್ಯಂತ ಬಹಳ ಪ್ರಸಿದ್ಧಿ ಪಡೆಯಿತು. 

ಶಿವಶಂಕರ್ ಅವರಿಗೆ ಡಾ ರಾಜಕುಮಾರ್ ಅವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಸಾಮಾಜಿಕ ಜಾಲತಾಣಗಳಲ್ಲಿ ರಾಜಕುಮಾರ್ ರವರ ಬಗ್ಗೆ ತುಂಬಾ ಅಭಿಮಾನದಿಂದ ಮಾತನಾಡಿದ್ದಾರೆ. ರಾಜಕುಮಾರ್ ರವರ ಮುಖದಲ್ಲಿ ಮುತ್ತುರಾಜರನ್ನು ನೋಡುತ್ತೇನೆ…. ಮುತ್ತುರಾಜರ ಮುಖದಲ್ಲಿ ಅವರ ತಂದೆ  ಪುಟ್ಟಸ್ವಾಮಪ್ಪನವರನ್ನು ನೋಡುತ್ತೇನೆ……. ಎಂದು.

ಅವರು ನಾಲ್ಕನೇ ತರಗತಿ ಓದಿದ್ದರು ಕೂಡ ಅವರು ಕಲಾ ಶಾಲೆಯಲ್ಲಿ ಕಲಿತಿದ್ದು ಹೆಚ್ಚು. ನಂತರ ಕಲಾ ಸಾಮ್ರಾಟರಾಗಿ ಮೆರೆದಿದ್ದಾರೆ. ಎನ್ನುವ ಅಭಿಮಾನದ ನುಡಿಗಳ ನಾಡಿದ್ದಾರೆರಾಮಸ್ವಾಮಿ, ಮುತ್ತುರಾಜ (ರಾಜಕುಮಾರ್) ಮತ್ತು ಸಿ ವಿ ಶಿವಶಂಕರ್ ರವರು ನಾಟಕದ ಸ್ಥಳಗಳಲ್ಲಿ ಒಟ್ಟಾಗಿ ಸೇರಿ ಪರಸ್ವರ ವಿನಿಮಯ ಹಂಚಿಕೊಳ್ಳುತ್ತಿದ್ದ ರಂತೆ. ಚಿಕ್ಕಂದಿನಿಂದಲೇ ನಾಟಕದ ಒಡನಾಟ…… ಸಾಹಿತ್ಯದೊಳಗಿನ ಆಸಕ್ತಿ……. ನಟನೆಯಲ್ಲಿ ತೊಡಗಿಸಿಕೊಳ್ಳುವಿಕೆ……. ಇವೆಲ್ಲವನ್ನೂ ಕೂಡ ಮೈಗೂಡಿಸಿಕೊಂಡಿದ್ದರು. 

ಇದರ ಜೊತೆಗೆ ವಂಶ ಪಾರಂಪರ್ಯವಾದ ಪೌರೋಹಿತ್ಯ,  ಜ್ಯೋತಿಷ್ಯ ಶಾಸ್ತ್ರ ಅಧ್ಯಯನ ಎಲ್ಲದರಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.  ಇದರಿಂದಾಗಿ ಅವರಿಗೆ ಉತ್ತಮ ಸಂಸ್ಕಾರ ಗುಣ  ಮನೆ- ಮನದಲ್ಲಿ ಮೂಡಿತು. ಇದೇ ಅವರ ಇವತ್ತಿನ ಯಶಸ್ವಿಗೆ ಮೆಟ್ಟಲಾಯಿತು!. 

ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಶಿಕ್ಷಣದಿಂದ ಹೊರಬಂದು ಗುಬ್ಬಿ ವೀರಣ್ಣ ನಾಟಕ ಮಂಡಳಿಯನ್ನು ಸೇರಿದರು. ಅಲ್ಲಿಂದ ಸುಬ್ಬಯ್ಯ ನಾಯ್ಡು ರವರ ಕರ್ನಾಟಕ ಸಾಹಿತ್ಯ ಸಾಮ್ರಾಟ ನಾಟಕ ಮಂಡಳಿಗೆ ಸೇರಿದರು. ಅಲ್ಲಿ ನಟನೆ ಜೊತೆಗೆ ಹಲವು ನಾಟಕಗಳನ್ನು ಬರೆದುಕೊಡುತ್ತಿದ್ದರು.

ಇನ್ನೊಂದು ರೋಮಾಂಚಕ ಕಥೆ ಏನೆಂದರೆ ಮದರಾಸಿನಲ್ಲಿ ಹೊರಗಡೆ ಕಲ್ಲುತೂರಾಟವಿದ್ದರೂ ಕೂಡ ಕನ್ನಡ ನಾಟಕಗಳನ್ನು ಕೆಚ್ಚೆದೆಯ ರೀತಿಯಲ್ಲಿ ಪ್ರದರ್ಶನ ಮಾಡುವುದರ ಮೂಲಕ……    ನಟಿಸುವುದರ ಮೂಲಕ…… ಕನ್ನಡ ಸೇವೆ ಗಾಗಿ ದುಡಿಯುತ್ತಿದ್ದರು. ಅಲ್ಲದೆ ಡಾ ರಾಜಕುಮಾರ್ ಅವರ ಸಹಯೋಗದೊಂದಿಗೆ ಚಿತ್ರರಂಗವನ್ನು ಕೂಡ ಪ್ರವೇಶ ಮಾಡಿ, ಅಲ್ಲಿ ಅಭಿನಯ…. ಸಂಭಾಷಣೆ.     ಗೀತ ಸಾಹಿತ್ಯದತ್ತ….. ಹಂತ ಹಂತವಾಗಿ ಒಲವು ಮೂಡಿಸಿಕೊಂಡರು.

ಶುದ್ಧವಾದ ಹಾಗೂ ಸ್ಪುಟವಾದ ಇವರ ಭಾಷೆಗೆ ಮರುಳಾಗಿ ಹಲವು ನಿರ್ದೇಶಕರು ಮದರಾಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಸುಲಭವಾಗಿ ಸಿಗುತ್ತಿದ್ದ ತಮಿಳು ನಟ- ನಟಿಯರಿಗೆ ಕನ್ನಡ ಕಲಿಸಲು ಇವರನ್ನು ನೇಮಿಸಿದ್ದರು. ಈ ಹಂತದಲ್ಲಿ ಅವರು ಕನ್ನಡವನ್ನು ಕಲಿಸುವುದರ ಮೂಲಕ ಪರಭಾಷಾ ನಟ- ನಟಿಯರಿಗೂ ಕೂಡ ಕನ್ನಡದಲ್ಲಿ ಅಭಿಮಾನ ಮೂಡಿಸುವತ್ತ ಪ್ರಮುಖ ಪಾತ್ರ ವಹಿಸಿ ಗುರುಗಳಾಗಿಯೂ ಕೂಡ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ ಅಲ್ಲದೆ ಡಾ ರಾಜಕುಮಾರ್ ಪ್ರಶಸ್ತಿಗೂ ಭಾಜನರಾಗಿದ್ದಾರೆ. 

ಪ್ರಶಸ್ತಿಗಳ ಹಿಂದೆ ಓಡದೆ ಕನ್ನಡದ ಸೇವೆ ಅವರ ಉಸಿರಾಗಿತ್ತು. ಅನೇಕ ಕಿರಿಯರಿಗೆ ಸದಾ ಪ್ರೋತ್ಸಾಹದ ಮಾತುಗಳ ನಾಡುತ್ತಿದ್ದರು. ಅವರಿಗೆ ಫೋನ್ ಮೂಲಕ ಮಾತನಾಡಿ ನಿಮ್ಮ ರಚನೆಯ ಚಿತ್ರಗೀತೆ ಇವತ್ತು ಆಕಾಶವಾಣಿಯಲ್ಲಿ ಪ್ರಸಾರವಾಯಿತು ಸಾರ್ ಎಂದು ಹೇಳಿದಾಗ ಬಹಳ ಹೆಮ್ಮೆಯಿಂದ ನಗುನಗುತ್ತ ಮಾತನಾಡಿ, ತಮ್ಮ ಸಂತಸವನ್ನು ನಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದರು. ಯಾರೇ ಮಾತನಾಡಿಸಿದರು ಸದಾ ನಗುಮುಖದಿಂದ ಎಲ್ಲರೊಟ್ಟಿಗೆ ಬೆರೆಯುವ ಅವರ ಗುಣ ಇತರರಿಗೆ ಮಾದರಿಯಾಗಿದೆ. 

ಹಳೆಯ ತಲೆಮಾರಿನ ನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿ ಎಲ್ಲವೂ ಆಗಿದ್ದ ಸಿ ವಿ ಶಿವಶಂಕರ್ ಅವರ ನಿಧನದಿಂದ ಕನ್ನಡ ನಾಡು ಬಡವಾಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ.

-ಕಾಳಿಹುಂಡಿ ಶಿವಕುಮಾರ್, ಮೈಸೂರು.

5 Responses

  1. ನಯನ ಬಜಕೂಡ್ಲು says:

    ಗೌರವಾರ್ಪಣೆ ಅನ್ನಬಹುದು ಈ ಸುಂದರ ಬರಹವನ್ನು.

  2. ಇತ್ತೀಚೆಗಷ್ಟೇ ನಿಧನರಾದ ಸಿ.ವಿಶಿವಶಂಕರ್ ಪರಿಚಯ ಚಿಕ್ಕ ದಾಗಿ ಚೊಕ್ಕವಾಗಿ ಮಾಡಿರುವ ನಿಮಗೆ ಧನ್ಯವಾದಗಳು ಸಾರ್
    .

  3. ಶಂಕರಿ ಶರ್ಮ says:

    ಪ್ರಬುದ್ಧ ಸಾಹಿತಿ, ನಟ, ನಿರ್ದೇಶಕ ಸಿ. ವಿ. ಶಿವಶಂಕರ್ ಅವರ ಸರಳ ವ್ಯಕ್ತಿತ್ವದ ಪರಿಚಯ ಲೇಖನವು ನುಡಿ ನಮನವಾಗಿ ಅವರಿಗೆ ಅರ್ಪಣೆಯಾಗಿದೆ…ಧನ್ಯವಾದಗಳು.

  4. Padmini Hegade says:

    ಏರಿದವನು ಚಿಕ್ಕವನಿರಲೇಬೇಕೆನುತ ಸಾರುವನು ಎನ್ನುವ ಕುವೆಂಪುರವರ ಹೇಳಿಕೆಗೆ ಜ್ವಲಂತ ಉದಾಹರಣೆ ಸಿ.ವಿ.ಶಿವಶಂಕರ್‌! ಅವರ ಘನ ವ್ಯಕ್ತಿತ್ವದ ಪರಿಚಯ, ಆಶ್ರುತರ್ಪಣೆ ಆತ್ಮೀಯವಾಗಿದೆ!

  5. ವ್ಯಕ್ತಿ ಪರಿಚಯ ಸೊಗಸಾಗಿ ಮೂಡಿ ಬಂದಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: