ಪರಿಹಾರ

Share Button

ಮಧುಕರ ಮತ್ತು ಕಮಲಾ ದಂಪತಿಗಳಿಗೆ ವಾಷಿಂಗಟನ್‌ ಡಿಸಿಯ ಅಗಾಧ ವಿಮಾನ ನಿಲ್ದಾಣ ನೋಡಿ ಕೈಕಾಲುಗಳು ಆಡದಂತೆ ಆಯಿತು. ಆದರೆ ತಕ್ಷಣ ಮಗ ಹೇಳಿದ್ದ ಮಾತುಗಳು ಜ್ಞಾಪಕಕ್ಕೆ ಬಂತು. ಮಗ ಹೇಳಿದ್ದ – ‘ಅಪ್ಪಾ ನೀವುಗಳು ಗಾಭರಿಯಾಗುವ ಯಾವುದೇ ಅಗತ್ಯವಿಲ್ಲ. ವಿಮಾನ ನಿಲ್ದಾಣಗಳಲ್ಲಿ ಬೋರ್ಡುಗಳನ್ನು ನೋಡಿಕೊಂಡು ಮುಂದುವರೆಯಿರಿ. ವಿಮಾನ ನಿಲ್ದಾಣದ ಸಿಬ್ಬಂದಿಗಳೊಡನೆ ಮಾತನಾಡುವಾಗ ನಿಧಾನವಾಗಿ ಬಿಡಿಸಿ ಬಿಡಿಸಿ ಮಾತನಾಡಿರಿ. ಅವರೆಲ್ಲರೂ ಸೌಜನ್ಯದಿಂದ ವರ್ತಿಸುತ್ತಾರೆ. ತಿಳಿಯದಿದ್ದರೆ ಇನ್ನೊಮ್ಮೆ ಕೇಳಿ” .

ಮಗನ ಮಾತುಗಳನ್ನು ಜ್ಞಾಪಿಸಿಕೊಳ್ಳುತ್ತಾ ಮುಂದುವರೆದ ದಂಪತಿಗಳಿಗೆ ವಿಮಾನ ನಿಲ್ದಾಣದ ನೀತಿ ನಿಯಮಗಳನ್ನೆಲ್ಲಾ ಸುಲಲಿತವಾಗಿ ಮುಗಿಸಿಕೊಂಡು ಹೊರಬಂದಾಗ ಕಿವಿಯವರೆಗೆ ಬಾಯಿ ಮಾಡಿಕೊಂಡು ಕೈ ಬೀಸಿದ ಮಗನನ್ನು ಕಂಡು ನೆಮ್ಮದಿಯೊಂದಿಗೆ ಅತೀವ ಸಂತೋಷವುಂಟಾಯಿತು.

ಮಗ ಗಿರೀಶ, ಸಾಮಾನು ತುಂಬಿದ ಟ್ರಾಲಿಯನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾ – ಅಮ್ಮಾ, ಅಪ್ಪಾ, ಹೇಗಾಯಿತು ಪ್ರಯಾಣ, ಹೇಗಿದೆ ನಮ್ಮ ಮೈಸೂರು, ಹೀಗಿದೆ ನೋಡಿ ಅಮೆರಿಕಾದ ರಾಜಧಾನಿ ವಾಷಿಂಗಟನ್‌ ಡಿಸಿ – ಎನ್ನುತ್ತಾ ಮಾತಿಗೆ ಪ್ರಾರಂಭಿಸಿದ. ಮೂರೂ ಜನ 35 ನಿಮಿಷಗಳ ಪ್ರಯಾಣ ಮುಗಿಸಿ ಫ್ಲಾಟ್‌ ತಲುಪಿದರು.

ಕಳೆದ ಸಲ ಮೈಸೂರಿಗೆ ಬಂದಾಗ ಅಮ್ಮ ಮಾಡಿಕೊಟ್ಟಿದ್ದ ಹುಳಿಪುಡಿಯಿಂದಲೇ ಪಾಲಕ್ಕ್‌ ಸೊಪ್ಪಿನ ಹುಳಿ ಮಾಡಿ, ಅಮ್ಮನ ಕೈಯಿನ ಅರಳು ಸಂಡಿಗೆಗಳನ್ನೇ ಕರಿದು ಗಾಳಿಯಾಡದ ಡಬ್ಬದಲ್ಲಿಟ್ಟಿದ್ದ ಗಿರೀಶ. ಮೂವರೂ ಊಟ ಮುಗಿಸಿದ ನಂತರ ಕಮಲಾ ಮಲಗಲು ಸವರಿಸುತ್ತಿದ್ದಂತೆ, ಗಿರೀಶ, -ʼಅಮ್ಮಾ ಈಗ ಮಲಗಲು ಯೋಚಿಸಬೇಡ, ಅಲ್ಲಿಯ ಇಲ್ಲಿಯ ಸಮಯಗಳಲ್ಲಿ ವ್ಯತ್ಯಾಸಗಳಿರುವುದರಿಂದ ನಿಮ್ಮಗಳಿಗೆ ಜಟ್ಲ್ಯಾಗ್‌ ಉಂಟಾಗಿರುತ್ತೆ. ಈಗ ಮಲಗಿ ಬಿಟ್ಟರೆ ರಾತ್ರಿ ನಿದ್ರೆ ಬರುವುದಿಲ್ಲ. ಬನ್ನಿ, ಕಾರಿನಲ್ಲಿ ಒಂದು ಸುತ್ತು ಹಾಕಿಕೊಂಡು ಬರೋಣ, ವೈಟ್‌ ಹೌಸ್‌, ಮಾನ್ಯುಮೆಂಟ್‌ ಗಳನ್ನು ನೋಡಿಕೊಂಡು ಬರೋಣ. ನನ್ನ ಥೀಸೀಸ್‌ ಸಬ್ಮಿಟ್‌ ಇನ್ನು ಮೂರು ದಿನಗಳ ನಂತರ ಇದೆ. ಅದಾದ ನಂತರ ನಿಮ್ಮಿಬ್ಬರಿಗೂ ನಿಧಾನವಾಗಿ ಎಲ್ಲಾ ತೋರಿಸುತ್ತೇನೆ. ಇಲ್ಲಿ ಎಷ್ಟೊಂದು ಮ್ಯೂಸಿಯಂಗಳು ಇವೆ ಎಂದರೆ ನೀವುಗಳು ದಂಗಾಗಿ ಬಿಡುತ್ತೀರಿ’– ಎನ್ನುತ್ತಾ, ಇಬ್ಬರನ್ನೂ ಕೂರಕ್ಕೂ ಬಿಡದೆ ಹೊರಡಿಸಿಯೇ ಬಿಟ್ಟ ಗಿರೀಶ.

ವೈಟ್‌ ಹೌಸಿನ ಮುಂದೆ ಕಾರು ನಿಲ್ಲಿಸಿ, ಒಂದು ಘಳಿಗೆ ದೂರದಿಂದಲೇ ನೋಡುತ್ತಿದ್ದಾಗ ಗಿರೀಶನ ಫೋನ್‌ ರಿಂಗಾಯಿತು. ವೆಸ್ಟ್‌ ಅಮೆರಿಕಾದ, ಕ್ಯಾಲಿಫೋರ್ನಿಯಾದಲ್ಲಿ ಇದ್ದ, ಕಮಲಾ ಅವರ ಅಣ್ಣನ ಮಗಳು ದಿವ್ಯಾ ಕರೆ ಮಾಡಿದ್ದಳು . _ ಏ ಗಿರಿ, ಅತ್ತೆ, ಮಾವ ಸುಖವಾಗಿ ಬಂದು ತಲುಪಿದರಾ? ನಾನು ಪ್ಲೈಟ್‌ ಸ್ಟೇಟಸ್‌ ಚೆಕ್‌ ಮಾಡುತ್ತಿದ್ದೆ. ಸರಿಯಾದ ಸಮಯಕ್ಕೆ ಪ್ಲೈಟ್‌ ಲ್ಯಾಂಡ್‌ ಆಯಿತು ಅಂತ ಗೊತ್ತಾಯಿತು. ಇಷ್ಟು ಹೊತ್ತಿಗೆ ಮನೆ ತಲುಪಿ ಸುಧಾರಿಸಿಕೊಳ್ಳುತ್ತಿರಬಹುದು ಎಂದು ಫೋನಾಯಿಸಿದೆ, ಅತ್ತೆಗೆ ಫೋನ್‌ ಕೊಡು – ಎಂದಳು.

ಕಮಲಾ ತಾವು ಆಗಲೇ ಸುತ್ತಾಡಲು ಬಂದು ವೈಟ್‌ ಹೌಸಿನ ಮುಂದೆ ನಿಂತಿರುವೆವೆಂದಾಗ ಬಿದ್ದು ಬಿದ್ದು ನಗತೊಡಗಿದ ದಿವ್ಯಾ, ಅತ್ತೆ ಮಾವನ ಪ್ರಯಾಣದ ಅನುಭವಗಳನ್ನು ವಿಚಾರಿಸಿಕೊಂಡು ನಂತರ ಗಿರೀಶನಿಗೆ – ʼಏನೋ ಇಷ್ಟು ಅರ್ಜೆಂಟು, ಪಾಪ ಅವರುಗಳನ್ನು ಸುಧಾರಿಸಿಕೊಳ್ಳಲೂ ಬಿಡದೆ ಎಳೆದುಕೊಂಡು ಬಂದಿದ್ದೀಯಾʼ – ಎನ್ನಲು, ಒಂದು ಕ್ಷಣ ಗಂಭಿರನಾದ ಗಿರೀಶ, ಹೇಳಿದ., – ʼಹೌದು ದಿವ್ಯ, ನಮ್ಮನ್ನು ಈ ಸ್ಥಿತಿಗೆ ತರಲು ಅಜ್ಜಿ ತಾತ, ಅಪ್ಪ, ಅಮ್ಮ ಎಷ್ಟು ಕಷ್ಟಪಟ್ಟಿದ್ದಾರೆ ಎಂದು ನೆನೆಸಿಕೊಂಡರೆ ಹೃದಯ ಹಿಂಡಿದಂತೆ ಆಗುತ್ತದೆ. ಒಂದು ಕ್ಷಣವನ್ನೂ ವ್ಯರ್ಥಮಾಡದೆ ಅವರುಗಳು ಇಲ್ಲಿರುವಷ್ಟು ದಿನಗಳಲ್ಲಿ ಸಾಧ್ಯವಾದಷ್ಟೂ ಜಾಗಗಳನ್ನು ತೋರಿಸುವ ಆಸೆʼ – ಎಂದನು ಭಾವುಕನಾಗಿ.

ಮೂರು ದಿನಗಳ ನಂತರ ಅವನು ಪಿ.ಹೆಚ್.ಡಿ.ಗಾಗಿ ಸಬ್ಮಿಟ್‌ ಮಾಡಿದ ಗ್ರಂಥದ ಮೇಲಿನ ಚರ್ಚೆಗಳು ನಡೆಯುವುದಿತ್ತು. ಅಂದಿನ ದಿನ, ಯಾವ ವಿಷಯದ ಬಗ್ಗೆ ಪ್ರಬಂಧ ಬರೆದಿರುತ್ತಾರೋ ಆ ವಿಭಾಗದ ಮುಖ್ಯಸ್ಥರುಗಳು, ಮೇಧಾವಿಗಳು ಕುಳಿತು ಅದರ ಬಗ್ಗೆ ಪ್ರಶ್ನೋತ್ತರಗಳನ್ನು ನಡೆಸಿ, ಚರ್ಚಿಸಿ, ಮಂಡಿಸಿದ ಪ್ರಬಂಧವನ್ನು ಪಿ.ಹೆಚ್.ಡಿ. ಪದವಿಗಾಗಿ ಅಂಗೀಕರಿಸಬಹುದೋ, ಇನ್ನೂ ಪರಿಷ್ಕರಿಸಬೇಕೋ ತೀರ್ಮಾನಿಸುತ್ತಿದ್ದರು. ಇಲ್ಲಿಯ ವಿಶ್ವವಿದ್ಯಾನಿಲಯದಲ್ಲಿ, ಅಂದು ಗ್ಯಾಲರಿಯಲ್ಲಿ ವಿದ್ಯಾರ್ಥಿಯ ಕುಟುಂಬಸ್ಥರೂ ನಾಲ್ಕಾರು ಜನ ಮುಂಚಿತವಾಗಿ ಅನುಮತಿ ಪಡೆದು ಕುಳಿತುಕೊಳ್ಳಬಹುದಾಗಿತ್ತು.

ಗಿರೀಶ ಈ ಘಳಿಗೆಗಾಗಿಯೇ ಹಠತೊಟ್ಟು ಒಂದೊಂದು ಡಾಲರನ್ನೂ ಲೆಕ್ಕಹಾಕಿ ಖರ್ಚುಮಾಡಿ ಆಫ್‌ ಕ್ಯಾಂಪಸ್‌ ಕೆಲಸ ಮಾಡಿ, ಕಷ್ಟಪಟ್ಟು ಓದಿ ಸ್ಕಾಲರ್‌ ಷಿಪ್‌ ಪಡೆದು, ತಂದೆ ತಾಯಿಯನ್ನು ಕರೆಸಿಕೊಂಡಿದ್ದ. ಇವನ ಎಲ್ಲಾ ಕಾರ್ಯ ಚಟುವಟಿಕೆಗಳಿಗೂ ಸಲಹೆ ಸೂಚನೆ ನೀಡುತ್ತಾ ಪಾದರಸದಂತೆ ಓಡಾಡುತ್ತಾ ಅಲ್ಲೇ ಮತ್ತೊಂದು ವಿಷಯದ ಮೇಲೆ ಸಂಶೋಧನೆ ನಡೆಸುತ್ತಿದ್ದ ಸೌಮ್ಯ ಸಹಾಯ ಮಾಡುತ್ತಿದ್ದಳು. ಅವಳದ್ದೂ ಪ್ರಬಂಧ ಮಂಡಿಸಿದ್ದು ಮುಂದಿನವಾರ ಅವಳ ಸಂಶೋಧನೆಯ ಕುರಿತಾದ ಚರ್ಚಾಕೂಟವಿತ್ತು. ಅದಕ್ಕಾಗಿ ಎರಡು ದಿನಗಳ ನಂತರ ಅವಳ ತಂದೆ ತಾಯಿಯರೂ ಬೆಂಗಳೂರಿನ ಹತ್ತಿರದ ಕನಕಪುರದಿಂದ ಬರುವವರಿದ್ದರು.
ಗಿರೀಶನ ಪ್ರಬಂಧದ ಕುರಿತಾದ ಚರ್ಚೆ ಪ್ರಾರಂಭವಾದ ಕೂಡಲೇ ಮಧುಕರ ಭಾವುಕರಾದರು. ಅವರಿಗೆ ಮರಣಶಯ್ಯೆಯಲ್ಲಿದ್ದ ತಮ್ಮ ತಂದೆ ಶ್ಯಾಮರಾಯರ ಜ್ಞಾಪಕ ಬಂತು. ಅವರು ಮಧುಮೇಹ ಖಾಯಿಲೆಗೆ ತುತ್ತಾಗಿ, ಅದರ ಬಗ್ಗೆ ಹೆಚ್ಚಿನ ಜ್ಞಾನ, ತಿಳಿವಳಿಕೆ ಇಲ್ಲದೆ, ಬಡತನ, ಕುಟುಂಬ ಜವಾಬ್ದಾರಿಯಿಂದಾಗಿ ತಮ್ಮ ಆರೋಗ್ಯದ ಕಡೆ ಗಮನಕೊಡದೆ ತಮ್ಮ 59 ನೆಯ ವಯಸ್ಸಿನಲ್ಲೇ ಕೊನೆಯುಸಿರೆಳೆದಿದ್ದರು.

ಈಗ ಮಗ ನೋಡಿದರೆ ಡಯಾಬಿಟೀಸ್‌ ಕುರಿತಾಗಿಯೇ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸುತ್ತಿದ್ದಾನೆ. ಗಿರೀಶ ಪ್ರಬುದ್ಧವಾಗಿ, ಆತ್ಮ ವಿಶ್ವಾಸದಿಂದ ವಿವರಿಸುತ್ತಿದ್ದ –
ʼಜಗತ್ತಿನಾದ್ಯಂತ ಮಧುಮೇಹದ ಕುರಿತಾಗಿ ಸಂಶೋಧನೆಗಳು ನಡೆಯುತ್ತಿವೆ. ಆದಷ್ಟು ಬೇಗನೇ ಮಧುಮೇಹ ಬರದಂತೆ ತಡೆಯಲು, ಅಥವಾ ಬಂದ ನಂತರವೂ ಮೇಧೋಜೀರಕ ಗ್ರಂಥಿ(ಪ್ಯಾಂಕ್ರಿಯಾಸ್) ಮತ್ತೆ ಇನ್ಸುಲಿನ್‌ ಉತ್ಪನ್ನ ಮಾಡುವಂತೆ ಮಾಡುವ ಔ಼ಷಧಿಗಳನ್ನು ವಿಜ್ಞಾನಿಗಳು ಕಂಡುಹಿಡಿಯಬಹುದು. ನಾನು ಈಗ ಪ್ರಾಥಮಿಕ ಹಂತದ ಸಂಶೋಧನೆ ಕೈಗೊಂಡಿರುವ ಪ್ರಕಾರ, ನಾನು ಈ ಪ್ರಬಂಧದಲ್ಲಿ ವಿವರವಾಗಿ ತಿಳಿಸಿದಂತೆ ಲಸಿಕೆಯನ್ನು ತಯಾರಿಸಿ ಗರ್ಭಿಣಿ ಸ್ರೀಯರಿಗೆ ಮೂರನೆಯ ತಿಂಗಳಿನಲ್ಲೆಯೇ ನೀಡಿದರೆ, ಹುಟ್ಟಿದ ಮಗುವಿಗೆ ಮಧುಮೇಹ ಬರುವ ಸಾಧ್ಯತೆ ತೀರಾ ಕಡಿಮೆಯಾಗುತ್ತದೆ. ಅಕಸ್ಮಾತ್‌ ಬಂದರೂ ಹುಟ್ಟಿದ ಮಕ್ಕಳು ಹಿರಿಯ ನಾಗರೀಕರಾದ ನಂತರ ಬರಬಹುದು ಹಾಗೂ ಅತ್ಯಂತ ಕಡಿಮೆ ಶೇಕಡಾವಾರು ಇರುತ್ತದೆ. ಈ ಸಂಶೋಧನೆಯ ವೈಶಿಷ್ಟ್ಯವೇನೆಂದರೆ ಭ್ರೂಣದ ಜನನವಾಗುವ ಸಮಯದಲ್ಲಿ ತಂದೆ, ತಾಯಿ ಅಥವಾ ಇಬ್ಬರಿಗೂ ಮಧುಮೇಹವಿದ್ದರೂ ಈ ಲಸಿಕೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಇದನ್ನು ನಿಮ್ಮೆಲ್ಲರ ಸಲಹೆ ಸೂಚೆನಗಳ ಮೇರೆಗೆ ಪರಿಷ್ಕರಿಸಿ ಚಾಲ್ತಿಗೆ ತಂದರೆ, ಇದು ಮನುಷ್ಯ ವರ್ಗಕ್ಕೆ ನೀಡಬಹುದಾದ ಒಂದು ಉತ್ತಮ ಕೊಡುಗೆಯಾಗಬಹುದುʼ – ಎನ್ನುತ್ತಾ, – ಕ್ವೊಶ್ಚನ್ಸ್‌ ಪ್ಲೀಸ್‌ – ಎಂದ. ಒಂದೂವರೆ ಗಂಟೆಯ ತನಕ ಹಲವಾರು ರೀತಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಅತ್ಯಂತ ಸಮರ್ಪಕ ಉತ್ತರವನ್ನು ನೀಡಿದ ಗಿರೀಶ.

ನಂತರ ವಿಭಾಗದ ಮುಖ್ಯಸ್ಥರು ಮಾತನಾಡಿ – ʼಮನುಕುಲಕ್ಕೆ ಈ ಸಂಶೋಧನೆ ಅತ್ಯಂತ ಉಪಯುಕ್ತ ಕೊಡುಗೆಯಾಗಬಹುದು, ಎಂಬ ಗಿರೀಶನ ಮಾತನ್ನು ಒಪ್ಪಬಹುದು. ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಮುಂದಿನ ಹಂತದ ಪರಿಷ್ಕರಣೆಗೆ ಪ್ರಬಂಧವನ್ನು ಕಳುಹಿಸಲು ತೀರ್ಮಾನಿಸಿರುವುದಾಗಿ ತಿಳಿಸುತ್ತಾ ಗಿರೀಶನ ಸಂಶೋಧನೆಯನ್ನು ಪಿ.ಹೆಚ್.ಡಿ. ಪದವಿ ನೀಡಲು ಪರಿಗಣಿಸಿರುವುದಾಗಿ ತಿಳಿಸುತ್ತಾ ಅವನನ್ನು ಅಭಿನಂದಿಸಿದರು.

ಮಗನ ಅಭ್ಯದಯವನ್ನು ನೋಡಿ, ಹೃದಯ ತುಂಬಿ, ಮಾತು ಬಾರದೆ ಮೂಕವಾಗಿ ಕಮಲಾ ಕುಳಿತರೆ, ಮಧುಕರ ಮಗನ ಬಗ್ಗೆ ಹೆಮ್ಮೆಯಿಂದ ಭಾವುಕರಾದರು. ಸೌಮ್ಯ ತನಗೇ ಪಿ.ಹೆಚ್.ಡಿ. ಸಿಕ್ಕಷ್ಟು ಖುಷಿಯಾಗಿ ಗಿರೀಶನನ್ನು ಅಭಿನಂದಿಸಲು ಅವನಿದ್ದೆಡೆಗೆ ಹಾರಿದಳು.

ಮನೆಗೆ ಬಂದ ನಂತರ ಮಧುಕರ ಮಗನನ್ನು ಕೇಳಿದರು – ʼನನಗೆ ತುಂಬಾ ಖುಷಿಯಾಗ್ತಿದೆ ಮಗನೆ, ನಿಜಕ್ಕೂ ಈ ಯೋಜನೆ ಫಲಪ್ರದವಾಗಲಿ ಅಂತ ಹಾರೈಸುತ್ತೇನೆ. ಆದ್ರೆ, ಒಂದು ವಿಚಾರ ಹೇಳು, ನಿನಗೆ ಈ ವಿಚಾರವಾಗಿಯೇ ಸಂಶೋಧನೆ ಮಾಡಬೇಕಕೂಂತ ಯಾಕೆ ಅನ್ನಿಸಿತು? ನಮ್ಮನೆಯಲ್ಲಿ ತುಂಬಾ ಡಯಾಬಿಟೀಸಿನವರು ಇದ್ದೀವಿ ಅಂತಾನಾʼ – ಎಂದು ಕೇಳಿದರು.
ಒಂದು ಕ್ಷಣ ಮೌನವಾಗಿ ಕುಳಿತ ಗಿರೀಶ ಸುದೀರ್ಘವಾಗಿ ಉಸಿರು ತೆಗೆದುಕೊಂಡು ಹೇಳತೊಡಗಿದ. –
ಹೂಂ ಅಪ್ಪ, ತಾತ ಮಧುಮೇಹಕ್ಕೆ ತುತ್ತಾಗಿ 59 ವರ್ಷಗಳಿಗೇ ನಿಧನರಾದಾಗ ನಾನು ತುಂಬಾ ಚಿಕ್ಕವನಾಗಿದ್ದೆ. ನಂತರ ಅಜ್ಜಿ ನಮ್ಮ ಜೊತೆಯಲ್ಲೇ ಇದ್ದರು. ಅವರು ಹೇಳುತ್ತಿದ್ದ ಘಟನೆಗಳು ನನಗೆ ತುಂಬಾ ನೋವು ಕೊಡುತ್ತಾ ಇತ್ತು. ಆ ವಯಸ್ಸಿಗೇ ನಾನು ತೀರ್ಮಾನ ಮಾಡಿ ಆಗಿತ್ತು. ನಾನು ಏನಾದರೂ ಈ ಬಗ್ಗೆಯೇ ಕುರಿತು ಓದಬೇಕು ಅಂತ. ಈಗ ಪ್ರಾಥಮಿಕ ಹಂತದ ಯಶಸ್ಸು ನಮ್ಮ ಪಾಲಿಗೆ ಸಿಕ್ಕಿದೆ. ಇದು ಜನಸಾಮಾನ್ಯರಿಗೆ ತಲುಪುವಂತಾಗಬೇಕು, ಆಗಲೇ ನನಗೆ ನೆಮ್ಮದಿ.

ಅಮ್ಮ ಹೇಳುತಿದ್ದ ಘಟನೆಗಳ ರೀಲು ಮಧುಕರ ಅವರ ಮನದಲ್ಲಿ ಬಿಚ್ಚಿಕೊಳ್ಳತೊಡಗಿತು.

ಕೇಂದ್ರೀಯ ಸರ್ಕಾರೀ ಉದ್ಯೋಗದಲ್ಲಿದ್ದ ಮಧುಕರ ಆಗ ಮುಂಬೈನಲ್ಲಿದ್ದರು. ಅವರದು ಶ್ರೀರಂಗಪಟ್ಟಣದ ಹತ್ತಿರದ ಪಾಂಡವಪುರ ಊರು. ಅಲ್ಲಿಯ ಸರ್ಕಾರೀ ಮಾಧ್ಯಮಿಕ ಶಾಲೆಯಲ್ಲಿ ಮಾಸ್ತರಾಗಿದ್ದರು ತಂದೆ. ಮಧುಕರ ಒಬ್ಬನೇ ಮಗ. ಹಿರಿಯರಿಂದ ಬಳುವಳಿಯಾಗಿ ಬಂದಿದ್ದ ಮನೆ ಅಷ್ಟೇ ಇದ್ದದ್ದು. ಬರುವ ಸಂಬಳ ಹೊಟ್ಟೆಗೆ ಬಟ್ಟೆಗೆ ನೇರವಾಗುತಿತ್ತು ಅಷ್ಟೆ.

ಎರಡು ದಿನಗಳು ಅನುಭವಿಸಿದ ಹೊಟ್ಟೆನೋವಿನದೇ ನೆಪವಾಗಿ ತೀರಾ ನಿತ್ರಾಣವಾಗಿಬಿಟ್ಟರು ಶ್ಯಾಮರಾಯರು. ಆಗಿನ್ನೂ ಮಧುಮೇಹದ ಬಗ್ಗೆ ಈಗಿನಷ್ಟು ಜನಜಾಗೃತಿ ಮೂಡಿರಲಿಲ್ಲ. ಅಕ್ಕಪಕ್ಕದವರ ಸಹಾಯದಿಂದ ಅಲ್ಲಿದ್ದ ಸರ್ಕಾರೀ ಚಿಕಿತ್ಸಾಲಯಕ್ಕೆ ಸೇರಿಸಿದರು ರಾಜಮ್ಮನವರು. ಅಲ್ಲಿದ್ದ ವೈದ್ಯರು ಪರೀಕ್ಷಿಸಿ, ದೀರ್ಘಕಾಲ ಅನಿಯಂತ್ರಿತ ಮಧುಮೇಹದಿಂದಾಗಿ ಅಂಗಗಳ ವೈಫಲ್ಯತೆಯ ಸಾಧ್ಯತೆಯಿದೆ. ಅವರು ಹೊರಹಾಕುತ್ತಿರುವ ಮೂತ್ರದ ಪ್ರಮಾಣ ಹಾಗೂ ಅವುಗಳಲ್ಲಿರಬಹುದಾದ ಲವಣಗಳ ಮಟ್ಟದ ಪರೀಕ್ಷೆಯಾಗಬೇಕು. ಈಗ ಮೂತ್ರನಾಳಕ್ಕೆ ನಳಿಕೆಯನ್ನು ಅಳವಡಿಸಿ ಆರುಗಂಟೆಗಳ ಕಾಲ ವಿಸರ್ಜನೆಯಾಗುವ ಮೂತ್ರವನ್ನು ಸಂಗ್ರಹಿಸಿ ತೀರ್ಮಾನಿಸೋಣ ಎಂದು ಹೇಳಿ, ಹೊರಬಂದ ಮೂತ್ರ ಸಂಗ್ರಹವಾಗುವಂತಹ ಚೀಲವಿರುವ ನಳಿಕೆಯೊಂದನ್ನು ಅಳವಡಿಸಿ, ಕೆಲವು ಔ಼ಷಧಿಗಳನ್ನು ನೀಡಲು ನರ್ಸ್‌ ಗೆ ಸೂಚನೆಗಳನ್ನು ನೀಡಿ, ಆಹಾರದ ಬಗ್ಗೆಯೂ ತಿಳಿಸಿ ಸಂಜೆ 5 ಗಂಟೆಗೆ ಬರುವುದಾಗಿ ತಿಳಿಸಿ ಹೊರಟುಬಿಟ್ಟರು ಡಾಕ್ಟರು. ಡಾಕ್ಟರರ ವಿಸಿಟ್‌ ಮುಗಿದ ತಕ್ಷಣ ತನ್ನ ಕರ್ತವ್ಯವನ್ನು ಮುಗಿಸಿ ಏನಾದರೂ ತುರ್ತು ಪರಿಸ್ಥಿತಿ ಎದುರಾದರೆ ಅಲ್ಲೇ ಹತ್ತಿರದಲ್ಲಿ ಇದ್ದ ಮನೆಗೆ ಬಂದು ಕರೆಯಲು ತಿಳಿಸಿ ನರ್ಸ್‌ ಕೂಡ ಮನೆಗೆ ಹೊರಟುಬಿಟ್ಟರು.‌

ರಾಜಮ್ಮನವರು ನೋಡು ನೋಡುತ್ತಿರುವಂತೆಯೇ ಆ ಚೀಲದಲ್ಲಿ ಶೇಖರಣೆಯಾಗುತ್ತಿದ್ದ ಮೂತ್ರ ನಿಧಾನವಾಗಿ ತೊಟ್ಟು ತೊಟ್ಟಾಗಿ ನೆಲದ ಮೇಲೆಲ್ಲಾ ಹರಿಯತೊಡಗಿತು. ದುರಾದೃಷ್ಟವಶಾತ್‌ ಮೂತ್ರ ಶೇಖರಣೆಯಾಗುವ ಚೀಲದಲ್ಲಿ ಒಂದು ರಂಧ್ರವುಂಟಾಗಿ ವಿಸರ್ಜನೆಯಾದ ಮೂತ್ರವೆಲ್ಲಾ ಚೀಲದಿಂದ ಹೊರಬಂದು ಮಂಚದಕೆಳಗೆ ನಿಧಾನವಾಗಿ ಹರಡಿಕೊಳ್ಳುತಿತ್ತು. ಗಾಭರಿಯಾದ ರಾಜಮ್ಮನವರು ಹೋಗಿ ಆಯಾಳನ್ನು ಕರೆಯಲು ಪ್ರಯತ್ನಿಸಿದರೆ ಗಾಢನಿದ್ರೆಯಲ್ಲಿದ್ದ ಅವಳು ಎದ್ದು ಬರುವ ಪರಿಸ್ಥಿತಿಯಲ್ಲಿರಲಿಲ್ಲ. ನಾಲ್ಕು ಗಂಟೆಗೆ ಬಂದ ನರ್ಸ್‌ ಆಯಾಳನ್ನು ಕರೆದು ಚೆನ್ನಾಗಿ ಬೈದು, ರಾಜಮ್ಮನನ್ನೂ ಬೈದು ಮೂತ್ರ ಶೇಖರಣೆಯ ಚೀಲವನ್ನು ಬದಲಾಯಿಸಿ, ಡಾಕ್ಟರ್‌ ಬರುವ ವೇಳೆಗೆ ಚೆಲ್ಲಿರುವ ಮೂತ್ರವನ್ನೆಲ್ಲಾ ಕ್ಲೀನ್‌ ಮಾಡಲು ಹೇಳಿದರು. ಅಷ್ಟರಲ್ಲಿ ಅವರ ಡ್ಯೂಟಿ ಮುಗಿದು ಬೇರೆ ನರ್ಸ್ ಬಂದಾಗಿತ್ತು. ಆಯಾ ಚೆಲ್ಲಿದ್ದ ಮೂತ್ರದ ಗುರುತೂ ಇಲ್ಲದಂತೆ ಫಿನಾಯಿಲ್‌ ಹಾಕಿ ಎಲ್ಲವನ್ನೂ ಸ್ವಚ್ಛಮಾಡಿಯಾಗಿತ್ತು.
ಡಾಕ್ಟರು‌ ವಿಸಿಟ್ಟಿಗೆ ಬಂದವರೇ ಶೇಖರಣೆಯಾಗಿದ್ದ ಮೂತ್ರದ ಪ್ರಮಾಣ ಕಡಿಮೆಯಿದದ್ದು ನೋಡಿ, ಬಹುಶಃ ಕಿಡ್ನಿಗಳು ವೈಫಲ್ಯವಾಗಿವೆ ಎಂದು ತೀರ್ಮಾನಿಸಿ ಬೇರೆ ಬೇರೆ ನಳಿಕೆಗಳನ್ನು ಅಳವಡಿಸಲು ಹೋದಾಗ, ರಾಜಮ್ಮನವರು ನಡೆದ ವಿಚಾರವನ್ನು ಎಷ್ಟೇ ಪ್ರಯತ್ನಪಟ್ಟರೂ ಹೇಳದಂತೆ ತಡೆದುಬಿಟ್ಟರು, ಆಯಾ ಮತ್ತು ನರ್ಸ್. ಸ್ವಲ್ಪ ಬಲವಂತವಾಗಿ ಎಳೆದು ನಳಿಕೆಗಳನ್ನು ಅಳವಡಿಸುವಾಗಲೇ ಅತ್ಯಂತ ನೋವಿನಿಂದ ಹಾಂ, ಎಂದು ನರಳಿದ ಶ್ಯಾಮರಾಯರಿಗೆ ಹೋದ ಜ್ಞಾನ ಮತ್ತೆ ಬರಲೇ ಇಲ್ಲ. ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿಗೆ ಕರೆದುಕೊಂಡು ಹೋಗಲು ತಿಳಿಸಿದರು. ಅಷ್ಟರಲ್ಲಾಗಲೇ ಶ್ಯಾಮರಾಯರಿಗೆ ಪಾರ್ಶ್ವವಾಯುವೂ ಕೂಡ ಬಡಿದಾಗಿತ್ತು. ಮೈಸೂರಿನ ಆಸ್ಪತ್ರೆಯಲ್ಲಿಯೂ ಹೋದ ಜ್ಞಾನ ಮರುಕಳಿಸದೇ ಎಂಟುದಿನಗಳನ್ನು ಕಳೆದ ಶ್ಯಾಮರಾಯರು ತಮ್ಮ 59 ನೆಯ ವಯಸ್ಸಿಗೇ ಪ್ರಾಣಬಿಟ್ಟರು.

ರಾಜಮ್ಮ ನಂತರ ಇದ್ದದ್ದು ಒಂದೇ ವರುಷ. ಇರುವ ತನಕ – ನಾನು ಅಂದು ವೈದ್ಯರ ಹತ್ತಿರ ಇರುವ ವಿಚಾರ ತಿಳಿಸಲು ಆ ಆಯಾ ಮತ್ತು ನರ್ಸ್‌ ಬಿಡಲೇ ಇಲ್ಲ. ನಾನಾದರೂ ಗಟ್ಟಿಸಿ ವೈದ್ಯರ ಹತ್ತಿರ ಹೇಳಬೇಕಿತ್ತು. ನಾನಾಗಿಯೇ ನಿಮ್ಮ ತಂದೆಯನ್ನು ಕೊಂದೆ ಮಧುಕರಾʼ – ಎಂದು ಹಲುಬುತ್ತಿದ್ದರು. ಬಂದ ಬಂದವರ ಮುಂದೆಲ್ಲಾ ಹೇಳಿ ಹೇಳಿ, ತಪ್ಪಿತಸ್ಥ ಭಾವನೆಯಿಂದ ಕೊರಗಿ ಕೊರಗಿ ಒಂದೇ ವರ್ಷದಲ್ಲಿ ಪ್ರಾಣಬಿಟ್ಟರು. ಎಷ್ಟು, ನಿಮ್ಮ ತಪ್ಪಿಲ್ಲ, ಆಸ್ಪತ್ರೆಯ ಸಿಬ್ಬಂದಿ ಭಯದಿಂದ ವೈದ್ಯರಿಗೆ ಸರಿಯಾದ ಮಾಹಿತಿ ಕೊಟ್ಟಿಲ್ಲದ ಕಾರಣವೋ, ಅವರ ಆಯಸ್ಸೇ ಇಷ್ಟು ಇತ್ತೋ, ಎಂಬ ಏನೇನೇ ಸಮಾಧಾನ ಹೇಳಿದರೂ ಅವರು ಕೊರಗುವುದನ್ನು ನಿಲ್ಲಿಸಲಿಲ್ಲ. ಶ್ಯಾಮರಾಯರು ತೀರಿಕೊಂಡ ನಂತರ ಅವರ ಕರ್ಮಾಂತರಗಳನ್ನೆಲ್ಲಾ ಮುಗಿಸಿ ತಾಯಿಯನ್ನು ತಮ್ಮ ಜೊತೆಗೇ ಮುಂಬೈಗೆ ಕರೆತಂದಿದ್ದರು ಮಧುಕರ. ಆಗ ಗಿರೀಶನಿಗೆ ನಾಲ್ಕು ವರ್ಷಗಳು. ಹೋಗಿ ಬಂದವರ ಹತ್ತಿರ ಹೇಳಿ ಹೇಳಿ ಹಲಬುತ್ತಿದ್ದ ರಾಜಮ್ಮನವರ ಮಾತುಗಳು ಪುಟ್ಟ ಗಿರೀಶನ ಮೇಲೆ ಇಷ್ಟರ ಮಟ್ಟಿಗೆ ಪ್ರಭಾವ ಬೀರಿರುವುದನ್ನು ನೋಡಿ ಅತ್ಯಾಶ್ಚರ್ಯದಿಂದ ಭಾವುಕರಾದ ಮಧುಕರ ಅವರು, ಗಿರೀಶನ ಸಂಶೋಧನೆ ಕಾರ್ಯರೂಪಕ್ಕೆ ಬರುವಂತಾಗಲರಂದು ಕುಲದೈವ ಶ್ರೀರಂಗನಾಥ ಸ್ವಾಮಿಯನ್ನು ಪ್ರಾರ್ಥಿಸುತ್ತಾ ತಂದೆ ತಾಯಿ, ಗುರು ಹಿರಿಯರ ಆಶೀರ್ವಾದವನ್ನೂ ಬೇಡಿದರು ಮನದಲ್ಲೇ.

ಮಾರನೆಯ ದಿನ ಸೌಮ್ಯಳ ತಂದೆ ತಾಯಿಯರೂ ಬಂದರು. ಅವಳದ್ದೂ ಪ್ರಬಂಧದ ಮಂಡನೆ ಅಚ್ಚುಕಟ್ಟಾಗಿ ನೆರವೇರಿತು. ಎರಡೂ ಕುಟುಂಬದವರೂ ಒಟ್ಟೊಟ್ಟಿಗೇ ಸುತ್ತಾಡಿ ಒಬ್ಬರಿಗೊಬ್ಬರು ನಿಕಟವಾದರು. ಮಾತು ಮಾತಿನಲ್ಲೆ ತಾವಿಬ್ಬರೂ ಬಾದರಾಯಣ ಸಂಬಂಧದಂತೆ, ಸಂಬಂಧಿಕರಂತೆ ಎಂಬ ಎಲ್ಲೋ ಒಂದು ಎಳೆ ಸಿಕ್ಕು ಮಾತನಾಡಿದ್ದೇ ಮಾತನಾಡಿದ್ದು. ಸೌಮ್ಯಳ ತಾಯಿ –“ಓ, ಏಕೋ ನಮ್ಮ ಸಂಬಂಧ, “ಕನ್ನಡಿತಿ” ಧಾರವಾಹಿಯ ಹಸಿರುಪೇಟೆಯ ಕಥೆಯಂತಾಯಿತು ಎಂದರು ನಗುತ್ತಾ.

ಹೌದಲ್ಲವಾ, ಎಂದುಕೊಂಡು ಮಧುಕರ ಅವರು ಗಿರೀಶ, ಸೌಮ್ಯಳಿಗೇ ಏಕೆ ಮದುವೆ ಮಾಡಬಾರದು ಎಂದು ಯೋಚಿಸಿ, ಮಾತುಕತೆಗಳನ್ನಾಡಿ ನಿಶ್ಛಯ ಮಾಡಿಯೇ ಬಿಟ್ಟರು. ಗಿರೀಶ, ಸೌಮ್ಯ, ಕುಡಿಗಣ್ಣುಗಳಿಂದಲ್ಲೇ ಒಬ್ಬರನ್ನೊಬ್ಬರು ಪ್ರೀತಿಯಿಂದ ನೋಡಿ, ತಮ್ಮ ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತಲ್ಲಾ ಎನ್ನುವ ಭಾವದಿಂದ ತುಂಟ ನಗೆ ನಕ್ಕರು.

ಸಂಭ್ರಮ, ಸಂತೋಷದಿಂದ ಮೈಸೂರಿಗೆ ಹಿಂದಿರುಗಿದರು ದಂಪತಿಗಳು. ಇವರನ್ನು ಎದುರುಗೊಳ್ಳಲು ಆಗಮಿಸಿದ್ದ ಕಮಲಾ ಅವರ ಅಕ್ಕನ ಮಗಳು, -“ಏನು ಚಿಕ್ಕಮ್ಮಾ,ʼಮಾʼ ಆಗಿ ಅಮೆರಿಕಾಗೆ ಹೋಗಿ, ʼಸಾಸುಮಾʼ(ಅತ್ತೆ)ಯಾಗಿ ಹಿಂತಿರುಗಿಬಿಟ್ಟಿರಾ ಎಂದು ಕೇಳಲು ನಸುನಕ್ಕರು ಕಮಲಮ್ಮ ತೃಪ್ತಿಯಿಂದ.

-ಪದ್ಮಾ ಆನಂದ್‌

14 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ ಕಥೆ

    • Anonymous says:

      ಶೀಘ್ರವಾಗಿ ಓದಿ ಪ್ರತಿಕ್ರಿಯೆಯನ್ನು ನೀಡಿದ್ದಕ್ಕಾಗಿ ವಂದನೆಗಳು.

  2. ಪರಿಹಾರ.. ಕತೆ ..ಚೆನ್ನಾಗಿದೆ… ಅಭಿನಂದನೆಗಳು ಪದ್ಮಾ ಮೇಡಂ

  3. Anonymous says:

    ಧನ್ಯವಾದಗಳು ನಮ್ಮ “ಸುರಹೊನ್ನೆ” ಗೆ.

  4. K N SHANTHARAM says:

    ನಮ್ಮ ಸಂಸಾರದಲ್ಲಿ ನಡೆದ ಘಟನೆಗಳು ನೆನಪಿಗೆ ಬರುತ್ತಿವೆ. ಪಾತ್ರಗಳ ಬಗ್ಗೆ ಗೊಂದಲ ಇದೆ. ಆಮೇರಿಕದಲ್ಲಿನ ಬದುಕು ಸುಂದರವಾಗಿ ಸವಿವರವಾಗಿ ಗುರುತಿಸಿದ್ದಾರೆ ಶ್ರೀಮತಿ ಪದ್ಮ/ ಕಮಲ ಅವರು. ಕೊನೆಗೊಂದು ಮಾತು ಶ್ರೀ ಮಧುಕರ ಅವರು ಶ್ರೀ ಆನಂದ ಅವರು ಅಂದುಕೊಂಡಿದ್ದೇನೆ.. ಶಾಮರಾವ್ ಅವರು ರಾಮರಾವ್ ಇರರಬಹುದು.. ನಾನು ಅಜ್ಞಾನಿಯ ಹಾಗೆ ಸಾಕಷ್ಟು ತಪ್ಪು ಮಾಡಿರುವೆ ಅಂತ ಅನಿಸುತ್ತೆ ಕ್ಷಮೆ ಇರಲಿ.

    • Padma Anand says:

      ನಡೆದ ಕೆಲವಾರು ಘಟನೆಗಳ ಸುತ್ತ ನನ್ನ ಮನದ ಕಲ್ಪನಾ ವಿಹಾರದಲ್ಲಿ ಮೂಡಿ ಬಂದ ಕಥೆ ಇದು. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.

  5. K N SHANTHARAM says:

    ಒಳ್ಳೆ ಕಥೆ

  6. K N SHANTHARAM says:

    ಸೊಗಸಾದ ಸದಭಿರುಚಿಯ ನೀತಿ ಕಥೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: