‘ವೈಜಯಂತಿಪುರ’…. ಕದಂಬ ಸಾಮ್ರಾಟ ಮಯೂರವರ್ಮನ ಚರಿತ್ರೆ
‘ವೈಜಯಂತಿಪುರ’ ಕಾದಂಬರಿ. ಲೇಖಕರು: ಸಂತೋಷಕುಮಾರ ಮೆಹಂದಳೆ.
ಒಂದು ರಾಜವಂಶವು ಹೊಚ್ಚ ಹೊಸದಾಗಿ ತಲೆಯೆತ್ತಿ ನೆಲೆಗೊಳ್ಳಬೇಕಾದರೆ ಅದು ರಾತೋರಾತ್ರಿ ಘಟಿಸಿರಬಹುದಾದ ಪವಾಡವಲ್ಲ. ಅದೊಂದು ಬಹುಕಾಲದ ಪ್ರಯತ್ನದ ಪ್ರಕ್ರಿಯೆ. ಅದಕ್ಕಾಗಿ ಪಡಬೇಕಾದ ಪರಿಶ್ರಮ, ತೆರಬೇಕಾದ ಬಲಿದಾನವು ಅಪಾರ. ಹಾಗೆ ಬೆಳೆದು ನಿಂತು ಕನ್ನಡ ನೆಲದ ಮೊದಲ ಸಾಮ್ರಾಜ್ಯವಾಗಿದ್ದು ಕದಂಬವಂಶದ ಮಯೂರವರ್ಮನ ಸಾಮ್ರಾಜ್ಯ. ಅದರ ಕುತೂಹಲಕಾರಿ ಕಥಾನಕವೇ ವೈಜಯಂತಿಪುರ ಎಂಬ ಕನ್ನಡ ಕಾದಂಬರಿ. ಲಭ್ಯವಿರುವ ಅತ್ಯಂತ ಕಡಿಮೆ ಚಾರಿತ್ರಿಕ ವಿವರಗಳೊಡನೆ ಆಗಿನ ಕಾಲದ ಪರಿಸರದ ಊಹೆ, ಆಗಿರಬಹುದಾದ ಘಟನಾವಳಿಗಳು, ರಾಜ್ಯದ ಎಲ್ಲೆಗಳು, ಊರುಗಳ, ಹಳ್ಳಿಗಳ ಇತಿಹಾಸವನ್ನು ಕೆದಕುತ್ತಾ, ಜಾನಪದ ಕಥನಗಳಲ್ಲಿ ಲಭ್ಯವಾದ ಮಾಹಿತಿಗಳು, ಕಾಳಿದಾಸ ಮಹಾಕವಿ ರಚಿಸಿದನೆನ್ನಲಾದ ಕುಂತಳೇಶ್ವರ ದೌತ್ಯ ಎಂಬ ಕೃತಿಯ ಆಧಾರಗಳನ್ನು ಒಟ್ಟುಗೂಡಿಸಿ ಜೊತೆಗೆ ಲೇಖಕನೊಬ್ಬ ತೆಗೆದುಕೊಳ್ಳಬಹುದಾದ ಸ್ವಾತಂತ್ರ್ಯವನ್ನು ಬಳಸಿ ತಾರ್ಕಿಕ ಕಲ್ಪನೆಯಾಧಾರಿತ ಕಾದಂಬರಿಯನ್ನು ರಚಿಸಿರುವುದು ಒಂದು ಮಹತ್ಕಾರ್ಯವೇ ಸರಿ. ಆರು ವರ್ಷಕಾಲ ನಿರಂತರ ಹುಡುಕಾಟದ ಪ್ರಯತ್ನದಿಂದ ವೈಜಯಂತಿಪುರವೆಂಬ ಕೃತಿಯನ್ನು ರಚಿಸಿ ಓದುಗರಿಗೆ ನೀಡಿ ಉಪಕರಿಸಿರುವ ಲೇಖಕರು ಸಂತೋಷಕುಮಾರ ಮೆಹಂದಳೆಯವರಿಗೆ ಒಂದು ಅಭಿಮಾನದ ಅಭಿನಂದನೆ ಸಲ್ಲುತ್ತದೆ.
ಅಂದಿನ ಕಾಲಮಾನದಲ್ಲಿ ದಕ್ಷಿಣ ಭಾರತದಲ್ಲಿ ಅಡಳಿತ ನಡೆಸುತ್ತಿದ್ದದ್ದು ಪ್ರಬಲ ರಾಜವಂಶ ಪಲ್ಲವರು. ಕಿರಿವಯಸ್ಸಿನ ರಾಜ ಶಿವಸ್ಕಂದವರ್ಮ. ಅವನ ರಾಜಧಾನಿ ಕಂಚಿ ಪಟ್ಟಣವು ದಕ್ಷಿಣ ವಿದ್ಯಾಕಾಶಿ ಎಂದು ಹೆಸರಾಗಿದ್ದು ಅಲ್ಲಿ ಹಲವಾರು ರಾಜವಂಶದ ಕೃಪಾಪೋಷಿತ ಗುರುಕುಲಗಳಿದ್ದವು.
ಕಥಾನಾಯಕ ಮಯೂರಶರ್ಮನು ವರದಾನದಿಯ ಎಡದಂಡೆಯ ತೀರದಲ್ಲಿನ ಕಾಡಿನ ಒಳಭಾಗದಲ್ಲಿದ್ದ ಬ್ರಾಹ್ಮಣರ ಅಗ್ರಹಾರ ತಾಣಕಂದೂರಿನಲ್ಲಿ ಜನಿಸಿದ್ದ. ಆತ ಮಾನವ್ಯ ಗೋತ್ರದ ಹಾರುವರ ವಂಶಸ್ಥ. ಅಪ್ಪಟ ಕರ್ಮಠ ಬ್ರಾಹ್ಮಣ ಕುಟುಂಬದ ಹುಡುಗ. ಅಲ್ಲಿನ ಗುರುಕುಲದಲ್ಲಿ ಸ್ಥಳೀಯ ಕಸುಬುಗಳ ಆಧಾರಿತ ವಿದ್ಯಾಭ್ಯಾಸ ಮಾತ್ರ ನೀಡಲಾಗುತ್ತಿತ್ತು. ಬರಹ ರೂಪದ ಅಕ್ಷರಾಭ್ಯಾಸ ಪ್ರಮುಖವಾಗಿರಲಿಲ್ಲ. ಬ್ರಾಹ್ಮಣರದ್ದು ಪೌರೋಹಿತ್ಯ ವೃತ್ತಿ. ಅದರಿಂದಲೇ ಜೀವನ ನಿರ್ವಹಣೆ. ಬಡತನದ ಬದುಕು. ಅಂತಹ ಸ್ಥಳದಲ್ಲಿ ಮಯೂರಶರ್ಮನ ಅಜ್ಜ ವೀರಶರ್ಮರು ವೇದಶಾಸ್ತ್ರ ಪಠಣದಲ್ಲಿ ಅಪರೂಪದ ಪಂಡಿತರಾಗಿದ್ದರು. ಮಯೂರಶರ್ಮನ ತಂದೆ ಬದುಕಿಗಾಗಿ ವೇದವೃತ್ತಿ ತೊರೆದು ಶಸ್ತ್ರವಿದ್ಯೆ ಕಲಿತು ಪಲ್ಲವರ ಸೇನಾ ತುಕಡಿಯಲ್ಲಿ ಸೇರ್ಪಡೆಯಾಗಿ ಅವರ ಸಾಮಂತರೊಬ್ಬರಲ್ಲಿ ಸೇನಾಧಿಕಾರಿಯಾಗಿದ್ದರು. ಯಾವಾಗಲೊಮ್ಮೆ ಅವರ ದರ್ಶನವಾಗುತ್ತಿತ್ತು. ಅಮ್ಮನ ನೆನಪೇ ಅವನಿಗಿರಲಿಲ್ಲ. ಸಂಪೂರ್ಣ ಅಜ್ಜನ ಸುಪರ್ದಿನಲ್ಲೇ ಬೆಳೆದವನು ಮಯೂರಶರ್ಮ. ಪೌರೋಹಿತ್ಯದಲ್ಲಿಯಾದರೂ ಹೆಚ್ಚಿನ ಪರಿಣತಿ ಪಡೆಯಲು ಸಮೀಪದಲ್ಲಿ ಎಲ್ಲಿಯೂ ಅವಕಾಶವಿರಲಿಲ್ಲ. ಅದರಿಂದಾಗಿ ಮಯೂರನು ಅಜ್ಜನೊಂದಿಗೆ ದಕ್ಷಿಣದ ವಿದ್ಯಾಕಾಶಿ ಕಂಚಿಗೆ ಬಹಳ ಆಸೆಹೊತ್ತು ಆಗಮಿಸುತ್ತಾನೆ. ಅಲ್ಲಿ ಗುರುಕುಲವೊಂದರಲ್ಲಿ ಆಶ್ರಯ ದೊರೆತು ವಿದ್ಯಾಭ್ಯಾಸ ಪ್ರಾರಂಭವಾಗುತ್ತದೆ. ಅಲ್ಲಿನ ಗುರುಕುಲದಲ್ಲಿ ಎಷ್ಟೋಬಾರಿ ಶಾಸ್ತ್ರ ಕಲಿಯಲು ಬಂದ ವಿದ್ಯಾರ್ಥಿಗಳು ಶಸ್ತ್ರಾಸ್ತ್ರ ಹಿಡಿದು ಕಲಿತ ವಿಶೇಷಗಳೂ ನಡೆಯುತ್ತಿದ್ದವು. ಚತುರಮತಿಗಳಾಗಿದ್ದವರು ಕೆಲವರು ಶಾಸ್ತ್ರಾಭ್ಯಾಸದ ನಂತರದ ಹೊತ್ತಿನಲ್ಲಿ ಸ್ಥಳೀಯ ರಾಜಮನೆತನದ, ಸೇನಾನಿಗಳ ಮಕ್ಕಳೊಡನೆ ಯುದ್ಧಾಶ್ತ್ರಗಳನ್ನೂ ಅಭ್ಯಾಸ ಮಾಡುತ್ತಿದ್ದರು.
ಮಯೂರಶರ್ಮ ಹದಿಹರೆಯದವನು. ಉತ್ಸಾಹಿ. ಹೀಗಾಗಿ ವಿಶೇಷ ಮತ್ತು ಕಠಿಣ ತರಬೇತಿಯ ಪರಿಣಾಮವಾಗಿ ಆರೆಂಟು ಮಾಸ ಕಳೆಯುವಷ್ಟರಲ್ಲಿ ಕೆಲವೊಮ್ಮೆ ರಾಜಪರಿವಾರದ ಅಭ್ಯರ್ಥಿಗಳಿಗಿಂತ ಮಿಗಿಲಾಗಿ ಕಣ ಗೆ ಬಿಳುತ್ತಿದ್ದ. ಹುಡುಗ ವೇದಾಧ್ಯಯನ ಮತ್ತು ದೈಹಿಕ ಚಟುವಟಿಕೆಗಳು ಎರಡರಲ್ಲಿಯೂ ಕುಶಾಗ್ರಮತಿಯಾಗಿದ್ದ. ಅವನಲ್ಲಿದ್ದ ಕಲಿಯಬೇಕೆಂಬ ಹಸಿವು ಮತ್ತು ಪರಿಶ್ರಮದ ಕಾರಣದಿಂದ ಉಳಿದವರಿಗಿಂತ ಭಿನ್ನವಾಗಿ ಗುರುತಿಸಲ್ಪಟ್ಟಿದ್ದ. ಇದರಿಂದ ಅವನ ಸಹಪಾಠಿಗಳಾಗಿದ್ದ ರಾಜಪರಿವಾರದ ವಿದ್ಯಾರ್ಥಿಗಳಿಗೆ ಕಣ್ಣು ಕಿಸುರಾಗಿತ್ತು. ಹಲವಾರು ಸಾರಿ ಅವರು ಅಭ್ಯಾಸ ಕಾಲದಲ್ಲೇ ನಾಲ್ಕಾರು ಜನ ಒಟ್ಟಾಗಿ ಅವನ ಮೇಲೆ ಹಾಯುತ್ತಿದ್ದರು. ಮಯೂರನು ಅವರನ್ನೆಲ್ಲ ಚಾಕಚಕ್ಯತೆಯಿಂದ ನಿವಾರಿಸಿಕೊಳ್ಳುತ್ತಿದ್ದ. ಅವರ ಹೊಟ್ಟೆಕಿಚ್ಚು ಅತಿಯಾಗಿ ಇವನನ್ನು ಹೇಗಾದರೂ ಗುರುಕುಲದಿಂದ ವ್ಯವಸ್ಥಿತವಾಗಿ ಹೊರಹಾಕುವ ಪ್ರಯತ್ನ ಮಾಡಿದರು. ಇದಕ್ಕೆ ಪರೋಕ್ಷವಾಗಿ ರಾಜನ ಬೆಂಬಲವೂ ಇತ್ತು. ಅವರು ಹಾರುವನಾದ ನಿನಗೇಕೆ ಶಸ್ತ್ರಾಭ್ಯಾಸ? ಏನು ಸುತ್ತಲಿನ ಜನರನ್ನು ಕೂಡಿಸಿ ಅರಸೊತ್ತಿಗೆಯ ವಿರುದ್ಧ ಎತ್ತಿಕಟ್ಟುವ ಇರಾದೆಯನ್ನು ಹೊಂದಿರುವೆಯಾ? ನಿನ್ನ ಸ್ಥಾನಮಾನ ಅರಿತು ನಡೆದುಕೋ. ಇಲ್ಲಿ ನೀನಿರಬೇಡ ನಡೆ ಎಂದು ಗುರುಕುಲದ ಮಧ್ಯದ ಅಂಗಳದಿಂದ ನಾಲ್ಕಾರು ರಾಜಮನೆತನದ ವಿದ್ಯಾರ್ಥಿಗಳು ಮಯೂರನನ್ನು ದರದರನೆ ಎಳೆತಂದು ಹೊರದಬ್ಬಿದರು. ಮಯೂರ ಬೀದಿಯ ಧೂಳಿನಲ್ಲಿ ಮುಖವಡಿಯಾಗಿ ಬಿದ್ದ. ಅವನಿಗೆ ತುಂಬ ಅವಮಾನವಾಯಿತು. ಅವರೆಲ್ಲ ಸಂತೋಷದ ನಗೆ ನಕ್ಕರು.
ಮಯೂರನ ಸ್ವಾಭಿಮಾನ ಕೆರಳಿತು. ಎದೆಯಲ್ಲಿ ಸಿಟ್ಟಿನ ದಾವಾನಲ ಹೊತ್ತಿತು. ಆಗ ಅವನು ಹೇಯ್, ಇವತ್ತಿನಿಂದ ಸೂರ್ಯಪಥ ಬದಲಿಸಿದಂತೆ ನನ್ನ ಬದುಕಿನ ಪಥವನ್ನು ಬದಲಾಯಿಸುವಂತೆ ಮಾಡಲು ನೀವೆಲ್ಲ ಕಾರಣರಾಗಿದ್ದೀರಿ. ಒಂದೋ ನಾನು ಇದಕ್ಕೆಲ್ಲ ಕೊನೆ ಹಾಡುತ್ತೇನೆ. ಅಥವಾ ನನ್ನ ಪ್ರಯತ್ನದಲ್ಲಿ ನಾನೇ ಕೊನೆಯಾಗುತ್ತೇನೆ. ಅಲ್ಲಿಯವರೆಗೆ ಮತ್ತೆ ಈ ನೆಲಕ್ಕೆ ಕಾಲಿಡಲಾರೆ. ಎಂದು ಶಪಥಮಾಡಿದನು. ಅಜ್ಜನೊಡನೆ ಕೂಡಲೇ ಅಲ್ಲಿಂದ ಹೊರಟು ತನ್ನ ಸ್ಥಳ ತಾಳಕುಂದಕ್ಕೆ ಹಿಂದಿರುಗಿದ. ಅಂದಿನಿಂದಲೇ ತನ್ನ ನಾಡಿನಲ್ಲಿ ಸ್ವತಂತ್ರ ಸಾಮ್ರಾಜ್ಯವೊಂದನ್ನು ಕಟ್ಟುವ ನಿರ್ಧಾರಕ್ಕೆ ಅಂಕರರಾರ್ಪಣೆಯಾಯ್ತು.
ಅಂದಿನ ಕಾಲದಲ್ಲಿ ಭರತಖಂಡದ ಮಧ್ಯಭಾಗ ಸಾವಿರಾರು ಸಾಮಂತರ, ಮಾಂಡಲಿಕರ ಸಂಸ್ಥಾನವಾಗಿಯೇ ಆಳಲ್ಪಡುತ್ತಿತ್ತು. ಅಲ್ಲಿಯವರೆಗೆ ಆ ಪ್ರದೇಶವನ್ನು ಸ್ವತಃ ತಮ್ಮವನೆನ್ನುವ ಯಾವುದೇ ಮಾಂಡಲಿಕ, ದಳವಾಯಿ, ಸಾಮಂತ, ಸ್ವತಂತ್ರ ರಾಜರು ಆಳಿರಲಿಲ್ಲ. ಕುಂತಳದ ಒಳಭಾಗ ದಟ್ಟಾನುದಟ್ಟ ಕಾನನ ಪ್ರದೇಶದಲ್ಲಿ ಬದುಕಿದ್ದ ಹಲವು ಬಡPಟ್ಟು ಮತ್ತು ಸಂಪ್ರದಾಯಬದ್ಧ ಜೀವನಶೈಲಿಗೆ ಹೊಂದಿಕೊಂಡಿದ್ದ ಪಂಗಡಗಳಿಗೆ ಯಾವ ಜಂಝಡವೂ ಬೇಕಿರಲಿಲ್ಲ. ಅವರ ಬದುಕೇನಿದ್ದರೂ ಕಾಡಿನ ಮಧ್ಯೆ, ನೀರಿನ ತೊರೆಗಳ ದಂಡೆಯಲ್ಲಿ ಅನೂಚಾನವಾಗಿ ನಡೆದಿತ್ತು. ಯಾವುದೇ ರಾಜಕುಟುಂಬ, ಪಾಳೇಗಾರಿಕೆಯಲ್ಲಿ ಏನೇ ಬದಲಾವಣೆಯಾದರೂ ತಮ್ಮ ಮೂಲಬದುಕು ಮತ್ತು ಜೀವನಶೈಲಿ, ತಮ್ಮತನಕ್ಕೆ ಚ್ಯುತಿ ಬಾರದಂತೆ ತಮ್ಮನ್ನು ಸಲಹಿದರೆ ಸಾಕೆನ್ನುವ ಮನೋಭಾವ ಅವರಲ್ಲಿ ಬೇರುಬಿಟ್ಟಿತ್ತು. ಇಂತಹ ಬುಡಕಟ್ಟಿನ ಜನಾಂಗದವರನ್ನು ಸಮಾಜದಲ್ಲಿ ಕಡುಂಬುಗಳು ಎಂದು ಗುರುತಿಸಲಾಗುತ್ತಿತ್ತು. ಅವರು ಮೂಲತಃ ಕಾಡುಗೊಂಡರ, ನಾಡಬೇಡರ ಪಡೆಗಳಲ್ಲಿ ಬೆರೆತುಹೋಗಿದ್ದ ಬುಡಕಟ್ಟು ಜನಾಂಗ. ಸಹಜವಾಗಿಯೇ ಅವರು ಸಾಹಸಿಗಳು ಮತ್ತು ಪರೋಕ್ಷ ಯುದ್ಧ ತಂತ್ರಗಾರಿಕೆಯಲ್ಲಿ ಅತ್ಯಂತ ಪರಿಣತರಾಗಿದ್ದರು.
ಕಂಚಿಗೆ ಬೆಟ್ಟದಷ್ಟು ಆಸೆಹೊತ್ತು ಹೋಗಿ ಅಲ್ಲಿ ಅವಮಾನಿತನಾಗಿ ಹಿಂದಿರುಗಿ ಬಂದಿದ್ದ ಮಯೂರಶರ್ಮ ತನ್ನ ಅಜ್ಜ ವೀರಶರ್ಮರೊಡನೆ ತಾನೊಂದು ಸ್ವತಂತ್ರ ಸಾಮ್ರಾಜ್ಯ ಕಟ್ಟುವ ಮನದಾಸೆಯನ್ನು ಹೇಳಿಕೊಂಡ. ಅದಕ್ಕಾಗಿ ಅವರ ಮಾರ್ಗದರ್ಶನ ಕೋರಿದ. ಬುಡಕಟ್ಟು ಜನಾಂಗದವರಿಗೆ ವೀರಶರ್ಮರೆಂದರೆ ಶಾಸ್ತ್ರಕೋವಿದರು ದೇವತೆಯ ಸ್ವರೂಪದಂತಿದ್ದರು. ಅವರ ಮಾತನ್ನವರು ಗೌರವಿಸುತ್ತಿದ್ದರು. ಅವರು ಮೊದಲು ತಮ್ಮ ಪ್ರದೇಶದ ಕಡುಂಬಿಗಳು, ಮತ್ತು ಬೇಡರ ಪಡೆಯ ಮುಖ್ಯಸ್ಥರೊಡನೆ ಸಮಾಲೋಚನೆ ನಡೆಸಿದರು. ಅವರೆಲ್ಲರೂ ಒಗ್ಗೂಡಿ ಮಯೂರಶರ್ಮನಿಗೆ ಸಮರ್ಥನೆ ನೀಡಲು ಒಪ್ಪಿಕೊಂಡರು. ಮಯೂರಶರ್ಮನ ತಂದೆ ಬಂಧುಸೇನ ಹಲವು ವರ್ಷಗಳ ಹಿಂದೆಯೇ ಸೇನಾಧಿಕಾರಿಯಾಗಿ ಮಾಂಡಲೇಶ್ವರನೊಬ್ಬನ ಬಳಿ ಸೈನಿಕ ಶಿಕ್ಷಣ ಕೊಡುವವನಾಗಿದ್ದ. ಅವನಿಗೂ ವೀರಶರ್ಮರು ಕರೆಕಳುಹಿ ಬರಮಾಡಿಕೊಂಡರು. ಸ್ಥಳೀಯ ಪಡೆಗಳಿಗೆ ವ್ಯವಸ್ಥಿತವಾದ ಯುದ್ದ ತರಬೇತಿಯನ್ನು ಕೊಡಲು ಪ್ರಾರಂಭಿಸಿದರು.
ಮಧ್ಯಭಾರತದ ಹಲವು ಭಾಗಗಳಲ್ಲಿ ಸಾಮಂತರಾಗಿದ್ದರು ಹಲವಾರು ವರ್ಷಗಳು ಹಾಗೆಯೇ ಉಳಿದು ಅವಕಾಶ ದೊರೆತರೆ ತಾವೂ ಸ್ವಾಯತ್ತರಾಗಬೇಕೆಂಬ ಹಂಬಲ ಹೊಂದಿದ್ದರು. ಆದರೆ ಪಲ್ಲವರ ಬೃಹತ್ ಸೈನ್ಯವನ್ನು ಎದುರಿಸುವ ಸಾಮರ್ಥ್ಯವಿಲ್ಲದೆ ಅರಸರನ್ನೇ ಸೇವಿಸಿಕೊಂಡಿದ್ದರು. ಚಂದ್ರಾವಳಿಯ ಸರಹದ್ದು ಪ್ರದೇಶದ ಹಿಡಿತವಿಟ್ಟುಕೊಂಡಿದ್ದ ಪುಂಡರೀಕನೆಂಬ ನಾಯಕ ಮಾತ್ರ ಅವಕಾಶ ದೊರೆತರೆ ಅರಸರ ವಿರುದ್ಧ ತಿರುಗಿಬೀಳಲು ಕಾಯ್ದಿದ್ದ. ಮಯೂರಶರ್ಮನ ಪ್ರಯತ್ನಕ್ಕೆ ಚಂದ್ರಾವಳಿಯೇ ಕೇಂದ್ರಸ್ಥಾನವಾಯ್ತು. ಸತತ ಎರಡು ವರ್ಷಗಳ ಸಂಘಟನೆ, ಪೂರ್ವಸಿದ್ಧತೆ, ಕಠಿಣ ತರಬೇತಿಯ ನಂತರ ತಮ್ಮ ಮೊದಲ ಧಾಳಿಗೆ ಮಯೂರಶರ್ಮನ ಸೈನ್ಯ ಮುಂದಾಯಿತು.
ಯುದ್ಧ ಪ್ರಾರಂಭಿಸುವ ಮೊದಲು ವೀರಶರ್ಮ, ಬಂಧುಸೇನರ ನಿರ್ದೇಶನದಂತೆ ಹೇಗೆ ಶತೃವನ್ನು ಸುತ್ತುವರಿಯಬೇಕು, ಯಾವರೀತಿಯ ತಂತ್ರವನ್ನು ಬಳಸಬೇಕು ಎಂಬೆಲ್ಲ ಯೋಜನೆ ಮಾಡಿಕೊಳ್ಳುವ ವರ್ಣನೆ ಚೇತೋಹಾರಿಯಾಗಿದೆ. ಏಕೆಂದರೆ ಮಯೂರಶರ್ಮ ಅಲ್ಲಿಯವರೆಗೆ ರಕ್ತಸಿಕ್ತ ಯುದ್ಧದ ಕಾಳಗದಲ್ಲಿ ಭಾಗವಹಿಸಿರಲಿಲ್ಲ. ಅವನಲ್ಲಿ ಧೈರ್ಯ ಮತ್ತು ಸಾಮರ್ಥ್ಯವನ್ನು ಪ್ರಚೋದನೆ ಮಾಡಬೇಕಾಗಿತ್ತು. ಅವರಿದ್ದ ಪ್ರದೇಶದಿಂದ ಗಟ್ಟದ ಕೆಳಕ್ಕೂ, ಘಟ್ಟದ ಮೇಲ್ಗಡೆಗೂ ಹೋಗಲಾಗದಂತೆ ಶತೃಗಳನ್ನು ನಿಂಧಿಸಿದರು. ಕರಾವಳಿ ಕಡೆಯಿಂದ ಯಾರೊಬ್ಬನೂ ಕಂಚಿಯ ಕಡೆಗೆ ಹೋಗದಂತೆ ಎಲ್ಲ ದಾರಿಗಳಲ್ಲಿ ಕಡಂಬಿಗಳ ನಾಲ್ಕಾರು ಗುಂಪುಗಳು ಪಹರೆ ಕಾಯುತ್ತಿದ್ದವು. ಅವರಿದ್ದ ಪ್ರದೇಶದ ಪಕ್ಕದ ಕಣ ವೆ ಪ್ರದೇಶ ದಾಟಿದರೆ ಪಲ್ಲವರ ಸಾಮಂತ ಪದ್ಮರಾಜನ ಜಹಗೀರಿತ್ತು. ಅದರಾಚೆಗೆ ಇನ್ನೊಬ್ಬ ಸಾಮಂತ ಆಂದ್ರಪಾಲನಿದ್ದ.
ಮೊದಲ ಪ್ರಯತ್ನಾಗಿ ಪದ್ಮರಾಜನ ರಾಜವಾಡೆಯನ್ನೇ ಮುತ್ತಿದ ಮಯೂರನ ಸೈನ್ಯದವರು ಎದುರಿಗೆ ಕಾಣ ಸಿಕೊಳ್ಳದೆ ಕಾಡುದಾರಿಯಲ್ಲಿ ಅವಿತು ಕುಳಿತು ತಮಗೆ ಲಭ್ಯವಿದ್ದ ಸ್ಥಳೀಯ ವಸ್ತುಗಳಿಂದಲೇ ಮಾರಕ ಆಯುಧಗಳನ್ನಾಗಿ ಮಾಡಿಕೊಂಡು ಶತೃ ಸೈನಿಕರನ್ನು ಎದುರಿಸಿದರು ಮತ್ತು ಸೋಲಿಸಿದರು. ಇದೇ ಈಗಿನ ಕಾಲದ ಗೆರಿಲ್ಲಾ ಯುದ್ಧ ತಂತ್ರವಾಗಿದೆ. ಪದ್ಮರಾಜನಿಗೆ ಎದುರು ಪಡೆಯೆಷ್ಟಿದೆಯೆಂಬ ಅಂದಾಜೇ ಆಗದಂತೆ ಅವನನ್ನು ಸೋಲಿಸಿ ಸೆರೆಯಳಾಗಿಸಿದರು. ಸೆರೆಯಾಳುಗಳಾಗಿ ಸಿಕ್ಕ ಶತ್ರ ಸೈನಿಕರನ್ನು ಕೊಲ್ಲದಂತೆ ಉಳಿಸಿಕೊಂಡು ಅವರು ತಮ್ಮ ಕಡೆಗೆ ನಿಷ್ಟೆ ಬದಲಿಸಿ ಮುಂದಿನ ಯುದ್ಧಗಳಲ್ಲಿ ಮಯೂರನ ಪರವಾಗಿ ಕಾದುವಂತೆ ಮಾಡಿದ್ದೂ ಕೂಡ ಒಂದು ತಂತ್ರ ಭಾಗವಾಗಿದೆ.
ಪದ್ಮರಾಜನನ್ನು ಜಯಸಿದ ನಂತರ ದಾರಿಯಲ್ಲಿ ಎದುರಾಗುವವನು ಮತ್ತೊಬ್ಬ ಸಾಮಂತ ಆಂದ್ರಪಾಲ. ಮೇಲ್ಭಾಗದ ವರದಾನದಿಯಿಂದ ಹೆದ್ದಾರಿಯವರೆಗೂ ಹಬ್ಬಿದ್ದ ಪ್ರದೇಶವನ್ನು ಆಳುತ್ತಿದ್ದ ಆಂದ್ರಪಾಲ ಅತ್ಯಂತ ಕ್ರೂರಿ ಮತ್ತು ಸಾಹಸಿಯೆಂದು ಪ್ರಸಿದ್ಧನಾಗಿದ್ದ. ಆಂದ್ರಪಾಲ ಬೇಟೆಗಾಗಿ ಬಂದು ಕಾಡಿನಂಚಿನ ದಂಡಾವತಿಯ ಬಳಿಯಲ್ಲಿ ಬಿಡಾರ ಹೂಡಿದ್ದನೆಂಬ ಸುದ್ಧಿ ತಿಳಿದಿದ್ದ ಮಯೂರ. ಅವನಿಗೆ ಮಯೂರನ ಸೇನೆ ತನ್ನತ್ತ ಬರುವ ಸೂಚನೆಯಿಲ್ಲದ್ದರಿಂದ ಆಮೋದ ಪ್ರಮೋದಗಳಲ್ಲಿ ಮಗ್ನನಾಗಿದ್ದ. ಅವನ ಅಂಗರಕ್ಷಕ ಪಡೆಯನ್ನೆಲ್ಲಾ ಸುತ್ತುವರೆದು ವಶಕ್ಕೆ ಪಡೆದ ನಂತರ ಆಂದ್ರಪಾಲನನ್ನು ಮುತ್ತಲಾಯಿತು. ಅವನನ್ನು ಸೆರೆಯಾಳಗಿಸಿ ಎಳೆತಂದ ಸೇನಾನಿ ದಾರುನಾಯ್ಕನನ್ನು ಕತ್ತಿಗಾಹುತಿ ಮಾಡಿದ್ದ ಆಂದ್ರಪಾಲ. ಕೊನೆಗೆ ಆಂದ್ರಪಾಲನಿಗೂ ಮಯೂರಶರ್ಮನಿಗೂ ದ್ವಂದ್ವಯುದ್ಧ ನಡೆದು ಆಂದ್ರಪಾಲ ಗತಿಸಿದ.
ಅಷ್ಟರಲ್ಲಿ ಪದ್ಮರಾಜನ ಸೇವಕನೊಬ್ಬ ಗುಟ್ಟಾಗಿ ಕಂಚಿಯ ಕಡೆಗೆ ಧಾವಿಸಿದ್ದ. ಅಲ್ಲಿಯ ದೊರೆಗೆ ಮಯೂರಶರ್ಮ ದಂಡೆತ್ತಿಬಂದು ಪದ್ಮರಾಜನನ್ನು ಸೋಲಿಸಿ ಮುಂದುವರೆಯುತ್ತಿದ್ದಾನೆಂಬ ಸುದ್ಧಿಯನ್ನು ಮುಟ್ಟಿಸಿದ. ದಂಗೆಯೆದ್ದಿದ್ದವರನ್ನು ಅಡಗಿಸುವಂತೆ ರಾಜ ಶಿವಸ್ಕಂದವರ್ಮ ತನ್ನ ಸೈನಿಕ ಪಡೆಗೆ ಆಜ್ಞಾಪಿಸಿದ. ಅಲ್ಲಿಯವರೆಗೆ ಪಲ್ಲವ ದೊರೆಯ ಸೇನೆಯಲ್ಲಿದ್ದ ಪದಾತಿಪಡೆಯ ಮುಖ್ಯಸ್ಥನಾದ ಚಂಡಸೇನ ತನ್ನ ಆಪ್ತರು ಕೆಲವರೊಡನೆ ಪಲಾಯನಗೈದು ಮಯೂರಶರ್ಮನ ಬಳಿಗೆ ಧಾವಿಸಿದ. ಅವನು ಕಂಚಿಯ ಗುರುಕುಲದಲ್ಲಿ ದೇವಸೇನನ ಸಹಪಾಠಿಯಾಗಿದ್ದು ಹಳೆಯ ಗೆಳೆಯರು ಮತ್ತೆ ಒಂದಾದರು. ಯುದ್ಧವಿದ್ಯೆಯಲ್ಲಿ ಸಾಕಷ್ಟು ಪಳಗಿದ್ದ ಚಂಡಸೇನನ ಮಾರ್ಗದರ್ಶನವೂ ಈಗ ಮಯೂರನ ಸೈನ್ಯಕ್ಕೆ ದೊರೆಯಿತು.
ಆಂದ್ರಪಾಲನ ವಾಡೆಗಳನ್ನೆಲ್ಲ ವಶಮಾಡಿಕೊಂಡ ನಂತರ ಮಯೂರನ ಸೇನೆ ಮುಂದುವರೆದು ಬಲಶಾಲಿಯಾಗಿದ್ದ ಬೃಹತ್‌ಬಾಣನ ವಸಾಹತಿಗೆ ತೆರಳಿತು. ಅವನ ಒಳಗುಟ್ಟೆಲ್ಲವನ್ನೂ ತಿಳಿದಿದ್ದ ಚಂಡಸೇನ ಮಯೂರಶರ್ಮನಿಗೆ ಸೂಕ್ತ ಮಾರ್ಗದರ್ಶನ ಮಾಡಿದ. ಬಲಾಢ್ಯನಾದ ಬಾಣನೊಡನೆ ಕಂಚಿಯ ದೊರೆ ಶಿವಸ್ಕಂದವರ್ಮ ಸ್ನೇಹವನ್ನು ಕಾಯ್ದುಕೊಂಡು ಉತ್ತರ ಭೂಭಾಗವನ್ನು ರಕ್ಷಿಸಿಕೊಂಡಿದ್ದ. ಮಯೂರನ ದಂಡನಾಯಕರು ವಲ್ಕರಾಜು, ವೆಂಗಿರಸ ಮೊದಲು ಬಾಣನನ್ನು ತಡವಿಕೊಂಡರು. ಪೂರ್ವಯೋಜನೆಯಂತೆ ವೈರಿ ಸೈನ್ಯವನ್ನು ಸುತ್ತುವರಿದು ಎಲ್ಲ ದಿಕ್ಕುಗಳಿಂದ ಕಾದಾಟ ಪ್ರಾರಂಭಿಸಿದರು. ಮಯೂರಶi ಮತ್ತು ಚಂಡಸೇನರು ತಮ್ಮ ಸೈನ್ಯದೊಡನೆ ಹಿಂದಿನಿಂದ ಬಂದು ಸೇರಿಕೊಂಡರು. ಬೃಹತ್‌ಬಾಣನನ್ನು ಯಶಸ್ವಿಯಾಗಿ ಸೋಲಿಸಿ ಸೆರೆಹಿಡಿದು ಅವನು ತಮ್ಮ ಆಧಿಪತ್ಯಕ್ಕೆ ಒಳಪಟ್ಟು ಕಪ್ಪಕಾಣ ಕೆಗಳನ್ನು ಸಲ್ಲಿಸುವ ಸಂಪ್ರದಾಯಕ್ಕೆ ಬದ್ಧನಾಗಿದ್ದೇನೆಂದು ಅವನಿಂದ ಜನತೆಯೆದುರಿಗೇ ಪ್ರಮಾಣ ಮಾಡಿಸಿದರು. ನಂತರ ಬಾಣನ ಅಂತ್ಯವು ಗುಪ್ತವಾಗಿ ನಡೆಯಿತು.
ಮುಂದಿನ ಹೆಜ್ಜೆ ತ್ರಿಪರ್ವತದ ಸಾಮಂತನಾಗಿದ್ದ ವಿಷ್ನುಗೋಪನತ್ತ. ಅವನಲ್ಲಿಗೆ ದಂಡೆತ್ತುವುದರೊಳಗೆ ನಂದರ ಚರಗುಪ್ತ ಮತ್ತು ನಂದಗುಪ್ತರು ಅವನನ್ನು ಸೋಲಿಸಿ ಕೈಸೆರೆಯಾಗಿಸಿ ಕೊಂಡೊಯ್ದಿದ್ದರು. ಹೀಗಾಗಿ ಕಾದಾಡುವ ಪ್ರಸಂಗವೊದಗಲಿಲ್ಲ. ಆದರೆ ಅಳಿದುಳಿದ ವಿಷ್ನುಗೋಪನ ಸೈನಿಕರು ಮಯೂರನ ಆಶ್ರಯಕೋರಿ ಶರಣುಬಂದಿದ್ದರು. ಇದವನಿಗೆ ಅನುಕೂಲವಾಯಿತು. ಈ ಶರಣಾದ ಸ್ಯನಿಕರನ್ನು ತನ್ನ ಮುಂದಿನ ಹೋರಾಟದಲ್ಲಿ ಮುಂಚೂಣ ಯಲ್ಲಿಟ್ಟು ಅವರ ನಿಷ್ಠೆಯನ್ನು ಪರೀಕ್ಷೆಗೆ ಒಡ್ಡಿದ. ಅವರು ನಿಷ್ಟರಾಗಿ ಕಾದಿದರು. ರಾಜತಂತ್ರದ ಉಪಯೋಗಮಾಡಿ ಉತ್ತರದ ಗುಪ್ತರೊಡನೆ ಸ್ನೇಹದ ಒಪ್ಪಂದಕ್ಕೆ ನಿರೂಪ ಕಳುಹಿಸಿದ. ಇದರಿಂದ ಅವರು ದಕ್ಷಿಣದ ಕಡೆಗೆ ಬಾರದಂತೆ ಇವನಿಗೆ ರಕ್ಷಣೆಯಾಯಿತು.
ಇನ್ನು ಉಳಿದದ್ದು ಪಲ್ಲವ ದೊರೆಯ ಮೇಲಿನ ಅಂತಿಮ ಯುದ್ಧ. ಇಲ್ಲಿಯೂ ಮಯೂರನ ತಂತ್ರಗಾರಿಕೆ ಉಪಯೋಗಕ್ಕೆ ಬಂದಿತು. ಮೊದಲು ತನಗೆ ಶರಣಾಗಿದ್ದ ವಿಷ್ಣುಗೋಪನ ಸೈನಿಕ ತುಕಡಿಯು ಪಲ್ಲವರ ಸೈನ್ಯದ ಮೇಲೆ ಧಾಳಿಮಾಡಿತು. ಹಿಂದಿನಿಂದ ಅಟ್ಟಿಸಿಕೊಂಡು ಬಂದ ಮಯೂರನ ಸೇನೆ ಚಕ್ರವ್ಯೂಹ ರಚನೆ ಮಾಡಿ ಪಲ್ಲವ ರಾಜ ಶಿವಸ್ಕಂದವರ್ಮನನ್ನು ಅದರಲ್ಲಿ ಸಿಲುಕಿಸಿದರು. ಕೊನೆಗೆ ಮಯೂರನೇ ಶಿವಸ್ಕಂದನೊಡನೆ ದ್ವಂದ್ವಯುದ್ಧ ಮಾಡಿ ಅವನನ್ನು ಸೋಲಿಸಿದ. ಅವನ ದೇಹ ಮಯೂರನ ಹೊಡೆತಗಳಿಂದ ಜರ್ಝರಿತವಾಯಿತು. ಅವನನ್ನು ಸೆರೆಯಾಳಾಗಿ ತಮ್ಮ ಶಿಬಿರಕ್ಕೆ ಒಯ್ದರು. ಅಲ್ಲಿ ಎತ್ತರದ ಆಸನದಲ್ಲಿ ರಾಜನಂತೆ ಕುಳಿತಿದ್ದ ಮಯೂರ ಎದುರಿಗೆ ಸೆರೆಯಾಳಾಗಿ ನಿಂತಿದ್ದ ಶಿವಸ್ಕಂದವರ್ಮನಿಗೆ ತಾನು ಕಂಚಿ ಗುರುಕುಲದಿಂದ ತಿರಸ್ಕಾರಗೊಂಡನಂತರ ಅಂದಿನವರೆಗಿನ ಘಟನೆಗಳನ್ನು ವಿವರಿಸಿದ. ಅದಕ್ಕೆ ಕಾರಣವಾಗಿದ್ದ ತನ್ನ ಶಪಥವನ್ನು ಜ್ಞಾಪಿಸಿದ. ಪಲ್ಲವರ ಪಥನದಿಂದ ಸಂಪೂರ್ಣವಾಗಿ ಮಯೂರಶರ್ಮ ತನ್ನ ಸಾಮ್ರಾಜ್ಯವನ್ನು ಅದರ ಪೂರ್ಣ ಗಡಿಗಳ ವರೆಗೆ ವಿಸ್ತರಿಸಿದಂತಾಯ್ತು. ಅವನ ಹಠಸಾಧನೆ ಪೂರ್ತಿಯಾಗಿತ್ತು. ಹಿಂದೊಮ್ಮೆ ಅವರುಗಳು ಗುರುಕುಲದಲ್ಲಿ ಬ್ರಾಹ್ಮಣರಿಗೇಕೆ ರಾಜ್ಯಭೋಗ, ಅಧಿಕಾರ ಎಂದು ಹಳಿದಿದ್ದರ ಪರಿಣಾಮವಾಗಿ ಈಗ ಹೊಸ ಅರಸು ಮನೆತನವೊಂದು ಮಯೂರನ ಮುಂದಾಳತ್ವದಲ್ಲಿ ಹುಟ್ಟಿತ್ತು. ಶಿವಸ್ಕಂದವರ್ಮನ ಸಾಮ್ರಾಜ್ಯ, ಅವನ ಮಾಂಡಲಿಕರು, ಸಾಮಂತರು, ಗೊಲ್ಲರು, ಬೇಡಸಮುದಾಯದವರು, ಊರಪ್ರಮುಖರು, ಅಷ್ಟೇಅಲ್ಲ ಅವನ ಸರಹದ್ದಿನ ಆಚೀಚೆಯ ಮಾನ್ಯಮಾಡಲಾದ ಸರ್ವವೂ ಮಯೂರನ ರಾಜ್ಯಕ್ಕೆ ಒಳಪಟ್ಟು ಅವನ ಅಧೀನವಾಯಿತು. ಶಿವಸ್ಕಂದನ ಅಂದಿನ ಅಹಂಗೆ ಕಾರಣವಾದ ಆತನ ಹೆಸರನ್ನು ಕಿತ್ತುಕೊಂಡು ಅಂದಿನಿಂದ ತಾನು ಮಯೂರಶರ್ಮನ ಬದಲಾಗಿ ಮಯೂರವರ್ಮನೆಂದು ಹೊಸ ನಾಮಕರಣ ಮಾಡಿಕೊಂಡ.
ಕುಂತಳ ನಗರದ ಮಧ್ಯಭಾಗದಲ್ಲಿರುವ ಧೂಪದ ಕಾಡು, ಗಿರಿಕಂದರಗಳ ನಾಡಿನಲ್ಲಿ ತನ್ನ ಆರಾಧ್ಯದೈವ ಮಧುಕೇಶ್ವರ ದೇವಾಲಯವನ್ನು ಬೃಹತ್ಗಾತ್ರದಲ್ಲಿ ನಿರ್ಮಿಸಲು ಆಕ್ಞೆ ಮಾಡಿದ. ಶ್ರೀಪರ್ವತದ ಘಟ್ಟದಾಚೆಯ ಕುಂತಳದ ಮಧ್ಯದಲ್ಲಿ ಹೊಸ ರಾಜಧಾನಿಯನ್ನು ನಿರ್ಮಿಸಲಾಯಿತು. ಅದನ್ನು ಕದಂಬ ಸಾಮ್ರಾಜ್ಯದ ರಾಜಧಾನಿ ವೈಜಯಂತಿಪುರ ಎಂದು ಘೋಷಣೆಮಾಡಲಾಯಿತು.
ಮುಂದೆ ಮಯೂರವರ್ಮನ ಸಾಮ್ರಾಜ್ಯಕ್ಕೆ ಸೇರಿಸಲು ಬೇಕಾಗಿದ್ದ ಸಂಪೂರ್ಣ ದಕ್ಷಿಣ ಪ್ರದೇಶವನ್ನೆಲ್ಲ ವಶಪಡಿಸಿಕೊಳ್ಳಲಾಯಿತು. ವೈಜಯಂತಿಪುರ ನಿಸರ್ಗ ಸೌಂದರ್ಯರಾಶಿಯನ್ನು ಹೊತ್ತಿತ್ತು. ಅದನ್ನು ಇನ್ನಷ್ಟು ಅದ್ಭುತಗೊಳಿಸಿದರು ಮಯೂರವರ್ಮನ ಪ್ರಜೆಗಳು. ರಾಜಧಾನಿ ಸಕಲ ವೈಭವದಿಂದ ಕಂಗೊಳಿಸಿತು. ರಾಜಲಾಂಛನವಾಗಿ ಸಿಂಹ ವನ್ನು ಹೊಂದಿದ್ದರೆ ರಾಜ್ಯದ ಧ್ವಜವಾಗಿ ವಾನರ ಗುರುತಿನ ಕೇಸರಿ ಧ್ವಜ ಆರೋಹಿಸಿತ್ತು.
ರಾಜ ಮಯೂರವರ್ಮ ಉಮೇದಿನಿಂದ ಅಶ್ವಮೇಧ ಯಜ್ಞವನ್ನು ಮಾಡಬೇಕೆಂದಿದ್ದಾಗ ಅಲ್ಲಿವರೆಗೆ ಅವನಿಂದ ಪರಾಜಿತರಾದವರ ಕಡೆಯಲ್ಲಿ ಅಳಿದುಳಿದವರು ಒಟ್ಟುಗೂಡಿ ಹೇಗಾದರು ಕಂದಂಬರನ್ನು ಮುಗಿಸಿಬಿಡಬೇಕೆಂದು ಅಧೀರ ಚಕ್ರಭಾನುವಿನ ನೇತೃತ್ವದಲ್ಲಿ ಯುದ್ಧವನ್ನು ಸಾರಿದರು. ಅಲ್ಲಿಯೂ ಮಯೂರವರ್ಮನ ರಣತಂತ್ರ ಕೈಗೂಡಿ ಚಕ್ರಭಾನು ಸೋತು ಗತಪ್ರಾಣನಾದ. ನಿರಾತಂಕವಾಗಿ ಅಶ್ವಮೇಧಯಾಗವನ್ನೂ ಮಾಡಿದ ಮಯೂರವರ್ಮ.
ಕದಂಬ ಚಕ್ರವತಿಯಾಗಿ 39 ವರ್ಷ ನಿರಾತಂಕವಾಗಿ ರಾಜ್ಯಭಾರ ಮಾಡಿದ ಕಥಾನಕವನ್ನು ವೈಜಯಂತಿಪುರ ಕೃತಿರೂಪದಲ್ಲಿ ನಮಗೆ ನೀಡಲಾಗಿದೆ. ಕನ್ನಡನಾಡಿನ ಮೊದಲ ಸ್ವತಂತ್ರ ಅರಸುವಂಶ ಕಂದಂಬ ಸಾಮ್ರಾಜ್ಯದ ಪರಿಚಯ ಮಾಡಿಸುತ್ತ ತಮಗೆ ಲಭ್ಯವಾಗಿರುವ ಅತ್ಯಲ್ಪ ಐತಿಹಾಸಿಕ ದಾಖಲೆಗಳಿಗೆ ತರ್ಕಬದ್ಧವಾದ ಕೊಂಡಿಗಳನ್ನು ಸೂಕ್ತವಾಗಿ ಹಾಕಿ ಬೆಸೆದಿರುವ ಲೇಖಕರ ಕೌಶಲ್ಯವನ್ನು ತುಂಬು ಹೃದಯದಿಂದ ಕೊಂಡಾಡಬೇಕು. ಇದು ಕನ್ನಡಿಗರು ಓದಲೆಬೇಕಾದ ಕೃತಿ. ಇದನ್ನು ನಮಗೆ ನೀಡಿರುವ ಲೇಖಕ ಸಂತೋಷಕುಮಾರ ಮೆಹಂದಳೆಯವರ ಪರಿಶ್ರಮದಿಂದ ಇದು ಅಭಿಮಾನದ ಕೃತಿಯಾಗಿ ಕನ್ನಡ ಸಾಹಿತ್ಯದಲ್ಲಿ ಅಪರೂಪದ ಕೃತಿಯಾಗಿದೆ. ಅವರಿಗೆ ಮತ್ತೊಮ್ಮೆ ಅಭಿನಂದನೆಗಳು.
-ಬಿ.ಆರ್.ನಾಗರತ್ನ. ಮೈಸೂರು.
ಬಹಳ ಚೆನ್ನಾಗಿದೆ ಮೇಡಂ ಕೃತಿ ಪರಿಚಯ. ಕೃತಿಯೂ ತುಂಬಾ ಚೆನ್ನಾಗಿದೆ. ಒಮ್ಮೆ ಈ ಇತಿಹಾಸವನ್ನು ಇವತ್ತು ಎಲ್ಲರೂ ಮೆಲುಕು ಹಾಕಬೇಕಾಗಿದೆ.
ಕದಂಬ ಸಾಮ್ರಾಜ್ಯದ ಉಗಮ ಮತ್ತು ಹಿರಿಮೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟು, ಆಸಕ್ತಿದಾಯಕವಾಗಿಸುವ ನಿಟ್ಟಿನಲ್ಲಿ ಕೃತಿ ಪರಿಚಯ ಅತ್ಯಂತ ಉತ್ತಮವಾಗಿ ಮೂಡಿ ಬಂದಿದೆ.
ಧನ್ಯವಾದಗಳು ನಯನ ಮೇಡಂ
ನನ್ನ ಲೇಖನ ಪ್ರಕಟಿಸಿದ ಸುರಹೊನ್ನೆಗೆ ಧನ್ಯವಾದಗಳು
ಧನ್ಯವಾದಗಳು ಪದ್ಮಾ ಮೇಡಂ
ಪ್ರಬುದ್ಧ ಲೇಖಕರಾದ ಸಂತೋಷ್ ಕುಮಾರ್ ಮೆಹಂದಳೆ ಅವರ ಸೊಗಸಾದ ಐತಿಹಾಸಿಕ ಕಾದಂಬರಿಯ ವಿಮರ್ಶಾತ್ಮಕ ಪುಸ್ತಕ ಪರಿಚಯವು ಬಹಳ ಚೆನ್ನಾಗಿದೆ…ಧನ್ಯವಾದಗಳು ನಾಗರತ್ನ ಮೇಡಂ.
ನಿಮ್ಮ ಈ ಪರಿಚಯ ಬರಹದಿಂದ ಅದನ್ನು ಓದುವ ಮನಸ್ಸಾಗಿದೆ. ಧನ್ಯವಾದಗಳು ಒಂದು ಒಳ್ಳೆಯ ಪುಸ್ತಕದ ಬಗ್ಗೆ ತಿಳಿಸಿದ್ದಕ್ಕೆ
ಧನ್ಯವಾದಗಳು ಶಂಕರಿ ಮೇಡಂ ಹಾಗೂ ಶರಣಬಸವ ಸರ್ ಗೆ
ಕಾದಂಬರಿ ಕುರಿತ ಅವಲೋಕನ ಉತ್ತಮವಾಗಿ ಮೂಡಿಬಂದಿದೆ….
ನಾನೂ ಈ ಕಾದಂಬರಿಯನ್ನು ಓದಿದ್ದೇನೆ… ಮೆಹಂದಳೆವರು ಅದ್ಬುತವಾಗಿ ಕೃತಿ ರಚಿಸಿ ಕನ್ನಡಿಗರು ಹೆಮ್ಮೆಪಡುವಂತೆ ಮಾಡಿದ್ದಾರೆ.
ಕೆಲವೆಡೆಯಲ್ಲಿ ಮಾತ್ರ ಅತಿಯಾದ ವಿವರಣೆ ಇದೆ ಅನಿಸುತ್ತದೆ. ಅದನ್ನು ಬಿಟ್ಟರೆ ಬಹಳ ಒಳ್ಳೆಯ ಕೃತಿ…
ತಮ್ಮ ಅವಲೋಕನಕ್ಕಾಗಿ ತಮಗೆ ಅಭಿನಂದನೆಗಳು ಮೇಡಮ್.
ಧನ್ಯವಾದಗಳು ಸಾರ್