ಅಕ್ಷಯ ತೃತೀಯ

Share Button


ಅಕ್ಷಯ ತೃತೀಯ ಅಥವಾ ಆಖಾತೀಜ್ – ಹಿಂದೂಗಳು ಹಾಗೂ ಜೈನರಿಗೆ ಪವಿತ್ರದಿನ. ಚಾಂದ್ರಮಾನ ಪದ್ಧತಿಯಂತೆ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ತಿಥಿ. ಛತ್ತೀಸ್‌ಗಡದಲ್ಲಿ ಈ ದಿನವನ್ನು ಅಕ್ತಿಯೆಂದೂ ಗುಜರಾಥ್ ಹಾಗೂ ರಾಜಸ್ಥಾನಗಳಲ್ಲಿ ಆಖಾತೀಜ್ ಎಂದೂ ಕರೆಯುತ್ತಾರೆ. ಜೈನ ಹಾಗೂ ಹಿಂದೂ ಕ್ಯಾಲೆಂಡರ್‌ಗಳಲ್ಲಿ, ತಿಂಗಳಲ್ಲಿ ಎಣಿಕೆಯಲ್ಲಿ ಕೆಲವು ದಿನ ಮಾಯವಾಗುತ್ತವೆ, ಕೆಲವು ದಿನ ಆಧಿಕವಾಗುತ್ತವೆ. ಆದರೆ ಅಕ್ಷಯ ತೃತೀಯ ಎಂದೂ ಚಾಂದ್ರಮಾನ ಪದ್ಧತಿಯಲ್ಲಿ ಮಾಯವಾಗುವುದಿಲ್ಲ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ರೋಹಿಣಿ ನಕ್ಷತ್ರ, ಬುಧವಾರ ಬಂದರೆ ಬಲು ಉತ್ತಮ ಎಂದು ಆಸ್ತಿಕರು ಹೇಳುತ್ತಾರೆ. ಕ್ಷಯವಾಗದ, ಕಡಿಮೆಯಾಗದ್ದೇ ಅಕ್ಷಯ. ಅಂದು ಮಾಡುವ ಜಪ, ಯಜ್ಞ, ಪಿತೃತರ್ಪಣಾ, ದಾನ, ಪುಣ್ಯ ಎಂದೆಂದೂ ಕಡಿಮೆಯಾಗುವುದಿಲ್ಲ. ಇದು ಅದೃಷ್ಟ ಹಾಗೂ ಯಶಸ್ಸುಗಳ ಸಂಕೇತ. ಬಹಳ ಜನ ಅಂದು ಚಿನ್ನ ಖರೀದಿ ಮಾಡಿದರೆ, ಸಮೃದ್ಧಿ, ಆಸ್ತಿ ಹೆಚ್ಚುತ್ತದೆ ಎಂದು ಬಹಳ ಜನ ನಂಬುತ್ತಾರೆ. ಅಂದು ಕೊಂಡ ಚಿನ್ನ ಕರಗದೇ ಬೆಳೆದು ಮೌಲ್ಯ ವರ್ಧನೆಯಾಗುತ್ತದೆ ಎಂಬ ನಂಬಿಕೆ. ಈ ದಿನ ದೇವರ ಹೆಸರಲ್ಲಿ ಜನ ಉಪವಾಸ ಮಾಡುತ್ತಾರೆ. ವಾಸುದೇವನನ್ನು ಅಕ್ಕಿ ಧಾನ್ಯದಿಂದ ಪೂಜಿಸುತ್ತಾರೆ. ಸೋಮವಾರ ಅಥವಾ ರೋಹಿಣಿ ನಕ್ಷತ್ರದಂದು ಹೆಚ್ಚು ಮಹತ್ವ. ಉತ್ತರ ಭಾರತದಲ್ಲಿ ಗಂಗಾಸ್ನಾನ ಮಾಡಿದ್ದೇ ಅದೃಷ್ಟ ಎಂದು ಹೇಳುತ್ತಾರೆ. ಭೂಮಿಯ ವಾಸಿಗಳಿಗೆ ಸುವರ್ಣ ಕಾಲ ಅಂದಿನಿಂದ ಬಂತೆಂದುಕೊಳ್ಳುತ್ತಾರೆ.

ಪೌರಾಣಿಕ ಹಿನ್ನೆಲೆ:- ಹಿಂದೂ ಪುರಾಣಗಳ ಪ್ರಕಾರ:- ಸೃಷ್ಟಿಯ ರಕ್ಷಕನಾದ ವಿಷ್ಣುವಿನ ಆರನೇ ಅವತಾರ ಪರಶುರಾಮ ಜಯಂತಿ ಸಹ ಅಂದೇ. ಮಹಾಭಾರತ ಬರೆಯಲು ವೇದವ್ಯಾಸ ಹಾಗೂ ಗಣೇಶ ಆರಂಭಿಸಿದ ದಿನವಿದು. ಈ ದಿನ ತ್ರೇತಾ ಯುಗ ಆರಂಭವಾಯಿತು. ಹಿಂದೂ ತ್ರಿಮೂರ್ತಿಗಳಲ್ಲಿ ರಕ್ಷಕನಾಗಿರುವ ವಿಷ್ಣು ಆಳುವ ದಿನ. ಹಿಂದೂ ಪುರಾಣಗಳ ಪ್ರಕಾರ ಯುಗ ಅಕ್ಷಯ ತೃತೀಯಾ ದಿನ ಆರಂಭವಾಯಿತು. ವಿಷ್ಣುವಿನ ಆರನೇ ಅವತಾರ ಪರಶುರಾಮ ಜಯಂತಿ ಅಂದೇ ಅಥವಾ ಒಂದು ದಿನ ಮೊದಲು ಬರುತ್ತದೆ. ನಮ್ಮ ದೇಶದ ಅತ್ಯಂತ ಪವಿತ್ರ ಹಾಗೂ ಪೂಜ್ಯ ನದಿ ಗಂಗಾ ಸ್ವರ್ಗದಿಂದ ಭೂಮಿಗೆ ಬಂದಿಳಿದ ದಿನ. ಪರಶುರಾಮನಾಗಿ ವಿಷ್ಣು ಸಮುದ್ರದಿಂದ ಭೂಮಿಯನ್ನು ಮತ್ತೆ ಪಡೆದ ಬಗ್ಗೆ, ಪುರಾಣಗಳು ವರ್ಣಿಸುತ್ತವೆ. ಇದೇ ದಿನ ಶ್ರೀಕೃಷ್ಣನ ಅರಮನೆಗೆ ಸುಧಾಮ ಬಂದ ದಿನವಂತೆ. ಸಾಂದೀಪಿನಿ ಋಷಿಯ ಆಶ್ರಮದಲ್ಲಿ ಬಾಲ್ಯದಲ್ಲಿ ಒಟ್ಟಾಗಿ ಕಲಿತ ಕೃಷ್ಣ ಸುಧಾಮರು, ಅನೇಕ ವರ್ಷ ಭೇಟಿಯಾಗಿರಲಿಲ್ಲ. ಹೆಂಡತಿ ಮಕ್ಕಳು, ಬಡತನ ಸಂಸಾರದ ಜಂಜಡದಿಂದ ಸೋತು ಬಳಲಿದ್ದ ಸುಧಾಮ (ಕುಚೇಲ). ಆತನ ಹೆಂಡತಿ ಆಗಾಗ ಗಂಡನಿಗೆ ಬೇಡಿಕೊಳ್ಳುತ್ತಿದ್ದಳು. ನಿಮ್ಮ ಬಾಲ್ಯಮಿತ್ರ ಶ್ರೀಕೃಷ್ಣ. ಆತನ ಬಳಿ ಹೋಗಿ ಬೇಡಿಕೊಂಡು, ನಮ್ಮ ಸಂಸಾರ ಸುಗಮವಾಗಿ ನಡೆಯಲು ಅನುವು ಮಾಡಿಕೊಡಿ. ಅದರೆ ಸುಧಾಮ, ಅನೇಕ ವರ್ಷಗಳ ಅಂತರದ ನಂತರ, ತನ್ನ ಗೆಳೆಯನನ್ನು ನೋಡ ಹೋಗಬೇಕಾದರೆ, ಆತನಿಗೆ ಕೊಡಲು ತನ್ನ ಬಳಿ ಏನು ಇಲ್ಲವಲ್ಲ ಎಂದು ಹೆಂಡತಿ ಬೇಡಿಕೆಯನ್ನು ನಿರಾಕರಿಸುತ್ತಿದ್ದ. ಒಂದು ದಿನ ಸುಧಾಮನ ಹೆಂಡತಿ, ಕಷ್ಟಪಟ್ಟು ಒಂದು ಹಿಡಿ ಅವಲಕ್ಕಿ ಕೊಟ್ಟಳು. ಅದನ್ನು ಜೀರ್ಣವಾದ ಬಟ್ಟೆಯಲ್ಲಿ ಗಂಟು ಹಾಕಿಕೊಂಡು, ಹರಕು ಬಟ್ಟೆಯ, ಮುರುಕು ಗಡ್ಡದ, ಈ ಬ್ರಾಹ್ಮಣ ಶ್ರೀಕೃಷ್ಣನ ಅರಮನೆಗೆ ದ್ವಾರಕೆಗೆ ಬಂದ. ಈತನ ವೇಷ ನೋಡಿ, ದ್ವಾರಪಾಲಕರು ಒಳಗೆ ಬಿಡಲಿಲ್ಲ. ಶ್ರೀಕೃಷ್ಣ ಇದನ್ನು ಅರಿತು, ಆತನನ್ನು ತಾನೇ ಹೊರ ಬಂದು ಸ್ವಾಗತಿಸಿ, ಒಳಗೆ ಕರೆದೊಯ್ದು ಉಯ್ಯಾಲೆ ಮೇಲೆ ಕೂರಿಸಿ, ಅತನ ಪಾದಗಳನ್ನು ನೀರಿನಿಂದ ತೊಳೆದು, ಒರೆಸಿ, ಅತಿಥಿಗೆ ಉಪಚಾರ ಹಾಗೂ ಗೌರವ ನೀಡಿದ. ಲೀಲಾ ವಿನೋದಪ್ರಿಯ ಕೃಷ್ಣ ಗೆಳೆಯಾ ನನಗಾಗಿ ಏನು ತಂದಿದ್ದಿ? ಅತ್ತಿಗೆ ಏನು ಕೊಟ್ಟಿದ್ದಾಳೆ ಬೇಗ ತಾ ಎಂದು ಛೇಡಿಸಿದ. ಸಂಕೋಚದಿಂದ ಮುದುರಿ ಕುಳಿತ ಸುಧಾಮನ ಸೊಂಟಕ್ಕೆ ಸಿಕ್ಕಿಸಿದ್ದ ಗಂಟನ್ನು ಕೃಷ್ಣ ಕಸಿದುಕೊಂಡ. ಆಹಾ ನನಗೆ ಬಲು ಪ್ರಿಯವಾದ ಅವಲಕ್ಕಿ ಎಂದು ಮುಕ್ಕಲಾರಂಭಿಸಿದ. ರುಕ್ಮಿಣಿ ನನಗಿಲ್ಲವೇ ಸ್ವಾಮಿ ನೀವೇ ಎಲ್ಲ ತಿನ್ನಬೇಡಿ ಎನ್ನುತ್ತ ಆಕೆಯೂ ಕಿತ್ತು ತಿಂದಳು. ತಂದ ಹಿಡಿ ಅವಲಕ್ಕಿ, ಕಿತ್ತುಕೊಂಡು ತಿಂದಷ್ಟೂ ಹೆಚ್ಚಿತು. ಸಂಕೋಚದಿಂದ ಸುಧಾಮ ಏನೂ ಹೇಳಲಿಲ್ಲ, ಬೇಡಲಿಲ್ಲ. ೩ ದಿನಗಳ ವಿಶೇಷ ಉಪಚಾರದ ನಂತರ, ಏನೂ ಹೇಳದೇ ಕೃಷ್ಣ ಸುಧಾಮನನ್ನು ಬೀಳ್ಕೊಂಡ. ಅಯ್ಯೋ ನನ್ನ ಹೆಂಡತಿ ಹೇಳಿಕೊಟ್ಟಂತೆ, ನಾನು ಕೇಳಲು ಬಾಯಿಯೇ ಬರಲಿಲ್ಲ. ಮಿತ್ರನೂ ಏನೂ ಕೊಡದೇ, ಬರಿಗೈಯಿಂದ ಕಳಿಸಿದ ಎಂದುಕೊಳ್ಳುತ್ತಾ, ತನ್ನ ಊರಿನ ಗುಡಿಸಲಿನತ್ತ ಹೊರಟ. ಬಂದು ನೋಡುತ್ತಾನೆ-ಗುಡಿಸಲಿಲ್ಲ. ಅಲ್ಲಿ ದಿವ್ಯ ಅರಮನೆ. ಹೊರಬಂದ ಹೆಂಡತಿ ಮಕ್ಕಳು, ಪೀತಾಂಬರ ಧರಿಸಿ, ಆಭರಣಗಳಿಂದ ಪರಿಶೋಭಿತರಾಗಿದ್ದಾರೆ. ತನ್ನ ಕಣ್ಣುಗಳನ್ನು ತಾನೇ ನಂಬಲಾಗದ ಸುಧಾಮ (ಕುಚೇಲ) ವೈಭವದ ಅರಮನೆಯ ಒಡೆಯನಾಗಿದ್ದ. ಪ್ರೀತಿಯಿಂದ, ಸಂಕೋಚದಿಂದ, ಭಕ್ತಿ ಹಾಗೂ ಮುಗ್ಧತೆಗಳಿಂದ, ಸುಧಾಮ ಕೊಟ್ಟ ಹಿಡಿ ಅವಲಕ್ಕಿ ಕೃಷ್ಣ ರುಕ್ಮಿಣಿಯರ ಮೆಚ್ಚಿನ ತಿನಿಸಾಯ್ತು. ಇದರಿಂದ ಸುಧಾಮನ ಸಂಪತ್ತು ಅಕ್ಷಯವಾಯಿತು. ಈ ಹಿನ್ನೆಲೆಯಲ್ಲೇ ಈ ದಿನ ಧಾನ ಮಾಡುವ, ಪೂಜೆ ಮಾಡುವ, ತನ್ಮೂಲಕ ಭಕ್ತಿಯಿಂದ ತಮ್ಮ ವಸ್ತು, ಸಂಪತ್ತು, ಚಿನ್ನ ಅಕ್ಷಯ ಮಾಡಿಕೊಳ್ಳುವ ನಂಬಿಕೆ ಬಂತು. ನಾನು ನನ್ನ 11 ನೇ ವಯಸ್ಸಿನಲ್ಲಿ, ಧಾರವಾಡ ಆಕಾಶವಾಣಿಯಿಂದ ಪ್ರಸಾರವಾದ ಭಕ್ತಕುಚೇಲ ನಾಟಕದಲ್ಲಿ, ಬಾಲಕೃಷ್ಣನ ಪಾತ್ರವಹಿಸಿದ್ದು ಇನ್ನೂ ನೆನಪಿದೆ. ಹಾಗೆಯೇ 7 ವರ್ಷಗಳ ಕೆಳಗೆ, ಗುಜರಾತ್ ಪ್ರವಾಸ ಹೋದಾಗ, ಪೋರಬಂದರದಲ್ಲಿ ಸುಧಾಮನ ದೇವಾಲಯ ಕಂಡು, ಸಂತಸಪಟ್ಟಿದ್ದೆವು.

ಮಹಾಭಾರತದಲ್ಲಿ ದ್ರೌಪದಿ ವಸ್ತ್ರಾಭರಣ ಸಂದರ್ಭದಲ್ಲಿ, ಜೂಜಿನಲ್ಲಿ ಎಲ್ಲ ಸೋತ ಧರ್ಮರಾಜ ಕೊನೆಗೆ ಹೆಂಡತಿ ದ್ರೌಪದಿಯನ್ನು ಜೂಜಿನಲ್ಲಿ ಪಣವಾಗಿಟ್ಟು ಸೋತ. ದುರ್ಯೋಧನನ ಪ್ರೇರಣೆಯಂತೆ, ದುಶ್ಯಾಸನ ದ್ರೌಪದಿಯನ್ನು, ಅಂತಃಪುರದಿಂದ ರಾಜನ ಓಲಗಕ್ಕೆ, ಮುಡಿಹಿಡಿದು ಎಳೆತಂದು, ಆಕೆಯ ಸೀರೆ ಸೆಳೆಯುತ್ತಾನೆ. ಭಕ್ತಿಯಿಂದ ಬೇಡಿ ಕರೆದಾಗ, ತಂಗಿ ದ್ರೌಪದಿಗೆ ಅಕ್ಷಯಾಂಬರ ನೀಡಿ, ಕೃಷ್ಣ ಉತ್ತಮ ಅಣ್ಣನಾಗುತ್ತಾನೆ. ಭಕ್ತಿಯಿಂದ ಸೀರೆ ಅಕ್ಷಯವಾಯಿತು ಇಲ್ಲಿ.

ಮಹಾಭಾರತದ ಅರಣ್ಯಪರ್ವದಲ್ಲಿ ಬರುವ ಪ್ರಸಂಗ. ಅರಣ್ಯವಾಸ ಮಾಡುತ್ತಿದ್ದ ಪಾಂಡವರಿಗೆ ಸೂರ್ಯ ಅಕ್ಷಯಪಾತ್ರೆ ಕೊಟ್ಟಿದ್ದ. ದ್ರೌಪದಿ ಊಟ ಮಾಡುವವರೆಗೆ, ಅಕ್ಷಯ ಆಹಾರ ಕೊಡುತ್ತಿದ್ದ ಪಾತ್ರೆ, ಆಕೆ ಊಟ ಮಾಡಿದ ಪಾತ್ರೆ ತೊಳೆದು ತಿರುವಿ ಹಾಕಿದರೆ, ನಂತರ ಏನೂ ಕೊಡುತ್ತಿರಲಿಲ್ಲ. ದುರ್ಯೋಧನ ಪ್ರೇರೇಪಿಸಿ ಕಳಿಸಿದ ದೂರ್ವಾಸಮುನಿ ಹಾಗೂ ಆತನ ಸಾವಿರಾರು ಶಿಷ್ಯರು ಪಾಂಡವರ ಆಶ್ರಮ ತಲುಪಿದಾಗ, ದ್ರೌಪದಿಯ ಊಟ ಮುಗಿದಿತ್ತು. ಆದರೂ ಆಗ ಬಂದ ಸಾವಿರಾರು ಅತಿಥಿಗಳಿಗೆ ಭೋಜನ ಕೊಡಬೇಕಾಗಿತ್ತು. ಅವರು ನದಿಸ್ನಾನಕ್ಕೆ ಹೋದಾಗ, ದ್ರೌಪದಿ ಕೃಷ್ಣನನ್ನು ನೆನೆದಳು. ಹಸಿವು ಎಂದು ಬಂದ ಕೃಷ್ಣ, ತಂಗಿಯನ್ನು ಛೇಡಿಸಿ, ಆ ಅಕ್ಷಯ ಪಾತ್ರೆ ತರಿಸಿ ನೋಡಿದಾಗ, ಒಂದೇ ಒಂದು ಅನ್ನದ ಅಗುಳು ಪಾತ್ರೆಯ ತಳದಲ್ಲಿ ಅಂಟಿಕೊಂಡಿತ್ತು. ಅದನ್ನು ತಿಂದ ಕೃಷ್ಣನಿಗೆ ಹೊಟ್ಟೆ ತುಂಬಿ, ತೇಗು ಬಂದಾಗ, ನದಿಸ್ನಾನದಲ್ಲಿದ್ದ ದೂರ್ವಾಸ ಹಾಗೂ ಸಾವಿರ ಶಿಷ್ಯರಿಗೂ ಹೊಟ್ಟೆ ಬಿರಿದು ಉಂಡ ಅನುಭವವಾಯ್ತು. ದ್ರೌಪದಿಯ ಭಕ್ತಿಯಿಂದ ಕೃಷ್ಣ, ಅಕ್ಷಯ ಪಾತ್ರೆಯ ಒಂದಗುಳನ್ನು ಅಕ್ಷಯ ಮಾಡಿದ.

ಈ ದಿನಾಚರಣೆಗೆ ಜೈನ ಧರ್ಮದ ಹಿನ್ನೆಲೆ:- 24 ತೀರ್ಥಂಕರರಲ್ಲಿ ಮೊದಲನೆಯವನಾದ ದೇವ ಆದಿನಾಥ ತನ್ನ ದೊಡ್ಡ ರಾಜ್ಯವನ್ನು ಗಂಡುಮಕ್ಕಳಿಗೆ ಹಂಚಿದ ನಂತರ ಪ್ರಾಪಂಚಿಕ ಸುಖಗಳನ್ನು ತ್ಯಜಸಿದ. ಆತ 6 ತಿಂಗಳು ಅಹಾರ ನೀರು ತೆಗೆದುಕೊಳ್ಳದೇ, ಮುಂದಿನ 6 ತಿಂಗಳು, ತಾನು ಕೇಳದೇ ಬಂದ ಆಹಾರವನ್ನು ಸ್ವೀಕರಿಸಿದ. 1 ವರ್ಷದ ನಂತರ ಅಕ್ಷಯ ತೃತೀಯ ದಿನ, ರಾಜ ಶ್ರೇಯಾಂಸಕುಮಾರ, ಈತನಿಗೆ ಅರ್ಪಿಸಿದ ಕಬ್ಬಿನ ಹಾಲು ಕುಡಿದು ರಿಷಭದೇವ ತನ್ನ ವರ್ಷದ ಉಪವಾಸ ಮುಗಿಸಿದ.
ಖಗೋಳಶಾಸ್ತ್ರ ಹಾಗೂ ಜ್ಯೋತಿಷ್ಯದ ಪ್ರಕಾರ:- ಇಡೀ ವರ್ಷದಲ್ಲೇ ಇದೊಂದೇ ದಿನ, ಗ್ರಹಗಳ ಒಡೆಯ ಸೂರ್ಯ ಹಾಗೂ ಸೃಜನಶೀಲತೆಯ ರಾಜ ಚಂದ್ರ, ಇಬ್ಬರೂ ಮನೋಲ್ಲಾಸದಿಂದ, ಗರಿಷ್ಠ ಉಜ್ವಲ ಶಾಂತಿ ಹೊಂದಿರುತ್ತಾರೆ. ವೈಶಾಖ ಮಾಸದಲ್ಲಿ ಸೂರ್ಯ ಮೇಷ ರಾಶಿಯಲ್ಲಿದ್ದು ಲಾಭಗಳನ್ನು ಕೊಟ್ಟರೆ, ಚಂದ್ರನೂ ಸಮಾನ ಶಕ್ತಿ ಹೊಂದಿರುತ್ತಾನೆ. ಪರಶುರಾಮ ಕ್ಷೇತ್ರವೆಂದು ಕರೆಯಲ್ಪಡುವ ಪಶ್ಚಿಮ ಕರಾವಳಿ, ಗೋವಾ ಹಾಗೂ ಕೊಂಕಣ ಪ್ರದೇಶಗಳಲ್ಲಿ ಸೂರ್ಯ ಚಂದ್ರರ ಹೊಳಪು ಉತ್ತಮ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ:- ವೈದಿಕರು ಜ್ಯೋತಿಷ್ಯ ತಜ್ಞರ ಪ್ರಕಾರ ಅಂದು ಶುಭದಿನ. ಯಾವುದೇ ಕೆಟ್ಟ ಪರಿಣಾಮಗಳಿಲ್ಲ. ಅಂದು ಮೃತ್ತಿಕೆಯ ಪೂಜೆ. ಹೊಸ ಕಾರ್ಯಗಳಾದ ವ್ಯವಹಾರದ ಆರಂಭ, ಕಟ್ಟಡ ನಿರ್ಮಾಣ, ಮುಂತಾದವುಗಳನ್ನು ಆರಂಭಿಸಲು ಜನ ಈ ದಿನ ಆಯ್ದುಕೊಳ್ಳುತ್ತಾರೆ. ಮುಹೂರ್ತಗಳಲ್ಲಿ ೩ಳಿ ತಿಥಿಗಳು, ಸಾಡೇತೀನ್ ಮುಹೂರ್ತಗಳು, ಪವಿತ್ರ ಹಾಗೂ ಶುಭದಾಯಕ. ಅವು ಚೈತ್ರಮಾಸದ ಶುಕ್ಲಪಕ್ಷದ ಮೊದಲ ದಿನ, ಹೊಸ ವರ್ಷ, ಯುಗಾದಿ. ಅಶ್ವಿನ ಮಾಸದ ಶುಕ್ಲಪಕ್ಷದ ೧೦ನೇ ದಿನ ವಿಜಯದಶಮಿ. ವೈಶಾಖ ಮಾಸದ ಶುಕ್ಲಪಕ್ಷದ ೩ನೇ ದಿನ ಅಕ್ಷಯ ತೃತೀಯ ಹಾಗೂ ಪರಶು ಜಯಂತಿ. ಇವು ೩ ಪೂರ್ಣ ತಿಥಿಗಳು. ಕಾರ್ತಿಕ ಮಾಸದ ಶುಕ್ಲಪಕ್ಷದ ಮೊದಲ ದಿನ ಳಿ ಶುಭತಿಥಿ. ಅಕ್ಷಯ ತೃತೀಯ ದಿನದಂದು ಸೂರ್ಯ ಚಂದ್ರರಿಬ್ಬರೂ ಉನ್ನತ ಸ್ಥಾನಗಳಲ್ಲಿದ್ದು, ಸಮಾನವಾಗಿ ಹೊಳೆಯುತ್ತಾರೆ. ಇದನ್ನು ನವನ್ನಪವಣ ಎನ್ನುತ್ತಾರೆ. ಡಾ. ಲಿಲಿತ್ ಕಿಶೋರ್ ಹೇಳುವಂತೆ ಈ ಹಬ್ಬದ ಆಚರಣೆಯಿಂದ, ಒಳ್ಳೆಯ ಕಾರ್ಯದ, ಕ್ಷಯವಾಗದ, ಮುಗಿಯದ ಲಾಭಗಳು ದೊರೆತರೆ, ಹೊಸ ಕಾರ್ಯ ಅಥವಾ ಚಟುವಟಿಕೆಗೆ ಶುಭಾರಂಭ. ಹೊಸ ಮನೆಗೆ ಶಾಶ್ವತತೆ, ಸಮೃದ್ಧಿ, ಆಧ್ಯಾತ್ಮಿಕತೆ, ಪಾವಿತ್ರತೆ ಬರಲು, ಗೃಹಪ್ರವೇಶ ಪೂಜೆ, ವಾಸ್ತು ಶಾಂತಿಪೂಜೆ ಹಾಗೂ ಹವನ ಮಾಡುತ್ತಾರೆ. ವ್ಯವಹಾರ ಆರಂಭಿಸಲು ಪ್ರಥಮ ಪೂಜೆ ಸಲ್ಲುವ ಗಣಪತಿಗೆ ಗಣೇಶ ಪೂಜೆ, ಅದೃಷ್ಟ ಬರಲು ಸಂಪತ್ತು ಹಾಗೂ ಸಮೃದ್ಧಿಗಳ ದೈವ ಲಕ್ಷ್ಮೀಗೆ ಈ ದಿನ ವಿಶೇಷ ಪೂಜೆ. ವಿಷ್ಣುವನ್ನು ಆರಾಧಿಸಲು ಶ್ರೀಸತ್ಯನಾರಾಯಣ ಪೂಜೆ, ವಿಷ್ಣು ಸಹಸ್ರನಾಮ ಪಠಣೆ. ಪರಶುರಾಮನಿಗೆ ಪೂಜೆ. ಧಾನ್ಯಗಳನ್ನು ಬಿತ್ತಿದಾಗ ನಮಗೆ ಬೆಳೆಯ ಮೂಲಕ ಆರೋಗ್ಯ ಹಾಗೂ ಸಂಪತ್ತು ಕೊಡುವ ಭೂಮಿಗೂ ಈ ದಿನ ಪೂಜೆ. ಹಾಲು ಕೊಟ್ಟು ಕಾಪಾಡುವ ಕಾಮಧೇನು ಗೋಮಾತೆ ಎಂದು ಗೋವಿಗೂ ಪೂಜೆ. ಮನೆಯಲ್ಲಿ ಭಕ್ತಿಗೀತೆಗಳನ್ನು ಹಾಡುತ್ತ ದೇವರ ಸ್ತುತಿ ಮಾಡುತ್ತ ಮಧುಸೂಧನ ಧಾರ್ಮಿಕ ಕ್ರಿಯೆ ಮಾಡುತ್ತಾರೆ. ತುಳಸೀದಳ, ವಿಳ್ಳೇದೆಲೆ, ಬಾಳೆಹಣ್ಣು, ಅಗರಬತ್ತಿ, ಸಮರ್ಪಿಸುತ್ತಾರೆ.

ಪೂಜೆಗಳು:- ಈ ದಿನ ರಾಜ ಅಥವಾ ಪ್ರಜೆಗಳ ಕಾಳಜಿಯ ಜವಾಬ್ದಾರಿ ಹೊತ್ತವರು, ಕೃತಜ್ಞತೆ ಹಾಗೂ ಭಕ್ತಿಯಿಂದ ಪೂಜೆ ಮಾಡಬೇಕು. ಜನರಿಗೆ ಸಂತಸ ಸಮೃದ್ಧಿಗಳನ್ನು ಕೊಡಲು ಶ್ರೀವಿಷ್ಣುವಿನ ಜೊತೆ, ವೈಭವ ಲಕ್ಷ್ಮಿಯ ಪೂಜೆ ಮಾಡಬೇಕು. ಶ್ರೀವಿಷ್ಣುವಿನ ದೈವಿಕ ಶಕ್ತಿ ಲಕ್ಷ್ಮೀ. ವಿಷ್ಣುವನ್ನು ಆಹ್ವಾನಿಸಿ ಪೂಜಿಸದಿದ್ದರೆ, ಆತನ ದೈವಿಕ ಶಕ್ತಿ ಇಲ್ಲಿಗೆ ಬಂದು ನಮ್ಮನ್ನು ಹೇಗೆ ಹರಸೀತು? ಈ ದಿನ ವರ್ಷವಿಡೀ ದಿನ ಬಿಟ್ಟು ದಿನ ಮಾಡುವ ವರ್ಷೀ ತಪವನ್ನು ಮುಗಿಸಿ ಪಾರಣೆ ಮಾಡುವ ದಿನ.
ದೇವಾಲಯಗಳ ದರ್ಶನ:- ಶಾಂತಿ ಹಾಗೂ ಆಶೀರ್ವಾದಕ್ಕಾಗಿ, ಆಸ್ತಿಕರು ಪವಿತ್ರ ಸ್ಥಳಗಳಾದ ದೇವಾಲಯಗಳನ್ನು ದರ್ಶಿಸಿ, ವಿಶೇಷ ಪೂಜೆಗಳಲ್ಲಿ ಭಾಗವಹಿಸುತ್ತಾರೆ. ತಮಿಳಿನಲ್ಲಿ ಹೇಳುವಂತೆ ಇಯಲ್ ಇಸೈ ನಾಟಗಮ್ ಅಂದರೆ, ನಮ್ಮ ನಂಬಿಕೆಗಳನ್ನು ತೋರಲು, ಭಕ್ತಿ ಅರ್ಪಿಸಲು ಗಾಯನ, ಸಾಂಪ್ರದಾಯಿಕ ಹಾಡುಗಳು, ನೃತ್ಯ ಹಾಗೂ ಅಭಿನಯಗಳ ಮೂಲಕ ದೇವತಾರ್ಚನೆ ಮಾಡಬೇಕು. ನಮ್ಮ ಮನದಾಳದಿಂದ ಭಕ್ತಿ ಹೊರ ಹೊಮ್ಮಬೇಕು. ದುಡ್ಡು ಕೊಟ್ಟು ಆಶೀರ್ವಾದ ಬಯಸಬೇಡಿ. ಒಳ್ಳೆಯ ಕೆಲಸ ಮಾಡಿ. ಒಳ್ಳೆಯವರಾಗಿ ಒಳ್ಳೆಯದನ್ನು ಪಡೆಯಬೇಕು. ಈ ದಿನ ಗಜಧನಾಕರ್ಷಣ ಪೂಜೆ ಎಂದು ಆನೆಯನ್ನೂ, ಮಂಗಳ ಗ್ರಹದ ಸಂಕೇತವಾದ ಕುದುರೆಯನ್ನೂ ಸಹ ಪೂಜೆ ಮಾಡುತ್ತಾರೆ. ಲಕ್ಷ್ಮೀಪೂಜೆಯೊಂದಿಗೆ ಧನಾಧಿಪತಿ ಕುಬೇರನನ್ನೂ ಅರ್ಪಿಸುತ್ತಾರೆ. ಹಿರಿಯರಿಂದ ಸಹ ಆಶೀರ್ವಾದ ಪಡೆಯಬೇಕು. ದೇವರಿಗೆ ಅರ್ಪಿಸುವುದನ್ನು, ನಮ್ಮ ಹಿರಿಯರಿಗೆ, ನೆರೆ ಹೊರೆಯವರಿಗೆ ಅರ್ಪಿಸಿ, ಅವರಿಂದ ಆಶೀರ್ವಾದ ಪಡೆಯಬೇಕು. ನೀವು ವಿದ್ಯಾರ್ಥಿಗಳಾಗಿದ್ದರೆ ನಿಮ್ಮ ಪಾಲಕರು ಹಾಗೂ ಶಿಕ್ಷಕರಿಂದ ಆಶೀರ್ವಾದ ಪಡೆಯಿರಿ.
ದಾನಗಳು:- ಈ ದಿನ ನೀವು ಅನೇಕ ದಾನಗಳನ್ನು ಶ್ರದ್ಧೆ ಭಕ್ತಿಗಳಿಂದ ಮಾಡಬೇಕು. ಆವಶ್ಯಕತೆ ಇದ್ದವರಿಗೆ, ಅನಾಥಾಲಯ, ವೃದ್ಧಾಶ್ರಮದಲ್ಲಿರುವವರಿಗೂ, ಹೊಸ ಹಾಗೂ ನಿಮ್ಮ ಹಳೆಯ ಆದರೆ ಚೆನ್ನಾಗಿರುವ ಬಟ್ಟೆಗಳನ್ನು, ವಸ್ತ್ರದಾನ ಮಾಡಿ. ಹಾಗೆಯೇ ನೀರಡಿಕೆ ಇದ್ದವರಿಗೆ ಜಲದಾನ, ಬೇಡಿಕೆ ಇದ್ದವರಿಗೆ ಪಾದರಕ್ಷೆ, ಅರ್ಹರಿಗೆ ಛತ್ರಿ, ಬೆಣ್ಣೆ, ಕುಂಕುಮ, ಚಂದನ ದಾನ ಕೊಡಬಹುದು. ಕುಂಭದಾನದಲ್ಲಿ ಅಲಂಕರಿಸಿದ ಕಂಚು ಅಥವಾ ಬೆಳ್ಳಿ ಪಾತ್ರೆಯಲ್ಲಿ ಧಾನ್ಯಗಳು, ನೀರು ಹಾಕಿ, ತುಳಸಿ‌ಎಲೆ, ಅಡಿಕೆ, ಕೇಸರಿಗಳೊಂದಿಗೆ ಕೊಟ್ಟರೆ, ಒಳ್ಳೆಯ ಜೀವನ ಸಂಗಾತಿ ಅಥವಾ ಮಗು ಪಡೆಯುವಿರಿ ಎಂಬ ನಂಬಿಕೆಯಿದೆ.

ಎನ್.ವ್ಹಿ.ರಮೇಶ್

5 Responses

  1. ಅಕ್ಷಯ ತೃತೀಯ ಉತ್ತಮ ಮಾಹಿತಿಯನ್ನೊಳಗೊಂಡ ಲೇಖನ ಕೊಟ್ಟಿದಕ್ಕೆ…ಧನ್ಯವಾದಗಳು ರಮೇಶ್ ಸರ್..

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  3. ಶಂಕರಿ ಶರ್ಮ says:

    ಅಕ್ಷಯ ತೃತೀಯದ ಕುರಿತು ಬಹಳಷ್ಟು ಮಾಹಿತಿಗಳು ಹಾಗೂ ಪೌರಾಣಿಕ ಹಿನ್ನೆಲೆ ಜೊತೆಗೆ ಚಂದದ ಕಥೆಗಳನ್ನೊಳಗೊಂಡ ಸೊಗಸಾದ ಲೇಖನ.

  4. Dr Krishnaprabha M says:

    ಒಳ್ಳೆಯ ಮಾಹಿತಿಯುಕ್ತ ಬರಹ

  5. Padma Anand says:

    ಅಕ್ಷಯ ತದಿಗೆಯ ಕುರಿತಾದ ಉತ್ತಮ ಮಾಹಿತಿದಾಯಕ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: