ಹಿತನಡೆಯ ಹೆತ್ತವರು
ನನ್ನ ಶಾಲಾ ದಿನಗಳಲ್ಲಿ ಗಣಿತ ಕೊಂಚ ಕಬ್ಬಿಣದ ಕಡಲೆಯೇ ಆಗಿತ್ತು. ನನ್ನ ಅಪ್ಪ ಪ್ರತಿ ದಿನ ತಮ್ಮ ಬಿಇಎಂಲ್ ಕಾರ್ಖಾನೆಯಿಂದ ಬಂದ ನಂತರ ಚಹಾ ಕುಡಿದು ನನಗೆ ಗಣಿತವನ್ನು ಹೇಳಿ ಕೊಡುತ್ತಿದ್ದರು. ನನ್ನ ಅಪ್ಪ ನನ್ನನ್ನು ಎಂದಿಗೂ ಬೈದು ಹೊಡೆದವರಲ್ಲ. ಎಷ್ಟು ಸಾರಿ ಹೇಳಿಕೊಟ್ಟರೂ ಲೆಕ್ಕ ತಲೆಗೆ ಹತ್ತದಾಗ ‘ ಕತ್ತಿ ‘ ಎಂದು ನನ್ನನ್ನು ಕತ್ತೆಗೆ ಹೋಲಿಸಿ ಬೈಯುತ್ತಿದ್ದರೇ ಹೊರತು ಎಂದಿಗೂ ತಮ್ಮ ತಾಳ್ಮೆಯನ್ನು ಕಳೆದುಕೊಂಡವರಲ್ಲ. ನನ್ನ ಅಪ್ಪನ ಬಾಯಲ್ಲಿ ‘ ಕತ್ತಿ ‘ ಎಂಬ ಪದ ಬಹಳ ದೊಡ್ಡ ಬೈಗುಳವಾಗಿತ್ತು. ಅದು ನನಗೆ ಕಣ್ಣೀರು ತರಿಸುತ್ತಿದ್ದದ್ದೂ ನಿಜ.
ಈ ಮಧ್ಯೆ ನನ್ನ ಅಮ್ಮ ‘ ಬರತ್ತೆ ಸ್ವಲ್ಪ ಯೋಚನೆ ಮಾಡು. ಎಲ್ಲದರಲ್ಲೂ ನೀನು ಜಾಣೆ ಇದ್ದಿ. ಲೆಕ್ಕಾನೂ ಬರತ್ತೆ, ನೋಡ್ತಾ ಇರು’ ಎನ್ನುವ ಅತ್ಯಂತ ಕಾಳಜಿಯ ಸಮಾಧಾನಕರವಾದ ಮಾತು ನನಗೆ ಇನ್ನಷ್ಟು ಬಲವನ್ನು ಕೊಡುತ್ತಿತ್ತು. ಬಹುಶಃ ನನ್ನ ಅಪ್ಪ ಅಮ್ಮನ ಇಂತಹ ಸಕಾರಾತ್ಮಕ ನಡೆ, ಯಾರೂ ಯಾವ ಸಮಯದಲ್ಲೂ ಅಲುಗಾಡಿಸಲಾಗದ ಆತ್ಮವಿಶ್ವಾಸವನ್ನು ನನಗೆ ತಂದು ಕೊಟ್ಟಿತೇನೋ!?
ಪ್ರತಿ ವರುಷ ನನ್ನ ಅಪ್ಪನ ಅಪರಿಮಿತ ಪರಿಶ್ರಮದಿಂದ ನಾನು ಗಣಿತದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾ ಗುತ್ತಾ ಹೋದೆ. ಬಂತು ನೋಡಿ ಆಗ ‘ ಹತ್ತನೇ ತರಗತಿ’ ! ಇಡೀ ವರುಷ ನನಗೆ ಗಣಿತ ಹೇಳಿಕೊಟ್ಟಿದ್ದಲ್ಲದೆ, ನನ್ನ ಅಪ್ಪ, ತಮ್ಮ ವೃತ್ತಿ ಜೀವನದಲ್ಲೇ ಎಂದೂ ವಿನಾ ಕಾರಣ ರಜೆ ತೆಗೆದುಕೊಳ್ಳದಿದ್ದವರು ನನಗಾಗಿ ಹತ್ತನೇ ತರಗತಿಯ ಗಣಿತ ಪರೀಕ್ಷೆಯ ದಿನದಂದು,ಒಂದು ದಿನದ ರಜೆ ತೆಗೆದುಕೊಂಡದ್ದು ಇಂದಿಗೂ ನಮ್ಮ ಮನೆಯಲ್ಲಿ ಇತಿಹಾಸವಾಗಿ ದಾಖಲಾಗಿದೆ.
ಆ ದಿನಗಳಲ್ಲಿ ಗಣಿತ ಪರೀಕ್ಷೆಯನ್ನು ಎರಡು ಭಾಗವಾಗಿ ವಿಂಗಡಿಸುತ್ತಿದ್ದರು. ಬೆಳಗ್ಗೆ ಅಂಕ ಗಣಿತ ಹಾಗು ಬೀಜ ಗಣಿತದ ಪರೀಕ್ಷೆಯಿದ್ದರೆ, ಮಧ್ಯಾಹ್ನ ರೇಖಾ ಗಣಿತದ ಪರೀಕ್ಷೆ ಇರುತ್ತಿತ್ತು. ನನ್ನ ಪರೀಕ್ಷಾ ಕೇಂದ್ರವು ಬೆಂಗಳೂರಿನ ವಿಜಯನಗರದ ಸರ್ವಜ್ಞ ಶಾಲೆಯಾಗಿತ್ತು. ನನ್ನ ಅಪ್ಪ ಅಮ್ಮ ಇಬ್ಬರೂ ಬೆಳಗ್ಗೆ ಗಣಿತ ಪರೀಕ್ಷೆ ಶುರು ವಾಗುವುದಕ್ಕೂ ಮುಂಚೆ ಪರೀಕ್ಷಾ ಕೇಂದ್ರಕ್ಕೆ ಬಂದು ನನ್ನೊಂದಿಗೆ ಕುಳಿತುಬಿಟ್ಟಿದ್ದರು. ಬಹಳ ಮುಖ್ಯವಾದ, ನಾನು ಆಗಾಗ ತಪ್ಪು ಮಾಡುವ ಲೆಕ್ಕಗಳನ್ನು ನನ್ನ ಅಪ್ಪ ನನ್ನಿಂದ ಮೆಲುಕು ಹಾಕಿಸುತ್ತಿದ್ದರು. ಅಮ್ಮ ಆಗಾಗ ಆತ್ಮ ವಿಶ್ವಾಸವನ್ನು ತುಂಬಿ ಹುರಿದುಂಬಿಸುತ್ತಿದ್ದರು.
ನಾನು ಕುಳಿತುಕೊಳ್ಳುವ ಬೆಂಚು ಹಾಗು ಕೋಣೆಯನ್ನು ಖಾತ್ರಿ ಪಡಿಸಿಕೊಂಡು ನಂತರ ರಸ್ತೆಯ ಆಚೆ ಬದಿಯಲ್ಲಿ ನಿಂತು ನನ್ನನ್ನೇ ನೋಡುತ್ತಿದ್ದರು. ಅದೃಷ್ಟವಶಾತ್ ನಾನೂ ಸಹ ಕುಳಿತಲ್ಲಿಂದಲೇ ಅವರನ್ನು ನೋಡಲು ಸಾಧ್ಯವಾಗುತ್ತಿತ್ತು. ಏಕೆಂದರೆ ನಾನು ಕುಳಿತ ಜಾಗದಲ್ಲಿದ್ದ ಕಿಟಕಿಯಿಂದ ರಸ್ತೆಯ ಆಚೆ ಬದಿಯಲ್ಲಿ ನಿಂತಿದ್ದ ನನ್ನ ಅಪ್ಪ ಅಮ್ಮನನ್ನು ನೋಡಬಹುದಿತ್ತು. ಪ್ರಶ್ನೆ ಪತ್ರಿಕೆ ಕೊಟ್ಟು, ಅದನ್ನೊಮ್ಮೆ ನಾ ಓದಿ ನಂತರ ಅವರನ್ನು ನೋಡುತ್ತಾ ಬಲಗೈಯ್ಯ ಹೆಬ್ಬೆರಳನ್ನು ಒಮ್ಮೆ ನಗು ಮುಖದಿಂದ ಎತ್ತಿ ತೋರಿಸಿದ ನಂತರವೇ ಅವರು ಅಲ್ಲಿಂದ ಹೊರಟಿದ್ದರು.
ಮಧ್ಯಾಹ್ನ ರೇಖಾ ಗಣಿತವಿದ್ದ ಕಾರಣ ಹಾಗು ಪರೀಕ್ಷಾ ಕೇಂದ್ರ ನಮ್ಮ ಮನೆಯಿಂದ ಕೊಂಚ ದೂರವಿದ್ದುದ್ದರಿಂದ ನನ್ನ ಅಪ್ಪ ಅಮ್ಮ ಮಧ್ಯಾಹ್ನದ ಊಟವನ್ನು ಅಲ್ಲೇ ತಂದು, ನಾನು ಊಟ ಮಾಡುವ ಸಮಯದಲ್ಲಿ ಬೆಳಗಿನ ಪರೀಕ್ಷೆಯಲ್ಲಿ ನಾ ಬರೆದ ಉತ್ತರವನ್ನು ಮೌಲ್ಯಮಾಪನ ಮಾಡಿ ನನಗೆ ಅಂದಾಜು ಎಷ್ಟು ಅಂಕ ಬರಬಹುದೆಂದು ಹೇಳಿ, ರೇಖಾ ಗಣಿತದಲ್ಲಿ ಇನ್ನೆಷ್ಟು ಅಂಕ ತೆಗೆದರೆ ನಾನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಬಹುದೆಂಬ ಅಂಕಿ ಅಂಶಗಳನ್ನು ಅಲ್ಲೇ ಕೊಟ್ಟು ಬಿಟ್ಟಿದ್ದರು. ಮತ್ತೊಂದು ಯುದ್ಧಕ್ಕೆ ಸಿದ್ದವಾಗುವ ಹಾಗೆ ನಾನು ಮಧ್ಯಾಹ್ನದ ಪರೀಕ್ಷೆಗೆ ತೆರಳಿದ್ದೆ. ಪ್ರಶ್ನೆ ಪತ್ರಿಕೆಯನ್ನೊಮ್ಮೆ ಓದಿ, ಹೊರಗೆ ನಿಂತಿದ್ದ ನನ್ನ ಅಪ್ಪ ಅಮ್ಮನನ್ನು ನೋಡುತ್ತಾ ಮತ್ತದೇ ಸಂಜ್ಞೆಯನ್ನು ಮಾಡಿದ ನಂತರವೇ ಅವರಿಬ್ಬರು ಅಲ್ಲಿಂದ ಹೊರಟಿದ್ದರು.
ಹೀಗೆ ಗಣಿತ ಶಾಸ್ತ್ರವೆಂಬ ಮಹಾ ಸಾಗರವನ್ನು ದಾಟಲು ನನ್ನ ಅಪ್ಪ ಅಮ್ಮ ಅಂಬಿಗರಂತೆ ನನ್ನ ಬೆನ್ನೆಲುಬಾಗಿ ನಿಂತಿದ್ದರು. ಅವರ ಪರಿಶ್ರಮ, ಮಕ್ಕಳ ವಿದ್ಯಾಭ್ಯಾಸ ದೆಡೆಗಿನ ಸಮರ್ಪಣಾ ಭಾವ, ಸಕಾರಾತ್ಮಕ ಪ್ರತಿಕ್ರಿಯೆ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಹಸಿರಾಗಿದೆ.
ಹೆತ್ತ ಮಕ್ಕಳಲ್ಲಿ ಬುದ್ಧಿವಂತಿಕೆ, ಪ್ರತಿಭೆ ಅಥವಾ ಕೌಶಲ್ಯ ಸಮನಾಗಿರದು. ಒಂದೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಹೆತ್ತವರು ಅದನ್ನು ಗುರುತಿಸಿ ನೀರೆರೆಯ ಬೇಕಾಗುತ್ತದೆ. ಮಕ್ಕಳು ಯಾವುದರಲ್ಲಾದರೂ ಕೊಂಚ ಹಿನ್ನಡೆ ಅನುಭವಿ ಸುತ್ತಿದ್ದರೆ, ಅವರನ್ನು ಹೀಯಾಳಿಸದೆ, ಅತ್ಯಂತ ಪ್ರೀತಿ ಹಾಗು ತಾಳ್ಮೆಯಿಂದ ಮುನ್ನೆಲೆಗೆ ತರಬೇಕಾಗುತ್ತದೆ. ಇಲ್ಲಿ ಹೆತ್ತವರ ಪಾತ್ರ ಅತೀ ಮುಖ್ಯ. ನನ್ನ ತಂದೆ ತಾಯಿ ನನ್ನಲ್ಲಿ ತುಂಬಿದ ಆತ್ಮ ವಿಶ್ವಾಸ, ಅಂದು ಗಣಿತದಲ್ಲಷ್ಟೇ ಅಲ್ಲ, ಹತ್ತನೇ ತರಗತಿಯ ಹಾಗು ಅದರ ನಂತರದ ನನ್ನ ಎಲ್ಲಾ ವಿದ್ಯಾಭ್ಯಾಸದಲ್ಲೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗುವಂತೆ ಮಾಡಿತು. ಅಷ್ಟೇ ಅಲ್ಲ, ಅಂದಿನ ಆತ್ಮವಿಶ್ವಾಸ ನೂರ್ಮಡಿಯಾಗಿ ಇಂದಿಗೂ ನನ್ನ ಧೈರ್ಯ ವನ್ನು ಹೆಚ್ಚಿಸುತ್ತಾ ಬಂದಿದೆ.
ಮಕ್ಕಳು ಸಶಕ್ತರಾಗಲು ಹೆತ್ತವರ ಸಕಾರಾತ್ಮಕ ನಡೆ ಅತಿ ಮುಖ್ಯ. ಹಾಗಿದ್ದಾಗ ಮಾತ್ರ ಸಶಕ್ತ ಸಮಾಜ ಹಾಗು ಆರೋಗ್ಯಕರ ದೇಶ ಕಟ್ಟಲು ಸಾಧ್ಯ.
–ಮಾಲಿನಿ ವಾದಿರಾಜ್
ನಿಮ್ಮ ಅನುಭವದ ಅಭಿವ್ಯಕ್ತಿ ಯ ಅನಾವರಣಗೊಳಿಸಿರುವ ರೀತಿ ಚೆನ್ನಾಗಿದೆ…
Thank you
ಧನ್ಯವಾದಗಳು ಮೇಡಂ
Beautiful article. ಇಂತಹ ಒಂದು ತಾಳ್ಮೆ ಇವತ್ತಿನ ಪೇರೆಂಟ್ಸಲ್ಲಿ ಅಗತ್ಯವಾಗಿ ಬೇಕಾಗಿದೆ.
ಚೆನ್ನಾಗಿದೆ ಲೇಖನ
ನನ್ನ ಅಪ್ಪ ನನಗೆ ಗಣಿತ ಹೇಳಿಕೊಡುತ್ತಿದ್ದದ್ದು ನೆನಪಾಯಿತು.
ಇಂದಿನ ಪೋಷಕರಿಗೆ ಉಪಯುಕ್ತವಾದ ಲೇಖನ
ಪೋಷಕರಲ್ಲಿರುವ ಸಹನೆ, ತಾಳ್ಮೆ, ಪ್ರೋತ್ಸಾಹಿಸುವ ಗುಣಗಳು ಮಕ್ಕಳ ಏಳಿಗೆಯಲ್ಲಿ ವಹಿಸುವ ಪಾತ್ರದ ಹಿರಿಮೆ ಲೇಖನದಲ್ಲಿ ಒಡಮೂಡಿದೆ.
ಒಳ್ಳೆಯ ಸಕಾರಾತ್ಮಕ ಲೇಖನ
ಚೆನ್ನಾಗಿ ದೆ
Very well written. Congrats.