ನೀರು
‘ಬಸ್ಸು ಲೇಟಾದರೆ ಇಲ್ಲೇ ಉಳಿಯಬೇಕಾದೀತು!ʼ ಎಂದು ಅತ್ತೆ ಗುಡುಗಿದಾಗ ನನಗೆ ಹೆದರಿಕೆ ಆಯಿತು. ನಿಲ್ದಾಣಕ್ಕೆ ಧಾವಿಸಿ ಹೊರಡಬೇಕು ಎಂದಾಗ ಎದುರಿನಲ್ಲೇ ಕಾರೊಂದು ಬಂದು ನಿಂತಿತು. ಕಿಟಕಿಯಿಂದ ಚಿರಪರಿಚಿತ ಮುಖವೊಂದು ಇಣುಕಿ, “ಬಾರೋ ಲೋ! ಬಸ್ಟಾಂಡಿಗೇ ತಾನೆ?” ಎಂದು ಕೇಳಲು, ನಾನು ತಲೆಯಲ್ಲಾಡಿಸಿ ಕಾರು ಹತ್ತಿದೆ. ಹಿಂದೆಯೇ ಅತ್ತೆ ಗೇಟು ಬಡಿದು ಮನೆಯೊಳಕ್ಕೆ ಹೋದದ್ದು ಕೇಳಿಸಿತು.
ಕಾರಲ್ಲಿ ನನ್ನನ್ನು ಹತ್ತಿಸಿಕೊಂಡವನು ಚಿಂತಾಮಣಿ. ಬಾಯಿಬಡುಕರಲ್ಲಿಯೇ ಅತ್ಯಂತ ಉನ್ನತ ಮಟ್ಟದಲ್ಲಿರುವ, ಪ್ರಥಮೋನ್ನತ ಶ್ರೇಣಿಯವನು. ಅತ್ತೆ ಮನೆಯ ಬೀದಿಯಲ್ಲಿ ತೀರಾ ಕುಖ್ಯಾತ. ಸಿಕ್ಕಿದರೆ ಮೊಳೆ ಹೊಡೆಯದೆ ಬಿಡದವನು ಎಂಬುದು ಅವನ ಪರಿಚಯವಾಗಿಬಿಟ್ಟಿತು. ಅವನ ಕಾರಲ್ಲಿ ಹತ್ತಿದ ನಾನು ಮನದ ಕಿವಿಗಳನ್ನು ಮುಚ್ಚಿಕೊಂಡುಬಿಟ್ಟೆ. ಹೊರಗಿವಿಯ ಮೇಲೆ ಮಾತುಗಳು ಮಳೆ ಆಗುತ್ತಿತ್ತಾದರೂ ನಾನು ಹೂಂಗುಡುತ್ತಾ ಸುಮ್ಮನಿದ್ದೆ.
ಕಾರನ್ನು ಚಾಲಕನು ನಿಲ್ದಾಣದಲ್ಲಿ ನಿಲ್ಲಿಸಿದರೂ ಚಿಂತಾಮಣಿಯ ಮಾತು ನಿಲ್ಲಲಿಲ್ಲ. ಎಷ್ಟೇ ಆಗಲಿ, ಈ ಚಿಂತಾಮಣಿಯ ಸುತ್ತಲೂ ನೂರಾರು ಕಾಲ್ಪನಿಕ ಕಥೆಗಳನ್ನು ಜನರು ಹೆಣೆದಿದ್ದರೋ, ಅವನೇ ಹೇಳಿದ್ದನೋ, ದೇವರಿಗೇ ಗೊತ್ತು. ಆದರೂ ಬಹಳಷ್ಟು ಬಿಳೀ ಕೂದಲನ್ನು ಹೊಂದಿದ್ದ ಇವನಿಗೆ ಯಥೇಚ್ಛ ಅನುಭವವಂತೂ ಆಗಿದ್ದಿರಬಹುದು. ಆದರೂ, ಸ್ವಾಮಿ, ಈ ಮಾತುಗಳನ್ನು ತಡೆದುಕೊಳ್ಳುವವರು ಯಾರು?
ದುರದೃಷ್ಟವಶಾತ್, ಡಿಲಕ್ಸ್ ಕ್ಲಾಸ್ ಬಸ್ಸಲ್ಲಿ ಹಾಯಾಗಿ ಹೋಗೋಣವೆಂದುಕೊಂಡರೂ, ಚಿಂತಾಮಣಿ ಬಂದು ನನ್ನ ಪಕ್ಕದಲ್ಲೇ ಕುಳಿತುಕೊಂಡ. ಇಡೀ ಬಸ್ಸು ಶಾಂತವಾಗಿದ್ದರೂ, ತಾನು ಮಾತ್ರ ಹಿಂದೆ ಮುಂದೆ ಕುಳಿತಿದ್ದ ಪ್ರಯಾಣಿಕರನ್ನು ಮಾತನಾಡಿಸಿ, ಎಲ್ಲಿಯವರು ಏನು ಎತ್ತ ಎಂದು ತಿಳಿದುಕೊಂಡು, ಜೋರು ಜೋರಾಗಿ ತೇಗುತ್ತಾ, ಗದ್ದಲ ಮಾಡುತ್ತಿದ್ದ. ಜೇಬಿಂದ ಐವತ್ತು ಪೈಸೆಯ ಎರಡು ಚಾಕಲೇಟ್ ಕ್ಯಾಂಡಿ ತೆಗೆದು ಅಲ್ಲೇ ಓಡಾಡುತ್ತಿದ್ದ ಒಂದು ಮಗುವಿಗೆ ಕೊಟ್ಟ. ಆದರೆ ಆ ಮಗುವಿನ ತಾಯಿ ತಕ್ಷಣ ಆ ಚಾಕಲೇಟುಗಳನ್ನು ಕಿಟಕಿಯಿಂದ ಹೊರಕ್ಕೆ ಎಸೆದುಬಿಟ್ಟಳು.. ಇವೆಲ್ಲವನ್ನು ಚಿಂತಾಮಣಿ ಲೆಕ್ಕಿಸಲೇ ಇಲ್ಲ. ಲೆಕ್ಕಿಸಿದ್ದೇ ಆದರೆ, ಇಷ್ಟು ಹೊತ್ತಿಗೆ ಅವನಿಗಾದ ಅವಮಾನಗಳಿಗೆ ಅವನು ಬಾವಿಯಲ್ಲಿ ಬಿದ್ದು ಸಾಯಬೇಕಿತ್ತು. ಮನುಷ್ಯ ಬಹಳ ಗಟ್ಟಿಗ. ತನ್ನದು ತನಗೆ, ಅಷ್ಟೆ. ಎದುರಿನವನ ಅಭಿಪ್ರಾಯವೇನು ಎಂದಾಗಲಿ, ಅವರು ಆಸಕ್ತರಾಗಿದ್ದಾರೆಯೇ ಎಂದು ತಿಳಿದುಕೊಳ್ಳುವ ಕಾಳಜಿ ಅವನಲ್ಲಿ ಶೂನ್ಯ ಮಟ್ಟ.
ಬಸ್ಸು ಹೊರಟಿತು. ರಾತ್ರಿ ಬಸ್ಸು, ಆದ್ದರಿಂದ ಚಿಂತಾಮಣಿ ಮಲಗಬಹುದು ಎಂದು ಅಂದಾಜಿಸಿದ್ದ ನನಗೆ ಭ್ರಮನಿರಸನವಾಯಿತು. ಯಾವ ಕತ್ಲೂ ಚಿಂತಾಮಣಿಯ ಬಾಯನ್ನು ಕಟ್ಟಿಹಾಕಲಾರದು.
ಬಸ್ಸು ಹೊರಟ ತಕ್ಷಣ, ಚಿಕ್ಕ ಮಗುವಿನಂತೆ ಚಿಂತಾಮಣಿಯು “ಯೇ! ಯೇ!” ಎಂದು ಸಂಭ್ರಮಿಸುತ್ತಾ ಎಗರಾಡತೊಡಗಿದ. ಪ್ರಯಾಣಿಕರ “ಛೇ!” “ಥೂ” ಮುಂತಾದ ಶಬ್ಧಗಳು ಕೇಳಿತು. ಏನಾಯಿತೋ ಏನೋ, ಚಿಂತಾಮಣಿ ಬೇಸರಿಸಿಕೊಂಡವನಂತೆ ಸೀಟಿನ ಮೇಲೆ ಕುಳಿತು ಕಣ್ಣು ಮುಚ್ಚಿದ. ನನಗೆ ಒಂದು ರೀತಿಯ ಸಂತೋಷವೇ ಆಯಿತು. ಬಸ್ಸು ಶಾಂತವಾಯಿತು. ಒಂದು ವಾರದ ಹಿಂದೆ ಕೊಂಡಿದ್ದರೂ ಓದದೆಯೇ ಇಟ್ಟಿದ್ದ ಪುಸ್ತಕವನ್ನು ಕೈಗೆತ್ತಿಕೊಂಡೆ. “ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು”, ವೀರಪ್ಪನ್ ಅಂತಹ ಘೋರ ಡಕಾಯಿತನ ಸೆರೆಯಲ್ಲಿದ್ದ ಕೃಪಾಕರ ಸೇನಾನಿ ಅವರ ಅನುಭವಗಳ ಕುರಿತಾದ ಪುಸ್ತ.ಕ. ಡಿಲಕ್ಸ್ ಬಸ್ ಆದ್ದರಿಂದ ʼರೀಡಿಂಗ್ʼ ದೀಪದ ಸೌಲಭ್ಯವತ್ತು. ಅದನ್ನು ʼಆನ್ʼ ಮಾಡಿಕೊಂಡು ಪುಸ್ತಕ ತೆರೆದೆ. ಓದುವ ಮುನ್ನ ಒಮ್ಮೆ ಚಿಂತಾಮಣಿಯ ಕಡೆ ನೋಡಿದೆ. ಬಾಯಿ ತೆರೆದುಕೊಂಡು ಆರಾಮಾಗಿ ನಿದ್ರಿಸುತ್ತಿದ್ದ.
ನಿಟ್ಟುಸಿರು ಬಿಟ್ಟು ನಾನು ಓದಲು ಆರಂಭಿಸಿದೆ. ತಣ್ಣಗಿದ್ದ ವಾತಾವರಣ, ರೋಚಕ ಅರಂಭ, ಪುಸ್ತಕದಲ್ಲಿ ಕೃಪಾಕರ ಸೇನಾನಿ ಅವರ ಮನೆಗೆ ವೀರಪ್ಪನ್ ನ ಸಹಚರರು ನುಗ್ಗಿದಾಗ, ನನಗೆ ಬಿಸಿಗಾಳಿ ತಾಕಿದಂತಾಯಿತು. ನನ್ನದೇ ಆತಂಕ ಇರಬೇಕು ಎಂದುಕೊಂಡು ಮುಂದೆವರೆಸಿದೆ. ಕೃಪಾಕರ-ಸೇನಾನಿ ಅವರಿಗೆ ಕತ್ತಲಲ್ಲಿ ಬಂದುಕು ಇಟ್ಟಾಗ, ಇತ್ತ ನನ್ನ ತಲೆಯ ಬಳಿಯೂ ಬಂದೂಕು ಇರುವಂತೆ ಅನಿಸಿತು. ತಿರುಗಿ ನೋಡಿದರೆ, ಚಿಂತಾಮಣಿ-ಲಕ್ಷಣವಾಗಿ ನನ್ನ ಮುಖದ ಪಕ್ಕದಲ್ಲಿ ತನ್ನ ತಲೆ ಇಟ್ಟು ನನ್ನ ಪುಸ್ತಕ ಓದುತ್ತಿದ್ದಾನೆ! ನನಗೆ ಒಂದು ಕ್ಷಣ ಭಯವೇ ಆಯಿತು! ಅವನು, “ಲೋ! ಛೇ! ಈ ನನ್ ಮಕ್ಳಿಗೆ ಅಭಿರುಚಿನೇ ಇಲ್ಲ. ಎಲ್ಲಾ ಪುಸ್ತಕದಲ್ಲೇ ಮುಗಿಸ್ತಾರೆ!” ಎಂದು ಗೊಣಗಿದ. ನನಗೆ ಪಿತ್ತ ನೆತ್ತಿಗೇರಿತು. “ಸಾಕು ಸುಮ್ನಿರಪ್ಪ. ನೀನೇನು ಭಾರಿ? ಕೃಪಾಕರ ಸೇನಾನಿ ಯಾರು ಗೊತ್ತಾ? ಅಸಲಿಗೆ ನೀನೇನು? ಅವರೇನು? ಅವರ ಅನುಭವ ಎಷ್ಟು! ನೀನು ನಮ್ಮ ಬೀದೀನಲ್ಲಿ ಮಾತುಗಳು ಹೇಳ್ಕೊಂಡ್ ಇರೋ ಥರ ಅಂದುಕೊಂಡಿದೆಯಾ? “ಎಂದು ನಾನು ಕೋಪದಲ್ಲಿ ಪಿಸುಗುಟ್ಟಿದೆ. ಅವನು ನನ್ನ ಕಡೆ ತಿರುಗಿ ದುರುಗುಟ್ಟಿದ. “ಒಂದು ಕಥೆ ಹೇಳ್ತೀನಿ, ಕೇಳು” ಎಂದು ನನ್ನ ಅನುಮೋದನೆಗೆ ಅವಕಾಶವೇ ನೀಡದೆ ಚಿಂತಾಮಣಿಯು ಅವನ ಕಥೆಯನ್ನು ಆರಂಭಿಸಿದ:
“ಆಫೀಸಿನಿಂದ ಒಮ್ಮೆ ತಮಿಳುನಾಡಿಗೆ ಅಂತ ಕಳುಹಿಸಿದ್ದರು. ನಮ್ಮ ಕಾಲದಲ್ಲಿ ಗೊತ್ತಲ್ಲ? ಛೇ ನಿನಗೆ ಎಲ್ಲಿ ಗೊತ್ತಿರತ್ತೆ ಬಿಡು. ಕೇವಲ ಪುಸ್ತಕ ಓದೋವ್ರು. ಸರಿ ಕೇಳು. ಆ ಕಾಲದಲ್ಲಿ ನಮ್ಮ ಊರಿನಿಂದ ತಮಿಳುನಾಡಿಗೆ ಹೋಗಬೇಕೆಂದರೆ ಸತ್ಯಮಂಗಲಂ ಕಾಡಿನ ದಾರಿಯನ್ನು ಅವಲಂಬಿಸಲೇಬೇಕಿತ್ತು. ಆದ್ರೆ ಸತ್ಯಮಂಗಲಂ ಎಂದರೆ ಸುಮ್ಮನೆಯೇ? ಅದರ ಹೆಸರು ಕೇಳಿದರೆ ಜನರು ನಡುಗುತ್ತಿದ್ದರು. ಕೇವಲ ಕಾಡಿನ ಜಟಿಲತೆಯಷ್ಟೇ ಅಲ್ಲ. ಆ ಕಾಡನ್ನೇ ತನ್ನ ಬಲವನ್ನಾಗಿ ಮಾಡಿಕೊಂಡು ಸರಕಾರವನ್ನೇ ಅಲ್ಲಾಡಿಸುತ್ತಿದ್ದ ವೀರಪ್ಪನ್ ಹಾಗು ಅವನ ಸಹಚರರಿಂದ. ಅದೇಪ್ಪಾ, ನೀನು ಓದ್ತಾ ಇದ್ದೀಯ ಅಲ್ವಾ, ಅವನ ಬಗ್ಗೇನೆ? ಆಫೀಸಿನವರು ನನ್ನ ಮೇಲೆ ತುಂಬಾ ಭರವಸೆ ಇಟ್ಟಿದ್ದರು. ದೊಡ್ಡ ಮೊತ್ತದ ಕೆಲಸವೇ ಸರಿ. ಹಾಗಾಗಿ ನನಗೆ ಎಲ್ಲೂ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಆಗಿನ ಕಾಲಕ್ಕೇ ಡಿಲಕ್ಸ್ ಬಸ್ ಟಿಕೇಟ್ ಮಾಡಿ ಕೊಟ್ಟಿದ್ದರು. ನಾನೂ ಅದಕ್ಕೆ ತಕ್ಕಂತೆ ಇಸ್ತ್ರಿ ಬಟ್ಟೆಗಳನ್ನು ಹಾಕಿ, ಒಳ್ಳೆಯ ಬ್ಯಾಗನ್ನು ಖರೀದಿ ಮಾಡಿ, ಮುಖ್ಯವಾದ ಪತ್ರಗಳನ್ನೆಲ್ಲಾ ಒಂದು ಕಡೆ ಇಟ್ಟು, ಚಿಕ್ಕದೊಂದು ಬೀಗ ಹಾಕಿ, ಅರ್ಧ ಗಂಟೆ ಮುನ್ನವೇ ನಿಲ್ದಾಣದಲ್ಲಿ ಕಾದು ಕುಳಿತಿದ್ದೆ. ಕಾಯುತ್ತಾ ಕುಳಿತಿದ್ದಾಗ ಬಾಯಾರಿಕೆ ಆಗುವುದು ಸಹಜ ಅಲ್ಲವೇ? ಅಲ್ಲೇ ಅಂಗಡಿ ಒಂದರಲ್ಲಿ ಎರಡು ನೀರಿನ ಬಾಟಲಿ ಕೊಂಡು, ಗಟಗಟನೇ ಕುಡಿದುಬಿಟ್ಟೆ. ಅದಕ್ಕೆ ಸರಿಯಾಗಿ ಬಸ್ಸೂ ಬಂದಿತು. ಆ ಸುಂದರ ಬಣ್ಣದ ಡಿಲಕ್ಸ್ ಬಸ್ಸಿನ ಒಳಗೆ ಹೋಗಿ ಕುಳಿತುಕೊಂಡೆ. ನಮ್ಮ ಮನೆಯ ಹಾಸಿಗೆಯೂ ಆ ಆಸನದಷ್ಟು ಮೆತ್ತಗಿರಲಿಲ್ಲ. ನನ್ನ ಮನಸ್ಸು ಉಲ್ಲಾಸಗೊಂಡಿತು. ʼಇದಕ್ಕಿಂತ ಅದೃಷ್ಟ ಇನ್ನು ಯಾರಿಗಿದೆʼ ʼನನ್ನ ಜೀವನ ಸಾರ್ಥಕವಾಯಿತುʼ ಇತ್ಯಾದಿ ಭಾವಗಳು ನನ್ನಲ್ಲಿ ಹೊಮ್ಮತೊಡಗಿದವು. ಹಾಗೆಯೇ ಮಂದಹಾಸದಲ್ಲಿ ಒರಗಿ ಕುಳಿತೆ. ತಮಿಳುನಾಡಿಗೆ ಹೋಗುವವರೆಗೂ ನೀರು ದೊರೆಯುವುದೋ ಇಲ್ಲವೋ? ಬಿಸಿಲು ಬೇರೆ ಎಂದುಕೊಳ್ಳುತ್ತಾ ಇನ್ನೂ ಒಂದೆರಡು ನೀರಿನ ಬಾಟಲಿಗಳನ್ನು ಕೊಂಡು ಬಂದೆ. ಬಸ್ಸು ಕೊನೆಗೂ ಹೊರಟಿತು. ನನ್ನ ಸ್ವಭಾವ ನಿನಗೆ ಗೊತ್ತೇ ಇದೆ. ಅಕ್ಕ ಪಕ್ಕದವರನ್ನೂ, ಎದುರು ಬದುರು ಇದ್ದವರನ್ನೂ ನಾನು ಮಾತನಾಡಿಸಿ, ಎಲ್ಲರಿಗೂ ಸಾಕಾದ ಮೇಲೆ ಕಣ್ಣು ಮುಚ್ಚಿ ಸ್ವಲ್ಪ ವಿಶ್ರಮಿಸಲು ಯತ್ನಿಸಿದೆ. ಆದರೆ ಎಲ್ಲಿಯ ವಿಶ್ರಮ? ಹೇಗೆ ಕುಳಿತರೂ, ಹೇಗೆ ತಿರುಗಿದರೂ ನಿದ್ದೆ ಹತ್ತಲೊಲ್ಲದು. ಮತ್ತೆ ಬಾಯಾರಿದಂತಾಗಿ ನಾನು ಇನ್ನೊಂದು ಅರ್ಧ ಬಾಟಲಿ ನೀರು ಕುಡಿದೆ. ಬಸ್ಸು ಸತ್ಯಮಂಗಲ ಕಾಡಿನ ನಡುವಿನ ರಸ್ತೆಯನ್ನು ಹೊಕ್ಕಿತ್ತು. ಕಿಟಕಿಯಲ್ಲಿ ಇಣುಕಿ ನಾನು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸತೊಡಗಿದೆ. ಕೆಲವು ಚಿಗುರೆಲೆಗಳ ಹಸಿರಾದರೆ, ಇನ್ನು ಕೆಲವು ಮರಗಳು ತೀರಾ ಕಪ್ಪು-ಹಸಿರು ಮಿಶ್ರಣ. ಎಲ್ಲೂ ಒಂದು ಅಲುಗಾಟವಿಲ್ಲ. ನಮ್ಮ ಬಸ್ಸಿನದು ಬಿಟ್ಟರೆ ಬೇರೆ ಸದ್ದಿಲ್ಲ. ಒಂದು ಬಾರಿ, ಹಳ್ಳವೊಂದರಲ್ಲಿ ಬಸ್ಸು ಇಳಿದು ಎದ್ದಿತು. ನನಗೆ ಇದ್ದಕ್ಕಿದ್ದಂತೆ ಭಯವಾಗಲು ಆರಂಭವಾಯಿತು. ಪಕ್ಕದಲ್ಲಿ ಕುಳಿತಿದ್ದ ಒಬ್ಬರನ್ನು, “ಇನ್ನೂ ಎಷ್ಟು ಹೊತ್ತು?” ಎಂದು ಕೇಳಿದೆ. ಅವರೋ “ಎನ್ನಡಾ? ಪೋಡಾ” ಎಂದು ಸುಮ್ಮನಾಗಿಬಿಟ್ಟರು. ನಿಲ್ದಾಣದಿಂದ ಇಲ್ಲಿಯ ತನಕ ಕುಡಿದಿದ್ದ ನೀರೆಲ್ಲವೂ ಶೇಖರಣೆ ಆಗಿ, ಈಗ ನನ್ನ ಹೊಟ್ಟೆಯನ್ನು ಬಾಧಿಸುತ್ತಿತ್ತು. ವಿಸರ್ಜನೆಗೆ ಎಲ್ಲಿಯೂ ಅವಕಾಶವಿಲ್ಲವೇ? ಅಯ್ಯೋ ಎಂದು ನಾನು ಮನಸ್ಸಲ್ಲಿಯೇ ಪೇಚಾಡತೊಡಗಿದೆ. ಈ ಸಮಸ್ಯೆಗೆ ನನಗೆ ಮಾತುಗಳೂ ಹೊಳೆಯುತ್ತಿರಲಿಲ್ಲ. ಮೌನವಾಗಿ ಕುಳಿತುಬಿಟ್ಟೆ. ಸ್ವಲ್ಪ ಹೊತ್ತಿನ ನಂತರ, ಹೊರಕ್ಕೆ ನೋಡಿ, ಇನ್ನೂ ಕಾಡಿನಂತೆಯೇ ಕಂಡಾಗ, ಕಂಡಕ್ಟರ್ ಅನ್ನು “ಅಣ್ಣಾ, ಸ್ವಲ್ಪ ಇಳೀಬೇಕಿತ್ತು, ಎಲ್ಲಾದರು ಮುಂದೆ ನಿಲ್ಲಿಸ್ತೀರಾ?” ಎಂದು ಪೇಚು ಮುಖದಲ್ಲಿ ಕೇಳಿದೆ. ಅವನು, “ಯಾಕ್ ನಿಲ್ಲಿಸ್ ಬೇಕು ರಿ? ಯೇನಾಯ್ತು?” ಅಂತ ಕೇಳಿದ. ನಾನು ಹೊಟ್ಟೆ ಹಿಡಿದು, “ಸ್ವಲ್ಪ ಅರ್ಜೆಂಟು” ಎಂದೆ. ಅವನು ಮುಸಿ ಮುಸಿ ನಕ್ಕು ಸುಮ್ಮನಾಗಿಬಿಟ್ಟ. ಇದ್ಯಾವುದಪ್ಪಾ ನನ್ನ ಸಮಸ್ಯೆ? ಈ ಆಫೀಸು ಬೇಡಾ, ಈ ಡಿಲಕ್ಸ್ ಬಸ್ಸೂ ಬೇಡಾ, ಈ ಕಾಸು ಬೇಡಾ, ಥೂ, ಇದೂ ಒಂದು ಜೀವನಾನಾ? ನೆಮ್ಮದಿಯಾಗಿ ಮೂತ್ರವಿಸರ್ಜನೆ ಮಾಡಕ್ಕೆ ಆಗದೇ ಇರುವಂಥದ್ದು? ಎಂದು ನನಗೆ ನನ್ನ ಮನವೇ ಬೈಯುತ್ತಿತ್ತು. ನಾನು ನನ್ನ ಆಸನದಿಂದೆದ್ದು ಸ್ವಲ್ಪ ಮುಂದೆ ಹೋದೆ. ಕಂಡಕ್ಟರ್, “ರೀ ಕೂತ್ಕೊಳ್ರೀ” ಎಂದು ಗದರಿದ. ನಾನು ಬೆವರುತ್ತಿದ್ದೆ. ಬಸ್ಸಿನ ಅಲುಗಾಟಕ್ಕೆ ಸರಿಯಾಗಿ ನನ್ನ ಹೊಟ್ಟೆಯೊಳಗಿನ ನೀರು ಅಲ್ಲಾಡುತ್ತಿದ್ದುದು ನನಗೆ ಭಾಸವಾಯಿತು. ನಿಧಾನವಾಗಿ ಚಾಲಕನ ಬಳಿಯೇ ನಡೆದೆ. ಚಾಲಕನು ಯಾವುದೇ ಭಾವಗಳಿಲ್ಲದೆ, ತದೇಕಚಿತ್ತದಿಂದ ಓಡಿಸುತ್ತಿದ್ದ. ನಾನು, ನನ್ನ ಕಿರುಬೆರಳನ್ನು ತೋರಿಸಿ, “ಸ್ವಲ್ಪ ಸೈಡ್ ಗೆ ಹಾಕ್ತೀರಾ?” ಎಂದು ಬೇಡಿದೆ. ಅವನು, ದಾರಿಯನ್ನೇ ಗಮನಿಸುತ್ತಾ, “ಇಲ್ಲೆಲ್ಲಾ ನಿಲ್ಸೋಕೆ ಆಗಲ್ಲಾ ರೀ. ಸ್ವಲ್ಪ ತಡ್ಕೋಳಿ. ಇನ್ನು ಐವತ್ತು ಮೈಲಿ, ಊರು ತಲುಪ್ತೀವಿ” ಎಂದ. ಐವತ್ತು ಮೈಲಿ ನನಗೆ ಐವತ್ತು ವರ್ಷ ದೂರ ಇರುವಂತೆ ಗೋಚರವಾಗತೊಡಗಿತು. “ಅಣ್ಣ ದಯವಿಟ್ಟು ಅಣ್ಣ!” ಎಂದು ಕೇಳಿಕೊಂಡು, ನನ್ನ ಜೇಬಿನಲ್ಲಿದ್ದ ಹತ್ತು ರೂಪಾಯಿಯ ನೋಟನ್ನು ತೆಗೆದು ಅವನ ಜೇಬಿನಲ್ಲಿ ತುರುಕಿದೆ. ಅವನು ತಕ್ಷಣ ಅದನ್ನು ಹೊರಕ್ಕೆ ತೆಗೆದು, “ರೀ, ಆಗಲ್ಲ ಅಂದ್ರೆ ಆಗಲ್ಲ. ಅರ್ಥ ಮಾಡ್ಕೊಳ್ರೀ” ಎಂದು ಕೋಪಿಸಿಕೊಂಡುಬಿಟ್ಟ. ನನಗೋ ಈ ಬಾಧೆಯಲ್ಲಿ ಸರಿಯಾಗಿ ತಲೆ ಓಡುತ್ತಿಲ್ಲ. ಯಾವ ಉಪಾಯವೂ ಹೊಳೆಯುತ್ತಿಲ್ಲ. ಆಗ ಬಸ್ಸಿನ ಮಧ್ಯದಲ್ಲಿ ನಿಂತು, “ಲೋ! ಬಸ್ಸು ನಿಲ್ಲಿಸ್ತೀಯಾ ಇಲ್ಲಾ, ಇಲ್ಲೇ ನನ್ನ ಕೆಲಸ ಮುಗಿಸಲೋ” ಎನ್ನುತ್ತಾ ನನ್ನ ಬೆಲ್ಟಿನ ಬಕಲ್ಲನ್ನು ಬಿಚ್ಚತೊಡಗಿದೆ. ಚಾಲಕನು ತಲೆ ಚಚ್ಚಿಕೊಂಡ. ಕೆಲವರು ಹೆಂಗಸರು “ಥೂ” ಎಂದು ಚೀಮಾರಿ ಹಾಕಿದರು. ಒಬ್ಬಳು ತಾಯಿ ತನ್ನ ಮಗುವಿನ ಕಣ್ಣ ಮೇಲೆ ಕೈ ಅಡ್ಡ ಇಟ್ಟಳು. ಇನ್ನೊಬ್ಬರು, “ಮಾನ ಮರ್ವಾದೆ ಇಲ್ವೇನೋ ಕೋತಿ” ಎಂದರು. ನಾನು ಯಾವುದಕ್ಕೂ ಕಿವಿಗೊಡಲಿಲ್ಲ. “ಲೋ ಡ್ರೈವರ್ರೂ…” ಎಂದು ನಾನು ಕೂಗಿದಾಗ, ಅವನು, “ನಿನ್ ಕರ್ಮ!” ಎನ್ನುತ್ತಾ ನಿಧಾನವಾಗಿ ಸಮತಟ್ಟಾದ ದಾರಿಯ ಪಕ್ಕದಲ್ಲಿ ನಿಲ್ಲಿಸಿದ. ನಾನು ಜಯಶಾಲಿ ಆದೆನೆಂದು ಬಾಗಿಲನ್ನು ತೆರೆದು ಹೊರಕ್ಕೆ ಓಡಿದೆ. ಇನ್ನೇನು ಪ್ಯಾಂಟಿನ ಜಿ಼ಪ್ ಗೆ ಕೈ ಹಾಕುವವನಿದ್ದೆ. “ಢಾಮ್..ಫಟ್” ಎಂಬ ಜೋರು ಶಬ್ಧ ಕೇಳಿತು. ನಾನು ಬೆಲ್ಟನ್ನು ವಾಪಸ್ ಧರಿಸಿ ಸುತ್ತಲೂ ನೋಡಿದೆ. ಇನ್ನೊಮ್ಮೆ “ಸೂಂಯ್ ಫಟ್” ಎಂಬ ಜೋರು ಶಬ್ಧ ಕೇಳಿತು. ಬಸ್ಸಿನ ಒಳಗಿಂದ, “ಬೇಗ ಬಾರೋ ಚಾಂಡಾಲಾ!” ಎಂಬ ಕೂಗು ಕೇಳಿಸಿತು. ಎಲ್ಲೋ ಅಲ್ಲೇ ಹತ್ತಿರದಿಂದ ಹಾರಿದ್ದ ಎರಡು ಗುಂಡುಗಳು ಬಸ್ಸಿಗೆ ತಗುಲಿತ್ತು. ನನ್ನ ಜೀವ ಬಾಯಿಗೆ ಬಂದಿತ್ತು. ಓಡಿ ಹೋಗಿ ಬಸ್ಸು ಹತ್ತಿ, “ಅಣ್ಣಾ ನಡೀ ನಡೀ” ಎಂದೆ.”
ಚಿಂತಾಮಣಿ ಬೆವರುತ್ತಿದ್ದ.
ನಾನು ಇದನ್ನು ನೋಡಿ ನಗು ತಾಳಲಾರದೆ ನಗತೊಡಗಿದೆ. ಆಗಲೇ ಗೊತ್ತಾಗಿದ್ದು, ಹಿಂದಿನ ಎರಡು ಸೀಟಿನವರು, ಮುಂದಿನ ಎರಡು ಸೀಟಿನವರು, ಪಕ್ಕದ ಸೀಟಿನವರು ಎಲ್ಲರೂ ತಲ್ಲೀನರಾಗಿ ಚಿಂತಾಮಣಿಯ ಕತೆಯನ್ನು ಕೇಳುತ್ತಿದ್ದರೆಂದು. ಚಾಕಲೇಟನ್ನು ಹೊರಕ್ಕೆ ಎಸೆದಿದ್ದ ತಾಯಿ, “ಆಮೇಲ್ ಏನಾಯ್ತು?” ಎಂದಳು ಕುತೂಹಲದಲ್ಲಿ.
“ಆಮೇಲೇನು? ಕುಡಿದ ನೀರೆಲ್ಲವೂ ನನಗೆ ಬೆವರಾಗಿ ಹರಿದುಹೋಯಿತು. ತಮಿಳುನಾಡಿನಲ್ಲಿ ಬಸ್ಸು ನಿಲ್ಲುವವರೆಗೂ ನಾನು ಒಂದು ಮಾತು ಆಡಿಲ್ಲ. ಆಮೇಲೆ ಚಾಲಕ ಬಂದು, “ಸಾರ್, ಏನ್ ಸಾರ್? ಅದು ವೀರಪ್ಪನ್ ಅಡ್ಡಾ ಅಂತ ಗೊತ್ತಿಲ್ವಾ ನಿಮಗೆ? ಬಸ್ಸಿಗೆ ಬಿದ್ದ ಗುಂಡು ನಿಮಗೆ ಬಿದ್ದಿದ್ದರೆ?” ಎಂದು ಕೇಳಿದ. ನಾನು ತಪ್ಪು ಮಾಡಿದ ನಾಚಿಕೆಯಿಂದ ಮುಖ ತಗ್ಗಿಸಿ, “ಗೊತ್ತಾಯ್ತು ಬಿಡಿ ಸಾರ್” ಎಂದೆ. “ಅಲ್ಲಿ ಟಾಯ್ಲೆಟ್ ಇದೆ ನೋಡಿ, ಹೋಗಿ” ಅವನೆಂದ. “ಇನ್ನೆಲ್ಲಿ ಟಾಯ್ಲೆಟ್ ಅಪ್ಪಾ? ಎಲ್ಲಾ ಒಳಕ್ಕೆ ಹೋಯ್ತು” ಎನ್ನುತ್ತಾ ನಾನು ಆಫೀಸಿನವರು ಹೇಳಿದ ಹೋಟೇಲನ್ನು ಹುಡುಕಿಕೊಂಡು ಹೊರಟೆ.”
ರಾತ್ರಿ ಬಸ್ಸಿನ ಪ್ರಯಾಣಿಕರೆಲ್ಲರೂ “ಯಪ್ಪಾ! ಸರ್, ಇದು ನಿಜ್ವಾಗ್ಲೂ ನಡೆದಿದ್ದ?” ಎಂದು ಚಿಂತಾಮಣಿಯನ್ನು ಕೇಳಲು, “ಹೌದು ರೀ. ನಮಗೆ ಬರೆಯೋಕೆ ಬರೋಲ್ಲ. ಏನ್ ಮಾಡ್ಲಿ? ಇಲ್ಲಾಂದ್ರೆ ಇಷ್ಟು ಹೊತ್ತಿಗೆ ನನ್ನ ಅನುಭವಗಳೆಲ್ಲಾ ಎಷ್ಟು ಪುಸ್ತಕಗಳಾಗ್ತಿದ್ವೊ?” ಎಂದ ತನ್ನ ಬೆನ್ನನ್ನು ತಾನು ತಟ್ಟಿಕೊಳ್ಳುತ್ತಾ.
ದಣಿದಿದ್ದ ಚಿಂತಾಮಣಿ, “ನೀರು ಕೊಡ್ರಪ್ಪಾ ಹೋಗ್ಲಿ” ಎಂದ.
ಎಲ್ಲರೂ ಅವನ ಕಡೆ “ಹಾ!” ಎಂದು ಕಣ್ಣು ಬಿಟ್ಟುಕೊಂಡು ನೋಡಿದರು. ಮಗು ಕಿಲ ಕಿಲ ನಗತೊಡಗಿತು. ನಾನು ಮತ್ತೆ ಪುಸ್ತಕ ಹಿಡಿದುಕೊಂಡೆ.
-ತೇಜಸ್ ಎಚ್ ಬಾಡಾಲ
ಒಂದು ಒಳ್ಳೆಯ.. ಪ್ರಯತ್ನ.. ಕಥಾ ನಿರೂಪಣೆ ಸಹಜವಾಗಿ ಬಂದಿದೆ.
ಅಭಿನಂದನೆಗಳು… ತೇಜಸ್
ಧನ್ಯವಾದಗಳು ಆಂಟಿ! ಪ್ರಣಾಮಗಳು
Beautiful story
Thank you
ಸರಳವಾದ ಮಾತಿನಲ್ಲಿ ಸುಲಲಿತವಾಗಿ ಸಾಗಿ ಬಂದ ಹರಟೆಯ ರೂಪದಲ್ಲಿ ಸಾಗುವ ಬಸ್ಸಿನ ಪಯಣದ ಸ್ವಾರಸ್ಯಕರ ಸಂಗತಿಯನ್ನು ಓದುಗರಿಗೆ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುವಂತೆ ಮಾಡಿದ ತೋಜಸ್ ನ ಪ್ರಯತ್ನ ಮೆಚ್ಚತಕ್ಕುದೇ ಸರಿ. ಅವನ ಬರವಣಿಗೆ ಮತ್ತಷ್ಟು ಚೆನ್ನಾಗಿ ಮೂಡಿಬರಲೆಂದು ಹಾರೈಸುತ್ತೇನೆ.
ಪೂರ್ಣಿಮಾ ಸುರೇಶ್
ಧನ್ಯವಾದಗಳು ಆಂಟಿ, ಅಸಲಿಗೆ ವಿಷಯವೇನೆಂದರೆ, ಚಿಂತಾಮಣಿಯ ಪಾತ್ರಕ್ಕೆ ಸತ್ಯಮಂಗಲಂ ಕಾಡಿನ ದಾರಿಯಲ್ಲಿ ನಡೆದ ಅನುಭವವು ನಿಜವಾದ ಘಟನೆಯೇ. ನಮಗೆ ಕ್ರಿಮಿನಲ್ ಸೈಕಾಲಜಿ ವಿಷಯದಲ್ಲಿ ಇದರ ಒಂದು ʼಕೇಸ್ ಸ್ಟಡಿʼ ಇತ್ತು ಆಂಟಿ, ಅದರಿಂದ ಸ್ಫೂರ್ತಿಗೊಂಡು ಬರೆದ ಹರಟೆಯ ರೂಪದ ಕಥೆ ಇದು 🙂
ರೋಚಕ ನಿರೂಪಣೆ. ಕತೆಯೂ ಪ್ರಬಂಧವೂ ಎರಡೂ ಆಗಿರುವ ನವಿರಾದ ತಿಳಿಹಾಸ್ಯಬೆರೆತ ಕಥಾವಸ್ತು.
ಚಿಂತಾಮಣಿಯಂಥವರಿಗೆ ಕರುಳಾದ ಬೆರಳಾದ ಲೇಖಕರಿಗೆ ಅಭಿನಂದನೆ ಮತ್ತು ಧನ್ಯವಾದಗಳು
ಧನ್ಯವಾದಗಳು ಸರ್…ಪಾತ್ರಕ್ಕೆ ಒಂದು ವಿಚಿತ್ರವೂ ಆದ, ವಿಶೇಷವೂ ಆದ, ನೆನಪಿನಲ್ಲಿ ಉಳಿಯುವಂತಹ ಹೆಸರು ಬೇಕು ಎಂದಾಗ, ನಮ್ಮ ಊರಾದ ಚಿಂತಾಮಣಿ ನೆನಪಾಯಿತು, ಸರಿ ಅಂತ ಅದನ್ನೇ ಇಟ್ಟೆ 😀
ನಿಮ್ಮ ಕಥನ ನಿರೂಪಣೆಯ ಕಲೆ ಅಪರೂಪದ್ದು. ಕನ್ನಡ ಬರೆವಣಿಗೆಯನು ಮುಂದುವರಿಸಿ.
ಸ್ವಾನುಭವಗಳನ್ನು ಕಲ್ಪಕತೆಯೊಂದಿಗೆ ಬೆರೆಸಿ ಬರೆದರೆ ಅದೇ ಕಥನ
ಸಾಹಿತ್ಯ ಸಂಕಥನ! ಕನ್ನಡಕ್ಕೀಗ ನಿಮ್ಮಂಥವರು ಬೇಕು. ವಿಭಿನ್ನ ಕ್ಷೇತ್ರಗಳಲಿರುವ ಸಂವೇದನಾಶೀಲರು
ಬೇಕೇ ಬೇಕು. ಶುಭವಾಗಲಿ
ಸುಂದರ ನಿರೂಪಣೆಯಿಂದೊಡಗೂಡಿದ ಚಂದದ ಕಥೆ. ಅಭಿನಂದನೆಗಳು.
ಧನ್ಯವಾದಗಳು ಆಂಟಿ!
ಕಥಾ ನಿರೂಪಣೆ ಕುತೂಹಲ ಮೂಡಿಸುತ್ತಾ, ಓದಿಸಿಕೊಂಡು ಹೋಯಿತು..ಬರೆಯುತ್ತಲಿರಿ.
ಕಿತಾಪತಿ ಚಿಂತಾಮಣಿಯ ಕಥೆ ಚೆನ್ನಾಗಿದೆ.
ಸುಂದರ ನಿರೂಪಣೆಯುಳ್ಳ ಬರಹ