ವಾಟ್ಸಾಪ್ ಕಥೆ 19: ಸಹವಾಸ ದೋಷ
ಒಂದೂರಿನಲ್ಲಿ ಒಬ್ಬ ಆಚಾರವಂತ ಬ್ರಾಹ್ಮಣನಿದ್ದನು. ಒಮ್ಮೆ ಅವನು ದೂರದೂರಿನಿಂದ ನಡೆದುಕೊಂಡು ಹಿಂದಿರುಗುತ್ತಿದ್ದ. ಬಿಸಿಲಿನಿಂದಾಗಿ ತುಂಬ ದಣಿದಿದ್ದ. ಬಾಯಾರಿಕೆಯು ಕಾಡಿತ್ತು. ದಣಿವಾರಿಸಿಕೊಳ್ಳಲು ಒಂದು ಮರದ ನೆರಳಿನಲ್ಲಿ ಕುಳಿತುಕೊಂಡ. ಆ ಬಯಲಿನಲ್ಲಿ ದಟ್ಟವಾದ ನೆರಳು ನೀಡುವ ಮರಗಳ್ಯಾವುವೂ ಇರದಿದ್ದುದರಿಂದ ಒಂದು ಈಚಲು ಮರ ಮಾತ್ರ ಕಾಣಿಸಿ ಅವನು ಅದರಡಿಯಲ್ಲಿ ಕುಳಿತಿದ್ದ.
ಅಷ್ಟರಲ್ಲಿ ಅದೇ ಮಾರ್ಗವಾಗಿ ಒಬ್ಬ ಹಾಲು ಮಾರುವವನು ಬಂದ. ಬ್ರಾಹ್ಮಣನು ಅವನ ಬಳಿ ಒಂದಾಣೆಗೆ ಸ್ವಲ್ಪ ಹಾಲನ್ನು ಕೊಂಡ. ಬಾಯಾರಿಕೆ ತೀರಿಸಿಕೊಳ್ಳಲು ತಣ್ಣಗಿನ ಹಾಲು ಒಳ್ಳೆಯದೆಂದು ಅದನ್ನು ಕುಡಿಯುತ್ತಿದ್ದ. ಆ ಸಮಯದಲ್ಲಿ ಅವನ ಊರಿನವರೇ ಕೆಲವರು ನಡೆದು ಹೋಗುತ್ತಿದ್ದು ಬ್ರಾಹ್ಮಣನು ಬೆಳ್ಳಗಿರುವುದೇನನ್ನೋ ಕುಡಿಯುತ್ತಿದ್ದುದನ್ನು ನೋಡಿದರು. ಊರಿಗೆ ಹೋದ ನಂತರ ಅವರು ತಮ್ಮ ಊರಿನ ಬ್ರಾಹ್ಮಣ ಈಚಲ ಮರದ ಕೆಳಗೆ ಕುಳಿತು ಬೆಳ್ಳಗಿನದನ್ನು ಕುಡಿಯುತ್ತಿದ್ದ ಎಂದು ಸುದ್ಧಿ ಹರಡಿದರು. ಕೇಳಿದವರೆಲ್ಲ ಬ್ರಾಹ್ಮಣನು ಹೆಂಡ ಕುಡಿಯುತ್ತಿದ್ದನೆಂದೇ ಭಾವಿಸಿದರು. ಅಲ್ಲದೆ ಇದನ್ನು ಊರತುಂಬ ಹೇಳಿಕೊಂಡು ಬಂದರು.
ಇದ್ಯಾವುದೂ ತಿಳಿಯದ ಬ್ರಾಹ್ಮಣ ತನ್ನೂರಿಗೆ ಹಿಂದಿರುಗಿದ. ಊರಿನಲ್ಲಿ ಎದುರಿಗೆ ಬಂದವರೆಲ್ಲ ಅವನನ್ನು ಹೆಂಡ ಕುಡಿದ ಬ್ರಾಹ್ಮಣನೆಂದು ಛೇಡಿಸಲು ಪ್ರಾರಂಭಿಸಿದರು. ಅವರಿಗೆ ಸತ್ಯವಾದ ವಿಷಯವನ್ನು ಎಷ್ಟು ಸಾರಿ ಹೇಳಿದರೂ ಯಾರೂ ನಂಬಲಿಲ್ಲ. ಅವನ ವೃತ್ತಿ ಮರ್ಯಾದೆ ಹಾಳಾಗಿ ಅವನನ್ನು ಯಾರೂ ಪೂಜೆ, ಪುನಸ್ಕಾರಗಳಿಗೆ ಕರೆಯುತ್ತಿರಲಿಲ್ಲ. ಅವನಿಗೆ ಉದ್ಯೋಗವೇ ಇಲ್ಲದಂತಾಗಿ ಜೀವನ ನಡೆಸುವುದು ಕಷ್ಟವಾಯಿತು. ಹೀಗಾಗಿ ಪರಿಹಾರ ಕಾಣದೆ ನಿರಾಶೆಯಿಂದ ಆತ್ಮಹತ್ಯೆಗೆ ಶರಣಾದ.
ಹೀಗೆ ನಾವು ಕೆಟ್ಟವರ ಪರಿಸರದಲ್ಲಿ ಇದ್ದಾಗ ನಮ್ಮನ್ನೂ ಕೆಟ್ಟವರೆಂದೇ ಪರಿಗಣಿಸುವ ಸಂದರ್ಭವಿರುತ್ತದೆ. ಅದಕ್ಕೇ ನಾವೆಷ್ಟೇ ಒಳ್ಳೆಯವರಾಗಿದ್ದರೂ ದುಷ್ಟರ ಸಹವಾಸದಿಂದ ದೂರವಿದ್ದರೆ ಒಳ್ಳೆಯದು ಎನ್ನುತ್ತಾರೆ. ಬ್ರಾಹ್ಮಣನು ತುಂಬ ಒಳ್ಳೆಯ ಆಚಾರವಂತನೆ. ಆದರೆ ಆತ ಮಾಡಿದ ತಪ್ಪು ಈಚಲ ಮರದ ಕೆಳಗೆ ಹಾಲನ್ನು ಕುಡಿದದ್ದು. ನೋಡುಗರಿಗೆ ಅದು ಹೆಂಡದಂತೆ ಕಾಣಿಸಿರಬಹುದು. ಒಮ್ಮೆ ಕೆಟ್ಟ ಆಪಾದನೆ ಬಂದರೆ ಅದನ್ನು ಹೋಗಲಾಡಿಸಿಕೊಳ್ಳುವುದು ತುಂಬ ಕಷ್ಟ. ಆದ್ದರಿಂದ ಅಂತಹ ಅಪರಾಧ ನಮ್ಮಿಂದ ಆಗದಂತೆ ಎಚ್ಚರವಹಿಸುವುದೇ ಜಾಣತನ. ಬಹುಶಃ ಇದರಿಂದಲೇ ‘ಈಚಲ ಮರದಕೆಳಗೆ ಮಜ್ಜಿಗೆ ಕುಡಿದಂತೆ’ ಎಂಬ ಗಾದೆ ಮಾತು ಹುಟ್ಟಿರಬಹುದು.
-ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ತುಂಬಾ ಚೆನ್ನಾಗಿದೆ. ನೀತಿಯುಕ್ತ ಕಥೆ
ಧನ್ಯವಾದಗಳು ನಯನಮೇಡಂ
ಎಂದಿನಂತೆ ಎಚ್ಚರಿಕೆಯ ಗಂಟೆ ಬಾರಿಸುವ ಸುಂದರ ನೀತಿ ಕಥೆ.
ಧನ್ಯವಾದಗಳು ಪದ್ಮಾ ಮೇಡಂ
ಚೆನ್ನಾಗಿದೆ